ಸಂಸಾರ ಸುಖಮಯವಾಗಲು 6 ಸರಳ ನಿಯಮಗಳು

By Super

ಮನುಷ್ಯನ ಜೀವನದಲ್ಲಿ ಸಂಬಂಧಕ್ಕೆ ಅದರದೇ ಆದ ಅರ್ಥವಿದೆ. ತಂದೆ ತಾಯಿ ಹಾಗೂ ಮಕ್ಕಳ ನಡುವಿನ ಸಂಬಂಧ, ಒಡನಾಡಿಗಳ ಸ್ನೇಹವೆಂಬ ಪವಿತ್ರ ಸಂಬಂಧ, ಪ್ರೇಮಿಗಳ ಪ್ರೀತಿಯ ಸಂಬಂಧ, ಗಂಡ ಹೆಂಡತಿಯರ ನಡುವಿನ ಅನುಬಂಧ ಹೀಗೆ ನಮ್ಮ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸಂಬಂಧವನ್ನು ಬೆಳೆಸುವುದಕ್ಕಿಂತ ಅದನ್ನು ಉಳಿಸುವುದು ಅತೀ ಮುಖ್ಯವಾದದು. ಅ

ದರಲ್ಲೂ ದಾಂಪತ್ಯ ಎನ್ನುವುದು ಸುಂದರ ಕಾವ್ಯ. ಇಲ್ಲಿ ಗಂಡ ಹೆಂಡತಿ ಪದಗಳಿದ್ದಂತೆ. ಸರಿಯಾಗಿ ಒಂದೊಂದು ಪದವನ್ನು ಜೋಡಿಸಿದಾಗ ಸುಂದರ ಕಾವ್ಯವಾಗಲು ಸಾಧ್ಯ. ಆದರೆ ಗಂಡ ಹೆಂಡತಿಯರ ನಡುವೆಯೇ ನಂಬಿಕೆ ದ್ರೋಹವಾದರೆ ದಾಂಪತ್ಯಕ್ಕೆ ಅರ್ಥವೆಲ್ಲಿ ಅಲ್ಲವೇ? ಹೌದು ದೀರ್ಘಾವಧಿಯ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಸಂಗಾತಿಗಳು ನಿರಂತರ ಪ್ರಯತ್ನ ಮತ್ತು ಹೊಂದಾಣಿಕೆಯನ್ನು ತೋರಬೇಕಾಗುತ್ತದೆ, ಅದರಲ್ಲಿಯೂ ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಂಡು ಜೀವನ ನಡೆಸುವುದೇ ಇಲ್ಲಿ ಮುಖ್ಯಪಾತ್ರವಹಿಸುತ್ತದೆ.

ಯಾವಾಗಲೂ ಧನಾತ್ಮಕವಾಗಿಯೇ ಟೀಕಿಸಿ


ನಿಮ್ಮ ಜೊತೆಗಾರರ ಪರ ಮತ್ತು ವಿರುದ್ಧ ಯಾವಾಗಲೂ ಚಿಕ್ಕ ಪುಟ್ಟ ಟೀಕೆಗಳು ಇರಲೇ ಬೇಕು. ಆದರೆ ಈ ಟೀಕೆಗಳು ಯಾವಾಗಲೂ ಧನಾತ್ಮಕವಾಗಿಯೇ ಇರಬೇಕು ಹಾಗೂ ಹೃದಯದಿಂದ ಬಂದಂತಹದ್ದಾಗಿರಬೇಕು. ಉದಾಹರಣೆಗೆ ಪತ್ನಿ ತನ್ನ ಪತಿಯನ್ನು 'ಏ ಕಳ್ಳಾ, ಏಕೆ ಹಾಗೆ ನನ್ನನ್ನು ನೋಡುತ್ತೀ' ಎಂದು ಟೀಕಿಸಿದರೆ ಇಲ್ಲಿ 'ಕಳ್ಳ' ಎಂಬ ಪದಕ್ಕೆ ತನ್ನ ಹೃದಯ ಗೆದ್ದ ಚೋರ ಎಂಬ ಅರ್ಥ ಬರುತ್ತದೆ.
ಅದರ ಬದಲಿಗೆ, 'ಅದೇಕೆ ಹಾಗೆ ನನ್ನನ್ನು ಕಳ್ಳನಂತೆ ನೋಡುತ್ತೀರಿ' ಎಂದು ಕೇಳಿದರೆ ಪತಿಯನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದಂತಾಗುತ್ತದೆ. ಅದೇ ರೀತಿ ಒಂದು ವೇಳೆ ಪತಿಗೆ ಇಷ್ಟವಾಗದ ಗಿಡ್ಡವಾದ ಹೊಸ ಉಡುಗೆಯನ್ನು ಪತ್ನಿ ಉಟ್ಟುಕೊಂಡರೆ ಪತಿ 'ಅದೇನು ನಿನ್ನ ಡ್ರೆಸ್ಸು, ಇಷ್ಟು ಗಿಡ್ಡವಾಗಿದೆ, ಮೈಯೆಲ್ಲಾ ಕಾಣಿಸುತ್ತೆ' ಎಂದು ಟೀಕಿಸುವ ಬದಲು 'ನಿನ್ನ ಡ್ರೆಸ್ಸು ಚೆನ್ನಾಗಿ ಏನೋ ಇದೆ, ಆದರೆ ನಿನ್ನ ಮೈಮಾಟಕ್ಕೆ ಗಿಡ್ಡಕ್ಕಿಂತಲೂ ಉದ್ದವಾಗಿರುವ ಉಡುಗೆ ಇನ್ನೂ ಚೆನ್ನಾಗಿ ಒಪ್ಪುತ್ತೆ' ಎಂದು ವಿಮರ್ಶಿಸಿದರೆ ಉತ್ತಮ. ಎರಡೂ ವಾಕ್ಯಗಳು ಸಮಾನವಾದ ಅರ್ಥವನ್ನೇ ನೀಡುತ್ತವಾದರೂ ಹೇಳುವವರ ಮಾತು ಇನ್ನೊಬ್ಬರ ಭಾವನೆಗಳನ್ನು ಗೌರವಿಸುವಂತಿರಬೇಕು.

ಎಷ್ಟೇ ಚಿಕ್ಕ ತಪ್ಪಾದರೂ ಸರಿ, ಕ್ಷಮೆ ಕೇಳಿ


ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಏನೋ ಎಡವಟ್ಟಾಗಿ ಚಿಕ್ಕಪುಟ್ಟ ತಪ್ಪುಗಳಾಗಿ ಬಿಡುತ್ತವೆ. ಆ ಸಮಯದಲ್ಲಿ ಎಲ್ಲಾ ಬಿಗುಮಾನ, ಅಹಮ್ಮಿಕೆಗಳನ್ನು ಬದಿಗಿಟ್ಟು ಮನಃಪೂರ್ವಕವಾಗಿ ಕ್ಷಮೆ ಕೇಳಿ. ಇದರಿಂದ ಎಷ್ಟೋ ದೊಡ್ಡದಾಗಬಹುದಾದ ವಿಷಯ ಮೊಳಕೆಯಲ್ಲಿಯೇ ಚಿವುಟಿದಂತಾಗುತ್ತದೆ. ಕ್ಷಮೆ ಕೇಳಿದ ಬಳಿಕ ನಿಮ್ಮ ಪ್ರಿಯತಮ/ಪ್ರಿಯತಮೆಯ ದೃಷ್ಟಿಯಲ್ಲಿ ನೀವು ಇನ್ನಷ್ಟು ದೊಡ್ಡವರಾಗುತ್ತೀರಿ. ಮದುವೆ ಹಣಕ್ಕಾಗಿಯೇ ಅಥವಾ ಪ್ರೀತಿಗಾಗಿಯೇ?

ನಿಮ್ಮ ಸಂಗಾತಿಯಿಂದ ಬಲವಂತದ ಕ್ಷಮೆಯನ್ನು ಅಪೇಕ್ಷಿಸಬೇಡಿ


ನಿಮ್ಮ ಸಂಗಾತಿಯಿಂದ ಏನಾದರೂ ತಪ್ಪಾಗಿದ್ದರೆ ವಿಷಯವನ್ನು ಅವಲೋಕಿಸದೇ ಸಂಗಾತಿಯನ್ನು ಕ್ಷಮೆ ಕೇಳಲು ಬಲವಂತಪಡಿಸಬೇಡಿ. ಒಂದು ವೇಳೆ ಈ ತಪ್ಪು ಮಾಡಿದರೆ ನಿಮ್ಮ ಸಂಗಾತಿ ಆ ಕ್ಷಣದಲ್ಲಿ ಕ್ಷಮೆಯನ್ನೇನೋ ಕೋರುತ್ತಾರೆ, ಆದರೆ ಅದೇ ಕ್ಷಣದಿಂದ ನೀವು ಅವರ ದೃಷ್ಟಿಯಲ್ಲಿ ಚಿಕ್ಕವರಾಗಿ ಬಿಡುತ್ತೀರಿ. ಉದಾಹರಣೆಗೆ ಅತ್ತೆ ಸೊಸೆ ಜಗಳದಲ್ಲಿ ಮಗ ಪರಿಸ್ಥಿತಿಯನ್ನು ಪೂರ್ಣವಾಗಿ ಅವಲೋಕಿಸದೇ ಮಮತೆಯಲ್ಲಿ ಕುರುಡಾಗಿ ತಾಯಿಯ ಪರವಹಿಸಿ ಸಂಗಾತಿಯಿಂದ ಬಲವಂತದ ಕ್ಷಮೆ ಯಾಚಿಸಿದರೆ ಆ ಮನೆ ಎರಡಾಗಿ ಹೋಳಾಗುವ ಲಕ್ಷಣಗಳು ಆ ಕ್ಷಣದಿಂದಲೇ ಗೋಚರಿಸುತ್ತವೆ. ಬದಲಾಗಿ ಅದೇ ಕ್ಷಣದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ಇಬ್ಬರಿಂದಲೂ ವಿಷಯವನ್ನು ಸಮಗ್ರವಾಗಿ ಆಲಿಸಿ, ಅಗತ್ಯವಿದ್ದರೆ ಹಿರಿಯರ ಸಹಾಯ ಪಡೆದು ಸಮಸ್ಯೆಯನ್ನು ನಿಧಾನವಾಗಿ ಬಗೆಹರಿಸಿ.

ನಿಮ್ಮ ಸ್ನೇಹಿತರನ್ನು ಕಡೆಗಣಿಸಬೇಡಿ


ಸಾಮಾನ್ಯವಾಗಿ ಹೊಸದಾಗಿ ಮದುವೆಯಾಗಿರುವ ಜೋಡಿ, ಅಥವಾ ನಿಶ್ಚಿತಾರ್ಥವಾಗಿರುವ ಜೋಡಿ ಒಬ್ಬರಿಗೊಬ್ಬರು ಸಂದೇಶ ರವಾನಿಸುವ ಭರದಲ್ಲಿ ತಮ್ಮ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ಮರೆತೇ ಬಿಡುತ್ತಾರೆ. ಇದೊಂದು ಆತಂಕಕಾರಿ ಬೆಳವಣಿಗೆ. ಕೆಲವು ಸ್ನೇಹಿತರು ಸೂಕ್ಷ್ಮಗ್ರಾಹಿಗಳಾಗಿದ್ದು ತಮ್ಮನ್ನು ಬೇಕೆಂದೇ ಉಪೇಕ್ಷಿಸುತ್ತಿದ್ದಾರೆ ಎಂದು ಅಪಾರ್ಥ ಕಲ್ಪಿಸಿಕೊಳ್ಳಬಹುದು. ಹಿರಿಯರು ಹಾಗೂ ಸಂಬಂಧಿಕರೂ ತಮ್ಮನ್ನು ಉಪೇಕ್ಷಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಬೇರಾವುದೋ ವಿಷಯವನ್ನು ಇಲ್ಲಿ ಅಗತ್ಯವಿಲ್ಲದೇ ಪ್ರಸ್ತಾಪಿಸಿ ಸಂಬಂಧಗಳನ್ನು ಹದಗೆಡಿಸಬಹುದು.
ಹಾಗಾಗಿ ಅದರ ಬದಲು ನಿಮ್ಮ ಸ್ನೇಹಿತರಲ್ಲಿ, ಹಿರಿಯರಲ್ಲಿ, ಬಂಧುಬಾಂಧವರಲ್ಲಿ ಕಡಿಮೆಯಾದರೂ ಸರಿ ಸಂಪರ್ಕದಲ್ಲಿರಿ. ಇನ್ನೂ ಒಳ್ಳೆಯದೆಂದರೆ ಅವರಲ್ಲಿ ತುಂಬಾ ಆಪ್ತರಾದವರನ್ನು ನಿಮ್ಮ ಸಂಬಂಧ ಗಟ್ಟಿಗೊಳ್ಳಲು ಮಧ್ಯವರ್ತಿಗಳಾಗಿ ಉಪಯೋಗಿಸಿ. ಈ ಅವಕಾಶ ಪಡೆದ ಅವರು ತುಂಬಾ ಸಂತೋಷಗೊಳ್ಳುವರು. ಉದಾಹರಣೆಗೆ ಸ್ನೇಹಿತನ ಮೂಲಕ ಚಿಕ್ಕ ಉಡುಗೊರೆ ಕಳುಹಿಸುವುದು, ಸಂಗಾತಿಗೆ ಉಡುಗೊರೆ ಆಯ್ಕೆ ಮಾಡಿಕೊಳ್ಳಲು ಹಿರಿಯರು ಅಥವಾ ಸಂಬಂಧಿಕರನ್ನು ಜೊತೆಯಲ್ಲಿ ಕರೆದೊಯ್ಯುವುದು ಮೊದಲಾದವು.

ಯಾವಾಗಲೂ ವಚನಬದ್ಧರಾಗಿರಿ


ಕೆಲವೊಮ್ಮೆ ವಚನಗಳನ್ನು ನೀಡಿ ಸುಲಭವಾಗಿ ಮರೆಯುವುದುಂಟು. ಒಂದು ವೇಳೆ ನಿಮಗೆ ಯಾವುದೋ ಕಾರ್ಯ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ನಯವಾಗಿಯೇ ಈ ಕೆಲಸ ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ತಿರಸ್ಕರಿಸಿ. ಅದರ ಬದಲಿಗೆ ಪ್ರೇಮದ ಭರದಲ್ಲಿ ಅಸಾಧ್ಯವಾದ ಕಾರ್ಯಗಳನ್ನು ಈಡೆರಿಸುವ ಪ್ರಮಾಣ ಮಾಡಿ ಬಳಿಕ ಸಾಧ್ಯವಾಗದೇ ಸಂಗಾತಿಯ ನಿರಾಶೆಯನ್ನು ಪಡೆಯಬೇಡಿ. ಬದಲಿಗೆ ನಿಮ್ಮಿಂದ ಸಾಧ್ಯವಾಗುವ ಪ್ರಮಾಣಗಳನ್ನು ಮಾಡಿ ಪೂರ್ಣಭಾವದಿಂದ ಆ ಪ್ರಮಾಣಗಳನ್ನು ನೆರವೇರಿಸಿ ಸಂಗಾತಿಯ ಸಂತೋಷದಲ್ಲಿ ಭಾಗಿಯಾಗಿ.

X
Desktop Bottom Promotion