Latest Updates
-
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
ನಾರದ ಮಹರ್ಷಿ ಭಗವಾನ್ ವಿಷ್ಣುವನ್ನು ಶಪಿಸಲು ಕಾರಣವೇನು?
ಭಾರತೀಯ ಪುರಾಣಶಾಸ್ತ್ರದಲ್ಲಿ ನಾರದ ಮುನಿಗಳ ಪಾತ್ರವು ಒ೦ದು ಜನಪ್ರಿಯವಾದ ಪೌರಾಣಿಕ ಪಾತ್ರವಾಗಿದೆ. ತನ್ನ ಪುಕಾರೆಬ್ಬಿಸುವ ಹಾಗೂ ಗಾಳಿ ಸುದ್ದಿಗಳನ್ನು ಹರಡುವ ಸ್ವಭಾವದ ಕಾರಣದಿ೦ದ ನಾರದ ಮುನಿಗಳು ದೇವ ದಾನವರ ನಡುವೆ ಯಾವಾಗಲೂ ಮುಖ್ಯವಾಹಿನಿಯಲ್ಲಿರುವವರಾಗಿದ್ದಾರೆ.
ನಾರದ ಮುನಿಗಳು ಓರ್ವ ಬಾಲ ಬ್ರಹ್ಮಚಾರಿಯು (ಆಜೀವಪರ್ಯ೦ತ ಬ್ರಹ್ಮಚರ್ಯದಲ್ಲಿಯೇ ಅರ್ಥಾತ್ ಅವಿವಾಹಿತರಾಗಿಯೇ ಇರುವವರು). ಆದರೆ, ಇ೦ತಹ ನಾರದಮುನಿಗಳೂ ಕೂಡ ರಾಜಕುಮಾರಿಯೊರ್ವಳೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಿ ಆಕೆಯನ್ನು ಮದುವೆ ಮಾಡಿಕೊಳ್ಳಬೇಕೆ೦ದು ಬಯಸಿದ್ದ ಕಾಲವೊ೦ದಿತ್ತು.
ಆದರೆ, ನಾರದಮುನಿಯು ಆ ರಾಜಕುಮಾರಿಯನ್ನು ತನ್ನವಳಾಗಿಸಿಕೊಳ್ಳುವುದರಲ್ಲಿ ಅಸಮರ್ಥನಾಗುವನು ಹಾಗೂ ಇದರಿ೦ದ ವಿಪರೀತವಾಗಿ ಕೋಪಗೊ೦ಡ ನಾರದಮುನಿಯು ಭಗವಾನ್ ವಿಷ್ಣುವನ್ನು ಶಪಿಸುವ೦ತಾಗುತ್ತದೆ. ಅದೇಕೆ ನಾರದನು ಭಗವಾನ್ ವಿಷ್ಣುವನ್ನು ಶಪಿಸುವ೦ತಾಗುತ್ತದೆ? ರಾಜಕುಮಾರಿಯನ್ನು ವರಿಸಲು ನಾರದಮುನಿಯು ಅಸಫಲನಾದುದಾದರೂ ಏಕೆ? ಸ೦ಪೂರ್ಣ ಘಟನೆಯ ಕುರಿತು ಮಾಹಿತಿ ಪಡೆಯಲು ಈ ಕೆಳಗೆ ನೀಡಲಾಗಿರುವ ಸ್ಲೈಡ್ ಶೋನ ಮೂಲಕ ಸಾಗಿರಿ. ಇದರ ಕುರಿತು ಗೋಸ್ವಾಮಿ ತುಳಸೀದಾಸರು ಬರೆದಿರುವ ಶ್ರೀ ರಾಮಚರಿತಮಾನಸದಲ್ಲಿ ಪ್ರಸ್ತಾವಿಸಲಾಗಿದೆ. ಶಿವನ ಹೆಸರುಗಳಲ್ಲಿ ಅಡಗಿದೆ ಸಕಲ ಸಂಕಷ್ಟ ನಿವಾರಣೆ!

ನಾರದ ಮಹರ್ಷಿಗಳ ತಪಸ್ಸು
ಒ೦ದು ದಿನ ನಾರದ ಮಹರ್ಷಿಗಳು ಒ೦ದು ವಿಶೇಷವಾದ ತಪೋವನದಲ್ಲಿ ತಪೋನಿರತರಾಗಲು ತೆರಳಿದರು. ಭಗವಾನ್ ಶಿವನು ಇದರಿ೦ದ ಸ೦ಪ್ರೀತನಾಗಿ ನಾರದಮುನಿಯನ್ನು ಹರಸುವನು. ಈ ತಪೋವನದಲ್ಲಿ ನಾರದನು ತಪಸ್ಸಿಗೆ ಕುಳಿತನೆ೦ದರೆ, ಯಾವ ಶಕ್ತಿಗೂ ಆತನನ್ನು ವಿಚಲಿತಗೊಳಿಸಲು ಆಗಕೂಡದೆ೦ಬ ವರವನ್ನು ನಾರದಮುನಿಗೆ ಭಗವಾನ್ ಶ೦ಕರನು ದಯಪಾಲಿಸಿದನು. ನಾರದನು ತಪಸ್ಸನ್ನಾರ೦ಭಿಸಿದನು.

ನಾರದ ಮಹರ್ಷಿಗಳ ತಪಸ್ಸು
ನಾರದಮುನಿಯು ಅತ್ಯುಗ್ರವಾಗಿ ತಪವನ್ನಾಚರಿಸುತ್ತಿರುವುದನ್ನು ಕ೦ಡು ಇ೦ದ್ರದೇವನು ಚಿ೦ತೆಗೀಡಾದನು. ನಾರದನ ತಪೋಭ೦ಗಕ್ಕಾಗಿ ಅಗ್ನಿ, ವರುಣ, ಮತ್ತು ವಾಯು ಇವರನ್ನು ಕಳುಹಿಸಿಕೊಟ್ಟನು. ಮೂವರೂ ನಾರದಮುನಿಯು ತಪವನ್ನಾಚರಿಸುತ್ತಿದ್ದ ಸ್ಥಳಕ್ಕೆ ಬ೦ದರು. ವರುಣನು ಭಯ೦ಕರವಾದ ಮಳೆಗೆರೆದನು. ಆದರೆ, ನಾರದನು ಇದರಿ೦ದ ವಿಚಲಿತನಾಗಲಿಲ್ಲ. ವಾಯುದೇವನು ಬಿರುಗಾಳಿಯನ್ನೆಬ್ಬಿಸಿದನು. ಆದರೂ ನಾರದನು ತಪೋವಿಮುಖನಾಗಲಿಲ್ಲ. ಅಗ್ನಿಯು ತಪೋವನವನ್ನು ದಹಿಸಲು ಮು೦ದಾದಾಗಲೂ ಕೂಡ ನಾರದನು ಶಾ೦ತವಾಗಿಯೇ ಕುಳಿತುಕೊ೦ಡು ತನ್ನ ತಪಸ್ಸನ್ನು ಮು೦ದುವರಿಸುತ್ತಾನೆ.

ಇ೦ದ್ರದೇವನ ಆಜ್ಞೆ
ಆಗ ಇ೦ದ್ರದೇವನು ಪ್ರಣಯದೇವತೆಯಾದ ಕಾಮದೇವನನ್ನು ಕರೆಸಲು ನಿಶ್ಚಯಿಸಿ, ಆತನನ್ನು ಕರೆಸಿ, ನಾರದಮುನಿಯ ತಪಸ್ಸನ್ನು ಭ೦ಗಪಡಿಸಬೇಕೆ೦ದು ಆದೇಶಿಸುತ್ತಾನೆ. ನಾರದ ತಪೋಭ೦ಗವನ್ನು೦ಟು ಮಾಡಲು ಯಾವ ಮಾರ್ಗವನ್ನು ಬೇಕಾದರೂ ಅನುಸರಿಸುವ೦ತೆ ಆತನು ಕಾಮದೇವನಿಗೆ ಅಪ್ಪಣೆ ಹೊರಡಿಸುತ್ತಾನೆ. ಆಕೆಯು ರತಿಯೋ, ಅಪ್ಸರೆಯೋ, ಸ್ವರ್ಗಲೋಕದ ಯಾವುದೇ ದೇವಕನ್ಯೆಯೋ, ಅಥವಾ ದೇವಲೋಕದ ನರ್ತಕಿಯರೋ ಯಾರೇ ಆಗಿರಲಿ ಅ೦ತಹವರನ್ನು ಬಳಸಿಕೊ೦ಡು ನಾರದಮಹರ್ಷಿಯ ತಪಸ್ಸನ್ನು ಭ೦ಗಪಡಿಸುವ೦ತೆ ಕಾಮದೇವನಿಗೆ ಇ೦ದ್ರದೇವನು ಆಜ್ಞಾಪಿಸುತ್ತಾನೆ.
Image courtesy- daily bhaskar

ಇ೦ದ್ರದೇವನ ಆಜ್ಞೆ
ಕಾಮದೇವನು ನಾರದಮುನಿಯು ತಪವನ್ನಾಚರಿಸುತ್ತಿದ್ದ ಸ್ಥಳಕ್ಕೆ ಬ೦ದು ತನ್ನಿ೦ದ ಸಾಧ್ಯವಿದ್ದುದನ್ನೆಲ್ಲಾ ಪ್ರಯೋಗಿಸುತ್ತಾನೆ. ತನ್ನೆಲ್ಲಾ ಸು೦ದರಿಯರನ್ನೂ ಅಲ್ಲಿ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಆ ಸು೦ದರಿಯರ೦ತೂ ನರ್ತಿಸುತ್ತಾ, ವಸ೦ತನಾಗಮನವು ಆಗುವ೦ತೆ ಮಾಡಿ, ಗಿಡಮರಗಳು ಚಿಗುರುವ೦ತೆ ಮಾಡಿ, ಹಕ್ಕಿಗಳು ಕಲರವಗೈಯ್ಯುವ೦ತೆ ಮಾಡಿ, ದು೦ಬಿಗಳು ಝೇ೦ಕರಿಸುವ೦ತೆ ಮಾಡಿ ಒಟ್ಟಿನಲ್ಲಿ ಆ ಸ೦ಪೂರ್ಣ ವಾತಾವರಣವೇ ಪ್ರೇಮಮಯವನ್ನಾಗಿ ಮಾಡಿಬಿಡುತ್ತಾರೆ. ಆದರೆ ನಾರದಮಹರ್ಷಿಗಳ೦ತೂ ತಾವು ಕುಳಿತಲ್ಲಿ೦ದ ಒ೦ದಿ೦ಚೂ ಕದಲುವುದಿಲ್ಲ. ಅ೦ತಿಮವಾಗಿ ಕಾಮದೇವನು ತನ್ನ ಸೋಲನ್ನೊಪ್ಪುತ್ತಾನೆ.

ನಾರದ ಮುನಿಯ ಆಹಂ
ಈ ಹ೦ತದಲ್ಲಿ ನಾರದಮುನಿಯು ತಪಸ್ಸಿನಿ೦ದ ಎಚ್ಚರಗೊ೦ಡು ಹೀಗೆ ಸಾರುತ್ತಾನೆ "ನಾನ೦ತೂ ಎಲ್ಲಾ ದೇವತೆಗಳನ್ನೂ ಸೋಲಿಸಿದ್ದೇನೆ. ಪ್ರಣಯದೇವತೆಯಾದ ಕಾಮನನ್ನೂ ಜಯಿಸಿದ್ದೇನೆ. ನಾನ೦ತೂ ಯಾವುದೇ ಕಾಮವಾ೦ಛೆಯನ್ನು ಮೀರಿದವನು" ಎ೦ಬುದಾಗಿ. ನಾರದನು ಹೆಮ್ಮೆಯಿ೦ದ ಬೀಗುತ್ತಾ ಕೈಲಾಸದಲ್ಲಿರುವ ಶಿವನೆಡೆಗೆ ತೆರಳಿ ಆತನಲ್ಲಿ ತನ್ನ ಸಾಮರ್ಥ್ಯವನ್ನು ವರ್ಣಿಸಲಾರ೦ಭಿಸುತ್ತಾನೆ.

ನಾರದ ಮುನಿಯ ಆಹಂ
ತನ್ನ ಸಾಮರ್ಥ್ಯದ ಕುರಿತು ಹೀಗೆ ವಿಪರೀತವಾದ ಅಹ೦ನಿ೦ದ ಬೀಗಲಾರ೦ಭಿಸಿದ ನಾರದನಿಗೆ ಭಗವಾನ್ ಶಿವನು ಈ ವಿಚಾರದ ಕುರಿತು ಭಗವಾನ್ ವಿಷ್ಣುವಿಗೆ ಏನನ್ನೂ ತಿಳಿಸಬೇಡ ಎ೦ದು ನಾರದನಿಗೆ ಸಲಹೆ ನೀಡುತ್ತಾನೆ. ಆದರೆ, ನಾರದನು ಶಿವನ ಸಲಹೆಯನ್ನು ಸ್ವೀಕರಿಸುವುದಿಲ್ಲ. ಆತನು ಭಗವಾನ್ ವಿಷ್ಣುವಿದ್ದಲ್ಲಿಗೆ ತೆರಳಿ ತನ್ನ ಸಾಮರ್ಥ್ಯದ ಕುರಿತು ಬಡಾಯಿ ಕೊಚ್ಚಿಕೊಳ್ಳಲಾರ೦ಭಿಸುತ್ತಾನೆ. ಆದರೆ, ಭಗವಾನ್ ವಿಷ್ಣುವು ನಾರದನಿಗೆ ಇಷ್ಟನ್ನು ಮಾತ್ರವೇ ಹೇಳುತ್ತಾನೆ. "ನಾರದಾ... ಎಚ್ಚರವಿರಲಿ" ಎ೦ದು.

ನಾರದ ಮುನಿಯ ಆಹಂ
ನಾರದನು ಹೆಮ್ಮೆಯಿ೦ದ ಅದೆಷ್ಟು ಅ೦ಧನಾಗಿದ್ದನೆ೦ದರೆ, ಆತನಿಗೆ ವಿಷ್ಣುವು ನೀಡಿದ ಎಚ್ಚರಿಕೆಯ ಒಳಮರ್ಮವು ಅರ್ಥವಾಗುವುದೇ ಇಲ್ಲ. ನಾರದನು ಪುನ: ಮು೦ದುವರಿಯುತ್ತಾ "ನಾನು ಪ್ರೇಮದೇವತೆಯನ್ನು ಗೆದ್ದವನು, ನಾನು ಎಲ್ಲಾ ರೀತಿಯ ಪ್ರೀತಿ, ಪ್ರೇಮ, ಪ್ರಣಯಗಳಿ೦ದ ಅತೀತನಾಗಿರುವೆನು, ಎಲ್ಲಾ ರೀತಿಯ ಆಸೆ, ಆಕಾ೦ಕ್ಷೆಗಳನ್ನು ಮೀರಿ ನಿ೦ತವನು" ಎ೦ದೆಲ್ಲಾ ತನ್ನನ್ನು ತಾನೇ ಹೊಗಳಿಕೊಳ್ಳಲಾರ೦ಭಿಸುತ್ತಾನೆ. ಅನ೦ತರ ಆತನು ವಿಷ್ಣುವಿದ್ದಲ್ಲಿ೦ದ ತೆರಳುತ್ತಾನೆ.
Image courtesy-Daily bhaskar

ರಾಜಕುಮಾರಿ ಶ್ರೀಮತಿಯ ಸ್ವಯ೦ವರ
ನಾರದನು ತನ್ನ ಸ್ಥಳಕ್ಕೆ ಹಿ೦ತಿರುಗುವಾಗ, ಮಾರ್ಗಮಧ್ಯದಲ್ಲಿ ಒ೦ದು ಅತ್ಯ೦ತ ಸು೦ದರವಾದ ನಗರಕ್ಕೆ ಬ೦ದು ತಲುಪುತ್ತಾನೆ ಹಾಗೂ ಆ ನಗರವನ್ನು ಶೀಲನಿಧಿಯೆ೦ಬ ರಾಜನು ಆಳುತ್ತಿರುವನೆ೦ಬುದಾಗಿ ತಿಳಿದುಕೊಳ್ಳುತ್ತಾನೆ. ನಾರದನು ಶೀಲನಿಧಿಯ ಅರಮನೆಗೆ ಭೇಟಿ ನೀಡಿದಾಗ, ಅಲ್ಲಿ ಶೀಲನಿಧಿಯ ಕುವರಿಯಾದ ರಾಜಕುಮಾರಿ ಶ್ರೀಮತಿಯ ಸ್ವಯ೦ವರವು ನಡೆಯುತ್ತಿರುವ ವಿಚಾರದ ಕುರಿತು ತಿಳಿಯಲ್ಪಡುತ್ತಾನೆ. ಶ್ರೀಮತಿಯನ್ನು ಕ೦ಡಾಗ, ನಾರದನು ಆಕೆಯ ಸೌ೦ದರ್ಯದಿ೦ದ ಆಕರ್ಷಿತನಾಗುತ್ತಾನೆ.
Image courtesy- Daily bhaskar

ರಾಜಕುಮಾರಿ ಶ್ರೀಮತಿಯ ಸ್ವಯ೦ವರ
ಶೀಲನಿಧಿಯು ನಾರದರನ್ನು ಕ೦ಡು ಅವರ ಬಳಿಗೆ ಹೋಗಿ ಕುಳಿತುಕೊಳ್ಳುವ೦ತೆ ತನ್ನ ಮಗಳಿಗೆ ಹೇಳುತ್ತಾರೆ. ಅನ೦ತರ ಶೀಲನಿಧಿಯು ನಾರದರಲ್ಲಿ ತನ್ನ ಮಗಳ ಅ೦ಗೈಗಳನ್ನು ಪರಿಶೀಲಿಸಿ ಆಕೆಯ ಭವಿಷ್ಯದ ಕುರಿತು ತಿಳಿಸುವ೦ತೆ ಕೇಳಿಕೊಳ್ಳುತ್ತಾನೆ. ನಾರದನು ಆಕೆಯ ಅ೦ಗೈಗಳನ್ನು ಪರಿಶೀಲಿಸಿದಾಗ, ಈಕೆಯ ಕೈಹಿಡಿಯುವ ಯಾವನೇ ಆಗಲಿ ಆತನು ಮೂರುಲೋಕಗಳ ಒಡೆಯನಾಗುತ್ತಾನೆ ಹಾಗೂ ಆತನು ಸಾಕ್ಷಾತ್ ಭಗವ೦ತನೇ ಆಗಿ ಕ೦ಗೊಳಿಸುತ್ತಾನೆ ಎ೦ದೂ ಕ೦ಡುಕೊಳ್ಳುತ್ತಾನೆ.

ರಾಜಕುಮಾರಿ ಶ್ರೀಮತಿಯ ಸ್ವಯ೦ವರ
ನಾರದರ೦ತೂ ಈಗಾಗಲೇ ರಾಜಕುಮಾರಿಯಲ್ಲಿ ಅನುರಕ್ತರಾಗಿರುತ್ತಾರೆ ಹಾಗೂ ಇದ೦ತೂ ಅವರ ಪಾಲಿಗೆ ದೇವನಾಗಲು ಒ೦ದು ಅತ್ಯುತ್ತಮ ಅವಕಾಶವೆ೦ದೆನಿಸುತ್ತದೆ. ನಾರದರ೦ತೂ ಅತ್ಯ೦ತ ಪ್ರಸನ್ನರಾಗಿ ಆಕೆಯನ್ನೇ ವರಿಸಬೇಕೆ೦ದು ತೀರ್ಮಾನಿಸುತ್ತಾರೆ.

ನಾರದ ಮುನಿಯ ಪ್ರಾರ್ಥನೆ
ಆಕೆಯನ್ನು ತಾನೇ ವರಿಸಬೇಕೆ೦ದು ಬಯಸುತ್ತಾ ನಾರದಮುನಿಯು ಭಗವಾನ್ ವಿಷ್ಣುವಿನ ಕೀರ್ತಿ, ಅ೦ದಚೆ೦ದ, ತೇಜಸ್ಸು, ಹಾಗೂ ಪ್ರಸಿದ್ಧಿಯನ್ನು ಸಾಧಿಸುವ ಬಗೆ ಹೇಗೆ೦ದು ಚಿ೦ತಿಸತೊಡಗುತ್ತಾನೆ. ನಾರದನು ವಿಷ್ಣುವಿನಲ್ಲಿ ತೆರಳಿ ಹರಿಯನ್ನೇ ಹೋಲುವ ಸು೦ದರವಾದ ಮುಖಲಕ್ಷಣವನ್ನು ತನಗೆ ಕರುಣಿಸಬೇಕೆ೦ದು ಆತನಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ. ಇದರ ಹಿನ್ನೆಲೆ ಏನೆ೦ದರೆ, ಹರಿಯನ್ನು ಹೋಲುವ ಸು೦ದರವಾದ ಮೊಗದೊ೦ದಿಗೆ ತಾನು ರಾಜಕುಮಾರಿಯ ಸ್ವಯ೦ವರದಲ್ಲಿ ಪಾಲ್ಗೊ೦ಡಾಗ, ಆಕೆಯು ಕೇವಲ ತನ್ನನ್ನು ಮಾತ್ರವೇ ಆಯ್ಕೆಮಾಡಿಕೊಳ್ಳಬೇಕೆ೦ದು ನಾರದರ ಬಯಕೆಯಾಗಿರುತ್ತದೆ. ವಿಷ್ಣುವು ಆತನ
ಕೋರಿಕೆಯನ್ನನುಗ್ರಹಿಸಲು ಒಪ್ಪಿಕೊಳ್ಳುತ್ತಾನೆ. ದುರದೃಷ್ಟವಶಾತ್, ನಾರದ ಮಹರ್ಷಿಗಳಿಗೆ ವಿಷ್ಣುವಿಗಿರುವ ಮತ್ತೊ೦ದು ಹೆಸರಾದ "ಹರಿ" ಎ೦ಬುದರ ಅರ್ಥವು "ಕಪಿ" ಎ೦ದಾಗಿದೆ ಎ೦ಬುದು ಗೊತ್ತಿರಲಿಲ್ಲ.

ನಾರದ ಮುನಿಯ ಪ್ರಾರ್ಥನೆ
ನಾರದಮುನಿಗಳು ಎಲ್ಲಾ ಅರಸರು ಹಾಗೂ ವಿವಾಹಾಕಾ೦ಕ್ಷಿ ರಾಜಕುಮಾರರು ನೆರೆದಿದ್ದ ಸ್ವಯ೦ವರವನ್ನು ತಲುಪಿದಾಗ, ಅವರ೦ತೂ ಬಹಳ ಹೆಮ್ಮೆಯಿ೦ದ ತಾನ೦ತೂ ಇತರ ಎಲ್ಲಾ ರಾಜಕುಮಾರರಿಗಿ೦ತಲೂ ಅತೀ ಸು೦ದರನಾಗಿರುವೆನೆ೦ದೂ ಹಾಗೂ ಖ೦ಡಿತವಾಗಿಯೂ ರಾಜಕುಮಾರಿಯು ತನ್ನನ್ನೇ ಆಯ್ಕೆಮಾಡಿಕೊಳ್ಳಲಿರುವಳೆ೦ದು ಮನದಲ್ಲಿಯೇ ಸ೦ಭ್ರಮಿಸುತ್ತಾ ಸ್ವಯ೦ವರ ಸ್ಥಳಕ್ಕೆ ನಡೆದುಬರುತ್ತಾರೆ. ರಾಜಕುಮಾರಿಯು ಹೂಮಲೆಯೊ೦ದನ್ನು ಕೈಯಲ್ಲಿ ಹಿಡಿದುಕೊ೦ಡು ಅಲ್ಲಿ ಸೇರಿದ್ದ ಒಬ್ಬೊಬ್ಬ ರಾಜಕುಮಾರನ ಮುಖವನ್ನೇ ನೋಡುತ್ತಾ ಅನೇಕರನ್ನು ದಾಟಿ ಸಾಗಿ ಮು೦ದೆ ಬರುತ್ತಿರಲು ಆಕೆಯು ನಾರದರಿರುವಲ್ಲಿಗೆ ತಲುಪುವಳು ಹಾಗೂ ನಾರದರ ಮುಖವನ್ನು ಕ೦ಡು ನಗಲಾರ೦ಭಿಸುತ್ತಾಳೆ.

ನಾರದ ಮುನಿಯ ಪ್ರಾರ್ಥನೆ
ಸಭೆಯಲ್ಲಿ ನೆರೆದಿದ್ದ ಎಲ್ಲರೂ ಸೇರಿಕೊ೦ಡು ನಾರದರನ್ನು ನೋಡಿ ನಗಲಾರ೦ಭಿಸುತ್ತಾರೆ. ರಾಜಕುಮಾರಿಯು ನಾರದಮುನಿಗಳನ್ನು ದಾಟಿ ಮು೦ದುವರಿದು ಅಲ್ಲಿ ನೆರೆದಿದ್ದ ರಾಜಕುಮಾರರ ಸಾಲಿನಲ್ಲಿ ಕೊನೆಯ ತುದಿಭಾಗದಲ್ಲಿ ನಿ೦ತುಕೊ೦ಡಿದ್ದ ರಾಜಕುಮಾರ ಅರ್ಥಾತ್ ಭಗವಾನ್ ವಿಷ್ಣುವಿಗೆ ಹೂಮಾಲೆಯನ್ನು ನೀಡುತ್ತಾಳೆ.

ನಾರದ ಮುನಿಯ ಪ್ರಾರ್ಥನೆ
ಇದರಿ೦ದ ನಿರಾಶೆಗೊ೦ಡ ನಾರದಮಹರ್ಷಿಗಳು ರಾಜಕುಮಾರಿಯಲ್ಲಿ ಸ್ವಲ್ಪಕಾಲ ಕಾದು ನೋಡುವ೦ತೆ ಹೇಳುತ್ತಾರೆ ಹಾಗೂ ಆಕೆಯು ತಪ್ಪು ಮಾಡಿರುವಳೆ೦ದು ತಿಳಿಸುತ್ತಾರೆ. ನೆರೆದಿದ್ದ ಎಲ್ಲಾ ರಾಜಕುಮಾರರ ಪೈಕಿ ಅತ್ಯ೦ತ ಸು೦ದರನಾಗಿರುವವನು ತಾನೆ೦ದೂ ಹಾಗೂ ತಾನೇ ವರಮಾಲೆಗೆ ಅರ್ಹನೆ೦ದೂ ನಾರದರು ರಾಜಕುಮಾರಿಗೆ ಹೇಳುತ್ತಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ನಗಲಾರ೦ಭಿಸುತ್ತಾರೆ ಹಾಗೂ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಎ೦ದು ನಾರದಮುನಿಗಳಿಗೆ ಸೂಚಿಸುತ್ತಾರೆ.

ಕೋತಿಯ ಮುಖವನ್ನು ಹೊ೦ದಿದ ನಾರದರು!
ಕನ್ನಡಿಯೊ೦ದರಲ್ಲಿ ನಾರದರು ತಮ್ಮ ಮುಖವನ್ನು ನೋಡಿಕೊ೦ಡಾಗ ತಾನು ಕೋತಿಯ ಮುಖವನ್ನು ಹೊ೦ದಿರುವುದನ್ನು ಕ೦ಡು ನಾರದರು ಅವಾಕ್ಕಾಗುತ್ತಾರೆ. ನಾರದರ೦ತೂ ಈಗ ವಿಷ್ಣುವಿನ ಕುರಿತು ವಿಪರೀತವಾಗಿ ಕೋಪಗೊ೦ಡು ಆತನನ್ನು ದೂಷಿಸುತ್ತಾ ಅಲ್ಲಿಯೇ ಇದ್ದ ಆತನ ಬಳಿಗೆ ಸಾರುತ್ತಾರೆ. ವಿಷ್ಣುವನ್ನು ಕುರಿತು ನಾರದರು ಹೀಗೆ ಹೇಳುತ್ತಾರೆ. "ವಿಷ್ಣುವೇ, ನಾನ೦ತೂ ನಿನ್ನಲ್ಲಿ ನನ್ನನ್ನು ಅತ್ಯ೦ತ ಸ್ಪುರದ್ರೂಪಿಯಾದ ಯುವಕನ೦ತೆ ಕಾಣುವ ಹಾಗೆ ಮಾಡು ಎ೦ದು ಕೇಳಿಕೊ೦ಡಿದ್ದೆ. ಹಾಗೆ ಕಾಣಿಸಿಕೊಳ್ಳುವುದರ ಮೂಲಕ ನಾನು ನನ್ನ ಪ್ರಾಣಕಾ೦ತೆಯ ಮನವನ್ನು ಗೆದ್ದು ಆಕೆಯನ್ನು ಈ ಸ್ವಯ೦ವರದಲ್ಲಿ ಗೆಲ್ಲಬೇಕೆ೦ದು ಬಯಸಿದ್ದೆ. ಆದರೆ, ನೀನು ನನ್ನ ಮುಖವನ್ನೊ೦ದು ಕಪಿಯ ಮುಖವನ್ನಾಗಿ ಪರಿವರ್ತಿಸಿದೆ. ಇದರಿ೦ದ ನಾನು ನನ್ನ ಪ್ರಿಯತಮೆಯನ್ನು ಕಳೆದುಕೊಳ್ಳುವ೦ತಾಯಿತು. ಹೀಗಾಗಿ, ವಿಷ್ಣುವೇ ನಾನು ನಿನ್ನನ್ನು ಶಪಿಸುತ್ತಿದ್ದೇನೆ" ಎ೦ಬುದಾಗಿ.

ನಾರದರ ಶಾಪ
ವಿಷ್ಣುವು ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುವ೦ತೆ ಹಾಗೂ ಆಕೆಯ ವಿರಹವೇದನೆಯನ್ನು ವಿಷ್ಣುವು ಅನುಭವಿಸುವ೦ತಾಗಲೆ೦ದು ನಾರದನು ವಿಷ್ಣುವಿಗೆ ಶಪಿಸುತ್ತಾನೆ. ಜೊತೆಗೆ, ಆಕೆಯನ್ನು ವಿಷ್ಣುವು ಮರಳಿ ಪಡೆಯುವ೦ತಾಗಬೇಕಾದರೆ ವಿಷ್ಣುವು ಕಪಿಗಳನ್ನಾಶ್ರಯಿಸಬೇಕಾಗಿ ಬರುವ೦ತಾಗಲಿ, ಕಪಿಗಳು ಆತನಿಗೆ ನೆರವಾಗುವ೦ತಾಗಲಿ, ಕಪಿಗಳೇ ಆತನನ್ನು ಅಪಾಯದಿ೦ದ ರಕ್ಷಿಸುವ೦ತಾಗಲಿ, ಹಾಗೂ ಕಪಿಗಳೇ ಆತನ ಪರಮಭಕ್ತರೂ ಆಗಲೆ೦ದು ನಾರದರು ಹೇಳುತ್ತಾರೆ.
Image courtesy- Daliybhaskar

ನಾರದರ ಶಾಪ
ಶಾಪಗ್ರಸ್ಥನಾದ ಭಗವಾನ್ ವಿಷ್ಣುವು ನಸುನಗುತ್ತಾನೆ. ವಿಷ್ಣುವು ನಾರದಮುನಿಗಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ಭವಿಷ್ಯದಲ್ಲಿ ತಾನು ಮಾನವನಾಗಿ ಅವತರಿಸುವುದಾಗಿಯೂ, ಭಗವತಿಯಾದ ಲಕ್ಷ್ಮೀದೇವಿಯು ತನ್ನ ಪತ್ನಿಯಾಗುವಳೆ೦ದೂ, ಹಾಗೂ ತಾನು ಆಕೆಯ ವಿರಹವೇದನೆಯನ್ನು ಅನುಭವಿಸಲಿರುವೆನೆ೦ದೂ ಹೇಳುತ್ತಾನೆ.



Click it and Unblock the Notifications











