Latest Updates
-
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು!
ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೆ-ಪವರ್ ಫುಲ್ ಮನೆಮದ್ದುಗಳು
ಚಳಿಗಾಲದ ಸಮಯದಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾಗುತ್ತದೆ. ಅದರಲ್ಲಿ ಶೀತ, ಗಂಟಲು ನೋವು, ಕೆಮ್ಮು ಮತ್ತು ಒಮ್ಮೊಮ್ಮೆ ಜ್ವರವು ಸಹ ನಮ್ಮನ್ನು ಭಾದಿಸಬಹುದು. ಅದರಲ್ಲಿ ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಏನಾದರು ಆಹಾರ ಸೇವಿಸಲು ಸಹ ಕಷ್ಟವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ ಆ ಮಟ್ಟಿಗೆ ನಮ್ಮ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ.
ಇದಕ್ಕೆ ಪ್ರಮುಖ ಕಾರಣ ಫ್ಯಾರಿಂಕ್ಸ್ ಎಂಬ ಉರಿಬಾವು. ಇದು ನಮ್ಮ ಬಾಯಿಯಿಂದ ಹಿಡಿದು ಅನ್ನನಾಳದವರೆಗೆ ಹಬ್ಬಿ, ನಮ್ಮ ಗಂಟಲಿನಲ್ಲಿ ನೋವನ್ನು ತರುತ್ತದೆ. ಇದಕ್ಕೆ ಮುಖ್ಯ ಕಾರಣ ವೈರಸ್, ಬ್ಯಾಕ್ಟೀರಿಯಾ ಮತ್ತು ಫಂಗಸ್‌ನಿಂದ ಬರುವ ಇನ್‌ಫೆಕ್ಷನ್‌ಗಳು; ಇವುಗಳಿಗೆ ಮುಖ್ಯ ಕಾರಣ ಪರಿಸರ ಮಾಲಿನ್ಯ, ಧೂಮಪಾನ ಮತ್ತು ಆಸಿಡ್ ರಿಫ್ಲಕ್ಸ್ ಅಥವಾ ಒಣ ಹವೆಯಾಗಿರುತ್ತದೆ. ವಿಪರೀತವಾಗಿ ಕಿರುಚುವುದು ಅಥವಾ ಕೆಲವೊಂದು ಅಲರ್ಜಿಯನ್ನುಂಟು ಮಾಡುವ ಅಂಶಗಳು ಸಹ ಗಂಟಲು ನೋವಿಗೆ ಕಾರಣವಾಗುತ್ತವೆ. ಕೆಲವೊಮ್ಮೆ
ಗಂಟಲು ನೋವಿನ ಜೊತೆಗೆ ತಲೆ ನೋವು, ಹೊಟ್ಟೆನೋವು, ಸಾಮಾನ್ಯ ಶೀತ ಮತ್ತು ಗಂಟಲು ಭಾಗದಲ್ಲಿ ಊತಗಳು ಸಹ ಕಾಣಿಸಿಕೊಳ್ಳುತ್ತವೆ. ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿರುವುದರಿಂದಾಗಿ ಅದರ ಕುರಿತು ಭಯಪಡುವ ಅಗತ್ಯವಿರುವುದಿಲ್ಲ. ಆದರೂ ಇದರ ನೋವನ್ನು ಮತ್ತು ಇದು ಉಂಟು ಮಾಡುವ ಅಸೌಕರ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯರ ಬಳಿ ಹೋಗುವ ಬದಲಿಗೆ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ನಿವಾರಿಸಿಕೊಳ್ಳಿ. ಬನ್ನಿ ಇದನ್ನು ಪರಿಹರಿಸಿಕೊಳ್ಳಲು ಇರುವ ಕೆಲವೊಂದು ಸ್ವಾಭಾವಿಕ ಮನೆ ಮದ್ದುಗಳ ಕುರಿತು ನಿಮಗೆ ಇಂದು ಮಾಹಿತಿಯನ್ನು ನೀಡುತ್ತೇವೆ. ಅವುಗಳು ಯಾವುವು ಮತ್ತು ಅವುಗಳನ್ನು ಬಳಸುವ ಬಗೆ ಹೇಗೆ ಎಂದು ತಿಳಿದುಕೊಂಡು ಬರೋಣ...

ಉಗುರುಬೆಚ್ಚಗಿನ ಉಪ್ಪುನೀರಿನಿಂದ ಗಳಗಳಿಸಿ
ಗಂಟಲ ಒಳಭಾಗದಲ್ಲಿ ಕಫ ಗಟ್ಟಿಯಾಗಿದ್ದು ಉರಿಯೂತವೂ ಕಾಣಿಸಿಕೊಂಡರೆ ಈ ಭಾಗ ಊದಿಕೊಳ್ಳುತ್ತದೆ. ಇದಕ್ಕೆ ಸುಲಭವಾದ ಮತ್ತು ತಕ್ಕ ಪರಿಹಾರವೆಂದರೆ ಉಪ್ಪುನೀರಿನಿಂದ ಗಳಗಳ ಮಾಡುವುದು. ಇದರಿಂದ ಕಫ ಕರಗಿ ಹೋಗುವ ಮೂಲಕ ಉರಿಯೂತ ನಿವಾರಣೆಯಾಗುತ್ತದೆ. ಇದಕ್ಕಾಗಿ ಒಂದು ಕಪ್ ಉಗುರುಬೆಚ್ಚನೆಯ ನೀರು ಹಾಗೂ ಒಂದು ಚಿಕ್ಕ ಚಮಚ ಉಪ್ಪು ಸಾಕು. ಈ ನೀರಿನಿಂದ ದಿನದಲ್ಲಿ ಹಲವಾರು ಬಾರಿ ಗಳಗಳ ಮಾಡುತ್ತಾ ಇದ್ದರೆ ಸಾಕು.

ಹಬೆಯನ್ನು ಉಸಿರಾಡಿ
ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಇನ್ನೂ ಹಬೆಯಾಡುತ್ತಿರುವಂತೆಯೇ ಇದರ ಮೇಲೆ ಮುಖವಿರಿಸಿ ದಪ್ಪ ಟವೆಲ್ಲಿನಿಂದ ಪಾತ್ರೆಯನ್ನು ಆವರಿಸಿ ಹಬೆಯನ್ನು ಮೂಗಿನಿಂದ ಉಸಿರಾಡಿ. ಇನ್ನೂ ಉತ್ತಮ ಪರಿಣಾಮ ಪಡೆಯಲು ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಈ ಹಬೆಯನ್ನು ಕೆಲವಾರು ನಿಮಿಷಗಳವರೆಗೆ ಉಸಿರಾಡಿ.

ಹಸಿಶುಂಠಿ ಬಳಸಿ
ಬಿಸಿನೀರಿಗೆ ಕೊಂಚ ಹಸಿಶುಂಠಿಯನ್ನು ಹಾಕಿ ಕುದಿಸಿ ಸೋಸಿ ತಯಾರಿಸಿದ ಟೀ ದಿನಕ್ಕೆರಡು ಕಪ್ ನಂತೆ ಕುಡಿಯಿರಿ. ಗಂಟಲ ಬೇನೆಗೆ ತಕ್ಷಣದ ಪರಿಹಾರ ನೀಡಲು ಈ ವಿಧಾನ ಉತ್ತಮವಾಗಿದೆ. ಒಂದು ವೇಳೆ ಕಫ ಗಟ್ಟಿಯಾಗಿದ್ದಂತೆ ಅನ್ನಿಸಿದರೆ ಈ ಟೀ ಯಲ್ಲಿ ಒಂದು ಚಮಚ ಜೇನು ಬೆರೆಸಿ ಕುಡಿಯಿರಿ.

ಲವಂಗ
ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿ.

ಮೆಂತೆಯ ನೀರು
ಒಂದು ಲೀಟರ್ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಯಾವಾಗ ನೀರಿನಲ್ಲಿ ಮೆಂತೆ ಬಣ್ಣ ಬಿಡತೊಡಗುತ್ತದೆಯೋ ಆಗ ತಕ್ಷಣ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಉಪ್ಪು ನೀರು
ಗಂಟಲು ನೋವಿಗೆ ರಾಮಬಾಣ ಎನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಹೌದು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಹೇಳಿ ಕೇಳಿ ಉಪ್ಪು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಉತ್ಪನ್ನವಾಗಿದ್ದು, ಅದು ನಿಮ್ಮ ಗಂಟಲಿನಲ್ಲಿರುವ ಸಿಂಬಳದ ಪೊರೆಯು ನಿವಾರಣೆಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಗಂಟಲಿನಲ್ಲಿರುವ ಕಫವು ಸಹ ನಿವಾರಣೆಯಾಗುವಂತೆ ಮಾಡುತ್ತದೆ ಮತ್ತು ಉರಿಬಾವು ನಿಮ್ಮನ್ನು ಕಾಡದಂತೆ ತಡೆಯುತ್ತದೆ. ಇಷ್ಟೇ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಒಂದು ಆಂಟಿ ಬ್ಯಾಕ್ಟೀರಿಯಾ ಅಂಶಗಳು ಇರುವ ಪದಾರ್ಥವಾಗಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳು ಮತ್ತು ಔಷಧೀಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಆರಾಮವನ್ನು ನೀಡುತ್ತವೆ. ಅಲ್ಲದೆ ಇದು ಈ ನೋವನ್ನು ಬೇಗ ನಿವಾರಿಸುವ ಮನೆ ಮದ್ದು ಸಹ ಆಗಿದೆ. ಕಚ್ಛಾ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಅಲ್ಲಿಸಿನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದು ಗಂಟಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡಿ, ಗಂಟಲು ನೋವು ಬರದಂತೆ ತಡೆಯುತ್ತದೆ.ಬದಲಿಯಾಗಿ, ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಒಂದು ಲೋಟ ನೀರಿಗೆ ನಾಲ್ಕನೇ ಒಂದು ಭಾಗ ಬೆಳ್ಳುಳ್ಳಿ ರಸವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಲು ಬಳಸಿ. ಅಲ್ಲದೆ ಇದರ ಜೊತೆಗೆ ಆಹಾರದಲ್ಲಿ ದೊರೆಯುವ ಬೆಳ್ಳುಳ್ಳಿಯನ್ನು ಸಹ ಸೇವಿಸಿ.

ಚಿಕನ್ ಸೂಪ್
ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ಚಿಕನ್ ಸೂಪ್ ಸಹಾ ಪರಿಣಾಮಕಾರಿಯಾಗಿದೆ. ಇದರ ಮಧ್ಯಮ ಪ್ರಾಬಲ್ಯದ ಉರಿಯೂತ ನಿವಾರಕ ಗುಣ ಗಂಟಲ ಬೇನೆಗೆ ಕಾರಣವಾದ ಕಫವನ್ನು ನಿಧಾನವಾಗಿ ನಿವಾರಿಸಿ ಇದರ ಸಂಪರ್ಕಕ್ಕೆ ವೈರಸ್ಸುಗಳನ್ನು ನಿಯಂತ್ರಿಸುವ ಮೂಲಕ ತೊಂದರೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಗಂಟಲ ಬೇನೆ ಎದುರಾದ ತಕ್ಷಣ ಒಂದು ದೊಡ್ಡ ಬೋಗುಣಿಯಷ್ಟು ಬಿಸಿಬಿಸಿಯಾದ ಚಿಕನ್ ಸೂಪ್ ಹೀರುವುದರಿಂದ ಉತ್ತಮ ಪರಿಹಾರ ಪಡೆಯಬಹುದು.

ಜೇನು ಮತ್ತು ಲಿಂಬೆ
ಸಮ ಪ್ರಮಾಣದಲ್ಲಿ ಜೇನು ಮತ್ತು ಲಿಂಬೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದಲೂ ಗಂಟಲ ಬೇನೆ ಶೀಘ್ರವಾಗಿ ಗುಣವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿಮಾಡಿ ತಲಾ ಒಂದು ಚಿಕ್ಕ ಚಮಚ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಬಿಸಿಬಿಸಿಯಾಗಿ ಸೇವಿಸುವ ಮೂಲಕ ಗಂಟಲ ತೊಂದರೆ ಹಾಗೂ ಇದರಿಂದಾಗಿ ಎದುರಾಗಿದ್ದ ನೋವು ಕಡಿಮೆಯಾಗುತ್ತದೆ.

ಗಂಟಲ ಕಿರಿಕಿರಿ ಇದ್ದಾಗ ಇವುಗಳಿಂದ ದೂರವಿರಿ
* ಹಾಲು ಬೆರೆಸಿದ ಅಥವಾ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸದಿರಿ. ಏಕೆಂದರೆ ಹಾಲು ಕುಡಿದಾಗ ಹಾಲಿನ ಕಣಗಳು ಗಂಟಲಿಗೆ ಅಂಟಿಕೊಂಡು ಕಫವನ್ನು ಇನ್ನಷ್ಟು ಹೆಚ್ಚಿಸುತ್ತದೆ.
* ತಣ್ಣೀರು ಕುಡಿಯದಿರಿ. ಗಂಟಲು ತಣ್ಣಗಾದಷ್ಟೂ ಕಫ ಇನ್ನಷ್ಟು ಗಟ್ಟಿಯಾಗುತ್ತದೆ. ಸಾಧ್ಯವಾದಷ್ಟು ಬಿಸಿನೀರನ್ನೇ ಕುಡಿಯಿರಿ.
* ಧೂಮಪಾನ, ಪರ್ಯಾಯ ಧೂಮಪಾನ, ಏಸಿಯ ಹವೆ ಮೊದಲಾದವು ಕಫವನ್ನು ಇನ್ನಷ್ಟು ಹೆಚ್ಚಿಸುತ್ತವೆ.
* ಎಣ್ಣೆಯಿಂದ ಕರಿದ, ಹುರಿದ ಪದಾರ್ಥಗಳು ಕಫವನ್ನು ಹೆಚ್ಚಿಸುತ್ತವೆ
* ದಿನಕ್ಕೆ ಎರಡು ಬಾರಿಯಾದರೂ ನಾಲಿಗೆಯನ್ನು ಸ್ವಚ್ಛಗೊಳಿಸುವ ಉಪಕರಣದಿಂದ (ಟಂಗ್ ಕ್ಲೀನರ್) ಬಳಸಿ ಸಾಧ್ಯವಾದಷ್ಟು ತಳಭಾಗವನ್ನು ಕೆರೆದು ಸ್ವಚ್ಛಗೊಳಿಸುತ್ತಿರಿ.
* ಬಾಯಿಯನ್ನು ಒಣಗಲು ಬಿಡಬೇಡಿ. ಒಣಗಿದ್ದಷ್ಟೂ ಕಫ ಹೆಚ್ಚಾಗುತ್ತದೆ. ಆದ್ದರಿಂದ ಗಂಟೆಗೊಂದಾದರೂ ಲೋಟ ಬಿಸಿನೀರನ್ನು ಹೀರುತ್ತಿರಿ.
* ಮೂಗು ಸೋರುತ್ತಿದ್ದರೆ ಸರ್ವಥಾ ಒಳಗೆಳೆದುಕೊಳ್ಳಬಾರದು, ಹೊರತೆಗೆದು ನಿವಾರಿಸಬೇಕು.



Click it and Unblock the Notifications











