ಸಂಗಾತಿ ಯಾವಾಗಲೂ ನೆಗೆಟಿವ್ ಆಗಿ ಯೋಚಿಸುತ್ತಾರಾ? ಸರಿ ಪಡಿಸೋದು ಹೇಗೆ?

ಧನಾತ್ಮಕವಾಗಿ ಚಿಂತಿಸೋದು ತುಂಬಾನೇ ಮುಖ್ಯ. ಯಾವಾಗ ನಾವು ಪಾಸಿಟಿವ್ ಆಗಿ ಯೋಚನೆ ಮಾಡ್ತೀವೋ ಆಗ ನಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಇದೇ ಕಾರಣಕ್ಕೆ ನಾವು ಯಾವಾಗ್ಲೂ ಋಣಾತ್ಮಕವಾಗಿ ಯೋಚನೆ ಮಾಡೋ ವ್ಯಕ್ತಿಗಳಿಂದ ದೂರ ಇರಬೇಕು ಅಂತ ಹೇಳೋದು. ಒಂದು ವೇಳೆ ನಿಮ್ಮ ಸಂಗಾತಿಯೇ ಋಣಾತ್ಮಕವಾಗಿ ಯೋಚನೆ ಮಾಡುವವರಾಗಿದ್ದರೆ ಆಗ ನೀವು ಏನು ಮಾಡ್ತೀರಾ? ಖಂಡಿತ ಅವರನ್ನು ಬಿಟ್ಟು ಹೋಗೋದಕ್ಕೆ ಆಗೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡ್ಬೇಕು ಅನ್ನೋದಕ್ಕೆ ಇಲ್ಲಿದೆ ಟಿಪ್ಸ್!

1. ಧನಾತ್ಮಕವಾಗಿರಿ

ನಿಮ್ಮ ಸಂಗಾತಿ ಏನಾದರೂ ಋಣಾತ್ಮಕವಾಗಿ ಚಿಂತಿಸುವವರಾಗಿದ್ದರೆ ಅವರು ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಕೊರಗುತ್ತಾ ಇರುತ್ತಾರೆ. ಈ ವೇಳೆ ನೀವು ನಿಮ್ಮ ಸಂಗಾತಿಯ ಬಳಿ ಹೋಗಿ ಅವರ ತಲೆಗೆ ಧನಾತ್ಮಕ ವಿಚಾರಗಳನ್ನು ತುಂಬುವ ಪ್ರಯತ್ನ ಮಾಡಬೇಡಿ. ಅದು ವ್ಯರ್ಥ. ಏಕೆಂದರೆ ಅವರ ಬಳಿ ಮಾತಾಡೋದಕ್ಕೆ ಹೋದರೆ ನಿಮ್ಮಲ್ಲಿ ಋಣಾತ್ಮಕತೆ ಹೆಚ್ಚಾಗಬಹುದು. ಹೀಗಾಗಿ ನಿಮ್ಮಿಂದ ಸಾಧ್ಯವಾದಷ್ಟು ಅವರಲ್ಲಿ ಉತ್ಸಾಹ ತುಂಬಿ ಸಾಕು. ಆದರೆ ನೀವು ನಿಮ್ಮೊಳಗೆ ಇರೋ ಧನಾತ್ಮಕತೆಯನ್ನು ಬಿಟ್ಟು ಕೊಡಬಾರದು.

Effective Ways to Deal With A Negative Spouse In Kannada

2. ಒಂದು ಸ್ಪಷ್ಟ ಗಡಿಯನ್ನು ಸೃಷ್ಟಿಸಿಕೊಳ್ಳಿ

ನಾವು ಮಕ್ಕಳಿಗೆ ಒಂದು ಮಾತನ್ನು ಹೇಳುತ್ತೇವೆ ಅವನ ಜೊತೆಗೆ ಹೋದರೆ ನೀವು ಹಾಳಾಗುತ್ತೀಯಾ ಎಂದು. ಆದರೆ ಅದು ಸುಳ್ಳು ನಮ್ಮ ಗಡಿ ಏನು ಅಂತ ನಮಗೆ ಗೊತ್ತಿದ್ದರೆ ನಾವು ಯಾರ ಜೊತೆ ಹೋದರೂ ಕೂಡ ನಾವು ಬದಲಾಗೋದಿಲ್ಲ.

ಅದೇ ರೀತಿ ನಿಮ್ಮ ಸಂಗಾತಿಯಲ್ಲಿ ಋಣಾತ್ಮಕ ಯೋಚನೆಗಳೇ ಹೆಚ್ಚಾಗಿದ್ದರೆ ಅವರು ನಿಮ್ಮ ತಲೆಯನ್ನೂ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ನಿಮ್ಮ ಸುತ್ತ ಒಂದು ಗಡಿಯನ್ನು ಸೃಷ್ಟಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯ ಜೊತೆ ಸೇರಿ ನಿಮ್ಮ ಆಲೋಚನೆ ಬದಲಾಗದಂತೆ ನೋಡಿಕೊಳ್ಳಿ.

3. ನಿಮಗೆ ತಪಿತಸ್ಥ ಭಾವನೆ ಕಾಡದಂತೆ ನೋಡಿಕೊಳ್ಳಿ

ನಿಮ್ಮ ಸಂಗಾತಿಯು ನಿಮ್ಮನ್ನು ತುಂಬಾನೇ ಹಚ್ಚಿಕೊಂಡಿರೋದ್ರಿಂದ ಅವರ ನೋವುಗಳನ್ನು, ಅವರು ಅನುಭವಿಸುತ್ತಿರುವ ಅತೃಪ್ತಿಯನ್ನು ಅವರು ನಿಮ್ಮ ಬಳಿ ಹೇಳಿಕೊಳ್ಳುತ್ತಾರೆ. ಆಗ ಖಂಡಿತ ನಿಮಗೆ ತಪ್ಪಿತಸ್ಥ ಭಾವನೆ ಕಾಡುತ್ತದೆ. ಆದರೆ ಅವರ ನೋವುಗಳಿಗೆ ನೀವು ಖಂಡಿತ ಜವಬ್ದಾರರಲ್ಲ. ಅವರ ಋಣಾತ್ಮಕ ಯೋಚನೆಗಳು ಅವರನ್ನು ಮತ್ತಷ್ಟು ದುಃಖಿತರನ್ನಾಗಿ ಮಾಡುತ್ತಿದೆ. ಹೀಗಾಗಿ ನೀವು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

4. ಹೆಚ್ಚು ಪ್ರತಿಕ್ರಿಯೆ ನೀಡಬೇಡಿ

ದಂಪತಿಗಳಲ್ಲಿ ಇಬ್ಬರಲ್ಲಿ ಒಬ್ಬರು ಋಣಾತ್ಮಕವಾಗಿ ಚಿಂತಿಸುವವರಾಗಿದ್ದರೆ ಖಂಡಿತ ಆ ಕುಟುಂಬದಲ್ಲಿ ಒಂದಲ್ಲ ಒಂದು ರೀತಿ ಸಮಸ್ಯೆ ಸೃಷ್ಟಿಯಾಗುತ್ತಲೇ ಇರುತ್ತದೆ. ನಿಮ್ಮ ಸಂಗಾತಿ ಸುಖಾ ಸುಮ್ಮನೆ ಒಂದೇ ವಿಷಯವನ್ನಿಟ್ಟುಕೊಂಡು ನಿಮ್ಮ ಜೊತೆ ಜಗಳಕ್ಕೆ ನಿಂತು ಬಿಡಬಹುದು. ಹಾಗಂತ ನೀವು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಕ್ಕೆ ಹೋಗಬೇಡಿ. ಅವರು ಏನು ಹೇಳಿದರೂ ಹೆಚ್ಚು ಪ್ರತಿಕ್ರಿಯೆ ನೀಡಲೇಬೇಡಿ. ನಿಮ್ಮಷ್ಟಕ್ಕೆ ನೀವು ಇದ್ದು ಬಿಡಿ ಸಾಕು.

5. ನಿಮ್ಮನ್ನು ದೂರಿದಾಗ ಸುಮ್ಮನಿರಬೇಡಿ

ನಿಮ್ಮ ಸಂಗಾತಿ ದುಃಖಿತರಾಗಿದ್ದಾಗ ಅದಕ್ಕೆಲ್ಲಾ ನೀವೇ ಕಾರಣ. ನಿಮ್ಮಿಂದಲೇ ಇಷ್ಟೆಲ್ಲಾ ಆಗುತ್ತಿದೆ ಎಂದು ದೂರು ಹಾಕುತ್ತಾರೆ. ಅವರು ಹಾಕಿದ ಎಲ್ಲಾ ದೂರುಗಳನ್ನು ಖಂಡಿತ ಒಪ್ಪಿಕೊಳ್ಳಬೇಡಿ. ನೀವು ತಪ್ಪು ಮಾಡಿಲ್ಲ ಎಂದಾಗ ದೈರ್ಯವಾಗಿ ಮಾತನಾಡಿ. ಅವರು ಮಾಡಿರೋ ತಪ್ಪನ್ನು ಅವರಿಗೆ ಅರ್ಥ ಮಾಡಿಸೋ ಪ್ರಯತ್ಮ ಮಾಡಿ.

6. ಅವರು ಸಾಧನೆ ಮಾಡಿದಾಗ ಪ್ರೋತ್ಸಾಹಿಸಿ

ಯಾರ ತಲೆಯಲ್ಲಿ ಋಣಾತ್ಮಕತೆಯೇ ಹೆಚ್ಚಾಗಿರುತ್ತದೆಯೋ ಅವರಲ್ಲಿ ಆತ್ಮ ವಿಶ್ವಾಸ ಕಡಿಮೆ ಇರುತ್ತದೆ. ಹೀಗಾಗಿ ನಿಮ್ಮ ಸಂಗಾತಿ ಚಿಕ್ಕ ಸಾಧನೆ ಮಾಡಿದಾಗಲೂ ಪ್ರೋತ್ಸಾಹಿಸುವುದು ನಿಮ್ಮ ಕರ್ತವ್ಯ. ಅವರನ್ನು ಹೊಗಳಿ, ಅವರಿಗೆ ಪ್ರೋತ್ಸಾಹ ನೀಡುತ್ತಿರಿ. ಖಂಡಿತ ಅವರು ಖುಷಿಪಟ್ಟುಕೊಳ್ಳುತ್ತಾರೆ. ಇದರಿಂದಾದರೂ ಅವರಲ್ಲಿರುವ ಋಣಾತ್ಮಕತೆ ನಿಧಾನವಾಗಿ ದೂರವಾಗಬಹುದು.

7. ಅವರ ಜೊತೆಗೆ ಮಾತನಾಡಿ

ಯಾರ ತಲೆಯಲ್ಲಿ ಋಣಾತ್ಮಕತೆಯೇ ತುಂಬಿರುತ್ತದೆಯೋ ಅವರಲ್ಲಿ ಒಳ್ಳೆಯ ಆಲೋಚನೆಗಳು ಬರೋದೇ ಇಲ್ಲ. ಖುಷಿಯ ವಿಚಾರಗಳನ್ನು ಋಣಾತ್ಮಕವಾಗಿ ನೆನೆದು ಅದರಿಂದ ನೋವು ಅನುಭವಿಸುತ್ತಾರೆ. ಹೀಗಾಗಿ ಅವರು ಯಾವಾಗ ಸಮಾಧಾನದಿಂದಿರುತ್ತಾರೋ ಆಗ ಅವರ ಜೊತೆ ಕುಳಿತು ಮಾತನಾಡಿ. ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ಅರ್ಥ ಮಾಡಿಸೋ ಪ್ರಯತ್ನ ಮಾಡಿ. ಇದರಿಂದ ಅವರು ಬದಲಾಗೋ ಸಾಧ್ಯತೆಯೂ ಇರುತ್ತದೆ.

ಯಾವುದೇ ವ್ಯಕ್ತಿಗಾದರೂ ಸರಿ ಹುಟ್ಟಿನಿಂದಲೇ ಈ ಗುಣಗಳು ಬಳುವಳಿಯಾಗಿ ಬಂದಿರೋದಿಲ್ಲ. ಅವರ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳಿಂದಾಗಿ ಅವರು ಋಣಾತ್ಮಕ ವ್ಯಕ್ತಿಯಾಗಿ ಬದಲಾಗಿ ಇರಬಹುದು. ನೀವು ಮನಸ್ಸು ಮಾಡಿದ್ರೆ ಖಂಡಿತ ನಿಮ್ಮ ಸಂಗಾತಿಯನ್ನು ಬದಲಾಯಿಸಬಹುದು.

English summary

Effective Ways to Deal With A Negative Spouse In Kannada

These are the Effective Ways to Deal With A Negative Spouse. Read More.
X
Desktop Bottom Promotion