ಮದುವೆಯ ಬಳಿಕ ಹುಡುಗಿಯರು ಏಕೆ ಇಷ್ಟೊಂದು ಬದಲಾಗಿ ಬಿಡುತ್ತಾರೆ?

By Arshad

ಮದುವೆ ಎರಡು ಜೀವಗಳ ನಡುವಣ ಒಂದು ಜೀವನಪರ್ಯಂತ ಪಾಲಿಸಬೇಕಾದ ಆಪ್ತತೆಯಾಗಿದೆ. ಇಬ್ಬರು ಜೊತೆಯಾಗಿ ಜೀವಿಸಲು ಸಮಾಜ ನೀಡುವ ಒಪ್ಪಿಗೆಯೂ ಹೌದು. ಭಾರತದಲ್ಲಿ ವಿವಾಹವೆಂದರೆ ಇಬ್ಬರು ವ್ಯಕ್ತಿಗಳ ನಡುವಣ ಬಂಧನಕ್ಕೂ ಮಿಗಿಲಾಗಿ ಎರಡು ಕುಟುಂಬಗಳ ನಡುವಣ ಬಂಧನವೆಂದೇ ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಬಹುತೇಕ ಎಲ್ಲಾ ಪಂಗಡಗಳಲ್ಲಿರುವ ಸಂಪ್ರದಾಯದ ಪ್ರಕಾರ ವಿವಾಹದ ಬಳಿಕ ಪತ್ನಿ ಪತಿಯ ಮನೆಯಲ್ಲಿ ಶಾಶ್ವತವಾಗಿ ನೆಲೆಸಲು ತೆರಳುತ್ತಾಳೆ. ಇದೊಂದು ಪ್ರಮುಖ ಬದಲಾವಣೆ ಎಂದು ಕಂಡುಬಂದರೆ ಇದರ ಜೊತೆ ಇನ್ನೂ ಹಲವು ಬದಲಾವಣೆಗಳನ್ನೂ ಯುವತಿ ಎದುರಿಸಬೇಕಾಗುತ್ತದೆ. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

ಪತಿಯ ಜೀವನದಲ್ಲಿಯೂ ಕೆಲವು ಬದಲಾವಣೆಗಳಾದರೂ ಪತ್ನಿಯ ಬದಲಾವಣೆಗಳಿಗೆ ಹೋಲಿಸಿದರೆ ಅವು ಅತ್ಯಲ್ಪವಾಗಿವೆ. ಓರ್ವ ವಿವಾಹಿತೆಯ ಜೀವನದಲ್ಲಿ ಮದುವೆಯ ಬಳಿಕ ಏನೇನು ಬದಲಾವಣೆಗಳಾಗುತ್ತವೆ ಎಂಬ ಪ್ರಶ್ನೆಯನ್ನು ಕೇಳಿದರೆ ಹೆಚ್ಚಿನವರು ಪತಿಯ ಮನೆ, ಪತಿಯ ಕುಟುಂಬದ ಹೆಸರು, ಮಕ್ಕಳು, ಹೊಸ ಊರು ಮೊದಲಾದ ಸಾಮಾನ್ಯ ಉತ್ತರಗಳನ್ನು ನೀಡಬಹುದು. ಆದರೆ ಇದಕ್ಕೂ ಹೆಚ್ಚಿನದಾದ ಬದಲಾವಣೆಗಳನ್ನು ಪ್ರತಿ ಯುವತಿಯೂ ಎದುರಿಸಬೇಕಾಗಿದ್ದು ಈ ಸಂಗತಿಗಳು ನಿಮಗೆ ಅಚ್ಚರಿ ತರಿಸುತ್ತವೆ. ವೈವಾಹಿಕ ಜೀವನಕ್ಕೆ ಕಾಲಿರಿಸಲು ಸೂಕ್ತವಾದ ವಯಸ್ಸು ಯಾವುದು?

ನೀವು ಧಿಡೀರನೇ ಜವಾಬ್ದಾರಿಯುಳ್ಳವರಾಗುತ್ತೀರಿ

ನೀವು ಧಿಡೀರನೇ ಜವಾಬ್ದಾರಿಯುಳ್ಳವರಾಗುತ್ತೀರಿ

ಮದುವೆಗೂ ಮೊದಲು ಅಮ್ಮನ ಪ್ರೀತಿಯ, ಅಪ್ಪನ ಪುಟ್ಟ ಮಗಳಾಗಿದ್ದ ನೀವು ಮದುವೆಯ ಮರುದಿನದಿಂದಲೇ ಒಂದು ಮನೆಯ ಸೊಸೆಯಾಗಿ ಹೊಸ ಜವಾಬ್ದಾರಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಮದುವೆಗೂ ಮೊದಲು ನಿಮ್ಮ ಮನೆಯ ಸ್ವಚ್ಛತೆಯ ಜವಾಬ್ದಾರಿಯನ್ನು ತಾಯಿಯೂ ಮತ್ತು ನಿಮ್ಮ ಖರ್ಚಿನ ವೆಚ್ಚವನ್ನು ತಂದೆಯೂ ನೋಡಿಕೊಳ್ಳುತ್ತಿದ್ದರು. ಈಗ ಮದುವೆಯ ಬಳಿಕ ನಿಮ್ಮ ಜೊತೆಗೇ ಮನೆಯ ಇತರರ, ವಿಶೇಷವಾಗಿ ಪತಿಯ ಖರ್ಚುವೆಚ್ಚಗಳನ್ನೂ ನೋಡಿಕೊಳ್ಳಬೇಕಾಗುತ್ತದೆ. ಅಚ್ಚರಿಯ ವಿಷಯವೆಂದರೆ ಇದು ನಿಮಗೆ ಹೊರೆಯೆನ್ನಿಸುವುದೇ ಇಲ್ಲ, ಬದಲಿಗೆ ಪತಿಯ ಮನೆಯ ಖರ್ಚುವೆಚ್ಚಗಳನ್ನು ನೋಡಿಕೊಳ್ಳುವುದು ನಿಮಗೆ ಅಪ್ಯಾಯಮಾನವೆನಿಸುತ್ತದೆ. ಅಲ್ಲದೇ ಅನ್ಯೋನ್ಯತೆಗೆ ಇದು ಮೂಲವೂ ಆಗಿದೆ. ಮನೆಯ ಹೊಸ ಸದಸ್ಯಳಾಗಿ ಬಂದ ನಿಮ್ಮ ಮೇಲೆ ನಂಬಿಕೆಯಿಟ್ಟ ಪತಿಯ ಮನೆಯವರ ಭರವಸೆ ನಿಮ್ಮ ಪಾಲಿಗೆ ಅಮೂಲ್ಯವಾದ ಜವಾಬ್ದಾರಿಯೂ ಆಗಿದೆ.

ಇದುವರೆಗೆ 'ನಾನು' ಎನ್ನುತ್ತಿದ್ದ ನೀವು ಈಗ 'ನಾವು' ಎನ್ನತೊಡಗುತ್ತೀರಿ

ಇದುವರೆಗೆ 'ನಾನು' ಎನ್ನುತ್ತಿದ್ದ ನೀವು ಈಗ 'ನಾವು' ಎನ್ನತೊಡಗುತ್ತೀರಿ

ಮದುವೆಗೂ ಮೊದಲು ನಿಮ್ಮ ಜೀವನದಲ್ಲಿ ನಿಮ್ಮ ಅಸ್ತಿತ್ವವೇ ಪ್ರಮುಖವಾಗಿದ್ದು ಇತರರು ನಿಮ್ಮ ಜೀವನದ ಭಾಗಗಳಾಗಿದ್ದರು. ಆದ್ದರಿಂದ ನಿಮ್ಮ ಎಲ್ಲಾ ಚರ್ಯೆಯಲ್ಲಿ ನಾನು ಎಂದು ಬರುತ್ತಿತ್ತು. ಮದುವೆಯ ಬಳಿಕ ಪರಿಸರವೇ ಬದಲಾಗುವ ಜೊತೆಗೇ ನೀವು ಓರ್ವರ ಜೀವನ ಸಂಗಾತಿಯಾಗಿರುವುದರಿಂದ ನಿಮ್ಮ ಚರ್ಯೆಯಲ್ಲಿ ನಾನು ಎಂಬ ಬದಲಿಗೆ ನಾವು ಎಂಬ ಪದ ಬಳಕೆಯಾಗತೊಡಗುತ್ತದೆ. ಮದುವೆಗೂ ಮುನ್ನ ನಿಮ್ಮ ನಿರ್ಧಾರಗಳು ನಿಮ್ಮ ವೈಯಕ್ತಿಕವಾದುದ್ದುದು ಈಗ ಪತಿ ಮತ್ತು ಪತಿಯ ಮನೆಯವರೊಂದಿಗೆ ಸಮಾಲೋಚಿಸಿ ಕೈಗೊಳ್ಳುವ ನಿರ್ಧಾರಗಳಾಗಿವೆ.

ನಿಮ್ಮ ತಾಳ್ಮೆ ಹೆಚ್ಚುತ್ತದೆ

ನಿಮ್ಮ ತಾಳ್ಮೆ ಹೆಚ್ಚುತ್ತದೆ

ಮದುವೆಗೂ ಮುನ್ನ ನೀವು ಕೇಳಿದ್ದನ್ನೆಲ್ಲಾ ಕೊಡಿಸಿ, ಕುಣಿಸಿದಂತೆ ಕುಣಿದ ತಂದೆ ತಾಯಿಗಳ ಆರೈಕೆಯಲ್ಲಿ ಕೊಂಚ ಕಡಿಮೆಯಾದರೂ ತಾಳ್ಮೆ ಕಳೆದುಕೊಳ್ಳುತ್ತಿದ್ದ ನೀವು ಮದುವೆಯ ಬಳಿಕ ಅಪಾರ ತಾಳ್ಮೆಯುಳ್ಳವರಾಗುತ್ತೀರಿ. ಏಕೆಂದರೆ ಪತಿಯ ಮನೆಯಲ್ಲಿ ಪತಿ ಮತ್ತು ಇತರರ ಬಗ್ಗೆ ಅರಿತು ಹೊಂದಿಕೊಂಡು ನಡೆಯುವಾಗ ಹಿರಿಯರಿಗೆ ನೀಡಬೇಕಾದ ಗೌರವಕ್ಕೆ ತಕ್ಕಂತೆ ನಿಮ್ಮ ನಡವಳಿಕೆಯೂ ಸೌಮ್ಯವಾಗುತ್ತಾ ಬರುತ್ತದೆ. ಪತಿಯ ಮನಸ್ಸನ್ನು ಅರಿಯಲು ಸಮಯಾವಕಾಶ ಬೇಕಾದುದರಿಂದ ಇದೇ ಸಮಯದಲ್ಲಿ ತಾಳ್ಮೆಯೂ ಹೆಚ್ಚುತ್ತಾ ಬರುತ್ತದೆ. ತನ್ಮೂಲಕ ಜೀವನದಲ್ಲಿ ಅಗತ್ಯವಾದ ಗಾಂಭೀರ್ಯ ಮತ್ತು ತೊಂದರೆಗಳನ್ನು ಎದುರಿಸುವ ಸ್ಥೈರ್ಯವನ್ನೂ ಪಡೆದುಕೊಳ್ಳುತ್ತೀರಿ.

ನಿಮ್ಮ ಪ್ರಾಶಸ್ತ್ಯತೆಯೂ ಬದಲಾಗುತ್ತದೆ

ನಿಮ್ಮ ಪ್ರಾಶಸ್ತ್ಯತೆಯೂ ಬದಲಾಗುತ್ತದೆ

ಮದುವೆಗೂ ಮುನ್ನ ನಿಮ್ಮ ಸ್ನೇಹಿತರು ಮತ್ತು ನಿಕಟವರ್ತಿಗಳೊಂದಿಗೆ ನಿಮ್ಮ ಸಮಯ ಹೇಗೆ ಬೇಕಾದರೂ ಕಳೆಯಬಹುದಿತ್ತು. ಆಗ ನಿಮ್ಮ ಸಮಯ ಮತ್ತು ನಿಮ್ಮ ಅಗತ್ಯತೆಗಳಿಗೆ ಪ್ರಾಶಸ್ತ್ಯ ದೊರಕುತ್ತಿತ್ತು. ಆದರೆ ಮದುವೆಯ ಬಳಿಕ ಪತಿ ಮತ್ತು ಪತಿಯ ಮನೆಯವರಿಗೂ ಸಮಯಾವಕಾಶ ನೀಡಬೇಕಾದುದರಿಂದ ನಿಮ್ಮ ಅಗತ್ಯತೆಗಳು ಹಿಂದಿನಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಬದಲಿಗೆ ನಿಮ್ಮ ಪತಿಯ ಮತ್ತು ಕುಟುಂಬದವರ ಅಗತ್ಯತೆಗಳಿಗೆ ಪ್ರಾಶಸ್ತ್ಯತೆ ನೀಡಬೇಕಾಗುತ್ತದೆ. ಹಿಂದೆ ಗೆಳತಿಯರೊಂದಿಗೆ ಹೊರಗೆ ತಿನ್ನಬಯಸುತ್ತಿದ್ದ ಮನ ಈಗ ಪತಿ ಮತ್ತು ಅತ್ತೆಮಾವಂದಿರೊಂದಿಗೆ ಮನೆಯಲ್ಲಿ ಭೋಜನ ಮಾಡಲು ತವಕಿಸುತ್ತದೆ. ಈಗ ಪತಿಯ ಮನೆ, ಪತಿಯ ಜೊತೆಗೆ ಕಳೆಯುವ ಸಮಯ, ಪತಿಯ ಮನೆಯ ಖರ್ಚು ಮೊದಲಾದವು ನಿಮ್ಮ ಮನವನ್ನು ಆವರಿಸಿಕೊಳ್ಳುತ್ತವೆ.

ಮಾತನಾಡುವ ಮುನ್ನ ಆಲೋಚಿಸುತ್ತೀರಿ

ಮಾತನಾಡುವ ಮುನ್ನ ಆಲೋಚಿಸುತ್ತೀರಿ

ಮದುವೆಗೂ ಮುನ್ನ ನಿಮ್ಮ ತಂದೆ ತಾಯಿ ಅಕ್ಕ ತಂಗಿ, ಅಣ್ಣ ತಮ್ಮಂದಿರೊಂದಿಗೆ ಮಾತನಾಡುವಾಗ ಮುಂದಾಗುವ ಪರಿಣಾಮಗಳನ್ನು ನೀವು ಪರಿಗಣಿಸುತ್ತಿರಲಿಲ್ಲ. ಏಕೆಂದರೆ ನಿಮ್ಮಿಂದ ತಪ್ಪಾದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಮನೆಯ ಮಗಳಂತೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ನಿಮ್ಮ ಮಾತುಗಳಿಂದ ಪತಿಯ ಮನೆಯವರಿಗೆ ಯಾರಿಗಾದರೂ ನೋವಾಗಬಹುದು. ಏಕೆಂದರೆ ಅವರು ನಿಮ್ಮನ್ನು ಹೊಸದಾಗಿ ನೋಡುತ್ತಾ ಇದ್ದಾರೆ. ಈ ವಿಷಯವನ್ನು ಅರಿತಿರುವ ನೀವು ಈಗ ಮಾತಿಗೂ ಮೊದಲು ಆಲೋಚಿಸಿ ಸಮರ್ಪಕ ಪದಗಳನ್ನು ಬಳಸಿ ಮಾತನಾಡಲು ತೊಡಗುತ್ತೀರಿ.

ನಿಮ್ಮ ಭಾಷೆ ಮತ್ತು ಸಂವಹನ ಉತ್ತಮವಾಗುತ್ತದೆ

ನಿಮ್ಮ ಭಾಷೆ ಮತ್ತು ಸಂವಹನ ಉತ್ತಮವಾಗುತ್ತದೆ

ಮದುವೆಗೂ ಮುನ್ನ ನೀವು ಪ್ರಕಟಿಸುತ್ತಿದ್ದ ಭಾವನೆಗಳು ಹೇಗಿದ್ದರೂ ನಿಮ್ಮ ನಿಕಟವರ್ತಿಗಳು ಅದನ್ನು ಸ್ವೀಕರಿಸುತ್ತಿದ್ದರು. ಆದರೆ ಮದುವೆಯ ಬಳಿಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಪತಿಯ ಮನೆಯವರು ಅರ್ಥೈಸಿಕೊಳ್ಳುವಂತಿರಬೇಕಾದುದರಿಂದ ಈ ನಿಟ್ಟಿನಲ್ಲಿ ನೀವು ನಿಮ್ಮಲ್ಲಿಯೇ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುತ್ತೀರಿ. ನಿಮ್ಮ ಪದಗಳು ಸುಲಭವಾಗಿ ಅರ್ಥವಾಗುವಂತೆ ಮಾತನಾದುವ ಮೂಲಕ ನಿಮ್ಮ ಸಂವಹನ ಉತ್ತಮಗೊಳ್ಳುತ್ತದೆ. ಅಲ್ಲದೇ ಅವರು ಹೇಳುವ ಮಾತುಗಳನ್ನು ಗಮನವಿಟ್ಟು ಕೇಳುವ ಮೂಲಕ ಉತ್ತಮ ಕೇಳುಗರೂ ಆಗುತ್ತೀರಿ.

ಪತಿಯ ಒಪ್ಪಿಗೆ

ಪತಿಯ ಒಪ್ಪಿಗೆ

ಮದುವೆಗೂ ಮುನ್ನ ನೀವು ನಿಮ್ಮ ಚಲನವಲನಗಳ ಬಗ್ಗೆ ನಿರ್ಭಿಡೆಯಿಂದಿರುತ್ತಿದ್ದಿರಿ. ನಿಮಗೆ ಬೇಕಾದಲ್ಲಿ ಹೋಗುವ, ನಿಮಗಿಷ್ಟಬಂದಂತೆ ಕಾಲ ಕಳೆಯುವ ಸ್ವಾತಂತ್ರ್ಯ ನಿಮಗಿತ್ತು. ಮನಸ್ಸಾದೊಡನೆ ಚೀಲದಲ್ಲಿ ಕೆಲವು ಬಟ್ಟೆ ಹಾಕಿ ದೂರದ ತಂಪುತಾಣಕ್ಕೆ ಕೆಲವು ದಿನಗಳ ಮಟ್ಟಿಗೆ ಹೋಗಲೂ ಹವಣಿಸುತ್ತಿದ್ದಿರಿ. ಆದರೆ ಮದುವೆಯ ಬಳಿಕ ಈ ನಿರ್ಭಿಡೆಗೆ ಕಡಿವಾಣ ಬೀಳುತ್ತದೆ. ಯಾವುದೇ ಚಲನವಲನ ನಿಮ್ಮ ಪತಿಯ ಮತ್ತು ಅವರ ಮನೆಯವರ ಒಪ್ಪಿಗೆಯ ಮೂಲಕವೇ ನಡೆಯುತ್ತದೆ.

ನಿಮ್ಮಲ್ಲಿ ಸುರಕ್ಷತಾ ಭಾವನೆ ಮೂಡುತ್ತದೆ

ನಿಮ್ಮಲ್ಲಿ ಸುರಕ್ಷತಾ ಭಾವನೆ ಮೂಡುತ್ತದೆ

ಮದುವೆಗೂ ಮುನ್ನ ನಿಮ್ಮ ತಂದೆ ತಾಯಿ, ಅಣ್ಣತಮ್ಮಂದಿರು ಎಷ್ಟೇ ನಿಮ್ಮನ್ನು ಹೂವಿನಂತೆ ನೋಡಿಕೊಂಡಿದ್ದರೂ ನಿಮ್ಮಲ್ಲಿ ಒಂದು ಅಸುರಕ್ಷತಾ ಭಾವನೆ ಇರುತ್ತದೆ. ಆದರೆ ಮದುವೆಯಾದ ಬಳಿಕ ಪತಿಯ ಸಾಮೀಪ್ಯ ನಿಮಗೆ ಎಂದಿಲ್ಲದ ಸುರಕ್ಷತಾ ಭಾವನೆಯನ್ನು ನೀಡುತ್ತದೆ. ಮದುವೆಗೂ ಮುನ್ನ ಜನರ ನಡುವೆ ಓಡಾಡುವಾಗ ಸುತ್ತಮುತ್ತಲ ಜನರ ನೋಟ ನಿಮ್ಮನ್ನು ಆಧೀರರನ್ನಾಗಿಸುತ್ತದೆ. ಆದರೆ ವಿವಾಹದ ಬಳಿಕ ವಿವಾಹದ ಕುರುಹಾದ ಮಂಗಳಸೂತ್ರ, ಬೆಳ್ಳಿ ಕಾಲುಂಗುರ ಅಥವಾ ನಿಮ್ಮ ಸಂಪ್ರದಾಯದ ಯಾವುದೇ ಕುರುಹು ನೀವು ವಿಹಾಹಿತೆಯೆಂದು ಸಮಾಜಕ್ಕೆ ಸಾರುವುದರಿಂದ ಆ ಕ್ಷಣದಲ್ಲಿಯೇ ಸುತ್ತಮುತ್ತಲ ಜನರ ನೋಟ ಬದಲಾಗುತ್ತದೆ. ಇದು ನಿಮಗೆ ಅತಿ ಹೆಚ್ಚಿನ ಸುರಕ್ಷತಾ ಭಾವನೆಯನ್ನು ಮೂಡಿಸುತ್ತದೆ.

ನಮ್ಮ ಪುಟ್ಟ ಕನಸು

ನಮ್ಮ ಪುಟ್ಟ ಕನಸು

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ನಿಮ್ಮ ಮಹತ್ವಾಕಾಂಕ್ಷೆ ಮದುವೆಯ ಬಳಿಕ ಕೊನೆಗೊಳ್ಳಬೇಕೆಂದೇನಿಲ್ಲ. ಬದಲಿಗೆ ಈ ಆಕಾಂಕ್ಷೆಗಳು ನನ್ನ ಎನ್ನುವ ಬದಲು ನಮ್ಮ ಎಂಬ ಪದಕ್ಕೆ ಬದಲಾಗುತ್ತದೆ. ಬಹುತೇಕ ಪತಿ ಪತ್ನಿಯರು ಪರಸ್ಪರರ ಆಸೆಗಳನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಪೂರ್ಣ ಸಹಕಾರವನ್ನು ನೀಡುವುದರಿಂದ ಜೀವನ ಸುಂದರವಾಗುತ್ತದೆ. ಇಬ್ಬರೂ ಜೊತೆಯಾಗಿ ಸಾಧಿಸಿದ ಯಶಸ್ಸುಗಳು ದಂಪತಿಯ ಯಶಸ್ಸು ಆಗುತ್ತದೆಯೇ ವಿನಃ ಕೇವಲ ಒಬ್ಬರ ಯಶಸ್ಸು ಆಗುವುದಿಲ್ಲ. ಈ ಮೂಲಕ ಪಡೆವ ಸಂತಸ ಮತ್ತು ಸಾರ್ಥಕತೆ ನಿಜವಾದ ಐಶ್ವರ್ಯವಾಗಿದೆ.

ತೌರು ಮನೆಗೆ ಹೋದಾಗ ನಿಮಗೆ ವಿಶೇಷ ಆತಿಥ್ಯ ಕಾದಿರುತ್ತದೆ

ತೌರು ಮನೆಗೆ ಹೋದಾಗ ನಿಮಗೆ ವಿಶೇಷ ಆತಿಥ್ಯ ಕಾದಿರುತ್ತದೆ

ಪ್ರತಿ ತಂದೆತಾಯಿಗೂ ತಮ್ಮ ಮಗಳು ರಾಜಕುಮಾರಿಯೇ ಸರಿ. ಆದರೆ ಪತಿಯ ಮನೆಗೆ ತೆರಳಿದ ಬಳಿಕ ಆಕೆ ಆ ಮನೆಯ ಸೊಸೆಯಾಗಿದ್ದಾಳೆ, ಸುಖವಾದ ಜೀವನ ನಡೆಸುತ್ತಿದ್ದಾಳೆ ಎಂಬ ಭಾವನೆಯೇ ನಿಮ್ಮ ತಂದೆತಾಯಿಯರಿಗೆ ನೆಮ್ಮದಿ ನೀಡುವ ವಿಷಯವಾಗಿದೆ. ನಿಮಗೆ ಅನುಕೂಲವಾದಾಗ ತೌರು ಮನೆಗೆ ಆಗಮಿಸುವ ನೀವು ನಿಮ್ಮ ತಂದೆತಾಯಿಯರಿಗೆ ಇನ್ನೂ ಪುಟ್ಟ ರಾಜಕುಮಾರಿಯೇ ಆಗಿದ್ದಿರಿ.ಈಗ ನಿಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರೀತಿ,ಕಾಳಜಿ ಮತ್ತು ಗಮನ ನೀಡಲಾಗುತ್ತದೆ.ಈ ಪರಿ ನಿಮಗೆ ಅತ್ಯಂತ ಸಮಾಧಾನ ಮತ್ತು ಸುಖ ನೀಡುತ್ತದೆ.ಅದರಲ್ಲೂ ಒಂದು ವೇಳೆ ನೀವು ಗರ್ಭವತಿಯಾಗಿ ತೌರುಮನೆಗೆ ತೆರಳಿದರೆ ನಿಮ್ಮ ತೌರುಮನೆಯಲ್ಲಿ ಸಂಭ್ರಮದ ಹೊಳೆಯೇ ಹರಿಯುತ್ತದೆ. ಮನೆಯವರೆಲ್ಲರೂ ಟೊಂಕ ಕಟ್ಟಿ ನಿಮ್ಮ ಸೇವೆಗೆ ನಿಲ್ಲುತ್ತಾರೆ.ಎಲ್ಲೂ ಸಿಗದ ಮಾವಿನ ಕಾಯಿಯನ್ನು ಹುಡುಕಿಕೊಂಡು ಊರೆಲ್ಲಾ ಅಲೆಯುತ್ತಾರೆ.

X
Desktop Bottom Promotion