Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯ ಟಿಪ್ಸ್: ಚಳಿಗಾಲದಲ್ಲಿ ಸರಿಯಾಗಿ 'ಕಡಲೆಕಾಯಿ' ತಿನ್ನಬೇಕಂತೆ!
ಬಡವರ ಬಾದಾಮಿ ಎಂದೇ ಜನಪ್ರಿಯವಾಗಿರುವ ಶೇಂಗಾಬೀಜ ಅಥವಾ ಕಡಲೆಕಾಯಿ ಹೆಚ್ಚಿನವರ ನೆಚ್ಚಿನ ತಿನಿಸಾಗಿದೆ. ವಿಶೇಷವಾಗಿ ಚಳಿಗಾಲಕ್ಕೂ ಮುನ್ನ ಶೇಂಗಾಬೀಜ ವಿಪುಲವಾಗಿ ಲಭ್ಯವಾಗುವ ಕಾರಣ ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಕಡ್ಲೆಕಾಯಿ ಪರಿಷೆಯನ್ನೂ ನಡೆಸಲಾಗುತ್ತದೆ. ಶೇಂಗಾಬೀಜವನ್ನು ಹಸಿಯಾಗಿ, ಹುರಿದು, ಬೇಯಿಸಿ ಅಥವಾ ಮರಳಿನಲ್ಲಿ ಬಿಸಿಮಾಡಿ ಸೇವಿಸಬಹುದು. ಯಾವುದೇ ರೂಪದಲ್ಲಿ ಸೇವಿಸಿದರೂ ಶೇಂಗಾಬೀಜ ರುಚಿಕಕರವೇ ಸರಿ. ಅಗ್ಗವೂ, ಎಲ್ಲೆಡೆ ಸುಲಭವಾಗಿ ಲಭ್ಯವಾಗುವ ಈ ಬಾದಾಮಿಯನ್ನು ಇಷ್ಟಪಡದವರೇ ಇಲ್ಲ ಎನ್ನಬಹುದು.
ಇದನ್ನು ಕೇವಲ ಸಮಯ ಕಳೆಯಲು ಬಳಸಲಾಗುವ ಕುರುಕುತಿಂಡಿಯನ್ನಾಗಿಯೇ ಹೆಚ್ಚಿನವರು ಪರಿಗಣಿಸಿದರೂ ವಾಸ್ತವದಲ್ಲಿ ಇದೊಂದು ಅದ್ಭುತ ಆಹಾರವಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಶೇಂಗಾಬೀಜಗಳನ್ನು ಹಲವಾರು ಭಾರತೀಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಲಭ್ಯವಾಗುವ ಕಾರಣ ಇದರ ಆರೋಗ್ಯಕರ ಗುಣಗಳನ್ನು ಹೆಚ್ಚಾಗಿ ಪಡೆಯಲು ಸದವಕಾಶ ಒದಗಿ ಬಂದಿದೆ.
ಶೇಂಗಾಬೀಜವೂ ಒಂದು ದ್ವಿದಳ ಧಾನ್ಯವಾದ ಕಾರಣ ಯಾವುದೇ ದ್ವಿದಳ ಧಾನ್ಯದಲ್ಲಿರುವಂತೆ ಇದರಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನುಗಳಿವೆ. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಮೂಲಕ ಇದು ಚಳಿಗಾಲಕ್ಕೆ ಹೆಚ್ಚು ಸೂಕ್ತವಾದ ಆಹಾರವಾಗಿದೆ. ಇಂದಿನ ಲೇಖನದಲ್ಲಿ ಶೇಂಗಾಬೀಜದ ಕೆಲವು ನಂಬಲಿಕ್ಕೇ ಕಷ್ಟವಾದ ಕೆಲವು ಆರೋಗ್ಯಕರ ಲಾಭಗಳನ್ನು ವಿವರಿಸಲಾಗಿದೆ....

ತೂಕ ಹೆಚ್ಚುವುದರಿಂದ ತಡೆಯುತ್ತದೆ
ಒಂದು ಮುಷ್ಠಿಯಷ್ಟು ಶೇಂಗಾಬೀಜಗಳನ್ನು ಸೇವಿಸಿದ ಬಳಿಕ ಹೊಟ್ಟೆ ತುಂಬಿದಂತಹ ಅನುಭವವಾಗುವ ಕಾರಣ ಅನಾರೋಗ್ಯಕರವಾದ ಹಾಗೂ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಇತರ ಆಹಾರಗಳನ್ನು ಸೇವಿಸುವ ಬಯಕೆ ಇಲ್ಲವಾಗುತ್ತದೆ. ತನ್ಮೂಲಕ ಎದುರಾಬಹುದಾಗಿದ್ದ ತೂಕದ ಹೆಚ್ಚಳವನ್ನು ತಡೆದಂತಾಗುತ್ತದೆ. ಆದ್ದರಿಂದ ವಿಶೇಷವಾಗಿ ಚಳಿಗಾಲದಲ್ಲಿ ಎಲ್ಲೆಡೆ ರಾರಾಜಿಸುತ್ತಿರುವ ಸಿದ್ಧ ಆಹಾರಗಳ ಜಾಹೀರಾತುಗಳಿಗೆ ಮರುಳಾಗಿ ಆರೋಗ್ಯವನ್ನು ಕೆಡಿಸಿಕೊಳ್ಳದಿರಲು ಶೇಂಗಾಬೀಜ ನೆರವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಿಸಲು ನೆರವಾಗುತ್ತದೆ
ಇದರಲ್ಲಿ ಹೆಚ್ಚಿನ ಮಟ್ಟದ ಏಕಬಹುಅಪರ್ಯಾಪ್ತ ಹಾಗೂ ಬಹುಅಪರ್ಯಾಪ್ತ ಕೊಬ್ಬುಗಳಿವೆ. ವಿಶೇಷವಾಗಿ ಇದರಲ್ಲಿರುವ ಓಲಿಕ್ ಆಮ್ಲ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ ಡಿ. ಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಆದ ಹೆಚ್. ಡಿ. ಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಈ ಮೂಲಕ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ ಹಾಗೂ ವಿಶೇಷವಾಗಿ ಹೃದಯದ ಪ್ರಮುಖ ರಕ್ತನಾಳಗಳ ಮೇಲಿನ ಒತ್ತಡವನ್ನು ನಿವಾರಿಸಿ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತ-ಲಿಪಿಡ್ ವಿವರಗಳನ್ನು ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ.

ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗಿಸುತ್ತದೆ
ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ಖನಿಜಗಳಿದ್ದು ವಿಶೇಷವಾಗಿ ಹೃದಯಸ್ತಂಭನ ಹಾಗೂ ಇತರ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಖಿನ್ನತೆಯ ವಿರುದ್ದ ಕಾರ್ಯನಿರ್ವಹಿಸುವ ಕಾರಣ ಆಗಾಗ ಒಂದು ಹಿಡಿಯಷ್ಟು ಶೇಂಗಾಬೀಜಗಳನ್ನು ತಿನ್ನುತ್ತಾ ಇರುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ
ಇದರಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿ ಬೀಟಾ-ಸಿಟೋಸ್ಟೆರಾಲ್ (SIT) ಎಂಬ ಹೆಸರಿನ ಒಂದು ಬಗೆಯ ಫೈಟೋಸ್ಟೆರಾಲ್ ಅಥವಾ ಸಸ್ಯಜನ್ಯ ಕೊಬ್ಬು ಇದೆ. ಇವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ವಿರುದ್ದ ಹಾಗೂ ಕ್ಯಾನ್ಸರ್ ಪೀಡಿದ ಜೀವಕೋಶಗಳ ಬೆಳವಣಿಗೆಯನ್ನು ತಡೆದು ಕ್ಯಾನ್ಸರ್ ಹರಡುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಅಮೇರಿಕಾದಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ವಾರದಲ್ಲೆರಡು ಬಾರಿಯಾದರೂ ಶೇಂಗಾಬೀಜ ಆಧಾರಿತ ಆಹಾರಗಳನ್ನು ಸೇವಿಸುವ ಪುರುಷರು ಮತ್ತು ಮಹಿಳೆಯರಲ್ಲಿ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕ್ರಮವಾಗಿ 27% ಮತ್ತು 58%ರಷ್ಟು ಕಡಿಮೆಯಾಗಿರುವ ಅದ್ಭುತ ಸಂಗತಿ ಬೆಳಕಿಗೆ ಬಂದಿದೆ.

ಮಧುಮೇಹದಿಂದ ರಕ್ಷಿಸುತ್ತದೆ
ಇದರಲ್ಲಿ ಉತ್ತಮ ಪ್ರಮಾಣದ ಮ್ಯಾಂಗನೀಸ್ ಇದೆ. ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟುಗಳ ಜೀವರಾಸಾಯನಿಕ ಕ್ರಿಯೆ, ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೊದಲಾದ ಗುಣಗಳನ್ನು ಹೊಂದಿದೆ. ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ನಿತ್ಯವೂ ಕೊಂಚ ಶೇಂಗಾಬೀಜಗಳನ್ನು ಸೇವಿಸುತ್ತಾ ಬರುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆ 21%ರಷ್ಟು ಕಡಿಮೆಯಾಗುತ್ತದೆ. ಇದು ಮಧುಮೇಹದ ರೋಗಿಗಳಿಗೆ ಶುಭಸುದ್ದಿಯಾಗಿದೆ. ಒಂದು ವೇಳೆ ನಿಮ್ಮ ಆತ್ಮೀಯರಲ್ಲಿ ಮಧುಮೇಹಿಗಳೂ ಇದ್ದರೆ ಇವರು ನಿತ್ಯವೂ ಕೊಂಚ ಶೇಂಗಾಬೀಜಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿ ಮನವೊಲಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

ಫಲವತ್ತತೆಯನ್ನು ಹೆಚ್ಚಿಸುತ್ತದೆ
ಶೇಂಗಾಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದೆ. ಇದು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ನವಜಾತ ಶಿಶು ಯಾವುದೇ ನ್ಯೂನ್ಯತೆ ಇಲ್ಲದೇ ಆರೋಗ್ಯಕರ ಬೆಳವಣಿಗೆ ಪಡೆಯಲು ನೆರವಾಗುತ್ತದೆ. ಮಹಿಳೆಯರು ಗರ್ಭ ಧರಿಸಿದ ಪ್ರಾರಂಭದ ದಿನಗಳಿಂದಲೇ ಕೊಂಚ ಶೇಂಗಾಬೀಜಗಳನ್ನು ನಿತ್ಯವೂ ಸೇವಿಸುತ್ತಾ ಬಂದರೆ ಜನಿಸುವ ಮಗು ಆರೋಗ್ಯಕರವಾಗಿರಲು ನೆರವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಗರ್ಭಾವಸ್ಥೆಯಲ್ಲಿ ಕನಿಷ್ಟ ನಾನೂರು ಗ್ರಾಂ ಆದರೂ ಶೇಂಗಾಬೀಜಗಳನ್ನು ಸೇವಿಸಿದ ಗರ್ಭಿಣಿಯರಿಗೆ ಜನಿಸುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆಯ ತೊಂದರೆ ಇರುವ ಸಾಧ್ಯತೆ 70%ರಷ್ಟು ಕಡಿಮೆಯಾಗುತ್ತದೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಶೇಂಗಾಬೀಜಗಳನ್ನು ತಿನ್ನುತ್ತಾ ಇದ್ದರೆ ಮಕ್ಕಳಲ್ಲಿ ಅಲರ್ಜಿಯ ಕಾರಣದಿಂದ ಎದುರಾಗುವ ಅಸ್ತಮಾ ಮೊದಲಾದ ತೊಂದರೆಗಳು ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ತ್ವಚೆಗೂ ಒಳ್ಳೆಯದು
ಈ ಪುಟ್ಟ ಕಾಳುಗಳು ತ್ವಚೆಗೆ ನೀಡುವ ಪ್ರಯೋಜನಗಳು ದೊಡ್ಡದೇ ಆಗಿದೆ. ಇದರಲ್ಲಿರುವ ಬಹುಅಪರ್ಯಾಪ್ತ ಆಮ್ಲಗಳು ಹಾಗೂ ರಿಸರ್ವೆಟ್ರಾಲ್ ಆಮ್ಲ ಎಂಬ ಪೋಷಕಾಂಶಗಳು ತ್ವಚೆಗೆ ಅಗತ್ಯವಾಗಿರುವ ಆರ್ದ್ರತೆ ಹಾಗೂ ಇತರ ಪೋಷಣೆಯನ್ನು ನೀಡುತ್ತವೆ. ಪರಿಣಾಮವಾಗಿ ತ್ವಚೆಯ ಆರೋಗ್ಯ ಹಾಗೂ ಕಾಂತಿ ಹೆಚ್ಚುತ್ತದೆ.

ಕೆಮ್ಮು ಮತ್ತು ಶೀತ ಗುಣಪಡಿಸಲು ನೆರವಾಗುತ್ತದೆ
ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ ಹಾಗೂ ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಈ ಮೂಲಕ ಶೀತ ಕೆಮ್ಮು ಮೊದಲಾದ ತೊಂದರೆಗಳಿಂದ ದೇಹವನ್ನು ರಕ್ಷಿಸುತ್ತದೆ.

ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ
ಒಂದು ವೇಳೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಂಭವವನ್ನು ಶೇಂಗಾಬೀಜದಲ್ಲಿರುವ ಪೋಷಕಾಂಶಗಳು ಕಡಿಮೆ ಮಾಡುತ್ತವೆ. ಇತ್ತೀಚೆಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವುದು ಹೆಚ್ಚಾಗಿ ಕಂಡುಬರುತ್ತಿದ್ದು ಹೆಚ್ಚಿನವರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಈ ಕಲ್ಲುಗಳು ದೊಡ್ಡದಾದ ಬಳಿಕವೇ ನೋವು ಕೊಡುವ ಕಾರಣ ತಡವಾಗಿ ಇದು ಬೆಳಕಿಗೆ ಬರುತ್ತದೆ. ಇದನ್ನು ನಿವಾರಿಸಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಶೇಂಗಾಬೀಜಗಳನ್ನು ಸೇವಿಸುತ್ತ್ತಾ ಬಂದವರಲ್ಲಿ ಈ ಕಲ್ಲುಗಳಾಗುವ ಸಂಭವ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಈ ಕಲ್ಲುಗಳಿಗೆ ಮೂಲವಾಗಿದ್ದು ಶೇಂಗಾದಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ.

ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗಿಸುತ್ತದೆ
ಇದರಲ್ಲಿ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟುಗಳಿದ್ದು ಫಾಲಿಫಿನಾಲ್ ಸಹಾ ಉತ್ತಮ ಪ್ರಮಾಣದಲ್ಲಿದೆ. ಇವು ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನಲ್ಲಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಕಾರ್ಸಿನೋಜೆನ್ ಎಂಬ ಕಣಗಳ ಉತ್ಪತ್ತಿಯನ್ನು ನಿಗ್ರಹಿಸಿ ಇವುಗಳಿಂದ ಹೊರಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಇಲ್ಲವಾಗಿಸುವ ಮೂಲಕ ದೇಹದ ಮೇಲೆ ಇವುಗಳ ಧಾಳಿಯಿಂದ ರಕ್ಷಿಸುತ್ತದೆ.

ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ
ಶೇಂಗಾಬೀಜದ ಸೇವನೆಯಿಂದ ದೇಹದಲ್ಲಿ ಟ್ರಿಪ್ಟೋಫಾನ್ (tryptophan) ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತ ಸ್ರವಿಸಲು ನೆರವಾಗುತ್ತದೆ. ಈ ಸೆರೋಟೋನಿನ್ ಮಾನಸಿಕವಾದ ನಿರಾಳತೆಗೆ ಅಗತ್ಯವಾದ ರಸದೂತವಾಗಿದೆ. ಭಾವಾವೇಶ ಹಾಗೂ ಇತರ ಕಾರಣಗಳಿಂದ ಎದುರಾಗಿದ್ದ ಖಿನ್ನತೆಯಿಂದ ಹೊರಬರಲು ಈ ಸೆರೋಟೋನಿನ್ ನೆರವಾಗುತ್ತದೆ.

ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ
ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಸತು ಇರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ, ತಾರ್ಕಿಕ ಯೋಚನಾ ಶಕ್ತಿ ಮೊದಲಾದವು ಉತ್ತಮಗೊಳ್ಳುತ್ತವೆ. ಅಲ್ಲದೇ ಇದರಲ್ಲಿರುವ ವಿಟಿಮಿನ್ ಬಿ2 ಹಾಗೂ ನಿಯಾಸಿನ್ ಸಹಾ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ.



Click it and Unblock the Notifications











