ದೇವಶಯನಿ ಏಕಾದಶಿಯ ಮಹತ್ವವೇನು? ದಶಮಿಯಂದೇ ಪಾಲಿಸಬೇಕು ಈ ನಿಯಮ

ವರ್ಷದಲ್ಲಿ 24 ಏಕಾದಶಿಗಳು ಬರುತ್ತದೆ, ಪ್ರತಿಯೊಂದು ಏಕಾದಶಿ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅದರಲ್ಲೂ ಆಷಾಢ ಮಾಸದ ಪೂರ್ಣಿಮೆಯಂದು ದೇವಶಯನಿ ಏಕಾದಶಿ ಆಚರಿಸಲಾಗುವುದು. ಈ ಏಕಾದಶಿಯಿಂದ ಚಾತುರ್ಮಾಸ್ಯ ಆರಂಭ.

ದೇವಶಯನಿ ಏಕಾದಶಿಯಿಂದ ನಾಲ್ಕು ತಿಂಗಳು ಶ್ರೀ ವಿಷ್ಣು ಯೋಗ ನಿದ್ರೆಗೆ ಜಾರುತ್ತಾರೆ ಎಂಬ ಪೌರಾಣಿಕ ನಂಬಿಕೆಯಿದೆ. ಈ ದಿನಗಳಿಂದ ನವೆಂಬರ್ 4ರವರೆಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಈ ವರ್ಷ ದೇವಶಯನಿ ಏಕಾದಶಿಯನ್ನು ಯಾವಾಗ ಆಚರಿಸಲಾಗುವುದು, ಇದರ ಮಹತ್ವವೇನು? ವ್ರತಕತೆಯೇನು, ಜ್ಯೋತಿಷ್ಯ ಮಹತ್ವವೇನು ಎಂದು ನೋಡೋಣ ಬನ್ನಿ:

Devshayani Ekadashi Date, Significance, Puja Vidhi In Kannada

ದೇವಶಯನಿ ಏಕಾದಶಿ ಸಮಯ ಮತ್ತು ದಿನಾಂಕ

ದೇವಶಯನಿ ಏಕಾದಶಿ ತಿಥಿ ಪ್ರಾರಂಭ: ದೇವ ಶಯನಿ ಏಕಾದಶಿ 29 ಜೂನ್ 2023 ಬೆಳಗ್ಗೆ 03:18ಕ್ಕೆ ಪ್ರಾರಂಭ
ದೇವಶಯನಿ ಏಕಾದಶಿ ತಿಥಿ ಮುಕ್ತಾಯ : ಜೂನ್ 30 , 2023 ಮುಂಜಾನೆ 02:42ಕ್ಕೆ

ದೇವಶಯನಿ ಏಕಾದಶಿ ಮಹತ್ವವೇನು?

ಹಿಂದೂ ಧರ್ಮಗ್ರಂಥಗಳ ಪ್ರಕಾರ ಚಾತುರ್ಮಾಸವು ದೇವಶಯನಿ ಏಕಾದಶಿಯಿಂದ ಪ್ರಾರಂಭವಾಗುತ್ತದೆ. ಪದ್ಮ ಪುರಾಣದ ಪ್ರಕಾರ ದೇವಶಯನಿ ಏಕಾದಶಿ ಆಚರಣೆ ಮಾಡುವುದರಿಂದ ನಮಗೆ ಅರಿವಿಲ್ಲದೆ ಮಾಡಿರುವ ಪಾಪಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ಈ ಏಕಾದಶಿಯನ್ನು ಸೌಭಾಗ್ಯದಿನಿ ಏಕಾದಶಿ ಎಂದೂ ಕರೆಯುತ್ತಾರೆ.

ಚಾತುರ್ಮಾಸ್ಯದಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ

ಧಾರ್ಮಿಕ ಶಾಸ್ತ್ರಗಳ ಪ್ರಕಾರ ಮದುವೆ, ಮನೆ ಗೃಹ ಪ್ರವೇಶ, ವಾಹನ ಖರೀದಿ, ಆಭರಣ ಖರೀದಿ ಹೀಗೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ದೇವಶಯನಿ ಏಕಾದಶಿಯ ನಂತರ ನಾಲ್ಕು ತಿಂಗಳ ಕಾಲ ಸೂರ್ಯ, ಚಂದ್ರ ಮತ್ತು ಪ್ರಕೃತಿಯ ಪ್ರಖರತೆ ಕಡಿಮೆಯಾಗಲಿದೆ, ಈ ಸಮಯದಲ್ಲಿ ಶುಭ ಶಕ್ತಿಗಳು ದುರ್ಬಲವಾದಾಗ, ಈ ಸಮಯದಲ್ಲಿ ಮಾಡಿದ ಕಾರ್ಯಗಳು ತುಂಬಾ ಫಲಿತಾಂಶ ನೀಡುವುದಿಲ್ಲ, ಹಾಗಾಗಿ ಚಾತುರ್ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು.

ದೇವಶಯನಿ ಏಕಾದಶಿ ವ್ರತ ಕತೆ

ಸೂರ್ಯವಂಶದಲ್ಲಿ, ಮಾಂಧಾತ ಎಂಬ ಚಕ್ರವರ್ತಿ ರಾಜನಿದ್ದನು, ಅವನು ಸತ್ಯವಂತ, ಅವನು ತನ್ನ ಪ್ರಜೆಗಳಿಗೆ ನಿಷ್ಠನಾಗಿದ್ದನು. ಅವನ ರಾಜ್ಯದಲ್ಲಿ ಸಂಪತ್ತು ತುಂಬಿತ್ತು. ಎಲ್ಲಾ ಪ್ರಜೆಗಳು ಸಂಪತ್ತು ಮತ್ತು ಸಂತೋಷದಿಂದಿದ್ದರು. ಅವನ ರಾಜ್ಯದಲ್ಲಿ ಯಾರಿಗೂ ತೊಂದರೆ ಇರಲಿಲ್ಲ. ಒಮ್ಮೆ ಆ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಮಳೆಯಿಲ್ಲದೆ ಕ್ಷಾಮ ಉಂಟಾಯಿತು. ಆಹಾರದ ಕೊರತೆಯಿಂದ ಜನರು ತುಂಬಾ ಪರದಾಡುವಂತಾಯಿತು.

ಈ ವಿಪತ್ತು ನೋಡಿ ರಾಜನು ತನ್ನ ಸೈನಿಕರ ಜೊತೆಗೆ ಕಾಡಿಗೆ ಹೋದನು, ಅಲ್ಲಿ ಅವನ ಕಣ್ಣಿಗೆ ಬ್ರಹ್ಮನ ಮಗನಾದ ಅಂಗೀರ ಋಷಿಯ ಆಶ್ರಮ ಕಾಣುತ್ತದೆ, ಅಲ್ಲದೆ ಬಂದ ರಾಜನು ಋಷಿಗೆ ನಮಸ್ಕರಿಸಿ ತನ್ನ ರಾಜ್ಯಕ್ಕಾದ ಸಂಕಷ್ಟದ ಪರಿಸ್ಥಿತಿ ಬಗ್ಗೆ ಹೇಳುತ್ತಾನೆ. ಆಗ ಅಂಗೀರ ಋಷಿಯು ಆಷಾಢ ಮಾಸದ ಶುಕ್ಲ ಪಕ್ಷದಂದು ಪದ್ಮ ಏಕಾದಶಿ ಉಪವಾಸವನ್ನು ಆಚರಿಸುವಂತೆ ರಾಜನಿಗೆ ಹೇಳಿದನು. ಉಪವಾಸದ ಪ್ರಭಾವದಿಂದ ನಿಮ್ಮ ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತದೆ, ಜನರು ಸಂತೋಷದಿಂದ ಬದುಕು ನಡೆಸುತ್ತಾರೆ. ಆದ್ದರಿಂದ ಯಾರು ದೇವಶಯನಿ ಏಕಾದಶಿ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.

ದೇವಶಯನಿ ಪೂಜಾ ವಿಧಿ

  • ದೇವಶಯನಿ ಏಕಾದಶಿ ವ್ರತವನ್ನು ಆಚರಿಸಲು ಈ ವ್ರತದ ಸಿದ್ಧತೆಯನ್ನು ದಶಮಿ ದಿನಾಂಕದಿಂದಲೇ ಆರಂಭಿಸಬೇಕು.
  • ದಶಮಿ ತಿಥಿಯ ಭೋಜನದಲ್ಲಿ ಯಾವುದೇ ರೀತಿಯ ತಾಮಸ ಆಹಾರವನ್ನು ಸೇವಿಸಬಾರದು, . ಸಾಧ್ಯವಾದರೆ, ಆಹಾರದಲ್ಲಿ ಉಪ್ಪನ್ನು ಬಳಸಬೇಡಿ, ಏಕೆಂದರೆ ಹಾಗೆ ಮಾಡುವುದರಿಂದ ಉಪವಾಸದ ಪುಣ್ಯ ಕಡಿಮೆಯಾಗುತ್ತದೆ. ಈ
  • ದಿನ ಒಬ್ಬ ವ್ಯಕ್ತಿಯು ನೆಲದ ಮೇಲೆ ಮಲಗಬೇಕು.ಬಾರ್ಲಿ, ಮಾಂಸ, ಗೋಧಿ ಮತ್ತು ಬೇಳೆ, ಹೆಸರು ಬೇಳೆ ಸೇವನೆ ಮಾಡಬಾರದು.
  • ದಶಮಿ ತಿಥಿಯಿಂದ ಆರಂಭವಾಗುವ ಈ ವ್ರತವು ದ್ವಾದಶಿ ತಿಥಿಯ ಮುಂಜಾನೆಯವರೆಗೂ ಇರಲಿದೆ.
  • ದಶಮಿ ತಿಥಿ ಮತ್ತು ಏಕಾದಶಿ ತಿಥಿಯಂದು ಯಾವುದೇ ಕಾರಣಕ್ಕೆ ಸುಳ್ಳು ಹೇಳಬಾರದು.
  • ಏಕಾದಶಿ ತಿಥಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಉಪವಾಸವಿದ್ದು ಸಂಕಲ್ಪ ತೆಗೆದುಕೊಳ್ಳಬೇಕು.
  • ನಂತರ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಅಲಂಕರಿಸಿ ಕಲಶ ಸ್ಥಾಪಿಸಬೇಕು
  • ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು.
  • ದೇವರಿಗೆ ಹಳದಿ ಹೂ, ಹಣ್ಣುಗಳು, ಧೂಪವನ್ನು ಅರ್ಪಿಸಿ.

ದೇವ ಶಯನಿ ಏಕಾದಶಿ ವೈಜ್ಞಾನಿಕ ಮಹತ್ವ

ಪವಿತ್ರ ಚಾತುರ್ಮಾಸವು ದೇವಶಯನಿ ಏಕಾದಶಿಯ ದಿನದಂದು ಪ್ರಾರಂಭವಾಗುತ್ತದೆ. ವೈಜ್ಞಾನಿಕ ದೃಷ್ಟಿಯಿಂದ , ಚಾತುರ್ಮಾಸದದಲ್ಲಿ ತೇವಾಂಶ ಹೆಚ್ಚಾಗುವುದರಿಂದ, ಅನೇಕ ರೀತಿಯ ಸೂಕ್ಷ್ಮಾಣು ಜೀವಿಗಳು ಹುಟ್ಟುತ್ತವೆ ಮತ್ತು ಅವು ಮಾನವ ದೇಹಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಹಾನಿಯನ್ನುಂಟುಮಾಡುತ್ತವೆ. ನಮ್ಮ ಪೂರ್ವಜರು ಈ ನಾಲ್ಕು ತಿಂಗಳಿಗೆ ಕೆಲವು ವಿಧದ ಧಾರ್ಮಿಕ ನಿಯಮಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅವುಗಳನ್ನು ಅನುಸರಿಸಿದರೆ ಆರೋಗ್ಯಕ್ಕೂ ಒಳ್ಳೆಯದು.

ರುದ್ರಾಕ್ಷಿ ಮಹತ್ವ

ಚಾತುರ್ಮಾಸ ಸಮಯದಲ್ಲಿ ನೀವು 10 ಮುಖಿ, 7 ಮುಖಿ ಅಥವಾ 19 ಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು, ಈ ರುದ್ರಾಕ್ಷಿಗಳ ಧನಾತ್ಮಕ ಶಕ್ತಿಯು ನಿಮಗೆ ಆತ್ಮಬಲವನ್ನು ನೀಡುತ್ತದೆ ಮತ್ತು ನಿಮ್ಮ ಆತ್ಮಸಾಕ್ಷಿಯನ್ನು ಶುದ್ಧಗೊಳಿಸುತ್ತದೆ.

English summary

Devshayani Ekadashi Date, Significance, Puja Vidhi In Kannada

Here are Devshayani Ekadashi Date, significance, and puja vidhi read on.
Story first published: Monday, June 26, 2023, 18:00 [IST]
X
Desktop Bottom Promotion