ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಶ್ಲೇಷ ಬಲಿ ಪೂಜೆ ಮಾಡಿಸುವುದಾದರೆ ಈ ಸಂಗತಿಗಳು ತಿಳಿದಿರಲಿ

ಸರ್ಪದೋಷ ನಿವಾರಣೆಗೆ ನಮ್ಮ ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ತುಂಬಾನೇ ಪ್ರಸಿದ್ಧ. ಈ ದೇವಾಲಯಕ್ಕೆ ಬಂದು ಅಶ್ಲೇಷ ಬಲಿ ಪೂಜೆ ಮಾಡಿಸಿದ ಹೋದರೆ ಜೀವನದಲ್ಲಿರುವ ಅನೇಕ ಸಮಸ್ಯೆಗಳು ದೂರಾಗುವುದು, ಮದುವೆ ವಿಳಂಬವಾಗಿದ್ದರೆ ಕಂಕಣಬಲ ಕೂಡಿ ಬರುವುದು ಎಂಬ ನಂಬಿಕೆ.

Ashlesha Bali Pooja

ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್, ಬಾಲಿವುಡ್ ನಟ ಅಜಯ್‌ ದೇವಗನ್, ಕ್ರಿಕೆಟಿಗ ಮನೀಶ್‌ ಪಾಂಡೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ.

ಸರ್ಪದೋಷವಿದ್ದರೆ ಕುಟುಂಬದಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುವುದು. ಪೂರ್ವಜರಿಗೆ ಸರ್ಪದೋಷವಿದ್ದರೆ ಅದರ ದೋಷ ಮಕ್ಕಳಲ್ಲಿ, ಮರಿ ಮಕ್ಕಳಲ್ಲಿ ಕಂಡು ಬರುವುದು ಎಂದು ಹೇಳಲಾಗುವುದು.. ಇಲ್ಲಿಗೆ ದೇಶ ವಿದೇಶಗಳಿಂದ ಭಕ್ತರು ಬಂದು ತಮ್ಮ ಹರಿಕೆ ತೀರಿಸಿ ಹೋಗುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಶ್ಲೇಷ ಪೂಜೆ ಮಾಡಿಸುವುದಾದರೆ ಪೂಜಾ ವಿಧಿ ವಿಧಾನಗಳೇನು? ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಸರ್ಪದೋಷ ಎಂದರೇನು?
ನಾಗದೇವತೆಗೆ ಹಾನಿಯುಂಟು ಮಾಡಿದಾಗ ಸರ್ಪದೋಷ ಉಂಟಾಗುವುದು. ಕೆಲವೊಮ್ಮೆ ಮನೆ ಕಟ್ಟುವಾಗ ಕೆಲವರು ಹುತ್ತ ಕೆಡುವುತ್ತಾರೆ, ಇನ್ನು ಕೆಲವೊಮ್ಮೆ ತೋಟದಲ್ಲಿ ಕೆಲಸ ಮಾಡುವಾಗ ಗೊತ್ತಿಲ್ಲದೆ ಹಾವುಗಳಿಗೆ ಹಾನುಯುಂಟಾಗಬಹುದು, ಈ ರೀತಿಯಾದಾಗ ಸರ್ಪದೋಷ ಉಂಟಾಗುವುದು.

ಸರ್ಪದೋಷ ಎಂಬುವುದು ನಮ್ಮ ಹಿರಿಯರಿಂದಲೂ ಬರುತ್ತದೆ. ಅವರಿಂದ ಏನಾದರೂ ತೊಂದರೆ ಅಥವಾ ಅಪ್ರಚಾರ ಆಗಿದ್ದರೆ ಅದರ ಶಾಪ ಪೀಳಿಗೆಗೆ ಕಾಡಬಹುದು. ಸರ್ಪ ದೋಷವಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಒಂದೆಲ್ಲಾ ಒಂದು ಸಮಸ್ಯೆ ಉಂಟಾಗುತ್ತಿರುತ್ತದೆ, ಕಬಂಜೆತನ ಸಮಸ್ಯೆ, ಕುಟುಂಬದಲ್ಲಿ ಮಕ್ಕಳು ಮದುವೆ ಪ್ರಾಯಕ್ಕೆ ಬಂದರೂ ಮದುವೆ ವಿಳಂಬವಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಈ ರೀತಿ ಸಮಸ್ಯೆ ಕಂಡು ಬಂದಾಗ ಅಶ್ಲೇಷ ಬಲಿ ಪೂಜೆ ಮಾಡುವುದರಿಂದ ಪರಿಹಾರ ಸಿಗುವುದು.

ಅಶ್ಲೇಷ ಬಲಿ ಪೂಜೆ ಮಾಡಿಸುವುದಾದರೆ

ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಅಶ್ಲೇಷ ನಕ್ಷತ್ರದ ದೇವತೆ ಸರ್ಪ ಆದ್ದರಿಂದ ಈ ನಕ್ಷತ್ರದಂದು ಪೂಜೆ ಮಾಡಿದರೆ ಸರ್ಪದೋಷದಿಂದ ಮುಕ್ತರಾಗಬಹುದು.

ಅಶ್ಲೇಷ ಬಲಿ ಪೂಜೆ ಒಂದೇ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೇ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ಅಶ್ಲೇಷ ಬಲಿ ಪೂಜೆ ಬೆಳಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುವುದು. ಅಶ್ಲೇಷ ಪೂಜೆಗೆ ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸಗಳು ಉತ್ತಮ ಸಮಯ ಎಂದು ಹೇಳಲಾಗುವುದು.

ಅಶ್ಲೇಷ ಬಲಿ ಪೂಜೆ:
ಗಣಪತಿ ಪೂಜೆಯನ್ನು ಮಾಡಿ ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕ್ಲಪ ಮಾಡುವ ಮೂಲಕ ಅಶ್ಲೇಷ ಬಲಿ ಪೂಜೆ ಪ್ರಾರಂಭವಾಗುವುದು. ನಾಗ ಸನ್ನಿಧಿಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ತುಂಬಾ ಆಕರ್ಷಕವಾಗಿ ಬರೆಯಲಾಗುವುದು. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ ಅಗ್ರಸ್ಥಾನ. ಉಳಿದ ಅಷ್ಟ ಪದಗಳಲ್ಲಿ ಅಷ್ಟಕುಲ ಸಂಜಾತರಾದ ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ ಅವರ ಆವಾಹನೆ ಮಾಡಲಾಗುವುದು. ಆಶ್ಲೇಷಾ ಬಲಿ ಮಂಡಲದ 52 ಪದಗಳು ಸರ್ಪಕುಲದ 52 ಮಂದಿ ಸರ್ಪ ಶ್ರೇಷ್ಟರ ಆವಾಹನೆಯ ಸಂಕೇತವವಾಗಿದೆ. ಸಕಲ ಸರ್ಪ ಸಂಕುಲವನ್ನು ಆಹ್ವಾನಿಸಲಾಗುವುದು.

ಅನಂತರ ಕಲ್ಪೋಕ್ತವಾಗಿ ಆಸನ, ಸ್ವಾಗತ, ಪಾದ್ಯ, ಅರ್ಘ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ವಂದನೆಗಳೆಂಬ ಷೋಡಶೋಪಚಾರ ಪೂಜೆಯನ್ನು ಮಾಡಲಾಗುವುದು. ಸಮಸ್ತ ಸರ್ಪದೋಷ ನಿವಾರಣೆಗೆಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಮಂಡಲಗಳ ಪದಗಳಲ್ಲಿರಿಸಿ, ಪೂಜೆ ಮಾಡಲಾಗುವುದು.

ದೇವತೆಗಳಿಗೆ ಪ್ರಿಯವಾಗುವಂತೆ ಜ್ಯೋತಿಗಳನ್ನು ಬೆಳಗಿಸಿ ದೇದಿಪ್ಯವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ನಂತರ ಮಂಗಳಾರತಿ ಮಾಡಿ ಪುಷ್ಪ ಅರ್ಪಿಸಲಾಗುವುದು. ನಂತರ ಪ್ರದಕ್ಷಣೆ ಮಾಡಿ ಸಾಷ್ಟಾಂಗ ನಮಸ್ಕಾರ ಹಾಕಿ ಸಕಲ ಸರ್ಪ ದೋಷ ನಿವರಣೆಗೆ ಪ್ರಾರ್ಥಿಸಬೇಕು.

ಪೂಜಾ ನಿಯಮಗಳೇನು?
* ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ಎರಡು ದಿನಗಳನ್ನು ಮೀಸಲಿಡಬೇಕಾಗುತ್ತದೆ.
* ಈ ಒಂದು ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ.

* ಈ ಪೂಜೆಯಲ್ಲಿ ಯಾರೆ ಆಗಲಿ ಯಾವುದೇ ಭೇದ ಭಾವಗಳಿಲ್ಲದೆ ಪಾಲ್ಗೊಳ್ಳಬಹುದು. * ಈ ಪೂಜೆಯಲ್ಲಿ ಕುಟುಂಬದಿಂದ ನಾಲ್ಕು ಜನರಷ್ಟೇ ಭಾಗವಹಿಸಬಹುದು. ಪೂಜೆ ಮಾಡಿಸುವವರಿಗೆ ದೇವಸ್ಥಾನದ ವತಿಯಿಂದಲೇ ಉಪಹಾರ, ಭೋಜನದ ವ್ಯವಸ್ಥೆಯಿರುತ್ತದೆ.

ಪೂಜೆಗೆ ಎಷ್ಟು ಖರ್ಚಾಗುವುದು?
ಪ್ರತ್ಯೇಕ ಮಾಡುವುದಾದರೆ ಅಧಿಕ ಖರ್ಚಾಗುವುದು, ಆದರೆ ಸಾಮಾನ್ಯವಾಗಿ ಸಮೂಹದಲ್ಲಿ ಮಾಡಿಸುತ್ತಾರೆ. ಅದಕ್ಕೆ ಅಧಿಕ ಖರ್ಚಾಗಲ್ಲ.

English summary

Kukke Subramanya Ashlesha Bali Pooja Benefits, Procedure, and Cost

Ashlesha Bali Pooja: What are the benefits of doing Ashlesha Bali Pooja at Kukke Subramanya, read on...
Story first published: Friday, February 17, 2023, 22:13 [IST]
X
Desktop Bottom Promotion