ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಇಡಬೇಡಿ...

By: Arshad
Subscribe to Boldsky

ತಂಗಳು ಪೆಟ್ಟಿಗೆ ಎಂಬ ಅನ್ವರ್ಥನಾಮವನ್ನು ಹೊಂದಿರುವ ಶೀತಲಪೆಟ್ಟಿಗೆ ಅಥವಾ ಫ್ರಿಜ್ ನಮ್ಮ ಆಹಾರವನ್ನು ಹೆಚ್ಚು ಕಾಲ ಕೆಡದಂತಿರಿಸಲು ಪ್ರತಿ ಮನೆಯಲ್ಲಿಯೂ ಇರುವ ಗೃಹೋಪಯೋಗಿ ಉಪಕರಣವಾಗಿದೆ. ಆದರೆ ನಾವು ಸೇವಿಸುವ ಎಲ್ಲಾ ಆಹಾರಗಳನ್ನು ಇದರಲ್ಲಿ ಕೆಡದಂತೆ ಶೇಖರಿಸಿಡಬಹುದೇ? ಹೆಚ್ಚಿನವರು ಇದಕ್ಕೆ ನೀಡುವ ಉತ್ತರ ಹೌದು. ಆದರೆ ವಾಸ್ತವವಾಗಿ ಎಲ್ಲಾ ಅಹಾರಗಳನ್ನು ಫ್ರಿಜ್ಜಿನಲ್ಲಿರಿಸಬಾರದು. ಬಹುತೇಕ ಆಹಾರಗಳನ್ನು ಈ ತಂಗಳು ಪೆಟ್ಟಿಗೆ ಕೆಲವಾರು ದಿನಗಳವರೆಗೆ ಕೆಡದಂತೆ ಸಂರಕ್ಷಿಸುತ್ತದಾದರೂ ಈ ಆಹಾರಗಳು ತಾಜಾ ತಯಾರಿಸಿದ ಆಹಾರಗಳಷ್ಟು ಆರೋಗ್ಯಕರವಲ್ಲ! ಏಕೆಂದರೆ ತಣಿಸಿದ ಆಹಾರವನ್ನು ಮತ್ತೆ ಬಿಸಿ ಮಾಡಿದಾಗ ಇದರ ಆಂಟಿ ಆಕ್ಸಿಡೆಂಟ್ ಗುಣ ಕಡಿಮೆಯಾಗುತ್ತಾ ಹೋಗುತ್ತದೆ.

ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಇಡಬೇಡಿ!

ಕೆಲವು ಆಹಾರಗಳನ್ನು ಫ್ರಿಜ್ಜಿನಲ್ಲಿಟ್ಟು ತಣ್ಣಗಾದ ಬಳಿಕ ಇದರ ಬಣ್ಣ ಬದಲಾಗುತ್ತದೆ ಹಾಗೂ ಇದು ಆರೋಗ್ಯವನ್ನು ಕೆಡಿಸಬಹುದು. ಇದರಿಂದ ಆ ಆಹಾರಗಳ ಪೌಷ್ಟಿಕಾಂಶಗಳು ನಷ್ಟಗೊಳ್ಳಬಹುದು ಅಥವಾ ಕೆಲವೊಮ್ಮೆ ಕೊಳೆಯುವ ಗತಿಯನ್ನು ಇನ್ನಷ್ಟು ತೀವ್ರವಾಗಿಸಬಹುದು. ಉದಾಹರಣೆಗೆ ಬಾಳೆಹಣ್ಣು. ಹೊರಗಿಟ್ಟ ಬಾಳೆಹಣ್ಣು ಮೂರು ದಿನಗಳವರೆಗಾದರೂ ತಿನ್ನಲು ಯೋಗ್ಯವಾಗಿರುತ್ತದೆ. ಆದರೆ ಫ್ರಿಜ್ಜಿನಲ್ಲಿಟ್ಟರೆ ಒಂದೇ ದಿನದಲ್ಲಿ ಒಳಗಿನಿಂದ ಕೊಳೆಯಲು ಆರಂಭಿಸುತ್ತದೆ! ಇದರಂತೆಯೇ ಫ್ರಿಜ್ಜಿನಲ್ಲಿ ಸರ್ವಥಾ ಇರಿಸಬಾರದ ಇನ್ನೂ ಕೆಲವು ಆಹಾರಗಳಿವೆ. ಇದುವರೆಗೆ ನಿಮಗರಿಯದೇ ಫ್ರಿಜ್ಜಿನಲ್ಲಿಟ್ಟು ಸೇವಿಸುತ್ತಿದ್ದ ನೀವು ಕೆಳಗೆ ವಿವರಿಸಿರುವ ಹನ್ನೊಂದು ಆಹಾರಗಳನ್ನು ಇಂದಿನಿಂದಲೇ ಫಿಜ್ಜಿನಲ್ಲಿರಿಸದೇ ಹೊರಗಿರಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ!...

ಬ್ರೆಡ್

ಬ್ರೆಡ್

ಸಾಮಾನ್ಯವಾಗಿ ಬ್ರೆಡ್ ಫ್ರಿಜ್ಜಿನಲ್ಲಿಟ್ಟರೆ ವಾರಕ್ಕೂ ಹೆಚ್ಚು ದಿನ ಹಾಗೇ ಇರುತ್ತದೆ. ಆದರೆ ಫ್ರಿಜ್ಜಿನಲ್ಲಿಟ್ಟ ಬ್ರೆಡ್ ಇನ್ನಷ್ಟು ಶೀಘ್ರವಾಗಿ ಒಣಗುತ್ತದೆ ಹಾಗೂ ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಆದ್ದರಿಂದ ಬ್ರೆಡ್ ಶೇಖರಿಸಿಡಲು ಲಭಿಸುವ ಬ್ರೆಡ್ ಬಾಕ್ಸ್ ಎಂಬ ಡಬ್ಬಿಯಲ್ಲಿರಿಸಿ ಸಾಮಾನ್ಯ ತಾಪಮಾನದಲ್ಲಿಟ್ಟರೆ ನಾಲ್ಕು ದಿನಗಳಾದರೂ ತಾಜಾತನ ಉಳಿಸಿಕೊಳ್ಳುತ್ತದೆ. ಜಾಣತನದ ಕ್ರಮವೆಂದರೆ ಅಗತ್ಯವಿದ್ದಷ್ಟು ಪ್ರಮಾಣವನ್ನು ಮಾತ್ರವೇ ಕೊಂಡು ತಂದು ಆದಷ್ಟು ಶೀಘ್ರವಾಗಿ ಖಾಲಿಮಾಡುವುದು. ತೇವಾಂಶ ಹೆಚ್ಚಿದ್ದರೆ ಬೇಗನೇ ಇದರಲ್ಲಿ ಶಿಲೀಂಧ್ರ ಅಥವಾ ಬೂಸು ಬರುತ್ತದೆ.

ತುಳಸಿ

ತುಳಸಿ

ತುಳಸಿ ಎಲೆಗಳನ್ನು ನಾಲ್ಕು ಡಿಗ್ರಿ ಸೆಲ್ಸಿಯಸ್ ಗೂ ಕಡಿಮೆ ತಾಪಮಾನದಲ್ಲಿರಿಸಿದರೆ ಕೆಲವೇ ನಿಮಿಷಗಳಲ್ಲಿ ಇದು ಕಪ್ಪಾಗಿಬಿಡುತ್ತದೆ. ಕಪ್ಪಗಾದ ಎಲೆಗಳನ್ನು ಅಡುಗೆಯಲ್ಲಿ ಸೇರಿಸಿದರೆ ಇದು ಅಡುಗೆಯ ರುಚಿಯನ್ನು ಕೆಡಿಸುವುದು ಮಾತ್ರವಲ್ಲ, ಆಹಾರವನ್ನು ವಿಷವಾಗಿಸುತ್ತದೆ. ಆದ್ದರಿಂದ ತಾಜಾ ತುಳಸಿ ಎಲೆಗಳನ್ನು ಗಾಳಿಯನ್ನು ನಿವಾರಿಸಿ ಜ಼ಿಪ್ ಹಾಕಿ ಮುಚ್ಚಬಹುದಾದ ಸುಲಭ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಹಾಕಿಟ್ಟರೆ ಹೆಚ್ಚು ದಿನಗಳ ಕಾಲ ಹಸಿರಾಗಿಯೇ ಉಳಿಯುತ್ತದೆ.

ತಾಜಾ ಹಣ್ಣುಗಳು

ತಾಜಾ ಹಣ್ಣುಗಳು

ಕೆಲವು ತಾಜಾ ಹಣ್ಣುಗಳಾದ ಬೆಣ್ಣೆಹಣ್ಣು, ಸೇಬು, ಬಾಳೆ, ಲಿಂಬೆ ಜಾತಿಯ ಹಣ್ಣುಗಳು, ಬೆರ್ರಿಗಳು, ಪೀಚ್ ಹಾಗೂ ಆಪ್ರಿಕಾಟ್ ಮೊದಲಾದ ಹಣ್ಣುಗಳನ್ನೆಂದೂ ಫ್ರಿಜ್ಜಿನಲ್ಲಿರಿಸಬಾರದು. ಫ್ರಿಜ್ಜಿನಲ್ಲಿಟ್ಟರೆ ಇವು ತಮ್ಮ ಸ್ವಾದ ಹಾಗೂ ಹೊರರಚನೆಯನ್ನು ಕಳೆದುಕೊಳ್ಳುತ್ತವೆ. ಇವನ್ನು ಫ್ರಿಜ್ಜಿನಲ್ಲಿರಿಸಲು ಸಾಧ್ಯವಾಗುವಂತೆ ಸೇಬು, ಆಪ್ರಿಕಾಟ್ ಮೊದಲಾದ ಸಿಪ್ಪೆ ಸಹಿತ ತಿನ್ನಬಹುದಾದ ಹಣ್ಣುಗಳ ಮೇಲೆ ತೆಳುವಾದ ಮೇಣವನ್ನು ಲೇಪಿಸಿ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಈ ಹಣ್ಣುಗಳನ್ನು ತಿನ್ನುವ ಮೊದಲು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ತೊಳೆದು ತಿನ್ನುವುದು ಆರೋಗ್ಯಕರ. ಒಂದು ವೇಳೆ ಹಣ್ಣನ್ನು ಕೊಂಚ ಗಟ್ಟಿಯಾಗಿದ್ದಾಗಲೇ ತಿನ್ನಬಯಸಿದರೆ ತಿನ್ನುವ ಅರ್ಧ ಘಂಟೆಗೂ ಮುನ್ನ ಫ್ರಿಜ್ಜಿನಲ್ಲಿರಿಸಿದರೆ ಸಾಕು.

ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಹೆಚ್ಚು ಕಾಲ ಸಂರಕ್ಷಿಸಿಡಲು ಅತ್ಯುತ್ತಮ ಸಾಧನವೆಂದರೆ ಹಳೆಯ ಕಾಗದದ ಚೀಲ. ಇದನ್ನು ತಣ್ಣನೆಯ ಮತ್ತು ಬೆಳಕಿಲ್ಲದ ಸ್ಥಳದಲ್ಲಿ ಇರಿಸಿ. ಇದರ ಬಳಿ ಆಲುಗಡ್ಡೆಯನ್ನಿರಿಸಬೇಡಿ. ಆಲುಗಡ್ಡೆ ಗಾಳಿಯಲ್ಲಿ ತೇವಾಂಶವನ್ನು ಪರಸಿಸುವ ಕಾರಣ ಈರುಳ್ಳಿ ಶೀಘ್ರವಾಗಿ ಕೊಳೆಯುತ್ತದೆ. ಈರುಳ್ಳಿಯಂದು ಎಂದಿಗೂ ಫ್ರಿಜ್ಜಿನಲ್ಲಿರಿಸಬಾರದು. ಇದು ಹೆಚ್ಚು ತೇವಾಂಶವನ್ನು ಪಡೆದು ಮೆತ್ತಗಾಗುತ್ತದೆ ಹಾಗೂ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಇದನ್ನು ಕತ್ತರಿಸುವುದೂ ಸುಲಭವಲ್ಲ.

ಆಲೂಗಡ್ಡೆ

ಆಲೂಗಡ್ಡೆ

ತಣ್ಣನೆಯ ತಾಪಮಾನದಲ್ಲಿಟ್ಟ ಆಲೂಗಡ್ಡೆಯಲ್ಲಿರುವ ಪಿಷ್ಟ ಶೀಘ್ರವಾಗಿ ಸಕ್ಕರೆಗೆ ಬದಲಾಗುತ್ತದೆ, ಇದು ಆರೋಗ್ಯಕ್ಕೆ ಮಾರಕ ವಾಗಬಹುದು. ಈ ಆಲೂಗಡ್ಡೆಗಳ ಖಾದ್ಯವನ್ನು ಸೇವಿಸುವ ಮೂಲಕ ಆಹಾರ ಸಿಹಿಯಾಗಿ ಖಾದ್ಯದ ರುಚಿ ಬದಲಾಗಬಹುದು ಹಾಗೂ ಈ ಆಹಾರ ಸೇವನೆ ಸ್ಥೂಲಕಾಯವನ್ನೂ ಹೆಚ್ಚಿಸಬಹುದು. ಬದಲಿಗೆ ಕಾಗದದ ಪೊಟ್ಟಣದಲ್ಲಿರಿಸಿ ಬೆಳಕಿಲ್ಲದ ಕಡೆ ಸಂಗ್ರಹಿಸುವ ಮೂಲಕ ಹೆಚ್ಚು ಕಾಲ ಶೇಖರಿಸಿಡಬಹುದು.

ಟೊಮಾಟೋ

ಟೊಮಾಟೋ

ಟೊಮಾಟೋ ತಾಜಾ ಇದ್ದಷ್ಟು ಕಾಲವೇ ತನ್ನ ನಿಜಗುಣಗಳನ್ನು ಪಡೆದಿರುತ್ತದೆ. ಫ್ರಿಜ್ಜಿನಲ್ಲಿರಿಸಿದ ಕ್ಷಣದಿಂದ ಇದರ ಪೋಷಕಾಂಶಗಳು ಕಡಿಮೆಯಾಗತೊಡಗುತ್ತವೆ. ಆದ್ದರಿಂದ ಟೊಮಾಟೋಗಳನ್ನು ಕೊಳ್ಳುವಾಗ ಅಂದಿನ ದಿನಕ್ಕಾಗಿ ಮಾತ್ರವೇ ಹಣ್ಣಾದವುಗಳನ್ನು ಆರಿಸಿ ಉಳಿದವನ್ನು ಕಾಯಿಯಾದ್ದಂತೆಯೇ ಕೊಂಡು ತಂದು ಒಂದು ತಟ್ಟೆಯಲ್ಲಿ ಹರಡಿ ಹಾಗೇ ಗಾಳಿಯಲ್ಲಿರಿಸಿ ಹಣ್ಣಾಗಲು ಬಿಡಬೇಕು.

ಅಡುಗೆ ಎಣ್ಣೆಗಳು

ಅಡುಗೆ ಎಣ್ಣೆಗಳು

ಸಾಮಾನ್ಯವಾಗಿ ಎಲ್ಲಾ ಅಡುಗೆ ಎಣ್ಣೆಗಳು ಸಾಮಾನ್ಯ ತಾಪಮಾನದಲ್ಲಿ ಕೆಡದೇ ಇರುತ್ತವೆ. ಒಂದು ವೇಳೆ ಇದರಲ್ಲಿ ಪರ್ಯಾಪ್ತ ಕೊಬ್ಬು (saturated-fat) ಕಡಿಮೆ ಇದ್ದರೆ, ಉದಾಹರಣೆಗೆ ಸೂರ್ಯಕಾಂತಿ ಅಥವಾ ಕುಸುಂಬೆ ಹೂವಿನ ಎಣ್ಣೆ, ಇವುಗಳನ್ನು ಬೆಳಕಿಲ್ಲದ ಕಡೆ ಇರಿಸುವುದು ಉತ್ತಮ. ಆದರೆ ಒಣಫಲಗಳಿಂದ ಹಿಂಡಿ ತೆಗೆದ ಎಣ್ಣೆಗಳನ್ನು, ಉದಾಹರಣೆಗೆ ಬಾದಾಮಿ ಎಣ್ಣೆ, ಫ್ರಿಜ್ಜಿನಲ್ಲಿರಿಸಿ ಶೇಖರಿಸಬೇಕು. ಉಳಿದಂತೆ ಯಾವ ಅಡುಗೆ ಎಣ್ಣೆಯನ್ನೂ ಫ್ರಿಜ್ಜಿನಲ್ಲಿರಿಸಬಾರದು.

ಉಪ್ಪಿನಕಾಯಿ

ಉಪ್ಪಿನಕಾಯಿ

ಉಪ್ಪಿನಕಾಯಿ ವರ್ಷಗಟ್ಟಲೇ ಕೆಡದೇ ಉಳಿಯುವ ಆಹಾರವಾಗಿದ್ದು ಇದರಲ್ಲಿರುವ ಸಂರಕ್ಷಕಗಳು ಫ್ರಿಜ್ಜಿನಲ್ಲಿಟ್ಟರೆ ತಮ್ಮ ಗುಣವನ್ನು ಬದಲಿಸಿಕೊಳ್ಳುತ್ತವೆ. ಸಂರಕ್ಷಿಸಬೇಕಾದ ಇವೇ ಆಹಾರವನ್ನು ಕೆಡಿಸಿ ವಿಷಕಾರಿಯಾಗಿಸುತ್ತವೆ. ಆದ್ದರಿಂದ ಉಪ್ಪಿನಕಾಯಿಯನ್ನು ಗಾಳಿಯಾಡದ ಗಾಜಿನ ಅಥವಾ ಪಿಂಗಾಣಿ ಜಾಡಿಯಲ್ಲಿರಿಸಿ ತಣ್ಣನೆಯ, ಗಾಳಿಯಾಡುವ ಸ್ಥಳದಲ್ಲಿರಿಸಬೇಕು.

ಕರಬೂಜದ ಹಣ್ಣು

ಕರಬೂಜದ ಹಣ್ಣು

ಕರಬೂಜದ ಹಣ್ಣುಗಳನ್ನು ಸಹಾ ಫ್ರಿಜ್ಜಿನಲ್ಲಿರಿಸದೇ ಹೊರಗೇ ಇರಿಸಬೇಕು. ಏಕೆಂದರೆ ಮೃದುವಾಗಿರುವ ಈ ಹಣ್ಣು ಫ್ರಿಜ್ಜಿನಲ್ಲಿಟ್ಟ ತಕ್ಷಣ ನೀರು ಬೆರೆಸಿದ ಹಿಟ್ಟಿನಂತಾಗುತ್ತದೆ ಹಾಗೂ ಚಿಕ್ಕ ಚಿಕ್ಕ ಕಾಳುಗಳಂತೆ ಗಟ್ಟಿಯಾಗುತ್ತದೆ. ರುಚಿಯೂ ಬದಲಾಗುತ್ತದೆ ಹಾಗೂ ಪೋಷಕಾಂಶಗಳೂ ನಷ್ಟಗೊಳ್ಳುತ್ತವೆ. ಆದ್ದರಿಂದ ಈ ಹಣ್ಣನ್ನು ಸಾಮಾನ್ಯ ತಾಪಮಾನದಲ್ಲಿ ಕತ್ತರಿಸದೇ ಕೆಲವು ದಿನಗಳಾದರೂ ಇರಿಸಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ಅರಿವಿಲ್ಲದೇ ಬೆಳ್ಳುಳ್ಳಿಯನ್ನು ಫ್ರಿಜ್ಜಿನಲ್ಲಿರಿಸುತ್ತಿದ್ದರೆ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ. ಫ್ರಿಜ್ಜಿನಲ್ಲಿರಿಸುವ ಮೂಲಕ ಬೆಳ್ಳುಳ್ಳಿಯ ರುಚಿ ಹಾಗೂ ಬಲುಕಾಲ ಕೆಡದಿರುವ ಗುಣವೂ ಬದಲಾಗುತ್ತದೆ. ಫ್ರಿಜ್ಜಿನೊಳಗಿನ ಆರ್ದ್ರತೆ ಇವುಗಳಿಗೆ ಮೊಳಕೆಯೊಡೆಯಲು ಅನುವು ಮಾಡಿಕೊಡುತ್ತದೆ. ಮೊಳಕೆಯೊಡೆದ ಬೆಳ್ಳುಳ್ಳಿ ಆರೋಗ್ಯವನ್ನು ಕೆಡಿಸುತ್ತದೆ. ಹಾಗಾಗಿ ಬೆಳ್ಳುಳ್ಳಿ ಮೊಳಕೆಯೊಡೆದಿದ್ದರೆ ಇವನ್ನು ಸೇವಿಸಬಾರದು.

 ಕಾಫಿ

ಕಾಫಿ

ಕಾಫಿ ತಯಾರಿಸಿದ ಬಳಿಕ ನಂತರ ಸೇವಿಸೋಣವೆಂದು ಫ್ರಿಜ್ಜಿನಲಿರಿಸುವುದೂ ಒಳ್ಳೆಯದಲ್ಲ. ಏಕೆಂದರೆ ಇದು ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ ಹಾಗೂ ಫ್ರಿಜ್ಜಿನೊಳಗೆ ಒಂದು ಬಗೆಯ ವಾಸನೆಯನ್ನೂ ಉಂಟುಮಾಡುತ್ತದೆ. ಈ ಕಾಫಿಯನ್ನು ಮತ್ತೆ ಬಿಸಿ ಮಾಡಿ ಕುಡಿಯುವುದೂ ಆರೋಗ್ಯಕರವಲ್ಲ. ಕಾಫಿಪುಡಿಯನ್ನೂ ಫ್ರಿಜ್ಜಿನಲ್ಲಿರಿಸಬಾರದು. ಬದಲಿಗೆ ತಣ್ಣನೆಯ ಮತ್ತು ಬೆಳಕಿಲ್ಲದ ಸ್ಥಳದಲ್ಲಿ ಒಂದು ಗಾಜಿನ ಬಾಟಲಿಯಲ್ಲಿ ಮುಚ್ಚಳ ಮುಚ್ಚಿ ಗಟ್ಟಿಯಾಗಿ ಇರಿಸಿದರೆ ಬಹುಕಾಲ ಇದರ ತಾಜಾತನ ಹಾಗೂ ರುಚಿಯನ್ನು ಉಳಿಸಿಕೊಳ್ಳಬಹುದು.

English summary

Foods You Should Never Refrigerate

Refrigerating some foods can actually change the flavour, which might not be good for your health. It can reduce their nutritional value or accelerate the spoiling process. Some foods never belong in the refrigerator. To avoid spoiling the taste and texture from your food, here are 11 foods that you should never refrigerate.
Subscribe Newsletter