ನವರಾತ್ರಿಯಲ್ಲಿ ಸರಸ್ವತಿ ಪೂಜೆಯ ಮಹತ್ವವೇನು?

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ!
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ!!

ನಾವು ಮಕ್ಕಳಿಗೆ ಶಾರದಾ ಮಾತೆಯ ಈ ಸ್ತೋತ್ರವನ್ನು ಹೇಳಿಕೊಟ್ಟು ವಿದ್ಯಾಭ್ಯಾಸ ಆರಂಭಿಸುತ್ತೇವೆ ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಆರಂಭಿಸುವುದಕ್ಕೆ ಅತ್ಯಂತ ಉತ್ತಮವಾದ ಸಮಯ ಅಂದ್ರೆ ನವರಾತ್ರಿಯ ಶಾರದಾ ಪೂಜೆ. ಹೌದು, ನಮ್ಮ ದೇಶದಲ್ಲಿ ಅದರಲ್ಲೂ ಹಿಂದೂಗಳಲ್ಲಿ ನರವಾತ್ರಿಯ ಉತ್ಸವ ಅಂದ್ರೆ ಬಹಳ ವಿಶೇಷ. ಅದರಲ್ಲೂ ಕೊನೆಯ ಮೂರು ದಿನಗಳ ಕಾಲ ಶಕ್ತಿ ದೇವತೆಯ ಜೊತೆಗೆ ಶಾರದಾ ದೇವಿಯನ್ನು ಪೂಜಿಸಿ, ವಿದ್ಯೆ, ಬುದ್ಧಿ, ಜ್ಞಾನಕ್ಕಾಗಿ ಪ್ರಾರ್ಥಿಸುತ್ತೇವೆ. ಶಾರದಾ ಪೂಜೆಯ ಮಹತ್ವವೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ;

Saraswati Puja

ಅಜ್ಞಾನ ನಾಶಕ್ಕಾಗಿ ಧರೆಗಿಳಿದ ವಿದ್ಯಾದಿದೇವತೆ!
ನವರಾತ್ರಿಯಲ್ಲಿ ಹೇಗೆ ಶಕ್ತಿ ದೇವತೆಗಳನ್ನು ಪೂಜೆ ಮಾಡಲಾಗುತ್ತದೆಯೋ ಅದೇ ರೀತಿ ಶಾಂತ ಮೂರ್ತಿ ಆಗಿರುವ ವಿದ್ಯಾದಿದೇವತೆ, ಜ್ಞಾನ ವಾಹಿನಿ ಶಾರದಾ ಮಾತೆಯನ್ನು ಕೂಡ ಪೂಜಿಸಲಾಗುತ್ತದೆ. ಶತ್ರುಗಳ ಸಂಹಾರಕ್ಕಾಗಿ ದುರ್ಗಿ ಅವತಾರವೆತ್ತಿ ಧರೆಗೆ ಇಳಿಯುತ್ತಾಳೆ. ಅದೇ ರೀತಿ ಭೂಮಿಯ ಮೇಲೆ ಅಜ್ಞಾನ ಅಕ್ರಮಗಳು ತಾಂಡವಾಡುತ್ತಿದ್ದಾಗ ಅನಕ್ಷರತೆ ತುಂಬಿ ತುಳುಕುತ್ತಿದ್ದಾಗ, ಅದೆಲ್ಲವನ್ನು ಹೋಗಲಾಡಿಸಿ ಪ್ರತಿಯೊಬ್ಬರಲ್ಲೂ ಜ್ಞಾನ ಬುದ್ಧಿವಂತಿಕೆ ವಿದ್ಯೆಯನ್ನು ತುಂಬಲು ಶಾರದಾದೇವಿ ಅವತರಿಸಿ ಭೂಮಿಗೆ ಇಳಿಯುತ್ತಿದ್ದಾಳೆ ಎನ್ನುವ ನಂಬಿಕೆ ಇದೆ.

ಮೈಸೂರು ಭಾಗದಲ್ಲಿ ನವರಾತ್ರಿ ಉತ್ಸವ ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ ಅದೇ ಶಾರದಾ ಪೂಜೆಗೂ ಕೂಡ ಬಹಳ ಮಹತ್ವ ನೀಡಲಾಗುತ್ತದೆ. ನಮಗೆಲ್ಲ ನೆನಪಿರುವಂತೆ ಅಕ್ಟೋಬರ್ ತಿಂಗಳು ಎಂದರೆ ರಜೆಯ ಸಮಯ. ಈ ಸಮಯದಲ್ಲಿ ಶಾಲೆಯಲ್ಲಿ ಶಾರದಾ ಪೂಜೆಯನ್ನು ಆಚರಿಸುವ ವಿಧಾನವೇ ಬಹಳ ಅಗಮ್ಯ. ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಯನ್ನು ಸ್ವಚ್ಛಗೊಳಿಸಿ ಶಾರದೆಯ ಮಾತೆಯನ್ನು ಕೂರಿಸಿ ಪೂಜೆ ಮಾಡಿ ಸಂಭ್ರಮ ಪಟ್ಟಿದ್ದು ನಿಮಗೂ ನೆನಪಿರಬಹುದು. ಶಾಲೆ ಅಂದ್ರೆ ವಿದ್ಯಾ ದೇಗುಲ ಹಾಗಾಗಿ ಪ್ರತಿಯೊಬ್ಬರಿಗೂ ತಾಯಿ ಎಂದು ಶಾಲೆಯಲ್ಲಿ ಶಾರದಾದೇವಿಯ ಪೂಜೆ ಮಾಡಲಾಗುತ್ತದೆ.

ಮನೆಯಲ್ಲಿ ಶಾರದಾ ಪೂಜೆ ಹೇಗೆ?
ಶಾರದಾ ಪೂಜೆ ಮಾಡುವುದಕ್ಕೂ ಕೂಡ ಅದರದ್ದೇ ಆದ ನಿಯಮಗಳು ಇವೆ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಶಾರದಾ ಪೂಜೆಯನ್ನು ಮಾಡಲಾಗುತ್ತದೆ ಈ ಬಾರಿ 20, 21, 22 ಅಕ್ಟೋಬರ್ 2023 ರಂದು ಶಾರದೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಮೂಲ ನಕ್ಷತ್ರದಲ್ಲಿ ಶಾರದಾ ದೇವಿಯನ್ನು ಪ್ರತಿಷ್ಠಾಪನೆ ಮಾಡಿದರೆ ಬಹಳ ಒಳ್ಳೆಯದು. ನಿನ್ನೆ ಅಂದರೆ 20ನೇ ತಾರೀಖಿನಂದು ಮೂಲ ನಕ್ಷತ್ರದ ಶುಭ ಗಳಿಗೆಯಲ್ಲಿ ಸರಸ್ವತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನು ಕೆಲವು ಭಾಗದಲ್ಲಿ ಅಕ್ಟೋಬರ್ 22 ವಿಜಯದಶಮಿಯ ದಿನ ಅಂದರೆ ನವರಾತ್ರಿಯ ಕೊನೆಯ ದಿನ ಸರಸ್ವತಿಯನ್ನು ಪೂಜೆ ಮಾಡಿ ಅದೇ ದಿನ ವಿಸರ್ಜನೆಯನ್ನು ಮಾಡಲಾಗುತ್ತದೆ.
ಮನೆಯಲ್ಲಿ ಶಾರದಾ ಪೂಜೆಯನ್ನು ಮಾಡುವುದು ಇದ್ದರೆ ದೇವರ ಮನೆಯನ್ನು ಸ್ವಚ್ಛಗೊಳಿಸಿ, ಮೊದಲು ವಿಘ್ನ ನಿವಾರಕ ಗಣಪತಿಗೆ ಪೂಜೆ ಮಾಡಿ ನಂತರ ಶಾರದಾದೇವಿಯನ್ನು ಪ್ರತಿಷ್ಠಾಪಿಸಬೇಕು. ಶಾರದಾ ಮೂರ್ತಿಯನ್ನು ಕೂರಿಸಿ ಫಲ ಪುಷ್ಪಗಳನ್ನು ಅರ್ಪಿಸಿ ಪೂಜೆ ಮಾಡಬೇಕು. ಒಂದು ವೇಳೆ ಶಾರದಾ ಮೂರ್ತಿ ಇಲ್ಲದೆ ಇದ್ದಲ್ಲಿ ಶಾರದಾ ಫೋಟೋವನ್ನು ಇಟ್ಟು ಪೂಜಿಸಬಹುದು ಅಥವಾ ದೇವಿಯ ಇತರ ಅವತಾರದ ಮೂರ್ತಿಯನ್ನು ಪೂಜಿಸಬಹುದು. ಇನ್ನು ಶಾರದಾ ಪೂಜೆ ಮಾಡುವಾಗ ವಿದ್ಯೆಗಾಗಿ ಜ್ಞಾನಕ್ಕಾಗಿ ಮನೆಯಲ್ಲಿ ಮಕ್ಕಳು ಓದುವ ಪುಸ್ತಕಗಳನ್ನು ಭಗವದ್ಗೀತೆ ಅಂತಹ ಗ್ರಂಥಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸಬೇಕು.
ನೀವು ಶಾರದಾ ಪೂಜೆಯ ಮೊದಲ ದಿನ ಪುಸ್ತಕಗಳನ್ನು ಇಟ್ಟು ಪೂಜಿಸಿದರೆ ಅದನ್ನು ಮೂರು ದಿನಗಳ ಕಾಲ ಅಲ್ಲಿಂದ ಸ್ಥಾನ ಪಲ್ಲಟ ಮಾಡುವ ಹಾಗಿಲ್ಲ. ಮೂರನೇ ದಿನ ಅಂದರೆ ವಿಜಯದಶಮಿಯ ದಿನ ದೇವರ ಮನೆಯಲ್ಲಿ ಇಟ್ಟ ಪುಸ್ತಕಗಳಿಗೆ ಪೂಜೆ ಮಾಡಿ, ಸರಸ್ವತಿ ವಿಸರ್ಜನೆ ಮಾಡಿದ ಬಳಿಕ ಪುಸ್ತಕಗಳನ್ನು ಮಕ್ಕಳಿಗೆ ಓದಲು ಕೊಡಬೇಕು. ಯಾರು ಸರಸ್ವತಿ ಪೂಜೆ ಮುಗಿಸಿ ಅದೇ ದಿನ ಪುಸ್ತಕಗಳನ್ನ ಓದುತ್ತಾರೋ ಅವರ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಅವರು ಓದಿದ ಎಲ್ಲಾ ವಿಚಾರಗಳು ನೆನಪಿರುತ್ತದೆ ಎಂದು ಹೇಳಲಾಗುತ್ತೆ.

ಸರಸ್ವತಿ ದೇವಿಯನ್ನು ಪೂಜೆ ಮಾಡುವಾಗ ಓಂ ಐಂ ಸರಸ್ವತ್ಯೈ ಏಂ ನಮ: ಎನ್ನುವ ಮಂತ್ರವನ್ನು ಪಠಣೆ ಮಾಡಿ ಇದರಿಂದ ಶಾರದಾ ಪೂಜೆ ಸಂಪನ್ನವಾಗುತ್ತದೆ. ಸರಸ್ವತಿ ಪೂಜೆಯ ದಿನ ಎಷ್ಟೋ ಮಕ್ಕಳಿಗೆ ವಿದ್ಯಾರಂಭ ಕೂಡ ಮಾಡಲಾಗುತ್ತದೆ ಈ ಸಮಯದಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗುತ್ತದೆ. ಈ ದಿನ ಬಹಳ ವಿಶೇಷವಾಗಿದ್ದು ಶೃಂಗೇರಿ ಶಾರದಾ ಪೀಠದಲ್ಲಿ ಶಾರದಾ ದೇವಿಗೆ ಬಹಳ ವಿಶೇಷವಾದ ಪೂಜೆಗಳನ್ನು ಕೂಡ ಸಲ್ಲಿಸಲಾಗುತ್ತದೆ.

ಶಾರದಾ ಪೂಜೆಯ ಬಳಿಕ ತಪ್ಪದೇ ಮಕ್ಕಳಿಗೆ ಈ ಶ್ಲೋಕವನ್ನು ಪಠಣೆ ಮಾಡಿಸಿ!
ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Saraswati Puja Significance During In Navratri In Kannada

Saraswati Puja: What are the significance of this puja, how to do? read on.
Story first published: Sunday, October 22, 2023, 9:41 [IST]
X
Desktop Bottom Promotion