Relationship Tips in Kannada : ಸಂಸಾರದಲ್ಲಿ ಹೀಗೆಲ್ಲಾ ಇದ್ರೆ ಸರಿ ಹೋಗಲ್ಲ ನೋಡ್ರಿ

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ನಾವು ಜೀವನವಿಡೀ ನಮ್ಮನ್ನು ಪ್ರೀತಿಸುವ ಒಬ್ಬರ ಜೊತೆ ಕಳೆಯಲು ಅವರನ್ನು ಆಯ್ಕೆ ಮಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ. ಹಾಗೆಂದು ಉತ್ತಮ ಸಂಗಾತಿ ಸಿಕ್ಕಿದ ಕೂಡಲೇ ಇಡೀ ಜೀವಮಾನವೆಲ್ಲಾ ಅವರ ಜೊತೆಯಲ್ಲಿ ಸಂತೋಷವಾಗಿಯೇ ಕಾಲ ಕಳೆಯುತ್ತೇವೆ ಎಂದೂ ಕೂಡ ಹೇಳಲು ಬರುವುದಿಲ್ಲ.

No Intimacy In Your Relationship

ಹಾಲಿನ ಜೊತೆ ಜೇನು ಬೆರೆತಂತೆ ಹಾಯಾಗಿರುವ ಸಂಸಾರದಲ್ಲಿ ಕೆಲವೊಂದು ಸಂದರ್ಭ ಸನ್ನಿವೇಶಗಳು ಹುಳಿ ಹಿಂಡಲು ಕಾದು ಕುಳಿತಿರುತ್ತವೆ. ಇಂತಹ ಸಮಯದಲ್ಲಿ ನೀವು ಎಷ್ಟು ತಾಳ್ಮೆಯಿಂದ ಇದ್ದು, ನಿಮ್ಮ ಜೀವನದ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವಿರೋ ಎಂಬುದರ ಮೇಲೆ ನಿಮ್ಮ ಸಂಸಾರದ ಗುಟ್ಟು ನಿಂತಿರುತ್ತದೆ.

ಈ ಲೇಖನದಲ್ಲಿ ನಿಮ್ಮ ಜೀವನದಲ್ಲಿ ಎದುರಾಗುವ ಕೆಲವೊಂದು ಕಹಿ ಸಂದರ್ಭಗಳು ಯಾವುವು ಮತ್ತು ಅವುಗಳನ್ನು ಹೇಗೆ ನಿಭಾಯಿಸಿ ನಿಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಬೇಕು ಎಂಬುದರ ಒಂದು ಸಣ್ಣ ಕಿರುನೋಟ ಇದೆ.

1. ಒಬ್ಬರಿಗೊಬ್ಬರು ಯಾವುದೇ ವಿಷಯಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ

1. ಒಬ್ಬರಿಗೊಬ್ಬರು ಯಾವುದೇ ವಿಷಯಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ

ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಭಾವನಾತ್ಮಕತೆಯ ಹಾಗೂ ಆತ್ಮೀಯತೆಯ ಕೊರತೆ ಹೆಚ್ಚಾಗಿದ್ದರೆ ಈ ಸಮಸ್ಯೆ ಎದುರಾಗುತ್ತದೆ. ಏಕೆಂದರೆ ನಿಮಗೆ ನನ್ನ ಸಂಗಾತಿಯ ಬಳಿ ನಾನು ಈ ವಿಷಯವನ್ನು ಹೇಳಿದರೂ ಯಾವುದೇ ಪ್ರಯೋಜನವಿಲ್ಲ. ಅವರಿಗೆ ಅರ್ಥವೂ ಆಗುವುದಿಲ್ಲ, ಜೊತೆಗೆ ನಾನು ಹೇಳಿದ್ದನ್ನು ಕಿವಿಗೊಟ್ಟು ಕೇಳುವುದೂ ಇಲ್ಲ ಎಂಬ ಭಾವನೆ ನಿಮ್ಮಲ್ಲಿ ಮನೆ ಮಾಡಿರುತ್ತದೆ.

ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮಿಬ್ಬರ ನಡುವೆ ಸಂವಹನದ ಕೊರತೆ ಎಂದೇ ಹೇಳಬಹುದು. ಎಲ್ಲಿ ಇಬ್ಬರ ಮಧ್ಯೆ ಮಾತುಕತೆ ಕಡಿಮೆ ಇರುತ್ತದೆಯೋ ಅಲ್ಲಿ ಇಬ್ಬರ ನಡುವೆ ಅಂತರ ಹೆಚ್ಚಾಗತೊಡಗುತ್ತದೆ. ಆಗ ನಿಮ್ಮ ಯಾವ ತೊಂದರೆಗಳನ್ನು ಅಥವಾ ನಿಮಗೆ ಸಂಬಂಧ ಪಟ್ಟ ಯಾವುದೇ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳಲು ಮನಸ್ಸು ಬರುವುದಿಲ್ಲ.

ಆದರೆ ಒಂದು ಅಂಶ ನಿಮಗೆ ನೆನಪಿರಲಿ. ದೀರ್ಘ ಕಾಲದಿಂದ ಬಗೆಹರಿಯದ ಎಷ್ಟೋ ವಿಷಯಗಳು ಹಾಗೂ ಸವಾಲುಗಳು ಕೇವಲ ಸ್ವಲ್ಪ ಹೊತ್ತಿನ ಜವಾಬ್ದಾರಿಯುತ ಮಾತುಕತೆಯಿಂದ ಸರಿ ಹೋಗುವ ಎಲ್ಲಾ ಲಕ್ಷಣಗಳಿರುತ್ತವೆ. ಆದ್ದರಿಂದ ಯಾವುದೇ ಮುಚ್ಚುಮರೆಯಿಲ್ಲದೆ ನಿಮ್ಮ ಸಂಗಾತಿಯ ಜೊತೆ ಸಾಧ್ಯವಾದಷ್ಟು ಎಲ್ಲ ವಿಚಾರಗಳನ್ನು ಹಂಚಿಕೊಳ್ಳಲು ಮುಂದಾಗಿ. ಇದರಿಂದ ನಿಮ್ಮಿಬ್ಬರ ಮಧ್ಯೆ ನಂಬಿಕೆ ಮತ್ತು ಬಂಧನ ಗಟ್ಟಿಗೊಳ್ಳುತ್ತದೆ.

2. ನಿಮ್ಮ ಸಂಗಾತಿಯನ್ನು ನೀವು ನಂಬುವುದಿಲ್ಲ

2. ನಿಮ್ಮ ಸಂಗಾತಿಯನ್ನು ನೀವು ನಂಬುವುದಿಲ್ಲ

ಇಬ್ಬರ ಮಧ್ಯೆ ಭಾವನಾತ್ಮಕ ಬಂಧ ಇಲ್ಲದೇ ಹೋದಾಗ ನಂಬಿಕೆ ಕೂಡ ಮಾಯವಾಗುತ್ತದೆ. ಯಾವುದೇ ವಿಚಾರವನ್ನು ನಿಮ್ಮ ಸಂಗಾತಿಯ ಬಳಿ ಹೇಳಲು ಅಥವಾ ಕೇಳಲು ನಿರ್ಲಕ್ಷ ತೋರುತ್ತೀರಿ. ಕೆಲವೊಂದು ಬಾರಿ ಅವರಿಗೇ ವಿಷಯ ತಿಳಿಸದೆ, ಎಲ್ಲಾ ಕೆಲಸಕ್ಕೂ ನೀವೇ ಮುಂದಾಗುತ್ತೀರಿ. ಇದರಿಂದ ನಿಮ್ಮ ಸಂಬಂಧದಲ್ಲಿ ಮುಚ್ಚು ಮರೆಗಳು ಜಾಸ್ತಿಯಾಗುತ್ತವೆ.

ಈ ವಿಚಾರ ಒಂದಲ್ಲ ಒಂದು ದಿನ ಬಯಲಿಗೆ ಬಂದು ಇಬ್ಬರ ನಡುವೆ ಮನಸ್ತಾಪ ಮಿತಿ ಮೀರುತ್ತದೆ. ಕೆಲವೊಂದು ಸಣ್ಣಪುಟ್ಟ ವಿಚಾರಗಳು ನಿಮ್ಮಿಬ್ಬರ ಮಧ್ಯೆ ಚರ್ಚೆಗೆ ಒಳಪಟ್ಟು ಒಬ್ಬರನ್ನೊಬ್ಬರು ನಂಬುವಂತೆ ಮಾಡುತ್ತವೆಯಾದರೂ ಕೆಲವೊಂದು ಮುಖ್ಯ ಮತ್ತು ದೊಡ್ಡ ವಿಷಯಗಳು ಇಬ್ಬರ ಮಧ್ಯೆ ಅಪನಂಬಿಕೆಗಳ ಸುರಿಮಳೆಯನ್ನೇ ಸುರಿಸುತ್ತವೆ. ನಿಮ್ಮ ಸಂಗಾತಿಯೂ ಅಷ್ಟೇ. ನಿಮ್ಮ ಬಗ್ಗೆ ಇದೇ ಭಾವನೆಯನ್ನು ಹೊಂದಿರುತ್ತಾರೆ.

ಕೆಲವೊಂದು ಹೇಳಬೇಕಾದ ಮುಖ್ಯ ವಿಚಾರಗಳನ್ನು ನಿಮ್ಮ ಮೇಲೆ ನಂಬಿಕೆ ಇಲ್ಲದೆ ಬೇರೆಯವರ ಬಳಿ ಹೇಳಿ ನಿಮಗೆ ಮುಜುಗರ ಉಂಟು ಮಾಡುತ್ತಾರೆ. ಇದು ಯಾವುದೇ ಒಂದು ಒಳ್ಳೆಯ ಸಂಬಂಧದ ಲಕ್ಷಣವಂತೂ ಖಂಡಿತ ಅಲ್ಲ.

3. ನಿಮ್ಮ ಸಂಗಾತಿಯ ಬಳಿ ಬೇಕಾಬಿಟ್ಟಿ ಸಲಹೆ ಸ್ವೀಕಾರ

3. ನಿಮ್ಮ ಸಂಗಾತಿಯ ಬಳಿ ಬೇಕಾಬಿಟ್ಟಿ ಸಲಹೆ ಸ್ವೀಕಾರ

ನಿಮ್ಮ ಜೀವನದಲ್ಲಿನ ಕೆಲವೊಂದು ವಿಚಾರಗಳು ಕೇವಲ ನಿಮ್ಮಿಂದಲೇ ಬಗೆಹರಿಯಲು ಸಾಧ್ಯವಿರುವುದಿಲ್ಲ. ಅಂತಹ ಕೆಲವು ವಿಚಾರಗಳಿಗೆ ನಿಮ್ಮ ಸಂಗಾತಿಯ ಸಲಹೆ ಸೂಚನೆಗಳು ಬಹಳ ಅಗತ್ಯವಾಗಿರುತ್ತವೆ.

ಆ ರೀತಿಯ ಸಂದರ್ಭಗಳಲ್ಲಿ ನೀವು ನಿಮ್ಮ ಸಂಗಾತಿಯ ಬಳಿ ಕೇಳಿ ತಿಳಿದುಕೊಂಡು ಮತ್ತು ಅದನ್ನೇ ಅಳವಡಿಸಿಕೊಂಡು ಮುನ್ನಡೆದರೆ ಅದು ಅವರಿಗೆ ಗೌರವ ಸೂಚಿಸಿದಂತೆಯೇ ಆಗುತ್ತದೆ. ಜೊತೆಗೆ ನಿಮ್ಮಿಬ್ಬರ ನಡುವೆ ಪರಸ್ಪರ ಆತ್ಮೀಯತೆಯನ್ನು ಹೆಚ್ಚು ಮಾಡುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ನಿಮ್ಮ ಮಧ್ಯೆ ನಂಬಿಕೆ ತೀರಾ ಕಡಿಮೆ ಇದೆ ಎಂದು ಅರ್ಥ.

ಇದರಿಂದ ನಿಮ್ಮ ಮಧ್ಯೆ ಹೆಚ್ಚು ಬಾಂಧವ್ಯ ಇಲ್ಲವೆಂದು ತೋರಿಸುತ್ತದೆ. ಯಾವುದೇ ವಿಚಾರವನ್ನು ನೀವು ಒಬ್ಬರಿಗೊಬ್ಬರು ಕುಳಿತು ಚರ್ಚೆ ಮಾಡದೇ ಇದ್ದರೆ ಇಬ್ಬರ ಸಲಹೆಗಳೂ ಇಲ್ಲಿ ಮುಖ್ಯವಾಗುವುದೇ ಇಲ್ಲ. ಕೆಲವೊಮ್ಮೆ ಇದೇ ಕಾರಣದಿಂದ ನಿಮ್ಮ ಸಮಸ್ಯೆಗಳು ಇನ್ನು ಹೆಚ್ಚಾದರೂ ಆಗಬಹುದು.

4. ಒಬ್ಬರ ಮೇಲೆ ಒಬ್ಬರು ತಪ್ಪು ಹೊರಿಸುವುದು

4. ಒಬ್ಬರ ಮೇಲೆ ಒಬ್ಬರು ತಪ್ಪು ಹೊರಿಸುವುದು

ನೀವು ಮತ್ತು ನಿಮ್ಮ ಸಂಗಾತಿ ಒಂದಾದ ಮೇಲೆ ನಿಮ್ಮಿಬ್ಬರ ಭಾವನೆಗಳು ಸಹ ಒಂದಾಗಲು ಮುಂದಾಗಬೇಕು. ಏಕೆಂದರೆ ನೀವು ಬೆಳೆದು ಬಂದ ಹಾದಿಯೇ ಬೇರೆ ಇದ್ದು, ಅವರು ಬೆಳೆದು ಬಂದ ವಾತಾವರಣವೇ ಬೇರೆಯಾಗಿರುತ್ತದೆ. ಅವರ ಕೆಲವೊಂದು ಗುಣಲಕ್ಷಣಗಳು ನಿಮಗೆ ಹಿಡಿಸದೆ ಹೋಗಬಹುದು. ನಿಮ್ಮ ವಿಷಯದಲ್ಲಿ ನಿಮ್ಮ ಸಂಗಾತಿಗೂ ಅಷ್ಟೆ. ಕೆಲವೊಮ್ಮೆ ಹವ್ಯಾಸಗಳು ಸಹ ಇಬ್ಬರ ಮಧ್ಯೆ ಜಗಳ ತಂದೊಡ್ಡುತ್ತವೆ.

ಆದರೆ ಇಂತಹ ವಿಷಯಗಳಲ್ಲಿ ಮುಖ್ಯವಾಗಿ ಬೇಕಾಗಿರುವುದು ಇಬ್ಬರಿಗೂ ತಾಳ್ಮೆ ಮತ್ತು ಒಳ್ಳೆಯ ಮನಸ್ಸು. ನಿಮ್ಮ ಸಂಗಾತಿಯನ್ನು ಸ್ವೀಕಾರ ಮಾಡುವ ಅದ್ಭುತ ಗುಣ ನಿಮ್ಮಲ್ಲಿದ್ದರೆ, ಅವರ ಹವ್ಯಾಸಗಳನ್ನೇ ಮುಂದಿಟ್ಟುಕೊಂಡು ಅವರ ಮೇಲೆ ತಪ್ಪು ಹೊರಿಸುವುದು ಇಲ್ಲವಾಗುತ್ತದೆ. ಪ್ರಪಂಚದಲ್ಲಿ ಯಾರೂ 100 ರಷ್ಟು ಸರಿ ಇರುವುದಿಲ್ಲ. ಬೇರೆಯವರ ತಪ್ಪನ್ನು ಹುಡುಕಲು ಹೊರಟರೆ ನಮ್ಮದೇ ಸಾವಿರಾರು ತಪ್ಪುಗಳು ನಮ್ಮ ಕಣ್ಣೆದುರಿಗೇ ಇರುತ್ತವೆ.

ಆದ್ದರಿಂದ ಈ ವಿಷಯದಲ್ಲಿ ಚಿಕ್ಕ ಮಕ್ಕಳಂತೆ ಜಗಳವಾಡುವ ಬದಲು ಇಬ್ಬರೂ ಸಮಾಧಾನದಿಂದ ಕುಳಿತು ಯಾವ ವಿಷಯಕ್ಕೆ ನಿಮ್ಮ ಮಧ್ಯೆ ಆಗಾಗ ಜಗಳವಾಗುತ್ತಿದೆ ಎಂದು ಅರಿತು, ಅದೇ ವಿಷಯವಾಗಿ ಮತ್ತೊಮ್ಮೆ ಜಗಳ ಆಗದಿರಲು ಏನು ಮಾಡಬೇಕು ಎಂಬುದನ್ನು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಿ.

5. ಕ್ಷಮಿಸುವ ಗುಣವೇ ಇಲ್ಲವಾಗಿದೆ

5. ಕ್ಷಮಿಸುವ ಗುಣವೇ ಇಲ್ಲವಾಗಿದೆ

ಪ್ರಪಂಚದಲ್ಲಿ ತಪ್ಪು ಮಾಡದೆ ಯಾರೂ ಇರುವುದಿಲ್ಲ. ನಿಮ್ಮ ಸಂಗಾತಿಯ ವಿಷಯದಲ್ಲಿ ಸಹ ಅಷ್ಟೇ. ಅವರು ಏನೇ ತಪ್ಪು ಮಾಡಿದರೂ ಅದನ್ನು ಕ್ಷಮಿಸುವ ದೊಡ್ಡ ಗುಣ ನಿಮ್ಮಲ್ಲಿದ್ದರೆ ನಿಮ್ಮಿಬ್ಬರ ಸುಖ ಬಾಂಧವ್ಯ ಬಹಳ ದಿನಗಳವರೆಗೆ ಬಾಳಿಕೆ ಬರುತ್ತದೆ ಮತ್ತು ಇತರರಿಗೆ ಮಾದರಿಯಾಗಿ ನೀವು ಬದುಕಬಹುದು ಸಹ.

' ಅಹಂ ' ಎನ್ನುವ ಭಾವನೆ ನಿಮಗೆ ಬರದಿದ್ದರೆ ಅಷ್ಟೇ ಸಾಕು. ಯಾಕೆಂದರೆ ಎಷ್ಟೋ ಸಂಬಂಧಗಳು ಈ ರೀತಿಯ ' ನಾನೇ ಶ್ರೇಷ್ಠ ' ಎಂಬ ಅಹಂಕಾರದಿಂದ ಹಾಳಾಗಿ ಹೋಗಿವೆ. ಒಂದು ವೇಳೆ ನೀವು ತಪ್ಪು ಮಾಡಿದರೆ ನಿಮ್ಮ ಸಂಗಾತಿಯನ್ನು ತಪ್ಪಾಗಿದೆ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ವಿನಮ್ರ ಭಾವದಿಂದ ಕೇಳಿಕೊಳ್ಳಿ.

ಇದರಿಂದ ನಿಮ್ಮ ಗೌರವ ಏನೂ ಕಡಿಮೆಯಾಗುವುದಿಲ್ಲ. ಏಕೆಂದರೆ ಕೇಳಿದ್ದು ನಿಮ್ಮ ಸಂಗಾತಿಯ ಬಳಿ ತಾನೇ. ಇದೇ ಅಭ್ಯಾಸವನ್ನು ನೀವಿಬ್ಬರೂ ಮುಂದುವರೆಸಿಕೊಂಡು ಹೊರಟರೆ ಚಿಕ್ಕ ಪುಟ್ಟ ವಿಷಯಗಳಿಗೆ ಆಗಾಗ ಜಗಳವಾಗಿ ಕೊನೆಯ ಸಂಸಾರ ಬೀದಿಗೆ ಬಂದು ನಿಲ್ಲುವುದು ತಪ್ಪುತ್ತದೆ. ನಿಮ್ಮ ಭಾವನಾತ್ಮಕತೆಯ ಮನೋಭಾವ ಕೂಡ ಹೆಚ್ಚಾಗುತ್ತದೆ.

6. ನಿಮ್ಮ ಸಂಗತಿಗಾಗಿ ನಿಮ್ಮ ಬಳಿ ಸಮಯವೇ ಇಲ್ಲ

6. ನಿಮ್ಮ ಸಂಗತಿಗಾಗಿ ನಿಮ್ಮ ಬಳಿ ಸಮಯವೇ ಇಲ್ಲ

ಇತ್ತೀಚಿನ ಬಿಡುವಿಲ್ಲದ ದುಡಿಮೆಯ ಸಂದರ್ಭದಲ್ಲಿ ನಿಮ್ಮ ಸಂಗಾತಿಗಾಗಿ ದಿನದಲ್ಲಿ ಕೇವಲ ಸ್ವಲ್ಪ ಸಮಯ ಮೀಸಲಿಡುವುದೂ ನಿಮಗೆ ಕಷ್ಟದ ಕೆಲಸವಾಗಿ ಬಿಟ್ಟಿದೆ. ಇದರಿಂದಲೂ ಸಹ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡು ಕೋಪದ ವರ್ತನೆ ತೋರಬಹುದು. ಮದುವೆಯಾದಾಗ ನಿಮ್ಮಿಬ್ಬರ ಮಧ್ಯೆ ಇದ್ದ ಬಾಂಧವ್ಯ ಕ್ರಮೇಣ ಮಾಯವಾಗುತ್ತದೆ. ಇದಕ್ಕೆ ಕಾರಣ ಇಬ್ಬರ ನಡುವೆ ಉಂಟಾದ ಸಂವಹನದ ಕೊರತೆ. ಪ್ರತಿ ದಿನ ದುಡಿಯುವ ಪ್ರಮೇಯ ಇದ್ದದ್ದೇ ಆದರೆ ಕನಿಷ್ಠ ಪಕ್ಷ ವಾರದ ಕೊನೆಯಲ್ಲಿ ಅಥವಾ ಹಬ್ಬ-ಹರಿದಿನಗಳಲ್ಲಿ ಕುಟುಂಬದ ಜೊತೆ ನೀವೂ ಕೂಡ ಒಂದಾಗಿ ಅವರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿ ಅವರಿಗೆ ಸಹಾಯ ಮಾಡಿ ಅವರಿಗೆ ಆಸರೆಯಾಗಿ ನಿಂತುಕೊಂಡರೆ, ಖಂಡಿತ ನಿಮ್ಮ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿ ಇಮ್ಮಡಿಯಾಗುತ್ತದೆ. ಇದರಿಂದ ಸಹ ನಿಮ್ಮಿಬ್ಬರ ಭಾಂದವ್ಯ ಬಹಳಷ್ಟು ಗಟ್ಟಿಯಾಗುತ್ತದೆ.

7. ಪ್ರೀತಿಸುವಾಗ ಮಾತ್ರ ಒಬ್ಬರನ್ನೊಬ್ಬರು ಮುಟ್ಟುವುದು : -

7. ಪ್ರೀತಿಸುವಾಗ ಮಾತ್ರ ಒಬ್ಬರನ್ನೊಬ್ಬರು ಮುಟ್ಟುವುದು : -

ಭಾವನಾತ್ಮಕತೆ ಎಂಬುದು ಕೇವಲ ಬೆಡ್ ರೂಮಿನಲ್ಲಿ ಮಾತ್ರ ಇರತಕ್ಕದ್ದು ಎಂದು ನೀವು ಅರಿತುಕೊಂಡಿದ್ದರೆ, ಅದು ಖಂಡಿತ ನಿಮ್ಮ ತಪ್ಪು ತಿಳುವಳಿಕೆ. ಇಬ್ಬರ ಸಂಗಾತಿಗಳ ನಡುವೆ ಪ್ರೀತಿ ಮೂಡಿ ಬರಲು ಒಂದು ನಿಗದಿತ ಸಮಯದ ಅವಶ್ಯಕತೆ ಇದೆಯೇ? ನಿಮ್ಮ ಸಂಗಾತಿಯ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನೀವಿದ್ದರೆ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ಬರದೆ ಇನ್ನೇನು?

ದಿನದ ಎಲ್ಲಾ ಸಮಯದಲ್ಲೂ ಇಬ್ಬರಿಗೂ ಏನೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದು, ಕೇವಲ ನೀವಿಬ್ಬರೂ ಒಂದಾಗುವ ಸಮಯದಲ್ಲಿ ಮಾತ್ರ ಒಬ್ಬರಿಗೊಬ್ಬರು ವಿಪರೀತ ಪ್ರೀತಿ ತೋರಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ ಮತ್ತು ಇದು ಕೆಲವೊಬ್ಬರಿಗೆ ಇಷ್ಟವೂ ಆಗುವುದಿಲ್ಲ. ಆದ್ದರಿಂದ ನಿಮ್ಮಿಬ್ಬರ ಮಧ್ಯೆ ಹೆಚ್ಚಿನ ಪ್ರೀತಿ ಮತ್ತು ಬಾಂಧವ್ಯ ಏರ್ಪಡಬೇಕಾದರೆ ಮೊದಲು ಒಬ್ಬರ ಮನಸ್ಸನ್ನು ಒಬ್ಬರು ಗೆಲ್ಲಲು ಪ್ರಯತ್ನ ಪಡಿ.

8. ನೀವು ಒಂಟಿ ಎಂದು ಭಾಸವಾಗಿ ನಿಮ್ಮ ಸಂಗಾತಿಯನ್ನು ದೂರವಿಡುವುದು : -

8. ನೀವು ಒಂಟಿ ಎಂದು ಭಾಸವಾಗಿ ನಿಮ್ಮ ಸಂಗಾತಿಯನ್ನು ದೂರವಿಡುವುದು : -

ಗಂಡ ಹೆಂಡತಿ ಎಂದ ಮೇಲೆ ಇಬ್ಬರ ಮಧ್ಯೆ ಸರಸ ವಿರಸಗಳು ಸಾಮಾನ್ಯ. ಹಾಗೆಂದು ಇಬ್ಬರು ಸಂತೋಷವಾಗಿದ್ದಾಗ ತೀವ್ರ ಆನಂದ ಅನುಭವಿಸಿ, ಯಾವುದಾದರೊಂದು ಸಣ್ಣ ವಿಷಯಕ್ಕೆ ಜಗಳ ಉಂಟಾದಾಗ ನನ್ನ ಸಂಗಾತಿ ನನ್ನ ಪರವಾಗಿಲ್ಲ. ನಾನು ಒಂಟಿ. ಒಂಟಿಯಾಗಿ ಇರುವುದೇ ಲೇಸು ಎಂಬ ಭಾವನೆಗಳು ನಿಮ್ಮ ತಲೆಗೆ ಎಂದಿಗೂ ಬರಬಾರದು.

ಈ ಮೇಲಿನ ಲಕ್ಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಬಂದೇ ಇರುತ್ತವೆ. ಹಾಗಾಗಿ ಈ ಮೇಲಿನ ಅಂಶಗಳಿಗೆ ವಿರುದ್ಧವಾಗಿ ನಡೆದುಕೊಂಡು ನಿಮ್ಮ ಸಂಗಾತಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಒತ್ತಾಸೆಯಾಗಿ ನಿಂತು ಅವರು ಮಾಡುವ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ವ್ಯಕ್ತಪಡಿಸಿ, ಅಗತ್ಯವಿದ್ದರೆ ಸಲಹೆ ಸೂಚನೆಗಳನ್ನು ಕೊಟ್ಟು ಒಬ್ಬರಿಗೊಬ್ಬರು ನಂಬಿಕೆ ಬೆಳೆಸಿಕೊಂಡು ಜೀವನ ಸಾಗಿಸಿದರೆ, ನಿಮ್ಮ ಜೀವನ ಹಾಲು ಜೇನಿನ ರೀತಿ ಸ್ವರ್ಗಕ್ಕಿಂತಲೂ ಮಿಗಿಲಾಗಿರುತ್ತದೆ.

ಏಕೆಂದರೆ ಇಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ. ಜಗಳ ಮನಸ್ತಾಪ ಏನೇ ಇದ್ದರೂ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬಂತೆ ಬೆಳಗ್ಗೆ ನಡೆದ ಜಗಳವನ್ನು ರಾತ್ರಿಯಲ್ಲಿ ಮರೆತು, ಮರುದಿನ ಬೆಳಗ್ಗೆ ಹೊಸ ಜೀವನ ಶುರು ಮಾಡಲು ಪ್ರಯತ್ನಿಸಬೇಕು.

ಎಂದಿಗೂ ಸಣ್ಣ ಪುಟ್ಟ ಜಗಳ ದೊಡ್ಡದಾಗಲು ಬಿಡಬಾರದು. ಇದರಿಂದ ಒಂದೇ ಸೂರಿನಡಿ ಇದ್ದರೂ ಎರಡು ಮನಸುಗಳು ಬೇರೆ ಬೇರೆಯಾಗುತ್ತವೆ. ಕೊನೆಗೆ ಬೇರೆ ಮನೆಗಳಲ್ಲಿ ವಾಸಿಸುವ ಅವಶ್ಯಕತೆ ಎದುರಾಗುತ್ತದೆ.

English summary

Signs That There Is No Intimacy In Your Relationship

Here are that signs that there is no intimacy in your relationship, read on,
X
Desktop Bottom Promotion