Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಲ್ಲಣದಿಂದ ನಿರಾಳರಾಗಲು ಕೆಲವು ಸಮರ್ಥ ವಿಧಾನಗಳು
ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ಉದ್ವೇಗ, ತಳಮಳ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ಹೆಚ್ಚಾಗುತ್ತಿವೆ. ಅದರಲೂ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಮನಸ್ಸನ್ನು ಬಲವಂತವಾಗಿ ಶಾಂತಗೊಳಿಸುವ ಔಷಧಿಗಳು ಕೊಂಚ ಶಮನ ನೀಡಿದರೂ ಇವುಗಳ ಅಡ್ಡಪರಿಣಾಮ ಮೂಲ ತೊಂದರೆಗಿಂತ ಭೀಕರವಾಗಿರುವುದರಿಂದ ಒಮ್ಮೆ ಅನುಭವಿಸಿದವರು ಮತ್ತೆ ಈ ಔಷಧಿಗೆ ಬಲಿಪಶುವಾಗಲು ಸಿದ್ಧರಿಲ್ಲ.
ಸಾಮಾನ್ಯವಾಗಿ ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಗೆ ಒಳಗಾದವರು ಓರ್ವ ವೈದ್ಯರ ಸಲಹೆಯಿಂದ ತೃಪ್ತರಾಗದೇ ಇನ್ನೊಬ್ಬರ ಬಳಿ, ಬಳಿಕ ಮತ್ತೊಬ್ಬರ ಬಳಿ ತಾಕಲಾಡುವುದನ್ನು ಗಮನಿಸಬಹುದು. ಒಂದು ಅಂದಾಜಿನ ಪ್ರಕಾರ ಇವರು ಸರಾಸರಿ ಐವರು ವೈದ್ಯರನ್ನು ಕಾಣುತ್ತಾರೆ. ಇವರ ಸಂಕಟಕ್ಕೆ ಸರಿಯಾದ ಕಾರಣ ಮತ್ತು ಸರಿಯಾದ ಔಷಧಿಗಳನ್ನು ಪಡೆಯುವವರೆಗೆ ಹಿಂದೆ ಸೇವಿಸಿದ್ದ ಔಷಧಿಗಳ ಅಡ್ಡಪರಿಣಾಮಗಳು ಇವರನ್ನು ಹೈರಾಣಾಗಿರಿಸುತ್ತವೆ. ಆದ್ದರಿಂದ ಎಲ್ಲರೂ ಅಡ್ಡಪರಿಣಾಮಗಳಿಲ್ಲದ ಪರ್ಯಾಯ ಔಷಧಿಗಳನ್ನೇ ಬಯಸುತ್ತಾರೆ.

ಮಾನಸಿಕ ತೊಂದರೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ರೋಗಿಗಳಿಗಿರುವುದು ಭಯಭೀತರಾಗುವ ತೊಂದರೆ. ಈ ತೊಂದರೆ ಇರುವ ರೋಗಿ ಸಾಮಾನ್ಯವಾಗಿ ಇಲ್ಲಸಲ್ಲದ, ಸಾಧ್ಯವಾಗದ, ಅಸಂಭವ ಸಾಧ್ಯತೆಗಳನ್ನೇ ಕಲ್ಪಿಸಿಕೊಂಡು ಭಯಭೀತನಾಗಿರುತ್ತಾನೆ. ಚಿಕ್ಕಪುಟ್ಟ ತೊಂದರೆಗಳನ್ನೇ ಗುಡ್ಡದಷ್ಟು ದೊಡ್ಡದಾಗಿ ಕಲ್ಪಿಸಿಕೊಂಡು ಸದಾ ಭಯಭೀತನಾಗಿ ವಿಷಣ್ಣವದನದೊಂದಿಗಿರುತ್ತಾನೆ.
ಎಷ್ಟೇ ಆರೋಗ್ಯವಂತರಾಗಿದ್ದರೂ ನಾವೆಲ್ಲರೂ ಕೊಂಚವಾದರೂ ಭಯಭೀತರಾಗಿಯೇ ಇರುತ್ತೇವೆ. ಆದರೆ ಇದರ ಕಾರಣ ಮತ್ತು ಪರಿಣಾಮಗಳನ್ನು ಊಹಿಸಿ ಹೆದರುವ ಅವಶ್ಯಕತೆ ಇಲ್ಲವೆಂಬ ದೂರದೃಷ್ಟಿಯನ್ನು ಪಡೆದಿರುವ ನಾವು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಳಮಳದ ತೊಂದರೆ ಇರುವ ವ್ಯಕ್ತಿಗೆ ಈ ದೂರದೃಷ್ಟಿಯ ವ್ಯಾಪ್ತಿ ಅಪಾರವಾಗಿದ್ದು ಸಾಮಾನ್ಯವಾಗಿ ಅತಿರೇಕದಲ್ಲಿಯೇ ಇರುತ್ತದೆ. ಒತ್ತಡ
ನಿವಾರಕ ಗುಳಿಗೆಗಳು ಸಾಮಾನ್ಯವಾಗಿ ಮನಸ್ಸು ಈ ರೀತಿಯ ಅತಿರೇಕವನ್ನು ಕಲ್ಪಿಸಿಕೊಳ್ಳಲು ಅವಕಾಶ ನೀಡದೇ ಸಾಮಾನ್ಯವಾಗಿ ಯೋಚಿಸಲು ನೆರವಾಗುವ ಮೂಲಕ ತೊಂದರೆಗೆ ಶಮನ ನೀಡುತ್ತದೆ. ಆದರೆ ಮೊದಲೇ ಹೇಳಿದಂತೆ ಈ ಔಷಧಿಗಳ ಅಡ್ಡಪರಿಣಾಮ ಭೀಕರವಾಗಿವೆ. ಇದರ ಬದಲಿಗೆ ಕೆಲವು ಸುಲಭ ವಿಧಾಗಳನ್ನು ಅನುಸರಿಸುವ ಮೂಲಕ ಉದ್ವೇಗದ ಮೇಲೆ ನಿಧಾನವಾಗಿಯಾದರೂ ಸಮರ್ಥವಾಗಿ ಹತೋಟಿ ಸಾಧಿಸಬಹುದು. ಬನ್ನಿ ಕೆಲವು ಸಮರ್ಥ ವಿಧಾನಗಳನ್ನು ನೋಡೋಣ...
ಉಸಿರಾಟ ನಿಯಂತ್ರಣ ವಿಧಾನ
ಮನಸ್ಸು ಉದ್ವೇಗಗೊಂಡಾಗ ನಮ್ಮ ಉಸಿರಾಟದ ವೇಗವೂ ಹೆಚ್ಚುತ್ತದೆ. ಉದಾಹರಣೆಗೆ ಚಲನಚಿತ್ರ ನೋಡುತ್ತಿದ್ದಾಗ ಮೈ ನವಿರೇಳಿಸುವ ಸಾಹಸ ದೃಶ್ಯಗಳನ್ನು ನೋಡಿದಾಗ ಆ ಕ್ಷಣದಲ್ಲಿ ಹೃದಯ ಬಡಿತ ಮತ್ತು ಉಸಿರಾಟ ಹೆಚ್ಚುತ್ತದೆ. ಇದೇ ಕ್ರಿಯೆಯನ್ನು ವಿರುದ್ದಗೊಳಿಸಿ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಸ್ವಲ್ಪ ಆಚೀಚೆ ಸರಿಸುವ ಮೂಲಕ ಉದ್ವೇಗದ ಮೇಲೆ ನಿಯಂತ್ರಣ ಸಾಧಿಸಬಹುದು. ಸಾಮಾನ್ಯವಾಗಿ ನಾವು ಅನೈಚ್ಛಿಕವಾಗಿ ಕೇವಲ ಶ್ವಾಸಕೋಶ ತುಂಬುವಷ್ಟು ಮಾತ್ರ ಗಾಳಿಯನ್ನು ಎಳೆದುಕೊಳ್ಳುತ್ತೇವೆ. ಈ ವಿಧಾನದಲ್ಲಿ ಐಚ್ಛಿಕವಾಗಿ ಹೊಟ್ಟೆ ಭರ್ತಿಯಾಗುವಷ್ಟು ಗಾಳಿಯನ್ನು ವಪೆಯ ಮೂಲಕ ಎಳೆದುಕೊಂಡು ಕೆಲವು ಸಕೆಂಡ್ ಹಿಡಿದಿಟ್ಟು ಪೂರ್ಣವಾಗಿ ಹೊರಬಿಡಬೇಕು. ಹೀಗೇ ಸತತವಾಗಿ ಐಚ್ಛಿಕವಾಗಿ ದೀರ್ಘ ಉಸಿರೆಳೆದುಕೊಳ್ಳುವ ಮೂಲಕ ಉದ್ವೇಗದ ಸಮಯದಲ್ಲಿ ಮನಸ್ಸನ್ನು ನಿರಾಳವಾಗಿಸಿಕೊಳ್ಳಬಹುದು.
ನಿಃಶ್ವಾಸದ ಶಕ್ತಿ
ಕುರ್ಚಿಯ ಮೇಲೆ ನೆಟ್ಟಗೆ ಕುಳಿತು ಕೈಗಳನ್ನು ತೊಡೆಯ ಮೇಲಿರಿಸಿ. ದೀರ್ಘವಾದ ಉಸಿರನ್ನು ಎಳೆದುಕೊಂಡು ನಿಧಾನವಾಗಿ ಪೂರ್ಣವಾಗಿ ಉಸಿರನ್ನು ಬಿಡಿ. ಈ ಕ್ರಿಯೆ ಸುಮಾರು ಎಂಟು ಸೆಕೆಂಡುಗಳಲ್ಲಾಗಬೇಕು. ಈ ಸಮಯದಲ್ಲಿ ಬೇರೇನನ್ನೂ ಯೋಚಿಸದೇ ಕೇವಲ ಸೆಕೆಂಡುಗಳನ್ನು ಮಾತ್ರ ಮನದಲ್ಲಿ ಲೆಕ್ಕಹಾಕುತ್ತಿರಬೇಕು. ಈ ಸಮಯದಲ್ಲಿ ಭುಜವನ್ನು ಹಿಂದಕ್ಕೆಳೆಯಲು ಯತ್ನಿಸಬೇಕು. ಈ ಪರಿಯನ್ನು ಪ್ರಥಮವಾಗಿ ಹತ್ತು ಬಾರಿಯಾದರೂ ನಿರ್ವಹಿಸಬೇಕು. ಪ್ರತಿದಿನ ಒಂದರಿಂದ ಎರಡು ಬಾರಿ ಈ ವಿಧಾನ ಅನುಸರಿಸಬೇಕು. ದಿನಗಳೆದಂತೆ ಈ ಪ್ರಮಾಣವನ್ನು ಹೆಚ್ಚಿಸುತ್ತಾ ಪ್ರತಿದಿನ ಮೂವತ್ತು ಬಾರಿ, ಮತ್ತು ದಿನಕ್ಕೆ ಎರಡು ಬಾರಿ ಇದ್ದುದು ಮೂರು ಅಥವಾ ನಾಲ್ಕು ಬಾರಿಗೆ ವಿಸ್ತರಿಸಬೇಕು.
ಆಹ್ಲಾದಕರ ಸಂಗೀತ ಆಲಿಸುವುದು
ಮಾನಸಿಕ ಉದ್ವೇಗಕ್ಕೆ ಸಂಗೀತವೂ ಒಂದು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ವಾಸ್ತವವಾಗಿ ಒಂದು ಲಯದಲ್ಲಿ ಹೊಡೆದುಕೊಳ್ಳುವ ತಾಳಕ್ಕೆ ಮನದ ಒಂದು ಗತಿಯನ್ನು ಲೆಕ್ಕಹಾಕುವ ಉಪಕರಣದಂತೆ (metronome) ಮೆದುಳು ಕಾರ್ಯನಿರ್ವಹಿಸುವ ಮೂಲಕ ಉದ್ವೇಗಕ್ಕೆ ಕಾರಣವಾದ ಘಟನೆಯನ್ನು ಆ ಕ್ಷಣದಲ್ಲಿ ನಿರ್ಲಕ್ಷಿಸುತ್ತದೆ. ಪರಿಣಾಮವಾಗಿ ಉದ್ವೇಗದ ಮೂಲಕ ಎದುರಾಗಿದ್ದ ತೊಂದರೆಗಳು ಈಗ ಹಿಮ್ಮುಖವಾಗಿ ಚಲಿಸತೊಡಗುತ್ತದೆ. ಪರಿಣಾಮವಾಗಿ ಕೆಲವೇ ನಿಮಿಷಗಳಲ್ಲಿ ಮನಸ್ಸು ನಿರಾಳವಾಗಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕೆಲವು ಸಂಶೋಧನೆಗಳಲ್ಲಿ Native American ಮತ್ತು Celtic music ಪ್ರಾಕಾರಗಳು ಹೆಚ್ಚಿನ ಮುದ ನೀಡುತ್ತವೆ ಎಂದು ಕಂಡುಕೊಳ್ಳಲಾಗಿದೆ. ಹಿಂದೂಸ್ತಾನಿ ಗಾಯನದಲ್ಲಿಯೂ ತೋಡಿ ರಾಗ ಖಿನ್ನತೆಗೆ ಉತ್ತಮ ಎಂದು ಕಂಡುಕೊಳ್ಳಲಾಗಿದೆ. ಕೆಲವು ನಿಸರ್ಗದ ಸದ್ದುಗಳೂ, ಉದಾಹರಣೆಗೆ ಸಮುದ್ರದ ಅಲೆ, ಮಳೆ ಇತ್ಯಾದಿಗಳೂ ಮನಸ್ಸಿನ ದುಗುಡವನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











