Latest Updates
-
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ!
ಕ್ಯಾನ್ಸರ್ ನಂತರದ ಜೀವನ: ಯಾವೆಲ್ಲ ಸವಾಲುಗಳು? ಡಾಕ್ಟರ್ ಹೇಳಿದ ಸತ್ಯ
ಕ್ಯಾನ್ಸರ್ ನಂತರದ ಜೀವನವು ಭರವಸೆ, ಆತಂಕ ಮತ್ತು ಅನಿಶ್ಚಿತತೆಗಳ ಮಿಶ್ರಣವಾಗಿರುತ್ತದೆ. ಕ್ಯಾನ್ಸರ್‌ನಿಂದ (Cancer) ಬದುಕುಳಿದವರು ಅನೇಕ ಭಾವನಾತ್ಮಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ಯಾನ್ಸರ್‌ನಿಂದ ಮುಕ್ತರಾಗುವುದು (Life After Cancer) ಎಂದರೆ ಕೇವಲ ಸಾವನ್ನು ಗೆಲ್ಲುವುದಲ್ಲ, ದೇಹ ಮತ್ತು ಮನಸ್ಸನ್ನು ನೋವುಗಳಿಂದ ಮುಕ್ತಗೊಳಿಸುವುದು, ನಮ್ಮನ್ನು ನಾವು ಪುನರ್ ರೂಪಿಸಿಕೊಳ್ಳುವುದು ಮತ್ತು ಜೀವನದ ಉದ್ದೇಶವನ್ನು ಮರು ಅನ್ವೇಷಿಸುವುದು ಆಗಿದೆ. ಕ್ಯಾನ್ಸರ್ ಮರುಕಳಿಸುವ ಭಯವು ಕೆಲವು ವರ್ಷಗಳವರೆಗೆ ಕಾಡಬಹುದು. ಆದರೆ ಕುಟುಂಬ, ಸ್ನೇಹಿತರು ಮತ್ತು ಆರೋಗ್ಯ ತಜ್ಞರ ಬೆಂಬಲವು ಕ್ಯಾನ್ಸರ್ ಚಿಕಿತ್ಸೆಯ ನಂತರದ ಹೋರಾಟದಲ್ಲಿ ಬಹಳ ಮುಖ್ಯ.
ಜೂನ್ ತಿಂಗಳನ್ನು ರಾಷ್ಟ್ರೀಯ ಕ್ಯಾನ್ಸರ್ ಬದುಕುಳಿದವರ ತಿಂಗಳು (National Cancer Survivors Month) ಎಂದು ಆಚರಿಸಲಾಗುತ್ತದೆ. ಈ ಮೂಲಕ ಕ್ಯಾನ್ಸರ್‌ನಿಂದ ಬದುಕುಳಿದವರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಗೌರವಿಸಲಾಗುವುದು. ಹಾಗೆಯೇ ಬದುಕುಳಿಯುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕ್ಯಾನ್ಸರ್‌ನಿಂದ ಬಾಧಿತರಾದವರಿಗೆ ಸಂಪನ್ಮೂಲಗಳನ್ನು ಒದಗಿಸುವ ಸಮಯವಾಗಿದೆ. ಕ್ಯಾನ್ಸರ್ ಚಿಕಿತ್ಸೆಯ ನಂತರದ ಜೀವನ ಹೇಗಿರುತ್ತದೆ, ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಯಾವುವು, ಅನುಸರಣಾ ಆರೈಕೆಯ ಮಹತ್ವವೇನು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಕುರಿತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ಹರೀಶ್ ಇ ಅವರು Boldsky Kannadaಗೆ ಮಾಹಿತಿಯನ್ನು ನೀಡಿದ್ದಾರೆ.

ಚಿಕಿತ್ಸೆಯ ನಂತರದ ದೈಹಿಕ ಪರಿಣಾಮಗಳು
ಕ್ಯಾನ್ಸರ್ ಚಿಕಿತ್ಸೆಯ ನಂತರ ಉಂಟಾಗುವ ದೈಹಿಕ ಅಡ್ಡಪರಿಣಾಮಗಳು ರೋಗಿಯು ಯಾವ ರೀತಿಯ ಚಿಕಿತ್ಸೆಗೆ ಒಳಗಾಗಿದ್ದಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಯಾಸ, ನೋವು, ಲಿಂಫೆಡೆಮಾ (ಊತ), ಮತ್ತು ನರರೋಗ (ನರಗಳ ಹಾನಿ) ಸಾಮಾನ್ಯ ಸಮಸ್ಯೆಗಳಾಗಿವೆ. ರೋಗಿಯು ಸ್ಮರಣಶಕ್ತಿ ನಷ್ಟ ಮತ್ತು ಏಕಾಗ್ರತೆಯ ಸಮಸ್ಯೆಗಳಂತಹ ಅರಿವಿನ ತೊಂದರೆಗಳನ್ನು ಸಹ ಎದುರಿಸಬಹುದು. ಚಿಕಿತ್ಸೆಯ ನಂತರದ ಆರಂಭಿಕ ಹಂತದಲ್ಲಿ ಜೀವನದ ಗುಣಮಟ್ಟದ ಮೇಲೆ ಕೆಲವು ಸವಾಲುಗಳು ಪರಿಣಾಮ ಬೀರುತ್ತವೆ. ಹಾರ್ಮೋನುಗಳ ಬದಲಾವಣೆಗಳು, ಲೈಂಗಿಕ ಸಮಸ್ಯೆಗಳು, ಜಠರಗರುಳಿನ ಸಮಸ್ಯೆಗಳು ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು ಮುಂತಾದವುಗಳು ಇದರಲ್ಲಿ ಸೇರಿವೆ.
ಕ್ಯಾನ್ಸರ್ ಚಿಕಿತ್ಸೆಯ ನಂತರದ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಆರೈಕೆ ಬಹಳ ಮುಖ್ಯ. ಸೂಕ್ತ ಚಿಕಿತ್ಸೆ ಮತ್ತು ಸಕಾರಾತ್ಮಕ ಮನೋಭಾವದಿಂದ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು. ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆಯು ಕೆಲವು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಬಹುದು. ದೀರ್ಘಕಾಲದ ನೋವು, ಕಲೆಗಳು, ಊತ, ಮೂತ್ರಪಿಂಡ ಅಥವಾ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಸಮಸ್ಯೆಗಳು ಮುಂತಾದವುಗಳು ಕಂಡುಬರಬಹುದು. ತಲೆ, ಕುತ್ತಿಗೆ ಮತ್ತು ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ದೇಹದ ರೂಪದಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಆದರೆ, ಇವು ಯಾವುದೂ ಶಾಶ್ವತವಲ್ಲ. ಸಾಕಷ್ಟು ರೋಗಿಗಳು ಆರು ತಿಂಗಳಿಂದ ಎರಡು ವರ್ಷಗಳ ಒಳಗೆ ಸಂಪೂರ್ಣ ಸಾಮಾನ್ಯ ಜೀವನಶೈಲಿಗೆ ಮರಳುತ್ತಾರೆ ಎಂದು ಡಾ. ಹರೀಶ್ ಅವರು ಹೇಳಿದ್ಧಾರೆ.
ಕೀಮೋಥೆರಪಿಯ ಅಡ್ಡಪರಿಣಾಮಗಳು
ಕೀಮೋಥೆರಪಿಯ ಅಡ್ಡಪರಿಣಾಮಗಳೆಂದರೆ ನ್ಯೂರೋಪತಿ, ತಾತ್ಕಾಲಿಕ ಕೂದಲು ಉದುರುವ ಸಮಸ್ಯೆ, ಬಂಜೆತನ ಮತ್ತು ಅಪರೂಪದ ಗಡ್ಡೆಗಳು ರೂಪುಗೊಳ್ಳುವುದು. ರೇಡಿಯೊಥೆರಪಿಯಿಂದ ಅಂಗಾಂಶ ಫೈಬ್ರೋಸಿಸ್, ಚರ್ಮದ ಬದಲಾವಣೆಗಳು, ಹೃದಯರಕ್ತನಾಳದ ತೊಂದರೆಗಳು ಮತ್ತು ಹಾರ್ಮೋನ್ ಅಸಮತೋಲನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫಿಸಿಯೋಥೆರಪಿ ಮತ್ತು ತಜ್ಞರ ಸಲಹೆಗಳನ್ನು ಪಾಲಿಸುವುದರಿಂದ ಈ ಸಮಸ್ಯೆಗಳನ್ನು ನಿಭಾಯಿಸಲು ಸಹಾಯವಾಗುತ್ತದೆ.
ಚೇತರಿಕೆಯ ಹಂತದಲ್ಲಿ ದೈಹಿಕ ಚಟುವಟಿಕೆಯ ಪ್ರಯೋಜನಗಳು
ಕ್ಯಾನ್ಸರ್ ಚಿಕಿತ್ಸೆಯ ನಂತರ ದೈಹಿಕ ಮತ್ತು ಮಾನಸಿಕ ಬಲವನ್ನು ಹೆಚ್ಚಿಸಿಕೊಳ್ಳಲು ದೈಹಿಕ ಚಟುವಟಿಕೆಗಳು ಬಹಳ ಪರಿಣಾಮಕಾರಿಯಾಗಿವೆ. ಉತ್ತಮ ನಿದ್ರೆ, ಕೀಲುಗಳ ಚಲನೆಯನ್ನು ಸುಗಮಗೊಳಿಸಲು ಮತ್ತು ದೇಹದ ಸ್ಟಾಮಿನಾವನ್ನು ಹೆಚ್ಚಿಸಲು ವಾಕಿಂಗ್ ಉತ್ತಮ ವಿಧಾನವಾಗಿದೆ. ಸ್ಟ್ರೆಚಿಂಗ್, ಯೋಗ ಮತ್ತು ಲಘು ಭಾರ ಎತ್ತುವ ವ್ಯಾಯಾಮಗಳು ಸ್ನಾಯುಗಳನ್ನು ಬಲಪಡಿಸಲು ಉತ್ತಮವಾಗಿವೆ. ಕುತ್ತಿಗೆ, ಭುಜ ಮತ್ತು ಕೈಕಾಲುಗಳ ವ್ಯಾಯಾಮ, ಉಸಿರಾಟದ ವ್ಯಾಯಾಮಗಳು ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದವರಿಗೆ ಪರಿಣಾಮಕಾರಿಯಾಗಿವೆ.
ನಿಯಮಿತ ತಪಾಸಣೆಗಳ ಮಹತ್ವ
ಕ್ಯಾನ್ಸರ್‌ನಿಂದ ಮುಕ್ತರಾದವರ ಭಾವನಾತ್ಮಕ ಹೊರೆಯು ದೈಹಿಕ ಸವಾಲುಗಳನ್ನು ಮೀರಿಸುವಂತಿರುತ್ತದೆ. ಈ ಸಮಯದಲ್ಲಿ ಕುಟುಂಬ, ಸಹೋದ್ಯೋಗಿಗಳು ಮತ್ತು ಸಮಾಜದಿಂದ ಬೆಂಬಲ ಅತ್ಯಗತ್ಯ. ಕುಟುಂಬ ಸದಸ್ಯರು ಭಾವನಾತ್ಮಕ ಆರೈಕೆಯನ್ನು ಒದಗಿಸಬೇಕು ಮತ್ತು ಒಂಟಿತನವನ್ನು ಕಡಿಮೆ ಮಾಡಬೇಕು. ಉದ್ಯೋಗದಾತರು ಕ್ಯಾನ್ಸರ್‌ನಿಂದ ಬದುಕುಳಿದವರನ್ನು ಮರಳಿ ಕೆಲಸಕ್ಕೆ ಕರೆದು ಅವರ ಆರ್ಥಿಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಮರುಕಳಿಸುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಬೆಂಬಲವಾಗಿ ನಿಂತು ಸಮಾಜದಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಬೇಕು.
ಚಿಕಿತ್ಸೆಯ ಬಳಿಕವೈ ನಿಯಮಿತವಾಗಿ ವೈದ್ಯರ ತಪಾಸಣೆಗೆ ಒಳಗಾಗಿ ಬೇರೆ ಯಾವುದೇ ರೀತಿಯ ಸಮಸ್ಯೆಗಳು ಕಂಡುಬರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಯುವರಾಜ್ ಸಿಂಗ್ ಮತ್ತು ನಟಿ ಸೋನಾಲಿ ಬೇಂದ್ರೆ ಅವರಂತಹ ವ್ಯಕ್ತಿಗಳು ಅನೇಕ ಕ್ಯಾನ್ಸರ್ ರೋಗಿಗಳಿಗೆ ಮಾದರಿಯಾಗಿದ್ದಾರೆ. ಉತ್ತಮ ಬೆಂಬಲವು ಕ್ಯಾನ್ಸರ್ ಚಿಕಿತ್ಸೆಯ ನಂತರದ ಜೀವನಕ್ಕೆ ಬಹಳ ಪ್ರಮುಖ ಅಂಶವಾಗಿದೆ ಎಂದು ಡಾ. ಹರೀಶ್ ತಿಳಿಸಿದ್ದಾರೆ.
ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆಗಳು
• ಕ್ಯಾನ್ಸರ್ ಮರುಕಳಿಸುವ ಭಯ
• ದುಃಖ ಅಥವಾ ಖಿನ್ನತೆ
• ಆರೋಗ್ಯದ ಬಗ್ಗೆ ಆತಂಕ
• ಒಂಟಿತನ ಅಥವಾ ಪ್ರತ್ಯೇಕತೆ
ವೈದ್ಯರು, ಸಲಹೆಗಾರರು, ಬೆಂಬಲ ಗುಂಪುಗಳು ಅಥವಾ ಕ್ಯಾನ್ಸರ್‌ನಿಂದ ಬದುಕುಳಿದವರೊಂದಿಗೆ ಮಾತನಾಡುವುದು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ಒಬ್ಬಂಟಿಯಲ್ಲ ಎಂಬ ಭಾವನ ಮೂಡುತ್ತದೆ.
ನಿಯಮಿತ ತಪಾಸಣೆಯ ವೇಳಾಪಟ್ಟಿ
• ಮೊದಲ 2 ವರ್ಷಗಳಲ್ಲಿ ಪ್ರತಿ 3-6 ತಿಂಗಳಿಗೊಮ್ಮೆ.
• ನಂತರ ಪ್ರತಿ 6-12 ತಿಂಗಳಿಗೊಮ್ಮೆ.
• 5 ವರ್ಷಗಳ ನಂತರ ವರ್ಷಕ್ಕೊಮ್ಮೆ (ನಿಮ್ಮ ಸ್ಥಿತಿಗೆ ಅನುಗುಣವಾಗಿ)
• ಯಾವುದೇ ಹೊಸ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರಿಗೆ ತಿಳಿಸಿ.
ಕುಟುಂಬ ಮತ್ತು ಸ್ನೇಹಿತರ ಪ್ರೀತಿ, ಬೆಂಬಲ ಮುಖ್ಯ
ಒಟ್ಟಾರೆಯಾಗಿ, ಕ್ಯಾನ್ಸರ್‌ನಿಂದ ಬದುಕುಳಿದ ನಂತರದ ಜೀವನವು ಸವಾಲಿನಿಂದ ಕೂಡಿರುತ್ತದೆ. ಆದರೂ ಸೂಕ್ತ ಆರೈಕೆ, ಬೆಂಬಲ ಮತ್ತು ಧನಾತ್ಮಕ ಮನೋಭಾವದಿಂದ ರೋಗಿಗಳು ಸಂತೋಷದ ಜೀವನವನ್ನು ನಡೆಸಬಹುದು. ವೈದ್ಯಕೀಯ ತಪಾಸಣೆಗಳನ್ನು ತಪ್ಪದೇ ಮಾಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಕ್ಯಾನ್ಸರ್‌ನಿಂದ ಬದುಕುಳಿದವರ ಜೀವನದಲ್ಲಿ ಕುಟುಂಬ ಮತ್ತು ಸ್ನೇಹಿತರ ಪಾತ್ರ ಬಹಳ ಮುಖ್ಯ. ಅವರ ಪ್ರೀತಿ, ಬೆಂಬಲ ಮತ್ತು ಕಾಳಜಿಯು ರೋಗಿಗಳು ಚೇತರಿಸಿಕೊಳ್ಳಲು ಮತ್ತು ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಕುಟುಂಬದ ಸದಸ್ಯರು ರೋಗಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರಿಗೆ ಸಕಾರಾತ್ಮಕ ವಾತಾವರಣವನ್ನು ಒದಗಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














