ನಿಮ್ಮ ಸಂಗಾತಿಯ ನಡವಳಿಕೆ ಹೀಗಿದ್ದರೆ ಅವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರ್ಥ

ಪ್ರೀತಿ ಅನ್ನೋದೊಂದು ಸುಂದರ ಅನುಭವ. ಪ್ರತಿಯೊಬ್ಬರಿಗೂ ಆ ಅನುಭವ ಪಡಯಬೇಕೆಂಬ ಬಯಕೆ ಇರುತ್ತದೆ. ಆದರೆ ಇನ್ನೂ ಕೆಲವರು ಆತುರಕ್ಕೆ ಬಿದ್ದು ಸರಿಯಾದ ಜೋಡಿಯನ್ನು ಆಯ್ದುಕೊಳ್ಳೋದ್ರಲ್ಲಿ ತಪ್ಪು ಮಾಡುತ್ತಾರೆ. ಪ್ರೀತಿಯಲ್ಲಿ ಬಹುದೂರ ಹೋದ ಮೇಲೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿರೋ ವಿಚಾರ ಗೊತ್ತಾದರೆ ಆ ಕ್ಷಣ ಆಗುವ ನೋವು ಇದ್ಯಲ್ಲ ಅದು ಅಷ್ಟಿಷ್ಟಲ್ಲ.

ಇದೇ ಕಾರಣಕ್ಕೆ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಜಾಗರೂಕತೆಯಿಂದಿರಬೇಕು. ಕೊಂಚ ಎಡವಿದರೂ ಜೀವನ ಪರ್ಯಂತ ದುಃಖದಲ್ಲೇ ದಿನ ದೂಡಬೇಕಾಗುತ್ತದೆ. ಆದರೆ ಕೆಲವೊಂದು ಸಲ ನೀವು ಅತಿಯಾಗಿ ನಂಬಿದ್ದ ಪ್ರೀತಿಯೇ ನಿಮಗೆ ಮೋಸ ಮಾಡಬಹುದು. ಆದರೆ ಅವರು ಮೋಸ ಮಾಡುತ್ತಿದ್ದಾರೆ ಅನ್ನೋದು ಕೂಡ ನಮ್ಮ ಅರಿವಿಗೆ ಬರೋದಿಲ್ಲ. ಹಾಗಾದ್ರೆ ಪ್ರೀತಿಸಿದವರು ನಿಮ್ಮನ್ನು ಅವರ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತಾಗೋದು ಹೇಗೆ? ತಿಳಿದುಕೊಳ್ಳೋಣ.

Signs That Your Partner Is Using You In A Relationship In Kannada

1. ನಿಮ್ಮ ಮಾತುಗಳನ್ನು ಅವರು ಕೇಳದೇ ನಿರ್ಲಕ್ಷಿಸುತ್ತಿರಬಹುದು
ಕೆಲ ಸಂಬಂಧಗಳಲ್ಲಿ ಏನಾಗುತ್ತೆ ಅಂದರೆ ಅವರು ನಮ್ಮನ್ನು ಅವರ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಾರೆ ಅಷ್ಟೇ. ಇದನ್ನು ನಾವು ಅವರ ಮಾತುಗಳಲ್ಲಿ ಅರ್ಥ ಮಾಡಿಕೊಳ್ಳಬಹುದು. ಯಾಕಂದ್ರೆ ನಾವು ಅವರಿಗೆ ಫೋನ್‌ ಮಾಡಿದಾಗ ಅವರು ನಮ್ಮ ಜೊತೆಗೆ ಮಾತನಾಡಲು ಹೆಚ್ಚಿನ ಆಸಕ್ತಿಯನ್ನು ತೋರುವುದಿಲ್ಲ. ಅಥವಾ ಮಾತನಾಡಿದರೂ ಕೂಡ ಅವರ ಗಮನ ಇತ್ತ ಕಡೆ ಇರೋದಿಲ್ಲ. ನಾವು ಏನನ್ನೋ ಹೇಳುತ್ತಿರುತ್ತೇವೆ ಆದರೆ ಅವರು ಅದನ್ನು ಕೇಳುವ ಆಸಕ್ತಿಯೇ ತೋರುವುದಿಲ್ಲ.

2. ಸ್ನೇಹಿತರನ್ನು ನಿಮಗೆ ಪರಿಚಯ ಮಾಡಿಕೊಡೋದಕ್ಕೆ ಇಷ್ಟಪಡೋದಿಲ್ಲ
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮನ್ನು ಟೈಮ್‌ಪಾಸ್‌ ಗಾಗಿ ಮಾತ್ರ ಪ್ರೀತಿ ಮಾಡುತ್ತಿದ್ದರೆ. ನಿಮ್ಮ ಸ್ನೇಹಿತರನ್ನು ಭೇಟಿಯಾಗೋದಕ್ಕೆ ಅವರು ಇಷ್ಟ ಪಡೋದಿಲ್ಲ. ಅಥವಾ ಅವರ ಸ್ನೇಹಿತರನ್ನು ನಿಮಗೆ ಪರಿಚಯ ಮಾಡಿಕೊಡೋದಿಲ್ಲ. ನಿಮ್ಮ ಜೊತೆಗೆ ಅವರು ಮುಂದಿನ ಭವಿಷ್ಯವನ್ನು ಕಂಡಿದ್ದರೆ ಮಾತ್ರ ಅವರ ಆಪ್ತರ ಬಗ್ಗೆ ನಿಮಗೆ ತಿಳಿಸುತ್ತಾರೆ. ಇಲ್ಲದಿದ್ದರೆ ಎಲ್ಲಾ ವಿಚಾರದಲ್ಲೂ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ಪ್ರತಿ ಸಲ ಎಲ್ಲಾ ವಿಚಾರವನ್ನು ನಿಮ್ಮಿಂದ ಮುಚ್ಚಿಡುತ್ತಾರೆ.

3. ಕಮಿಟ್‌ಮೆಂಟ್‌ ಅವರಿಗೆ ಬೇಕಾಗಿಲ್ಲ
ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನು ನೀವು ತಿಳಿದುಕೊಳ್ಳಬೇಕಾದರೆ ಮೊದಲಿಗೆ ಅವರ ಜೊತೆ ನಿಮ್ಮ ಮದುವೆ ವಿಚಾರ ಮಾತನಾಡಿ. ಆಗ ಗೊತ್ತಾಗುತ್ತದೆ ಅವರ ಅಸಲಿ ಬಣ್ಣ ಏನು ಅನ್ನೋದು. ಯಾಕಂದ್ರೆ ಯಾರಿಗೆ ಕಮಿಟ್‌ಮೆಂಟ್‌ ಇಷ್ಟ ಇರೋದಿಲ್ಲ ಅವರು ಮೆತ್ತಗೆ ಮದುವೆ ವಿಚಾರದಿಂದ ಜಾರಿಕೊಳ್ಳುತ್ತಾರೆ. ಮದುವೆ ವಿಚಾರ ಬಂದಾಗಲೆಲ್ಲಾ ಆ ಬಗ್ಗೆ ಮಾತನಾಡೋದಕ್ಕೆ ಇಷ್ಟ ಪಡೋದಿಲ್ಲ. ಇದರಿಂದ ಅವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನ ತಿಳಿಯುತ್ತೀರಿ.

4. ನಿಮ್ಮಿಂದ ಸರಿಯಾಗಿ ದುಡ್ಡು ಖರ್ಚು ಮಾಡಿಸುತ್ತಾರೆ
ಪ್ರೀತಿಯಲ್ಲಿ ನನ್ನದು ನಿನ್ನದು ಅನ್ನೋ ಲೆಕ್ಕಚಾರ ಬರೋದಿಲ್ಲ. ಎಲ್ಲಿ ಹೋದರೂ ಹುಡುಗ/ಹುಡುಗಿಯೇ ಹಣ ಪಾವತಿ ಮಾಡಬೇಕೆಂದೇನಿಲ್ಲ. ಇಬ್ಬರಲ್ಲಿ ಯಾರು ಕೂಡ ಪಾವತಿ ಮಾಡಬಹುದು. ಆದರೆ ನಿಮ್ಮ ಸಂಗಾತಿ ನಿಮ್ಮನ್ನು ಬಳಸಿಕೊಳ್ಳುವವರಾದರೆ ಪ್ರತಿಸಲ ನಿಮ್ಮ ಕೈಯಿಂದಲೇ ದುಡ್ಡು ಖರ್ಚು ಮಾಡಿಸುತ್ತಾರೆ. ಅವರಿಗೆ ಏನೆಲ್ಲಾ ಬೇಕು ಅದನ್ನೆಲ್ಲಾ ನಿಮ್ಮ ಪಾಕೆಟ್‌ನಿಂದಲೇ ಖರ್ಚು ಮಾಡಿಸುತ್ತಾರೆ. ಒಟ್ನಲ್ಲಿ ನಿಮ್ಮನ್ನು ಕ್ರೆಡಿಟ್‌ ಕಾರ್ಡ್‌ನಂತೆ ಬಳಕೆ ಮಾಡುತ್ತಾರೆ ಅಷ್ಟೇ.

5. ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಳ್ಳುತ್ತಾರೆ
ಪ್ರೀತಿ ಅನ್ನೋದು ಎರಡು ಮನಸ್ಸುಗಳನ್ನು ಬೆಸೆಯುವ ಬಂಧವಾಗಬೇಕು. ಆದರೆ ಕೆಲವರು ಪ್ರೀತಿಯ ಅರ್ಥವೇ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಲೈಂಗಿಕ ಸುಖಕ್ಕಾಗಿ ಪ್ರೀತಿಸುವವರು ನಮ್ಮಲ್ಲೇ ಅನೇಕರಿದ್ದಾರೆ. ಅವರಿಗೆ ಪವಿತ್ರವಾದ ಪ್ರೀತಿ ಬೇಕಾಗಿಲ್ಲ. ಲೈಂಗಿಕ ಸುಖ ಸಿಕ್ಕರಷ್ಟೇ ಸಾಕು. ಪ್ರತಿಸಲ ನಿಮ್ಮಲ್ಲಿ ಈ ವಿಚಾರದ ಬಗ್ಗೆಯೇ ಮಾತನಾಡುತ್ತಾರೆ. ಹಾಗೂ ಅವರಿಗೆ ಬೇಕಾದಾಗಲೆಲ್ಲ ನಿಮ್ಮನ್ನು ಬಳಸಿಕೊಂಡು ಬಿಡುತ್ತಾರೆ.

6. ನಿಮ್ಮ ಗುರಿ, ಯಶಸ್ಸಿನ ಬಗ್ಗೆ ಚಿಂತೆ ಮಾಡುವುದಿಲ್ಲ
ಪ್ರೀತಿಯಲ್ಲಿ ಸ್ವಾರ್ಥವಿರೋದಿಲ್ಲ. ಸಂಗಾತಿಯ ಖುಷಿಯೇ ತನ್ನ ಖುಷಿ ಎಂದು ಬದುಕುವವರಿದ್ದಾರೆ. ನಿಸ್ವಾರ್ಥ ಪ್ರೀತಿಯೆಂದರೆ ಪ್ರತಿಯೊಂದು ಹೆಜ್ಜೆಯಲ್ಲೂ ಸಂಗಾತಿಯ ಜೊತೆಯಾಗುವುದು. ಆದರೆ ಕಪಟ ಪ್ರೀತಿ ಹೇಗಿರುತ್ತದೆ ಎಂದರೆ ಅವರಿಗೆ ನಿಮ್ಮ ಗುರಿ, ಯಶಸ್ಸು ಬೇಕಾಗಿರುವುದಿಲ್ಲ. ಕನಿಷ್ಠ ಪಕ್ಷ ಅವರು ನಿಮ್ಮ ಬಗ್ಗೆ ಚಿಂತೆಯೂ ಮಾಡುವುದಿಲ್ಲ. ನಿಮಗೆ ಒಳ್ಳೆಯದಾಗಲಿ, ನೀವು ಜೀವನದಲ್ಲಿ ಮುಂದೆ ಬರಲಿ ಎಂದು ಅವರು ಬಯಸೋದಿಲ್ಲ.

7. ನಿಮ್ಮ ಭಾವನೆಗಳಿಗೆ ಬೆಲೆ ಕೊಡೋದಿಲ್ಲ
ಸಂಗಾತಿಯೆಂದರೆ ಆತ ನಮ್ಮ ನೋವು-ನಲಿವು, ಸುಃಖ-ದುಃಖದಲ್ಲಿ ಜೊತೆಯಾಗಿರುವವನಾಗಿರಬೇಕು. ನಮಗೆ ದುಃಖ ಆದಾಗ ಅವರಲ್ಲಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತೇವೆ. ಆಗ ಅವರು ನಮಗೆ ನಾಲ್ಕು ಸಮಾಧಾನದ ಮಾತುಗಳನ್ನು ಹೇಳಿದಾಗ ಮನಸ್ಸು ಹಗುರಾದ ಹಾಗೇ ಆಗುತ್ತದೆ. ಆದರೆ ನಿಮ್ಮ ಮೇಲೆ ಯಾರಿಗೆ ನಿಜವಾಗಿಯೂ ಪ್ರೀತಿ ಇರುವುದಿಲ್ಲವೋ ಅವರು ನಿಮ್ಮ ಬಳಿ ಯಾವುದೇ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ. ಹಾಗೂ ನಿಮ್ಮ ಭಾವನೆಗಳಿಗೂ ಬೆಲೆ ಕೊಡುವವರು ಅವರಾಗೋದಿಲ್ಲ.

8. ನಿಮ್ಮನ್ನು ಬಿಡೋದದಾಗಿ ಬೆದರಿಕೆ ಹಾಕುತ್ತಾರೆ
ನಿಮ್ಮನ್ನು ನಿಜವಾಗಿಯೂ ಪ್ರೇಮಿಸುವವನು ಸಾಯೋವರೆಗೂ ನಿಮ್ಮ ಜೊತೆಯಲ್ಲೇ ಬದುಕಬೇಕು ಅನ್ನೋ ಆಸೆ ಇಟ್ಟುಕೊಂಡಿರುತ್ತಾನೆ. ನಿಮ್ಮ ಮಧ್ಯೆ ಎಷ್ಟೇ ಜಗಳ, ಮನಸ್ಥಾಪಗಳು ಬಂದರೂ ಕೂಡ ನಿಮ್ಮನ್ನು ಆತ ಬಿಟ್ಟು ಕೊಡೋದಿಲ್ಲ. ನೀವೆ ಬೇಕು ಅಂತ ಬಯಸುತ್ತಾನೆ. ಆದರೆ ಯಾರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿಲ್ಲವೋ ಆತ ನಿಮಗೆ ಪ್ರತಿಸಾರಿ ಬೆದರಿಕೆ ಹಾಕುತ್ತಾನೆ. ನಿಮ್ಮನ್ನು ಬಿಟ್ಟು ಬಿಡುತ್ತೇನೆ ಎಂದು ಹೆದರಿಸುತ್ತಿರುತ್ತಾನೆ.

ಪ್ರೀತಿ ಎರಡು ಮನಸ್ಸುಗಳನ್ನು ಬೆಸೆಯುವ ಬಂಧವಾಗಬೇಕೇ ಹೊರತು ಒಪ್ಪಂದ ಆಗಬಾರದು. ಒಪ್ಪಂದ ಅಥವಾ ಒತ್ತಾಯದ ಮೇಲೆ ಕಟ್ಟಿದ ಪ್ರೀತಿ ಕೊನೆವರೆಗೂ ಉಳಿಯೋದಿಲ್ಲ. ಅನೇಕ ಜನರಿಗೆ ಟೈಮ್‌ ಪಾಸ್‌ ಪ್ರೀತಿ ಮಾತ್ರ ಬೇಕಿರುತ್ತದೆ. ಕೊನೆವರೆಗೂ ನಿಮ್ಮ ಜೊತೆಗೆ ಬದುಕಬೇಕು ಅನ್ನೋ ಇಚ್ಛೆ ಅವರಿಗೆ ಇರೋದಿಲ್ಲ. ಹೀಗಾಗಿ ಪ್ರೀತಿಯಲ್ಲಿ ಮೊದಲ ಹೆಜ್ಜೆ ಇಡುವಾಗಲೇ ತುಂಬಾ ಹುಷಾರಾಗಿದ್ರೆ ಒಳ್ಳೆಯದು.

English summary

Signs That Your Partner Is Using You In A Relationship In Kannada

Here are the signs that your partner is using you in a relationship.
Story first published: Thursday, April 6, 2023, 16:23 [IST]
X
Desktop Bottom Promotion