For Quick Alerts
ALLOW NOTIFICATIONS  
For Daily Alerts

ಅಡುಗೆಗೆ ಇಂತಹ ಎಣ್ಣೆಗಳನ್ನೇ ಬಳಸಿ, ಆರೋಗ್ಯವಾಗಿರುವಿರಿ...

By Arshad
|

ಇಂದು ತರಹೇವಾರಿ ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಂದೂ ತನ್ನದೇ ಆದ ಮಹತ್ವವನ್ನು ಪಡೆದಿರುವ ಕಾರಣ ಸೂಕ್ತವಾದ ಎಣ್ಣೆಯನ್ನು ಆಯ್ದುಕೊಳ್ಳುವುದು ಸೀರೆ ಆರಿಸಿದಷ್ಟೇ ಕಷ್ಟವಾದ ಕೆಲಸ. ಅದರಲ್ಲೂ ಮನೆಯವರೆಲ್ಲರ ಆರೋಗ್ಯವನ್ನು ಪರಿಗಣಿಸಿ, ಹಣವೂ ಹೆಚ್ಚಿಲ್ಲದ ಎಣ್ಣೆಯನ್ನು ಆರಿಸುವುದು ಸುಲಭವಲ್ಲ. ಅದರಲ್ಲೂ ಸ್ಥೂಲಕಾಯದ ವ್ಯಕ್ತಿಗಳಿಗೆ ಆಹಾರದ ಮೇಲೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿರುವ ಕಾರಣ ಆರೋಗ್ಯಕರವಾದ ಎಣ್ಣೆಯನ್ನು ಆರಿಸುವುದು ಅನಿವಾರ್ಯವೂ ಹೌದು.

ಮಧುಮೇಹಿಗಳೇ ಅಡುಗೆ ಎಣ್ಣೆಯ ಕುರಿತು ಎಚ್ಚರವಿರಲಿ

ಅಡುಗೆ ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಹಾಗೂ ಇತರ ಅನಾರೋಗ್ಯಕರ ಅಂಶಗಳ ಬಗ್ಗೆ ಹೆಚ್ಚಿನ ಅರಿವು ಮೂಡಿರುವ ಕಾರಣ ಹೆಚ್ಚಿನವರು ಎಣ್ಣೆಯ ಆಯ್ಕೆಯ ಸಮಯದಲ್ಲಿ ಈ ಅಂಶವನ್ನು ಖಂಡಿತವಾಗಿಯೂ ಗಮನಿಸುತ್ತಾರೆ. ಅಡುಗೆ ರುಚಿಯೂ ಆಗಿರಬೇಕು, ಆರೋಗ್ಯಕರವೂ ಆಗಿರಬೇಕು, ಇದರಿಂದ ತಯಾರಾದ ಅಡುಗೆಯಲ್ಲಿ ಎಣ್ಣೆಯ ವಾಸನೆ ಬರಬಾರದು, ಹುರಿಯಲು-ಕರಿಯಲೂ ಸೂಕ್ತವಾಗಿರಬೇಕು, ಎಣ್ಣೆಯ ಬಣ್ಣ ತಿಳಿಯಾಗಿರಬೇಕು ಹಾಗೂ ಹೆಚ್ಚು ಕಾಲ ಕೆಡದಂತೆ ರಕ್ಷಿಸಿಡಲೂ ಸಾಧ್ಯವಾಗಿರಬೇಕು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಉತ್ತಮ ಎಣ್ಣೆಯನ್ನು ಆಯ್ದುಕೊಳ್ಳುವುದೇ ಜಾಣತನದ ಕ್ರಮವಾಗಿದೆ.

ಕೇಳಿ ಇಲ್ಲಿ, ಅಡುಗೆ ಎಣ್ಣೆಯ ವಿಚಾರದಲ್ಲಿ ಮೋಸ ಹೋಗದಿರಿ!

ಮೇಲಿನ ಎಲ್ಲಾ ಅಂಶಗಳನ್ನು ಜನಸಾಮಾನ್ಯರು ಪರಿಗಣಿಸಿದರೆ ಪರಿಣಿತರು ಇನ್ನೂ ಕೆಲವು ಅಂಶಗಳನ್ನು ಪರಿಗಣಿಸುತ್ತಾರೆ. ಇದರಲ್ಲಿ ಪ್ರಮುಖವಾದುದೆಂದರೆ ಬಿಸಿ ಏರುತ್ತಾ ಹೋದಂತೆ ಹೊಗೆ ಪ್ರಾರಂಭವಾಗುವ ತಾಪಮಾನ ಹೆಚ್ಚಿರಬೇಕು, ಇದರಲ್ಲಿ ಏಕಪರ್ಯಾಪ್ತ (monounsaturated) ಹಾಗೂ ಬಹುಪರ್ಯಾಪ್ತ (polyunsaturated) ಕೊಬ್ಬಿನ ಆಮ್ಲಗಳಿರಬೇಕು, ಇದರ ಕಣಗಳು ತಾಪಮಾನ ಏರಿದಂತೆ ತಮ್ಮ ಗುಣಗಳನ್ನು ಕಳೆದುಕೊಳ್ಳಬಾರದು ಹಾಗೂ ಇದರಲ್ಲಿ ಪೂರ್ತಿ ಆರ್ದ್ರವಾದ (saturated) ಕೊಬ್ಬು ಇರಬಾರದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸೂಕ್ತ ಎಣ್ಣೆಯನ್ನು ಸಲಹೆ ಮಾಡುತ್ತಾರೆ. ಹೀಗೆ ಎಲ್ಲಾ ಅಂಶಗಳನ್ನು ಪರಿಗಣಿಸಿ ತಜ್ಞರು ಆರೋಗ್ಯಕರ ಎಂದು ಪಟ್ಟಿ ಮಾಡಿರುವ ಹನ್ನೊಂದು ಆರೋಗ್ಯಕರ ಅಡುಗೆ ಎಣ್ಣೆಗಳು ಯಾವುವು ಎಂಬುದನ್ನು ನೋಡೋಣ...

ಶೇಂಗಾ ಎಣ್ಣೆ

ಶೇಂಗಾ ಎಣ್ಣೆ

ಕಡ್ಲೆಕಾಯಿ ಎಣ್ಣೆ ಎಂದೂ ಕರೆಯಲ್ಪಡುವ ಈ ಎಣ್ಣೆ ಭಾರತದಲ್ಲಿ ಬಹುಕಾಲದಿಂದ ಬಳಕೆಯಲ್ಲಿರುವ ಎಣ್ಣೆಯಾಗಿದ್ದು ವಿಶೇಷವಾಗಿ ಹುರಿಯುವ ಕೆಲಸಕ್ಕೆ ಹೇಳಿ ಮಾಡಿಸಿದ ಎಣ್ಣೆಯಾಗಿದೆ. ಏಕೆಂದರೆ ಇದನ್ನು ಬಿಸಿ ಮಾಡಿದಾಗ ಹೊಗೆ ಉತ್ಪತ್ತಿಯಾಗುವ ತಾಪಮಾನ ತುಂಬಾ ಹೆಚ್ಚಾಗಿದ್ದು ಸಾಮಾನ್ಯವಾದ ಬಿಸಿಗೆ ಹೊಗೆ ಏಳುವುದಿಲ್ಲ. ಅಲ್ಲದೇ ಈ ಎಣ್ಣೆಯನ್ನು ಬಿಸಿ ಮಾಡಿ ತಣಿಸಿದ ಬಳಿಕ ಮುಂದಿನ ಬಳಕೆಗಾಗಿಯೂ ಬಳಸಬಹುದಾದುದರಿಂದ ಹೆಚ್ಚು ಬಾರಿ ಬಳಸಬಹುದು ಹಾಗೂ ಹಲವಾರು ಬಾರಿ ಬಳಸಿದರೂ ಎಣ್ಣೆಯ ರುಚಿ ಅಥವಾ ಇದರಲ್ಲಿ ತಯಾರಿಸಿದ ಅಡುಗೆಗಳ ರುಚಿ ಬದಲಾಗುವುದಿಲ್ಲ. ಆದ್ದರಿಂದ ವಿಶೇಷವಾಗಿ ಹುರಿಯುವ, ಕರಿಯುವ, ಹೆಚ್ಚು ಹೊತ್ತು ಒಲೆಯ ಮೇಲಿಡಬೇಕಾದ ಮೀನು ಫ್ರೈ ಹಾಗೂ ಇತರ ಏಷ್ಯಾದ ಅಡುಗೆಗಳನ್ನು ಮಾಡಲು ಯೋಗ್ಯವಾಗಿದೆ.

ಅವೋಕಾಡೋ ಎಣ್ಣೆ

ಅವೋಕಾಡೋ ಎಣ್ಣೆ

ಬೆಣ್ಣೆಹಣ್ಣು ಅಥವಾ ಅವೋಕಾಡೋ ಬೀಜದಿಂದ ತಯಾರಾದ ಎಣ್ಣೆಯಲ್ಲಿ ಏಕಪರ್ಯಾಪ್ತ ಕೊಬ್ಬಿನ ಆಮ್ಲಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಹೃದಯಕ್ಕೆ ಉತ್ತಮವಾಗಿದೆ. ಈ ಎಣ್ಣೆಯೂ ಹೆಚ್ಚಿನ ತಾಪಮಾನ ತಡೆಯಬಲ್ಲದ್ದಾಗಿದ್ದು ಹೆಚ್ಚಿನ ತಾಪಮಾನ ಪಡೆದ ಬಳಿಕವೇ ಹೊಗೆ ಮೂಡುತ್ತದೆ. ಇದೇ ಕಾರಣಕ್ಕೆ ಇದನ್ನು ಅಡುಗೆ, ಗ್ರಿಲ್, ಒಗ್ಗರಣೆ ಹಾಗೂ ಹುರಿಯುವ ಕೆಲಸಕ್ಕೆ ಬಳಸಬಹುದು. ಕೆಲವು ಸಾಲಾಡ್ ಗಳಲ್ಲಿ ಎಣ್ಣೆಯನ್ನು ಹಸಿಯಾಗಿ ಬಳಸಬೇಕಾದರೂ ಈ ಎಣ್ಣೆಯನ್ನು ಆಯ್ದುಕೊಳ್ಳಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೊಂಚ ದುಬಾರಿ ಎಂಬ ಒಂದೇ ಕಾರಣ ಬಿಟ್ಟರೆ ಆಲಿವ್ ಎಣ್ಣೆಯಣ್ಣು ಬಳಸದೇ ಇರಲು ಇನ್ನಾವ ಕಾರಣವೂ ಉಳಿಯುವುದಿಲ್ಲ. ಏಕೆಂದರೆ ಈ ಎಣ್ಣೆ ಅತ್ಯಂತ ಆರೋಗ್ಯಕರವಾಗಿದ್ದು ವಿಶೇಷವಾಗಿ ಸ್ಥೂಲಕಾಯದ ವ್ಯಕ್ತಿಗಳಿಗೆ ಹಾಗೂ ತೂಕ ಕಳೆದುಕೊಳ್ಳುವವರಿಗೆ ಸೂಕ್ತವಾಗಿದೆ. ಇದರಲ್ಲಿ ಏಕಪರ್ಯಾಪ್ತ ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಹೊಗೆ ಮೂಡುವ ತಾಪಮಾನವೂ ಹೆಚ್ಚಿರುವ ಕಾರಣ ಹುರಿಯುವ ಕರಿಯುವ ಒಗ್ಗರಣೆ ಎಲ್ಲಕ್ಕೂ ಬಳಸಬಹುದು. ಅಷ್ಟೇ ಅಲ್ಲ, ಚಪಾತಿಗೆ ಸವರಲು, ಸಾಲಾಡ್ ಗಳಲ್ಲಿ ಬೆರೆಸಿ ತಿನ್ನಲು, ಅನ್ನದಲ್ಲಿ ತುಪ್ಪದ ಬದಲು ಬಳಸಲೂ ಸೂಕ್ತವಾಗಿದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಕೇವಲ ದೇಹದ ಬಾಹ್ಯ ಸೌಂದರ್ಯವರ್ಧಕ ಎಣ್ಣೆ ಮಾತ್ರವಲ್ಲ, ಆರೋಗ್ಯರಕ ಅಡುಗೆ ಎಣ್ಣೆಯೂ ಆಗಿದೆ. ಇದರ ಸೇವನೆಯಿಂದ ಜೀರ್ಣಾಂಗಗಳು ಉತ್ತಮ ಆರೋಗ್ಯ ಪಡೆಯುತ್ತವೆ ಹಾಗೂ ದೇಹದ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರ ಹೊಗೆ ಮೂಡುವ ತಾಪಮಾನ ಬಹಳ ಹೆಚ್ಚಾಗಿದ್ದು ವಿವಿಧ ಬಗೆಯ ಖಾದ್ಯಗಳ ತಯಾರಿಕೆಗೆ, ಒಗ್ಗರಣೆ, ಸಾರು ಸಾಂಬಾರ್ ಗಳಲ್ಲಿಯೂ ಬಳಸಬಹುದು.

ಪಾಮೋಲಿನ್ ಎಣ್ಣೆ

ಪಾಮೋಲಿನ್ ಎಣ್ಣೆ

ಪಾಮ್ ಅಥವಾ ತಾಳೆಹಣ್ಣಿನ ತಿರುಳಿನಿಂದ ತಯಾರಾದ ಎಣ್ಣೆಯಲ್ಲಿ ಪೂರ್ತಿ ಆರ್ದ್ರವಾದ (saturated) ಕೊಬ್ಬು ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಸಾಮಾನ್ಯ ಅಡುಗೆ ಕೆಲಸಗಳಿಗೆ ಇದು ಸೂಕ್ತವಲ್ಲ. ಆದರೆ ಇದರಲ್ಲಿ ವಿಟಮಿನ್ ಇ, ಕ್ಯಾರೋಟೀನ್ ಹಾಗೂ ಲೈಕೋಪೀನ್ ಎಂಬ ಅಂಶಗಳೂ ಇರುವ ಕಾರಣ ಒಂದೇ ಮಾತಿನಲ್ಲಿ ಅನಾರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಇದರ ಹೊಗೆ ಮೂಡುವ ತಾಪಮಾನವೂ ಹೆಚ್ಚಿರುವ ಕಾರಣ ಹಾಗೂ ಹೆಚ್ಚಿನ ತಾಪಮಾನದಲ್ಲಿ ತನ್ನ ಗುಣವನ್ನು ಕಳೆದುಕೊಳ್ಳದೇ ಇರುವ ಕಾರಣ ಹುರಿಯುವ ಕೆಲಸಕ್ಕೆ ಮಾತ್ರ ಬಳಸಬಹುದು ಹಾಗೂ ಇದರ ಸೇವನೆಯೂ ಮಿತವಾಗಿರಬೇಕು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಈ ಎಣ್ಣೆಯಲ್ಲಿ ವಿಟಮಿನ್ ಇ ಗರಿಷ್ಟ ಪ್ರಮಾಣದಲ್ಲಿರುವ ಕಾರಣ ಇದು ಅಡುಗೆಗಿಂತಲೂ ಸೌಂದರ್ಯವರ್ಧಕವಾಗಿಯೇ ಹೆಚ್ಚು ಉಪಯುಕ್ತವಾಗಿದೆ. ಇದರಲ್ಲಿ ಹೊಗೆ ಮೂಡುವ ತಾಪಮಾನವೂ ಹೆಚ್ಚಿರುವ ಕಾರಣ ಅಡುಗೆ ಎಣ್ಣೆಯಾಗಿಯೂ ಸೂಕ್ತವಾಗಿದೆ. ಆದರೆ ಇದು ಕೊಂಚ ದುಬಾರಿಯಾಗಿರುವ ಕಾರಣ ಒಗ್ಗರಣೆ ಹೊರತಾಗಿ ಇತರ ಕೆಲಸಕ್ಕೆ ಬಳಸುದೇ ಇರುವುದು ಉತ್ತಮ. ಇದರಲಿಲ್ ಒಮೆಗಾ-೩ ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ಇದರ ಸುಗಂಧವೂ ಎಲ್ಲರ ಮನ ಸೆಳೆಯುವ ಕಾರಣ ಇದನ್ನು ಕೇಕು, ಕುಕ್ಕೀಸ್, ದಾಲ್ಚಿನ್ನಿ ಬನ್, ಮಫಿನ್ ಮೊದಲಾದ ವಿಶೇಷ ಖಾದ್ಯಗಳನ್ನು ತಯಾರಿಸಲು ಉತ್ತಮ ಆಯ್ಕೆಯಾಗಿದೆ.

ಅಕ್ರೋಟ್ ಎಣ್ಣೆ

ಅಕ್ರೋಟ್ ಎಣ್ಣೆ

ಅಕ್ರೋಟ್ ಎಣ್ಣೆಯಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಇದರಿಂದ ಮಧ್ಯಮ ತಾಪಮಾನದಲ್ಲಿ ಹೊಗೆ ಮೂಡುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಈ ಕಾರಣದಿಂದ ಇದೊಂದು ಆರೋಗ್ಯಕರ ಎಣ್ಣೆಯಾಗಿದ್ದು ಇದರಲ್ಲಿರುವ ವಿಟಮಿನ್ ಕೆ ಮತ್ತು ಇ ರಕ್ತ, ತ್ವಚೆಗಳಿಗೆ ಉತ್ತಮವಾಗಿದೆ. ಈ ಎಣ್ಣೆ ಒಗ್ಗರಣೆ, ಕೇಕ್ ತಯಾರಿಕೆ ಹಾಗೂ ಸಾಲಾಡ್ ಗಳ ಮೇಲೆ ಹರಡಿಕೊಂಡು ಸೇವಿಸಲು ಸೂಕ್ತವಾಗಿದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ಹೆಚ್ಚೂ ಕಡಿಮೆ ನೀರಿನಷ್ಟೇ ತೆಳುವಾಗಿರುವ ಎಳ್ಳೆಣ್ಣೆ ನಸುವಾದ ಒಣಫಲಗಳ ಪರಿಮಣ ಹೊಂದಿದ್ದು ಈ ಪರಿಮಳವನ್ನು ಹುರಿದ ತಿಂಡಿಗಳಲ್ಲೂ ಪಡೆಯಬಹುದಾದ ಕಾರಣ ಹುರಿಯುವ ತಿಂಡಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಎಣ್ಣೆ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಹೃದಯದ ತೊಂದರೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈ ಕಾರಣದಿಂದ ಈ ಎಣ್ಣೆಯನ್ನು ಒಗ್ಗರಣೆ ಹಾಗೂ ಕೇಕ್ ತಯಾರಿಸಲು ಬಳಸಬಹುದು.

ಅಗಸೆ ಎಣ್ಣೆ (Flax Seed Oil)

ಅಗಸೆ ಎಣ್ಣೆ (Flax Seed Oil)

ಈ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ಇದರ ಉರಿಯೂತ ನಿವಾರಕ ಗುಣ ಹಲವು ಸೋಂಕು ಹಾಗೂ ವಿಶೇಷವಾಗಿ ಸಂಧಿವಾತ ಕಡಿಮೆ ಮಾಡಲು ನೆರವಾಗುತ್ತದೆ. ಈ ಎಣ್ಣೆಯನ್ನು ಸಾಮಾನ್ಯವಾದ ಅಡುಗೆ, ಮಾಂಸಾಹಾರ ಹುರಿಯುವಿಕೆ, ಕೇಕ್ ತಯಾರಿಕೆ, ಮಫಿನ್ ಹಾಗೂ ಸಾಲಾಡ್ ನಲ್ಲಿ ಬೆರೆಸಿ ತಿನ್ನಲೂ, ತರಕಾರಿಗಳ ಜ್ಯೂಸ್ ಮಾಡಿ ಕುಡಿಯಲೂ ಸೂಕ್ತವಾಗಿದೆ.

ಸಸ್ಯಾಹಾರಿ ಎಣ್ಣೆ (Vegetable Oil)

ಸಸ್ಯಾಹಾರಿ ಎಣ್ಣೆ (Vegetable Oil)

ಕನೋಲಾ, ಸೋಯಾ ಅವರೆ, ಮೆಕ್ಕೆಜೋಳ, ಸೂರ್ಯಕಾಂತಿ, ಕುಸುಂಬೆ ಮೊದಲಾದ ಬೀಜಗಳ ಎಣ್ಣೆಗಳನ್ನು ಒಂದು ನಿರ್ದಿಷ್ಟ ಪ್ರಮಾಣದ ಅನುಪಾತದಲ್ಲಿ ಬೆರೆಸಿ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಈ ಎಣ್ಣೆಯಲ್ಲಿ ಅತಿ ಹೆಚ್ಚಿನ ತಾಪಮಾನದ ಬಳಿಕವೇ ಹೊಗೆ ಮೂಡುವ ಕಾರಣ ವಿಶೇಷವಾಗಿ ಹುರಿಯುವ ಅಡುಗೆ ಕೆಲಸಗಳಿಗೆ ಮತ್ತು ಒಗ್ಗರಣೆಗೆ ಮಾತ್ರವೇ ಈ ಎಣ್ಣೆ ಸೂಕ್ತವಾಗಿದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಈ ಎಣ್ಣೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಇ ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಗಳಿವೆ ಹಾಗೂ ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಆರೋಗ್ಯಕ್ಕೆ ಪೂರಕವಾಗಿದ್ದು ಸಾಮಾನ್ಯ ಎಲ್ಲಾ ಅಡುಗೆಗಳಲ್ಲಿ ಬಳಸಬಹುದು. ಹುರಿಯಲು, ಕರಿಯಲು ಹಾಗೂ ಒಗ್ಗರಣೆ ಮೊದಲಾದ ಕೆಲಸಗಳಲ್ಲಿ ಬಳಸಿ ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಹೃದಯದ ತೊಂದರೆಗಳ ಸಾಧ್ಯತೆಯನ್ನು ಕನಿಷ್ಟವಾಗಿಸಬಹುದು.

English summary

Top 11 Healthiest Cooking Oils That Will Keep You Healthy

There are certain parameters to choose healthy edible oils, which include oil with higher smoking point, it should contain monounsaturated and polyunsaturated fats, the components of the oil should be stable and finally avoiding those oils that contain saturated fats.
X
Desktop Bottom Promotion