ಪ್ಯಾರಾಚುಟ್ ಕೊಬ್ಬರಿ ಎಣ್ಣೆಯ ಓಲನ್

By * ಪ್ರಭಾ ಶರ್ಮಾ, ಬೆಂಗಳೂರು

ಚಪಾತಿಗೊಪ್ಪುವ ಓಲನ್ ಎಂಬ ಹೆಸರಿನ ಪದಾರ್ಥದ ಹೆಸರನ್ನು ನೀವು ಕೇಳಿದ್ದೀರಾ ಸವಿದಿದ್ದೀರಾ? ನಾನಂತೂ ಕೇಳಿರಲಿಲ್ಲ. ನಮ್ಮ ಮನೆಯಲ್ಲಿ ಅಮ್ಮ ಯಾವತ್ತೂ ಮಾಡಿದ್ದಿಲ್ಲ. ಈ ಹುಳಿ ಅಥವಾ ಸಾಗು ಅಥವಾ ಕರಿಯ ಪರಿಚಯ ನನಗೆ ಮೊನ್ನೆ ಆಯಿತು. ಮಾಲೀಕರ ಕಿರಿಪಿರಿ ತಾಳಲಾರದೆ ಅಂತೂ ಶಾಂತಿನಗರದ ಮನೆ ಬದಲಾಯಿಸಿ ಬ್ರಿಗೇಡ್ ಮಿಲಿನಿಯಮ್ ನಲ್ಲಿ ಒಂದು ಫ್ಲಾಟ್ ಬಾಡಿಗೆಗೆ ಪಡೆದೆವು. ಈ ಫ್ಲಾಟ್ ಸಮುಚ್ಚಯದಲ್ಲಿ ನೂರಾರು ಫ್ಲಾಟ್ ಗಳಿವೆ. ಒಂದು ಲೆಕ್ಕದಲ್ಲಿ ಇದು ಮಿನಿ ಭಾರತ. ಎಲ್ಲ ರಾಜ್ಯದ ಜನರು ವಾಸಿಸುತ್ತಾರೆ. ಭಾಷೆ, ಊಟ, ವಿಹಾರ, ಜೀವನ ಶೈಲಿಯಲ್ಲಿ ಹಲವು ಹತ್ತು ಬಗೆಗಳಿವೆ. ಬೇಕೋ ಬೇಡವೋ , ಮಕ್ಕಳನ್ನು ಸ್ಕೂಲು ವ್ಯಾನಿಗೆ ಹತ್ತಿಸುವಾಗ ಬೇರೆ ರಾಜ್ಯದ ನೆರೆಹೊರೆಯವರು ಪರಿಚಯವಾಗುತ್ತಾರೆ. ಪರಿಚಯ ಅರ್ಧ ಸ್ನೇಹಕ್ಕೆ ತಿರುಗುತ್ತದೆ.

ಮೊನ್ನೆ ಓಣಂ ಹಬ್ಬದ ಹಿಂದಿನ ದಿವಸ ನಮ್ಮ ಪಕ್ಕದ ಮನೆಯ ಪಾರ್ವತಿ ಮೆನನ್ ಗಡಿಬಿಡಿಯಿಂದ ಓಡಾಡುತ್ತಿದ್ದರು. ಅವರ ನೆಂಟರು ಸ್ನೇಹಿತರೆಲ್ಲ ಸೇರಿಕೊಂಡು ಫ್ಲಾಟಿನ ಕಾರಿಡಾರ್ ನಲ್ಲಿ ರಂಗೋಲಿ ಎಳೆಯುತ್ತಿದ್ದರು. ನೆಲಹಾಸುಕಲ್ಲಿನಲ್ಲಿ ಸಹಜವಾದ ಚಿತ್ರಗಳಿವೆ, ಅದರ ಮೇಲೆ ರಂಗೋಲಿ ಚಿತ್ತಾರ. ಸ್ವಸ್ತಿಕ್ ರಂಗೋಲಿ ಗೆರೆಗಳ ನಡುವೆ ನಾಕಾರು ಬಣ್ಣದ ಪುಡಿಗಳನ್ನು ಉದುರಿಸಿ ಜಡೆಹೆಣೆದುಕೊಳ್ಳದ ಕೇರಳ ಯುವತಿಯರು ಆನಂದ ಪಡುತ್ತಿದ್ದರು. ಸಗಣಿಯಿಂದ ಸಾರಿಸಿದ ಗಡಿಕಲ್ಲು ಮನೆ ಅಂಗಳದಲ್ಲಿ ನಾನು ಮತ್ತು ನನ್ನ ತಂಗಿ ನಿತ್ಯ ಹಾಕುತ್ತಿದ್ದ ರಂಗೋಲಿಗೂ, ಗ್ರಾನೈಟ್ ಶಿಲೆಯ ಮೇಲೆ ಎಳೆಯುವ ಗೆರೆಗಳಿಗೂ ಇರುವ ವ್ಯತ್ಯಾಸಗಳನ್ನು ಮನದಲ್ಲೇ ಚಿತ್ರಿಸಿಕೊಳ್ಳುತ್ತಾ ಅವರ ಸಂಭ್ರಮ ನೋಡುತ್ತಾ ಇದ್ದೆ.

ಈ ಮಧ್ಯೆ ಓಣಂಗೆ ಅಡುಗೆ ವಿಶೇಷ ಏನು ಮಾಡುತ್ತಾರೆ ಎಂದು ಕೇಳುವ ಕುತೂಹಲ ನನಗೆ. ಆದರೆ ಕೇಳುವುದಕ್ಕೆ ಏನೋ ಮುಜಗರ. ಮೆನು ಕೇಳಿದಾಕ್ಷಣ ನಮ್ಮ ಮನೆಗೇ ಊಟಕ್ಕೆ ಬನ್ನಿ ಎಂದು ಕರೆದುಬಿಟ್ಟರೆ, ಎಂಬ ಸಂಕೋಚ ಮಿಶ್ರಿತ ಮುಜಗರ. ಪೊಂಗಲ್ಲು, ಬಾಳೆಕಾಯಿ ಚಿಪ್ಸ್ ಕೇರಳದ ವಿಶೇಷ ಬಿಟ್ಟರೆ ನನಗೆ ಬೇರೇನೂ ಗೊತ್ತಿರಲಿಲ್ಲ. ಹಾಗೂ ಹೀಗೂ ಮಾಡಿ ಪಾರ್ವತಿಯವರ ಮನೆಗೆ ಬಂದಿದ್ದ ಅತಿಥಿ ಸುಷ್ಮ ಅವರ ಬಳಿ ಅದೂ ಇದೂ ಮಾತಾಡುವಾಗ ಅವರ ಬಾಯಿಂದ 'ಓಲನ್' ಶಬ್ದ ಹೊರಬಿತ್ತು. ಅವರ ಬಳಿ ಓಲನ್ ರೆಸಿಪಿಯನ್ನು ಇಂಗ್ಲಿಷ್ ನಲ್ಲಿ ಕೇಳಿ ತಿಳಿದುಕೊಂಡೆ. ಅವತ್ತು ರಾತ್ರೀನೇ ಮಾಡಿ ತಿಂದುಬಿಟ್ಟೆ.

ಒಂಥರಾ ಚೆನ್ನಾಗಿತ್ತು. ಈ ರೆಸಿಸಿಯನ್ನು ದಟ್ಸ್ ಕನ್ನಡಕ್ಕೆ ಕಳಿಸಬೇಕೆಂಬ ಅಪೇಕ್ಷೆ ಆಯಿತು. ನನಗೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಇನ್ನೂ ಚೆನ್ನಾಗಿ ಬರುತ್ತಿಲ್ಲ. ಆದ್ದರಿಂದ ಇಂಗ್ಲಿಷ್ ನಲ್ಲಿ ಬರೆದಿದ್ದೇನೆ. I wish to share this kerala cuisine with kannada readers.

ಎರಡು ವರ್ಷದ ಮಗಳು ಸೇರಿ ನಮ್ಮ ಮನೆಯಲ್ಲಿ ಮೂರು ಜನ ಇರುವುದರಿಂದ ಇಬ್ಬರಿಗೆ ಹೊಂದುವಷ್ಟು ಪ್ರಮಾಣ ಬಳಸಿ ರೆಸಿಪಿ ಕೊಟ್ಟಿದ್ದೇನೆ. ಮೊಸರಿನ ಒಂದು ಕಪ್ ಅಳತೆಯಲ್ಲಿ ಹಲಸಂಡೆ (ಅಲಸಂದೆ) ಕಾಳನ್ನು ನೀರಿನಲ್ಲಿ ಹಾಕಿ ಎಂಟು ಅಥವಾ ಹತ್ತು ಗಂಟೆ ನೆನೆಸಬೇಕು. ನೆನೆದ ಕಾಳಿನ ಜತೆಗೆ ಮೂರು ಸೀಮೆ ಬದನೆಕಾಯಿಯನ್ನು ಸ್ವಲ್ಪ ಸಣ್ಣ ಗಾತ್ರಕ್ಕೆ ಹೆಚ್ಚಿಕೊಂಡು ಹೋಳುಗಳನ್ನು ಬೆರೆಸಿ ಕುಕ್ಕರ್ ನಲ್ಲಿ ಬೇಯಿಸಬೇಕು. ರುಚಿಗೆ ತಕ್ಕುದಾದ ಪ್ರಮಾಣದಲ್ಲಿ ಉಪ್ಪನ್ನು ಕುಕ್ಕರ್ರಿಗೆ ಹಾಕಿಬಿಡಬೇಕು. ಸೀಮೆ ಬದನೆ ಅಲ್ಲದೆ ಬೂದುಕುಂಬಳಕಾಯಿ ಅಥವಾ ಸಿಹಿ ಕುಂಬಳಕಾಯಿಯನ್ನು ಹಾಕಿಯೂ ಮಾಡಬಹುದೆಂದು ಸುಷ್ಮ ಹೇಳಿದ್ದರು.

ಅರ್ಧ ಕಪ್ಪಿಗಿಂತ ಕಡಿಮೆ ತೆಂಗಿನಕಾಯಿ ತುರಿ, ಚೂರು ಜೀರಿಗೆ ಮತ್ತು ಉದ್ದುದ್ದನೆಯ ನಾಲ್ಕು ಹಸಿಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಮೊದಲು ಒಣಒಣ ಆಮೇಲೆ ನೀರು ಹಾಕಿ ಹಸಿಹಸಿ ರುಬ್ಬಬೇಕು. ಈ ಚಟ್ನಿಯನ್ನು ಬೆಂದ ಪದಾರ್ಥಕ್ಕೆ ಹಾಕಿ ಮತ್ತೆ ಸ್ವಲ್ಪ ಹೊತ್ತು ಕುದಿಬಿಡಬೇಕು. ಕೆಳಗಿಳಿಸುವಾಗ ಎರಡು ಟೀ ಸ್ಪೂನ್ ಕೊಬ್ಬರಿ ಎಣ್ಣೆ (parachute) ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಓಲನ್ ಸಿದ್ಧವಾಗುವುದು. ಇದಕ್ಕೆ ಎನಂತ ಕರೀಬೇಕು ಎಂದು ಗೊತ್ತಾಗುತ್ತಿಲ್ಲ. ಹುಳಿ ಅಥವಾ ಸಾಗು ಅಥವಾ ಗೊಜ್ಜು, whatever. ಓಲನ್ ಚಪಾತಿಗೆ ಮಾತ್ರ ಚೆನ್ನ. I dont think this curry goes well with rice or other forms of rotees.

(ಕನ್ನಡಕ್ಕೆ : ವಾಮನ ಮೂರ್ತಿ)

X
Desktop Bottom Promotion