ಹೃದಯದ ಆರೋಗ್ಯವನ್ನು ವೃದ್ಧಿಸುವ ಏಳು ಅದ್ಭುತ ಅಡುಗೆ ಎಣ್ಣೆಗಳು

By Super

ಹೆಚ್ಚಿನ ಹೃದಯಾಘಾತಗಳಿಗೆ ಮೂಲ ಕಾರಣ ಅವರ ರಕ್ತನಾಳಗಳಲ್ಲಿ ಅಧಿಕ ಪ್ರಮಾಣದಲ್ಲಿ ಶೇಖರವಾಗಿದ್ದ ಕೊಲೆಸ್ಟ್ರಾಲ್ ಎಂಬ ವಿಷ ಜಿಡ್ಡು ಎಂಬ ವಿಷಯ ಕಳವಳ ಮೂಡಿಸುತ್ತದೆ. ಹಾಗಾದರೆ ಈ ಕೊಲೆಸ್ಟ್ರಾಲ್ ಬಂದದ್ದೆಲ್ಲಿಂದ? ಇದಕ್ಕೆ ಉತ್ತರ ಸರಳವಾಗಿ ಹೇಳುವುದಾದರೆ ರೋಗಿ ತನ್ನ ಜೀವಿತಾವಧಿಯಲ್ಲಿ ಸೇವಿಸುತ್ತಾ ಬಂದಿರುವ ಅಡುಗೆ ಎಣ್ಣೆಯಿಂದ! ಹಿಂದೆ ನಮ್ಮ ಹಿರಿಯರಿಗೆ ಅಡುಗೆ ಎಣ್ಣೆಯಲ್ಲಿ ಆಯ್ಕೆ ತುಂಬಾ ಕಡಿಮೆ ಇತ್ತು. ಆಯಾ ಪ್ರದೇಶದಲ್ಲಿ ಹೆಚ್ಚಾಗಿ ಸಿಗುತ್ತಿದ್ದ ಎಣ್ಣೆಯ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯ ಗಾಣಗಳಿಂದ ತೆಗೆಯಲಾಗುತ್ತಿತ್ತು.

ಇವು ಹೆಚ್ಚು ಕಡಿಮೆ ಸಂಸ್ಕರಿಸದೇ ಇದ್ದುದರಿಂದ ಅಶುದ್ಧವಾಗಿರುತ್ತಿದ್ದವು. ಅಲ್ಲದೇ ಈ ಎಣ್ಣೆ ಆರೋಗ್ಯಕ್ಕೆ ಉತ್ತಮವೇ ಅಲ್ಲವೇ ಎಂದು ಪರಿಗಣಿಸಲು ಯಾವುದೇ ಪರೀಕ್ಷೆಯಾಗಲೀ ಮಾಹಿತಿಯಾಗಲಿ ಇರಲಿಲ್ಲ. ಒಟ್ಟಾರೆ ಅಂಗಡಿಯಲ್ಲಿ ಅಗ್ಗವಾಗಿ ಸಿಕ್ಕಿದರೆ ಸರಿ. ಹಿಂದೆ ಡಾಲ್ಡಾ ಎಂಬ ವನಸ್ಪತಿ ಹೇರಳವಾಗಿ ಮಾರಾಟವಾಗುತ್ತಿತ್ತು. ಅಗ್ಗ ಎಂಬ ಒಂದೇ ಕಾರಣಕ್ಕೆ ಹೋಟೆಲುಗಳಿಂದ ಹಿಡಿದು ಮನೆಮನೆಗಳಲ್ಲಿ ಇದರ ಬಳಕೆಯಾಗುತ್ತಿತ್ತು.

ಇತ್ತೀಚೆಗೆ ಈ ವನಸ್ಪತಿ ದೇಹಕ್ಕೆ ಎಷ್ಟು ಮಾರಕ ಎಂದು ಖಚಿತಪಡಿಸಿದ ಬಳಿಕ ಮಾರುಕಟ್ಟೆಯಿಂದ ಅದೃಶ್ಯವಾಗಿದೆ. ಆದರೆ ಇದಕ್ಕೂ ಮೊದಲು ಈ ವನಸ್ಪತಿಯಿಂದ ತಯಾರಿಸಿದ್ದ ಆಹಾರ ಸೇವಿಸಿದ್ದವರ ರಕ್ತನಾಳಗಳಲ್ಲಿ ಇಂದಿಗೂ ಎಲ್ಲೋ ಅಂಟಿಕೊಂಡಿರಬಹುದು. ಇದೇ ಮುಂದೆ ಹೃದಯಾಘಾತಕ್ಕೂ ಕಾರಣವಾಗುವ ಸಾಧ್ಯತೆಗಳು ಹೆಚ್ಚು.

ಇಂದು ಅಡುಗೆ ಎಣ್ಣೆಯ ಬಗ್ಗೆ ವೈದ್ಯರು ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎಣ್ಣೆ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಹೃದಯಕ್ಕೆ ಹೊರೆಯಾಗದಂತೆ, ಅಂದರೆ ಕೊಲೆಸ್ಟ್ರಾಲ್ ರಹಿತವಾಗಿಸಿ ನೀಡುವ ಮೂಲಕ ಗ್ರಾಹಕರ ಆರೋಗ್ಯವನ್ನು ಪರಿಗಣಿಸುತ್ತಿವೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಲ್ಲದೇ ಎಣ್ಣೆರಹಿತವಾಗಿ ಅಡುಗೆ ಮಾಡಲು ನಾನ್ ಸ್ಟಿಕ್ (ಅಂಟಿಕೊಳ್ಳದ ಗುಣವುಳ್ಳ) ಪಾತ್ರೆಗಳನ್ನು ಉಪಯೋಗಿಸಿ ಎಣ್ಣೆಯನ್ನು ಕನಿಷ್ಟ ಪ್ರಮಾಣದಲ್ಲಿ ಬಳಸುವ ಮೂಲಕ ದೇಹಕ್ಕೆ ಕೊಲೆಸ್ಟ್ರಾಲ್ ಆಗಮಿಸುವುದನ್ನು ತಡೆಯುತ್ತಾರೆ. ಆದರೆ ಕಲವು ಅಡುಗೆಗಳು ಕೊಂಚವಾದರೂ ಎಣ್ಣೆಯಿಲ್ಲದೇ ಇದ್ದರೆ ಸರಿಯಾದ ರುಚಿ ಬಾರದು ಎಂದು ಹೆಚ್ಚಿನ ಬಾಣಸಿಗರು ಅಭಿಪ್ರಾಯ ಪಡುತ್ತಾರೆ. ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

ಹಾಗಾದರೆ ಆರೋಗ್ಯವನ್ನೂ ಕಾಪಾಡಿಕೊಂಡು ರುಚಿಯಾದ ಆಹಾರಗಳನ್ನೂ ಸೇವಿಸುವುದು ಹೇಗೆ? ಇದಕ್ಕೆ ಉತ್ತರ ಹೃದಯಕ್ಕೆ ಕೆಡುಕನ್ನುಂಟುಮಾಡದ, ಆದರೆ ರುಚಿಯಲ್ಲಿಯೂ ಕೊರತೆಯಾಗದ ಎಣ್ಣೆಯ ಆಯ್ಕೆ. ಈ ಆಯ್ಕೆಯನ್ನು ಸುಲಭಗೊಳಿಸಲು ಬೋಲ್ಡ್ ಸ್ಕೈ ತಂಡ ಅಡುಗೆ ಎಣ್ಣೆಗಳಲ್ಲಿ ಹೃದಯಕ್ಕೆ ಅತ್ಯುತ್ತಮವಾದ ಏಳು ಎಣ್ಣೆಗಳ ಬಗ್ಗೆ ಮಾಹಿತಿ ನೀಡುತ್ತಿದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಬೆಲೆಯನ್ನು ಕಡೆಗಣಿಸಿ ಆರೋಗ್ಯವನ್ನು ಪರಿಗಣಿಸಿದರೆ ಆಲಿವ್ ಎಣ್ಣೆ ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆಯಾಗಿದೆ. ಭಾರತದಲ್ಲಿ ಇದನ್ನು ಬೆಳೆಯುವುದಿಲ್ಲವಾದುದರಿಂದ ಆಮದು ಮಾಡಿಕೊಳ್ಳಬೇಕಾದ ಕಾರಣ ದುಬಾರಿ ಎಂಬ ಒಂದು ಕಾರಣ ಬಿಟ್ಟರೆ ಆಲಿವ್ ಎಣ್ಣೆಯನ್ನು ತಿರಸ್ಕರಿಸಲು ಯಾವುದೇ ಕಾರಣ ಉಳಿಯುವುದಿಲ್ಲ. ರುಚಿಯಲ್ಲಿ ಯಾವುದೇ ಎಣ್ಣೆಗೆ ಕಡಿಮೆಯಿಲ್ಲದ, ಆರೋಗ್ಯದಲ್ಲಿ ಹೃದಯಕ್ಕೆ ಅತ್ಯುತ್ತಮವಾದ ಈ ಎಣ್ಣೆ ಶೀಘ್ರವೇ ಇಡಿಯ ವಿಶ್ವದಲ್ಲಿಯ ಗೃಹಿಣಿಯರ ಅಚ್ಚುಮೆಚ್ಚಿನ ಎಣ್ಣೆಯಾಗಿದೆ. ಈ ಎಣ್ಣೆಯಲ್ಲಿರುವ ಪಾಲಿಫಿನಾಲ್ (polyphenol) ಎಂಬ ಆಂಟಿ ಆಕ್ಸಿಡೆಂಟುಗಳು ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ನೆರವಾಗುವುದರಿಂದ ದೇಹದ ರಕ್ತನಾಳಗಳಲ್ಲಿ ಶೇಖರವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಹೊರಹೋಗತೊಡಗುತ್ತದೆ. ನಿಯಮಿತ ಸೇವನೆಯಿಂದ ದೇಹದಲ್ಲಿ ಶೇಖರವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಾ ಹೋದಂತೆ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತಾ ಆರೋಗ್ಯ ವೃದ್ಧಿಸುತ್ತದೆ.

ಕ್ಯಾನೋಲಾ ಎಣ್ಣೆ

ಕ್ಯಾನೋಲಾ ಎಣ್ಣೆ

ಕ್ಯಾನೋಲಾ ಎಂಬ ಹೂವಿನ ಬೀಜಗಳಿಂದ ಹಿಂಡಿ ತೆಗೆದಿರುವ ಎಣ್ಣೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಈ ಎಣ್ಣೆ ಆಲಿವ್ ಎಣ್ಣೆಗಿಂತ ಕೊಂಚ ಅಗ್ಗವಾಗಿರುವ ಕಾರಣ ಹೆಚ್ಚಿನ ಎಣ್ಣೆಯ ಅಗತ್ಯವಿರುವ ಅಡುಗೆಗಳಿಗೆ ಉಪಯೋಗಿಸಲು ಯೋಗ್ಯವಾಗಿದೆ. ಈ ಎಣ್ಣೆಯ ಬೆಂಕಿ ಹತ್ತಿಕೊಳ್ಳುವ ತಾಪಮಾನ ಹೆಚ್ಚಿರುವುದರಿಂದ ಬೇಕರಿ ತಿಂಡಿಗಳು ಮತ್ತು ಒಗ್ಗರಣೆ ಅಗತ್ಯವಿರುವ ವ್ಯಂಜನಗಳಿಗೆ ಸೂಕ್ತವಾಗಿದೆ. ಈ ಎಣ್ಣೆಯ ಸೇವನೆಯಿಂದಲೂ ರಕ್ತನಾಳಗಳಲ್ಲಿ ಶೇಖರವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ತೊಲಗುತ್ತಾ ಬರುತ್ತದೆ.

ತೌಡಿನ ಎಣ್ಣೆ

ತೌಡಿನ ಎಣ್ಣೆ

ಅಕ್ಕಿಯನ್ನು ಪಾಲಿಶ್ ಮಾಡಿದಾದ ಅಕ್ಕಿಕಾಳಿನ ಹೊರಕವಚ ಪುಡಿಯ ರೂಪದಲ್ಲಿ ಹೊರಬರುತ್ತದೆ. ಈ ಪುಡಿಯಲ್ಲಿ ಅಲ್ಪ ಪ್ರಮಾಣದಲ್ಲಿ ಎಣ್ಣೆಯ ಅಂಶ ಇರುತ್ತದೆ. ಈ ಎಣ್ಣೆಯನ್ನು ಹಿಂಡಿ ತೆಗೆದಾದ ಲಭ್ಯವಾಗುವ ಎಣ್ಣೆಯೇ ತೌಡಿನ ಎಣ್ಣೆ (rice bran oil). ಇದರ ರುಚಿ ಇತರ ಅಡುಗೆ ಎಣ್ಣೆಗಳಿಗಿಂತ ಕೊಂಚ ಭಿನ್ನವಾಗಿದ್ದ ಕಾರಣ ಮತ್ತು ತೌಡಿನಿಂದ ತೆಗೆದಿದ್ದು ಎಂಬ ನಿಕೃಷ್ಟತಾ ಭಾವನೆಯಿಂದ ಜನರ ಅಸಡ್ಡೆಗೆ ಗುರಿಯಾಗಿತ್ತು. ಆದರೆ ಇದರ ನಿಜವಾದ ಗುಣಗಳನ್ನು ಪ್ರಕಟಿಸಿದ ಬಳಿಕ ಈಗ ಮತ್ತೆ ಈ ಎಣ್ಣೆ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಇದರಲ್ಲಿರುವ ಒರೈಜ಼ನಾಲ್ (oryzanol) ಎಂಬ ಪೋಷಕಾಂಶ ರಕ್ತದಲ್ಲಿ ಬೀಡು ಬಿಟ್ಟಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ನೆರವಾಗುತ್ತದೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ರುಚಿಯಲ್ಲಿ ಕೊಂಚ ಖಾರವಾಗಿರುವ ಗಾಢ ಹಳದಿ ಬಣ್ಣದ ಸಾಸಿವೆ ಎಣ್ಣೆ ಇದುವರೆಗೆ ಉತ್ತರ ಭಾರತದ ಅಚ್ಚುಮೆಚ್ಚಿನ ಎಣ್ಣೆಯಾಗಿತ್ತು. ಈಗ ವಿಶ್ವದಾದ್ಯಂತ ಲಭ್ಯವಾಗುತ್ತಿರುವ ಈ ಎಣ್ಣೆ ಅಸಂಪೂರ್ಣ (polyunsaturated) ವಾಗಿರುವುದರಿಂದ ಹೃದಯಕ್ಕೆ ಉತ್ತಮವಾಗಿದೆ. ಬೆಂಕಿ ಹತ್ತಿಕೊಳ್ಳುವ ತಾಪಮಾನ ಹೆಚ್ಚಿರುವುದರಿಂದ ಒಗ್ಗರಣೆ ಅಗತ್ಯವಿರುವ ಅಡುಗೆ ಮತ್ತು ಬೇಕರಿ ತಿಂಡಿಗಳಿಗೆ ಉಪಯೋಗಿಸಬಹುದಾಗಿದೆ.

ಸಸ್ಯಾಹಾರಿ ಎಣ್ಣೆ

ಸಸ್ಯಾಹಾರಿ ಎಣ್ಣೆ

ವೆಜಿಟೇಬಲ್ ಆಯಿಲ್ ಎಂಬ ಹಣೆಪಟ್ಟಿ ಹೊತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಎಣ್ಣೆಯಲ್ಲಿ ವಿವಿಧ ಬೀಜಗಳಿಂದ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆಯಲಾಗಿರುವ ಎಣ್ಣೆಗಳ ಮಿಶ್ರಣವಾಗಿರುತ್ತದೆ. ಸೂರ್ಯಕಾಂತಿ, ಕುಸುಬೆ (safflower) ಮತ್ತು ತೌಡಿನ ಎಣ್ಣೆಗಳ ಮಿಶ್ರಣವಾಗಿರುವ ಈ ಎಣ್ಣೆಯಲ್ಲಿ ಎಲ್ಲಾ ಎಣ್ಣೆಗಳ ಒಳ್ಳೆಯ ಗುಣಗಳು ಮಿಳಿತವಾಗಿವೆ. ಇದನ್ನು ವಿವಿಧ ರೀತಿಯ ಹುರಿಯುವ, ಕರಿಯುವ ತಿಂಡಿ ಮತ್ತು ಒಗ್ಗರಣೆ ಅಗತ್ಯವಿರುವ ಅಡುಗೆಗಳಿಗೆ ಬಳಸಬಹುದು. ಈ ಎಣ್ಣೆಯಲ್ಲಿ ಕರಿದ ತಿಂಡಿಗಳು ಎಣ್ಣೆಯನ್ನು ಹೆಚ್ಚು ಹೀರದೇ ಇರುವ ಕಾರಣ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಕಡಿಮೆ ಎಣ್ಣೆಯಲ್ಲಿ ಹೆಚ್ಚಿನ ತಿಂಡಿಗಳನ್ನೂ ತಯಾರಿಸಬಹುದು. ಬೆಲೆ ಕೂಡಾ ಕಡಿಮೆ ಇರುವ ಕಾರಣ ಹುರಿಯುವ ಅಗತ್ಯಕ್ಕೆ ಈ ಎಣ್ಣೆ ಹೇಳಿ ಮಾಡಿಸಿದಂತಿದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ಎಣ್ಣೆಗಳಲ್ಲಿಯೇ ಅತ್ಯಂತ ತೆಳ್ಳಗಿರುವ ಎಣ್ಣೆಯಾದ ಎಳ್ಳೆಣ್ಣೆ ಭಾರತ ಸಹಿತ ಇತರ ಏಷಿಯಾ ರಾಷ್ಟ್ರಗಳಲ್ಲಿ ಅಡುಗೆಗೆ ಬಳಕೆಯಾಗುತ್ತಾ ಬಂದಿದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಹೊಟ್ಟೆಯ ಉರಿಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ರಕ್ತದ ಕೊಲೆಸ್ಟ್ರಾಲ್ ಸಹಾ ಕಡಿಮೆಯಾಗುತ್ತದೆ. ಆದರೆ ಹುರಿಯುವ, ಕರಿಯುವ ಕಾರ್ಯಕ್ಕೆ ಈ ಎಣ್ಣೆ ಸಮರ್ಪಕವಲ್ಲ.

ಶೇಂಗಾ ಎಣ್ಣೆ

ಶೇಂಗಾ ಎಣ್ಣೆ

ಕಡಲೆಕಾಯಿ ಎಣ್ಣೆ ಎಂದೂ ಕರೆಯಲ್ಪಡುವ ಶೇಂಗಾ ಎಣ್ಣೆಯಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಆದರೆ ಸಂಪೂರ್ಣವಾದ ಕೊಬ್ಬು (saturated fat) ಕೊಂಚವೇ ಪ್ರಮಾಣದಲ್ಲಿದೆ. ಆದರೆ ವಿಟಮಿನ್ ಇ, ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋಸ್ಟೆರಾಲ್ (phytosterol) ಎಂಬ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುವ ಕಾರಣ ಹೃದಯಕ್ಕೆ ಉತ್ತಮವಾಗಿದೆ. ಆದರೆ ಇದರ ಬಳಕೆ ಮಿತಪ್ರಮಾಣದಲ್ಲಿದ್ದರೆ ಉತ್ತಮ. ಹುರಿಯುವ, ಕರಿಯುವ ಕಾರ್ಯಕ್ಕೆ ಈ ಎಣ್ಣೆ ಸಮರ್ಪಕವಲ್ಲ.

X
Desktop Bottom Promotion