Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಸ್ಲೋ ಪಾಯಿಸನ್ ಮ್ಯಾಗಿ ಕುರಿತು ತಜ್ಞರ ಅಭಿಪ್ರಾಯವೇನು?
ಇತ್ತೀಚಿನ ಪತ್ರಿಕೆಗಳ ಪ್ರಮುಖ ಸ್ಥಳಗಳನ್ನು ಮ್ಯಾಗಿ ನೂಡಲ್ಸ್ ಎಂಬ ಸಿದ್ಧ ಆಹಾರ ಕಬಳಿಸುತ್ತಿದೆ. ಕೆಲದಿನಗಳ ಹಿಂದೆ ಉತ್ತರ ಭಾರತದಲ್ಲಿ ಇದರಲ್ಲಿರುವ ಸೀಸದ ಅಂಶ ತೀರಾ ಹೆಚ್ಚಾಗಿರುವ ಸತ್ಯ ಬಯಲಾಗಿ ಇದನ್ನು ಮಾರಾಟಕ್ಕೆ ನಿಷೇಧಿಸಿರುವುದು ಇದಕ್ಕೆ ಪ್ರಮುಖ ಕಾರಣ. ನವದೆಹಲಿಯಲ್ಲಿರುವ ಆಹಾರವಸ್ತುಗಳ ಅಂಶಗಳ ಪ್ರಯೋಗಾಲಯದಲ್ಲಿ ಪ್ರಯೋಗಗಳ ಮೂಲಕ ಪ್ರಮಾಣಿಸಲಾದ ಮಾಹಿತಿಗಳು ಆರೋಗ್ಯದ ಮೇಲೆ ಬೀರುವ ಮಾರಕ ಪರಿಣಾಮಗಳು ಈ ನಿಷೇಧಕ್ಕೆ ಕಾರಣ.
ಮ್ಯಾಗಿಯ ಹದಿಮೂರು ಮಾದರಿಗಳ ಪೈಕಿ ಹತ್ತರಲ್ಲಿ ಸೀಸದ ಅಂಶ ೦.೦೧ ಪಿಪಿಎಮ್ (ಪಾರ್ಟ್ಸ್ ಪರ್ ಮಿಲಿಯನ್ ಅಂದರೆ ಹತ್ತು ಲಕ್ಷ ಭಾಗದಲ್ಲಿ ಒಂದು) ಇರಬೇಕಾದುದು ಹದಿನೇಳು ಪಿಪಿಎಂ ನಷ್ಟಿರುವುದು ದಂಗುಪಡಿಸುತ್ತಿದೆ. ಅಲ್ಲದೇ ಪ್ರಯೋಗಾಲಯದಲ್ಲಿ ಇದರಲ್ಲಿರುವ ಅಜಿನೋಮೋಟೋ (ಮೊನೋಸೋಡಿಯಂ ಗ್ಲುಟಮೇಟ್) ಅಂಶವೂ ಆಗಾಧ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ.
ಆದರೆ ಈ ಅಂಶದ ಬಗ್ಗೆ ಮ್ಯಾಗಿಯ ಪ್ಯಾಕೆಟ್ಟಿನಲ್ಲಿರುವ ವಿವರಗಳಲ್ಲಿ ಉಲ್ಲೇಖವೇ ಇಲ್ಲ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ತಕ್ಷಣವೇ ಮ್ಯಾಗಿಯನ್ನು ರಾಜ್ಯದಾದ್ಯಂತ ನಿಷೇಧಿಸಿ ಅಪಾಯಕಾರಿ ಆಹಾರವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಖ್ಯಾತ ನೆಸ್ಲೆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಕೇವಲ ಮ್ಯಾಗಿಯಷ್ಟೇ ಅಲ್ಲ, ಇವುಗಳು ಕೂಡ ಅಪಾಯಕಾರಿ!
ಅತ್ತ ರಾಜಧಾನಿಯಲ್ಲಿ ಏನೇ ಸರ್ಕಸ್ಸು ನಡೆಯುತ್ತಿರಲಿ, ಇತ್ತ ನಾವು ನಮ್ಮ ಪಾಡು ನೋಡಿಕೊಂಡಿರುವುದು ಸಾಮಾನ್ಯವಾಗಿ ದಕ್ಷಿಣ ಭಾರತೀಯರ ಲಕ್ಷಣ. ಆದರೆ ಈ ಬಾರಿ ಈ ತರಹದ ನಿರ್ಲಕ್ಷ್ಯ ಸಲ್ಲದು, ಏಕೆಂದರೆ ಹಿರಿಯರಿಗಿಂತಲೂ ಮ್ಯಾಗಿ ನೂಡಲ್ಸ್ ತಿನ್ನುತ್ತಿರುವವರು ಮಕ್ಕಳು. ಯಾವುದೇ ವಿಷಕಾರಿ ವಸ್ತು, ಅತ್ಯಲ್ಪ ಪ್ರಮಾಣದಲ್ಲಿದ್ದರೂ ಮಕ್ಕಳ ಆರೋಗ್ಯ ಬೇಗನೇ ಏರುಪೇರಾಗಬಹುದು.
ನಿಜಕ್ಕೂ ವಿಷಪೂರಿತವೆಂದು ಈಗ ಪ್ರಮಾಣಿತವಾದ ಮ್ಯಾಗಿಯನ್ನು ಪ್ರತಿದಿನ ತಿಂದರೆ ಏನಾಗುತ್ತದೆ? ಈಗಾಗಲೇ ತಿಂದಿದ್ದೇವಲ್ಲ? ನಮ್ಮ ಹೊಟ್ಟೆಯಲ್ಲಿಯೂ ಸೀಸ ಇದೆಯೇ? ಇಂತಹ ಹಲವು ಪ್ರಶ್ನೆಗಳನ್ನು ಜನಸಾಮಾನ್ಯರು ಆಹಾರತಜ್ಞರಲ್ಲಿ ವಿಚಾರಿಸಿದಾಗ ತಿಳಿದುಬಂದ ಮಾಹಿತಿಗಳಲ್ಲಿ ಮಹತ್ವವಾದುದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ...

ಅಷ್ಟಕ್ಕೂ ಸೀಸ ಇರುವ ಮ್ಯಾಗಿ ತಿಂದರೆ ಏನಾಗುತ್ತೆ?
ಸೀಸ ಒಂದು ಲೋಹ. ಪಾದರಸದಂತೆಯೇ ಇದು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಸುಮ್ಮನೇ ಹೊಟ್ಟೆಗೆ ಹೋಗಿ ಅತ್ತ ವಿಸರ್ಜನೆಯಾಗಿದ್ದರೆ ಇಷ್ಟು ಚಿಂತೆಗೆ ಕಾರಣವಿರಲಿಲ್ಲ, ಆದರೆ ಇದು ಕರುಳುಗಳ ಮೂಲಕ ರಕ್ತ ಸೇರಿ ಶಾಶ್ವತವಾಗಿ ದೇಹದಲ್ಲಿಯೇ ಬೀಡು ಬಿಟ್ಟು ನಿಧಾನವಾಗಿ ತನ್ನ ಪ್ರಕೋಪವನ್ನು ತೋರಿಸುತ್ತಾ ಹೋಗುತ್ತದೆ. ಇದರ ನೇರ ಪರಿಣಾಮಗಳಿಲ್ಲದಿದ್ದರೂ ದೇಹದ ಹಲವು ಚಟುವಟಿಕೆಗಳಲ್ಲಿ ಮೂಗು ತೂರಿಸಿ ಹಲವು ಅಡ್ಡ ಪರಿಣಾಮಗಳಾಗಲು ಕಾರಣವಾಗುತ್ತದೆ.ಸೀಸದ ಪ್ರಮಾಣ ದೇಹದಲ್ಲಿ ಹೆಚ್ಚುತ್ತಾ ಹೋದಂತೆ ನರವ್ಯವಸ್ಥೆ ಅತಿ ಹೆಚ್ಚು ಘಾಸಿಗೊಳ್ಳುವ, ಅದರಲ್ಲೂ ಶಾಶ್ವತವಾಗಿ ಘಾಸಿಗೊಳ್ಳುವ ಅಂಗಗಳೆಂದರೆ ಮೆದುಳು, ಮೂತ್ರಪಿಂಡ ಮತ್ತು ಜನನಾಂಗ ವ್ಯವಸ್ಥೆ. ಸೀಸದ ಈ ಪ್ರಕೋಪವನ್ನು ಪೆಟ್ರೋಲಿನ ಹೊಗೆಯನ್ನು ಹೆಚ್ಚು ಸೇವಿಸುವ ಟ್ರಾಫಿಕ್ ಅಧಿಕಾರಿಗಳ ರಕ್ತದಲ್ಲಿ ಕಂಡ ಬಳಿಕ ಈಗ ಸೀಸರಹಿತ ಪೆಟ್ರೋಲನ್ನೇ ಮಾರಬೇಕೆಂದು ಕಾನೂನು ಮಾಡಲಾಗಿದೆ.

ಮ್ಯಾಗಿಯಲ್ಲಿ ಸೀಸದ ಪ್ರಮಾಣ ಎಷ್ಟಿತ್ತು?
ವಿಷ ಎಷ್ಟಿದ್ದರೂ ವಿಷವೇ. ಇದರಲ್ಲಿ ಕೊಂಚ ಕಡಿಮೆ, ಕೊಂಚ ಜಾಸ್ತಿ ಎಂದು ಪ್ರಮಾಣದಲ್ಲಿ ಅಳೆಯುವುದೇ ಪ್ರಮಾದ. ಉತ್ತರ ಪ್ರದೇಶದ FDA (The Department of Food and Drug Adminstration) ಸಂಸ್ಥೆ ನಿಗದಿಪಡಿಸಿದ ಪರಿಮಿತಿಗಳಲ್ಲಿ ಯಾವುದೇ ಆಹಾರದಲ್ಲಿ ಸೀಸದ ಅಂಶ 0.01 ppm ಅಂದರೆ ಹತ್ತು ಲಕ್ಷ ಭಾಗದಲ್ಲಿ 0.01 ಭಾಗ ಕ್ಕೂ ಕಡಿಮೆ ಇರಬೇಕು. ಆದರೆ ಉತ್ತರ ಪ್ರದೇಶದಲ್ಲಿ ಮಾರಾಟಕ್ಕಿದ್ದ ಮ್ಯಾಗಿಯಲ್ಲಿ ಈ ಅಂಶ 17ppm ಕಂಡುಬಂದಿದೆ. ಈ ಪ್ರಮಾಣ ಆಗಾಧವಾಗಿದ್ದು ಮಾನವರ ಸೇವನೆಗೆ ಅನರ್ಹವಾಗಿದೆ ಎಂದು ಸಂಸ್ಥೆ ಪ್ರಮಾಣಪತ್ರ ನೀಡಿರುವುದರಿಂದ ಉತ್ತರ ಪ್ರದೇಶದ ಮ್ಯಾಗಿಯ ಸೇವನೆ ಮಕ್ಕಳಿಗೂ, ಹಿರಿಯರಿಗೂ ಸಲ್ಲದು. ಆದರೆ ದೆಹಲಿ ಸರ್ಕಾರದ ಪ್ರಕಾರ ಈ ಮಿತಿ 2.5 ppm ವರೆಗೂ ಹೋಗಬಹುದು. ಆದರೆ ದೆಹಲಿಯ ಮ್ಯಾಗಿಯಲ್ಲಿಯೂ ಈ ಪ್ರಮಾಣಕ್ಕೂ ಹೆಚ್ಚು ಸೀಸವಿರುವುದರಿಂದ ಈ ಮ್ಯಾಗಿಯೂ ಸುರಕ್ಷಿತವಲ್ಲ.

ಮ್ಯಾಗಿಯಲ್ಲಿ ಎಂ.ಎಸ್.ಜಿ. ಅಂತ ಉಂಟಂತಲ್ಲಾ? ಅದೇನು?
ಅಜಿನೋಮೋಟೋ ಎಂದು ಜನಪ್ರಿಯವಾಗಿರುವ ಮೋನೋಸೋಡಿಯಂ ಗ್ಲುಟಮೇಟ್ ಒಂದು ಬಗೆಯ ಉಪ್ಪು. ಹೆಚ್ಚಾಗಿ ಮಾಂಸದ ಅಡುಗೆಗಳಲ್ಲಿ (ವಿಶೇಷವಾಗಿ ಚೈನೀಸ್ ಅಡುಗೆಗಳಲ್ಲಿ) ಈ ಉಪ್ಪನ್ನು ಸೇರಿಸಲಾಗುತ್ತದೆ. ಮ್ಯಾಗಿಯ ವಿಷಯ ಬಂದಾಗ ಇದರಲ್ಲಿ ಎಷ್ಟು ಪ್ರಮಾಣವಿದೆ ಮತ್ತು ಹಾನಿಕರ ಮಟ್ಟಕ್ಕೆ ಎಷ್ಟು ಹೆಚ್ಚಿದೆ ಎಂಬ ಅಂಶ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ಈ ಉಪ್ಪಿನ ಪ್ರಮಾಣ ಹೆಚ್ಚಾದರೆ ನರವ್ಯವಸ್ಥೆ ಪ್ರಮುಖವಾಗಿ ಬಾಧೆಗೊಳಗಾಗುತ್ತದೆ. ಪರಿಣಾಮವಾಗಿ ತಲೆನೋವು, ಸುಸ್ತು, ತಲೆತಿರುಗುವುದು, ಯಕೃತ್ ನಲ್ಲಿ ಬಾವು ಕಂಡುಬರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅಲ್ಲದೇ ಸ್ಥೂಲಕಾಯ, ಜೀವರಾಸಾಯನಿಕ ಕ್ರಿಯೆಯಲ್ಲಿ ಏರುಪೇರು, ಹಸಿವು ಕಡಿಮೆಯಾಗುವುದು ಮೊದಲಾದ ತೊಂದರೆಗಳೂ ಎದುರಾಗಬಹುದು. ಆದ್ದರಿಂದ ಮ್ಯಾಗಿಯ ಸಹಿತ ಎಲ್ಲಾ ಆಹಾರದಲ್ಲಿಯೂ ಈ ಉಪ್ಪು ಇಲ್ಲದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಅರಿವಿಲ್ಲದೇ ಈಗಾಗಲೇ ಸಾಕಷ್ಟು ಮ್ಯಾಗಿ ತಿಂದುಬಿಟ್ಟಿದ್ದೇವಲ್ಲಾ?
ಸೀಸ ಒಮ್ಮೆ ದೇಹ ಪ್ರವೇಶಿಸಿದರೆ ಶಾಶ್ವತವಾಗಿ ಉಳಿಯುವ ಒಂದು ಧಾತುವಾಗಿದೆ. ಅಲ್ಲದೇ ಪ್ರತಿಬಾರಿ ಸೀಸ ಹೆಚ್ಚಿರುವ ಆಹಾರ, ಗಾಳಿಯನ್ನು ಸೇವಿಸುತ್ತಿದ್ದಂದೆ ಈ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಇದನ್ನು ಸೋಸಿ ತೆಗೆಯುವ ಯಾವುದೇ ವಿಧಾನ ವೈದ್ಯವಿಜ್ಞಾನದಲ್ಲಿ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ಆಂಟಿ ಆಕ್ಸಿಡೆಂಟುಗಳು ಹೆಚ್ಚಿರುವ ಹಣ್ಣುಗಳ ರಸಗಳನ್ನು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಸೀಸ ನಮ್ಮ ದೇಹದ ಮೇಲೆ ಮಾಡುವ ಹಾನಿಯನ್ನು ಕಡಿಮೆಗೊಳಿಸುತ್ತದೆ ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ. ಉದಾಹರಣೆಗೆ ಕ್ರ್ಯಾನ್ಬೆರಿ ಹಣ್ಣುಗಳ ರಸ, ಹಸಿರು ತರಕಾರಿಗಳನ್ನು ಹಸಿಯಾಗಿ ತಿನ್ನುವುದು, ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದ ವಿಷಕಾರಿ ವಸ್ತುಗಳು ಹೊರದೂಡಲ್ಪಡುತ್ತವೆ.

ಮ್ಯಾಗಿ ಮಕ್ಕಳು ತಿಂದರೆ ಹೆಚ್ಚು ಹಾನಿಕಾರಕವೇ?
ಖಂಡಿತವಾಗಿಯೂ ಹೌದು, ಮಕ್ಕಳ ದೇಹ ಬೆಳವಣಿಗೆಯ ಹಂತದಲ್ಲಿರುವುದರಿಂದ ಹಿರಿಯರಿಗಿಂತಲೂ ಹೆಚ್ಚು ಚಟುವಟಿಕೆಗಳು ಅವರ ದೇಹದಲ್ಲಿ ಜರುಗುತ್ತವೆ. ಮ್ಯಾಗಿ ಸಹಿತ ಯಾವುದೇ ಆಹಾರದ ಮೂಲಕ ಸೀಸ ಮಕ್ಕಳ ದೇಹ ಸೇರಿದರೆ ಹಿರಿಯರಿಗಿಂತಲೂ ಎಷ್ಟೋ ಪಟ್ಟು ಬೇಗನೇ ಹೀರಲ್ಪಡುವುದರಿಂದ ಹೆಚ್ಚಿನ ಹಾನಿಯನ್ನು ಅವರು ಅನುಭವಿಸುತ್ತಾರೆ. ಮೆದುಳಿನ ಕ್ಷಮತೆ ಕ್ಷೀಣಿಸುವುದು ಮತ್ತು ಬೆಳವಣಿಗೆಯಲ್ಲಿ ಬಾಧತೆ, ಗಡ್ಡೆಗಳಾಗುವ ಸಂಭವ ಮೊದಲಾದ ತೊಂದರೆಗಳನ್ನೂ ಮಕ್ಕಳು ಎದುರಿಸಬಹುದು.

ಸೀಸ ಮತ್ತು ಅಜಿನೋಮೋಟೋ ಇರುವ ಮ್ಯಾಗಿ ತಿಂದರೆ ಕ್ಯಾನ್ಸರ್ ಬರುತ್ತದೆಯೇ?
ಅಜಿನೋಮೋಟೋ ಮತ್ತು ಸೀಸವನ್ನು ನಿಯಮಿತವಾಗಿ ಸೇವಿಸಿ ದೇಹದಲ್ಲಿ ಆಗಾಧ ಪ್ರಮಾಣದಲ್ಲಿ ಸಂಗ್ರಹವಾದವರು ಕ್ಯಾನ್ಸರ್ ಕಾಯಿಲೆಗೆ ಬಹುಬೇಗನೇ ತುತ್ತಾಗಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಮ್ಯಾಗಿ ಸಹಿತ ಯಾವುದೇ ಸೀಸವಿರುವ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಗೆ ತುತ್ತಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಕೊಂಚ ಅಂತರ್ಜಾಲವನ್ನು ಜಾಲಾಡಿದರೆ ಇಂತಹ ಎಂಟು ಧಾತುಗಳು ಕ್ಯಾನ್ಸರ್ ಉಂಟುಮಾಡಬಲ್ಲವು ಎಂದು ಕಂಡುಕೊಳ್ಳಬಹುದು. ಈ ಬಗ್ಗೆ ಅರಿವು ಮೂಡುವುದು ಅಗತ್ಯವಾಗಿದೆ.

ಪ್ರತಿದಿನ ಒಂದು ಪ್ಯಾಕೆಟ್ ಮ್ಯಾಗಿಯಂತೆ ಒಂದು ವಾರ ತಿಂದರೆ ಏನಾಗುತ್ತದೆ?
ಸೀಸದ ಪ್ರಭಾವ ತಕ್ಷಣಕ್ಕೇ ಕಂಡುಬರುವುದಿಲ್ಲ. ಮ್ಯಾಗಿ ಇರಲಿ, ಬೇರಾವುದೇ ರೂಪದಲ್ಲಿ ಸೀಸ ಪ್ರತಿದಿನ ದೇಹ ಪ್ರವೇಶಿಸಿದರೂ ಪ್ರಥಮ ಕೆಲವು ದಿನಗಳವರೆಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಒಮ್ಮೆ ಈ ಪ್ರಮಾಣ ನಿರ್ದಿಷ್ಟ ಮಟ್ಟಕ್ಕೆ ಸಂಗ್ರಹಗೊಂಡ ಬಳಿಕವೇ ತನ್ನ ಕರಾಳರೂಪವನ್ನು ಪ್ರಕಟಿಸುತ್ತದೆ. ಇದಕ್ಕೆ ಕೆಲವು ವಾರಗಳೇ ಹಿಡಿಯಬಹುದು ಅಥವಾ ವರ್ಷಗಳೇ ಹಿಡಿಯಬಹುದು.

ಒಂದು ತಿಂಗಳು ಸತತವಾಗಿ ತಿಂದರೆ?
ಒಂದು ತಿಂಗಳು ಸತತವಾಗಿ ತಿಂದ ಬಳಿಕ ಹೊಟ್ಟೆನೋವು ಏನಾದರೂ ಕಾಣಿಸಿಕೊಂಡಿತೇ? ಅಜೀರ್ಣ ಬಾಧಿಸಿತೇ ಎಂಬುದನ್ನು ಗಮನಿಸಿ. ಒಂದು ವೇಳೆ ಹೌದು ಎಂದಾದರೆ ನಿಮ್ಮ ದೇಹದಲ್ಲಿ ಅಪಾಯಕರ ಮಟ್ಟದಲ್ಲಿ ಸೀಸ ಸಂಗ್ರಹವಾಗಿದೆ ಎಂದು ಅರ್ಥ. ಜೊತೆಗೇ ಹೊಟ್ಟೆಯುರಿ, ಹುಳಿತೇಗು, ತಲೆಸುತ್ತುವುದು ಮೊದಲಾದ ತೊಂದರೆಗಳೂ ಎದುರಾಗಬಹುದು.

ಸೀಸದ ಹೊರತಾಗಿ ಮ್ಯಾಗಿ ಉತ್ತಮ ಆಹಾರವೇ?
ಮ್ಯಾಗಿ ನೂಡಲ್ಸ್ ಗೆ ಪ್ರಮುಖವಾಗಿರುವ ಸಾಮಾಗ್ರಿ ಎಂದರೆ ಮೈದಾಹಿಟ್ಟು. ಇದು ನಾರು ಇಲ್ಲದೇ ಇರುವ ಆಹಾರವಾದುದರಿಂದ ಮ್ಯಾಗಿ ಸೇವನೆ ಮಲಬದ್ದತೆಯುಂಟುಮಾಡಬಹುದು. ಜೊತೆಗೇ ಇದನ್ನು ಕೆಡದೇ ಇರಲು ಸಂರಕ್ಷಕ (preservatives) ಗಳನ್ನು ಉಪಯೋಗಿಸಲಾಗುತ್ತದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸೋಡಿಯಂ ಧಾತು ಇರುತ್ತದೆ. ಇದು ಹೆಚ್ಚಿದ್ದಷ್ಟೂ ಹೃದಯದೊತ್ತಡ ಹೆಚ್ಚುವ ಸಂಭವವಿದೆ. ಆದ್ದರಿಂದ ಮ್ಯಾಗಿ ಆರೋಗ್ಯಕರ ಆಹಾರ ಅಲ್ಲವೇ ಅಲ್ಲ. ಇದು ಕೇವಲ ಸೋಮಾರಿಗಳನ್ನು ಇನ್ನಷ್ಟು ಸೋಮಾರಿಗಳಾಗಿಸುವ, ಆರೋಗ್ಯವಂತರನ್ನು ಅನಾರೋಗ್ಯವಂತರನ್ನಾಗಿಸುವ ಒಂದು ಲಾಭಕರ ವಸ್ತು ಅಷ್ಟೇ.

ಇದರ ಪ್ಯಾಕೆಟ್ಟಿನಲ್ಲಿ ಬರೆದಿರುವ ಪ್ರಕಾರ ಇದು ಪೋಷಕಾಂಶಗಳ ಆಗರವೇ?
ಯಾವುದೇ ಆಹಾರದಲ್ಲಿ ಕೇವಲ ಪೋಷಕಾಂಶಗಳಿದ್ದರೆ ಸಾಲದು. ಸಾಕಷ್ಟು ನಾರು, ನೀರು ಮತ್ತು ಮಿತಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳಿರಬೇಕು. ಮ್ಯಾಗಿಯಲ್ಲಿ ಪ್ರೋಟೀನ್ ಮತ್ತು ಪೋಷಕಾಂಶಗಳು ಅಗತ್ಯಕ್ಕೂ ಹೆಚ್ಚಿದ್ದರೆ ನಾರು ಇಲ್ಲವೇ ಇಲ್ಲ. ಜೊತೆಗೇ ಅಗತ್ಯಕ್ಕಿಂತಲೂ ಹೆಚ್ಚು ಕಾರ್ಬೋಹೈಡ್ರೇಟುಗಳಿರುವುದರಿಂದ ದೇಹಕ್ಕೆ ಅಗತ್ಯವಾದುದನ್ನು ನೀಡದೇ ಅನಗತ್ಯವಾದುದನ್ನು ಅಗತ್ಯಕ್ಕೂ ಹೆಚ್ಚು ನೀಡಿ ದೇಹದ ಸಮತೋಲನವನ್ನು ಏರುಪೇರಾಗಿಸುತ್ತದೆ. ಯಾವಾಗಲೋ ಒಮ್ಮೆ ತಿಂದರೆ ಈ ಏರುಪೇರು ಸ್ವಲ್ಪ ಸರಿಪಡಿಸಬಹುದು. ಆದರೆ ಪ್ರತಿದಿನದ ಸೇವನೆ ಖಂಡಿತವಾಗಿಯೂ ಅನಾರೋಗ್ಯಕರವಾಗಿದೆ.

ಮ್ಯಾಗಿ ಓಟ್ಸ್ ಮತ್ತು ಮ್ಯಾಗಿ ಆಟಾ ನೂಡಲ್ಸ್ ಇವೆಯೆಲ್ಲಾ, ಆರೋಗ್ಯಕರವೇ?
ಮ್ಯಾಗಿಯಲ್ಲಿ ಓಟ್ಸ್ ಮತ್ತು ಆಟಾ (ಗೋಧಿಹಿಟ್ಟು) ಇದೆ ಎಂದಾಕ್ಷಣ ಇವು ಮಾತ್ರವೇ ಇವೆ ಎಂದರ್ಥವಲ್ಲ. ನೂಡಲ್ಸ್ ಗೆ ಮೈದಾಹಿಟ್ಟು ಕಲಸುವಾಗ ಸುಮ್ಮನೇ ಹೆಸರಿಗೆ ಸ್ವಲ್ಪ ಪ್ರಮಾಣಕ್ಕೆ ಸೇರಿಸುತ್ತಾರಷ್ಟೇ. ಇನ್ನುಳಿದಂತೆ ಒಟ್ಟಾರೆ ಪ್ರಮಾಣದಲ್ಲಿ ಮೈದಾ ಪ್ರಮಾಣ ಕೊಂಚ ಕಡಿಮೆಯಾಗುತ್ತದೆ, ಉಳಿದ ಸಾಮಾಗ್ರಿಗಳೆಲ್ಲಾ ಯಥಾಪ್ರಕಾರವೇ ಇರುತ್ತವೆ. ಮಸಾಲಾದಲ್ಲಿ ಕೊಂಚ ಮಸಾಲೆಪುಡಿಗಳನ್ನು ರುಚಿಗಾಗಿ ಸೇರಿಸಿರುತ್ತಾರೆ. ಒಟ್ಟಾರೆ ಯಾವುದೇ ರೂಪ ಧರಿಸಿ ಬಂದರೂ ಕುರಿಚರ್ಮ ಹೊದ್ದ ನರಿಯಂತೆ ಮ್ಯಾಗಿ ವಿಷಕಾರಿಯೇ ಆಗಿದೆ.

ಒಂದು ವೇಳೆ ಮ್ಯಾಗಿಯಲ್ಲಿ ಸೀಸ ಇಲ್ಲ ಎಂದು ಸಿದ್ಧವಾದರೆ ಎಷ್ಟು ಪ್ರಮಾಣದಲ್ಲಿ ತಿನ್ನಬಹುದು?
ಒಂದು ವೇಳೆ ಸೀಸವಿಲ್ಲದ ಮ್ಯಾಗಿ ಲಭ್ಯವಾದರೆ ವಯಸ್ಕರು ಹದಿನೈದು ದಿನಕ್ಕೊಂದು ಪ್ಯಾಕೆಟ್ ತಿಂದರೆ ಸಾಕು. ಇದು ಕೇವಲ ಸಮಯವಿಲ್ಲದೇ ಇರುವ ಹೊತ್ತಿನ ಆಪತ್ಕಾಲದ ಬಾಂಧವ ಎಂದು ಪರಿಗಣಿಸಬೇಕೇ ಹೊರತು ಪ್ರತಿದಿನ ತಿನ್ನುವುದರಿಂದ ಯಾವುದೇ ಆರೋಗ್ಯಕರ ಲಾಭಗಳಿಲ್ಲ. ಮಕ್ಕಳು ತಿನ್ನದೇ ಇದ್ದರೆ ಒಳ್ಳೆಯದು. ತೀರಾ ಹಠ ಮಾಡಿದರೆ ತಿಂಗಳಿಗೊಂದು ಪ್ಯಾಕೆಟ್ ನೀಡಬಹುದು.

ಹದಿನೈದು ದಿನಕ್ಕೊಮ್ಮೆ ಯಾವ ಮ್ಯಾಗಿ ಸೇವಿಸಬಹುದು ಎಂದು ನೀವು ಸಲಹೆ ನೀಡುತ್ತೀರಿ?
ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವ ಈ ನೂಡಲ್ಸ್ ಎಲ್ಲರ ನೆಚ್ಚಿನ ಆಹಾರ. ಹಾಸ್ಟೆಲಿನಲ್ಲಿರುವವರ ಪಾಲಿಗೆ ನಿತ್ಯದ ಖಾದ್ಯವಾಗಿರುವ ಈ ನೂಡಲ್ಸ್ ವಾಸ್ತವವಾಗಿ ನಿಧಾನವಾಗಿ ಆಕ್ರಮಿಸುವ ರಾಕ್ಷಸ. ನೂಡಲ್ಸ್ ಗೆ ಬದಲಾಗಿ ಎಷ್ಟೋ ಸಾಂಪ್ರಾದಾಯಿಕ ಆಹಾರಗಳಿವೆ. ಆದರೆ ನಮ್ಮ ಅವಗಣನೆಗೆ ಒಳಗಾಗಿದೆ. ಉತ್ತಮ ಉದಾಹರಣೆ ಎಂದರೆ ಒಣಗಿಸಿದ ಅಕ್ಕಿ ಶ್ಯಾವಿಗೆ. ನೂಡಲ್ಸ್ ನಂತೆಯೇ ಒಂದೆರಡು ನಿಮಿಷಗಳ ಕಾಲ ಕುದಿನೀರಿನಲ್ಲಿಟ್ಟು ಹೊರತೆಗೆದು ಸೋಸಿ ಹರಡಿದರೆ ಸಾಕು, ಮಲ್ಲಿಗೆ ಹರಡಿದಂತೆ ಬಿಳಿಯ ಶ್ಯಾವಿಗೆ ಸಿದ್ಧ. ಇದನ್ನು ಸಾರಿನೊಂದಿಗೂ, ತೆಂಗಿನ ತುರಿ ಸಕ್ಕರೆ ಸೇರಿಸಿಯೂ ಸೇವಿಸಬಹುದು. ಪುಳಿಯೋಗರೆ, ಮೊಸರನ್ನ ಮೊದಲಾದವೂ ಧಿಡೀರನೇ ತಯಾರಾಗುತ್ತವೆ.

ಮ್ಯಾಗಿಯನ್ನು ಯಾವ ಹೊತ್ತಿನ ಆಹಾರವನ್ನಾಗಿ ಸೇವಿಸಿದರೆ ಸೂಕ್ತ?
ಮ್ಯಾಗಿಯನ್ನು ಬೆಳಗ್ಗಿನ ಉಪಾಹಾರವಾಗಿ ಎಂದಿಗೂ ಸೇವಿಸಬೇಡಿ. ಏಕೆಂದರೆ ಮ್ಯಾಗಿಯಲ್ಲಿ ಮೈದಾ ಪ್ರಮುಖವಾದುದರಿಂದ ಮತ್ತು ಕಾರ್ಬೋಹೈಡ್ರೇಟುಗಳು ಅಗತ್ಯಕ್ಕೂ ಹೆಚ್ಚಿರುವುದರಿಂದ ಮಲಬದ್ದತೆ, ತಲೆಸುತ್ತುವಿಕೆ ಎದುರಾಗಬಹುದು. ಅಲ್ಲದೇ ಬೆಳಗ್ಗಿನ ಉಪಾಹಾರದ ಮೂಲಕ ಮೆದುಳಿಗೆ ತಕ್ಷಣ ರಕ್ತಸಂಚಾರ ಹೆಚ್ಚಿಸಲು ಮ್ಯಾಗಿಯಲ್ಲಿ ಏನೂ ಇಲ್ಲ. ಆದರೆ ಇದು ನಮ್ಮ ಇಡ್ಲಿ ದೋಸೆಗಳಲ್ಲಿದೆ! ಆದ್ದರಿಂದ ಮ್ಯಾಗಿಯನ್ನು ಸಂಜೆಯ ಲಘು ಆಹಾರವಾಗಿ ಅಥವಾ ಮದ್ಯಾಹ್ನದ ಊಟದ ಬಳಿಕ (ಊಟದ ಬದಲಿಗೆ ಅಲ್ಲ!) ಅಪರೂಪಕ್ಕೊಮ್ಮೆ ಸೇವಿಸಬಹುದು.

ಮ್ಯಾಗಿಯಲ್ಲಿ ತರಕಾರಿಯನ್ನು ಒಣಗಿಸಿ ಸೇರಿಸಿರುತ್ತಾರಲ್ಲ? ಇದು ಸುರಕ್ಷಿತವೇ?
ತರಕಾರಿಗಳನ್ನು ತಾಜಾ ಇದ್ದಂತೆಯೇ ಸೇವಿಸುವುದರಿಂದ ಮಾತ್ರ ಅದರ ಅತಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಮ್ಯಾಗಿಯಲ್ಲಿರುವ ಒಣತರಕಾರಿಯನ್ನು ತಯಾರಿಸುವಾಗ ನೀರಿನಂಶವನ್ನು ತೆಗೆದಿರುತ್ತಾರೆ. ಅಲ್ಲದೇ ಕೆಡದಿರಲು ಸಂರಕ್ಷಕಗಳನ್ನೂ ಸೇರಿಸಿರುತ್ತಾರೆ. ಇದು ನೀರಿನಲ್ಲಿ ಬೆಂದ ಬಳಿಕವೂ ತನ್ನ ನೈಸರ್ಗಿಕ ನೀರಿನಂಶವನ್ನು ಪಡೆಯದು. ಈ ತರಕಾರಿಯನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳು ಬಹಳ ಕಷ್ಟಪಡಬೇಕಾಗುತ್ತದೆ. ಪರಿಣಾಮವಾಗಿ ಜೀರ್ಣವ್ಯವಸ್ಥೆ ನಿಧಾನಗೊಂಡು ಆರೋಗ್ಯ ಏರುಪೇರಾಗಬಹುದು. ಆದ್ದರಿಂದ ಮ್ಯಾಗಿಯಲ್ಲಿರುವ ಒಣ ತರಕಾರಿಯ ಸೇವನೆ ಉಚಿತವಲ್ಲ.

ಸುಲಭ ಎನ್ನುವ ಕಾರಣಕ್ಕೆ ನನ್ನ ಮಗನಿಗೆ ತಿನ್ನಿಸುತ್ತಿದ್ದೇನೆ. ಇದು ಸುರಕ್ಷಿತವೇ?
ಮಕ್ಕಳ ಆಹಾರದಲ್ಲಿ ಪ್ರೋಟೀನು, ಕಾರ್ಬೋಹೈಡ್ರೇಟು ಮತ್ತು ನಾರು ಹೆಚ್ಚಿನ ಪ್ರಮಾಣದಲ್ಲಿರಬೇಕು. ಮ್ಯಾಗಿಯಲ್ಲಿ ಈ ಎಲ್ಲ ಅಂಶಗಳು ಏರುಪೇರಾಗಿರುವುದರಿಂದ ಮಕ್ಕಳಿಗೆ ಈ ಆಹಾರ ಸಲ್ಲದು. ಅದರಲ್ಲೂ ಬೆಳಗ್ಗಿನ ಉಪಾಹಾರವನ್ನಾಗಿ ಖಂಡಿತಾ ನೀಡಕೂಡದು. ಆಗುವುದೇ ಇಲ್ಲ ಎಂಬ ಸ್ಥಿತಿಗೆ ಬಂದಿದ್ದಾಗ ಮಾತ್ರ ರುಚಿ ಬದಲಿಗಾಗಿ ಕೇವಲ ತಿಂಗಳಿಗೊಂದು ಬಾರಿ ಮಾತ್ರ ನೀಡಬಹುದು.

ಮ್ಯಾಗಿ ತಿನ್ನಲು ಮಕ್ಕಳು ಎಷ್ಟು ವಯಸ್ಸಿನವರಾಗಿರಬೇಕು?
ತಿಂಗಳಿಗೊಂದು ಸಲ ತಿನ್ನಿಸಬೇಕಾದರೂ ಮಕ್ಕಳಿಗೆ ಕನಿಷ್ಟ ಐದು ವರ್ಷವಾದರೂ ಆಗಿರಬೇಕು. ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಮ್ಯಾಗಿ ನೀಡುವುದು ಸಲ್ಲದು.

ನಮ್ಮ ಮಗುವಿಗೆ ಈಗ ಮೂರು ವರ್ಷ. ಮ್ಯಾಗಿ ತಿನ್ನಿಸಬಹುದೇ?
ಮೊದಲ ಐದು ವರ್ಷಗಳವರೆಗೆ ಮಕ್ಕಳ ದೇಹಕ್ಕಿಂತ ಮೆದುಳಿನ ಬೆಳವಣಿಗೆ ಹೆಚ್ಚು ಶೀಘ್ರವಾಗಿ ಆಗುತ್ತದೆ. ಈ ಸಮಯದಲ್ಲಿ ಉತ್ತಮ ಪೋಷಕಾಂಶಗಳ ಅಗತ್ಯವಿದೆ. ಒಂದು ವೇಳೆ ಚಿಕ್ಕ ವಯಸ್ಸಿನಲ್ಲಿ ಸೀಸ ಹೆಚ್ಚಿರುವ ಆಹಾರ ನೀಡಿದರೆ ಅದು ಮೆದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರಿ ಬೆಳವಣಿಗೆಗೆ ಹಾನಿಯುಂಟುಮಾಡುತ್ತದೆ. ಆದ್ದರಿಂದ ವಯಸ್ಸಿಗೆ ಸಹಜವಾದ ಮೆದುಳಿನ ಬೆಳವಣಿಗೆಯನ್ನು ಪಡೆಯದೇ ಮಕ್ಕಳು ಮಂಕಾಗುತ್ತಾರೆ. ಆದ್ದರಿಂದ ಐದು ವರ್ಷ ವಯಸ್ಸಾಗುವವರೆಗೂ ಮ್ಯಾಗಿ ಸಹಿತ ಇತರ ಸಿದ್ಧ ಆಹಾರಗಳನ್ನು ನೀಡಬೇಡಿ. ಉತ್ತಮ ಪೋಷಕಾಂಶವಿರುವ ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರವನ್ನೇ ನೀಡಿ. ನಿಮ್ಮ ಮಗುವಿಗಾಗಿ ಉತ್ತಮ ಆಹಾರ ಸಿದ್ಧಪಡಿಸಲು ನೀವು ವ್ಯಯಿಸುವ ಸಮಯವೂ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲುದು. ಸಿದ್ಧ ಆಹಾರವನ್ನೇ ನೆಚ್ಚುವ ಮಗು ಬೆಳೆದ ಬಳಿಕ ತಾಯಿಗೆ ಇದೇ ವಿಷಯವನ್ನು ಹಿಡಿದು ಎದುರುತ್ತರ ನೀಡಲೂ ಹಿಂದೆನೋಡುವುದಿಲ್ಲ.ವುದರಿಂದ ನಿಜಕ್ಕೂ ಏನು ಹಾನಿಯಾಗುತ್ತದೆ? ಬಲ್ಲಿರಾ?



Click it and Unblock the Notifications











