Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಸಪ್ತಪದಿ ತುಳಿದ ಜೋಡಿಗಳೇ ಎಚ್ಚರ !! ಈ 8 ವಿಚಾರಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಎಚ್ಚರದಿಂದಿರಿ
ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಸುಳ್ಳೋ ನಿಜವೋ ಗೊತ್ತಿಲ್ಲ . ಸದ್ಯ ನಾವಿರುವ ಜಗತ್ತಿನಲ್ಲಿ ನಮಗೆ ಬೇಕಾದ ಸಂಗಾತಿಯನ್ನು ನಾವೇ ಹುಡುಕಿಕೊಂಡು ಉಳಿದ ಜೀವನವನ್ನು ಆಕೆಯ ಜೊತೆ ಸುಂದರವಾಗಿ ಕಳೆಯಲು ಕನಸು ಕಾಣುವುದಂತೂ ಸತ್ಯ . ನಿಜಕ್ಕೂ ಅದೊಂದು ರೋಚಕ ಅನುಭವ . ಮದುವೆ ಎಂಬ ನಮ್ಮ ಜೀವನದಲ್ಲಿ ಬರುವ ಸಂತೋಷದ ಸಂಭ್ರಮದ ಸಂದರ್ಭಕ್ಕೆ ನಾವು ಎಷ್ಟು ವರ್ಷಗಳಿಂದ ಕಾದಿರುತ್ತೇವೆ ಅಲ್ಲವೇ ? ಖಂಡಿತ . ಇದು ಸಂಭ್ರಮಿಸಬೇಕಾದ ಸಂಧರ್ಭವೇ ಸರಿ . ಒಂದು ಹೆಣ್ಣು ಒಬ್ಬ ಮನುಷ್ಯನ ಜೀವನದಲ್ಲಿ ಒಬ್ಬ ತಾಯಿಯಾಗಿ , ತಂಗಿಯಾಗಿ , ಮಡದಿಯಾಗಿ ಬಂದು ಜೀವನವನ್ನೇ ಬೆಳಗುತ್ತಾಳೆ . ಅದಕ್ಕೆ ಹೆಣ್ಣನ್ನು ಶಕ್ತಿ ದೇವತೆಗೆ ಹೋಲಿಸಲಾಗಿದೆ .
ನಾರಿ ಮುನಿದರೆ ಮಾರಿ ಎಂಬ ಮಾತಿದೆ . ಮುನಿಯದಂತೆ ನೋಡಿಕೊಳ್ಳುವ ಚಾಕ ಚಕ್ಯತೆ ಗಂಡಸರಿಗೆ ಬೇಕಷ್ಟೆ . ಮದುವೆಯಲ್ಲಿ ಸಾಸಿವೆಯಷ್ಟು ಸುಖವಿದೆ ಎಂಬ ಮಾತು ಸುಳ್ಳಾಗುವಂತೆ ನೋಡಿಕೊಳ್ಳಲು ಆದಷ್ಟು ಪ್ರಯತ್ನ ಪಡಬೇಕು . ಏಕೆಂದರೆ ಮದುವೆಯ ನಂತರ ಸಂಬಂಧದಲ್ಲಿ ಅದರಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ಬಿರುಕು ಮೂಡುವುದು ಸಹಜ . ಅದಕ್ಕೆ ಕಾರಣ ಯೋಚಿಸದೆ , ಸಮಯ ಸಂಧರ್ಭ ನೋಡದೆ ಆಡುವ ಮಾತುಗಳು . ಮಾತು ಮನೆ ಕೆಡಿಸಿತು . ತೂತು ಒಲೆ ಕೆಡಿಸಿತು ಎಂಬ ಮಾತಿದೆ . ಏಕೆಂದರೆ ಈ ಮಾತುಗಳಿಗೆ ಅಷ್ಟೊಂದು ಶಕ್ತಿ ಇದೆ . ಸಂಬಂಧಗಳನ್ನು ಉಳಿಸಿ ಬೆಳಸುವ ಮಾತುಗಳು ಒಂದು ಕಡೆ ಆದರೆ , ಒಂದೇ ಒಂದು ಮಾತಿನಲ್ಲಿ ಕಷ್ಟ ಪಟ್ಟು ಅನೇಕ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಸಂಬಂಧ ಮುರಿದು ಬೀಳುವಂತಹ ಮಾತುಗಳೂ ಇವೆ. ಯಾರು ಇಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದ ಇದ್ದು ಸೋತು ಗೆಲ್ಲುತ್ತಾರೋ ಅಂತಹವರು ಮಾತ್ರ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡು ಬರಲು ಸಾಧ್ಯ . ಆದ್ದರಿಂದ ಮದುವೆ ಎಂಬುದು ಒಂದು ದೊಡ್ಡ ಜವಾಬ್ದಾರಿ . ಅದನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು . ತಮ್ಮ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸುವುದರ ಕಡೆ ಹೆಜ್ಜೆ ಹಾಕಬೇಕು . ಇದಕ್ಕೆ ಹಲವಾರು ಉದಾಹರಣೆಗಳು ಈಗಲೂ ನಮ್ಮ ಕಣ್ಣ ಮುಂದಿವೆ .ಇಷ್ಟೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಸಂಬಂಧ ಎನ್ನುವುದು ನಿಜಕ್ಕೂ ಒಂದು ತಪಸ್ಸೇ ಸರಿ . ಅದನ್ನು ನಿಮ್ಮ ಸಂಗಾತಿಯ ಜೊತೆ ಶಾಶ್ವತವಾಗಿ ಉಳಿಸಿಕೊಳ್ಳಲು ಕೆಲವು ಉಪಾಯಗಳನ್ನು ಸೂಚಿಸಿದ್ದೇವೆ . ದಯವಿಟ್ಟು ಕಣ್ಣಾಡಿಸಿ .

ಹುಚ್ಚರಂತೆ ತುಂಬಾ ಉತ್ಸುಕವಾಗಿ ವರ್ತಿಸಬೇಡಿ
ಗಂಡ ಹೆಂಡತಿಯ ಸಂಬಂಧ ಹಾಲು ಜೇನು ಬೆರೆತಂತೆ . ಅದಕ್ಕೆ ಸ್ವಲ್ಪ ಹುಳಿಯ ಅಂಶ ಸೋಕಿತೆಂದರೂ ಅದರ ಪ್ರಸ್ತುತ ಪರಿಸ್ಥಿತಿಯೇ ಬದಲಾಗಿ ಬಿಡುತ್ತದೆ . ಸಂಬಂಧದಲ್ಲೂ ಹಾಗೆ . ಆದಷ್ಟು ಇಬ್ಬರ ಮಾತುಗಳು ನಯ , ವಿನಯ ಮತ್ತು ಪ್ರೀತಿಯ ಭಾವನೆಗಳಿಂದ ಕೂಡಿದ್ದರೆ ವಾಸಿ . ಗಂಡ ಏನೋ ಕೇಳಿದರೆ , ಹೆಂಡತಿ ರೇಗುವುದು ಅಥವಾ ಗಂಡ ಕೇಳಬೇಕಾದ ವಿಷಯವನ್ನೇ ರೋಷ ಆಕ್ರೋಶದಿಂದ ಕೇಳುವುದು ನಿಜಕ್ಕೂ ಒಳ್ಳೆಯ ಸಂಬಂಧದ ಲಕ್ಷಣವೇ ಅಲ್ಲ . ಅತೀ ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಕೆಲಸಕ್ಕೆ ಬಾರದ ಮಾತುಗಳನ್ನಾಡುವುದು ಎಷ್ಟು ಸರಿ ? ಇದು ನೋಡುವವರಿಗೂ ಕೂಡ ಅಸಹ್ಯವಾಗಿ ಕಾಣುತ್ತದೆ . ಅಷ್ಟೇ ಏಕೆ ? ಸ್ವತಃ ಗಂಡ ಹೆಂಡತಿಗೇ ಇದು ವಿಚಿತ್ರ ಎನಿಸುತ್ತದೆ . ಏಕೆಂದರೆ ನಾನು ಈ ವಿಷಯಕ್ಕೆ ಈ ರೀತಿಯ ಭಾವನೆ ಎಂದೂ ನಿರೀಕ್ಷಿಸಿರಲಿಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡುತ್ತದೆ . ಇದು ಒಂದು ಗಟ್ಟಿಯಾದ ಸಂಬಂಧ ಸಣ್ಣಗೆ ಬಿರುಕು ಮೂಡಲು ಮೊದಲ ಹೆಜ್ಜೆ ಆದರೂ ಆಗಬಹುದು .
ಸಂಬಂಧದಲ್ಲಿ ಕೆಲವೊಮ್ಮೆ ಮೌನವಾಗಿದ್ದರೂ ಕಷ್ಟ
ಕೆಲವೊಂದು ಸಮಯವೇ ಹಾಗೆ . ಯಾವುದೋ ಗಾಢವಾದ ವಿಷಯವನ್ನು ನಿಮ್ಮ ಸಂಗಾತಿಯ ಜೊತೆ ಚರ್ಚೆ ಮಾಡುತ್ತಾ ಅದೂ ಇದೂ ಮಾತನಾಡುತ್ತಾ ತೊಡಗಿರುತ್ತೀರಿ . ನಿಮ್ಮ ಸಂಗಾತಿಯ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಕೇಳಿದರು ಎಂದು ಕೊಳ್ಳಿ . ಆಗ ನೀವು ಏನೂ ಮಾತನ್ನಾಡದೆ ಸುಮ್ಮನಾದರೆ ಅದು ಬೇರೆ ಅರ್ಥವನ್ನೇ ದಯ ಪಾಲಿಸುತ್ತದೆ . ಅದರ ಬದಲು ಆ ವಿಷಯಕ್ಕೆ ಪ್ರತಿಕ್ರಿಯಿಸಿ " ಸ್ವಲ್ಪ ಸಮಯ ಕೊಡು ಯೋಚನೆ ಮಾಡಿ ಹೇಳುತ್ತೇನೆ " ಎಂದರೆ ಮುಗಿಯಿತು . ನಿಮ್ಮ ಸಂಗಾತಿಯಲ್ಲಿ ನಿಮ್ಮ ಬಗ್ಗೆ ಯಾವ ಅನುಮಾನವೂ ಇರುವುದಿಲ್ಲ .
ಸುಖಾ ಸುಮ್ಮನೆ ಒಬ್ಬರ ಮೇಲೊಬ್ಬರು ತಪ್ಪು ಹೊರಿಸುವುದನ್ನು ಬಿಡಿ
ಇದು ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸುವ ಸಂಧರ್ಭ ನೆನಪಿಗೆ ತರುತ್ತದೆ . ಕೆಲವೊಮ್ಮೆ ತಿಳಿಗೇಡಿ ತನದ ಪರಮಾವಧಿ ಎಂದರೂ ತಪ್ಪಾಗಲಾರದು . ಗಂಡ ಹೆಂಡತಿಯ ಸಂಬಂಧದಲ್ಲಿ ಯಾರೂ ಮೇಲಲ್ಲ . ಯಾರೂ ಕೀಳಲ್ಲ . ಇಬ್ಬರೂ ಸಮಾನರೇ . ಹಾಗೆಂದು ಆ ಸಲಿಗೆಯನ್ನು ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸಲು ಉಪಯೋಗಿಸಿ ಕೊಳ್ಳಬಾರದು . ಒಬ್ಬರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ತುಂಬಾ ಸುಲಭ . ಆದರೆ ಅವರಿಗೆ ಅದರಿಂದ ಎಷ್ಟು ನೋವಾಗುತ್ತದೆ ಎಂದು ಯೋಚಿಸಬೇಕು . ಇದರಿಂದ ಇಬ್ಬರ ಕೋಪ ಹೆಚ್ಚಾಗುತ್ತಾ ಹೋಗಿ ಇಲ್ಲದ ಅನಾಹುತಗಳಿಗೆ ದಾರಿ ಮಾಡಿ ಕೊಡುತ್ತದೆ . ಜೀವನ ಎಂದ ಮೇಲೆ ಒಂದಾದ ಮೇಲೊಂದು ಸಮಸ್ಯೆ ಬರುತ್ತಲೇ ಇರುತ್ತವೆ . ಹಾಗೆಂದು ಅದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ . ಇಲ್ಲಿ ಸಮಸ್ಯೆ ಯಾರಿಂದ ಶುರುವಾಯಿತು ಎಂದು ತಲೆ ಕೆಡಿಸಿಕೊಳ್ಳುವುದಕ್ಕಿಂತ ಆ ಸಮಸ್ಯೆಗೆ ಪರಿಹಾರ ಏನು ಎಂಬುದನ್ನು ಇಬ್ಬರೂ ಕುಳಿತು ಚರ್ಚಿಸಿದರೆ ಮುಕ್ಕಾಲು ಭಾಗ ಆ ಸಮಸ್ಯೆ ಬಗೆ ಹರಿದಂತೆ .
ಒಬ್ಬರನ್ನೊಬ್ಬರು ದೂರುವುದನ್ನು ಬಿಡಿ
ಜೀವನದಲ್ಲಿ ತಪ್ಪುಗಳು ನಡೆಯುವುದು ಸಹಜ . ಹಾಗೆಂದು ತಪ್ಪೇ ಮಾಡದಿರುವವರು ಯಾರೂ ಇಲ್ಲ . ಹಾಗು ತಪ್ಪು ಮಾಡಿರುವವರು ಯಾರೂ ಕೆಟ್ಟವರಲ್ಲ . ಎಂತಹವರೇ ಆದರೂ ಸಂದರ್ಭದ ಸುಳಿಗೆ ಸಿಕ್ಕು ತಮಗೇ ಗೊತ್ತಿಲ್ಲದಂತೆ ತಪ್ಪನ್ನು ಎಸಗುತ್ತಾರೆ . ಅದಕ್ಕೆ ಮನ ನೊಂದು ಪಶ್ಚಾತಾಪವನ್ನೂ ಪಟ್ಟಿರುತ್ತಾರೆ . ನಾವು ಇಂತಹ ಸಂಧರ್ಭಗಳಲ್ಲಿ ಎಷ್ಟು ತಾಳ್ಮೆಯಿಂದ ವರ್ತಿಸುತ್ತೇವೆಯೋ ಅಷ್ಟೂ ನಮ್ಮ ಜೀವನ ಚೆನ್ನಾಗಿರುತ್ತದೆ . ಸಂಗಾತಿಯಾದವರು ತನ್ನ ಜೊತೆಗಾರ ಅಥವಾ ಜೊತೆಗಾತಿ ಮಾಡಿದ ತಪ್ಪನ್ನು ಮನ್ನಿಸಿ ಅದಕ್ಕೆ ಕಾರಣವೇನೆಂದು ಎದುರು ಬದುರು ಕುಳಿತು ಮಾತನಾಡಿ ತಿಳಿದು ಮತ್ತೆ ಆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು . ಅದು ಬಿಟ್ಟು ಅವರು ಮಾಡಿದ ತಪ್ಪನ್ನೇ ಮುಂದಿಟ್ಟುಕೊಂಡು ಪದೇ ಪದೇ ಖಂಡಿಸುತ್ತಾ ಹೊರಟರೆ ಯಾರಿಗೆ ಆದರೂ ಬೇಸರವನ್ನುಂಟು ಮಾಡುತ್ತದೆ . ಕೊನೆಗೆ ಸಂಬಂಧಗಳು ಬೇರಾಗುವುದಕ್ಕೆ ಇಂತಹ ಚಿಕ್ಕ ಕಾರಣಗಳೇ ಸಹಾಯಕವಾಗುತ್ತವೆ . ಆದ್ದರಿಂದ ಸುಧೀರ್ಘವಾದ ಈ ಜೀವನದಲ್ಲಿ ಇಂತಹ ಸಂದರ್ಭಗಳು ಎದುರಾದಾಗ ಬಹಳ ಎಚ್ಚರಿಕೆಯಿಂದ ಮುನ್ನಡೆಯಬೇಕು . ಆಗ ಸುಖೀ ಸಂಸಾರ ನಿಮ್ಮದಾಗುತ್ತದೆ .
ನಿಮ್ಮ ವರ್ತನೆಯನ್ನು ಸರಿ ಪಡಿಸಿಕೊಳ್ಳಿ
ನಮ್ಮ ಮಾನಸಿಕ , ದೈಹಿಕ ಹಾಗು ನಮ್ಮ ಮಾತುಗಳ ಬಳಕೆ ನಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ಸೂಚಿಸುತ್ತದೆ . ನಾವು ನಮಗೆ ಎದುರಾದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರಿಂದ ನಾವು ಏನು ಎಂತಹವರು ಎಂಬುದು ಇತರರಿಗೆ ತಿಳಿದು ಹೋಗುತ್ತದೆ . ಕೆಲವೊಂದು ಸಂಧರ್ಭಗಳಲ್ಲಂತೂ ನೇರವಾಗಿ ಮಾತನಾಡಿದರೆ ಸಾಕು ಆಗಬಾರದ ಅನರ್ಥಗಳು ಎದುರಾಗುತ್ತವೆ . ಆದ್ದರಿಂದ ನಿಮ್ಮ ನಾಲಿಗೆ ನಿಮ್ಮ ಹಿಡಿತದಲ್ಲಿರಲಿ . ಹರಿತವಾದ ಮಾತು ಬಾಯಿಂದ ಹೊರಡಿಸುವ ಮುಂಚೆ 10 ಬಾರಿ ಯೋಚಿಸಿ ಅದೇ ವಿಷಯವನ್ನು ಸ್ವಲ್ಪ ಅತ್ತಿತ್ತ ತಿರುಗಿಸಿ ನಯವಾಗಿ ನಿಮ್ಮ ಸಂಗಾತಿಯ ಬಳಿ ಮಾತನಾಡಿ . ಆಗ ಅವರಿಗೂ ಸಹ ಮನಸ್ಸಿಗೆ ಸ್ವಲ್ಪ ನಿರಾಳತೆ ಸಿಕ್ಕಂತೆ ಆಗುತ್ತದೆ . ಈ ಮಾತು ಏಕೆ ಹೇಳುತ್ತಿದ್ದೇವೆ ಎಂದರೆ ಮನುಷ್ಯ ಬೆಳೆದು ಬಂದ ವಾತಾವರಣ ಕೂಡ ಇಲ್ಲಿ ಗಣನೆಗೆ ಬರುತ್ತದೆ . ಕೆಲವರು ಯಾವುದೇ ಕಷ್ಟವನ್ನು ಕಾಣದೆ ಯಾರ ಜೊತೆಯೂ ಜಗಳ ಆಡದೆ ಬೆಳೆದಿರುತ್ತಾರೆ . ಇನ್ನೂ ಕೆಲವರು ತಮ್ಮ ಇಡೀ ಜೀವನವನ್ನು ಜಗಳದಲ್ಲೇ ಕಳೆದಿರುತ್ತಾರೆ . ಆದ್ದರಿಂದ ಹೇಳುವುದನ್ನೇ ನಯವಾಗಿ ಹೇಳುವುದನ್ನು ರೂಡಿ ಮಾಡಿಕೊಂಡರೆ ಯಾವ ಸಮಸ್ಯೆ ಕೂಡ ಇರುವುದಿಲ್ಲ . ಉದಾಹರಣೆಗೆ ಹೇಳಬೇಕೆಂದರೆ , ನಿಮ್ಮ ಸಂಗಾತಿಯು ಆಫೀಸ್ ನಿಂದ ಮನೆಗೆ ಬಂದೊಡನೆ " ನಿನಗೆ ನನ್ನ ಮೇಲೆ ಸ್ವಲ್ಪವೂ ಗಮನವಿಲ್ಲ . ನಿನ್ನ ಕೆಲಸವೇ ನಿನಗೆ ಹೆಚ್ಚು " ಎಂದು ಹರಿತವಾಗಿ ಹೇಳುವ ಬದಲು , " ನೀನು ಮನೆಗೆ ಬಂದಾಗ ನನಗೊಂದು ಹಗ್ ಕೊಡಬಹುದಲ್ಲ " ಎಂದು ನಯವಾಗಿ ಕೇಳಿ . ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿ ಆಗ ತೊಡಗುತ್ತದೆ .
" ಡೈವೋರ್ಸ್ " ಎಂಬ ಪದವನ್ನು ನಿಮ್ಮ ಸಂಗಾತಿಯ ಎದುರಿಗೆ ಅಪ್ಪಿ ತಪ್ಪಿಯೂ ಬಳಸಬೇಡಿ
ಇತ್ತೀಚಿಗೆ ' ಡೈವೋರ್ಸ್ ' ಎನ್ನುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ . ಮದುವೆ ಆಗಿ ಇನ್ನೂ ಒಂದು ವರ ಕಳೆಯದಿದ್ದರೂ ಆಗಲೇ ಡೈವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲು ಹತ್ತಿರುತ್ತಾರೆ . ಇದು ಬುದ್ಧಿ ಇಲ್ಲದೆ ಮಾಡುತ್ತಾರೋ ಅಥವಾ ಗೊತ್ತಿದ್ದೂ ಹೀಗೆ ನಡೆದುಕೊಳ್ಳುತ್ತಾರೋ ಭಗವಂತನೇ ಬಲ್ಲ . ತಂದೆ ತಾಯಿ ಕಷ್ಟ ಪಟ್ಟು ವರ ಅಥವಾ ವಧುವನ್ನು ಹುಡುಕಿಸಿ ತಾವು ಕಷ್ಟ ಪಟ್ಟು ದುಡಿದ ಹಣವನ್ನೆಲ್ಲಾ ಮದುವೆಯ ಸಂಭ್ರಮಕ್ಕೆ ಖರ್ಚು ಮಾಡಿ ತಮ್ಮ ಮಗ ಅಥವಾ ಮಗಳಿಗೆ ಒಂದು ಒಳ್ಳೆಯ ಜೀವನ ರೂಪಿಸಲು ಪಣ ತೊಟ್ಟಿರುತ್ತಾರೆ . ಆದರೆ ಇಂದಿನ ಯುವ ಜನತೆ ಅದನ್ನು ಯಾವುದನ್ನೂ ಲೆಕ್ಕಿಸದೆ ಅವರ ಶ್ರಮವನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಎಲ್ಲಾ ಒಂದು ನಿಮಿಷದಲ್ಲಿ ಹಾಳು ಮಾಡಿ ಬಿಡುತ್ತಾರೆ . ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳಿಗೆ ಸಾವೇ ಪರಿಹಾರ ಅಲ್ಲ ಎಂಬಂತೆ ಸಂಬಂಧಗಳಲ್ಲಿ ಒಂದು ಮಾತು ಬರುತ್ತದೆ , ಒಂದು ಮಾತು ಹೋಗುತ್ತದೆ . ಅದಕ್ಕೆ ಪರಿಹಾರ ಕೇವಲ ಡೈವೋರ್ಸ್ ಆದರೆ ಯಾವ ಸಂಸಾರವೂ ಸುಖವಾಗಿರಲು ಸಾಧ್ಯವೇ ಇಲ್ಲ ಮತ್ತು ಅ ಸಂಬಂಧ ಮುಂದುವರೆಯಲೂ ಆಗುವುದಿಲ್ಲ . ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ . ಅದನ್ನು ಆಲೋಚಿಸಿ ಕಂಡು ಹಿಡಿದು ಅದರಂತೆ ನಡೆದುಕೊಳ್ಳುವ ತಾಳ್ಮೆ , ವ್ಯವಧಾನ ಬೇಕಷ್ಟೆ . ಅದನ್ನು ಬಿಟ್ಟು ಮಾತೆತ್ತಿದರೆ ಸಾಕು ಡೈವೋರ್ಸ್ ಎಂದರೆ ಅವರಂತಹ ದಡ್ಡರು ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ . ಡೈವೋರ್ಸ್ ಮಾಡಿಕೊಳ್ಳುವುದು ಸುಲಭ . ಆದರೆ ಇದು ಬೆಳೆಯುವ ನಿಮ್ಮ ಮಕ್ಕಳ ಮೇಲೆ ಎಂತಹ ದುಷ್ಟ ಪರಿಣಾಮ ಬೀರುತ್ತದೆ ಎಂದು ನಿಮಗೆ ಮೊದಲು ಅರಿವಾಗುವುದೇ ಇಲ್ಲ . ಅಪ್ಪ ಒಂದು ಕಡೆ ಅಮ್ಮ ಒಂದು ಕಡೆ . ಆ ಮಕ್ಕಳು ಅನುಭವಿಸುವ ನರಕ ಯಾತನೆ ಆ ಮಕ್ಕಳಿಗೆ ಗೊತ್ತು . ಆದ್ದರಿಂದ ಸಂಸಾರದಲ್ಲಿ ಯಾವಾಗಲೇ ವಿರಸ ಉಂಟಾದರೂ ಅದನ್ನು ಬಗೆ ಹರಿಸಿಕೊಳ್ಳುವ ರೀತಿಯಲ್ಲಿ ಯೋಚಿಸಿ . ಕೋಪದಿಂದ ಏನೇನೋ ಮಾತನಾಡಿ ಕೊನೆಗೆ ಡೈವೋರ್ಸ್ ಎಂಬ ನಿರ್ಧಾರಕ್ಕೆ ಅಪ್ಪಿ ತಪ್ಪಿಯೂ ಬರಲೇ ಬೇಡಿ . ನಿಮಗೆ ಕೋಪವಿದ್ದರೆ ಸ್ವಲ್ಪ ಹೊತ್ತು ಸುಮ್ಮನಿದ್ದು ಕೋಪ ತಣ್ಣಗಾದ ಮೇಲೆ ನಿಧಾನವಾಗಿ ಸಮಾಧಾನದಿಂದ ಚರ್ಚಿಸಿ . ಏಕೆಂದರೆ ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ ಅಲ್ಲವೇ ?
ಹೋಲಿಕೆ ಮಾಡುವುದನ್ನು ಮೊದಲು ಬಿಡಿ
ಇದೊಂದು ತೀರಾ ಕೆಟ್ಟ ಅಭ್ಯಾಸ . ನಾವು ಯಾವುದೇ ಕಾರಣಕ್ಕೂ ನಮ್ಮ ಮದುವೆಯ ಸಂದರ್ಭವನ್ನು ಅಥವಾ ನಮ್ಮ ಜೀವನವನ್ನು ಇನ್ನೊಬ್ಬರ ಮದುವೆಗೆ ಅಥವಾ ಜೀವನಕ್ಕೆ ಹೋಲಿಸಿ ಕೊಳ್ಳಬಾರದು . ಅದರಲ್ಲೂ ಹೋಲಿಕೆ ಮಾಡಿ ನಮ್ಮ ಸಂಗಾತಿಯನ್ನು ಲೇವಡಿ ಮಾಡಬಾರದು . ಬದಲಾಗಿ ಅವರ ಕೊಡುಗೆಯನ್ನು ಸ್ಮರಿಸಬೇಕು . ಅವರ ಕುಟುಂಬಸ್ಥರೂ ನಮ್ಮಷ್ಟೇ ಕಷ್ಟ ಪಟ್ಟಿರುತ್ತಾರಲ್ಲವೇ ? ಅದನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ . ಇದು ಕೇವಲ ಮದುವೆಯ ವಿಷಯದಲ್ಲಿ ಅಷ್ಟೇ ಅಲ್ಲದೆ ಬೇರೆ ಯಾವುದೇ ವಿಷಯದಲ್ಲೂ ಹೋಲಿಕೆ ಮಾಡುವುದನ್ನು ರೂಡಿಸಿಕೊಳ್ಳಬಾರದು . ಅದರ ಬದಲು ಮುಂದಿನ ನಮ್ಮ ಜೀವನ ಚೆನ್ನಾಗಿರಲು ಏನೇನು ಅಗತ್ಯತೆ ಗಳಿವೆಯೋ ಅವುಗಳ ಬಗ್ಗೆ ಚರ್ಚಿಸಿದರೆ ಉತ್ತಮ .
ನಿಮ್ಮ ಸಮಸ್ಯೆಗಳಿಗೆ ಸಂಬಂಧಿಗಳನ್ನು ಮದ್ಯೆ ಕರೆ ತರ ಬೇಡಿ
ಇದು ಸದಾ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಅಂಶ . ಒಮ್ಮೆ ನಿಮ್ಮ ಸಂಗಾತಿಯ ಜೊತೆ ನೀವು ಸಪ್ತಪದಿ ತುಳಿದು ಸಂಸಾರದ ನೌಕೆ ಏರಿದಿರಿ ಎಂದರೆ ಅದು ನಿಮ್ಮ ಜೀವನ . ನೀವು ತೇಲುತ್ತೀರೋ , ಮುಳುಗುತ್ತೀರೋ ಅದು ನಿಮಗೆ ಬಿಟ್ಟ ವಿಚಾರ . ನಿಮಗೆ ಸಂಗಾತಿಯಾಗಿ ಬಂದಿರುವವಳು ತನ್ನ ಮನೆ , ತನ್ನ ತಂದೆ ತಾಯಿ ಎಲ್ಲರನ್ನೂ ಬಿಟ್ಟು ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮ್ಮ ಬಾಳನ್ನು ಬೆಳಗಲು ಬಂದಿರುತ್ತಾಳೆ . ನಿಮ್ಮ ಸಂಸಾರದಲ್ಲಿ ನಿಮ್ಮ ಸಂಗಾತಿ ಮಾಡಿದ ತಪ್ಪನ್ನು ಸರಿ ಪಡಿಸ ಬೇಕಾಗಿರುವುದು ನಿಮ್ಮ ಕರ್ತವ್ಯ . ಅದನ್ನು ನಿಮ್ಮ ಸಂಬಂಧಿಗಳನ್ನೆಲ್ಲ ಮನೆಗೆ ಕರೆದು ಗುಡ್ಡೆ ಹಾಕಿಕೊಂಡು ಅವರ ಮುಂದೆ ನೀವು ನಿಮ್ಮ ಸಂಗಾತಿ ಮಾಡಿದ ತಪ್ಪನ್ನು ಬಿಡಿಸಿ ಬಿಡಿಸಿ ಹೇಳಿ ನೀವು ಮಾಡಿದ ಸರಿಯಾದುದನ್ನು ಹೇಳಿ ಭೇಷ್ ಎನಿಸಿಕೊಳ್ಳುವುದು ನಿಜಕ್ಕೂ ಸಮಂಜಸವಲ್ಲ . ಇದಕ್ಕಿಂತ ನಿಮ್ಮ ಸಂಗಾತಿಗೆ ನೀವು ಮಾಡುವ ಅವಮಾನ ಮತ್ತೊಂದಿಲ್ಲ ಅಲ್ಲವೇ . ಇಂದಿನ ಈ ಪ್ರಪಂಚದಲ್ಲಿ ಶೇಖಡಾ 90 ಭಾಗ ಸಂಸಾರಗಳು ಬೀದಿಗೆ ಬರುತ್ತಿರುವುದು ಈ ಸಂಭಂದಿಗಳ ಕಿತಾಪತಿಗಳಿಂದಲೇ . ಮದುವೆ ಆದ ಮೇಲೆ ಸಂಬಂಧಿಗಳನ್ನು ಕೇವಲ ಕೆಲವೊಂದು ಸಲಹೆ ಗಳಿಗಷ್ಟೇ ಮೀಸಲಾಗಿರಿಸಿ ಕೊಂಡಿದ್ದರೆ ಉತ್ತಮ . ಅದೂ ಅವರ ಸಲಹೆ ಸರಿ ಎಂದು ನಿಮಗೆ ಅನ್ನಿಸಿದರೆ ಮಾತ್ರ ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ . ನಿಮ್ಮಿಬ್ಬರ ಜೀವನದಲ್ಲಿ ಬೇರೆಯವರಿಗೇನು ಕೆಲಸ ? ಅವರು ಸಂಬಂಧಿಗಳೇ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ . ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿ ಕೊಳ್ಳುತ್ತೇವೆ ಎಂದು ಶಪಥ ಮಾಡುವಂತಹ ಗಟ್ಟಿ ಮನಸ್ಥಿತಿ ನಿಮಗೆ ಬರಬೇಕು . ಆಗ ನಿಮ್ಮ ಸಂಗಾತಿಯ ಜೊತೆಗಿನ ಪ್ರೀತಿ ನಂಬಿಕೆ ನಿಮಗೆ ಇನ್ನಷ್ಟು ಜಾಸ್ತಿ ಆಗುತ್ತದೆ . ನಿಮ್ಮ ಸಂಸಾರ ಸದಾ ಹಸಿರಾಗಿರುತ್ತದೆ .



Click it and Unblock the Notifications














