For Quick Alerts
ALLOW NOTIFICATIONS  
For Daily Alerts

ಕ್ರೋಧಗೊಂಡ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?

By Super
|

ಕೋಪ, ಸಿಟ್ಟು, ಕ್ರೋಧ, ಮುನಿಸು ಎಲ್ಲವೂ ಮಾನವರಿಗೆ ಸಹಜವಾದ ಗುಣ. ಸಿಟ್ಟು ಬರದೇ ಇರುವ ಮನುಷ್ಯರಲ್ಲಿ ಏನೋ ಒಂದು ಕೊರತೆ ಇದೆ ಎಂದೇ ಅರ್ಥ. ಆದರೆ ಉಕ್ಕಿದ ಕ್ರೋಧವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾವಧಾನ ನಿರ್ವಹಿಸುವುದು ಮಾತ್ರ ನಮ್ಮ ಕೈಯಲ್ಲಿಯೇ ಇದೆ. ಕೋಪೋದ್ರಿಕ್ತ ಮನಸ್ಸು ದೇಹವನ್ನು ಒಳಗಿನಿಂದ ಶಿಥಿಲವಾಗಿಸುವುದು ಮಾತ್ರವಲ್ಲ, ಇದರಿಂದ ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಕಾರಣ ಎದುರಾಗುವ ಪರೋಕ್ಷ ನಷ್ಟಗಳಿಗೂ, ಹಾಗೂ ಅಪಘಾತ ಮೊದಲಾದವುಗಳಿಗೂ ಕಾರಣವಾಗುತ್ತದೆ.

ಕೋಪವನ್ನು ನಿರ್ವಹಿಸುವುದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಉಕ್ಕಿದ ಕೋಪವನ್ನು ತಣಿಸಲೇಬೇಕು, ಕೋಪವನ್ನು ಯಾವುದರ ಮೇಲಾದರೂ ತೀರಿಸಿ ಶಮನಗೊಳಿಸಲೇ ಬೇಕು. ಅದುಮಿಟ್ಟ ಕೋಪ ಒಳಗೊಳಗೇ ಒತ್ತಡ ನಿರ್ಮಿಸುತ್ತಾ ಕಡೆಗೊಂದು ದಿನ ಜ್ವಾಲಾಮುಖಿಯಾಗಿ ಸ್ಫೋಟಿಸುತ್ತದೆ. ಈ ಜ್ವಾಲಾಮುಖಿ ಹಲವು ಸಂಸಾರಗಳನ್ನೇ ಬಲಿ ತೆಗೆದುಕೊಳ್ಳಬಹುದು. ಆದುದರಿಂದ ಕ್ರೋಧಗೊಂಡ ಮನಸ್ಸನ್ನು ಶಾಂತಗೊಳಿಸಿ ಸಮಾಧಾನದಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅತಿ ಅಗತ್ಯ.

ಕೋಪ ಉಕ್ಕಿದಾಗ ನಮ್ಮ ದೇಹದಲ್ಲಿ adrenaline ಮತ್ತು noradrenaline ಎಂಬ ರಾಸಾಯನಿಕಗಳು (ಅಥವಾ ರಸದೂತಗಳು) ಬಿಡುಗಡೆಯಾಗುತ್ತವೆ. ನಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸಿ ದೇಹದಲ್ಲಿ ಹಲವು ಬದಲಾವಣೆಗೆ ಇವು ಕಾರಣವಾಗಿವೆ. ರೋಮ ನಿಮಿರುವುದು, ಮೈಸೆಟೆಯುವುದು ಸಿಟ್ಟಿಗೆ ಕಾರಣರಾದವರ ಮೇಲೆ ಹಲ್ಲೆ ನಡೆಸುವ ಬಗ್ಗೆ ಯೋಚನೆಗಳು ಮೂಡುವುದು ಮೊದಲಾದವುಗಳಿಗೆ ಈ ರಸದೂತಗಳು ಕಾರಣ. ಸೂಕ್ತ ವಿಧಾನಗಳಿಂದ ಈ ರಸದೂತಗಳ ಪರಿಣಾಮಗಳನ್ನು ಶಮನಗೊಳಿಸಿ ಪ್ರಶಾಂತರಾಗುವ ಮೂಲಕ ಕ್ರೋಧವನ್ನು ಹತೋಟಿಗೆ ತರಬಹುದು. ಈ ಪ್ರಕಾರದ ಹತ್ತು ಸುಲಭ ವಿಧಾನಗಳನ್ನು ಕೆಳಗೆ ನೀಡಲಾಗಿದೆ.

ಕೋಪ ಉಕ್ಕಿದಾಗ ಮೂಗಿನ ಮೂಲಕ ದೀರ್ಘ ಉಸಿರೆಳೆದುಕೊಳ್ಳಿ

ಕೋಪ ಉಕ್ಕಿದಾಗ ಮೂಗಿನ ಮೂಲಕ ದೀರ್ಘ ಉಸಿರೆಳೆದುಕೊಳ್ಳಿ

ಕೋಪ ಬಂದಾಗ ಮೆದುಳಿಗೆ ಯೋಚಿಸಲು ಬಿಡದೇ ಕಣ್ಣು ಮುಚ್ಚಿ ಮೂಗಿನ ಮೂಲಕ ಶ್ವಾಸಕೋಶಗಳ ಗರಿಷ್ಟ ಸಾಮರ್ಥ್ಯದಷ್ಟು ಉಸಿರನ್ನು ಉಳಗೆಳೆದುಕೊಳ್ಳಿ. ನಾಲ್ಕರಿಂದ ಆರು ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದು ಪೂರ್ಣ ಉಸಿರನ್ನು ಹೊರಹಾಕಿ. ಪುನಃ ಮೊದಲಿನಂತೆ ಪೂರ್ಣ ಉಸಿರೆಳೆದುಕೊಂಡು ಪುನಾರಾವರ್ತಿಸಿ. ಕೋಪ ಶಮನವಾಯಿತೆಂದೆನಿಸಿದ ಬಳಿಕ ಕಣ್ಣು ಬಿಟ್ಟು ಪರಿಸ್ಥಿತಿಯನ್ನು ಅವಲೋಕಿಸಿ. ಈಗ ಕೋಪಕ್ಕೆ ಕಾರಣವಾದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಮರ್ಥರಿದ್ದೀರಿ. ದೀರ್ಘಶ್ವಾಸದಿಂದ ರಕ್ತಕ್ಕೆ ಹೆಚ್ಚಿನ ಆಮ್ಲಜನಕ ದೊರೆತು ಮೆದುಳಿಗೆ ರವಾನೆಯಾಯಿತು. ಈ ಹೆಚ್ಚುವರಿ ಆಮ್ಲಜನಕ ಮೆದುಳಿನಲ್ಲಿದ್ದ ಅಡ್ರಿನಲಿನ್ ರಸದೂತದೊಂದಿಗೆ ರಾಸಾಯನಿಕ ಸಂಯೋಜನೆಗೊಂಡು ಅದನ್ನು ನಿಷ್ಕ್ರಿಯಗೊಳಿಸಿತು. ಕಣ್ಣು ಮುಚ್ಚಿದ್ದರಿಂದ ಕಣ್ಣಿನಿಂದ ಸಿಕ್ಕುತ್ತಿದ್ದ ಸಂಕೇತಗಳ ಹೊರೆ ಕಡಿಮೆಯಾಗಿ ಅಲ್ಲಿ ಉಪಯೋಗವಾಗಲಿದ್ದ ಆಮ್ಲಜನಕವೂ ಹೆಚ್ಚುವರಿ ಆಮ್ಲಜನಕದೊಂದಿಗೆ ಕೈಜೋಡಿಸಿ ಅಡ್ರಿನಲಿನ್ ನನ್ನು ಶಾಂತಗೊಳಿಸಿತು.

ಕೋಪ ಉಕ್ಕಿಸಿದ ಕಾರಣದಿಂದ ಕೊಂಚ ದೂರಾಗಿ

ಕೋಪ ಉಕ್ಕಿಸಿದ ಕಾರಣದಿಂದ ಕೊಂಚ ದೂರಾಗಿ

ಕೋಪ ಉಕ್ಕಿದ ಕೂಡಲೇ ಕೋಪಕ್ಕೆ ಕಾರಣವಾದ ವಿಷಯದಿಂದ ಕೊಂಚ ವೇಳೆಯವರೆಗೆ ದೂರ ಸರಿದು ಬೇರೆ ವಿಷಯದ ಬಗ್ಗೆ ಚಿಂತಿಸಿ ಅಥವಾ ಚರ್ಚಿಸಿ. ದೀರ್ಘ ಉಸಿರಾಟದಿಂದ ನಿರಾಳವಾದ ಬಳಿಕ ಮತ್ತೆ ಸಮಸ್ಯೆಗೆ ಮರಳಿ ಅವಲೋಕಿಸುವುದರಿಂದ ಪರಿಹಾರದ ಬಗ್ಗೆ ಯೋಚಿಸಿ ಉತ್ತಮವಾದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ.

ಹೇಳಬೇಕೆಂದಿರುವುದನ್ನು ನೇರವಾಗಿ ಹೇಳಿ

ಹೇಳಬೇಕೆಂದಿರುವುದನ್ನು ನೇರವಾಗಿ ಹೇಳಿ

ಎಷ್ಟೋ ಬಾರಿ ನಮ್ಮ ಮೇಲಧಿಕಾರಿಗಳ ಅಥವಾ ಸಹೋದ್ಯೋಗಿಗಳ ವರ್ತನೆಯಿಂದ ಕೋಪ ಉಕ್ಕುತ್ತದೆ. ಆದರೆ ಯಾವುದೋ ಮುಲಾಜಿಗೆ ಒಳಗಾಗಿ ಅದನ್ನು ಹೇಳದೇ ಇದ್ದರೆ ಕೋಪ ಒಳಗೊಳಗೇ ಏರುತ್ತಾ ಹೋಗುತ್ತದೆ. ಕೋಪಕ್ಕೆ ಕಾರಣವಾದ ಈ ವಿಷಯವನ್ನು ನೇರವಾಗಿ ಸ್ಪಷ್ಟ ಪದಗಳಲ್ಲಿ ಹೇಳಿ ಆ ವರ್ತನೆಗೆ ತಡೆ ಒಡ್ಡುವುದು ಒಳಿತು. ಉದಾಹರಣೆಗೆ ಬಸ್ಸಿನ ಸಹಪ್ರಯಾಣಿಕ ತನ್ನ ಮೊಬೈಲಿನಲ್ಲಿ ಯಾವುದೋ ಆಧ್ವಾನವಾದ ಸಂಗೀತ ದೊಡ್ಡ ಧ್ವನಿಯಲ್ಲಿ ಹಾಕಿದ್ದ. ಯಾರೂ ಸೊಲ್ಲೆತ್ತದಿದ್ದುದನ್ನೇ ಆ ಪ್ರಯಾಣಿಕ ಪ್ರೋತ್ಸಾಹವೆಂದು ಅರ್ಥೈಸಿಕೊಂಡು ಇನ್ನೂ ಆಧ್ವಾನವಾದ ಹಾಡುಗಳನ್ನು ಇನ್ನೂ ಜೋರಾಗಿ ಹಾಕಿ ಹಾಡಲು ತೊಡಗಿದ್ದ. ಎಷ್ಟೋ ಹೊತ್ತಿನ ಬಳಿಕ ಹಿಂಸೆ ತಾಳಲಾರದೇ ಮಹಿಳೆಯೊಬ್ಬರು ಬೊಬ್ಬಿಟ್ಟು ಜಗಳವಾದ ಬಳಿಕ ನಿರ್ವಾಹಕ ಮಧ್ಯೆ ಪ್ರವೇಶಿಸಿ ಜಗಳ ನಿಲ್ಲಿಸಬೇಕಾಯಿತು. ಆ ಪ್ರಯಾಣಿಕ ಉತ್ತರಿಸಿದ್ದೇನು ಗೊತ್ತೇ? ಯಾರೂ ಬೇಡ ಅಂತ ಒಂದು ಮಾತೂ ಹೇಳಲಿಲ್ಲವಲ್ಲ?

ಕೋಪದ ಸಮಯದಲ್ಲಿ ಸ್ನೇಹಿತರನ್ನು ಹಾಗೂ ಆತ್ಮೀಯರನ್ನು ಭೇಟಿಯಾಗಿ

ಕೋಪದ ಸಮಯದಲ್ಲಿ ಸ್ನೇಹಿತರನ್ನು ಹಾಗೂ ಆತ್ಮೀಯರನ್ನು ಭೇಟಿಯಾಗಿ

ಯಾವುದೋ ಕೆಟ್ಟ ಘಳಿಗೆಯಲ್ಲಿ ಪ್ರಾರಂಭವಾದ ಜಗಳದ ಕಾರಣ ಕೋಪ ಉಕ್ಕಿದರೆ ಆ ಜಗಳವನ್ನು ಮುಂದುವರೆಸುವ ಬದಲು ಇಬ್ಬರಿಗೂ ಸಮಾನರಾಗಿ ಸ್ನೇಹಿತರಾಗಿರುವ ಆತ್ಮೀಯರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಈ ಆತ್ಮೀಯರು ಹಿರಿಯರಾಗಿದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ಕ್ರೋಧದ ಸಮಯದಲ್ಲಿ ಇಬ್ಬರೂ ತಮ್ಮದೇ ವಾದಗಳನ್ನು ಮಂಡಿಸಿ ತಮ್ಮ ವಾದಗಳೇ ಸರಿ ಎಂದು ಸಾಬೀತುಪಡಿಸಲು ಇನ್ನೊಬ್ಬರ ದೌರ್ಬಲ್ಯಗಳನ್ನು ಪಟ್ಟಿಮಾಡಿ ಕೆಸರೆರೆಚುವುದು ಸ್ನೇಹದ ಅಥವಾ ಸಂಬಂಧಗಳ ಕಡಿಯುವಿಕೆಗೆ ಕಾರಣವಾಗುತ್ತದೆ. ಆತ್ಮೀಯರಾದ ಹಿರಿಯರು ಈ ಮಟ್ಟಕ್ಕೆ ಜಗಳ ಏರದಂತೆ ತಡೆದು ಇಬ್ಬರಿಗೂ ಅನುಕೂಲಕರವಾದ ತೀರ್ಮಾನ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕ್ರೋಧಕ್ಕೆ ಕಾರಣವಾದ ವಿಷಯಗಳನ್ನು ಬರೆದಿಡಿ

ಕ್ರೋಧಕ್ಕೆ ಕಾರಣವಾದ ವಿಷಯಗಳನ್ನು ಬರೆದಿಡಿ

ಕ್ರೋಧಕ್ಕೆ ಕಾರಣವಾದ ವಿಷಯಗಳು ಕೆಲವೊಮ್ಮೆ ಕ್ಷುಲ್ಲುಕವಾಗಿಯೂ ಇರಬಹುದು. ಈ ವಿಷಯಗಳನ್ನು ಒಂದು ಡೈರಿಯಲ್ಲಿ ಬರೆದಿಡುವುದು ಅಥವಾ ನಿಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ದಾಖಲಿಸಿಡುವುದು ಒಳಿತು. ಕೊಂಚ ಕಾಲದ ಬಳಿಕ ಸಮಾಧಾನದಿಂದ ಈ ಕಾರಣಗಳನ್ನು ಅವಲೋಕಿಸಿದರೆ ಇವು ಸುಲಭವಾಗಿ ನಿರ್ವಹಿಸಬಲ್ಲದಾದ ಅಥವಾ ತಲೆಕೆಡಿಸಿಕೊಳ್ಳುವುದು ಅನಗತ್ಯವಾದ ಕಾರಣಗಳೆಂದು ಅನ್ನಿಸಿ ಕ್ರೋಧ ಶಮನಗೊಳ್ಳುವುದು. ಉದಾಹರಣೆಗೆ ಬಾಸ್ ತನ್ನ ಮೇಲೇಕೆ ಪ್ರತಿದಿನ ಎಗರಾಡುತ್ತಿದ್ದಾರೆ ಎಂದು ಅರಿಯದ ಉದ್ಯೋಗಿ ಒಮ್ಮೆ ಬಾಸ್ ರ ಬ್ಲಾಗ್ ನೋಡಿದಾಗ ಅವರಿಗಿಷ್ಟವಿಲ್ಲದ ಬಣ್ಣದ ಅಂಗಿ ತೊಟ್ಟು ಬರುತ್ತಿದ್ದ ವಿಷಯ ಗೊತ್ತಾಗಿತ್ತು. ಬಳಿಕ ಆ ಬಣ್ಣದ ಅಂಗಿ ತೊಡದೇ ಬಂದ ಮೇಲೆ ಅವರ ಕೋಪ ಶಮನವಾಗಿತ್ತು.

ಆ ಸ್ಥಾನದಲ್ಲಿ ನಾನಿದ್ದರೆ ಏನು ಮಾಡುತ್ತಿದ್ದೆ ಎಂದು ಯೋಚಿಸಿ

ಆ ಸ್ಥಾನದಲ್ಲಿ ನಾನಿದ್ದರೆ ಏನು ಮಾಡುತ್ತಿದ್ದೆ ಎಂದು ಯೋಚಿಸಿ

ಎಷ್ಟೋ ಬಾರಿ ಸಹೋದ್ಯೋಗಿಗಳ ಅಥವಾ ನಿಮ್ಮ ಕೆಳಗೆ ಕೆಲಸ ಮಾಡುವವರ ತಪ್ಪಿನಿಂದ ಕ್ರೋಧ ಉಕ್ಕುತ್ತದೆ. ಆ ಸಮಯದಲ್ಲಿ ಒಂದು ವೇಳೆ ಆ ಉದ್ಯೋಗಿಯ ಸ್ಥಾನದಲ್ಲಿ ನಾನಿದ್ದರೆ ಹಾಗೂ ಆ ತಪ್ಪು ನನ್ನಿಂದಾಗಿದಿದ್ದರೆ ಬಾಸ್ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಪರಾಮರ್ಶಿಸಿ. ತಪ್ಪು ಮಾಡಿದವರನ್ನು ಕ್ಷಮಿಸಿ ತಪ್ಪನ್ನು ತಿದ್ದಿಕೊಳ್ಳಲು ನಿಮ್ಮಿಂದಾದ ಸಹಾಯ ನೀಡಿ. ಈ ಯೋಚನೆ ಮೆದುಳನ್ನು ಬೇರೊಂದು ದಿಕ್ಕಿನಲ್ಲಿ ಯೋಚಿಸಲು ಪ್ರಚೋದಿಸುವುದರಿಂದ ಉಕ್ಕೇರಿದ್ದ ಅಡ್ರಿನಲಿನ್ ಗೆ ಯಾವುದೇ ಪ್ರೋತ್ಸಾಹ ಸಿಕ್ಕದೇ ಕುಗ್ಗಿ ಹೋಗುತ್ತದೆ. ಈ ವಿಧಾನದಿಂದ ಉದ್ಯೋಗಿಗಳ ದೃಷ್ಟಿಯಲ್ಲಿ ನೀವು ಬೆಳೆಯುತ್ತೀರಿ ಹಾಗೂ ಕೋಪ ಶಮನಗೊಂಡು ಸಮಸ್ಯೆಗೆ ಸೂಕ್ತ ಪರಿಹಾರವನ್ನೂ ಕಂಡುಕೊಳ್ಳುತ್ತೀರಿ.

English summary

10 Healthy Ways To Manage Anger

Anger is one of the core emotions that human beings experience. It is not unhealthy to experience anger. In fact, if you never get angry, then it is a sign that something is mentally amiss with you. Keeping unexpressed anger pooled up inside you is also very unhealthy. That is why; it is important to have healthy ways to manage anger.
X
Desktop Bottom Promotion