Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸ್ನೇಹಿತರ ದಿನ: ಅರಬ್ಬಿ ತಟದ ಹುಡುಗಿ ಮತ್ತು ಬಂಗಾಳ ಕೊಲ್ಲಿ ತೀರದ ಹುಡುಗ ಪರಿಶುದ್ಧ ಸ್ನೇಹದ ಕತೆ
ಸಂಬಂಧ, ಸ್ನೇಹದಲ್ಲಿ ಕೆಲವರು ಭಾವದ ಏಣಿಯನ್ನು ಒಮ್ಮಿಂದೊಮ್ಮೆಲೆ ಏರಿಸಿ ಬಿಡುತ್ತಾರೆ ಮತ್ತು ತಮಗೆ ಅಗತ್ಯವೆನ್ನಿಸಿದಷ್ಟು ದಿನ ಜೊತೆಗಿದ್ದು ನಮ್ಮನ್ನಲ್ಲೇ ಬಿಟ್ಟು ಜಿಗಿದುಬಿಡುತ್ತಾರೆ, ಇಲ್ಲ ಅಲ್ಲಿಂದ ನೂಕಿಬಿಡುತ್ತಾರೆ.
ಇಂತಹ ಅಗತ್ಯಕ್ಕಷ್ಟೇ ಬೆನ್ನು ಬಿದ್ದು ಏಕಾಏಕಿ ಮಾಯವಾಗುವವರ ನಡುವೆ, ಯಾವಾಗಲಾದರೂ ಇಣುಕುತ್ತ, ಸದಾ ಸಂಪರ್ಕದಲ್ಲಿಲ್ಲದಿದ್ದರೇನು ನಿನಗಾಗಿ ನಾನಿದ್ದೇನೆ ಎಂಬುದನ್ನು ನೆನಪಿಸುವ ನೈಜ ಸ್ನೇಹಿತರು ಇರುತ್ತಾರೆ. ಅಂತಹ ಪ್ರಾಮಾಣಿಕ ದೋಸ್ತಿ, ಪ್ರೇರಕ ಶಕ್ತಿಯಂತೆ ಬದುಕನ್ನು ಮುನ್ನಡೆಸುತ್ತಲೇ ಇರುತ್ತದೆ. ನನ್ನ ಪಾಲಿಗೆ ಅಂತವರಲ್ಲೊಬ್ಬ ಜಂಟಲ್‌ಮ್ಯಾನ್ ಜಾನು.

ಮೊದಲ ಬಾರಿಗೆ ಕನ್ನಡ ನೆಲವನ್ನು ಬಿಟ್ಟು, ಭಾಷೆ ಗೊತ್ತಿಲ್ಲದಿರುವ ಚೆನ್ನೈ ಮಹಾನಗರಕ್ಕೆ ಹೊರಟಾಗಲೂ ನನಗೆ ನನ್ನವರೆಂಬುವವರಿಲ್ಲದ ಊರಲ್ಲಿ ಹೇಗಿರಲಿ ಎಂಬ ಆತಂಕ ಕಾಡಲಿಲ್ಲ. ನಾಡು, ನುಡಿ ಬೇರೆಯಾದರೇನು ನನ್ನದೇ ದೇಶವಲ್ಲವೇ?. ನನ್ನೀ ಭಾವಕ್ಕೆ ಅಲ್ಲಿನವರು ನೀಡಿದ್ದು ಮತ್ತಷ್ಟು ಜೀವ. ಅಲ್ಲೊಬ್ಬರು ವಾರ ಕಳೆಯುವುದರೊಳಗೆ ನಿನಗೆ ನಾನು ಆತ್ಮಬಂಧು ಅನ್ನುವ ಭ್ರಮೆ ಹಿಡಿಸಿಬಿಟ್ಟರು. ಅವರ ಸಹಪಾಠಿ ಸ್ನೇಹಿತನೇ ಈ ಜಾನು. ಸೇಲಂನಿಂದ ಹೊಟ್ಟೆಪಾಡಿಗಾಗಿ ಚೆನ್ನೈಗೆ ಬಂದಿದ್ದ ಆತ. ಆದರೆ ಅವನ ವಿದ್ಯಾರ್ಹತೆಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ. ಬಹುಶಃ ಅವನ ಮೊದಲ ಬಾರಿ ನೋಡಿದ್ದು ನನ್ನ ಕಚೇರಿಯ ಹೊರಗಿರಬೇಕು.
ಆಗ ಅಷ್ಟೋ ಇಷ್ಟೋ ತಮಿಳು ಅರ್ಥವಾಗತೊಡಗಿತ್ತು. ಆತ ತಮಿಳಲ್ಲಿ ಮಾತನಾಡಿದರೆ, ನಾನು ಆಂಗ್ಲ ಭಾಷೆಯಲ್ಲಿ ಉತ್ತರಿಸುವುದು. ಅವನೆಂದೂ ಸ್ನೇಹ ಹಸ್ತ ಚಾಚಲಿಲ್ಲ, ನಿನಗೆ ನಾನಿದ್ದೇನೆ ಅನ್ನಲಿಲ್ಲ. ಭಾವನಾತ್ಮಕವಾಗಿ ಸೆಳೆಯಲಿಲ್ಲ. ಆದರೆ ಮಾರುಕಟ್ಟೆಗೆ ಹೋಗಿ ಮಣಭಾರದ ಚೀಲ ಹೊತ್ತು ಬರುವಾಗ ಓಡೋಡಿ ಬರುತ್ತಿದ್ದ ಮತ್ತು ಎಲ್ಲವನ್ನು ಹೆಗಲಿಗೇರಿಸಿಕೊಂಡು ನಡೆದೇ ಬಿಡುತ್ತಿದ್ದ. ಕಷ್ಟದಲ್ಲಿದ್ದೇನೆ ಎಂದರೆ ನಡುರಾತ್ರಿಯೂ ಓಡಿಕೊಂಡು ಬಂದು ಮುಂದೆ ನಿಂತಿರುತ್ತಿದ್ದ. ನೆರವಿನ ಅಗತ್ಯವಿದೆ ಎಂದು ಹೇಳುವ ಮೊದಲೇ ಹಾಜರಾಗಿಬಿಡುತ್ತಿದ್ದ. ರಕ್ತದೊತ್ತಡ ಕಡಿಮೆಯಾಗಿ ಆಗಾಗ ಆಸ್ಪತ್ರೆ ಸೇರುತ್ತಿದ್ದ ನನಗೆ, ನೀರು ಕುಡಿಯಮ್ಮ ಎಂದು ಗೋಗರೆಯುತ್ತಿದ್ದ.
ಅಂದು ನನ್ನ ಜನ್ಮದಿನವಾಗಿತ್ತು. ಹುಟ್ಟನ್ನು ಎಂದಿಗೂ ಹಬ್ಬವಾಗಿ ಆಚರಿಸಿದ ನಾನು ಅಂದು ಮಾತ್ರ ಆತ್ಮೀಯ ಸ್ನೇಹಿತರೆನ್ನಿಸಿಕೊಂಡವರು ಜೊತೆಗಿರುತ್ತಾರೆ ಎಂದುಕೊಂಡರೆ, ಅದು ಸುಳ್ಳಾಗಿತ್ತು. ಆದರೆ ಜಾನು, ಭಾನು ಮೂಡುವುದರೊಳಗೆ ಓಡೋಡಿ ಬಂದಿದ್ದ. ಮುರುಗನ್ ದೇವಸ್ಥಾನಕ್ಕೆ ಕರೆದೊಯ್ದು, ನನ್ನ ಹೆಸರಲ್ಲಿ ನಿರ್ಗತಿಕರಿಗೆ ಊ,ಟ ನೀಡಿದ್ದ. ಅವನ ನಿಷ್ಕಲ್ಮಶ ಸ್ನೇಹಕ್ಕೆ ನಾನು ತಲೆಬಾಗಿದ್ದೆ. ಕಣ್ಣಲ್ಲಿ ನೀರು ಜಿನುಗಿತ್ತು.
ಅದೊಂದು ದಿನ ಜಾನು ಏಕಾಏಕಿ ಊರಿಗೆ ಹೋಗಿಬಿಟ್ಟ. ತಂದೆ-ತಾಯಿಗಳ ಮಾತಿಗೆ ಎದುರಾಡದ ಆತ ಮತ್ತೆಂದೂ ಮರಳಿ ನಾನಿದ್ದ ಊರಿಗೆ ಬರಲಾರ ಎಂಬುದು ಗೊತ್ತಾಗಿ ಅನಾಥ ಭಾವ ಕಾಡಿತು. ಫೋನ್ ಕರೆ ಮಾಡಿ ಯಾಕೆ ಹೋದೆ ಎಂದು ದಬಾಯಿಸಿದೆ. ಅದೇ ವಾರದಲ್ಲಿ ಮರಳಿದ ಜಾನು, ಮುಂಜಾನೆ 8 ಗಂಟೆಗೆ ನಾನು ಉಳಿದುಕೊಂಡಿದ್ದ ರೂಮಿಗೆ ಬಂದ. ಸದಾ ನೀನೇ ಮಾಡಿ ತಿನ್ನೋದು, ಒಂದು ದಿನದ ಮಟ್ಟಿಗಾದರೂ ಮಾಡಿಕೊಡೋಣ ಎಂದು ಬಂದೆ ಅನ್ನುತ್ತ ನನಗಾಗಿ ಬೇಗ ಬೇಗ ಅಡುಗೆ ಮಾಡಿದ. 10 ಗಂಟೆಗೆ ಹೊರಡಲೇಬೇಕು, ಜರೂರು ಕೆಲಸವಿದೆ ಅಂದವ, ದೆವ್ವದ ಸಿನಿಮಾ ಒಬ್ಬಳೇ ನೋಡಲು ನಾನು ಹೆದರುತ್ತೇನೆ ಎಂಬ ಕಾರಣಕ್ಕೆ ಜೊತೆಗೆ ಕುಳಿತು, ಸಿನಿಮಾ ಪೂರ್ತಿ ಮುಗಿದ ಮೇಲೆಯೇ ಹೊರಟ.
ಎಲ್ಲಕ್ಕಿಂತ ವಿಶೇಷ ಸಂಗತಿ ಏನೆಂದರೆ, ಜಾನು ಆ ಊರಲ್ಲಿದ್ದಾಗಲೂ, ಹೊರಟು ಹೋದ ಮೇಲೂ, ನಾನು ಊರಿಗೆ ಬಂದ ಬಳಿಕವೂ ನನಗೆ ಅಂತರ್ದೇಶಿ ಪತ್ರ ಬರೆಯುತ್ತಿದ್ದ. ಪತ್ರ ಬರೆಯುವ ದಿನಗಳು ಮರೆಯಾಗುತ್ತಿರುವ ವಿಷಾದ ಆ ಮುಗ್ಧನ ಕಾಡುತ್ತಿದ್ದುದೇ ಅದಕ್ಕೆ ಕಾರಣ.
ಸಿಗರೇಟ್ ಬಿಟ್ಟುಬಿಡೋ ಎಂದು ಕಾಡುತ್ತಿದ್ದ ನನ್ನ ಕೈಗೆ ಕೆಲವು ಬಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅದೊಂದನ್ನು ಬಿಟ್ಟರೆ ನೀ 1000% ಜಂಟಲ್‌ಮ್ಯಾನ್ ಎನ್ನುತ್ತಿದ್ದೆ ನಾನು. Okay ಮಾ ಎಂದಾತ ನೆಲ ನೋಡುತ್ತಿದ್ದ.
ಜೊತೆಗೆ ಕಳೆದಿದ್ದು ಕೆಲವು ದಿನ. ಆದರೆ ಇದ್ದಷ್ಟು ದಿನ ಕೇವಲ ಪರಿಶುದ್ದ ಸ್ನೇಹವನ್ನಷ್ಟೇ ಉಣಬಡಿಸಿದ ಜಾನು ನನಗೆಂದಿಗೂ ಆತ್ಮ ಬಂಧುವೇ. ವರ್ಷಕ್ಕೊಂದೆರಡು ಬಾರಿಯಷ್ಟೇ ನಾವು ಮಾತನಾಡುವುದು. ನನ್ನ ಜನ್ಮದಿನಕ್ಕಿಂತ 1 ವಾರ ಮೊದಲು ಅವನದು ಬರುತ್ತದೆಯಾದರೂ ನಾನು ಪ್ರತಿವರ್ಷ ಅದನ್ನು ಮರೆಯುವುದೇ. 2, 3 ದಿನಗಳಾದ ಜ್ಞಾನೋದಯವಾಗಿ ಕ್ಷಮೆ ಕೇಳುತ್ತ ಕರೆ ಮಾಡಿದಾಗ Leave it ಮಾ ಅನ್ನುತ್ತ ನಿರ್ಮಲ ನಗು ಬೀರುವ ಜಾನುವೇ ನನ್ನ ಪಾಲಿನ ನಿಜವಾದ ದೋಸ್ತ್. ಇಂದಿನವರೆಗೂ ನಮ್ಮಿಬ್ಬರ ನಡುವೆ ಇರುವುದು ಎರಡೇ ಬೇಡಿಕೆಗಳು... ''Please quit smoking Janu'' ಇದು ನನ್ನದು. ''Please Drink more water ಮಾ''- ಇದು ಅವನದ್ದು...
ಲವಲೇಶವೂ ಬಂಧನವೆನಿಸದ, ಮುಕ್ತವಾದ, ಚಂದವಾದ ಈ ಸ್ನೇಹ ನನ್ನ ಪಾಲಿಗೆ ನಿತ್ಯನೂತನ, ಸತ್ಯ ಚೇತನ...



Click it and Unblock the Notifications
