ಪ್ರೇಮ ವಿವಾಹಕ್ಕೆ ಅಪ್ಪ- ಅಮ್ಮನನ್ನು ಒಪ್ಪಿಸೋದು ಹೇಗೆ?

ಪ್ರೀತಿ ಮಾಡೋದು ಸುಲಭ. ಆದರೆ ಅದೇ ಪ್ರೀತಿಗೆ ಮನೆಯವರಿಂದ ಒಪ್ಪಿಗೆ ಪಡೆದುಕೊಳ್ಳೋದು ತುಂಬಾನೇ ಕಷ್ಟ. ಎಷ್ಟೋ ಜನರ ಪ್ರೀತಿ ಮನೆಯವರು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಮುರಿದು ಬಿದ್ದ ಉದಾಹರಣೆಗಳು ಇದೆ. ಸಾಮಾನ್ಯವಾಗಿ ಪೋಷಕರಿಗೆ ತಮ್ಮ ಮಕ್ಕಳ ಮದುವೆಯ ಬಗ್ಗೆ ನೂರಾರು ಕನಸುಗಳು ಇದ್ದೇ ಇರುತ್ತದೆ. ಅದ್ರಲ್ಲೂ ಮಕ್ಕಳಿಗೊಂದು ಸರಿಯಾದ ಜೋಡಿಯನ್ನೇ ಹುಡುಕಬೇಕೆಂದು ಅಂದುಕೊಂಡಿರುತ್ತಾರೆ.

ಆದರೆ ಏಕಾ ಏಕಿ ಮಗ/ಮಗಳು ಬಂದು ನಾನು ಬೇರೆ ಯಾರನ್ನೋ ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ರೆ ಖಂಡಿತ ಅದನ್ನು ಒಪ್ಪೋದಕ್ಕೆ ಅವರು ಸಿದ್ಧರಿರೋದಿಲ್ಲ. ಯಾಕಂದ್ರೆ ಮಕ್ಕಳು ಅವರಾಗಿಯೇ ಹುಡುಕಿದ ಸಂಗಾತಿಯ ಮೇಲೆ ಪೋಷಕರಿಗೆ ಒಪ್ಪಿಗೆ ಇರೋದಿಲ್ಲ. ಮಕ್ಕಳ ಆಯ್ಕೆ ಸರಿಯಾಗಿ ಇರುತ್ತೋ ಇಲ್ವೋ ಅನ್ನೋ ಭಯ ಖಂಡಿತ ಅವರಿಗೆ ಇರುತ್ತೆ. ಅಷ್ಟಕ್ಕು ಪ್ರೇಮ ವಿವಾಹವಾಗಲು ಮನೆಯಲ್ಲಿ ಪೋಷಕರನ್ನು ಒಪ್ಪಿಸೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ.

Tips to Help you Convince Your Parents for a Love Marriage in Kannada

1. ನೀವು ಪ್ರೀತಿಸಿದವರನ್ನು ಅಪ್ಪ- ಅಮ್ಮನಿಗೆ ಪರಿಚಯ ಮಾಡಿಸಿ

ನೀವು ಪ್ರೀತಿಸುತ್ತಿರುವವರ ಬಗ್ಗೆ ಅಪ್ಪ, ಅಮ್ಮನಿಗೆ ಗೊತ್ತಿದ್ದರೆ ಒಳ್ಳೆಯದು. ಅವರು ನಿಮ್ಮ ಸ್ನೇಹಿತ ಎಂದು ಪರಿಚಯ ಮಾಡಿಸಿ. ಹಬ್ಬ ಅಥವಾ ಇನ್ಯಾವುದೋ ವಿಶೇಷ ಸಂದರ್ಭಗಳಲ್ಲಿ ಮನೆಗೆ ಆಹ್ವಾನಿಸಿ. ಸಮಯ ಸಿಕ್ಕಾಗಲೆಲ್ಲಾ ಅವರ ಉತ್ತಮ ಗುಣಗಳ ಬಗ್ಗೆ ಪೋಷಕರ ಬಳಿ ಹೇಳುತ್ತಿರಿ.

ಹೀಗಾಗಿ ನಿಮ್ಮ ಪೋಷಕರಿಗೆ ನೀವು ಪ್ರೀತಿಸುತ್ತಿರುವವರ ಬಗ್ಗೆ ಎಲ್ಲಾ ವಿಚಾರ ಗೊತ್ತಿರುತ್ತದೆ. ಹಾಗೂ ಒಂದು ದಿನ ಮುಕ್ತವಾಗಿ ನೀವು ಪ್ರೀತಿಸುತ್ತಿರುವವರು ಇವರೇ ಎಂದು ಮುಕ್ತವಾಗಿ ಹೇಳಿಕೊಳ್ಳಿ. ಇಂತಹ ಸಂದರ್ಭದಲ್ಲಿ ವಿರೋಧಗಳು ಎದುರಾಗುವ ಸಾಧ್ಯತೆ ಕಡಿಮೆ.

2. ನಿಮಗೆ ಪ್ರಬುದ್ಧತೆ ಇದೆ ಅನ್ನೋದನ್ನು ತೋರಿಸಿ

ನಾವು ಎಷ್ಟೇ ದೊಡ್ಡವರಾಗಿ ಬೆಳೆದರೂ ಕೂಡ ಪೋಷಕರು ನಮ್ಮನ್ನು ಮಕ್ಕಳಂತೆ ನೋಡುತ್ತಾರೆ. ಅದು ಪ್ರೀತಿ ವಿಚಾರ ಹೇಳಿಕೊಂಡರಂತೂ ಅವರು ಸುತಾರಾಂ ಒಪ್ಪೋದಿಲ್ಲ. ಅವರ ಕುಲ, ಗೋತ್ರ, ಶಿಕ್ಷಣ, ವೃತ್ತಿ ಜೊತೆಗೆ ಆಸ್ತಿಯ ಲೆಕ್ಕಾಚಾರವನ್ನೂ ಹಾಕುತ್ತಾರೆ. ನಮಗೆ ಪ್ರಬುದ್ಧತೆ ಇಲ್ಲದೇ ಯಾರನ್ನೋ ಪ್ರೀತಿ ಮಾಡಿದ್ದೀವಿ ಎಂದುಕೊಳ್ಳುತ್ತಾರೆ.

ಆದರೆ ಅವರು ಅಂದುಕೊಂಡಿರೋದು ತಪ್ಪು ಎಂಬುವುದನ್ನು ಅವರಿಗೆ ಅರ್ಥ ಮಾಡಿಸಿ. ನೀವು ಮದುವೆಯಾಗಲು ಇಚ್ಛಿಸಿರುವ ಹುಡುಗ/ಹುಡುಗಿ ನಿಮಗೆ ಸರಿಯಾದ ಜೋಡಿ ಹಾಗೂ ಅವರು ಸಮರ್ಥರು ಅನ್ನೋದನ್ನು ಅರ್ಥ ಮಾಡಿಸಿ. ಖಂಡಿತ ಪೋಷಕರು ನಿಮ್ಮ ಮದುವೆಗೆ ಒಪ್ಪುತ್ತಾರೆ.

3. ನಿಮ್ಮ ಸ್ನೇಹಿತರು/ಸಂಬಂಧಿಕರ ಸಹಾಯ ಪಡೆಯಿರಿ

ಮನೆಯಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಸೋದು ಸುಲಭದ ವಿಚಾರವಲ್ಲ. ಕೆಲವೊಂದು ಸಲ ಪೋಷಕರು ನಾವು ಪ್ರೀತಿಸುತ್ತಿರುವವರು ಎಷ್ಟೇ ಒಳ್ಳೆಯವರಾದರೂ ಕೂಡ ಒಪ್ಪೋದಕ್ಕೆ ಸಿದ್ಧರಿರೋದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಪೋಷಕರಿಗೆ ತುಂಬಾ ಹತ್ತಿರ ಇರೋ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಸಹಾಯ ಪಡೆದು ಅವರಲ್ಲಿ ಪೋಷಕರ ಮನವೊಲಿಸಲು ತಿಳಿಸಿ.

4. ಅಪ್ಪ- ಅಮ್ಮ ಇಬ್ಬರಲ್ಲಿ ಒಬ್ಬರ ಮನವೊಲಿಸಿ

ಮಕ್ಕಳು ಅಪ್ಪ- ಅಮ್ಮ ಒಬ್ಬರಲ್ಲಿ ಒಬ್ಬರಲ್ಲಿ ತುಂಬಾನೇ ಆತ್ಮೀಯರಾಗಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಯಾರ ಜೊತೆಗೆ ಆತ್ಮೀಯರಾಗಿದ್ದೀರಿ ಅವರ ಜೊತೆ ಮಾತನಾಡಿ ಅವರ ಮನವೊಲಿಸೋದಕ್ಕೆ ಪ್ರಯತ್ನ ಮಾಡಿ. ಒಂದು ವೇಳೆ ಅವರು ಒಪ್ಪಿದರೆ ನಿಮ್ಮ ಹಾದಿ ಕೊಂಚ ಸುಗಮವಾಗುತ್ತದೆ. ಅವರು ಖಂಡಿತ ಮತ್ತೊಬ್ಬ ಪೋಷಕರನ್ನು ಒಪ್ಪಿಸುತ್ತಾರೆ.

5. ಇಬ್ಬರ ಕುಟುಂಬಸ್ಥರನ್ನು ಭೇಟಿ ಮಾಡಿಸಿ

ಮದುವೆಯಾಗಲು ಪ್ರೀತಿಸುವ ಎರಡು ಮನಸ್ಸುಗಳು ಒಂದಾದರೆ ಸಾಲೋದಿಲ್ಲ. ಇದರ ಜೊತೆಗೆ ಅವರ ಪೋಷಕರ ಒಪ್ಪಿಗೆ ಕೂಡ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ನಿಮ್ಮ ಮನೆಗಳಲ್ಲಿ ನೀವು ಪೋಷಕರನ್ನು ಒಪ್ಪಿಸಿದ ಮೇಲೆ ಎರಡೂ ಮನೆಯವರು ಕೂತು ಮಾತನಾಡುವುದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಇಬ್ಬರ ಮನೆಯವರೂ ಭೇಟಿಯಾಗಲು ಒಂದು ಚಿಕ್ಕ ಡಿನ್ನರ್ ಅರೇಂಜ್ ಮಾಡಿ. ಪೋಷಕರು ಕೂತು ಮಾತನಾಡಿ ಅವರಿಬ್ಬರ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿ.

6. ಏನೇ ಆದರೂ ಪ್ರೀತಿಯನ್ನು ಬಿಟ್ಟು ಕೊಡಬೇಡಿ

ಪೋಷಕರು ಅಷ್ಟು ಸುಲಭವಾಗಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ಸೂಚಿಸೋದಿಲ್ಲ. ಆದರೆ ನೀವು ನಿಮ್ಮ ಪ್ರೀತಿಯನ್ನು ಬಿಟ್ಟು ಕೊಡಬಾರದು ಹೋರಾಡುತ್ತಲೇ ಇರಬೇಕು. ಮನೆಯವರು ಒಪ್ಪಿಲ್ಲ ಎಂದು ಪ್ರೀತಿಸಿದವರ ಮನಸ್ಸಿಗೆ ನೋವುಂಟು ಮಾಡಿ ಬೇರೆಯವರನ್ನು ಮದುವೆಯಾಗಬೇಡಿ. ಎಷ್ಟು ವರ್ಷವಾದರೂ ಪರವಾಗಿಲ್ಲ, ಪ್ರೀತಿಗೆ ಮನೆಯವರು ಒಪ್ಪುವವರೆಗೂ ಹೋರಾಟ ನಿರಂತರವಾಗಿರಲಿ.

ಪ್ರೀತಿಯನ್ನು ಕೊನೆವರೆಗೂ ಉಳಿಸಿಕೊಂಡು, ಪ್ರೀತಿಸಿದವರನ್ನೇ ಮದುವೆಯಾಗೋದು ಸುಲಭದ ಮಾತಲ್ಲ. ಇದಕ್ಕಾಗಿ ತ್ಯಾಗ, ಹೋರಾಟ ನಿರಂತರವಾಗಿ ಇರಬೇಕು. ಆ ಮಾತ್ರ ಮನೆಯವರನ್ನು ಒಪ್ಪಿಸಿ ಮದುವೆಯಾಗೋದಕ್ಕೆ ಸಾಧ್ಯ.

English summary

Tips to Help you Convince Your Parents for a Love Marriage in Kannada

These are the Tips to Help you Convince Your Parents for a Love Marriage. Read More.
Story first published: Thursday, June 22, 2023, 13:19 [IST]
X
Desktop Bottom Promotion