ಚಳಿಗಾಲದಲ್ಲಿ ಶೀತ, ನೆಗಡಿಯಿಂದ ರಕ್ಷಿಸಿಕೊಳ್ಳುವ 10 ರಹಸ್ಯಗಳು!

By Super

ಚಳಿಗಾಲದ ಆಗಮನವಾಗುತ್ತಿದೆ. ಬೆಳಗ್ಗಿನ ಇಬ್ಬನಿ, ಚಳಿಗಾಳಿ, ಚಿಗುರೊಡೆದ ತಳಿರಿನೊಡನೇ ತಣ್ಣಗೇ ಆಗಮಿಸುತ್ತವೆ ಶೀತ ನೆಗಡಿ, ಜ್ವರ. ನಿಜವಾಗಿ ಇವು ರೋಗಗಳಲ್ಲ, ಶೀತಕ್ಕೆ ಕಾರಣವಾಗುವ ವೈರಸ್ಸುಗಳಿಂದ ನಮ್ಮನ್ನು ಕಾಪಾಡಲು ನಮ್ಮ ರೋಗ ನಿರೋಧಕ ಶಕ್ತಿ ಪ್ರಯೋಗಿಸುವ ಅಸ್ತ್ರಗಳು. ಸಾಮಾನ್ಯವಾಗಿ ತೇವವಾಗಿರುವ ನಮ್ಮ ಬಾಯಿ, ಗಂಟಲು ಮತ್ತು ಮೂಗಿನ ಒಳಭಾಗದಲ್ಲಿ ಈ ವೈರಸ್ಸುಗಳು ಬೀಡುಬಿಟ್ಟು ಆರೋಗ್ಯ ಕೆಡಿಸುತ್ತವೆ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಆಗ ದೇಹದ ರಕ್ಷಣಾ ವ್ಯವಸ್ಥೆ ಈ ವೈರಸ್ಸುಗಳನ್ನು ಹೊಡೆದೋಡಿಸಲು ನೀರಿನ ತೇವದಲ್ಲಿ ಹೊರ ಹರಿವನ್ನು ಹೆಚ್ಚಿಸುತ್ತವೆ (ಶೀತ), ಬಿಳಿರಕ್ತಕಣಗಳು ವೈರಸ್ಸುಗಳೊಂದಿಗೆ ಹೋರಾಡಿ ಅವುಗಳನ್ನು ಕೊಂದು ತಾವೂ ಸತ್ತು ಹೊರಬೀಳುತ್ತವೆ (ನೆಗಡಿ, ಕಫ), ಇವುಗಳಿಗೆ ನೆರವಾಗಲು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ (ಜ್ವರ).

ಈ ಚಳಿಗಾಲದಲ್ಲಿ ಶೀತ ನೆಗಡಿ ಫ್ಲೂಗಳಿಂದ ರಕ್ಷಿಸಿಕೊಳ್ಳಲು ಸಮರ್ಥವಾದ ಹತ್ತು ರಹಸ್ಯಗಳನ್ನು ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನಾವು ಶೀತದ ವೈರಸ್ಸುಗಳನ್ನು ನೇರವಾಗಿ ಮಟ್ಟ ಹಾಕಲು ಸಾಧ್ಯವಾಗದಿದ್ದರೂ ಆ ಕಾರ್ಯ ಸಾಗಿಸುವ ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೆ ಸೂಕ್ತ ಬೆಂಬಲ ಮತ್ತು ಸಹಕಾರ ನೀಡುವ ಮೂಲಕ ಶೀತ ಬರುವುದನ್ನು ತಡೆಯಬಹುದು. ಈ ವಿಧಾನಗಳು ಇದುವರೆಗೆ ನಾವು ನಂಬಿಕೊಂಡು ಬಂದಿದ್ದ ವಿಚಾರಗಳಿಗಿಂತ ಕೊಂಚ ಭಿನ್ನವಾಗಿರುವುದರಿಂದ ಈ ಸತ್ಯಗಳು ನಿಮ್ಮನ್ನು ಅಚ್ಚರಿಗೊಳಪಸಬಹುದು. ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

ಮದ್ಯಪಾನದಿಂದ ದೂರವಿರಿ

ಮದ್ಯಪಾನದಿಂದ ದೂರವಿರಿ

ಸಾಮಾನ್ಯವಾಗಿ ಚಳಿಯಿಂದ ರಕ್ಷಿಸಿಕೊಳ್ಳಲು ಮದ್ಯ ಉತ್ತಮ ಎಂದು ಜಗತ್ತಿನೆಲ್ಲೆಡೆ ಪ್ರಚಲಿತವಾಗಿದೆ. ಇದು ಕೊಂಚ ಪ್ರಮಾಣದ ಮದ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಹಿಮ ಬೀಳುವ ಪ್ರದೇಶಗಳಲ್ಲಿ ಕಳೆದುಹೋದವರನ್ನು ಹುಡುಕಲು ಕಳುಹಿಸಲಾಗುವ ನಾಯಿಗಳ ಕೊರಳಿನಲ್ಲಿ ಚಿಕ್ಕದೊಂದು ಪೀಪಾಯಿಯಲ್ಲಿ ಬ್ರಾಂದಿ ಎಂಬ ಮದ್ಯವನ್ನು ಕಳುಹಿಸಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಹಿಮಬೀಳುವಷ್ಟು ಚಳಿಯಿರದ ಕಾರಣ ಕೇವಲ ಹತ್ತರಿಂದ ಮೂವತ್ತು ಮಿಲಿಲೀಟರ್ ನಷ್ಟು ಮದ್ಯ ಮಾತ್ರ ಸಾಕು. ಈ ಪ್ರಮಾಣ ರಕ್ತದಲ್ಲಿ ಬೆರೆತಾಗ ದೇಹದಲ್ಲಿ ಉತ್ಪತ್ತಿಯಾಗುವ ಬಿಸಿ ಚಳಿಯಿಂದ ರಕ್ಷಿಸಿಕೊಳ್ಳಲು ಬೇಕಾದಷ್ಟಾಯಿತು. ಆದರೆ ಈ ಪ್ರಮಾಣ ಮೀರಿದರೆ ರಕ್ತ ತನ್ನ ಪೂರ್ಣ ಕ್ಷಮತೆಯಲ್ಲಿ ಕಾರ್ಯವೆಸಗಲು ಸಾಧ್ಯವಾಗದುದರಿಂದ ವೈರಸ್ಸುಗಳಿಗೆ ಹಬ್ಬ ಮಾಡಲು ಅನುಕೂಲವಾಗುತ್ತದೆ. ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ.

ಲಿಂಬೆ ಮತ್ತು ಜೇನು ಬೆರೆತ ಹಾಲುರಹಿತ ಟೀ ಕುಡಿಯಿರಿ

ಲಿಂಬೆ ಮತ್ತು ಜೇನು ಬೆರೆತ ಹಾಲುರಹಿತ ಟೀ ಕುಡಿಯಿರಿ

ಒಂದು ಲೋಟ ನೀರಿಗೆ ಕಾಲು ಲಿಂಬೆ ಹಣ್ಣಿನ ರಸ ಮತ್ತು ಅರ್ಧದಿಂದ ಒಂದು ಟೀ ಚಮಚ ಜೇನು, ಒಂದು ಟೀ ಚಮಚ ಟೀ ಪುಡಿ ಬೆರೆಸಿ ಸುಮಾರು ಒಂದು ನಿಮಿಷ ಕುದಿಸಿ ಸೋಸಿದ ಟೀ ಶೀತದಿಂದ ದೇಹ ರಕ್ಷಿಸಿಕೊಳ್ಳಲು ಅತ್ಯುತ್ತಮ ಪೇಯವಾಗಿದೆ. ಟೀ ಪುಡಿ ಕಪ್ಪು ಅಥವಾ ಹಸಿರು ಯಾವುದಾದರೂ ಆಗಬಹುದು. ಆದರೆ ಹಸಿರು ಟೀ ಹೆಚ್ಚು ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಹೇರಳ ಪೋಷಕಾಂಶಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತದ ವೈರಸ್ಸುಗಳು ಶರೀರವನ್ನು ಬಾಧಿಸದಂತೆ ತಡೆಯುತ್ತವೆ.

ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಚಳಿಗಾಲದಲ್ಲಿ ದೇಹದ ರಕ್ಷಣಾ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಪ್ರೋಟೀನ್ ನ ಅವಶ್ಯಕತೆಯಿದೆ. ಬಿಳಿಯ ಮಾಂಸ, ಮೀನು, ಚೀಸ್, ಮೊಳಕೆ ಬರಿಸಿದ ಬೀನ್ಸ್, ಹೆಸರುಕಾಳು ಮೊದಲಾದ ಕಾಳುಗಳು, ಮೊಟ್ಟೆ, ಬಾದಾಮಿ, ಕುಂಬಳದ ಬೀಜ ಮೊದಲಾದವುಗಳಲ್ಲಿ ಹೇರಳ ಪ್ರೋಟೀನ್ ಇದೆ. ನಿಮ್ಮ ತೂಕಕ್ಕನುಗುಣವಾಗಿ ದಿನಕ್ಕೆ ಅಗತ್ಯವೆನಿಸಿದಷ್ಟು ಪ್ರಮಾಣದ ಆಹಾರಗಳನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ದೊರೆತು ವೈರಸ್ಸುಗಳನ್ನು ಹೊಡೆದೋಡಿಸಲು ನೆರವಾಗುತ್ತದೆ.

ಕೈ ತೊಳೆಯುವ ಮಾರ್ಜಕಗಳನ್ನು ಬಳಸಿ

ಕೈ ತೊಳೆಯುವ ಮಾರ್ಜಕಗಳನ್ನು ಬಳಸಿ

ಕೆಲ ವರ್ಷಗಳ ಹಿಂದೆ ಸ್ನಾನಕ್ಕೆ ಬಳಸುವ ಸೋಪುಗಳನ್ನೇ ಕೈತೊಳೆಯಲೂ ಬಳಸಲಾಗುತ್ತಿತ್ತು. ಆದರೆ ಇದರಲ್ಲಿ ಕೊಂಚ ಹೆಚ್ಚು ವೇಳೆ ಉಜ್ಜಿಕೊಂಡರೆ ಮಾತ್ರ ಅಗತ್ಯವಾದ ಸ್ವಚ್ಛತೆ ಲಭ್ಯವಾಗುತ್ತಿದ್ದುದರಿಂದ ಬೇಗಬೇಗನೇ ತೊಳೆದ ನಮ್ಮ ಕೈಗಳು ಸಂಪೂರ್ಣ ಸ್ವಚ್ಛವಾಗುತ್ತಲೇ ಇರಲಿಲ್ಲ. ಇಂದು ಮಾರುಕಟ್ಟೆಯಲ್ಲಿ ಕೈಗಳನ್ನು ಸ್ವಚ್ಛ ಮಾಡಲೆಂದೇ ವಿಶೇಷ ಮಾರ್ಜಕಗಳು ಬಂದಿವೆ. (hand sanitizer). ಇವು ಸಾಮಾನ್ಯ ಸೋಪಿಗಿಂತಲೂ ಹೆಚ್ಚು ಪ್ರಬಲವಾಗಿದ್ದು ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಇದರ ಪ್ರಬಲತೆಯ ಕಾರಣ ಈ ಮಾರ್ಜಕವನ್ನು ಮುಖಕ್ಕಾಗಲೀ, ದೇಹದ ಇತರ ಭಾಗಗಳಿಗಾಗಲೀ ಉಪಯೋಗಿಸಬಾರದು. ದಿನವಿಡೀ ಹೊರಗಿರುವಾಗ ಸಾರ್ವಜನಿಕ ಸ್ಥಳಗಳಲ್ಲಿ ಮುಟ್ಟಿದ ನಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯದೇ ಊಟ ಮಾಡುವುದಾಗಲೀ ನೀರು ಕುಡಿಯುವುದಾಗಲೀ ಮಾಡಬಾರದು. ಸ್ವಚ್ಛತೆ ಕಾಪಾಡುವ ಮೂಲಕ ವೈರಸ್ಸುಗಳನ್ನು ದೂರವಿಡಬಹುದು.

ಸತು (Zinc) ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಸತು (Zinc) ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಸತು ಹೆಚ್ಚಿರಬೇಕು. ಏಕೆಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸತು, ಕಬ್ಬಿಣ ಮತ್ತು ಇತರ ಖನಿಜಗಳ ಅಗತ್ಯವಿದೆ. ಅದರಲ್ಲೂ ಸತುವಿನ ಅಗತ್ಯತೆ ಹೆಚ್ಚಿರುವ ಕಾರಣ ಸತು ಹೆಚ್ಚಿರುವ ಪಾಲಕ್ ಸೊಪ್ಪು, ಮೀನು, ಬಿಳಿಯ ಮಾಂಸ, ಒಣಫಲಗಳಾದ ಗೋಡಂಬಿ, ಕುಂಬಳ ಬೀಜ ಮೊದಲಾದವು, ಚಾಕಲೇಟು, ಕೋಕೋ, ಬೀನ್ಸ್, ಬಿಳಿಯ ಅಣಬೆ ಮೊದಲಾದವುಗಳನ್ನು ಸೇವಿಸಿರಿ.

ಅತಿಹೆಚ್ಚು ಮೊಸರನ್ನು ಸೇವಿಸಬೇಡಿ

ಅತಿಹೆಚ್ಚು ಮೊಸರನ್ನು ಸೇವಿಸಬೇಡಿ

ಮೊಸರಿನಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಹಾಗೂ ಕೊಬ್ಬು ಇದ್ದರೂ ದೇಹಕ್ಕೆ ಹೆಚ್ಚಿನ ತಂಪು ನೀಡುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಹಿತಕರವಲ್ಲ. ಹೊಸ ಹಾಲಿನಿಂದ ತಯಾರಿಸಿದ ಮೊಸರಾದರೆ (fresh milk yoghurt) ಒಂದು ದಿನಕ್ಕೆ ಸರಿಸುಮಾರು ಎರಡು ಕಪ್ ಅಂದರೆ ನೂರು ಗ್ರಾಂ ನಷ್ಟು ಮೊಸರನ್ನು ಗರಿಷ್ಟ ಸೇವಿಸಬಹುದು. ಹಾಲುಪುಡಿಯಿಂದ ತಯಾರಿಸಲಾದ ಮೊಸರಾದರೆ (skim milk yoghurt) ಈ ಪ್ರಮಾಣವನ್ನು ಸುಮಾರು ನೂರೈವತ್ತು ಗ್ರಾಂಗಳಿಗೆ ಏರಿಸಬಹುದು.

ತಾಜಾ ಹಣ್ಣಿನ ರಸಗಳನ್ನು ಸೇವಿಸಿ

ತಾಜಾ ಹಣ್ಣಿನ ರಸಗಳನ್ನು ಸೇವಿಸಿ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಪೋಷಕಾಂಶಗಳ ಅಗತ್ಯವಿದೆ. ಇವು ವಿವಿಧ ಹಣ್ಣುಗಳಲ್ಲಿ ವಿವಿಧ ಪ್ರಮಾಣದಲ್ಲಿ ಲಭ್ಯವಿರುವುದರಿಂದ ವಿವಿಧ ಹಣ್ಣುಗಳ ರಸವನ್ನು ಕುಡಿಯುವ ಮೂಲಕ ಪೋಷಕಾಂಶಗಳನ್ನು ಪಡೆಯುವುದರ ಜೊತೆಗೇ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಹಣ್ಣಿನ ರಸದೊಡನೆ ಐಸ್ ಸೇರಿಸಿ ಕುಡಿಯಲಾಗುತ್ತದೆ. ಆದರೆ ಐಸ್ ಸೇರಿಸದೇ ಇರುವ ಹಣ್ಣಿನ ರಸ ಹೆಚ್ಚು ಪರಿಣಾಮಕಾರಿಯಾಗಿದೆ.

ಚಳಿಗಾಲದಲ್ಲಿ ಹೆಚ್ಚಿನ ದೈಹಿಕ ಶ್ರಮ ವಹಿಸಿ

ಚಳಿಗಾಲದಲ್ಲಿ ಹೆಚ್ಚಿನ ದೈಹಿಕ ಶ್ರಮ ವಹಿಸಿ

ದಿನದಲ್ಲಿ ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮ ಮಾಡಿ. ದೇಹವನ್ನು ಚಟುವಟಿಕೆಯಲ್ಲಿರಿಸುವುದರಿಂದ ದೇಹ ಸದಾ ಬೆಚ್ಚಗಿದ್ದು ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಉಸಿರಾಟದ ಕಾರಣ ಶ್ವಾಸಕೋಶಗಳಲ್ಲಿ ಉಳಿದಿದ್ದ ವಿಷಕಾರಿ ವಸ್ತುಗಳು ಹೊರಹೋಗಲು ಅನುಕೂಲವಾಗುತ್ತದೆ. ದೇಹದಿಂದ ಬೆವರು ಹರಿದಷ್ಟೂ ವೈರಸ್ಸುಗಳಿಗೆ ಒಳಪ್ರವೇಶಕ್ಕೆ ಅಡ್ಡಿಯಾಗುತ್ತದೆ. ಹೊರ ಹರಿವ ಬೆವರಿನ ಮೂಲಕ ದೇಹದ ವಿಷಕಾರಿ ವಸ್ತುಗಳು ವಿಸರ್ಜಿಸಲ್ಪಟ್ಟು ಆರೋಗ್ಯ ವೃದ್ಧಿಯಾಗುತ್ತದೆ.

ಸಾಧ್ಯವಾದಷ್ಟು ಹೆಚ್ಚು ನಿದ್ದೆ ಮಾಡಿ

ಸಾಧ್ಯವಾದಷ್ಟು ಹೆಚ್ಚು ನಿದ್ದೆ ಮಾಡಿ

ದಿನದಲ್ಲಿ ಕನಿಷ್ಟ ಎಂಟು ಘಂಟೆಗಳ ತಡೆಯಿಲ್ಲದ ನಿದ್ದೆ ಅಗತ್ಯ. ನಿದ್ದೆಯ ಕಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಅತಿ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುವುದರಿಂದ ನಿದ್ದೆ ಅತಿ ಅಗತ್ಯವಾಗಿದೆ. ತಡೆ ತಡೆದ ನಿದ್ದೆ ಅಥವಾ ತಡರಾತ್ರಿಯವರೆಗೆ ಎಚ್ಚರಾಗಿರುವ ಕಾರಣ ಆ ಸಮಯದಲ್ಲಿ ರಕ್ತಸಂಚಾರ ಇತರ ಕೆಲಸಗಳಿಗೆ ಉಪಯೋಗವಾಗಿ ಆ ಸಮಯದಲ್ಲಿ ರೋಗ ನಿರೋಧಕ ಶಕ್ತಿಗೆ ಅಗತ್ಯವಿದ್ದ ರಕ್ತಸಂಚಾರ ಲಭ್ಯವಾಗದೇ ಹೋಗಿ ವೈರಸ್ಸುಗಳು ಒಳನುಗ್ಗಲು ಅವಕಾಶಮಾಡಿಕೊಟ್ಟಂತಾಗುತ್ತದೆ.

ಹೆಚ್ಚು ವಿಟಮಿನ್ ಸಿ ಸೇವಿಸಿ

ಹೆಚ್ಚು ವಿಟಮಿನ್ ಸಿ ಸೇವಿಸಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ರಾಮಬಾಣವಾಗಿದೆ. ಈ ಶಕ್ತಿ ಹೆಚ್ಚಿದಾಗ ಶೀತದ ಸಹಿತ ದೇಹದ ಇತರ ಕಾಯಿಲೆಗಳಿಂದಲೂ ರಕ್ಷಣ ಒದಗಿಸಿದಂತಾಗುತ್ತದೆ. ಪೇರಲೇ ಹಣ್ಣು, ಕಿವಿ ಹಣ್ಣು, ಸ್ಟ್ರಾಬೆರಿ, ಮೂಸಂಬಿ, ಕಿತ್ತಳೆ, ಲಿಂಬೆ, ಪೊಪ್ಪಾಯಿ, ತರಬೂಜ, ಬಟಾಣಿ, ಕೋಸು, ಅನಾನಾಸು, ಕಾಳುಮೆಣಸು, ಆಲುಗಡ್ಡೆ, ಹಸಿರುಸೊಪ್ಪು, ಗೆಣಸು ಮೊದಲಾದವುಗಳಲ್ಲಿ ವಿಟಮಿನ್ ಸಿ ಇದೆ. ಇವುಗಳ ಪ್ರಮಾಣವನ್ನು ನಮ್ಮ ಆಹಾರದಲ್ಲಿ ಅಳವಡಿಸುವ ಮೂಲಕ ಶೀತದ ವೈರಸ್ಸುಗಳಿಗೆ ಬುದ್ದಿ ಕಲಿಸಬಹುದು.

Story first published: Friday, November 14, 2014, 18:04 [IST]
X
Desktop Bottom Promotion