ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡಬೇಡಿ ಅನ್ನೋದು ಇದೇ ಕಾರಣಕ್ಕೆ !

ಮಕ್ಕಳು ಹುಟ್ಟಿದಾಗಿನಿಂದ ದೊಡ್ಡವರಾಗುವವರೆಗೂ ಪೋಷಕರು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಅವರ ಮನಸ್ಸಿಗೆ ಒಂಚೂರು ನೋವಾಗದಂತೆ ನಡೆದುಕೊಳ್ಳುತ್ತಾರೆ. ಅವರ ಬೇಕು ಬೇಡಗಳೆಲ್ಲವನ್ನೂ ನಿರ್ಧರಿಸುತ್ತಾರೆ. ಮಕ್ಕಳಿಗೆ ಕೇಳಿ ಕೇಳಿದ್ದನ್ನೆಲ್ಲಾ ತೆಗೆದುಕೊಡುತ್ತಾರೆ. ಮಕ್ಕಳನ್ನು ಒಂದು ರೀತಿ ಗುಬ್ಬಿ ಮರಿಯಂತೆ ಭದ್ರ ಮಾಡುತ್ತಾರೆ. ಆದರೆ ಎಲ್ಲಾ ಪೋಷಕರು ಈ ರೀತಿ ಮಾಡೋದಿಲ್ಲ.

ಕೆಲವೊಂದು ಪೋಷಕರು ಮಕ್ಕಳನ್ನು ಇಷ್ಟು ಜೋಪಾನ ಮಾಡೋದಿಲ್ಲ. ಪೋಷಕರು ಕೆಲಸಕ್ಕೆ ಹೋಗೋದ್ರಿಂದ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡೋದಿಕ್ಕಾಗೋದಿಲ್ಲ. ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡುತ್ತಾರೆ. ಮಕ್ಕಳನ್ನು ನೋಡಿಕೊಳ್ಳೋದಕ್ಕೂ ಇಷ್ಟೊಂದು ಉದಾಸೀನ ಮಾಡ್ತಾರಾ? ಅಂತ ನೀವು ಕೇಳ್ಬಹುದು. ಕೆಲವೊಂದು ಸಾರಿ ಇದರಿಂದ ಲಾಭವೂ ಇದೆ. ಹಾಗಾದ್ರೆ ಮಕ್ಕಳನ್ನು ಸಾಕೋದ್ರಲ್ಲಿ ಸೋಮಾರಿತನ ಮಾಡೋದ್ರಿಂದ ಏನೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.

Why Lazy Parenting Could Benefit Your Kids in Kannada

1. ಮಕ್ಕಳ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ
ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಮಾನಸಿಕ ಆರೋಗ್ಯ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸೋಮಾರಿತನದಿಂದ ಮಕ್ಕಳನ್ನು ಸಾಕುವುದು ಎಂದರೆ ಅವರಷ್ಟಕ್ಕ ಅವರನ್ನು ಬಿಟ್ಟು ಬಿಡೋದು ಎಂದು ಅರ್ಥವಲ್ಲ. ಹೆಚ್ಚಾಗಿ ಪೋಷಕರು ಅವರ ಖಾಸಗಿ ಜೀವನಕ್ಕೆ ತಲೆ ಹಾಕೋದಕ್ಕೆ ಹೋಗೋದಿಲ್ಲ. ಸ್ವಾತಂತ್ರವಾಗಿ ಇರೋದಕ್ಕೆ ಅನುವು ಮಾಡಿಕೊಡ್ತಾರೆ.

ಇಲ್ಲಿ ಪೋಷಕರು ಹಾಗೂ ಮಕ್ಕಳ ನಡುವೆ ಸಂವಹನ ಚೆನ್ನಾಗಿರುತ್ತದೆ. ಈ ದಿನ ಏನೆಲ್ಲಾ ಆಯ್ತು ಅನ್ನೋದ್ರ ಬಗ್ಗೆ ಪೋಷಕರು ಮಕ್ಕಳಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ಮಕ್ಕಳು ಹಾಗೂ ಪೋಷಕರ ಮಧ್ಯೆ ಒಂದು ರೀತಿಯ ನಂಬಿಕೆ ಇರುತ್ತದೆ. ಹೀಗಾಗಿ ಮಕ್ಕಳ ಮೇಲೆ ಯಾವುದೇ ರೀತಿಯಾದ ಒತ್ತಡ ಇರೋದಿಲ್ಲ. ಅವರು ಖುಷಿಯಾಗಿ ಇರುತ್ತಾರೆ. ಮಕ್ಕಳು ಪೋಷಕರ ಬಳಿ ಎಲ್ಲವನ್ನೂ ಹಂಚಿಕೊಳ್ಳೋದ್ರಿಂದ ಅವರ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.

2. ಸ್ವಾತಂತ್ರವಾಗಿರುತ್ತಾರೆ
ಮಕ್ಕಳನ್ನು ಅತಿಯಾಗಿ ಪಾಲನೆ, ಪೋಷಣೆ, ಕಾಳಜಿ ಮಾಡೋದು ಒಳ್ಳೆಯದಲ್ಲ. ಇದರಿಂದ ಮಕ್ಕಳು ಬಾವಿಯೊಳಗಿನ ಕಪ್ಪೆಗಳಂತಾಗುತ್ತಾರೆ. ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಅನ್ನೋದು ಅವರಿಗೆ ಗೊತ್ತಿರೋದಿಲ್ಲ. ಆದರೆ ಯಾವಾಗ ತಂದೆ-ತಾಯಿ ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ಬಿಡುತ್ತಾರೋ ಆಗ ಅವರು ಸ್ವಾತಂತ್ರವಾಗಿ ಹೇಗೆ ಬದುಕಬೇಕು ಎಂಬುವುದನ್ನು ಕಲಿಯುತ್ತಾರೆ.

ಅಷ್ಟೇ ಅಲ್ಲ, ಎಲ್ಲಿ ಬೇಕಾದರೂ ಹೋಗಿ ಜೀವನ ನಡೆಸುತ್ತಾರೆ, ಎಂತಹದ್ದೇ ಸಮಸ್ಯೆ ಬಂದರೂ ಕೂಡ ಜಗ್ಗೋದಿಲ್ಲ. ಮಕ್ಕಳನ್ನು ಈ ರೀತಿ ಬೆಳೆಸಿದರೆ ದೊಡ್ಡವರಾದ ಮೇಲೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಎಂತಹದ್ದೇ ಪರಿಸ್ಥಿತಿ ಬಂದರೂ ಅವರು ಹೆದರುವ ಮಾತೇ ಇಲ್ಲ. ಹೀಗಾಗಿ ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡದೇ ಇರುವುದು ಒಳ್ಳೆಯದು.

3. ಆತ್ಮವಿಶ್ವಾಸ
ಮಕ್ಕಳನ್ನು ನಿಮಗೆ ಬೇಕಾದ ಹಾಗೆ ಬೆಳೆಸುವುದನ್ನು ಬಿಟ್ಟು ಅವರಿಗೆ ಬೇಕಾದ ಹಾಗೆ ಬೆಳೆಯೋದಕ್ಕೆ ಅವಕಾಶ ಕೊಡಿ. ಪೋಷಕರು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟಾಗ ಹೊಸ ಹೊಸ ಕೌಶಲ್ಯಗಳನ್ನು ಅವರು ಕಲಿತುಕೊಳ್ಳುತ್ತಾರೆ. ಅವರ ಇಷ್ಟ ಕಷ್ಟಗಳು ಏನು ಅನ್ನೋದನ್ನು ಅರಿತುಕೊಳ್ಳೋದಕ್ಕೆ ಅವಕಾಶ ಸಿಗುತ್ತದೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಗೂ ಅವರು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳುತ್ತಾರೆ.

ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿದ್ರೆ, ಸಿಕ್ಕಾಪಟ್ಟೆ ಕಾಳಜಿ ವಹಿಸಿದ್ರೆ ಅವರಲ್ಲಿ ಈ ಗುಣಗಳು ಬೆಳೆಯೋದೇ ಇಲ್ಲ. ಹೀಗಾಗಿ ಅವರ ಪ್ರತಿಭೆಯನ್ನು ಹೊರ ತರೋದಕ್ಕೆ ನೀವು ಅವಕಾಶ ಕೊಟ್ಟಾಗ ಮಾತ್ರ ಮಕ್ಕಳಲ್ಲಿ ಎಲ್ಲಾ ರೀತಿಯ ಕೌಶಲ್ಯಗಳು ವೃದ್ಧಿಯಾಗೋದಕ್ಕೆ ಸಾಧ್ಯ. ಹೀಗಾಗಿ ಕೆಲವೊಂದು ಸಲ ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡದೇ ಇರೋದೇ ಒಳ್ಳೆಯದು.

4. ಕಲಿಕಾ ಸಾಮರ್ಥ್ಯ ಹೆಚ್ಚಾಗುತ್ತದೆ
ಮಕ್ಕಳನ್ನು ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡೋದು ಮಕ್ಕಳಿಗೆ ಎಲ್ಲವನ್ನೂ ಕಲಿಯೋದಕ್ಕೆ ಪಾಸ್‌ ಕೊಟ್ಟ ಹಾಗೆ. ಕೆಲವೊಂದು ಸಲ ಮಕ್ಕಳ ಬಗ್ಗೆ ಅತಿಯಾಗಿ ಕಾಳಜಿ ಮಾಡದೇ ಸೋಮಾರಿತನದಿಂದ ಸಾಕಿದರೆ ಒಳ್ಳೆಯದು. ಯಾಕಂದ್ರೆ ಆಗ ನಿಮ್ಮ ಮಗು ಒಂದು ವಿಚಾರವನ್ನು ತನ್ನದೇ ಆದ ದೃಷ್ಟಿಕೋನದಲ್ಲಿ ನೋಡೋದಕ್ಕೆ ಶುರು ಮಾಡುತ್ತದೆ. ಅದರ ಬಗ್ಗೆ ಆಲೋಚನೆ ಮಾಡುತ್ತದೆ. ಇದು ಅವರ ಭವಿಷ್ಯದ ಬೆಳವಣಿಗೆಗೆ ಸಹಾಯವಾಗುತ್ತದೆ.

5. ಜವಾಬ್ದಾರಿ
ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುವವರು ಮಕ್ಕಳನ್ನು ತಲೆಯಲ್ಲಿ ಹೊತ್ತು ಮೆರೆಸುತ್ತಾರೆ. ಹೀಗಾಗಿ ಅವರಿಗೆ ಒಂದು ಕೆಲಸವನ್ನೂ ಮಾಡೋದಕ್ಕೆ ಬರೋದಿಲ್ಲ. ಯಾರು ಮಕ್ಕಳ ಕೈಯಿಂದ ಸಣ್ಣ ಪುಟ್ಟ ಕೆಲಸವನ್ನು ಮಾಡಿಸುತ್ತಾರೋ ಇದು ಅವರ ಭವಿಷ್ಯದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು. ಮನೆ ಕೆಲಸಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಮನೆಯಲ್ಲಿ ಯಾರೂ ಇಲ್ಲದೇ ಇರೋ ಸಂದರ್ಭದಲ್ಲಿ ಮನೆಯನ್ನು ನಿಭಾಯಿಸಿಕೊಂಡು ಹೋಗುವ ತಾಕತ್ತು ಇವರಲ್ಲಿರುತ್ತಾರೆ. ಇಂತಹ ಮಕ್ಕಳಿಗೆ ಜವಾಬ್ದಾರಿಯೂ ಇರುತ್ತದೆ.

ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಸಾಕೋದಕ್ಕಿಂತ ಈ ರೀತಿ ಸಾಕೋದು ತುಂಬಾನೇ ಒಳ್ಳೆಯದು. ಇದರಿಂದ ಮಕ್ಕಳು ಸ್ವಾತಂತ್ರವಾಗಿ ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳುತ್ತಾರೆ.

English summary

Why Lazy Parenting Could Benefit Your Kids in Kannada

These are the reason Why Lazy Parenting Could Benefit Your Kids.
Story first published: Tuesday, May 2, 2023, 17:00 [IST]
X
Desktop Bottom Promotion