For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ಇಲ್ಲಿದೆ ನೋಡಿ ಸರಳ ಪರಿಹಾರಗಳು

By Arshad
|

ವಾಯುಪ್ರಕೋಪ ಅಥವಾ ಗ್ಯಾಸ್ ಸಮಸ್ಯೆ ನಮ್ಮೆಲ್ಲರನ್ನು ಒಂದಲ್ಲಾ ಒಂದು ಸಮಯ ಕಾಡಿಯೇ ಇರುತ್ತದೆ. ವಿಶೇಷವಾಗಿ ಯಾವುದಾದರೊಂದು ಔತಣದ ಬಳಿಕ ಅಥವಾ ನೆಚ್ಚಿನ ಆಹಾರವನ್ನು ಕೊಂಚ ಹೆಚ್ಚೇ ಸೇವಿಸಿದಾಗ ವಾಯುಪ್ರಕೋಪ ಉಂಟಾಗಬಹುದು. ಇದರಿಂದ ಹೊಟ್ಟೆಯಲ್ಲಿ ನೋವು, ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯಲ್ಲಿ ಗುಡುಗುಡು ಮೊದಲಾದವು ಎದುರಾಗುತ್ತದೆ. ಹೊಟ್ಟೆಯಲ್ಲಿ ವಾಯು ಎರಡು ಕಾರಣಗಳಿಂದ ಉತ್ಪನ್ನವಾಗುತ್ತದೆ.

ಇವೆಂದರೆ ಘನ ಆಹಾರ ಹಾಗೂ ದ್ರವಾಹಾರ. ಆಹಾರದ ಜೀರ್ಣಕ್ರಿಯೆಯ ಸಮಯದಲ್ಲಿ ಕೆಲವು ವಾಯುಗಳು ಉತ್ಪತ್ತಿಯಾಗುತ್ತವೆ. ಇದರಲ್ಲಿ ಇಂಗಾಲದ ಡೈ ಆಕ್ಸೈಡ್, ಮೀಥೇನ್ ಹಾಗೂ ಜಲಜನಕ ಪ್ರಮುಖವಾಗಿವೆ. ಆದರೆ ಅತ್ಯಲ್ಪ ಪ್ರಮಾಣದಲ್ಲಿರುವ ಹೈಡ್ರೋಜೆನ್ ಸಲ್ಫೈಡ್ ಹಾಗೂ mercaptans ಎಂಬ ಕಣಗಳೇ ಹೆಚ್ಚು ವಾಸನೆ ಹೊಂದಿದ್ದು ಮುಜುಗರಕ್ಕೆ ಕಾರಣವಾಗುತ್ತವೆ.

ಹೊಟ್ಟೆ ನೋವನ್ನು ಶಮನಗೊಳಿಸುವ ಮದ್ದು ಇಲ್ಲಿದೆ ನೋಡಿ!

ಈ ವಾಯುವನ್ನು ಉತ್ಪತ್ತಿ ಮಾಡಲು ಕೆಲವು ಆಹಾರಗಳು ಹೆಚ್ಚು ಕಾರಣವಾಗಿವೆ. ಎಲೆಕೋಸು, ಬೀನ್ಸ್, ದ್ವಿದಳ ಧಾನ್ಯಗಳು, ಬೇಳೆ, ಹಲಸಿನ ಬೀಜ, ಹುರಿಗಡಲೆ, ಸಕ್ಕರೆ ಹೆಚ್ಚಿರುವ ಪಾನೀಯಗಳು ಮೊದಲಾದವುಗಳಿಂದ ವಾಯುಪ್ರಕೋಪ ಹೆಚ್ಚುತ್ತದೆ. ಆದರೆ ಈಗ ಚಿಂತಿಸುವ ಕಾರಣವಿಲ್ಲ, ಈ ವಾಯುವಿನ ಉತ್ಪಾದನೆಯನ್ನೇ ಮೂಲದಲ್ಲಿ ಇಲ್ಲವಾಗಿಸುವ ಮೂಲಕ ವಾಯುಪ್ರಕೋಪವನ್ನು ತಗ್ಗಿಸುವ ಕೆಲವು ಆಹಾರಗಳನ್ನು ಸೇವಿಸಿ ಈ ಮುಜುಗರದಿಂದ ಪಾರಾಗಬಹುದು. ಬನ್ನಿ, ಇವು ಯಾವುದು ಎಂದು ನೋಡೋಣ....

ಓಮದ ಕಾಳುಗಳು

ಓಮದ ಕಾಳುಗಳು

ಓಮದಲ್ಲಿ ಔಷಧೀಯ ಗುಣಗಳಿವೆ. ಈ ಗುಣಗಳು ಓಮವನ್ನು ಹಲವು ಔಷಧಿಗಳಲ್ಲಿ ಬಳಸಲು ಕಾರಣವಾಗಿವೆ. ಇದರಲ್ಲಿರುವ ಥೈಮಾಲ್ ಎಂಬ ಪೋಷಕಾಂಶ ಕರುಳುಗಳಲ್ಲಿ ಕೆಲವು ಜೀರ್ಣರಸಗಳನ್ನು ಸ್ರವಿಸಲು ಪ್ರಚೋದನೆ ನೀಡುತ್ತದೆ. ಈ ಜೀರ್ಣರಸಗಳು ವಾಯುಗಳನ್ನು ಹೀರಿಕೊಂಡು ದ್ರವವಾಗಿಸುವ ಗುಣ ಹೊಂದಿದ್ದು ಈ ಮೂಲಕ ವಾಯುಪ್ರಕೋಪದಿಂದ ಕಾಪಾಡುತ್ತದೆ. ಇದರ ಪ್ರಯೋಜನ ಪಡೆಯಲು ಅರ್ಧ ಕಪ್ ನೀರಿನಲ್ಲಿ ಸುಮಾರು ಮೂರರಿಂದ ನಾಲ್ಕು ಚಿಕ್ಕ ಚಮಚ ಓಮವನ್ನು ಹಾಕಿ ಕೆಲನಿಮಿಷಗಳ ಕಾಲ ಕುದಿಸಿ ಬಳಿಕ ತಣಿಸಿ ಕುಡಿಯಬೇಕು.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಈ ಶಿರ್ಕಾದ ಸೇವನೆಯಿಂದ ಹೊಟ್ಟೆಯಲ್ಲಿ ಗುಡುಗುಡು ಹಾಗೂ ವಾಯುಪ್ರಕೋಪ ಕಡಿಮೆಯಾಗುತ್ತದೆ. ವಿಶೇಷವಾಗಿ ಅಜೀರ್ಣತೆಯಿಂದ ಎದುರಾಗಿದ್ದ ವಾಯುಪ್ರಕೋಪಕ್ಕೆ ಇದು ಉತ್ತಮ ಆಯ್ಕೆಯಾಗಿದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ ಬೆರೆಸಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ಕುಡಿಯುವ ಮೂಲಕ ವಾಯುಪ್ರಕೋಪದಿಂದ ಪಾರಾಗಬಹುದು.

ಪುದಿನಾ

ಪುದಿನಾ

ವಾಯುಪ್ರಕೋಪದಿಂದ ಪಾರಾಗಲು ಪುದಿನಾ ಸಹಾ ಉತ್ತಮ ಆಯ್ಕೆಯಾಗಿದೆ. ಇದರ ಗುಣಪಡಿಸುವ ಹಾಗೂ ಚೇತೋಹಾರಕ ಗುಣ ಜೀರ್ಣಾಂಗಳ ಉರಿಯನ್ನು ತಗ್ಗಿಸುತ್ತದೆ ಹಾಗೂ ವಾಯುವಿನಿಂದ ಉಬ್ಬಿದ್ದ ಹೊಟ್ಟೆಯನ್ನು ಸಾಮಾನ್ಯ ಸ್ಥಿತಿಗೆ ತರಲು ನೆರವಾಗುತ್ತದೆ. ಉತ್ತಮವೆಂದರೆ ಕೆಲವು ಪುದಿನಾ ಎಲೆಗಳನ್ನು ಹಸಿಯಾಗಿ ಜಗಿದು ನುಂಗುವುದು. ಇದು ಇಷ್ಟವಾಗದೇ ಇದ್ದರೆ ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಎರಡು ಚಿಕ್ಕ ಚಮಚದಷ್ಟು ಪುದಿನಾ ಎಲೆಗಳನ್ನು ಹಾಕಿ ಸುಮಾರು ಐದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ ಬಳಿಕ ಉರಿ ಆರಿಸಿ ತಣಿಸಬೇಕು. ಈ ನೀರನ್ನು ಸೋಸಿ ಪ್ರತಿರಾತ್ರಿ ಕುಡಿಯುವ ಮೂಲಕ ವಾಯುಪ್ರಕೋಪ ಇಲ್ಲವಾಗುತ್ತದೆ.

ದಾಲ್ಚಿನ್ನಿ

ದಾಲ್ಚಿನ್ನಿ

ವಾಯುಪ್ರಕೋಪದಿಂದ ಥಟ್ಟನೇ ಪಾರಾಗಲು ದಾಲ್ಚಿನ್ನಿ ಅಥವಾ ಚೆಕ್ಕೆಯೂ ಉತ್ತಮ ಆಯ್ಕೆಯಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯನ್ನು ಶಮನಗೊಳಿಸುತ್ತ್ತದೆ. ಇದಕ್ಕಾಗಿ ತಲಾ ಅರ್ಧ ಚಿಕ್ಕ ಚಮಚದಷ್ಟು ಜೇನು ಮತ್ತು ದಾಲ್ಚಿನ್ನಿಪುಡಿಯನ್ನು ಬೆರೆಸಿ ಉಗುರುಬೆಚ್ಚಗಾಗಿಸಿದ ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಯಾವಾಗ ವಾಯುಪ್ರಕೋಪ ಎದುರಾಯಿತೋ ಆಗ ತಕ್ಷಣವೇ ಈ ಪೇಯವನ್ನು ಕುಡಿಯುವ ಮೂಲಕ ತೊಂದರೆಯಿಂದ ಮುಕ್ತಿ ಪಡೆಯಬಹುದು.

ಹಸಿ ಶುಂಠಿ

ಹಸಿ ಶುಂಠಿ

ಶುಂಠಿ ಸಹಾ ವಾಯುಪ್ರಕೋಪದಿಂದ ಪಾರಾಗಲು ಉತ್ತಮವಾಗಿದ್ದು ಇದರಲ್ಲಿರುವ ಜೆಂಜೆರಾಲ್ ಹಾಗೂ ಶೋಗಲ್ ಎಂಬ ಪೋಷಕಾಂಶಗಳು ಕರುಳುಗಳಿಗೆ ಶಮನ ನೀಡುತ್ತವೆ. ಅಲ್ಲದೇ ಕರುಳುಗಳಲ್ಲಿ ಎದುರಾಗಿರುವ ಉರಿಯೂತ ಹಾಗೂ ಅಜೀರ್ಣತೆಯನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಊಟದ ಬಳಿಕ ಒಂದು ಚಿಕ್ಕ ತುಂಡು ಶುಂಠಿಯನ್ನು ಜಗಿದು ನುಂಗುವ ಮೂಲಕ ವಾಯುಪ್ರಕೋಪದಿಂದ ಉತ್ತಮ ಪರಿಹಾರ ಪಡೆಯಬಹುದು. ಬದಲಿಗೆ ಒಂದು ದೊಡ್ಡ ಚಮಚ ಶುಂಠಿಯನ್ನು ಅರೆದು ಅರ್ಧ ಕಪ್ ನೀರಿನಲ್ಲಿ ಕುದಿಸಿ ಹತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ತಣಿಸಿ ಸೋಸಿ ಕುಡಿಯಿರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಮೂರು ಬಾರಿ ಅರ್ಧ ಲೋಟದಷ್ಟು ಕುಡಿಯಿರಿ.

ದೊಡ್ಡ ಜೀರಿಗೆ

ದೊಡ್ಡ ಜೀರಿಗೆ

ವಾಯುಪ್ರಕೋಪದಿಂದ ನೈಸರ್ಗಿಕ ಪರಿಹಾರ ಪಡೆಯಲು ದೊಡ್ಡ ಜೀರಿಗೆ ಅಥವಾ ಬಡಾಸೌಂಫ್ ಉತ್ತಮ ಆಯ್ಕೆಯಾಗಿದೆ. ಇದರ ಖಿನ್ನತೆ-ನಿರೋಧಕ ಗುಣ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಉತ್ಪತ್ತಿಯಾಗುವ ವಾಯು ನಿವಾರಣೆಯಾಗಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಕುದಿನೀರಿಗೆ ಒಂದು ದೊಡ್ಡ ಚಮಚ ದೊಡ್ಡಜೀರಿಗೆಯನ್ನು ಹಾಕಿ ಐದು ನಿಮಿಷ ಹಾಗೇ ಬಿಡಿ .ಬಳಿಕ ಇದನ್ನು ಸೋಸಿ ನೀರನ್ನು ಕುಡಿಯಿರಿ.

ಕಾಳುಮೆಣಸು

ಕಾಳುಮೆಣಸು

ಇದರಲ್ಲಿರುವ ಪೊಟ್ಯಾಶಿಯಂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜಠರದ ಕ್ಷಮತೆಯನ್ನು ಹೆಚ್ಚಿಸುತ್ತದೆ ಅಲ್ಲದೇ ಜೀರ್ಣಕ್ರಿಯೆಯಲ್ಲಿ ಉತ್ಪನ್ನವಾಗುವ ವಾಯುಗಳು ಕಡಿಮೆ ಇರುವಂತೆ ಹಾಗೂ ಜೀರ್ಣರಸ ಮತ್ತು ಹೈಡ್ರೋಕ್ಲೋರಿಕ್ ಆಮ್ಲದ ಉತ್ಪತ್ತಿಯನ್ನು ಹೆಚ್ಚಿಸುವ ಮೂಲಕ ನೊರೆಯಾಗದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚದಷ್ಟು ಕಾಳುಮೆಣಸಿನ ಪುಡಿಯನ್ನು ಕೊಂಚ ಜೇನಿನೊಂದಿಗೆ ಬೆರೆಸಿ ಇದನ್ನು ಅರ್ಧ ಲೋಟ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಿರಿ.

ಲಿಂಬೆ

ಲಿಂಬೆ

ಒಂದು ಲೋಟ ಬೆಚ್ಚನೆಯ ನೀರಿನಲ್ಲಿ ಒಂದು ಲಿಂಬೆಯ ರಸವನ್ನು ಬೆರೆಸಿ ಕುಡಿಯುವುದು ಉತ್ತಮ ಅಭ್ಯಾಸವಾಗಿದೆ. ಇದರ ಸೇವನೆಯಿಂದ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪತ್ತಿ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಂಡು ಆಹಾರಕಣಗಳು ಪೂರ್ಣವಾಗಿ ಒಡೆದು ವಾಯು ಉತ್ಪತ್ತಿಯಾಗದಿರಲು ನೆರವಾಗುತ್ತದೆ. ಲಿಂಬೆರಸ ಬೆರೆಸಿದ ನೀರನ್ನು ನಿತ್ಯವೂ ಬೆಳಿಗ್ಗೆ ಕುಡಿಯುವುದು ಉತ್ತಮ ಅಭ್ಯಾಸವಾಗಿದೆ.

ಮಜ್ಜಿಗೆ

ಮಜ್ಜಿಗೆ

ಇದು ಕುಡಿಯಲು ರುಚಿಯಾಗಿರುವುದು ಮಾತ್ರವಲ್ಲ, ಹಲವಾರು ಆರೋಗ್ಯಕರ ಗುಣಗಳನ್ನೂ ಹೊಂದಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ವಾಯುಪ್ರಕೋಪದಿಂದ ಪರಿಹಾರ ಒದಗಿಸುತ್ತದೆ. ಒಂದು ಲೋಟ ಮಜ್ಜಿಗೆಗೆ ಕೊಂಚ ಕಪ್ಪು ಉಪ್ಪು ಮತ್ತು ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುವ ಮೂಲಕ ರುಚಿಯನ್ನೂ ಹೆಚ್ಚಿಸಬಹುದು ಹಾಗೂ ವಾಯುಪ್ರಕೋಪದಿಂದಲೂ ಪಾರಾಗಬಹುದು.

ಇಂಗು

ಇಂಗು

ಇಂಗು ಸಹಾ ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆಗೆ ಸಮರ್ಥವಾದ ಮನೆಮದ್ದಾಗಿದೆ. ಇದರ ಸೇವನೆಯಿಂದ ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆ ನಿಗ್ರಹಿಸಿ ಇದರಿಂದ ಎದುರಾಗುವ ವಾಯುಪ್ರಕೋಪವನ್ನು ನಿಗ್ರಹಿಸುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಅರ್ಧ ಚಿಕ್ಕ ಚಮಚ ಇಂಗನ್ನು ಬೆರೆಸಿ ಕುಡಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ ಬೆಳ್ಳುಳ್ಳಿಯೂ ಒಂದು ನೈಸರ್ಗಿಕ ಔಷಧಿಯಾಗಿದ್ದು ವಾಯುಪ್ರಕೋಪವನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ. ಇದರ ಕಮಟು ವಾಸನೆ ಹಾಗೂ ಬಿಸಿಯಾಗಿಸುವ ಗುಣ ಜೀರ್ಣರಸಗಳನ್ನು ಹೆಚ್ಚು ಸ್ರವಿಸಲು ಪ್ರಚೋದಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಒಂದೆರಡು ತಾಜಾ ಬೆಳ್ಳುಳ್ಳಿ, ಕೊಂಚ ಕಾಳುಮೆಣಸು ಹಾಗೂ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಸೋಸಿ ಕುಡಿಯಿರಿ.

ಸೀಬೆ ಎಲೆಗಳು

ಸೀಬೆ ಎಲೆಗಳು

ಈ ಎಲೆಗಳಲ್ಲಿ ಕರುಳಿನ ಒಳಗೆ ಎದುರಾಗುವ ತೊಂದರೆಯನ್ನು ಶಮನಗೊಳಿಸುವ ಗುಣವಿದೆ. ಕೆಲವೊಮ್ಮೆ ಕರುಳುಗಳ ಒಳಗೆ ಕಫ ಹೆಚ್ಚು ಉತ್ಪತ್ತಿಯಾಗಿ ಜೀರ್ಣಾಂಗಗಳ ಒಳಗೆ ಉರಿಯೂತವನ್ನು ಉಂಟುಮಾಡುತ್ತದೆ. ಪೇರಳೆ ಅಥವಾ ಎಲೆಗಳಲ್ಲಿರುವ ಅತಿಸೂಕ್ಷ್ಮಜೀವಿ ನಿವಾರಕ ಗುಣ ಈ ಕಫವನ್ನು ಸಡಿಲಿಸಿ ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತದೆ ಹಾಗೂ ವಾಯು ಪ್ರಕೋಪದಿಮ್ದ ತಕ್ಷಣವೇ ಶಮನ ನೀಡುತ್ತದೆ. ಇದಕ್ಕಾಗಿ ಒಂದು ಮುಷ್ಠಿಯಷ್ಟು ಪೇರಲೆ ಎಲೆಗಳನ್ನು ನೀರಿನಲ್ಲಿ ಕೊಂಚ ಹೊತ್ತು ಕುದಿಸಿ ತಣಿಸಿ ಸೋಸಿ ಕುಡಿಯಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ಇದರಲ್ಲಿ ಉರಿಯೂತ ನಿವಾರಕ ಗುಣ ಹಾಗೂ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಅಲ್ಲದೇ ಇದರಲ್ಲಿ ಕರಗುವ ನಾರು ಸಹಾ ಉತ್ತಮ ಮಟ್ಟದಲ್ಲಿದ್ದು ಜೀರ್ಣಾಂಗಗಳಲ್ಲಿ ಆಮ್ಲದ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ಹೊಟ್ಟೆಯಲ್ಲಿ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗಿದ್ದ ಕಲ್ಮಶ ಹಾಗೂ ವಿಷಕಾರಿ ವಸ್ತುಗಳನ್ನು ನಿವಾರಿಸುವ ಮೂಲಕ ಹೊಟ್ಟೆನೋವು, ಮಲಬದ್ಧತೆ, ವಾಯುಪ್ರಕೋಪ ಮೊದಲಾದವುಗಳಿಂದ ಪರಿಹಾರ ಒದಗಿಸುತ್ತದೆ. ಇದಕ್ಕಾಗಿ ನೆಲ್ಲಿಕಾಯಿಯನ್ನು ಹಿಂಡಿ ತೆಗೆದ ರಸವನ್ನು ಕೊಂಚ ಉಪ್ಪು ಬೆರೆಸಿ ಕುಡಿಯಬೇಕು. ಸಾಧ್ಯವಾದರೆ ಹಸಿಯಾಗಿ ಕಚ್ಚಿ ಜಗಿದು ನುಂಗಬಹುದು.

English summary

How To Relieve Gas Fast With These Home Remedies

Do you often suffer with gastric problems, or is it always after a heavy meal that you suffer from gas? Well, the problem is temporary but the acute pain and bloating cause uneasiness in the stomach. A gassy stomach can occur at any time of the day and it is often becomes painful, leading to stomach cramps, bloating, heartburn and heaviness. Gas can collect in your stomach in two ways - either by eating or drinking.
X
Desktop Bottom Promotion