Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೆಣ್ಣು ಸಂತಾನ ಎಂದು ಜರಿದವರು ಬಾಯಿಮುಚ್ಚುವಂತೆ ಬೆಳೆಸಿದರು ನಮ್ಮಪ್ಪ!
ಅಪ್ಪ ಅನ್ನೋದು ಕೇವಲ ಒಂದು ಶಬ್ದವಲ್ಲ ಅದು ಒಂದು ಎಮೋಷನ್. ಎಲ್ಲರಿಗೂ ಒಬ್ಬೊಬ್ಬ ಆದರ್ಶ ವ್ಯಕ್ತಿ ಅಂತ ಇರಬಹುದು ಆದರೆ ಅದೆಷ್ಟೋ ಜನರಿಗೆ ತಂದೆಗೆ ಸೂಪರ್ ಹೀರೋ ತಂದೆಯೇ ಸೂಪರ್ ಮ್ಯಾನ್. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರಪಂಚ. ನಾವೆಲ್ಲ ನೋಡಿರ್ತೀವಿ ಅಲ್ವಾ ಸಿನಿಮಾಗಳಲ್ಲಿ ಅಪ್ಪ ಅಂದ್ರೆ ಆದರ್ಶ ಎನ್ನುವುದನ್ನು ಬಿಂಬಿಸುವ ಸಾಕಷ್ಟು ಘಟನೆಗಳು ಇರುತ್ತವೆ.
ಅದೆಷ್ಟೇ ಸಮಸ್ಯೆ ಇದ್ದರೂ, ಅದೆಂತಹ ಸಂದರ್ಭಗಳಲ್ಲೂ ತಾನು ಪಟ್ಟ ಕಷ್ಟವನ್ನ, ತಾನು ಅನುಭವಿಸಿದ ನೋವುಗಳನ್ನು ಹೇಳಿಕೊಳ್ಳುವುದೇ ಇಲ್ಲ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಅಪ್ಪನನ್ನು ದ್ವೇಷ ಮಾಡುತ್ತಿದ್ದ ಮಗನಿಗೂ ಮಗಳಿಗೂ ಅಪ್ಪನ ತ್ಯಾಗದ ಬಗ್ಗೆ ಅರಿವಾಗುತ್ತದೆ. ತಮ್ಮ ತಪ್ಪಿಗೆ ನೋವಾಗುತ್ತದೆ. ಇದು ಕೇವಲ ಸಿನಿಮಾಗಳಲ್ಲಿ ಬರುವ ಸನ್ನಿವೇಶಗಳು ಮಾತ್ರವಲ್ಲ ನಿಜ ಜೀವನದಲ್ಲಿ ನಡೆಯುವ ವಾಸ್ತವ.

ಅಪ್ಪ.. ಆತ ಏನನ್ನು ಹೇಳಿಕೊಳ್ಳುವುದಿಲ್ಲ. ಅದೆಷ್ಟೇ ನೋವಿದ್ದರೂ ನುಂಗಿಕೊಳ್ಳುವ ಮಹಾನ್ ಶಕ್ತಿ ಮಾತ್ರ ಆತನಿಗೆ ಎಲ್ಲಿಂದ ಬಂತೋ ಗೊತ್ತಿಲ್ಲ, ಅಮ್ಮನಾದ್ರೂ ಅತ್ತು ಕರೆದು ನೋವನ್ನೋ ಅಥವಾ ಅಸಮಾಧಾನವನ್ನು ಹೊರಹಾಕುವುದು, ಆದರೆ ಅಪ್ಪ... ಗಂಡಸರು ಅತ್ತರೆ ನಾಚಿಕೆ ಪ್ರಶ್ನೆ ತಾನೇ!? ಹಾಗಾಗಿ ಅಪ್ಪ ಎಂದಿಗೂ ಕಣ್ಣೀರು ಹಾಕುವುದೇ ಇಲ್ಲ.. ತನ್ನ ಒಂದಿಂಚೂ ಕಷ್ಟವನ್ನು ಮಗುವಿಗೆ ತಾಕದ ಹಾಗೆ ನೋಡಿಕೊಳ್ಳುತ್ತಾನೆ.. ದುಡಿಯುತ್ತಾನೆ.. ಮಕ್ಕಳ ಭವಿಷ್ಯದ ಕನಸು ಕಾಣುತ್ತಾನೆ ಅವಮಾನ ಅನುಭವಿಸುತ್ತಾನೆ.. ಸಮಾಜದ ಸವಾಲುಗಳನ್ನು ಎದುರಿಸುತ್ತಾನೆ... ಆದರೆ ಎಂದಿಗೂ ತನ್ನ ಮಕ್ಕಳ ಎದುರು ಇದ್ಯಾವುದನ್ನು ತೋರಿಸಿಕೊಳ್ಳುವುದೇ ಇಲ್ಲವಲ್ಲ...
ನನ್ನಪ್ಪನ ಬಗ್ಗೆ ಹೇಳಬೇಕಾದರೆ ಸ್ವಲ್ಪ ಯೋಚಿಸಬೇಕು. ಯಾಕೆಂದ್ರೆ ನಮ್ಮದು ಸ್ವಲ್ಪ ಹಳೆಯ ಜಮಾನ! ಈಗಿನ ಹಾಗೆ ನಮ್ಮ ಅಪ್ಪ ಸೂಟು ಬೂಟು ಹಾಕಿಕೊಂಡು ಮಗುವನ್ನು ಕಾರಿನಲ್ಲಿ ಕರೆದುಕೊಂಡು ಶಾಪಿಂಗ್ ಮಾಲ್ ಗಳಲ್ಲಿ ಸುತ್ತಾಡಿಸಿಕೊಂಡು ಬೇಕಾಗಿರುವ ಆಟಿಕೆ ಸಾಮಾನುಗಳನ್ನೆಲ್ಲ ಕೊಡಿಸಿಕೊಂಡು ಒಂದಿಷ್ಟು ಐಸ್ ಕ್ರೀಮ್ ಕೈತುಂಬ ಚಾಕ್ಲೇಟ್ ಕೊಡಿಸಿ ಮನೆಗೆ ಕರೆದುಕೊಂಡು ಬರುವ ಅಪ್ಪನಾಗಿರಲಿಲ್ಲ... ಪ್ರತಿಷ್ಠಿತ ಶಾಲೆಗೆ ಸೇರಿಸಿ ತನ್ನ ಮಗುವಿನ ರ್‍ಯಾಂಕ್ ಬಗ್ಗೆ ಊರಿಲ್ಲ ಸಾರಿ ಸಾರಿ ಹೇಳುವ ಅಪ್ಪನಾಗಿರಲಿಲ್ಲ.. ರಿಯಾಲಿಟಿ ಶೋಗಳಿಗೆ ಮುತುವರ್ಜಿಯಿಂದ ಕರೆದುಕೊಂಡು ಹೋಗುವ ಅಪ್ಪನಾಗಿರಲಿಲ್ಲ.. ಕೈತುಂಬ ಹಣ ಕೊಟ್ಟು ಟ್ರಿಪ್, ಟೂರ್ ಕಳುಹಿಸುವ ಅಪ್ಪನಾಗಿರಲಿಲ್ಲ... ನಮ್ಮ ಬಗ್ಗೆ ಇರುವ ಪ್ರೀತಿಯನ್ನು ತೋರ್ಪಡಿಸುವ ಅಪ್ಪನಾಗಿರಲಿಲ್ಲ.. ವೀಕೆಂಡ್ ಬಂದ್ರ್ ಪಾರ್ಕ್, ಲಾಂಗ್ ಡ್ರೈವ್ ಕರೆದುಕೊಂಡು ಹೋಗುವ ಅಪ್ಪನಾಗಿರಲಿಲ್ಲ.. ನನ್ನ ಅಪ್ಪ ಐಷಾರಾಮಿ ಅಪ್ಪ ಆಗಿರಲಿಲ್ಲ..
ಹಾಗಾದ್ರೆ ನನ್ನಪ್ಪ..
ದುರಾದೃಷ್ಟಕ್ಕೆ ನಾವು ಮೂವರು ಹುಡುಗಿಯರೇ.. ಗಂಡು ಸಂತಾನವಿಲ್ಲದ ಅಪ್ಪನಿಗೆ ಹೆಣ್ಣು ಮಕ್ಕಳನ್ನು ಸಾಕುವುದು, ಸಲಹುದು ವಿದ್ಯಾವಂತರನ್ನಾಗಿ ಮಾಡುವುದು ಆ ಕಾಲದಲ್ಲಿ ಸುಲಭವೇನು ಆಗಿರಲಿಲ್ಲ. ಹಾಗೆ ನೋಡಿದ್ರೆ ಶಿಕ್ಷಣದ ವಿಚಾರದಲ್ಲಿ ಅಪ್ಪನಿಗಿಂತ ಅಮ್ಮನಿಗೆ ಕ್ರೆಡಿಟ್ ಜಾಸ್ತಿ. ಆದರೆ ನಮಗೆ ಪ್ರೀತಿ ಮಾತ್ರ ಅಪ್ಪನ ಮೇಲೆ ಜಾಸ್ತಿ.. ಯಾಕೆಂದ್ರೆ ನನ್ನಪ್ಪ.. ಅಂಬೆಗಾಲಿಡುವಾಗ ಬಿದ್ದರೂ ಎತ್ತದೆ ತಾನಾಗಿಯೇ ಎದ್ದು ನಿಂತು ನಡೆಯಲು ಹೇಳಿಕೊಟ್ಟ ಅಪ್ಪನಾಗಿದ್ದ.. ತಪ್ಪು ಮಾಡಿದರೆ ಹೊಒಡೆಯದೆ ಅಮ್ಮನಿಗೆ ಒಂದಿಷ್ಟು ಬೈದು ಮತ್ತೆ ನಿಧಾನವಾಗಿ ತಿಳಿ ಹೇಳುವ ಅಪ್ಪನಾಗಿದ್ದ..
ಹೆಣ್ಣು ಸಂತಾನ ನಿನಗೆ ಎಂದು ಜರೆಯುವವರ ಬಳಿ ಮಾತನಾಡದೆ ಮೌನ ವಹಿಸಿ ಅವರೇ ಬಾಯಿ ನೋಯಿಸಿಕೊಂಡು ಹೋಗುವಂತೆ ಮಾಡುವ ಸಜ್ಜನ ಅಪ್ಪನಾಗಿದ್ದ.. ಬಿದ್ದು ಕೈ ಕಾಲು ಮಂಡಿ ತೆರೆಚಿಕೊಂಡು ಅಳುತ್ತ ಮನೆಗೆ ಬಂದರೆ ವೈದ್ಯರನ್ನು ಕರೆಯದೆ ತಾನೇ ವೈದ್ಯನಾಗಿ ಗಾಯಕ್ಕೆ ಒಂದಿಷ್ಟು ಸೀಮೆಎಣ್ಣೆ ಸುರಿದು ತಕ್ಷಣ ನೋವು ನಿವಾರಿಸುವ ವೈದ್ಯ ಅಪ್ಪನಾಗಿದ್ದ.. ಒಂದು ದಿನವೂ ಶಾಲೆಗೆ ಬಾರದ ಅಪ್ಪ ದೂರದಿಂದಲೇ ಮಕ್ಕಳ ಏಳಿಗೆ ಕಂಡು ತುಂಬಿಕೊಳ್ಳುವ ಅಪ್ಪನಾಗಿದ್ದ.. ನನ್ನ ಅಪ್ಪ ಜೀವನ ಪಾಠವನ್ನು ಹೇಳಿಕೊಟ್ಟ ಅಪ್ಪನಾಗಿದ್ದ.. ಸ್ವತಂತ್ರ ಬದುಕು ಕಟ್ಟಿಕೊಟ್ಟ ಅಪ್ಪನಾಗಿದ್ದ.. ಅಪ್ಪನ ಬಗ್ಗೆ ಬರೆಯುವ ಬರಹ ಕಲಿಸಿದ ಅಪ್ಪನಾಗಿದ್ದ..
ಇಂತಿಪ್ಪ ನಮ್ಮ ಅಪ್ಪ.. ಮೂವರು ಹೆಣ್ಣು ಮಕ್ಕಳನ್ನು ದಡ ಸೇರಿಸಿದ ನಮ್ಮೆಲ್ಲರ ಪ್ರೀತಿಯ ಖಜಾನೆ. ಅಪ್ಪಂದಿರ ದಿನಕ್ಕೂ ಅಮ್ಮಂದಿರ ದಿನಕ್ಕೂ ನಮಗೆ ಮಾತ್ರ ಅಪ್ಪನೇ ಸ್ಪೆಷಲ್!!



Click it and Unblock the Notifications
