ಮುಂಜಾನೆಯ ಜಾಗಿಂಗ್‌ಗೂ ಮುನ್ನ ಆಹಾರಕ್ರಮ ಹೇಗಿರಬೇಕು?

By Arshad

ನಿಮಗೂ ಮುಂಜಾನೆ ಬೇಗನೇ ಎದ್ದು ಜಾಗಿಂಗ್ ಮಾಡುವ ಬಯಕೆಯೇ? ಆದರೆ ಒಂದೆರಡು ದಿನಗಳಲ್ಲಿಯೇ ನಿರುತ್ಸಾಹ ಆವರಿಸುತ್ತದೆಯೇ? ಒಂದೆರಡು ದಿನ ಜಾಗಿಂಗ್ ಮಾಡಿ ಮೂರನೆಯ ದಿನ ಬಿಟ್ಟ ಬಳಿಕ ಅಕ್ಕಪಕ್ಕದವರಿಂದ (ವಿಶೇಷವಾಗಿ ಮಹಿಳೆಯರಿಂದ) ಆರಂಭಶೂರ, ಉತ್ತರಕುಮಾರ ಎಂಬ ಬಿರುದು ಸಿಕ್ಕಿತೇ?

ಇದಕ್ಕೆ ಕಾರಣ ನಿಮ್ಮ ಇರಾದೆಯಲ್ಲ, ಜಾಗಿಂಗ್‌ಗೆ ನೀವು ಮಾಡಿರದ ಪೂರ್ವಸಿದ್ಧತೆ ಅಥವಾ ಸೇವಿಸಿದ ಆಹಾರ ಕಾರಣ. ಜಾಗಿಂಗ್ ಅಥವಾ ನಿಧಾನಗತಿಯ ಓಟವನ್ನು ಪ್ರಾರಂಭಿಸುವ ಮೊದಲು ಈ ಬಗ್ಗೆ ಕೊಂಚ ಮಾಹಿತಿ ಪಡೆದು ಬಳಿಕ ಆ ಪ್ರಕಾರ ನಡೆಯುವುದು ಎಲ್ಲರಿಗೂ ಅವಶ್ಯವಾಗಿದೆ.

ಮೊದಲಾಗಿ ಜಾಗಿಂಗ್ ಅಂದರೆ ಏನೆಂದು ತಿಳಿದುಕೊಳ್ಳೋಣ. ರಾತ್ರಿಯ ವಿಶ್ರಾಂತಿಯ ಬಳಿಕ ದೇಹ ದಿನದ ಚಟುವಟಿಕೆಗಳಿಗಾಗಿ ಸಿದ್ಧಗೊಳ್ಳಬೇಕು. ಇದಕ್ಕಾಗಿ ದೈಹಿಕ ಚಟುವಟಿಕೆಯನ್ನು ನಿಧಾನವಾಗಿ ಮುಂದುವರೆಸುತ್ತಾ ಹೋಗಿ ದೇಹದ ಉಷ್ಣಾಂಶವನ್ನು ಏರಿಸಬೇಕು. ಹೃದಯಬಡಿತ, ರಕ್ತಪರಿಚಲನೆ, ಸ್ನಾಯುಗಳ ಸೆಳೆತ ಮೊದಲಾದವು ನಿಧಾನವಾಗಿ ಹೆಚ್ಚಾಗುತ್ತಾ ದೇಹದ ಜೀವರಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಹಾಗಾಗಿ ಮುಂಜಾನೆಯ ಓಟದ ಗತಿ ಅತಿ ಹೆಚ್ಚಿರಬಾರದು.

Foods To Eat Before Your Morning Jog

ನಿಧಾನವಾಗಿ, ಪೂರ್ಣ ಉಸಿರಾಟದೊಂದಿಗೆ ನಡೆಸಬೇಕು. ಆದರೆ ಇದಕ್ಕೂ ಮುನ್ನ ಯಾವ ಊಟ ಮಾಡಬೇಕೆಂದು ತಿಳಿದಿರುವುದು ಉತ್ತಮ. ಏಕೆಂದರೆ ಇದಕ್ಕೂ ಮುನ್ನ ಹೆಚ್ಚು ಊಟ ಮಾಡಿದರೂ ಕಡಿಮೆ ಆಹಾರ ಸೇವಿಸಿದರೂ ಆರೋಗ್ಯಕ್ಕೆ ಅಪಾಯಕರವಾಗಿದೆ. ಈ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಮದ್ದು-ಜಾಗಿಂಗ್

ನಿಮಗೆ ಅನುಕೂಲ ಎನಿಸಿದ ದಾರಿಯನ್ನು ಆಯ್ಕೆಮಾಡಿಕೊಳ್ಳಿ
ಬೆಳಗ್ಗಿನ ಓಟಕ್ಕೆ ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ಸಿದ್ಧತೆ. ನಮ್ಮಲ್ಲಿ ಹೆಚ್ಚಿನವರು ಎರಡು ದಿನ ಓಡಿದ ಬಳಿಕ ಮೂರನೆಯ ದಿನ ತಮಗೇ ತಾವೇ ಸಂತೈಸಿಕೊಳ್ಳುವ ನೆಪವನ್ನು ಹೇರಿಕೊಂಡು ಓಟದಿಂದ ದೂರ ಉಳಿದುಬಿಡುತ್ತಾರೆ, ಸುತ್ತಲ ಜನರ ಕಟುಮಾತುಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ಮೈಕೈ ನೋವಾದರೂ ಪ್ರತಿದಿನ ಹೋಗಿಯೇ ಹೋಗುತ್ತೇನೆ ಎಂಬ ಛಲವನ್ನು ಮೊದಲು ರೂಢಿಸಿಕೊಳ್ಳಬೇಕು. ನಮ್ಮ ದೇಹದ ಚಟುವಟಿಕೆಗಳು ಸುಮಾರು ಬೆಳಗ್ಗಿನ ಹತ್ತು ಘಂಟೆಗೆ ಕ್ಷಮತೆಯ ಉತ್ತುಂಗದಲ್ಲಿರುವ ಕಾರಣ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಓಟದ ಸ್ಪರ್ಧೆಗಳನ್ನು (ಒಲಿಂಪಿಕ್ ಸೇರಿಸಿ) ಈ ಸಮಯದಲ್ಲಿಯೇ ಇಡುತ್ತಾರೆ. ಇದಕ್ಕೆ ಬೆಳಗ್ಗಿನ ಜಾಗಿಂಗ್, ಬಳಿಕ ಉಪಾಹಾರ ಮತ್ತು ಕೊಂಚ ವಿರಾಮ ಪೂರಕವಾಗಿವೆ. ಬೆಳಿಗ್ಗೆ ಜಾಗಿಂಗ್ ಸಾಧ್ಯವಿಲ್ಲದವರು ತಮಗೆ ಸೂಕ್ತವಾದ ಸಮಯ ಮತ್ತು ಓಟದ ಸ್ಥಳಗಳನ್ನು ಗುರುತಿಸಿಕೊಂಡು ಪ್ರತಿದಿನವೂ ಆ ಸಮಯದಲ್ಲಿ ಸತತವಾಗಿ ಅಭ್ಯಾಸ ಮಾಡುವುದು ಆರೋಗ್ಯಕ್ಕೆ ಪೂರಕವಾಗಿದೆ. ಇದಕ್ಕೆ ಪೂರಕವಾಗಿ ನಿಮ್ಮ ಉಪಾಹಾರ ಮತ್ತು ಶೌಚದ ಸಮಯಗಳನ್ನೂ ಆಚೀಚೆಮಾಡಿಕೊಳ್ಳಬಹುದು.

ಉಪಾಹಾರ ಯಾವಾಗ ಮಾಡಬೇಕು? ಜಾಗಿಂಗ್‌ಗೆ ಮೊದಲೋ, ನಂತರವೋ
ನಾವೆಲ್ಲರೂ ಯಾವ ಚಟುವಟಿಕೆಗೆ ಚಕ್ಕರ್ ಕೊಟ್ಟರೂ ಊಟ ಉಪಾಹಾರಗಳನ್ನು ಮಾತ್ರ ತಪ್ಪಿಸುವುದೇ ಇಲ್ಲ. ಈಗ ಜಾಗಿಂಗ್ ಹೋಗಲೇಬೇಕೆಂದು ದೃಢಮನಸ್ಸು ಮಾಡಿದ್ದರೆ ಉದ್ಭವವಾಗುವ ಪ್ರಶ್ನೆ ಇದು. ಯಾವಾಗ ಉಪಾಹಾರ ಸೇವಿಸಬೇಕು? ಜಾಗಿಂಗ್‌ಗೆ ಮೊದಲೋ, ನಂತರವೋ ಅಥವಾ ಒಂದು ನಿಗದಿತ ಸಮಯದಲ್ಲಿಯೋ? ಪ್ರಶ್ನೆ ಏನೋ ಕುತೂಹಲಕರವಾಗಿದೆ. ಆದರೆ ಉತ್ತರ ಕೊಂಚ ಕ್ಲಿಷ್ಟವಾಗಿದೆ.ಯಾವುದೇ ಚಟುವಟಿಕೆಗೆ ಅಗತ್ಯವಿದ್ದಂತೆ ಜಾಗಿಂಗ್‌ಗೂ ಆಹಾರ ಮತ್ತು ಶಕ್ತಿಯ ಅಗತ್ಯವಿದೆ.


ನಿನ್ನೆಯ ಆಹಾರ ಜೀರ್ಣವಾದ ಬಳಿಕ ದೇಹದಲ್ಲಿ ಶಕ್ತಿ ಇದ್ದರೂ ತಕ್ಷಣದ ಅಗತ್ಯಕ್ಕೆ ಈ ಹೊತ್ತಿನ ಆಹಾರ (ಅಂದರೆ ಇದಕ್ಕೂ ಮುನ್ನ ಸೇವಿಸಿದ ಆಹಾರ) ಅಗತ್ಯವಾಗಿದೆ. ಆದ್ದರಿಂದ ಜಾಗಿಂಗ್‌ಗೂ ಮೊದಲು ಕೊಂಚ ಪೌಷ್ಟಿಕ ಆಹಾರ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಲದ ಅಹಾರವನ್ನು ಸೇವಿಸಿ ಜಾಗಿಂಗ್‌ಗೆ ಹೊರಡುವುದು ಉತ್ತಮ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಈ ಆಹಾರ ದ್ರವರೂಪದಲ್ಲಿದ್ದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರಬೇಕು. ಉದಾಹರಣೆಗೆ ಹಣ್ಣಿನ ರಸ, ಹಾಲು ಮತ್ತು ಅಲ್ಪ ಪ್ರಮಾಣದಲ್ಲಿ ಘನಾಹಾರ (ಉದಾಹರಣೆಗೆ ಮೊಟ್ಟೆ, ಹಣ್ಣು) ಮೊದಲಾದ ಆಹಾರಗಳು ಉತ್ತಮವಾಗಿವೆ. ಅಂತೆಯೇ ಆಹಾರ ಸೇವಿಸಿದ ತಕ್ಷಣ ಹೊರಡಬಾರದು, ಸುಮಾರು ಹದಿನೈದು ನಿಮಿಷಗಳ ಬಳಿಕ, ಅದಕ್ಕೂ ಮೊದಲು ಶೌಚಕ್ಕೆ ಅವಸರವಾದರೆ ಮುಗಿಸಿ ಹೊರಡುವುದು ಆರೋಗ್ಯಕ್ಕೆ ಉತ್ತಮವಾದ ಅಭ್ಯಾಸವಾಗಿದೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾಗುವುದು (hypoglycemia), ಅತಿ ಹೆಚ್ಚಿನ ನಿತ್ರಾಣ (prostration) ಮೊದಲಾದ ಸ್ಥಿತಿಗೆ ತಲುಪುವ ಸಂಭವ ಅತಿ ಕಡಿಮೆಯಾಗುತ್ತದೆ.

ಉಪಾಹಾರವಿಲ್ಲದೇ ಜಾಗಿಂಗ್‌ಗೆ ಹೋಗುವ ಅಪಾಯಗಳು
ಕೆಲವರಿಗೆ ತಮ್ಮ ದೇಹದಾರ್ಢ್ಯತೆಯ ಮೇಲೆ ಅಪಾರವಾದ ಅಭಿಮಾನವಿದ್ದು ತಾವು ಯಾವುದೇ ಸಮಯದಲ್ಲಿ ಪಿಟಿ ಉಷಾರಿಗಿಂತ ಚೆನ್ನಾಗಿ ಓಡಬಲ್ಲೆವು ಎಂಬ ಕಲ್ಪನೆ ಇರುತ್ತದೆ. ಇದು ಯಾವುದೇ ಆಹಾರವಿಲ್ಲದೇ ಓಟ ಪ್ರಾರಂಭಿಸಲು ಪ್ರೇರಣೆ ನೀಡುತ್ತದೆ. ಆದರೆ ವೈದ್ಯರ ಪ್ರಕಾರ ಇದು ಅತ್ಯಂತ ಅಪಾಯಕಾರಿಯಾದ ನಡೆಯಾಗಿದೆ. ಏಕೆಂದರೆ ರಾತ್ರಿಯ ಅನೈಚ್ಛಿಕ ಚಟುವಟಿಕೆಗಳ ಕಾರಣ ಸಿದ್ಧವಿದ್ದ ಎಲ್ಲಾ ಆಹಾರಗಳು ಖಾಲಿಯಾಗಿದ್ದು ಖಾಲಿಹೊಟ್ಟೆಯಲ್ಲಿ ಓಡುವ ಮೂಲಕ ಅಳಿದುಳಿದ ಮತ್ತು ಅತ್ಯಂತ ತುರ್ತುಪರಿಸ್ಥಿತಿಯಲ್ಲಿ ದೇಹ ಉಪಯೋಗಿಸುವ ತ್ರಾಣವನ್ನು ಬಲವಂತವಾಗಿ ಉಪಯೋಗಿಸಲಾಗುತ್ತದೆ. ಆದ್ದರಿಂದ ಜಾಗಿಂಗ್ ಗೂ ಮೊದಲು ಅಲ್ಪ ಉಪಾಹಾರ ಅಥವಾ ಕನಿಷ್ಟ ನೀರನ್ನಾದರೂ ಕುಡಿಯಲೇಬೇಕು. ಇಲ್ಲದಿದ್ದರೆ ಈ ಪರಿ ಆರೋಗ್ಯವನ್ನು ವೃದ್ಧಿಸುವ ಬದಲು ಕೆಡಿಸುತ್ತದೆ. ಉತ್ತಮ ಆಹಾರಗಳೆಂದರೆ ಗೋಧಿಯ ಬ್ರೆಡ್ ನ ಎರಡು ತುಂಡುಗಳು, ಚಿಕ್ಕ ಎರಡು ರೊಟ್ಟಿಗಳು, ಜೊತೆಗೆ ಜೇನು ಅಥವಾ ಜಾಮ್ ಸೇವಿಸಬಹುದು. ಎರಡು ಇಡ್ಲಿ ಸಾಂಬಾರ್, ದೋಸೆ ಸಹಾ ಸೇವಿಸಬಹುದು. ಜೊತೆಗೆ ಒಂದು ಬಾಳೆಹಣ್ಣು ಅಥವಾ ಕಿತ್ತಳೆ ಹಣ್ಣನ್ನೂ ಸೇವಿಸಬಹುದು.

ಜ್ಯೂಸ್ ಕುಡಿಯುವುದು ಅತ್ಯುತ್ತಮ


ಜಾಗಿಂಗ್ ಗೂ ಮುನ್ನ ಈಗ ತಾನೇ ತಯಾರಿಸಿದ ಲಿಂಬೆಹಣ್ಣಿನ ಅಥವಾ ಮೂಸಂಬಿ, ಕಿತ್ತಳೆ ಹಣ್ಣಿನ ರಸ ಉತ್ತಮವಾಗಿವೆ. ಇಲ್ಲದಿದ್ದರೆ ಜೇನು ಸೇರಿಸಿದ ಟೀ, ವಿವಿಧ ಹಣ್ಣುಗಳನ್ನು ಗೊಟಾಯಿಸಿದ ಹಾಲು ಸಹಾ ಉತ್ತಮ ಆಹಾರಗಳಾಗಿವೆ. ಜಾಗಿಂಗ್ ಗೆ ಅಗತ್ಯವಿರುವ ಪೋಷಕಾಂಶಗಳನ್ನು ಇವು ನೀಡುತ್ತವೆ. ಜಾಗಿಂಗ್ ಮಾಡುವವರಿಗೆ ಮಾತ್ರ ಈ ಬಂಪರ್ ಕೊಡುಗೆ

ಕಾಫಿ


ಹಸುವಿನ ಹಾಲು ಸೇರಿಸಿದ ಅಪ್ಪಟ ಚಿಕ್ಕಮಗಳೂರು ಕಾಫಿ (ಜಯಂತಿ ಅಥವಾ ಪಾಂಡುರಂಗ ಕಾಫಿ) ಜಾಗಿಂಗ್ ಗೂ ಮುನ್ನ ಸೇವಿಸಲು ಉತ್ತಮವಾದ ಪೇಯವಾಗಿದೆ. ಆದರೆ ಅಭ್ಯಾಸವಿಲ್ಲದಿದ್ದರೆ ಕುಡಿದ ಕೊಂಚಸಮಯದಲ್ಲಿಯೇ ಶೌಚಕ್ಕೆ ಅವಸರವಾಗುವುದರಿಂದ ಕಾಫಿ ಕುಡಿದ ತಕ್ಷಣ ಜಾಗಿಂಗಿಗೆ ಹೊರಡದೇ ಕೆಲನಿಮಿಷಗಳ ಬಳಿಕ ಹೊರಡುವುದು ಉತ್ತಮ. ಆದರೂ ಮೊದಲ ಕೆಲದಿನಗಳವರೆಗೆ ಮನೆಯಿಂದ ತುಂಬಾ ದೂರಕ್ಕೆ ಹೋಗದಿರುವುದು ಉತ್ತಮ. ಹತ್ತಿರದ ದೂರಕ್ಕೆ ಹಲವು ಬಾರಿ ಜಾಗಿಂಗ್ ಮಾಡಿ. ಹಾಲು ಸೇರಿಸದ ಕಪ್ಪು ಕಾಫಿ ಮಾತ್ರ ಜಾಗಿಂಗ್‌ಗೆ ಮುನ್ನ ಬೇಡ. ಏಕೆಂದರೆ ಇದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಲಭ್ಯವಾಗಿ ಜಾಗಿಂಗ್ ಮೂಲಕ ದೇಹದ ವಿವಿಧ ಭಾಗಗಳಿಗೆ ತಲುಪಿ ಅನಗತ್ಯವಾದ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಿದ ಸಾಂಪ್ರಾದಾಯಿಕ ಕಾಫಿ/ಫಿಲ್ಟರ್ ಕಾಫಿ ಉತ್ತಮವಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion