ದಿನ ನಿತ್ಯ ಮನೆಯಲ್ಲಿ ಅತ್ತೆ- ಸೊಸೆ ಜಗಳವಾಗುತ್ತಿದ್ಯಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ

ಅತ್ತೆ-ಸೊಸೆ ಸಾಮಾನ್ಯವಾಗಿ ಇವರಿಬ್ಬರ ಸಂಬಂಧ ಹಾವು ಮುಂಗುಸಿಯಂತಿರುತ್ತದೆ. ಎಲ್ಲೋ ಒಂದರಡು ಕಡೆ ಮಾತ್ರ ನಾವು ಅತ್ತೆ ಹಾಗೂ ಸೊಸೆಯಲ್ಲಿ ತಾಯಿ-ಮಗಳ ಭಾಂದವ್ಯವನ್ನು ಕಾಣಬಹುದಷ್ಟೇ. ಅತ್ತೆ-ಸೊಸೆ ಒಂದೇ ಕಡೆ ಒಂದೇ ಮನೆಯಲ್ಲಿದ್ದರೆ ಜಡೆ ಜಗಳ ಸಾಮಾನ್ಯವಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅತ್ತೆ ಸೊಸೆ ಸಂಬಂಧವನ್ನು ಸುದಾರಿಸೋದು ಕಷ್ಟ. ಆದರೆ ಕೆಲವೊಂದು ಟಿಪ್ಸ್‌ಗಳನ್ನು ಪಾಲಿಸಿದ್ರೆ ಅತ್ತೆಯ ಜೊತೆಗೆ ಒಂದೇ ಮನೆಯಲ್ಲಿ ಖುಷಿಯಿಂದ ಇರಬಹುದು. ಹಾಗಾದ್ರೆ ಅತ್ತೆಯ ಜೊತಗೆ ನಿಮ್ಮ ಸಂಬಂಧ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು? ಇಲ್ಲಿದೆ ಸಿಂಪಲ್‌ ಟಿಪ್ಸ್‌.

Boundaries To Set With Your Mother In Law For Healthy Relationship in Kannada

1. ಸಣ್ಣ- ಪುಟ್ಟ ವಿಚಾರಕ್ಕೆ ಅತ್ತೆಯ ಜೊತೆಗೆ ಜಗಳ ಬೇಡ
ಒಂದೇ ಮನೆಯಲ್ಲಿ ವಾಸವಾಗಿದ್ದೀವಿ ಅಂದ ಮೇಲೆ ಒಂದಲ್ಲ ಒಂದು ವಿಚಾರಕ್ಕೆ ಮಾತು ಬಂದೇ ಬರುತ್ತದೆ. ಹಾಗಂತ ಆ ವಿಚಾರವನ್ನೇ ದೊಡ್ಡದು ಮಾಡೋದಕ್ಕೆ ಹೋಗಬೇಡಿ. ಅತ್ತೆ ಹಾಗೂ ಸೊಸೆಯ ನಡುವೆ ಜನರೇಷನ್‌ ಗ್ಯಾಪ್‌ ಇರೋದ್ರಿಂದ ಅನೇಕ ವಿಚಾರಗಳಿಗೆ ಇಬ್ಬರ ಮಧ್ಯೆ ಮನಸ್ಥಾಪ ಉಂಟಾಗೋದು ಕಾಮನ್‌. ಹಾಗಂತ ಪ್ರತಿಸಾರಿ ಅತ್ತೆಗಿಂತ ನಿಮ್ಮ ಮಾತೇ ಮೇಲಾಗಬೇಕೆಂದು ಅಂದುಕೊಳ್ಳಬೇಡಿ. ಕೆಲವೊಂದು ಸಲ ಅವರ ಮಾತಿಗೂ ಬೆಲೆ ಕೊಡಬೇಕಾಗುತ್ತದೆ.

2. ಅನಗತ್ಯ ಸಲಹೆಗಳನ್ನು ಸಹಿಸಬೇಕಾಗುತ್ತದೆ
ಅತ್ತೆ ಎನ್ನುವ ಜಂಬ ಸಾಮಾನ್ಯವಾಗಿ ನಿಮ್ಮ ಅತ್ತೆಗೆ ಇದ್ದೇ ಇರುತ್ತದೆ. ಹಾಗಾಗಿ ಅವರು ನಿಮಗೆ ಸಲಹೆಗಳನ್ನು ನೀಡೋದಕ್ಕೆ ಮುಂದಾಗುತ್ತಾರೆ. ಅನೇಕ ಸಮಯದಲ್ಲಿ ಆ ಸಲಹೆಗಳು ನಿಮಗೆ ಕಿರಿ ಕಿರಿ ಉಂಟು ಮಾಡಬಹುದು. ಅದರಲ್ಲಿ ಕೆಲವೊಂದು ಅನಗತ್ಯ ಸಲಹೆಗಳು ಇರಬಹುದು. ಎಲ್ಲಾ ಸಲಹೆಗಳನ್ನು ನೀವು ಕೇಳಬೇಕೆಂದೇನಿಲ್ಲ. ಅಗತ್ಯವಾದ ಸಲಹೆಗಳನ್ನು ಕೇಳಿ ಅನಗತ್ಯವಾದುದನ್ನು ಬಿಟ್ಟು ಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ.

3. ಮಕ್ಕಳ ವಿಚಾರಕ್ಕೆ ಜಗಳವಾಡೋದು ಸರಿಯಲ್ಲ
ಮೊಮ್ಮಕ್ಕಳಂದ್ರೆ ಅಜ್ಜಿಗೆ ತುಂಬಾನೇ ಪ್ರೀತಿ ಇರುತ್ತದೆ. ಇತ್ತ ತಾಯಿ ಕೂಡ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿರುತ್ತಾಳೆ. ಒಂದು ವೇಳೆ ಮಕ್ಕಳು ಅಜ್ಜಿಯನ್ನು ಹೆಚ್ಚಾಗಿ ನೆಚ್ಚಿಕೊಂಡರೆ ತಾಯಿಗೆ ಅಷ್ಟಾಗಿ ಇಷ್ಟ ಆಗೋದಿಲ್ಲ. ಎಲ್ಲಿ ಮಕ್ಕಳು ಅಜ್ಜಿಯ ಕಡೆಗೆ ವಾಲಿ ಬಿಡುತ್ತಾರೆ ಅನ್ನೋ ಭಯ ಶುರುವಾಗುತ್ತದೆ. ಹೀಗಾಗಿ ಮಕ್ಕಳನ್ನು ಅಜ್ಜಿಯ ಜೊತೆಗೆ ಹೆಚ್ಚಾಗಿ ಬೆರೆಯಲು ಬಿಡೋದಿಲ್ಲ. ಈ ತರ ಮಾಡೋದಕ್ಕೆ ಹೋಗಬೇಡಿ. ಇದರಿಂದ ಹಿರಿ ಜೀವ ತುಂಬಾನೇ ನೊಂದುಕೊಳ್ಳುತ್ತದೆ.

4. ಅಮ್ಮ- ಮಗನನ್ನು ಬೇರೆ ಮಾಡಬೇಡಿ
ಸೊಸೆ ಬಂದ ಮೇಲೆ ಅಮ್ಮ-ಮಗನನ್ನು ಬೇರೆ ಮಾಡಿದ್ಲು ಅನ್ನೋ ಅಪವಾದವನ್ನು ಸಾಮಾನ್ಯವಾಗಿ ಮಾಡ್ತಾರೆ. ಆದರೆ ನೀವು ಇದೇ ದಾರಿಯನ್ನು ತುಳಿಯಬೇಡಿ. ಇಬ್ಬರ ಸಂಬಂಧವನ್ನು ಹಾಳು ಮಾಡೋ ಕೆಲಸ ಮಾಡಬೇಡಿ. ನೀವು ನಿಮ್ಮ ಗಂಡನನ್ನು ಮದುವೆಯಾಗೋದಕ್ಕಿಂತ ಮುಂಚೆ ತಾಯಿ - ಮಗು ಯಾವ ರೀತಿ ಇದ್ದರೋ ಅದೇ ರೀತಿ ಇರಲು ಅವಕಾಶ ಕೊಡಿ. ನಿಮ್ಮ ಗಂಡನನ್ನು ನಿಮ್ಮ ಸೆರಗಿನಲ್ಲಿ ಇಟ್ಟು ಕೊಳ್ಳುವ ಪ್ರಯತ್ನ ಬೇಡ.

5. ಆರ್ಥಿಕ ವಿಚಾರಕ್ಕಾಗಿ ಜಗಳ ಬೇಡ
ಮದುವೆಗೂ ಮೊದಲು ಮಗನ ಸಂಭಳವನ್ನು ತಾಯಿ ನಿಭಾಯಿಸುತ್ತಿರುತ್ತಾಳೆ. ಹೆಂಡತಿ ಬಂದ ಮೇಲೆ ಆ ಜವಾಬ್ದಾರಿ ಆಕೆಯ ಹೆಗಲೇರುತ್ತದೆ. ಸಾಮಾನ್ಯವಾಗಿ ತಾಯಿಯಾದವಳಿಗೆ ಈ ವಿಚಾರದಲ್ಲಿ ಕೊಂಚ ನೋವು, ಬೇಸರ ಆಗುತ್ತದೆ. ಇನ್ನೂ ಮಗ ತಾಯಿಗಾಗಿ ಏನನ್ನಾದರೂ ಪ್ರೀತಿಯಿಂದ ತಂದು ಕೊಟ್ಟರೆ ನೀವು ಅದಕ್ಕೆ ಅಡ್ಡಗಾಲು ಹಾಕಲು ಹೋಗಬೇಡಿ. ಅವರಿಬ್ಬರ ಪ್ರೀತಿಗೆ ಹುಳಿ ಹಿಂಡುವ ಕೆಲಸ ಮಾಡಬೇಡಿ.

6. ಎಲ್ಲಾ ಕೆಲಸವನ್ನು ಅತ್ತೆಯ ಕೈಯಲ್ಲಿ ಮಾಡಿಸಬೇಡಿ
ಕೆಲವು ಮನೆಗಳಲ್ಲಿ ಅತ್ತೆಯ ಪ್ರಾಬಲ್ಯವೇ ಹೆಚ್ಚಾಗಿ ಇರುತ್ತದೆ. ಆದರೆ ಕೆಲವು ಮನೆಗಳಲ್ಲಿ ಅತ್ತೆ ತುಂಬಾನೇ ಶಾಂತ ಸ್ವಭಾವದವರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಸೊಸೆಯಾದವಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾಳೆ. ಎಲ್ಲಾ ಕೆಲಸವನ್ನು ಅತ್ತೆಯ ಕೈನಿಂದ ಮಾಡಿಸಿಕೊಂಡು ಆಕೆ ರಾಣಿಯಂತೆ ಕುಳಿತಿರುತ್ತಾಳೆ. ಈ ರೀತಿ ಮಾಡೋದು ಸರಿಯಲ್ಲ. ವಯಸ್ಸಾದ ಅತ್ತೆಯನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳಿ.

7. ಅತ್ತೆಯ ಬಗ್ಗೆ ಚಾಡಿ ಹೇಳಬೇಡಿ
ಒಂದೇ ಮನೆಯಲ್ಲಿ ಇರೋವಾಗ ಮನಸ್ಥಾಪಗಳು ಸಾಮಾನ್ಯ. ಅತ್ತೆ-ಸೊಸೆ ಅಂದ ಮೇಲೆ ಒಂದು ಮಾತು ಬರುತ್ತದೆ ಹೋಗುತ್ತದೆ. ಹಾಗಂತ ಮನೆಯಲ್ಲಿ ಆದ ಎಲ್ಲಾ ವಿಚಾರಗಳನ್ನು ಹೊರಗಡೆ ಹೇಳೋದಿಕ್ಕೆ ಹೋಗಬೇಡಿ. ಅತ್ತೆ ಸರಿಯಿಲ್ಲ ಎಂದು ಅವರ ಬಗ್ಗೆ ಹೊರಗಿನವರ ಹತ್ತಿರ ಚಾಡಿ ಹೇಳೋದಕ್ಕೆ ಹೋಗಬೇಡಿ. ಇದು ನಿಮಗೆ ಶೋಭೆ ತರೋದಿಲ್ಲ. ಕುಟುಂಬದ ವಿಚಾರ ಮೂರನೇಯ ವ್ಯಕ್ತಿ ಗೊತ್ತಾಗೋದು ಸರಿಯಲ್ಲ.

ಅತ್ತೆಯನ್ನು ಮೂರನೇಯವರಂತೆ ಕಾಣಬೇಡಿ. ಆಕೆಗೂ ತಾಯಿ ಪ್ರೀತಿ ಕೊಟ್ಟು ನೋಡಿ ಖಂಡಿತ ಆಕೆ ನಿಮ್ಮನ್ನು ಮಗಳಂತೆ ಪ್ರೀತಿಸುತ್ತಾಳೆ. ಅದನ್ನು ಬಿಟ್ಟು ಸುಖಾ ಸುಮ್ಮನೆ ಅಮ್ಮ-ಮಗನ ಸಂಬಂಧಕ್ಕೆ ಕೊಳ್ಳಿ ಇಡುವ ಕೆಲಸ ಎಂದಿಗೂ ಮಾಡಲೇಬೇಡಿ.

English summary

Boundaries To Set With Your Mother In Law For Healthy Relationship in Kannada

Here are the Boundaries To Set With Your Mother In Law For Healthy Relationship.
Story first published: Friday, April 14, 2023, 18:17 [IST]
X
Desktop Bottom Promotion