ತಪ್ಪದೇ ಓದಿ: ಈ ಹತ್ತು ಕೆಟ್ಟ ಅಭ್ಯಾಸಗಳೇ ಆರೋಗ್ಯಕ್ಕೆ ಮಾರಕ!

Posted By: Arshad
Subscribe to Boldsky

ನಮ್ಮೆಲ್ಲರಲ್ಲಿಯೂ ಕೆಲವು ಕೆಟ್ಟ ಅಭ್ಯಾಸಗಳಿವೆ. ನಮಗೆ ಇದು ಕೆಟ್ಟದ್ದು ಎಂದು ಗೊತ್ತಿದ್ದರೂ ಉಪೇಕ್ಷಿಸಿ ಮುಂದುವರೆಸುತ್ತೇವೆ. ಕೆಲವು ಅಭ್ಯಾಸಗಳು ನಮಗೆ ಅರಿವಿಲ್ಲದೇ ಜರುಗುತ್ತಿರುತ್ತವೆ. ಕಾರಣವೇನೇ ಇರಲಿ, ಈ ಅಭ್ಯಾಸಗಳು ಅಪಾಯಕಾರಿಯಾಗಿದ್ದು ನಿಧಾನವಾಗಿ ನಮ್ಮನ್ನು ಸಾವಿನತ್ತ ದೂಡುತ್ತಿವೆ.

ಈ ಅಪಾಯವನ್ನು ಮುಂಗಂಡ ಹಿರಿಯರು, ಆಪ್ತರು ಈ ಬಗ್ಗೆ ನಿಮಗೆ ಹಿತವಚನವನ್ನು ನೀಡಿ ಈ ಅಭ್ಯಾಸ ಮುಂದುವರೆಸದೇ ಇರಲು ಸಲಹೆ ನೀಡುತ್ತಾರೆ. ಅದರಲ್ಲೂ ಈ ಅಭ್ಯಾಸವಿರಿಸಿಕೊಂಡಿದ್ದವರು ಇದರಿಂದಾಗಿ ಬಳಿಕ ತಮಗೆ ಎದುರಾದ ತೊಂದರೆಯನ್ನು ಉದಾಹರಿಸಿ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂತಹ ಹತ್ತು ಪ್ರಮುಖವಾದ, ಆರೋಗ್ಯಕ್ಕೆ ಮಾರಕವಾದ ಹತ್ತು ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ...

ಬ್ಲಾಕ್ ಹೆಡ್‌ಗಳನ್ನು ಚಿವುಟುವುದು

ಬ್ಲಾಕ್ ಹೆಡ್‌ಗಳನ್ನು ಚಿವುಟುವುದು

ನಾವೆಲ್ಲರೂ ನಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಬ್ಲಾಕ್ ಹೆಡ್ ಎಂಬ ಕಪ್ಪುಚುಕ್ಕೆಯನ್ನು ಚಿವುಟಿ ಹೊರಹಾಕಲು ಯತ್ನಿಸಿಯೇ ಇರುತ್ತೇವೆ. ಕೆಲವೊಮ್ಮೆ ನಮ್ಮ ತಾಯಿ, ಪತ್ನಿ ಅಥವಾ ಸಹೋದರಿ ಈ ಕೆಲಸವನ್ನು ಮಾಡಿರಲೂಬಹುದು. ಆದರೆ ಕಪ್ಪುತಲೆಗಳ ತುದಿಯನ್ನು ಚಿವುಟಿ ತೆಗೆಯುವುದು ನಿಮ್ಮ ಮುಖದ ಚರ್ಮಕ್ಕೆ ನೀವು ಮಾಡಬಹುದಾದ ಗರಿಷ್ಟ ಹಾನಿಯಾಗಿದೆ. ಏಕೆ? ಏಕೆಂದರೆ ವಾಸ್ತವವಾಗಿ ಈ ಕಪ್ಪುತಲೆಗಳು ಒಂದು ನೀಳವಾದ ಹಿಟ್ಟಿನ ಕಡ್ಡಿಯಂತಿದ್ದು ತುದಿಯ ಭಾಗ ಮಾತ್ರ ಗೋಚರಿಸುತ್ತದೆ ಹಾಗೂ ಇದರ ಬುಡ ಚರ್ಮದಾಳದಲ್ಲಿರುತ್ತದೆ. ಈ ತುದಿಯನ್ನು ಚಿವುಟಿದರೆ ಹಿಟ್ಟಿನ ಕಡ್ಡಿಯ ತುದಿಯನ್ನು ಕೊಂಚವೇ ಮುರಿದಂತಾಗುತ್ತದೆ ಅಷ್ಟೇ ಹೊರತು ಇಡಿಯ ಕಡ್ಡಿ ಹಾಗೇ ಇರುತ್ತದೆ. ಆದರೆ ತುದಿಯನ್ನು ಮುರಿದಾಗ ಇದರ ಬುಡದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಚರ್ಮದ ಹೊರಭಾಗಕ್ಕೆ ತಲುಪಲು ಸುಲಭವಗುತ್ತದೆ ಹಾಗೂ ಈ ಮೂಲಕ ಸೋಂಕು ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಕೀವುಭರಿತ ಗುಳ್ಳೆ, ಮೊಡವೆ ಮೊದಲಾದವು ಎದುರಾಗುತ್ತವೆ ಹಾಗೂ ಈ ಸೋಂಕು ಕೆಲದಿನಗಳ ಬಳಿಕ ನಿರ್ಗಮಿಸಿದರೂ ಈ ಭಾಗದಲ್ಲಿ ಕಪ್ಪು ಕಲೆಯೊಂದು ಶಾಶ್ವತವಾಗಿ ಉಳಿದುಬಿಡುತ್ತದೆ. ಆದ್ದರಿಂದ ಕಪ್ಪುತಲೆಯಾದರೆ ಸರ್ವಥಾ ಚಿವುಟಕೂಡದು.

ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು

ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು

ನಮ್ಮ ಮೂಗಿನ ಮೇಲ್ಭಾಗ, ಅಂದರೆ ಕಣ್ಣೀರು ಹನಿಯುವ ಭಾಗದಿಂದ ತುಟಿಗಳ ಅಂಚುಗಳವರೆಗೆ ಒಂದು ಗೆರೆ ಎಳೆದರೆ ಕಂಡುಬರುವ ಒಂದು ತ್ರಿಕೋಣ ನಮ್ಮ ಮುಖದ "ಅತ್ಯಂತ ಅಪಾಯಕಾರಿಯಾದ ಭಾಗ" ಎಂದು ವೈದ್ಯವಿಜ್ಞಾನ ತಿಳಿಸುತ್ತದೆ. ಏಕೆಂದರೆ ಈ ಭಾಗದಲ್ಲಿ ಅತಿ ಸೂಕ್ಷ್ಮವಾದ ನರತಂತುಗಳಿದ್ದು ಇವು ತಲೆಬುರುಡೆ ಹಾಗೂ ಮೆದುಳಿನೊಂದಿಗೆ ಸಂಪರ್ಕ ಪಡೆದಿವೆ. ಈ ನರಗಳಲ್ಲಿ ರಕ್ತವನ್ನು ಹಿಮ್ಮೆಟ್ಟಿಸುವುದನ್ನು ತಡೆಯಲು ಯಾವುದೇ ಕವಾಟದ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಭಾಗದಲ್ಲಿರುವ ಪುಟ್ಟ ಮೊಡವೆಗಳನ್ನು ಚಿವುಟಿ ಒಳಗಿನ ಬಿಳಿಭಾಗವನ್ನು ಒಸರುವಂತೆ ಮಾಡಿದಾಗ ಚರ್ಮದ ಈ ಸೂಕ್ಷ್ಮಭಾಗವನ್ನು ನೀವೇ ತೆರೆದು meningitis ಅಥವಾ ಒಂದು ಬಗೆಯ ಮೆದುಳಿಗೆ ಸಂಬಂಧಿಸಿದ ತೊಂದರೆಯನ್ನು ಆಹ್ವಾನಿಸುತ್ತಿದ್ದೀರಿ. ಇದರಿಂದ ಮೆದುಳಿಗೂ ಸೋಂಕು ಉಂಟಾಗಬಹುದು. ಏಕೆಂದರೆ ಮೊಡವೆಗಳಲ್ಲಿನ ಬ್ಯಾಕ್ಟೀರಿಯಾಗಳು ಸೂಕ್ಷ್ಮ ನರತಂತುಗಳಿಂದ ಹಿಮ್ಮೆಟ್ಟಿದ ರಕ್ತದ ಮೂಲಕ ಮೆದುಳನ್ನು ತಲುಪಬಹುದು!

ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು

ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು

ನಮ್ಮ ಕಿವಿಯ ಕೊಳವೆಯ ಒಳಭಾಗದಲ್ಲಿ ಅತಿ ಸೂಕ್ಷ್ಮ ಹಾಗೂ ನವಿರಾದ ರೋಮಗಳಿದ್ದು ಇದರ ಬುಡದಿಂದ ಕಿವಿಯ ಮೇಣ ಉತ್ಪತ್ತಿಯಾಗುತ್ತದೆ. ಈ ಮೇಣ ನಾವಂದುಕೊಂಡಂತೆ ಅನಗತ್ಯವಾದುದಲ್ಲ. ಬದಲಿಗೆ ಈ ಮೇಣ ಅಂಟು ಅಂಟಾಗಿದ್ದು ಸೂಕ್ಷ್ಮವಾದ ತಮಟೆಯನ್ನು ಧೂಳು, ಪರಕೀಯ ಕಣ ಹಾಗೂ ತೆವಳುತ್ತಾ ಕಿವಿಯೊಳಗೆ ಬರುವ ಅತಿ ಚಿಕ್ಕ ಕ್ರಿಮಿಗಳಿಂದ ರಕ್ಷಣೆ ಒದಗಿಸಲೆಂದೇ ಸ್ರವಿಸುವ ದ್ರವವಾಗಿದೆ. ಆದ್ದರಿಂದ ತೆಳುವಾಗಿ ನಿಮ್ಮ ಕಿವಿಯೊಳಗೆ ಮೇಣವಿದ್ದಷ್ಟೂ ಆರೋಗ್ಯಕರ. ಆದರೆ ಈ ಮೇಣ ಇದೆ ಎಂದ ಮಾತ್ರಕ್ಕೇ ನೀವು ಹತ್ತಿಸುತ್ತಿದ ಕಡ್ಡಿಯನ್ನು ಬಳಸಿ ಇದನ್ನು ಒರೆಸಿ ತೆಗೆಯಬೇಕಾಗಿಲ್ಲ. ಅಲ್ಲದೇ ಮೇಣವನ್ನು ತೆಗೆಯುವ ಭರದಲ್ಲಿ ಮೇಣವನ್ನು ಗುಡಿಸಿದಂತೆ ಒಟ್ಟುಗೂಡಿಸಿ ಇನ್ನಷ್ಟು ಒಳಭಾಗಕ್ಕೆ ತಳ್ಳಬಹುದು. ಇದು ತಮಟೆಗೆ ಹಾನಿ ಎಸಗಬಹುದು ಹಾಗೂ ಕಿವಿ ಕೇಳಿಸುವುದು ಕೊಂಚ ಕಡಿಮೆಯಾಗಬಹುದು. ಆದ್ದರಿಂದ ಮೇಣ ಹೆಚ್ಚಾಗಿದ್ದರೆ ನೀವೇ ತೆಗೆಯುವ ಬದಲು ಕಿವಿ ಮೂಗು ಗಂಟಲು ತಜ್ಞರ ಬಳಿಗೆ ಹೋದರೆ ಅವರು ಸುರಕ್ಷಿತವಾಗಿ ತಮ್ಮಲ್ಲಿರುವ ವೈಜ್ಞಾನಿಕ ಉಪಕರಣಗಳನ್ನು ಬಳಸಿ ತೆಗೆಯುತ್ತಾರೆ.

ಸಿಗರೇಟ್ ಸೇವನೆ

ಸಿಗರೇಟ್ ಸೇವನೆ

ಸಿಗರೇಟು ಸೇದುವುದು ಆರೋಗ್ಯಕ್ಕೆ ಮಾರಕ ಎಂದು ಇತರರಿಗಿಂತಲೂ ಸಿಗರೇಟು ಸೇದುವವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದರೂ ಇವರ ಮನಃಸ್ಥಿತಿ 'ಅಪಾಯ ಬಂದಾಗ ನೋಡಿಕೊಂಡರಾಯ್ತು' ಎಂಬ ಸ್ಥಿತಿಗೆ ತಲುಪಿರುವ ಕಾರಣ ಯಾರ ಹಿತವಚನವನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಸಿಗರೇಟಿನಲ್ಲಿರುವ ತಂಬಾಕಿನ ಹೊಗೆಯಲ್ಲಿ, ನಿಟೋಟಿನ್, ಬ್ಯೂಟೇನ್, ಪೈಂಟ್, ಆರ್ಸೆನಿಕ್ ಸಹಿತ ಸುಮಾರು ಎಪ್ಪತ್ತರಷ್ಟು ಅಪಾಯಕರ ರಾಸಾಯನಿಕಗಳಿವೆ. ಇವು ಧೂಮಪಾನಿಯ ಶ್ವಾಸಕೋಶದೊಳಗಿನ ಸೂಕ್ಷ್ಮ ನಳಿಕೆಗಳ ಕ್ಷಮತೆ ಕುಂದಿಸಿ ಉಸಿರಾಟದ ಕ್ಷಮತೆಯನ್ನೂ ಕಡಿಮೆ ಮಾಡುತ್ತವೆ ಹಾಗೂ ಕ್ಯಾನ್ಸರ್ ಉಂಟಾಗಲು ಈ ಜೀವಕೋಶಗಳು ಬೀಜದಂತೆ ಕಾರ್ಯನಿರ್ವಹಿಸುತ್ತವೆ. ಧೂಮಪಾನಿ ಬಿಟ್ಟ ಹೊಗೆ ಇತರರಿಗೂ ಮಾರಕವಾಗಿದ್ದು ಇದನ್ನು ಧೂಮಪಾನಿಗಳಲ್ಲದವರು ಪ್ರತಿಯೊಬ್ಬರೂ ವಿರೋಧಿಸುವ ಅಗತ್ಯವಿದೆ.

ಹಸಿವಿಲ್ಲದಿದ್ದಾಗ ಊಟ ಮಾಡುವುದು

ಹಸಿವಿಲ್ಲದಿದ್ದಾಗ ಊಟ ಮಾಡುವುದು

ನಮ್ಮ ದೇಹಕ್ಕೆ ಊಟ ಬೇಕು ಎಂದು ಮೆದುಳಿಗೆ ಹೊಟ್ಟೆ ನೀಡುವ ಸೂಚನೆಯೇ ಹಸಿವು. ಅಂದರೆ ಈಗ ಹೊಟ್ಟೆ ಖಾಲಿಯಾಗಿದೆ, ಆಹಾರ ಒದಗಿಸಲು ಸೂಕ್ತ ಸಮಯ ಎಂದು ಹೇಳುತ್ತಿದೆ. ಆದರೆ ಇದಕ್ಕೆ ಬದಲಾಗಿ ನೈಸರ್ಗಿಕ ಸಮಯವನ್ನು ಧಿಕ್ಕರಿಸಿ ಹಸಿವಿಲ್ಲದಿರುವ ಇತರ ಸಮಯದಲ್ಲಿ ಆಹಾರ ಸೇವಿಸಿದರೆ, ಆ ಸಮಯದಲ್ಲಿ ಹೊಟ್ಟೆಯಲ್ಲಿ ಇನ್ನೂ ಆಹಾರವಿದ್ದು ಜೀರ್ಣಕ್ರಿಯೆಯ ನಡುವೆ ಇರುತ್ತದೆ. ಈ ಹೆಚ್ಚುವರಿ ಆಹಾರ ಅನಗತ್ಯವಾಗಿದ್ದು ಈಗಾಗಲೇ ಹೊಟ್ಟೆಯಲ್ಲಿರುವ ಜೀರ್ಣಗೊಂಡ ಆಹಾರದೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ಮೇಲೆ ಕೆಳಗೆ ಮಾಡುವುದಲ್ಲದೇ ಅನಗತ್ಯವಾದ ಕ್ಯಾಲೋಗಿಗಳಿಂದ ದೇಹದ ತೂಕ ಹೆಚ್ಚಲೂ ಕಾರಣವಾಗುತ್ತದೆ.

ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು

ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು

ನೀವು ನಡೆಯುತ್ತಿದ್ದಾಗ ಥಟ್ಟನೇ ನಿಮ್ಮ ಮೊಬೈಲಿನಲ್ಲಿ ಯಾವುದೋ ಸಂದೇಶ ಬಂದಿರುವುದು ತಿಳಿದಾಗ ಏನು ಮಾಡುತ್ತೀರಿ? ಎಲ್ಲರಿಗೂ ಇದು ಯಾವ ಸಂದೇಶ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಪರಿಣಾಮವಾಗಿ ನಾವೆಲ್ಲರೂ ಸಂದೇಶವನ್ನು ತಕ್ಷಣ ಓದಲು ತವಕಿಸುತ್ತೇವೆ ಹಾಗೂ ಒಂದು ವೇಳೆ ಇದು ಪ್ರೀತಿಪಾತ್ರರ ಅಥವಾ ಇನ್ನಾವುದೋ ಅತಿ ಅಗತ್ಯದ ಸಂದೇಶವಾಗಿದ್ದರೆ ಇದಕ್ಕೆ ಆ ಕ್ಷಣವೇ ಪ್ರತಿಕ್ರಿಯಿಸಲೂ ಮುಂದಾಗುತ್ತೇವೆ. ಆಗೇನಾಗುತ್ತದೆ ಗೊತ್ತೇ? ನಿಮ್ಮ ಮೆದುಳಿಗೆ ಸೆರೋಟೋನಿನ್ ಭರದಲ್ಲಿ ನುಗ್ಗುತ್ತದೆ ಹಾಗೂ ಸಂದೇಶದ ಮೂಲಕ ನಿಮ್ಮ ಮನ ಪ್ರಫುಲ್ಲವಾಗಿರುವುದನ್ನು ನಿಮ್ಮ ವದನದ ನಗು ತಿಳಿಸುತ್ತದೆ. ನೆನಪಿಡಿ, ಈ ಸಮಯದಲ್ಲಿ ನೀವು ನಡೆಯುತ್ತಿದ್ದೀರಿ. ಆಗ ಆಗಬಾರದ ಅನಾಹುತ ಆಗಿ ಹೋಗುತ್ತದೆ. ನಡೆಯುವ ದಾರಿಯಲ್ಲಿ ತೆರೆದಿದ್ದ ಮ್ಯಾನ್ ಹೋಲ್ ಅಥವಾ ಚರಂಡಿಯಲ್ಲಿ ನೀವು ಬಿದ್ದ ಬಳಿಕವೇ ನಿಮಗೆ ಏನಾಯಿತೆಂದು ತಿಳಿದಿರುತ್ತದೆ. ಮುಂದಿನ ಕ್ಷಣಗಳಲ್ಲಿ ನೀವು ಎದುರಿಸಬೇಕಾದ ಮುಜುಗರ, ವ್ಯರ್ಥವಾಗುವ ಅಮೂಲ್ಯ ಸಮಯ, ಮೊಬೈಲು ಬಿದ್ದು ಆಗುವ ನಷ್ಟ ಅಥವಾ ಬೇರಾವುದೋ ವಿವರಿಸಲಾಗದ ಅನಾಹುತವೂ ಸಂಭವಿಸಬಹುದು. ಕೆಲವೊಮ್ಮೆ ನಿಮ್ಮ ಮಾರ್ಗ ನೇರವಾಗಿ ಮುಂದಿನ ಮುಖ್ಯ ರಸ್ತೆಗೆ ತೆರೆದುಕೊಂಡಿದ್ದು ಸಂದೇಶ ಓದುವ ಭರದಲ್ಲಿ ನೇರವಾಗಿ ರಸ್ತೆಗೆ ಕಾಲಿಟ್ಟ ತಕ್ಷಣ ಅತ್ತ ಬದಿಯಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆದು ಪ್ರಾಣಾಪಾಯವೂ ಎದುರಾಗಬಹುದು. ಇವೆಲ್ಲಾ ಏಕಾಯಿತು ಎಂದರೆ ಸಂದೇಶ ಬಂದ ಸಮಯದವರೆಗೂ ನಿಮ್ಮ ಮೆದುಳು ನಿಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ಸಂದೇಶ ಬಂದ ತಕ್ಷಣ ನಿಮ್ಮ ಗಮನ ಮಾಹಿತಿಯತ್ತ ಕೇಂದ್ರೀಕೃತಗೊಂಡು ನಡಿಗೆಯ ಕೆಲಸವನ್ನು ಮೆದುಳುಬಳ್ಳಿ ವಹಿಸಿಕೊಂಡಿತು. ಹಾಗಾಗಿ ನಡಿಗೆ ಮುಂದುವರೆಯಿತು. ಆದರೆ ಎದುರಿಗೆ ಬರುವ ಇತರ ಅಪಾಯಗಳನ್ನು ಗ್ರಹಿಸಿ ಆ ಪ್ರಕಾರ ಸೂಚನೆಗಳನ್ನು ನೀಡಲು ನಿಮ್ಮ ಮೆದುಳುಬಳ್ಳಿ ಸಮರ್ಥವಾಗಿಲ್ಲದಿರುವ ಕಾರಣ ಅನಾಹುತ ಸಂಭವಿಸಿದೆ. ಆದ್ದರಿಂದ ನಡೆಯುವ ವೇಳೆ ನಿಮ್ಮ ಮೆದುಳನ್ನು ಪೂರ್ಣವಾಗಿ ಮುಂದಿನ ಚಟುವಟಿಕೆಗಳ ಮೇಲೆ ಇರಿಸಬೇಕು. ಆ ಸಮಯದಲ್ಲಿ ಸಂದೇಶ ಬಂದರೆ ಪೂರ್ಣವಾಗಿ ನಡಿಗೆಯನ್ನು ನಿಲ್ಲಿಸಿ, ಪಕ್ಕದಲ್ಲಿ ನಿಂತು ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಮೊಬೈಲು ಮತ್ತೆ ಜೇಬಿನಲ್ಲಿರಿಸಿಯೇ ಮುಂದುವರೆಯಬೇಕು.

ಕುತ್ತಿಗೆಯ ನೆಟಿಕೆ ತೆಗೆಯುವುದು

ಕುತ್ತಿಗೆಯ ನೆಟಿಕೆ ತೆಗೆಯುವುದು

ಕುತ್ತಿಗೆಯ ನೆಟಿಕೆ ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಕೆಲವು ಮಸಾಜ್ ಮಾಡುವವರೂ ನೆಟಿಕೆ ತೆಗೆಯುತ್ತಾರೆ. ಆದರೆ ಈ ಅಭ್ಯಾಸ ಮುಂದೊಂದು ದಿನ ಕುತ್ತಿಗೆಯ ನೋವು ಹಾಗೂ ಹೃದಯಾಘಾತದಿಂದ ಸಾವಿಗೂ ಕಾರಣವಾಗಬಹುದು.

 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು

ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸದಾ ಜಗಳವಾಡುತ್ತಿರುವ ಪತಿ ಪತ್ನಿಯರಿಗೆ ಹೃದಯ ಸ್ತಂಭನ ಹಾಗೂ ಇತರ ಹೃದಯ ಸಂಬಂಧಿತ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಒಂದು ವೇಳೆ ನಿಮ್ಮ ವಿವಾಹ ಜೀವನದಲ್ಲಿ ಸಂತೋಷ ಕಂಡುಕೊಳ್ಳಲಾಗದಿದ್ದರೆ ಮೊದಲಿಗೆ ಇದಕ್ಕೆ ಕಾರಣವೇನೆಂದು ಅರಿತು ಇದನ್ನು ಸರಿಪಡಿಸಿಕೊಂಡು ಇಬ್ಬರೂ ಪರಸ್ಪರ ಬದಲಾವಣೆಗಳನ್ನು ಹೊಂದುವ ಮೂಲಕ ಮತ್ತೆ ಸಂಸಾರದ ಬಂಡಿಯನ್ನು ಸರಿದೂಗಿಸಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸಂಬಂಧದಿಂದ ಹೊರಬೀಳುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಒಂದು ವೇಳೆ ಮಕ್ಕಳಾಗಿದ್ದರೆ ಹಿರಿಯರ/ನ್ಯಾಯಾಲಯದ ಸಲಹೆಯಂತೆ ಮಕ್ಕಳ ಸುಪರ್ದಿಯನ್ನು ಪಡೆದುಕೊಳ್ಳಬೇಕು.

ಬೆಳಗ್ಗಿನ ಉಪಾಹಾರ ಮಾಡದೇ ಇರುವುದು

ಬೆಳಗ್ಗಿನ ಉಪಾಹಾರ ಮಾಡದೇ ಇರುವುದು

ನಂಬಲೇಬೇಕಾದ ಸತ್ಯ ಎಂದರೆ ಬೆಳಗ್ಗಿನ ಉಪಾಹಾರ ಮಾಡದೇ ಇರುವುದು ಅಥವಾ ಉಪಾಹಾರ ಸೇವನೆಯನ್ನು ತಡವಾಗಿಸುವುದು ಎರಡೂ ಆರೋಗ್ಯದ ದೃಷ್ಟಿಯಿಂದ ನೀವು ಮಾಡುತ್ತಿರುವ ಅತಿ ಕೆಟ್ಟ ಅಭ್ಯಾಸವಾಗಿದೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪಾಠಕ್ಕೆ ಇನ್ನೂ ಐದೇ ನಿಮಿಷ ಇರುವಾಗ ಎದ್ದು ತಡಬಡಿಸಿ ಉಪಾಹಾರ ಸೇವಿಸದೇ ಓಡಿ ಹೋಗುತ್ತಾರೆ. ವಾಸ್ತವವಾಗಿ ಇಂಗ್ಲಿಷ್ಟಿನ ಬ್ರೇಕ್ ಫಾಸ್ಟ್ ಎಂಬ ಪದವೇ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ಪಡೆದಿದ್ದ ಉಪವಾಸ (ಫಾಸ್ಟ್) ಅನ್ನು ಕೊನೆಗೊಳಿಸುವುದು (ಬ್ರೇಕ್) ಆಗಿದೆ. ರಾತ್ರಿಯ ಅನೈಚ್ಛಿಕ ಕ್ರಿಯೆಗಳಿಂದ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಗಳು ಉತ್ಪತ್ತಿಯಾಗಿರುತ್ತವೆ. ಇದು ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವೂ ಆಗಿದೆ. ಆದ್ದರಿಂದ ಬೆಳಗ್ಗಿನ ಉಪಾಹಾರದ ಮೂಲಕ ಈ ಆಮ್ಲಗಳನ್ನು ಬಳಸಿಕೊಂಡು ಇದರ ಪ್ರಕೋಪವನ್ನು ತಣ್ಣಗಾಗಿಸಬಹುದು. ಇದೇ ಕಾರಣಕ್ಕೆ ಉಪಾಹಾರ ಅಲ್ಪ ಪ್ರಮಾಣದಲ್ಲಿರಬೇಕು. ಸಮಯವಿಲ್ಲದಿದ್ದರೆ ಕೇವಲ ಒಂದು ಸೇಬು, ಒಂದು ಬಾಳೆಹಣ್ಣು ಅಥವಾ ಒಂದು ಮುಷ್ಟಿಯಷ್ಟು ಒಣಫಲ ಅಥವಾ ಸಿದ್ದ ರೂಪದ ಗ್ರನೋಲಾ ಬಾರ್ ಮೊದಲಾದ ಆಹಾರಗಳನ್ನು ಸೇವಿಸಿದರೂ ಸರಿ, ಯಾವುದಕ್ಕೂ ಹೊಟ್ಟೆಯನ್ನು ಖಾಲಿ ಬಿಡಬಾರದು.

ಉಗುರು ಕಚ್ಚುವುದು

ಉಗುರು ಕಚ್ಚುವುದು

ನಿಮ್ಮ ದೇಹಕ್ಕೆ ಮಾಡಬಹುದಾದ ಅಪಾಯಕರ ಕ್ರಿಯೆ ಎಂದರೆ ಉಗುರು ಕಚ್ಚುವುದು. ಇಡಿಯ ದಿನ ಗಾಳಿಯಲ್ಲಿಯೇ ಇರುವ ಉಗುರುಗಳಲ್ಲಿ ಧೂಳು, ಕ್ರಿಮಿಗಳು ಹಾಗೂ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಈ ಧೂಳಿನ ವಿಶ್ಲೇಷಣೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಇದರಲ್ಲಿ ಸಾಲ್ಮೋನೆಲ್ಲಾ, ಈ ಕೊಲೈ ಎಂಬ ಭಯಾನಕ ಬ್ಯಾಕ್ಟೀರಿಯಾಗಳಿರುವುದನ್ನು ಕಂಡುಬಂದಿದೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ವಿಷವಾಗಿಸುವ ಹಾಗೂ ಅತಿಸಾರ, ಭೇದಿ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿವೆ. ಹೀಗಿದ್ದಾಗ ಈ ಬ್ಯಾಕ್ಟೀರಿಯಾಗಳನ್ನು ನಾವೇ ಕೈಯಾರೆ ಬಾಯಿಗೆ ಕೊಂಡೊಯ್ಯುವುದು ಎಷ್ಟು ಮಟ್ಟಿಗೆ ಸರಿ?

English summary

Read This! 10 Bad Habits That Can Kill You

You probably do not know this, but there are certain common practices in our society that are actually harmful for your health.And while our family or friends do not teach us these things because they intentionally want to harm us, they often do end up passing on the knowledge of certain bad habits because they themselves do not realize that these practices can actually kill you! So here are the top 10 bad habits that can kill you.