Surviving Breast Cancer: ಸ್ತನ ಕ್ಯಾನ್ಸರ್ ಗೆದ್ದು ಬಂದ ಮಹಿಳೆಯ ರೋಚಕ ಕಥೆಯಿದು!

ನನದೊಂದು ಪುಟ್ಟ ಪ್ರಪಂಚ. ಆ ಪ್ರಪಂಚದಲ್ಲಿ ನಾನು ನನ್ನ ಗಂಡ ಹಾಗೂ ಇಬ್ಬರು ಮುತ್ತಿನಂತಹ ಗಂಡು ಮಕ್ಕಳು. ನಮ್ಮದು ಮದ್ಯಮ ವರ್ಗದ ಕುಟುಂಬ. ಆದರೆ ನನ್ನ ಗಂಡ ಯಾವುದಕ್ಕೂ ಕಡಿಮೆ ಆಗದ ರೀತಿಯಲ್ಲಿ ನಮ್ಮನ್ನು ನೋಡಿಕೊಂಡಿದ್ರು. ಕಷ್ಟ ಪಟ್ಟು ಬೆಳೆಸಿದ ಮಕ್ಕಳು ಚೆನ್ನಾಗಿ ಓದಿ ಉತ್ತಮ ಉದ್ಯೋಗವನ್ನೂ ಪಡೆದುಕೊಂಡಿದ್ರು.

ಹೀಗಿರಬೇಕಾದರೆ ಒಂದು ದಿನ ನನಗೆ ಸ್ತನದ ಒಳಗಡೆ ಒಂದು ರೀತಿ ಗಡ್ಡೆಯ ರೀತಿ ಕಾಣಿಸಿಕೊಂಡಿತ್ತು. ಮೊದ ಮೊದಲು ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರ್ಲಿಲ್ಲ. ಕಡಿಮೆಯಾಗುತ್ತೆ ಬಿಡು ಎಂದು ಸುಮ್ಮನಿದ್ದೆ. ಆದರೆ ಕೆಲವು ದಿನಗಳಾದ್ರೂ ಆ ಗಡ್ಡೆ ಹಾಗೆಯೇ ಇತ್ತು.

Surviving Breast Cancer: A True Inspirational Story of this Womans Journey

ಬಾತ್ ರೂಂನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದೆ!
ಅಷ್ಟು ಹೊತ್ತಿಗಾಗ್ಲೇ ನನಗೆ ಕೊಂಚ ಸಂಶಯ ಶುರುವಾಯ್ತು ಇದೇನಾದ್ರು ಸ್ತನ ಕ್ಯಾನ್ಸರ್ ನ ಲಕ್ಷಣ ಇರಬಹುದಾ ಎಂದು. ಹೀಗಾಗಿ ತಕ್ಷಣ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡೋದಕ್ಕೆ ಶುರು ಮಾಡಿದೆ. ಅದನ್ನು ನೋಡಿ ನಾನು ನಿಂತಲ್ಲೇ ಕುಸಿದು ಹೋದೆ. ನನ್ನ ಅನುಮಾನ ನಿಜವಾಗುತ್ತೋ ಎಂಬ ಭಯ ಕಾಡೋದಕ್ಕೆ ಶುರುವಾಯ್ತು. ಆ ದಿನ ಮಗ ಮನೆಯಲ್ಲೇ ಇದ್ದ. ನನಗೆ ದುಃಖ ತಡೆಯೋದಕ್ಕೆ ಆಗ್ಲಿಲ್ಲ. ಮನೆಯೊಳಗೆ ಅತ್ತರೆ ಮಗನಿಗೆ ಗೊತ್ತಾಗುತ್ತೆ ಎಂದು ಬಾತ್ ರೂಂ ಗೆ ಹೋದವಳೇ ಜೋರಾಗಿ ಅತ್ತು ಬಿಟ್ಟೆ.

ಮಕ್ಕಳ ಮದುವೆ ನೋಡೋಕೆ ಆಗಲ್ಲ ಅನ್ನೋ ಭಯ ಕಾಡಿತ್ತು!
ಆ ಸಮಯದಲ್ಲಿ ನನ್ನ ತಲೆಯಲ್ಲಿ ನೂರಾರು ಯೋಚನೆಗಳು ಓಡಾಡುತ್ತಿತ್ತು. ಮನೆಯ ಕಷ್ಟಗಳೆಲ್ಲಾ ಕಳೆದು ಮಕ್ಕಳು ಒಂದು ಹಂತಕ್ಕೆ ಹೋದರು. ಇನ್ನಾದರೂ ಜೀವನ ಚೆನ್ನಾಗಿರುತ್ತೆ ಅನ್ನೋವಾಗ್ಲೇ ಕ್ಯಾನ್ಸರ್ ನ ಭಯ ಶುರುವಾಗಿತ್ತು. ನಾನು ಬದುಕೋದಿಲ್ಲ. ಮಕ್ಕಳ ಸೌಭಾಗ್ಯವನ್ನು ನನ್ನ ಕಣ್ಣಾರೆ ನೋಡೋದಕ್ಕೆ ಆಗೋದಿಲ್ಲವೆಂದು ನಾನು ಆ ದಿನ ತುಂಬಾನೇ ನೊಂದುಕೊಂಡೆ. ಈ ವಿಚಾರವನ್ನ ಗಂಡ, ಮಕ್ಕಳ ಜೊತೆಯಲ್ಲಿ ಹೇಳಿಕೊಳ್ಳೋದಕ್ಕೂ ನನ್ನಿಂದ ಸಾಧ್ಯವಾಗಲಿಲ್ಲ.

ಮಗನನ್ನು ತಪ್ಪಿ ಹಿಡಿದು ಅತ್ತು ಬಿಟ್ಟೆ!
ಆ ದಿನ ನಾನು ಸತ್ತಂತೆ ಬದುಕಿದ್ದೆ ಅಂತ ಹೇಳಿದ್ರು ತಪ್ಪಾಗೋದಿಲ್ಲ. ಬರೀ ನನ್ನ ದೇಹ ಉಸಿರಾಡುತ್ತಿತ್ತು ಅಷ್ಟೇ, ಆದ್ರೆ ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿ ಇರಲಿಲ್ಲ. ಕೋಣೆಯಲ್ಲಿ ಒಬ್ಬಳೇ ಕುಳಿತು ಅಳುತ್ತಿದ್ದೆ. ಇದನ್ನು ಗಮನಿಸಿ ನನ್ನ ಮಗ ಗಾಬರಿಗೊಂಡಿದ್ದ ಏನಾಯ್ತಮ್ಮಾ ಎಂದು ಅವನು ಕೇಳಿದಾಗ ಅವನನ್ನು ತಪ್ಪಿ ಹಿಡಿದು ಜೋರಾಗಿ ಅತ್ತೆ. ನನಗೆ ನನ್ನ ಮಕ್ಕಳೆಂದರೆ ಪಂಚ ಪ್ರಾಣ. ಅವರೇ ನನ್ನ ಪ್ರಪಂಚ. ಆ ದಿನ ನನ್ನ ಮಗನ ಬಳಿ ಎಲ್ಲವನ್ನೂ ಹೇಳಿಕೊಂಡೆ. ನನ್ನ ಮಾತು ಕೇಳಿ ಅವನಿಗೂ ತುಂಬಾನೇ ನೋವಾಯ್ತು. ಅವನ ಕಣ್ಣಾಲಿಗಳು ಒಂದೆಯಾಯ್ತು. ಆದರೂ ಕೂಡ ಮಗ ನನಗೆ ದೈರ್ಯ ತುಂಬಿದ.

ಅಮ್ಮಾ ನೀನು ಸುಮ್ಮನೆ ಕಲ್ಪನೆ ಮಾಡಿಕೊಳ್ಳಬೇಡ. ಖಂಡಿತ ಆ ರೀತಿ ಏನು ಆಗಿರೋದಿಲ್ಲ. ನೀನು ಆರೋಗ್ಯವಾಗಿದ್ದೀಯಾ. ಬೇಕಾದರೆ ಒಂದು ಸಾರಿ ವೈದ್ಯರ ಬಳಿ ಹೋಗೋಣ. ಆಗ ನಿನ್ನ ಅನುಮಾನಗಳು ಪರಿಹಾರವಾಗುತ್ತೆ ಎಂದು ಹೇಳಿದ. ಅದಕ್ಕೂ ಮೊದಲು ಅಪ್ಪನಿಗೆ ಈ ವಿಚಾರ ತಿಳಿಸೋಣವೆಂದು ಹೇಳಿದ. ಆದರೆ ನನಗೆ ನನ್ನ ಗಂಡನಿಗೆ ಈ ವಿಚಾರ ತಿಳಿಸುವಷ್ಟು ದೈರ್ಯ ಇರಲಿಲ್ಲ. ಆದರೂ ದೈರ್ಯ ಮಾಡಿ ಅವರಲ್ಲಿ ಈ ವಿಚಾರ ಹೇಳಿದೆ. ಅವರು ಕೂಡ ಇದೇ ರೀತಿ ದೈರ್ಯ ತುಂಬಿದರು.

ಪರೀಕ್ಷೇ ಮಾಡಿದ ವೈದ್ಯರು ಹೇಳಿದ್ದೇನು?
ಮಾರನೇ ದಿನ ಮಗನೊಂದಿಗೆ ವೈದ್ಯರ ಬಳಿ ಹೋದೆ ವೈದ್ಯರು ಪರೀಕ್ಷೇ ಮಾಡಿ ನನ್ನ ರಕ್ತ ಸಂಗ್ರಹ ಮಾಡಿದ್ದರು. ಫಲಿತಾಂಶ ತಿಳಿಸೋದಾಗಿ ಹೇಳಿದ್ದರು. ನಾನು, ಗಂಡ ಹಾಗೂ ಮಕ್ಕಳು ಕ್ಯಾನ್ಸರ್ ಆಗದೇ ಇರಲಿ ಎಂದು ಆ ದೇವರಲ್ಲಿ ಎಷ್ಟು ಬೇಡಿಕೊಂಡಿದ್ದೇವೋ ನಮಗೆ ಗೊತ್ತಿಲ್ಲ. ಮತ್ತೆ ಮಾರನೇ ದಿನ ರಿಪೋರ್ಟ್ ಬಂದಿದೆ ಎಂದು ವೈದ್ಯರು ಕರೆ ಮಾಡಿದರು. ನಾನು ಹಾಗೂ ಮಗ ವೈದ್ಯರ ಬಳಿ ಹೋದೆವು. ವೈದ್ಯರು ನನ್ನ ಬಳಿ ಏನನ್ನೂ ಹೇಳಲಿಲ್ಲ. ಆದರೆ ನನ್ನ ಮಗನಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದರು. ಮನೆಗೆ ಬಂದವಳೇ ಮಗನನ್ನು ಕರೆದು ಏನಾಯ್ತು? ಡಾಕ್ಟರ್ ನಿನ್ನ ಬಳಿ ಏನು ಹೇಳಿದರು? ಎಂದು ಕೇಳಿದೆ. ಏನಿಲ್ಲಮ್ಮಾ ನೀನು ಹುಷಾರಾಗಿದ್ದೀಯಾ ಎಂದು ಮಗ ಹೇಳಿದ.

ಆದರೆ ಮಗನ ಮುಖ ನೋಡಿ ನಾನು ಎಲ್ಲವನ್ನೂ ಅರ್ಥ ಮಾಡಿಕೊಂಡೆ. ಹೌದು ನನಗೆ ಸ್ತನ ಕ್ಯಾನ್ಸರ್ ಇರೋದನ್ನು ವೈದ್ಯರು ದೃಢ ಪಡಿಸಿದ್ದರು. ಗಂಡ ಮನೆಗೆ ಬಂದ ನಂತರ ಈ ವಿಚಾರವನ್ನು ನನ್ನ ಮಗ ತಿಳಿಸಿದ. ಆ ಒಂದು ಸುದ್ದಿ ನಮಗೆ ಬರ ಸಿಡಿಲು ಬಡಿದಂತಾಗಿತ್ತು. ನಮ್ಮ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ನನ್ನ ಗಂಡ ಸೇರಿದಂತೆ ನಮ್ಮೆಲ್ಲರ ಕಣ್ಣಾಲಿಗಳು ಒದ್ದೆಯಾಗಿತ್ತು.

ಯಾರ ಬಳಿಯೂ ಈ ವಿಚಾರದ ಬಗ್ಗೆ ಮಾತನಾಡಲು ಇಷ್ಡವಿರಲಿಲ್ಲ!
ಆ ದಿನ ದೇವರು ನನಗ್ಯಾಕೆ ಇಷ್ಟು ದೊಡ್ಡ ಕಾಯಿಲೆ ಕೊಟ್ಟರು ಎಂದು ಎಷ್ಟು ಕಣ್ಣೀರು ಹಾಕಿದ್ದೇನೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಜೀವನದಲ್ಲಿ ಬಂದೊದಗಿದ ಈ ಕಷ್ಟವನ್ನು ಎದುರಿಸಲೇಬೇಕಿತ್ತು. ಗಂಡ, ಮಕ್ಕಳು ದೈರ್ಯ ತುಂಬಿದರೂ ನಾನು ಅಪರೇಷನ್ ಗೆ ಸಿದ್ಧವಾದೆ. ಆದರೆ ನನಗೆ ಕಾಯಿಲೆ ಇರೋ ವಿಚಾರ ಯಾರಿಗೂ ಗೊತ್ತಾಗಬಾರದೆಂದು ನನ್ನ ಕುಟುಂಬಸ್ಥರಿಗೆ ಷರತ್ತು ಹಾಕಿದೆ.

ನಾನು ತುಂಬಾನೇ ಆಕ್ಟೀವ್ ಮಹಿಳೆ. ಕುಟುಂಬಸ್ಥರೊಂದಿಗೆ ನಗು ನಗುತ್ತಾ ಎಲ್ಲರನ್ನೂ ಪ್ರೀತಿಸುತ್ತಿದ್ದವಳು ನಾನು. ನನಗೆ ಕ್ಯಾನ್ಸರ್ ಇದೆ ಅಂತ ಗೊತ್ತಾದರೆ ಖಂಡಿತ ಎಲ್ಲರೂ ನನ್ನನ್ನೂ ನೋಡೋದಕ್ಕೆ ಬರುತ್ತಾರೆ. ನನ್ನನ್ನು ನೋಡಿ ಕಣ್ಣೀರು ಹಾಕುತ್ತಾರೆ. ಇದರಿಂದ ನಾನು ಮತ್ತಷ್ಟು ಕುಗ್ಗಿ ಹೋಗಬಹುದು. ಇದೇ ಉದ್ದೇಶಕ್ಕೆ ನಾನು ಈ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟಿದ್ದೆ. ಕೆಲವೇ ಕೆಲವು ಜನ ನನ್ನ ಆಪ್ತ ಕುಟುಂಬಸ್ಥರಿಗೆ ಮಾತ್ರ ಈ ವಿಚಾರ ಗೊತ್ತಿತ್ತು.

ಕ್ಯಾನ್ಸರ್ ಸೆಕೆಂಡ್ ಸ್ಟೇಜ್ ದಾಟಿತ್ತು!
ಸ್ತನ ಕ್ಯಾನ್ಸರ್ ನಲ್ಲಿ ಕೆಲವು ಹಂತಗಳಿರುತ್ತೆ. ನಾನು ಎರಡನೇ ಹಂತ ದಾಟಿ ಮೂರನೇ ಹಂತಕ್ಕೆ ಕಾಲಿಟ್ಟಿದ್ದೆ. ಹೀಗಾಗಿ ಆದಷ್ಟು ಬೇಗ ಆಪರೇಷನ್ ಗೆ ಸಿದ್ಧತೆ ಮಾಡಲಾಯ್ತು. ನಾನು ತುಂಬಾನೇ ಗಟ್ಟಿಗಿತ್ತಿ. ಇಷ್ಟು ದಿನ ಎಲ್ಲರಿಗೂ ದೈರ್ಯ ಹೇಳುತ್ತಿದ್ದ ನಾನು ಅಪರೇಷನ್ ಗೆ ಹೋಗೋ ಮೊದಲು ಕೂಡ ಬದುಕುತ್ತೇನೋ ಇಲ್ಲವೋ ಎಂಬ ಭಯ ಕಾಡಿತ್ತು. ಅಷ್ಟರ ಮಟ್ಟಿಗೆ ನಾನು ಕುಗ್ಗಿ ಹೋಗಿದ್ದೆ. ಆದರೆ ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ. ಅಪರೇಷನ್ ಯಶಸ್ವಿಯಾಗಿತ್ತು.

ಕಿಮೋಥೆರಪಿಯಿಂದ ಕೂದಲು ಕಳೆದುಕೊಂಡೆ!
ಅಪರೇಷನ್ ಯಶಸ್ವಿಯಾಯ್ತು. ಆದರೆ ಕೆಲವು ದಿನಗಳ ನಂತರ ಡಾಕ್ಟರ್ ಮತ್ತೊಂದು ಶಾಕ್ ಕೊಟ್ರು. ಕಿಮೋಥೆರಪಿ ಮಾಡಿಸಬೇಕು ಅಂತ ಹೇಳಿದ್ರು. ಈ ಚಿಕಿತ್ಸೆಯಿಂದ ನೀವು ಕೂದಲು ಕಳೆದುಕೊಳ್ಳುತ್ತೀರಿ ಅಂತಾನೂ ಹೇಳಿದ್ರು. ಈ ಮಾತು ಕೇಳಿ ನಾನು ಮತ್ತಷ್ಟು ಕುಗ್ಗಿ ಹೋದೆ. ಹೆಣ್ಣು ಮಕ್ಕಳಿಗೆ ಕೂದಲು ಒಂದು ರೀತಿ ಸೌಭಾಗ್ಯ ಇದ್ದ ಹಾಗೆ. ಇದು ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ಈ ಕ್ಯಾನ್ಸರ್ ನಿಂದಾಗಿ ನಾನು ಕೂದಲ ಆಸೆಯನ್ನೇ ಬಿಡಬೇಕಾಯ್ತು. ಮತ್ತೇನು ಮಾಡೋದು ಆಗಿದ್ದು ಆಗಲಿ ಎಂದು ದೈರ್ಯ ತೆಗೆದುಕೊಂಡೆ.

ಕಿಮೋಥೆರಪಿಯ ನಂತರ ಲೇಸರ್ ಚಿಕಿತ್ಸೆಯನ್ನು ಮಾಡಿದರು. ಈಗ ತಲೆ ತುಂಬಾ ಕೂದಲು ಕೂಡ ಬೆಳೆದಿದೆ. ನಾನು ಸ್ತನ ಕ್ಯಾನ್ಸರ್ ಅನ್ನು ಗೆದ್ದಿದ್ದೇನೆ ಅಂತ ಹೇಳೋದಕ್ಕೆ ತುಂಬಾನೇ ಖುಷಿ ಆಗುತ್ತೆ. ಇದಕ್ಕೆಲ್ಲಾ ಕಾರಣ ನನ್ನ ಗಂಡ, ಮಕ್ಕಳು ಹಾಗೂ ಕುಟುಂಬಸ್ಥರು. ಅವರು ತುಂಬಿದ ದೈರ್ಯ, ಪ್ರೋತ್ಸಾಹದಿಂದ ನಾನು ಇವತ್ತು ಬದುಕುಳಿದಿದ್ದೇನೆ. ಈ ಸಮಯದಲ್ಲಿ ನಾನು ಆ ದೇವರಿಗೆ ಚಿರರುಣಿಯಾಗಿದ್ದೇನೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Surviving Breast Cancer: A True Inspirational Story of this Woman's Journey

Surviving Breast Cancer: A True Inspirational Story of this Woman's Journey.
X
Desktop Bottom Promotion