Latest Updates
-
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು
ಮಹಿಳೆಯರಿಗಾಗಿ ಆರೋಗ್ಯ ಆಪ್-ತಕ್ಷಣ ಡೌನ್‌ಲೋಡ್ ಮಾಡಿಕೊಳ್ಳಿ
ಒಬ್ಬ ಒಂದು ಹೊಸಬಟ್ಟೆಯ ಪ್ಯಾಕೆಟ್ ತೆಗೆದುಕೊಂಡು ಓಡುತ್ತಿದ್ದನಂತೆ. ಅನುಮಾನಗೊಂಡ ಪೋಲೀಸು ಅವನ ಹಿಂದೆ ಓಡಿ ಅಟ್ಟಾಡಿಸಿ ಕಡೆಗೂ ಹಿಡಿದನಂತೆ. ಏನು ಕದ್ದೆ ಎಂದು ಕೇಳಿದಾಗ ಆತ ಕದ್ದಿದ್ದಲ್ಲ, ಹೊಸ ಬಟ್ಟೆ ಕೊಂಡಿದ್ದು ಎಂದು ರಸೀದಿಯನ್ನೂ ತೋರಿಸಿದನಂತೆ. ಬೆವರೊರೆಸಿಕೊಳ್ಳುತ್ತಾ ಪೋಲೀಸು ಮತ್ತೇಕೆ ಓಡಿದೆ ಎಂದು ಕೇಳಿದನಂತೆ. ಮತ್ತೆ, ಈ ಫ್ಯಾಷನ್ ಬದಲಾಗುವ ಮುನ್ನ ಹಾಕಿಕೊಳ್ಳುವುದು ಬೇಡವೇ ಎಂದು ಆತ ಮರುಪ್ರಶ್ನೆ ಕೇಳಿದನಂತೆ. ಜೋಕು ನಗುಬರಿಸಿದರೂ ಇಂದು ಈ ಫ್ಯಾಷನ್ ಬದಲಾಗುವ ವೇಗಕ್ಕಿಂತಲೂ ತಂತ್ರಜ್ಞಾನ ಬದಲಾಗುತ್ತಿದೆ, ಅಗ್ಗವೂ ಆಗುತ್ತಿದೆ.
ಒಂದು ಕಾಲದಲ್ಲಿ ಜಿಪಿಎಸ್ ಎಂದರೆ ಕೇವಲ ಕೋಟ್ಯಾಧೀಶ್ವರರು ಮಾತ್ರ ಪಡೆಯಬಹುದಾಗಿದ್ದ ತಂತ್ರಜ್ಞಾನವಾಗಿತ್ತು. ಇಂದು ಅಗ್ಗದ ಸ್ಮಾರ್ಟ್ ಫೋನ್ ನಲ್ಲಿಯೂ ಜಿಪಿಎಸ್ ಇದ್ದು ವಿಶ್ವದ ಪಟವನ್ನು ಅಂಗೈಯಲ್ಲಿ ಹರಡಿಕೊಳ್ಳಬಹುದು. ಅಂತೆಯೇ ಜನರಿಗೂ ಇಂದು ಹೆಚ್ಚು ಅವಕಾಶಗಳು ಲಭ್ಯವಾಗಿ ಸಮಯವೇ ಇಲ್ಲವಾಗಿದೆ. ಈ ಭರದಲ್ಲಿ ಆರೋಗ್ಯವನ್ನು ತಪಾಸಿಸಿಕೊಳ್ಳುವುದು ಎಲ್ಲಿಂದ? ನಮಗೆ ಇದರ ನೆನಪಾಗುವುದು ಆರೋಗ್ಯ ಕೆಟ್ಟು ವೈದ್ಯರಲ್ಲಿ ಹೋಗುವುದು ಅನಿವಾರ್ಯವಾದಾಗ ಮಾತ್ರ. ಅದರಲ್ಲೂ ಮಹಿಳೆಯರಿಗೆ ತಮ್ಮ ಆರೋಗ್ಯವನ್ನು ತಪಾಸಿಸಿಕೊಳ್ಳುವುದು ಇನ್ನಷ್ಟು ಕಷ್ಟ, ತಮ್ಮ ಕೆಲಸ, ಮಕ್ಕಳ ಬಗ್ಗೆ ಗಮನ ಮತ್ತು ಇತರ ಕಾರ್ಯಗಳ ನಡುವೆ ಸಾಮಾನ್ಯವಾಗಿ ಆರೋಗ್ಯ ತಪಾಸಣೆಗೆ ಮಹತ್ವ ಕಡಿಮೆಯೇ ಆಗಿರುತ್ತದೆ. ವಿಶ್ವ ಆರೋಗ್ಯ ದಿನ ಎಂದರೇನು? ಇದರ ಮಹತ್ವವೇನು?
ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಗತ್ಯವಾಗಿದ್ದು ಜೀವನಶೈಲಿಯ ಬದಲಾವಣೆಗೆ ವಯಸ್ಸಿಗೆ ಅನುಗುಣವಾಗಿ ಹೆಚ್ಚಿನ ಪ್ರಭಾವಕ್ಕೊಳಗಾಗುತ್ತಾರೆ. ಉತ್ತಮ ಆರೋಗ್ಯ ಹೊಂದಿರಲು ಸಮತೋಲನ ಆಹಾರ, ಸಾಕಷ್ಟು ವ್ಯಾಯಾಮ ಮತ್ತು ತಮ್ಮ ಆರೋಗ್ಯ ಮತ್ತು ಶಾರೀರದ ಬಗ್ಗೆ ತಿಳಿವಳಿಕೆ ಹೊಂದಿರುವುದೂ ಅವಶ್ಯ. ಆದರೆ ಈ ಮಾಹಿತಿ ಪಡೆಯಲೂ ಸಮಯ ವಿನಿಯೋಗಿಸುವುದು ಎಲ್ಲಿಂದ? ಇದಕ್ಕೆ ಈಗ ಆಧುನಿಕ ತಂತ್ರಜ್ಞಾನ ಕೆಲವು ಉಪಾಯಗಳನ್ನು ನೀಡಿದೆ. ಅದೇ ನಿಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಸ್ಥಾಪಿಸಬಹುದಾದ ಆಪ್ ಗಳ ಮೂಲಕ ಮಾಹಿತಿ ಪಡೆದು ಆರೋಗ್ಯದ ಬಗ್ಗೆ ನಿಗಾ ವಹಿಸುವುದು. ಈ ಸ್ನೇಹಿತ ಆಪ್ ಸದಾ ನಿಮ್ಮ ಮೊಬೈಲಿನಲ್ಲಿ ನಿಮ್ಮೊಂದಿಗೇ ಇರುವ ಕಾರಣ ಅಪ್ತ ವ್ಯಕ್ತಿಯೊಬ್ಬರು ಬಳಿ ಇದ್ದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಂತೆಯೇ ಅನ್ನಿಸುತ್ತದೆ.
ಏಪ್ರಿಲ್ ಏಳರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಆಪ್ ಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಈ ವಿಶೇಷ ದಿನದಂದು ಪ್ರಸ್ತುತಪಡಿಸಲು ಹೆಮ್ಮೆ ಪಡುತ್ತದೆ. ಈ ಆಪ್‌ಗಳು ತಜ್ಞರಿಂದ ಪ್ರಮಾಣಿಸಲ್ಪಟ್ಟು ಸಾಧ್ಯವಾದಷ್ಟು ನಿಖರವಾದ ಮಾಹಿತಿಗಳನ್ನು ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರವಲ್ಲ ಇನ್ನಷ್ಟು ಉತ್ತಮಗೊಳಿಸಲೂ ನೆರವಾಗುತ್ತದೆ. ಬನ್ನಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ಈ ಆಪ್‌ಗಳ ಬಗ್ಗೆ ಈಗ ನೋಡೋಣ:

ಪೀರಿಯಡ್ ಟ್ರ್ಯಾಕರ್ (Period Tracker)
Simple Design Ltd ಎಂಬ ಸಂಸ್ಥೆ ಹೊರತಂದಿರುವ ಈ ಆಪ್ ಗುಲಾಬಿ ಹೂವಿನ ಮುಖ್ಯಪುಟದ ಮೂಲಕ ಆಕರ್ಷಕವಾಗಿದ್ದು ಋತುಮತಿಯಾಗಿರುವ ಎಲ್ಲಾ ಮಹಿಳೆಯರಿಗೆ ಅಗತ್ಯವಾದ ಆಪ್ ಆಗಿದೆ. ನಿಮ್ಮ ಮನೋಭಾವ, ವಯಸ್ಸು (ನಿಜವಾದ ವಯಸ್ಸೇ), ಹಿಂದಿನ ತಿಂಗಳ ರಜಾದಿನ ಮೊದಲಾದವುಗಳನ್ನು ಈ ಆಪ್‌ನಲ್ಲಿ ದಾಖಲಿಸುವ ಮೂಲಕ ಈ ಆಪ್ ನಿಮ್ಮ ಮುಂದಿನ ಮಾಸಿಕ ರಜಾದಿನ ಯಾವಾಗ ಬರುತ್ತದೆ ಎಂಬುದನ್ನು ಸರಿಸುಮಾರು ನಿಖರವಾಗಿ ತಿಳಿಸಬಲ್ಲುದು. ಅಲ್ಲದೇ ಗರ್ಭವತಿಯಾಗಬಯಸುವವರಿಗೆ ಅತಿ ಫಲವತ್ತಾದ ದಿನಗಳ ಬಗ್ಗೆ ಮತ್ತು ಗರ್ಭಧರಿಸಲು ಬಯಸದವರಿಗೆ ಸುರಕ್ಷಿತ ದಿನಗಳ ಬಗ್ಗೆಯೂ ಮಾಹಿತಿ ನೀಡಬಲ್ಲುದು. ಅಷ್ಟೇ ಅಲ್ಲ, ಗರ್ಭನಿರೋಧಕಗಳ ಬಳಕೆಯಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನವನ್ನೂ ಮಾಡಬಲ್ಲುದು.

7 Minute Workout (Ego360)
ಒಂದು ವೇಳೆ ವ್ಯಾಯಮ ಮಾಡುವುದು ನಿಮ್ಮ ಮನಸ್ಸಿನಲ್ಲಿದ್ದು ವ್ಯಾಯಾಮಶಾಲೆಯ ದುಬಾರಿ ವೆಚ್ಚ ಭರಿಸಲಾಗದೇ ಅಥವಾ ಖಾಸಗಿ ಶಿಕ್ಷಕರನ್ನು ನೇಮಿಸಲಾರದೇ ವ್ಯಾಯಾಮಕ್ಕೇ ತಿಲಾಂಜಲಿ ನೀಡಿ ನಿರಾಶರಾದವರಿಗೆ ಈ ಆಪ್ ಉತ್ತಮ ಆಯ್ಕೆಯಾಗಿದೆ. ಈ ಆಪ್ ನಿಮ್ಮ ಖಾಸಗಿ ಶಿಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಪ್ರತಿದಿನ ಕೇವಲ ಏಳು ನಿಮಿಷದ ಬಿರುಸಿನ ವ್ಯಾಯಾಮದ ಮೂಲಕ ದೇಹದ ಸ್ಥೂಲಭಾಗಗಳು ಶೀಘ್ರವೇ ಕರಗುವಂತೆ ಮಾಡುತ್ತದೆ. ನಿಮ್ಮ ಹಲವು ವರ್ಷಗಳ ಸೊಂಟ ಕರಗಿಸುವ ಕನಸು ಏಳು ನಿಮಿಷಗಳ ಈ ಬಂಧುವಿನ ಮೂಲಕ ಕರಗಬಹುದು.

ಗೂಗಲ್ ಫಿಟ್ Google Fit – Fitness Tracking (Google Inc.)
ವಿಶ್ವದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಗೂಗಲ್ ಇನ್ಕ್ ಸಂಸ್ಥೆಯೇ ವಿನ್ಯಾಸಗೊಳಿಸಿದ ಈ ಆಪ್ ಪ್ರತಿದಿನ ನೀವು ಎಷ್ಟು ಕ್ಯಾಲೋರಿಗಳನ್ನು ಖರ್ಚು ಮಾಡಿದ್ದೀರಿ, ಎಷ್ಟು ನಡೆದಾಡಬೇಕಿದ್ದುದು ಎಷ್ಟು ನಡೆದಾಡಿದ್ದೀರಿ ಎಂಬ ಮಾಹಿತಿಯನ್ನೆಲ್ಲಾ ಕಲೆಹಾಗಿ ನಿಮ್ಮ ವಯಸ್ಸಿಗೆ ಅನುಗುಣವಾಗಿ ಆ ದಿನದ ನಿಮ್ಮ ನಿತ್ಯದ ಚಟುವಟಿಕೆ ಕಡಿಮೆಯೋ ಹೆಚ್ಚೂ ಎಂದು ಸೂಚಿಸುತ್ತದೆ. ಕಡಿಮೆಯಾಗಿದ್ದರೆ ಹೆಚ್ಚಿಸಲು ಎಚ್ಚರಿಕೆ ನೀಡುತ್ತದೆ. ಇದಕ್ಕೆ ಆಂಡ್ರಾಯ್ಡ್ ವೇರ್ ವಾಚ್ ಎಂಬ ಮಣಿಕಟ್ಟಿಗೆ ಕಟ್ಟಿಕೊಳ್ಳಬಹುದಾದ ಉಪಕರಣ ಒಂದು ಇರುವುದು ಅಗತ್ಯ. ಇದರ ಮೂಲಕ ನೀವು ಓಡಿದ, ನಡೆದ, ಸೈಕಲ್ ತುಳಿದ ಮತ್ತಿತರ ದೈಹಿಕ ಚಟುವಟಿಕೆಯನ್ನೆಲ್ಲಾ ದಾಖಲಿಸಿ ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಸಹಕರಿಸುತ್ತದೆ.

ಪೀಡೋ ಮೀಟರ್ - Pedometer (tayutau)
ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿ ಮಹಿಳೆಗೂ ಇದು ಅತ್ಯಗತ್ಯವಾದ ಆಪ್ ಆಗಿದೆ. ಇದು ನೀವು ದಿನವಿಡೀ ಎಷ್ಟು ನಡೆದಿರಿ ಮತ್ತು ಎಷ್ತು ಕ್ಯಾಲೋರಿಗಳನ್ನು ಖರ್ಚು ಮಾಡಿದಿರಿ ಎಂಬುದನ್ನು ನಿಖರವಾಗಿ ಲೆಕ್ಕ ಹಾಕಿ ತೋರಿಸುತ್ತದೆ. ಸೋಮಾರಿಗಳನ್ನು ಬಡಿದೆಚ್ಚರಿಸಿ ತೆಳ್ಳಗಾಗಲು ಪ್ರೇರೇಪಿಸುತ್ತದೆ.

ಕ್ಯಾಲೋರಿ ಕೌಂಟರ್ -Calorie Counter – MyFitnessPal (MyFitnessPal, Inc.)
ಏನು ತಿನ್ನಬೇಕಾದರೂ ಇದರಿಂದ ತನ್ನ ತೂಕ ಹೆಚ್ಚುವುದಿಲ್ಲವಷ್ಟೇ ಎಂದು ಅನುಮಾನಿಸಿಯೇ ತಿನ್ನುವವರಿಗೆ ಮಾತ್ರವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸುವ ಎಲ್ಲಾ ಮಹಿಳೆಯರಿಗೆ ಸೂಕ್ತವಾದ ಈ ಆಪ್ ಅತಿ ಸುಲಭವಾದ ಮತ್ತು ಚುರುಕಾದ ಆಪ್ ಆಗಿದೆ. ಅಷ್ಟೇ ಅಲ್ಲ, ಯಾವ ಆಹಾರದಲ್ಲಿ ಎಷ್ಟು ಕ್ಯಾಲೋರಿಗಳಿವೆ ಎಂಬುದನ್ನು ಸೂಚಿಸಲು ಇದರ ಸ್ಮರಣೆಯಲ್ಲಿ ಅರವತ್ತು ಲಕ್ಷಕ್ಕೂ ಹೆಚ್ಚಿನ ಆಹಾರವಸ್ತುಗಳ ಬಗ್ಗೆ ಮಾಹಿತಿ ಇದೆ.

ರನ್ಟಾಸ್ಟಿಕ್ ರನ್ನಿಂಗ್ (Runtastic Running GPS Tracker (Runtastic))
ಜಿಪಿಎಸ್ ಇರುವ ಯಾವುದೇ ಫೋನ್ ನಲ್ಲಿ ಅಳವಡಿಸಬಹುದಾದ ಈ ಆಪ್ ಪ್ರತಿ ಮಹಿಳೆಗೂ ಸೂಕ್ತವಾಗಿದ್ದು ಪ್ರತಿ ಬಾರಿ ಮನೆಯಲ್ಲಿ (ಜಿಪಿಎಸ್ ಸಂಕೇತ ಸಿಕ್ಕರೆ ಮಾತ್ರ) ಅಥವಾ ಮನೆಯಿಂದ ಹೊರಗೆ ಮಾಡಬಹುದಾದ ನಡಿಗೆ, ನಿಧಾನಗತಿಯ ಓಟ, ಸೈಕ್ಲಿಂಗ್ ಮೊದಲಾದವುಗಳನ್ನು ಈ ಆಪ್ ಜಿಪಿಎಸ್ ಮೂಲಕ ದಾಖಲಿಸುತ್ತಾ ಹೋಗುತ್ತದೆ. ಯಾವುದೇ ಕಾರ್ಯಕ್ಕೆ ಒಂದು ಗುರಿ ಇರುವಂತೆ ನಿಮ್ಮ ಆರೋಗ್ಯ ಅಥವಾ ತೂಕ ಇಳಿಸುವಿಕೆಯ ಗುರಿಯನ್ನು ಈ ಆಪ್ ನಲ್ಲಿ ದಾಖಲಿಸಿದರೆ ಪ್ರತಿದಿನ ನೀವು ಎಷ್ಟು ಶ್ರಮವಹಿಸಬೇಕಾಗಿದ್ದು ಇಂದು ಯಾವ ಹಂತದಲ್ಲಿದ್ದೀರಿ, ಹಿಂದಿದ್ದೀರೋ, ಮುಂದಿದ್ದೀರೋ, ನಿಮ್ಮಿಂದ ಸಾಧ್ಯವಾಗುತ್ತದೆಯೋ ಇಲ್ಲವೋ ಎಲ್ಲವನ್ನೂ ನಿರ್ಧರಿಸಿ ತಿಳಿಸುತ್ತದೆ. ಅಷ್ಟೇ ಅಲ್ಲ, ನೀವು ಕ್ರಮಿಸಿದ ದೂರ, ವ್ಯಯಿಸಿದ ಸಮಯ, ವೇಗ, ಎಷ್ಟು ಕ್ಯಾಲೋರಿಗಳನ್ನು ದಹಿಸಿದ್ದೀರಿ, ಈ ಅವಧಿಯಲ್ಲಿ ನಿಮ್ಮ ಹೃದಯದ ಬಡಿತ ಹೇಗಿತ್ತು ಮೊದಲಾದವುಗಳನ್ನೆಲ್ಲಾ ಕಲೆಹಾಗಿ ಸಮಗ್ರ ಮಾಹಿತಿ ನೀಡುತ್ತದೆ.

ಲೂಸ್ ಇಟ್ -Lose It! (FitNow, Inc.)
ತೂಕ ಇಳಿಸಲೇ ಬೇಕು ಎಂಬ ದೃಢಸಂಕಲ್ಪ ಮಾಡಿಕೊಂಡಿರುವ ಮಹಿಳೆಯರಿಗೆ ಮಾತ್ರ ಈ ಆಪ್. ನಿಮ್ಮ ಸಧ್ಯದ ತೂಕ, ಗಾತ್ರ, ವಯಸ್ಸು ಮೊದಲಾದವುಗಳನ್ನು ದಾಖಲಿಸಿ ತೂಕ ಇಳಿಸುವ ಒಂದು ಗುರಿಯನ್ನು ನೀಡಿದರೆ ಇದು ಸಾಧ್ಯವಾಗುತ್ತದೆಯೇ ಇಲ್ಲವೇ ಎಂಬುದನ್ನು ಮೊದಲೇ ತಿಳಿಸಿಬಿಡುತ್ತದೆ. ಸಾಧ್ಯವಾಗುವ ಗುರಿಯನ್ನೂ ಸಲಹೆ ಮಾಡುತ್ತದೆ. ಆ ಪ್ರಕಾರ ನಿತ್ಯವೂ ಅನುಸರಿಸಬೇಕಾದ ಆಹಾರ ಕ್ರಮ ಮತ್ತು ತೂಕ ಇಳಿಸುವ ವಿಧಾನಗಳನ್ನು ನಿಮಗಾಗಿಯೇ ವಿಶೇಷವಾಗಿ ತಯಾರಿಸಿಕೊಡುತ್ತದೆ. ಆದರೆ ಇದನ್ನು ಆಚರಿಸಿಕೊಂಡು ಹೋಗಲು ಮಾತ್ರ ದೃಢಸಂಕಲ್ಪವೇ ಬೇಕು. ಆದ್ದರಿಂದ ಮೊದಲ ವಾಕ್ಯವನ್ನು ಇನ್ನೊಮ್ಮೆ ಓದಿ.

ಸಿಂಪಲ್ ಯೋಗ- Simple Yoga FREE (Daily Workout Apps, LLC)
ಯೋಗಾಸನ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ಈಗ ವಿಶ್ವವೇ ಅರಿತಿದೆ. ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿಯೇ ಯೋಗ ತರಬೇತಿಗಳು ನಡೆಯುತ್ತಿವೆ. ಆದರೆ ಈ ತರಗತಿಗಳಿಗೆ ಸೇರಲು ಸಮಯ ಅಥವಾ ಹಣದ ಆಭಾವವಿದ್ದರೆ ಮತ್ತು ಯೋಗಾಸನಗಳನ್ನು ಕಲಿಯಲೇಬೇಕೆಂದು ನಿಮ್ಮ ಉತ್ಕಟ ಬಯಕೆಯಾಗಿದ್ದರೆ ಮಾತ್ರ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಇದೊಂದು ನಿಮ್ಮ ಖಾಸಗಿ ಯೋಗಶಿಕ್ಷಕನಂತೆ ವರ್ತಿಸುತ್ತದೆ ಹಾಗೂ ಪ್ರಾರಂಭಿದ ಹಂತದಿಂದ ಹಿಡಿದು ವೃತ್ತಿಪರ ಹಂತದವರೆಗೂ ಇದರಲ್ಲಿ ಶ್ರವಣ ಅಥವಾ ಆಡಿಯೋ ಸಂದೇಶಗಳ ಮೂಲಕ ನಿಮಗೆ ತರಬೇತಿ ನೀಡಲಾಗುತ್ತದೆ. ವೀಡಿಯೋ ನೋಡುತ್ತಾ ಆಸನಗಳನ್ನು ಕಲಿಯುವುದಕ್ಕಿಂತಲೂ ಕೇಳುತ್ತಾ ಕಲಿಯುವುದೇ ಹೆಚ್ಚು ಪರಿಣಾಮಕಾರಿ ಎಂದು ಯೋಗ ಕಲಿತವರ ಅನುಭವವಾಗಿದೆ. ಈ ಆಪ್ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಆಸನಗಳನ್ನು ಸುಲಭವಾಗಿ ಕಲಿತು ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು.

ಡೇಲಿ ವರ್ಕೌಟ್ಸ್ -Daily Workouts FREE (Daily Workout Apps, LLC)
ನಿತ್ಯವೂ ವ್ಯಾಯಾಮ ಮಾಡಬಯಸುವ ಮಹಿಳೆಯರಿಗೆ ಇದು ಸೂಕ್ತವಾಗಿದ್ದು ನಿತ್ಯವೂ ವ್ಯಾಯಾಮಕ್ಕಾಗಿ ಕೆಲಸಮಯ ಮುಡಿಪಾಡಿಡಲು ಸಾಧ್ಯವಾದರೆ ಈ ಆಪ್ ಒಂದು ಅದ್ಬುತವನ್ನೇ ಸಾಧಿಸಲು ನೆರವಾಗುತ್ತದೆ. ಇದರಲ್ಲಿ ತೊಂಭತ್ತೈದಕ್ಕೂ ಹೆಚ್ಚು ವ್ಯಾಯಾಮಗಳ ಬಗ್ಗೆ ಪರಿಪೂರ್ಣ ಮಾಹಿತಿಯಿದ್ದು ಇದನ್ನು ಅನುಸರಿಸುವುದು ಹೇಗೆ ಮತ್ತು ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಖಾಸಗಿ ಶಿಕ್ಷಕನಂತೆ ಹೇಳಿಕೊಡುತ್ತದೆ. ಕೆಲವೊಮ್ಮೆ ಈ ವ್ಯಾಯಾಮಗಳನ್ನು ಹೇಳುವ ರೀತಿ ಸರಿಯಾಗಿ ಅರ್ಥವಾಗದಿದ್ದಾಗ ಇದನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಡುವ ವೀಡಿಯೋಗಳೂ ಇದ್ದು ಸರಿಯಾದ ಕ್ರಮ ಅನುಸರಿಸಲು ನೆರವಾಗುತ್ತವೆ. ಪ್ರತಿದಿನ ಐದು ನಿಮಿಷದಿಂದ ಮೂವತ್ತು ನಿಮಿಷಗಳವೆರೆಗೆ ಸಮಯ ವಿನಿಯೋಗಿಸಬಹುದಾದ ವ್ಯಾಯಾಮಗಳ ಕಾರರ್ಕಮಪಟ್ಟಿಯನ್ನೂ ಇದು ಹೊಂದಿದ್ದು ನಿಮಗೆ ಸೂಕ್ತವಾದ ಕಾರ್ಯಕ್ರಮ ಯಾವುದು ಎಂಬುದನ್ನೂ ಸೂಚಿಸಬಲ್ಲುದು. ಇದರ ಇನ್ನೊಂದು ಹೆಗ್ಗಳಿಕೆ ಏನೆಂದರೆ ಒಂದು ಬಾರಿ ಡೌನ್ಲೋಡ್ ಮಾಡಿದ ಬಳಿಕ ಇದಕ್ಕೆ ಇಂಟರ್ನೆಟ್ ಅಗತ್ಯವಿಲ್ಲದ ಕಾರಣ ಯಾವುದೇ ಸ್ಥಳದಲ್ಲಿ ಈ ಆಪ್ ಬಳಸಬಹುದು.

ನೈಕಿ ಪ್ಲಸ್ ಟ್ರೈನಿಂಗ್ ಕ್ಲಬ್ -Nike+ Training Club (Nike, Inc.)
ಖ್ಯಾತ ಸ್ಪೋರ್ಟ್ಸ್ ಷೂ ಸಂಸ್ಥೆಯಾದ ನೈಕಿ ಈ ಆಪ್ ಅನ್ನು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದು ಒಂದು ಖಾಸಗಿ ಶಿಕ್ಷಕನಂತೆ ಕಾರ್ಯನಿರ್ವಹಿಸುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಪ್ರತಿ ಮಹಿಳೆಯೂ ಇದರಲ್ಲಿರುವ ನೂರಕ್ಕೂ ಹೆಚ್ಚು ವ್ಯಾಯಾಮ ಕಾರ್ಯಸೂಚಿಗಳನ್ನು ಅನುಸರಿಸಬಹುದು. ಅಲ್ಲದೇ ನೈಕಿ ಸಂಸ್ಥೆ ಪ್ರಾಯೋಜಿಸಿರುವ ಖ್ಯಾತ ಕ್ರೀಡಾಪಟುಗಳೂ ಇದರಲ್ಲಿ ತಮ್ಮ ಅನಿಸಿಕೆಗಳನ್ನು ಮತ್ತು ಸಲಹೆಗಳನ್ನು ನೀಡಿದ್ದು ಇವುಗಳು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ತೂಕ ಇಳಿಸಲು ನೆರವಾಗಬಲ್ಲವು. ಅಷ್ಟೇ ಅಲ್ಲ, ಇದೇ ಆಪ್ ಬಳಸುತ್ತಿರುವ ಇತರರನ್ನು ಸ್ನೇಹಿತರನ್ನಾಗಿಸಿಕೊಳ್ಳಲೂ, ಕ್ಯಾಮೆರಾ ಮೂಲಕ ನಿಮ್ಮ ವ್ಯಾಯಾಮದ ಭಂಗಿಗಳನ್ನು ಸೆರೆಹಿಡಿದು ಸ್ನೇಹಿತರಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ಮತ್ತು ತೃಪ್ತಿ ಹೆಚ್ಚಿಸಿಕೊಳ್ಳಲೂ ಸಾಧ್ಯವಾಗುತ್ತದೆ.



Click it and Unblock the Notifications











