ಮಕ್ಕಳು, ಯುವಕರು, ವೃದ್ಧರು.. ನಿಮ್ಮ ವಯಸ್ಸಿನ ಪ್ರಕಾರ ಎಷ್ಟು ಗಂಟೆ ಮಲಗಬೇಕು ಗೊತ್ತಾ?

ರಾತ್ರಿ ಎಷ್ಟು ಗಂಟೆಗೆ ಮಲಗಿದರೆ ಕಾಯಿಲೆಗಳು ದೂರ? ಇಲ್ಲಿದೆ ವೈದ್ಯರ ಸಲಹೆ. ಉತ್ತಮ ಆರೋಗ್ಯಕ್ಕೆ ಸರಿಯಾದ ಸಮಯದಲ್ಲಿ ನಿದ್ರೆ (sleep) ಮಾಡುವುದು ಅತ್ಯಗತ್ಯ. ಆದರೂ, ಇಂದಿನ ದಿನಗಳಲ್ಲಿ ಅನೇಕರು ನಿದ್ರೆಗೆ ಸಾಕಷ್ಟು ಆದ್ಯತೆ ನೀಡಲ್ಲ. ಪ್ರತಿಯೊಬ್ಬರೂ ತಮ್ಮ ವಯಸ್ಸಿಗೆ ಅನುಗುಣವಾಗಿ ಯಾವಾಗ ಮಲಗಬೇಕು ಎಂಬುದರ ಬಗ್ಗೆ ಸ್ಪಷ್ಟ ಅರಿವು ಹೊಂದುವುದು ಮುಖ್ಯ. ಸರಿಯಾದ ಸಮಯದಲ್ಲಿ ನಿದ್ರಿಸುವುದರಿಂದ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಡಯಾಬಿಟಿಸ್ ಅಥವಾ ಮಧುಮೇಹದಿಂದ ಖಿನ್ನತೆಯವರೆಗಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ರಾತ್ರಿ 10 ರಿಂದ 11 ಗಂಟೆಯ ನಡುವೆ ಮಲಗುವವರಲ್ಲಿ (sleeping) ಹೃದಯ ಕಾಯಿಲೆಗಳ ಅಪಾಯ ಕಡಿಮೆ ಇರುತ್ತದೆ ಎಂದು ಯೂರೋಪಿಯನ್ ಹಾರ್ಟ್ ಜರ್ನಲ್ ಡಿಜಿಟಲ್ ಹೆಲ್ತ್ ಹೇಳಿದೆ. ಪ್ರತಿಯೊಬ್ಬರಿಗೂ ತಮ್ಮ ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಸಮಯವನ್ನು (sleep hours) ನಿಗದಿಪಡಿಸುವುದು ನಿರ್ಣಾಯಕವಾಗಿದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

sleep hours

ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಸಮಯಗಳು

5 ರಿಂದ 12 ವರ್ಷ ಮಕ್ಕಳು

5 ರಿಂದ 12 ವರ್ಷ ವಯಸ್ಸಿನ ಮಕ್ಕಳು ರಾತ್ರಿ 8 ರಿಂದ 9 ಗಂಟೆ ನಡುವೆ ಮಲಗುವುದು ಸೂಕ್ತ. ಮಕ್ಕಳು 9 ರಿಂದ 12 ಗಂಟೆಗಳ ಕಾಲ ನಿದ್ರಿಸಬೇಕು. ಸಾಕಷ್ಟು ನಿದ್ರೆಯು ಮಕ್ಕಳ ದೈಹಿಕ ಬೆಳವಣಿಗೆಗೆ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೇಗ ಮಲಗುವುದರಿಂದ ಅವರ ಏಕಾಗ್ರತೆಯ ಮಟ್ಟವೂ ಹೆಚ್ಚುತ್ತದೆ. ಕಲಿಕೆಯ ಸಾಮರ್ಥ್ಯವೂ ಸುಧಾರಿಸುತ್ತದೆ. ಮಕ್ಕಳಿಗೆ ಸಾಕಷ್ಟು ನಿದ್ರೆ ಸಿಗದಿದ್ದರೆ, ಅವರು ಚುರುಕುತನವನ್ನು ಕಳೆದುಕೊಳ್ಳುತ್ತಾರೆ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹದಿಹರೆಯದವರು ಎಷ್ಟು ಗಂಟೆಗೆ ಮಲಗಬೇಕು?

ಹದಿಹರೆಯದವರು ಅಂದರೆ 13 ರಿಂದ 18 ವರ್ಷ ವಯಸ್ಸಿನವರು ರಾತ್ರಿ 10.30 ರಿಂದ 11.30 ಗಂಟೆ ನಡುವೆ ಮಲಗಬೇಕು. ಈ ವಯೋಮಾನದಲ್ಲಿ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ನಡೆಯುತ್ತವೆ. ಸರಿಯಾದ ಸಮಯದಲ್ಲಿ ನಿದ್ರಿಸಿದರೆ, ಅವರ ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ. ಮನಸ್ಥಿತಿ ಸುಧಾರಿಸುತ್ತದೆ. ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಸಾಕಷ್ಟು ನಿದ್ರೆ ಇಲ್ಲದೆ, ಹದಿಹರೆಯದವರು ಒತ್ತಡ ಮತ್ತು ಆತಂಕದ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ವಯಸ್ಕರು ಎಷ್ಟು ಗಂಟೆಗೆ ಮಲಗಬೇಕು?

ವಯಸ್ಕರು ಅಂದರೆ 18 ರಿಂದ 65 ವರ್ಷದವರು ರಾತ್ರಿ 10 ರಿಂದ 11 ಗಂಟೆ ನಡುವೆ ನಿದ್ರೆಗೆ ಜಾರಬೇಕು. ಈ ವಯೋಮಾನದವರಿಗೆ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮುಖ್ಯ. ವಯಸ್ಕರು ಪ್ರತಿದಿನ ಒಂದೇ ಸಮಯದಲ್ಲಿ ಮಲಗಬೇಕು ಎಂದು ತಜ್ಞರ ಸಲಹೆ ನೀಡುತ್ತಾರೆ. ತಡರಾತ್ರಿಯವರೆಗೆ ಎಚ್ಚರವಾಗಿರುವುದು ಆಯಾಸ, ರಕ್ತದೊತ್ತಡ ಮತ್ತು ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ, ರಾತ್ರಿ ಮಲಗುವ ಮೊದಲು ಕೆಫೀನ್ ಅಥವಾ ಅತಿಯಾದ ಆಹಾರ ಸೇವಿಸುವುದನ್ನು ಬಿಡಬೇಕು. ಸ್ಥಿರವಾದ ನಿದ್ರೆಯ ವೇಳಾಪಟ್ಟಿ ದೇಹದ ಆಂತರಿಕ ಗಡಿಯಾರವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ವೃದ್ಧರು ಎಷ್ಟು ಗಂಟೆಗೆ ಮಲಗಬೇಕು?

65 ವರ್ಷಕ್ಕಿಂತ ಮೇಲ್ಪಟ್ಟವರು (ವೃದ್ಧರು) ರಾತ್ರಿ 9 ರಿಂದ 10 ಗಂಟೆ ನಡುವೆ ಮಲಗಬೇಕು. ಈ ವಯಸ್ಸಿನಲ್ಲಿ 7 ರಿಂದ 8 ಗಂಟೆಗಳ ನಿದ್ರೆ ಅತ್ಯಗತ್ಯ. ವೃದ್ಧರು ಸಾಮಾನ್ಯವಾಗಿ ಬೆಳಗ್ಗೆ ಬೇಗ ಏಳುತ್ತಾರೆ. ಇದು ಅವರ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು. ಇದರ ಜೊತೆಗೆ, ಮಲಗುವ ಮೊದಲು ಹರ್ಬಲ್ ಚಹಾ ಸೇವಿಸುವುದು ಅಥವಾ ಧ್ಯಾನ ಮಾಡುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ.

ಉತ್ತಮ ನಿದ್ರೆಗಾಗಿ ಕೆಲವು ಸಲಹೆಗಳು

• ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ. ಏಳುವ ಅಭ್ಯಾಸ ಮಾಡಿಕೊಳ್ಳಿ.
• ಮಲಗುವ ಕೋಣೆಯನ್ನು ಕತ್ತಲೆ, ಶಾಂತ ಮತ್ತು ತಂಪಾಗಿ ಇರಿಸಿ.
• ಮಲಗುವ ಒಂದು ಗಂಟೆ ಮೊದಲು ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆ ನಿಲ್ಲಿಸಿ.
• ರಾತ್ರಿ ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಬೇಡ.

ಒಟ್ಟಾರೆಯಾಗಿ, ನಿದ್ರೆಯನ್ನು ಕಡೆಗಣಿಸುವುದು ನಮ್ಮ ಆರೋಗ್ಯಕ್ಕೆ ಮಾರಕ. ಆದ್ದರಿಂದ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಮಲಗಿ, ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ಜೀವನವನ್ನು ಪಡೆಯಿರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Wednesday, September 10, 2025, 21:00 [IST]
X
Desktop Bottom Promotion