ಸಾಕುಪ್ರಾಣಿಯನ್ನು ಹಾಸಿಗೆಯಲ್ಲಿ ಮಲಗಿಸಿಕೊಂಡ್ರೆ ಏನಾಗುತ್ತೆ?

By Su.Ra

ಮುದ್ದಾದ ನಾಯಿಮರಿ, ಪ್ರೀತಿಪಾತ್ರವಾದ ನಿಮ್ಮ ಮನೆಯ ಮಿಯಾಂವ್ ಮಿಯಾಂಬ್ ಬೆಕ್ಕು. ಎಷ್ಟು ಸಮಯ ಅವುಗಳ ಜೊತೆ ಕಳೆದ್ರೂ ನಿಮಗೆ ಬೋರ್ ಆಗೋದಿಲ್ಲ. ನಿಮ್ಮ ಮುದ್ದಿನ ಸಾಕುಪ್ರಾಣಿಯ ಬಗ್ಗೆ ನಿಮಗೆ ಅತಿಯಾದ ಕಾಳಜಿ ಮತ್ತು ಪ್ರೀತಿ. ನನ್ನ ನಾಯಿ ನನ್ನ ಜೊತೆ ಇದ್ರೆ ನನಗೆ ಬೇರೇನೂ ಬೇಡ, ನನ್ನ ಮುದ್ದು ಬೆಕ್ಕನ್ನ ಎಷ್ಟು ಹೊತ್ತು ಆಟ ಆಡಿಸಿದ್ರೂ ನನಗೆ ಸಮಯ ಕಳೆದಿದ್ದೇ ಗೊತ್ತಾಗೋದಿಲ್ಲ..ಇದು ಪ್ರತಿಯೊಬ್ಬ ಪೆಟ್ಸ್ ಲವ್ವರ್ ಗಳ ಮನದಾಳದ ಮಾತು..

ಕೆಲವು ಪ್ರಾಣಿಪ್ರಿಯರು ತಮ್ಮ ಸಾಕುಪ್ರಾಣಿಯನ್ನು ಮಕ್ಕಳಂತೆಯೇ ನೋಡಿಕೊಳ್ತಾರೆ. ಹಾಗೆ ನೋಡಿಕೊಳ್ಳಬೇಕು ಕೂಡ. ಯಾಕಂದ್ರೆ ಮೂಕಪ್ರಾಣಿಗಳಿಗೆ ಪ್ರೀತಿ ತೋರಿಸಿದ್ರೆ ಖಂಡಿತ ಅವುಗಳೂ ಕೂಡ ನಿಮ್ಮನ್ನು ಪ್ರೀತಿಯಿಂದ ಆರಾಧಿಸುತ್ತೆ. ಅದ್ರಲ್ಲೂ ಕೆಲವರಿಗಂತೂ ತಮ್ಮ ನಾಯಿಮರಿ ಇಲ್ಲವೇ ಬೆಕ್ಕಿನಮರಿ ತಮ್ಮ ಹಾಸಿಗೆಯಲ್ಲೇ ಮಲಗಿರಬೇಕು. ಅವುಗಳ ಜೊತೆ ಮಲಗಿದ್ರೆ ಮಾತ್ರ ಅವರಿಗೆ ನಿದ್ದೆ ಕಣ್ಣಿಗೆ ಹತ್ತೋದು..

Is it Safe to Sleep with Your Pet?

ಆದ್ರೆ ನಿಮ್ಮ ಹಾಸಿಗೆಯಲ್ಲೇ ನಿಮ್ಮ ಸಾಕುಪ್ರಾಣಿಯನ್ನು ಮಲಗಿಸಿಕೊಂಡು ಮಲಗೋದು ಎಷ್ಟು ಸರಿ.. ಇಂತದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕೆಲವು ತಂಡ ಅಧ್ಯಯನಕ್ಕೆ ಇಳಿಯಿತು. ಅಮೇರಿಕನ್ ಪೆಟ್ ಪ್ರೊಡಕ್ಟ್ ಅಸೋಸಿಯೇಷನ್ ಈ ನಿಟ್ಟಿನಲ್ಲಿ ಸರ್ವೇ ನಡೆಸಿದೆ. ನಿಮ್ಮ ಮತ್ತು ನಾಯಿಗಳ ಆರೋಗ್ಯದ ದೃಷ್ಟಿಯಿಂದ ಇದೆಷ್ಟು ಸರಿಯಾದ ಕ್ರಮ ಅನ್ನೋದರ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಯಿಂದ ಒಳ್ಳೇದು ಮತ್ತು ಕೆಟ್ಟದ್ದು ಎರಡೂ ಅಂಶಗಳು ಬಹಿರಂಗಗೊಂಡಿವೆ. ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

*ಒಳ್ಳೇದು 1 - ಸಾಕುಪ್ರಾಣಿಗಳು ನಿಮ್ಮನ್ನ ರಿಲ್ಯಾಕ್ಸ್ ಮಾಡುತ್ತವೆ..
ಈಗಿನ ಯುವಜನತೆಯಲ್ಲಿ ಇನ್ಸೋಮೆನಿಯಾ ಸಮಸ್ಯೆ ಸಾಮಾನ್ಯವಾಗಿದೆ. ಅಂದ್ರೆ ಹಗಲಿನಲ್ಲಿ ಹೆಚ್ಚು ನಿದ್ರಿಸಿ,ರಾತ್ರಿಯ ವೇಳೆ ಬೇರೆಬೇರೆ ಕಾರಣಗಳಿಂದಾಗಿ ನಿದ್ದೆ ಆವರಿಸದೇ ಇರೋದು ಅಥ್ವಾ ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ದೆ ಬಾರದೇ ಇರೋದು ಇತ್ಯಾದಿ. ಆದ್ರೆ ಸರ್ವೇ ಪ್ರಕಾರ ಕೆಲವು ಪ್ರಾಣಿಪ್ರಿಯರಿಗೆ ತಮ್ಮ ಸಾಕುಪ್ರಾಣಿಯ ಜೊತೆ ಮಲಗಿದಾಗ ಈ ಸಮಸ್ಯೆ ಎದುರಾಗೋದಿಲ್ವಂತೆ. ಅಂದ್ರೆ ಇನ್ಸೋಮೇನಿಯಾ ಸಮಸ್ಯೆಯ ನಿವಾರಣೆಗಾಗಿ ಸಾಕುಪ್ರಾಣಿಗಳು ಕೆಲವರಿಗೆ ಸಹಾಯ ಮಾಡುತ್ತವಂತೆ. ಯಾಕಂದ್ರೆ ಅವುಗಳ ಜೊತೆ ಮಲಗಿದಾಗ ಮನುಷ್ಯ ರಿಲ್ಯಾಕ್ಸ್ ಫೀಲ್ ಮಾಡ್ತಾನೆ ಮತ್ತು ಆರಾಮವಾಗಿ ಅವುಗಳನ್ನು ತಬ್ಬಿಕೊಂಡು ಮಲಗ್ತಾನೆ. ಅಂದ್ರೆ ಕೆಲವು ಸಾಕುಪ್ರಾಣಿಗಳು ಮನುಷ್ಯನ ಆರಾಮದಾಯಕ ನಿದ್ದೆಗೆ ಕಾರಣವಾಗಿವೆಯಂತೆ..

*ಒಳ್ಳೇದು 2 - ಸಾಕುಪ್ರಾಣಿಗಳು ನಿಮ್ಮನ್ನ ಬೆಚ್ಚಗಿರಿಸುತ್ತೆ
ತುಂಬಾ ಚಳಿಯ ದಿನಗಳಲ್ಲಿ ಸಾಕುಪ್ರಾಣಿಗಳ ಜೊತೆ ಮಲಗೋದು ಸೂಕ್ತವಂತೆ. ಅದಕ್ಕೆ ಕಾರಣ ಮನುಷ್ಯನಿಗಿಂತ ಪ್ರಾಣಿಗಳ ದೇಹದ ಉಷ್ಣತೆ ಮೂರರಿಂದ ಆರು ಡಿಗ್ರಿಯಷ್ಟು ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿರುತ್ತೆ. ಅವುಗಳ ರೋಮಗಳು ನಿಮ್ಮನ್ನೂ ಬೆಚ್ಚಗೆ ಮಾಡುತ್ತೆ. ತುಂಬಾ ಚಳಿಯ ವಾತಾವರಣದಲ್ಲಿ ಅವುಗಳು ನಿಮ್ಮ ಹಾಸಿಗೆಯಲ್ಲಿ ಮಲಗಿದ್ರೆ ನೀವೂ ಕೂಡ ಬೆಚ್ಚಗಿರಬಹುದು. ನಾನು ಬೆಚ್ಚಗಿರಬೇಕು, ಚಳಿಯಿಂದ ಎಚ್ಚರವಾಗೋದನ್ನು ತಪ್ಪಿಸಿಕೊಂಡು ಆರಾಮದಾಯ ನಿದ್ದೆ ಮಾಡಬೇಕು ಅನ್ನೋ ಕಾರಣಕ್ಕೆ ನನ್ನ ಸಾಕುಪ್ರಾಣಿಯ ಜೊತೆ ಮಲಗ್ತೀನಿ ಅಂತ ಹೇಳುವ ಪ್ರಾಣಿಪ್ರಿಯರೂ ಇದ್ದಾರಂತೆ..ಇದು ಕೂಡ ಸರ್ವೇಯಿಂದ ಬಹಿರಂಗಗೊಂಡಿರುವ ಸತ್ಯ.

*ಒಳ್ಳೇದು 3 - ಸಾಕುಪ್ರಾಣಿಗಳು ನಿಮ್ಮನ್ನು ಸೇಫ್ ಆಗಿರುವಂತೆ ನೋಡಿಕೊಳ್ಳುತ್ತೆ
ಹಲವಾರು ವೈದ್ಯಕೀಯ ಲಾಭಗಳು ಪ್ರಾಣಿಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಿಸಿಕೊಳ್ಳೋದ್ರಿಂದ ಇದೆ ಅನ್ನೋದು ಅಧ್ಯಯನದ ಪ್ರಕಾರ ತಿಳಿದುಬಂದಿದೆ. ಅದ್ರಲ್ಲೊಂದು ಭಯಮುಕ್ತ ನಿದ್ದೆಗೆ ಸಾಕುಪ್ರಾಣಿಗಳು ಕಾರಣವಾಗೋದು. ಕೆಲವರಿಗೆ ರಾತ್ರಿಯ ವೇಳೆ ಯಾರು ಬರ್ತಾರೋ, ಏನು ಮಾಡ್ತಾರೋ ಇತ್ಯಾದಿ ಭಯಗಳು ಕಾಡ್ತಾ ಇರುತ್ತೆ. ಆದ್ರೆ ಸಾಕು ಪ್ರಾಣಿಗಳು ಪಕ್ಕದಲ್ಲಿದ್ರೆ ನನಗೆ ಯಾರಿಂದಲೂ ಅಪಾಯ ಬರದಂತೆ ರಕ್ಷಿಸಲು ನನ್ನ ಮುದ್ದು ಪ್ರಾಣಿ ನನ್ನ ಪಕ್ಕದಲ್ಲೇ ಇರುತ್ತೆ ಅನ್ನೋ ಭಾವನೆ ಬೆಳೆದು ಆರಾಮಾಗಿರಲು ಸಾಧ್ಯವಾಗುತ್ತಂತೆ. ಅದ್ರಲ್ಲೂ ಪ್ರಮುಖವಾಗಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಬದಲ್ಲಿ ಅಂದ್ರೆ ಏಕಾಂಗಿಯಾಗಿ ಇರುವ ರಾತ್ರಿಗಳಲ್ಲಿ ಕಾಡುವ ಇಂತಹ ಭಯಗಳ ನಿವಾರಣೆಗಾಗಿ ಮಲಗುವಾಗ ಸಾಕುಪ್ರಾಣಿ ಹತ್ತಿರದಲ್ಲೇ ಇರೋದು ಸೂಕ್ತ ಅನ್ನೋದು ಹಲವರ ಅಭಿಪ್ರಾಯ.

*ಒಳ್ಳೇದು 4 - ಮೆದುಳಿನ ಕೆಮಿಸ್ಟ್ರಿ ವೃದ್ಧಿಯಾಗಲು ಸಾಕುಪ್ರಾಣಿಗಳು ಸಹಕಾರಿ
ರಾತ್ರಿಯ ವೇಳೆಯಲ್ಲಿ ಪ್ರಾಣಿಗಳನ್ನು ತಬ್ಬಿ ಮಲಗೋದ್ರಿಂದ ಆಗುವ ಸೇಫ್ಟಿ ಮನೋಭಾವ ಮತ್ತು ರಿಲ್ಯಾಕ್ಸ್ ಫೀಲಿಂಗ್ ಮೆದುಳಿನ ಕಾರ್ಯಚಟುವಟಿಕೆಗೂ ನೆರವಾಗುತ್ತಂತೆ. ಇದು ನಿಮ್ಮ ದೇಹದ ಆಕ್ಸಿಟೋಸಿನ್ ಪ್ರಮಾಣವನ್ನು ಹೆಚ್ಚಿಸುತ್ತಂತೆ. ಈ ಆಕ್ಸಿಟೋಸಿನ್ ಮನುಷ್ಯನ ಸೈಕೋಲಾಜಿಕಲಿ ಸ್ಟೇಬಲ್ ಆಗಿರಲು ಅಂದ್ರೆ ಮಾನಸಿಕವಾಗಿ ಹಿಡಿತದಲ್ಲಿರಲು ನೆರವಾಗುತ್ತೆ. ಕೇವಲ ಪ್ರಾಣಿಗಳನ್ನು ಪಕ್ಕದಲ್ಲಿ ಮಲಗಿಸಿಕೊಂಡು ಒಳ್ಳೇದಾಗಿದೆ ಅಂತ ಹೇಳುವವರು ಮಾತ್ರವಲ್ಲ, ಅದ್ರಿಂದ ಆಗುವ ಕಿರಿಕಿರಿಯ ಅನುಭವವನ್ನೂ ಇಲ್ಲಿ ಪಟ್ಟಿಮಾಡಲಾಗಿದೆ.

*ಕೆಟ್ಟದ್ದು 1 - ನಿಮ್ಮ ನಿದ್ದೆಯನ್ನು ಹಾಳುಮಾಡಬಹುದು
ಈಗಾಗಲೇ ತಿಳಿಸಿರುವಂತೆ ಹೇಗೆ ರಾತ್ರಿಯ ವೇಳೆ ಪ್ರಾಣಿಗಳನ್ನುತಬ್ಬಿ ಮಲಗೋದ್ರಿಂದ ಕೆಲವರು ಆರಾಮದಾಯಕ ನಿದ್ದೆ ಮಾಡ್ತಾರೋ ಹಾಗೆ ಪ್ರಾಣಿಗಳಿಂದ ಕಿರಿಕಿರಿ ಅನುಭವಿಸಿ ನಿದ್ದೆ ಹಾಳು ಮಾಡಿಕೊಳ್ಳುವವರೂ ಇದ್ದಾರೆ. ಆಗಾಗ ಪ್ರಾಣಿಗಳು ಯಾವುದನ್ನೋ ನೋಡಿ ನಿಮ್ಮ ರೂಮಿನಲ್ಲಿ ಕೂಗಿದಾಗ, ಇಲ್ಲವೇ ನಿಮಗಿಂತ ಕಡಿಮೆ ಸಮಯ ಅವುಗಳು ಮಲಗೋದ್ರಿಂದ ಆಗಾಗ ಅವುಗಳು ಎದ್ದು ಓಡಾಡಿದಾಗ ನಿಮ್ಮ ನಿದ್ದೆ ಹಾಳಾಗುವ ಸಾಧ್ಯತೆ ಇರುತ್ತೆ. ಹಾಗಾಗಿ ನಿಮ್ಮ ಬೆಡ್ ನಿಂದ ಪ್ರಾಣಿಗಳು ದೂರದಲ್ಲಿರೋದೆ ಸೂಕ್ತ. ಶೇಕಡಾ 50ಕ್ಕಿಂತ ಹೆಚ್ಚು ಮಂದಿ ಪ್ರಾಣಿಗಳನ್ನು ಹತ್ತಿರದಲ್ಲಿ ಮಲಗಿಸಿಕೊಂಡು ಈ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ ಅನ್ನೋದು ಬಹಿರಂಗಗೊಂಡಿರುವ ಸತ್ಯ. ಹೀಗೆ ಅರ್ಧ ನಿದ್ದೆಗೆ ಆಗಾಗ ಎಚ್ಚರಿಸುವ ಪ್ರಾಣಿಗಳಿಂದ ನಿಮ್ಗೆ ಮುಂದೆ ದೈಹಿಕ ಮತ್ತು ಮಾನಸಿಕವಾದ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿರುತ್ತವೆ.

*ಕೆಟ್ಟದ್ದು 2 - ಅಲರ್ಜಿ ಮತ್ತು ಅಸ್ತಮಾ ಕಾಯಿಲೆಗೆ ಕಾರಣವಾಗಬಹುದು
ದಿ ಅಲರ್ಜಿ ಮತ್ತು ಅಸ್ತಮಾ ಫೌಂಡೇಷನ್ ಆಫ್ ಅಮೇರಿಕಾ ಸಂಸ್ಥೆ, ಯಾರಿಗೆ ಚರ್ಮದ ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳಿವೆಯೋ ಅಂತವರು ತಮ್ಮ ರೂಮಿನಿಂದ ಸಾಕುಪ್ರಾಣಿಗಳನ್ನು ದೂರವೇ ಇಡಲು ಸೂಚಿಸಿದ್ದಾರೆ. ನೀವು ಪ್ರಾಣಿಪ್ರಿಯರಾಗಿದ್ರೆ ಅವುಗಳನ್ನು ಸಾಕಲು ಅಭ್ಯಂತರವಿಲ್ಲ. ಆದ್ರೆ ಅಲರ್ಜಿ ಇರುವವರು ಮಲಗುವ ಮುನ್ನ ಕೇವಲ ಬೆಡ್ ರೂಮ್ ಮಾತ್ರವಲ್ಲ, ಇಡೀ ಮನೆಯನ್ನು ಒಮ್ಮೆ ಸ್ವಚ್ಛಗೊಳಿಸಿ ಮಲಗಬೇಕು ಮತ್ತು ಪ್ರಾಣಿಗಳನ್ನು ಮನೆಯ ಹೊರಗಿನ ಪ್ರತ್ಯೇಕ ಕೊಠಡಿಯಲ್ಲಿ ಮಲಗಿಸಬೇಕು ಎಂದು ಹೇಳಿದ್ದಾರೆ.

*ಕೆಟ್ಟದ್ದು 3 - ನಿಮ್ಮ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರಬಹುದು
ಸಂಗಾತಿ ಜೊತೆ ಮಲಗುವಾಗ ಪ್ರಾಣಿಗಳು ನೀವು ಮಲಗುವ ಕೊಠಡಿಯಿಂದ ದೂರವೇ ಇರಬೇಕು. ಮದುವೆ ಎಂಬ ಬಾಂಧವ್ಯದ ಸೂತ್ರಗಳಲ್ಲಿ ಇದೂ ಕೂಡ ಒಂದು. ನಿಮ್ಮ ಸಾಕುಪ್ರಾಣಿಯನ್ನು ಸಂಗಾತಿ ಜೊತೆ ಇರುವಾಗ ಹಾಸಿಗೆಯ ಹತ್ತಿರವೂ ಸೇರಿಸಿಕೊಳ್ಳಬೇಡಿ. ನೀವು ನಿಮ್ಮ ಸಂಗಾತಿಯ ಜೊತೆ ಆರಾಮಾಗಿ ಇರಬೇಕು, ಎಂಜಾಯ್ ಮಾಡಬೇಕು ಅಂದ್ರೆ ಸಾಕುಪ್ರಾಣಿಗಳು ಹತ್ತಿರವಿರೋದು ಸೂಕ್ತವಲ್ಲ. ಅವುಗಳಿಗೆ ನಿಮ್ಮ ವರ್ತನೆ ವಿಚಿತ್ರವೆನಿಸಿ ಇರಿಟೇಟ್ ಮಾಡುವ ಸಾಧ್ಯತೆಗಳಿರುತ್ತೆ ಅನ್ನುವ ಕಾಮನ್ ಸೆನ್ಸ್ ನಿಮಗಿದ್ದರೆ ಸಾಕು.

ಈಗ ನೀವೇ ಯೋಚಿಸಿ. ನಿಮ್ಮ ಮನೋಭಾವ ಎಂತದ್ದು ಮತ್ತು ನಿಮ್ಮ ಮತ್ತು ನಿಮ್ಮ ಸಾಕುಪ್ರಾಣಿಯ ನಡುವಿನ ಒಡನಾಟ ಎಂತದ್ದು ಅನ್ನೋದನ್ನು ನೀವೇ ನಿರ್ಧರಿಸಿಕೊಳ್ಳಿ. ನಿಮಗೆ ಯಾವುದು ಸೂಕ್ತ ಮಾರ್ಗ ಅನ್ನಿಸುತ್ತೋ ಅದನ್ನು ಪಾಲಿಸಿ. ನಿಮ್ಮ ಮುದ್ದು ಸಾಕುಪ್ರಾಣಿ ನಿಮ್ಮ ಹಾಸಿಗೆಯಲ್ಲೇ ನಿಮ್ಮ ಜೊತೆಯೇ ಇರಬೇಕೋ ಅಥವಾ ಪ್ರತ್ಯೇಕವಾಗಿರಬೇಕೋ ಅನ್ನೋದು ನಿಮ್ಮ ನಿರ್ಧಾರದ ಮೇಲೆಯೇ ಆಧಾರಿತವಾಗಿರಲಿ.

ಆದ್ರೆ ನೀವಿಲ್ಲದೇ ಇರುವಾಗ ನಿಮ್ಮನ್ನು ಬಿಟ್ಟು ಮಲಗುವ ಸಾಮರ್ಥ್ಯ ನಿಮ್ಮ ಸಾಕುಪ್ರಾಣಿಗೆ ಇರಬೇಕು ಮತ್ತು ನೀವು ನಿಮ್ಮ ಸಾಕು ಪ್ರಾಣಿ ಇಲ್ಲದೇ ಇದ್ದಾಗ ಆರಾಮಾಗಿ ನಿದ್ದೆ ಮಾಡುವ ಅಭ್ಯಾಸ ಬೆಳಸಿಕೊಂಡಿರಬೇಕು. ಅಭ್ಯಾಸವಿಲ್ಲದೇ ಇದ್ದಲ್ಲಿ ನಂತರದ ದಿನಗಳಲ್ಲಿ ಅದನ್ನು ಪ್ರಾಕ್ಟೀಸ್ ಮಾಡಿಕೊಳ್ಳೋದು ಕಷ್ಟವಾಗಬಹುದು ಅನ್ನುವ ಆಲೋಚನೆ ನಿಮ್ಮಲ್ಲಿರಲಿ..

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion