ಸಹಾನುಭೂತಿ ಗುಣವಿದ್ದರೆ ಉತ್ತಮ ವ್ಯಕ್ತಿಯಾಗುತ್ತಾನೆ/ಳೆ: ಮಕ್ಕಳಲ್ಲಿ ಈ ಗುಣ ಬೆಳೆಸುವುದು ಹೇಗೆ?

ಒಂದು ಮಗು ಜನಿಸಿದರೆ ಅದನ್ನು ಉತ್ತಮ ನಾಗರಿಕನನ್ನಾಗಿ ಮಾಡುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಆ ಮಗುವನ್ನು ಯಾರು ಬೆಳೆಸುತ್ತಾರೋ, ಲಾಲನೆ ಪಾಲನೆ ಮಾಡುತ್ತಾರೋ ಅಂತವರು ಆ ಮಕ್ಕಳ ಸಂಪೂರ್ಣ ನಿಗಾವಹಿಸಬೇಕಾಗುತ್ತದೆ. ಅವರಿಗೆ ಬೇರೆಯವರೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದನ್ನ ಕಲಿಸಬೇಕಾಗುತ್ತದೆ.

ಮಕ್ಕಳು ಕಲಿಕೆಯಿಂದಲೇ ದೊಡ್ಡವರಾಗುವುದು. ದೊಡ್ಡವರಾದ ಮೇಲೆ ಅದೇ ಕಲಿಕೆ ಅವರ ಜೀವನದ ಉದ್ದಕ್ಕೂ ಉಳಿದುಕೊಳ್ಳುತ್ತದೆ. ಹಾಗಂದ ಮಾತ್ರಕ್ಕೆ ಎಲ್ಲಾ ವಿಷಯಗಳನ್ನು ಒಂದೇ ಸಲ ಯಾವ ಮಗುವಿನ ತಲೆಯಲ್ಲೂ ತುರುಕಿಸುವ ಪ್ರಯತ್ನ ಮಾಡಬಾರದು.

ಇತ್ತೀಚಿನ ದಿನಗಳಲ್ಲಿ ಇದೆ ಪರಿಪಾಠ ಆರಂಭವಾಗಿದೆ. ಒಂದೇ ಸಲ ನನ್ನ ಮಗು ಸಿಕ್ಕಾಪಟ್ಟೆ ಬುದ್ಧಿವಂತ ಆಗಬೇಕು ಈ ಜಗತ್ತಿನಲ್ಲಿ ಇರುವ ಎಲ್ಲಾ ಜ್ಞಾನವನ್ನು ಕಲಿತುಕೊಳ್ಳಬೇಕು ಎಂದು ಪಾಲಕರು ಯೋಚಿಸಲು ಆರಂಭಿಸಿದ್ದಾರೆ. ಆದರೆ ಇದು ಮಕ್ಕಳಿಗೆ ಕಲಿಸುವ ಸರಿಯಾದ ಮಾರ್ಗವಲ್ಲ. ಮಕ್ಕಳಿಗೆ ಬೇರೆಯವರಿಗೆ ಗೌರವ ಕೊಡುವುದು ಸಹಾನುಭೂತಿ, ಸಹನೆ ಇವುಗಳನ್ನೆಲ್ಲ ಕಲಿಸುವುದು ಹೇಗೆ?

Teach Kids Empath

ಮಕ್ಕಳಿಗೆ ಅರ್ಥವಾಗುವಂತೆ ಹೇಳುವುದು!
ಮಗುವಿಗೆ ಏನೋ ಒಂದು ವಿಷಯವನ್ನು ತಿಳಿಸಬೇಕು ಎನ್ನುವ ಕಾರಣಕ್ಕೆ ಆ ವಿಷಯದ ಬಗ್ಗೆ ಹೇಳುವುದಲ್ಲ ಆ ವಿಷಯವನ್ನು ಯಾಕೆ ಹೇಳುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಸಬೇಕು ಚಿಕ್ಕವಯಸ್ಸಿನಲ್ಲಿ ನೀವು ಅರ್ಥ ಮಾಡಿಸಿರುವ ವಿದ್ಯೆ ಇರಬಹುದು ಅಥವಾ ಯಾವುದೇ ವಿಷಯ ಇರಬಹುದು ಆ ಮಗು ಬೆಳೆದು ದೊಡ್ಡವನಾದ ಮೇಲೆ ಕೂಡ ಅದು ತಲೆಯಲ್ಲಿ ಉಳಿದುಕೊಳ್ಳುತ್ತದೆ. ಉದಾಹರಣೆಗೆ ದೊಡ್ಡವರಿಗೆ ಗೌರವ ಕೊಡುವ ವಿಚಾರವನ್ನೇ ತೆಗೆದುಕೊಳ್ಳೋಣ. ಅವರಿಗೆ ಗೌರವ ಕೊಡಬೇಕು ಅವರ ಬಗ್ಗೆ ಪ್ರೀತಿ ಅನುಕಂಪ ಸಹಾನುಭೂತಿ ಬೆಳೆಸಿಕೊಳ್ಳಬೇಕು ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಧ್ಯವಲ್ಲ ಅದನ್ನ ಹೇಗೆ ಮಾಡಬೇಕು ಎಂಬುದನ್ನ ತೋರಿಸಬೇಕು.

ನೀವೇ ಅಳವಡಿಸಿಕೊಳ್ಳಿ!
ದೊಡ್ಡವರು ಮಾಡುವ ಬಹಳ ದೊಡ್ಡ ತಪ್ಪು ಇದು. ಕೇವಲ ಮಾತಿನಲ್ಲಿ ಇದನ್ನು ಮಾಡಬಾರದು ಅದನ್ನು ಮಾಡಬಾರದು ಎಂದು ಹೇಳುತ್ತೇವೆ ಅಷ್ಟೇ. ಆದರೆ ಅದೇ ತಪ್ಪನ್ನು ನಾವು ಮಾಡುತ್ತೇವೆ ಉದಾಹರಣೆಗೆ ಮೊಬೈಲ್ ಬಳಸಬಾರದು ಎಂದು ಮಗುವಿಗೆ ಬಾಯಿ ಮಾತಿನಲ್ಲಿ ಹೇಳಿದರು ಆ ಮಗುವಿನ ಎದುರಿನಲ್ಲಿ ನಾವೇ ಪುರುಸೊತ್ತಿದ್ದಾಗಿಲ್ಲ ಮೊಬೈಲ್ ಹಿಡಿದುಕೊಂಡು ಕುರುತ್ತೇವೆ. ಮಗು ನಾವು ಹೇಳಿದ್ದನ್ನ ಕೇಳಿ ಕಲಿಯುವುದಿಲ್ಲ ನಾವು ಏನು ಮಾಡುತ್ತೇವೋ ಅದನ್ನು ನೋಡಿ ಕಲಿಯುತ್ತದೆ. ಹಾಗಾಗಿ ದೊಡ್ಡವರಿಗೆ ಗೌರವ ಕೊಡು ಎಂದು ಮಕ್ಕಳಿಗೆ ಹೇಳುವುದು ಮಾತ್ರವಲ್ಲ ಅದನ್ನ ನಾವು ಕೂಡ ಅನುಸರಿಸಬೇಕು ಆಗ ನಮ್ಮನ್ನ ನೋಡಿ ಆ ಮಗು ಸುಲಭವಾಗಿ ಕಲಿಯುತ್ತದೆ.

ಕಥೆ ಹೇಳುವುದು!
ಇಂದಿನ ಡಿಜಿಟಲ್ ಯುಗದಲ್ಲಿ ಟಿವಿ, ಮೊಬೈಲ್ ಮೊದಲಾದ ಡಿವೈಸ್ಗಳನ್ನು ಬಳಸುತ್ತೇವೆ ಹೊರತು ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುವ ಅಭ್ಯಾಸ ನಿಂತೆ ಹೋಗಿದೆ. ಆದರೆ ಮಕ್ಕಳಿಗೆ ದಯೆ ಸಹಾನುಭೂತಿ ಮೊದಲಾದವುಗಳನ್ನು ಒಳಗೊಂಡ ನೀತಿ ಪಾಠಗಳನ್ನು ಮಾಡಬೇಕು ಸುಂದರವಾಗಿರುವ ಪ್ರಾಣಿ ಪಕ್ಷಿಗಳ ಪುಸ್ತಕದಲ್ಲಿ ಇರುವ ಕಥೆಗಳನ್ನು ಹೇಳಬೇಕು ಮಗು ಕೂಡ ಅದೇ ರೀತಿ ಕಲ್ಪನೆ ಮಾಡಿಕೊಂಡು ಎದುರಿಗೆ ಇರುವವರ ಜೊತೆಗೆ ಪ್ರೀತಿಯಿಂದ ದಯೆಯಿಂದ ನಡೆದುಕೊಂಡರೆ ಎಷ್ಟು ಒಳ್ಳೆಯದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗುತ್ತದೆ. ಹಂತ ಹಂತವಾಗಿ ನಿಮ್ಮ ಮಗುವಿಗೆ ರಾಮಾಯಣ ಮಹಾಭಾರತದಲ್ಲಿ ಬರುವ ಸಣ್ಣ ಸಣ್ಣ ಕಥೆಗಳನ್ನು ಹೇಳಿ ಜೊತೆಗೆ ಅದರ ಕೊನೆಯಲ್ಲಿ ನೀತಿಯನ್ನು ಹೇಳಿದಾಗ ಮಕ್ಕಳಿಗೆ ತಪ್ಪು ಸರಿಗಳ ಅರ್ಥವಾಗುತ್ತದೆ.

ಮುಕ್ತವಾಗಿ ಮಾತನಾಡುವುದು!
ಮಕ್ಕಳ ಬಳಿ ನಾವು ಯಾವುದೇ ರೀತಿಯ ಗುಟ್ಟನ್ನು ಮಾಡಬಾರದು ಹಾನಿಯಾಗುವಂತಹ ವಿಚಾರಗಳನ್ನು ಹೊರತುಪಡಿಸಿ ದೈನಂದಿನ ಜೀವನದಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ಮುಕ್ತವಾಗಿ ತಿಳಿಸಬೇಕು ನಿಮ್ಮ ಜೀವನದಲ್ಲಿ ನಡೆಯುವ ವಿಷಯಗಳನ್ನು ಕೂಡ ಮುಕ್ತವಾಗಿ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಆಗ ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತನೆ ಮಾಡಬೇಕು ಎಂಬುದನ್ನ ಮಗು ಅರ್ಥ ಮಾಡಿಕೊಳ್ಳುತ್ತಾ ಹೋಗುತ್ತದೆ.

ಹೊರ ಪ್ರಪಂಚ ತೋರಿಸಿ!
ಇತ್ತೀಚಿಗೆ ಮಕ್ಕಳನ್ನು ಹೆಚ್ಚಾಗಿ ಅತಿಯಾದ ಪ್ರೀತಿಯಿಂದ ಬೆಳೆಸುವ ಪಾಲಕರೇ ಹೆಚ್ಚು. ಪ್ರತಿದಿನ ಶಾಲೆಗೆ ಕಳುಹಿಸುವುದು ನಂತರ ಇತರ ಪಠ್ಯೇತರ ಚಟುವಟಿಕೆ ತರಗತಿಗಳಿಗೆ ಕಳುಹಿಸುವುದು. ಇದನ್ನು ಹೊರತುಪಡಿಸಿ ಸಾಮಾನ್ಯ ಜೀವನ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ತೋರಿಸುವುದಿಲ್ಲ. ಆಗ ಬೇರೆಯವರ ಜೀವನ ಹೇಗಿರಬಹುದು ಎನ್ನುವ ಕಲ್ಪನೆಯ ಮಕ್ಕಳಿಗೆ ಉಂಟಾಗುವುದಿಲ್ಲ. ಅದರ ಬದಲು ಮಕ್ಕಳನ್ನು ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಕರೆದುಕೊಂಡು ಹೋಗಿ ಅಲ್ಲಿನವರ ಪರಿಸ್ಥಿತಿಯನ್ನು ಅರ್ಥ ಮಾಡಿಸಬೇಕು ಅವರ ಮೇಲೆ ಸಹಾನುಭೂತಿ ತೋರಿಸುವುದೂ ಎಷ್ಟು ಮುಖ್ಯ ಎಂಬುದನ್ನ ತಿಳಿಸಬೇಕು. ಮಗು ಹುಟ್ಟಿದ ನಂತರ ಪ್ರತಿ ಬರ್ತಡೆಯನ್ನು ಕೂಡ ಬಹಳ ಗ್ರಾಂಡ್ ಆಗಿ ಆಚರಿಸುವವರು ಇದ್ದಾರೆ. ಇದರ ಜೊತೆಗೆ ಬಡವರಿಗೆ ಸಹಾಯ ಮಾಡುವ ಬುದ್ಧಿಯನ್ನು ಕೂಡ ಮಕ್ಕಳಿಗೆ ಈ ಸಂದರ್ಭದಲ್ಲಿ ಕಲಿಸಿದರೆ ಅದು ಜೀವನ ಪರ್ಯಂತ ಮಕ್ಕಳ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ ಹಾಗೂ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಮುಂದೆ ಸಾಗಬಹುದು.

ಧನ್ಯವಾದ ಹೇಳುವ ಅಭ್ಯಾಸ ಮಾಡಿಸಿ!
ಯಾರಿಂದನಾದರೂ ಸಣ್ಣ ಸಹಾಯವನ್ನು ಪಡೆದುಕೊಂಡರು ಸರಿ ಅವರಿಗೆ ಧನ್ಯವಾದ ತಿಳಿಸಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು ನಾವು ಯಾರಿಗಾದರೂ ಚಿಕ್ಕಪುಟ್ಟ ವಿಷಯಗಳಿಗೆ ಥ್ಯಾಂಕ್ಸ್ ಹೇಳಿದರೆ ಮಕ್ಕಳು ಕೂಡ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸಾರಿ ಕೇಳುವ ಅಭ್ಯಾಸವು ಬಹಳ ಒಳ್ಳೆಯದು ತಪ್ಪು ಮಾಡಿದಾಗ ಇನ್ನೊಬ್ಬರ ಬಳಿಯಲ್ಲಿ ಕ್ಷಮೆ ಕೇಳುವುದು ತಪ್ಪಲ್ಲ ಹಾಗಾಗಿ ಮಕ್ಕಳಿಗೂ ಕೂಡ ಇದನ್ನ ಅಭ್ಯಾಸ ಮಾಡಿಸಿ.

ಮನೆಯಲ್ಲಿ ಚಟುವಟಿಕೆ ಮಾಡಿಸಿ!
ಒಬ್ಬ ವ್ಯಕ್ತಿಗೆ ಯಾವ ರೀತಿ ಗೌರವ ಕೊಡಬೇಕು ಅಥವಾ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಲು ಮನೆಯಲ್ಲಿಯೇ ಸಣ್ಣ ಪುಟ್ಟ ಚಟುವಟಿಕೆಗಳನ್ನು ಮಾಡಿಸಿ. ನಿಮ್ಮದೇ ಆದ ರೀತಿಯಲ್ಲಿ ಕಥೆಯನ್ನು ಹೆಣೆದು ಅದನ್ನ ಆಕ್ಟಿಂಗ್ ಮಾಡುವುದರ ಮೂಲಕ ಮಕ್ಕಳಿಗೆ ಅರ್ಥ ಮಾಡಿಸಿ. ಹೀಗೆ ಪಾಲಕರು ತೆಗೆದುಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳು ಕೂಡ ಮಕ್ಕಳ ಮೇಲೆ ಬಹುವಾಗಿ ಪರಿಣಾಮ ಬೀರುತ್ತದೆ ಹಾಗಾಗಿ ನಿಮ್ಮ ಮಕ್ಕಳ ಜೀವನವನ್ನು ಸುಂದರವಾಗಿ ರೂಪಿಸುವುದು ನಿಮ್ಮ ಕೈಯಲ್ಲೇ ಇದೆ.

English summary

Ways To Teach Kids Empathy Kindness Towards Others In Kannada

Ways To Teach Kids Empathy Kindness Towards Others, read on....
X
Desktop Bottom Promotion