Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಗರ್ಭಾವಸ್ಥೆಯಲ್ಲಿ ಮೂತ್ರದ ಬಣ್ಣ ಬದಲಾವಣೆ: ನೀವು ತಿಳಿಯಲೇಬೇಕಾಗಿರುವ ಸಂಗತಿಗಳಿವು
ಗರ್ಭವತಿಯಾದ ಬಳಿಕ ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಮೂತ್ರದ ಬಣ್ಣ ಬದಲಾಗುತ್ತಾ ಹೋಗುತ್ತಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ಬಣ್ಣ ತಿಳಿ ಹಳದಿ ಬಣ್ಣದಲ್ಲಿರಬೇಕಾಗಿದ್ದು ನಂತರ ಗಾಢ ಹಳದಿ ಬಣ್ಣ ಪಡೆಯುತ್ತದೆ. ಕೊಂಚ ಗಾಢ ಬಣ್ಣ ಗರ್ಭಾವಸ್ಥೆಯಲ್ಲಿ ಸಹಜವೇ ಹೌದು ಹಾಗೂ ಗರ್ಭಾವಸ್ಥೆಯ ಅಂತಿಮ ಹಂತದಲ್ಲಿ ಹೆಚ್ಚು ಹೆಚ್ಚು ಗಾಢವಾಗುತ್ತಾ ಹೋಗುತ್ತದೆ. ಆದರೆ ಈ ಬಣ್ಣ ಗರ್ಭಾವಸ್ಥೆಯಲ್ಲಿ ಎದುರಾಗುವ ಕೆಲವು ತೊಂದರೆಗಳ ಸೂಚನೆಯೂ ಆಗಿರಬಹುದು. ಹಾಗಾಗಿ, ಒಂದು ವೇಳೆ ಅಗತ್ಯಕ್ಕಿಂತಲೂ ಹೆಚ್ಚೇ ಗಾಢವಾಗಿದ್ದರೆ ಈ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವುದು ಅವಶ್ಯ. ಏಕೆಂದರೆ ಮೂತ್ರದ ಬಣ್ಣದ ಬದಲಾವಣೆಗೆ ಕೆಲವಾರು ಸಂಗತಿಗಳು ಜೊತೆಯಾಗಿ ಕಾರಣವಾಗಿರಬಹುದು.

ಗರ್ಭಾವಸ್ಥೆಯಲ್ಲಿ ಮೂತ್ರದ ಬಣ್ಣ ಬದಲಾಗುತ್ತದೆಯೇ?
ಆರೋಗ್ಯವಂತ ವ್ಯಕ್ತಿಯ ಮೂತ್ರದ ಬಣ್ಣ ತಿಳಿ ಹಳದಿ ಮತ್ತು ಪರಿಪೂರ್ಣ ಪಾರದರ್ಶಕ - ಇವೆರಡರ ನಡುವೆ ಇರಬೇಕು. ಹೆಚ್ಚು ಹೊತ್ತು ಮೂತ್ರ ವಿಸರ್ಜನೆಯನ್ನು ತಡೆದುಕೊಂಡಷ್ಟೂ ಮೂತ್ರದ ಸಾಂದ್ರತೆ ಹೆಚ್ಚುತ್ತಾ ಹೆಚ್ಚು ಹೆಚ್ಚು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಇತರ ದಿನಗಳಿಗಿಂತ ಹೆಚ್ಚೇ ಗಾಢವಾಗಿರುತ್ತದೆ. ಸಾಮಾನ್ಯವಾಗಿ ಸ್ಪಷ್ಟ ಹಳದಿ ಬಣ್ಣದಿಂದ ಹೆಚ್ಚು ಅರಿಶಿನ ಬಣ್ಣಕ್ಕಿದ್ದು ದಿನಗಳೆದಂತೆ ಕಿತ್ತಳೆ ಬಣ್ಣ ಪಡೆಯುತ್ತಾ ಹೋಗುತ್ತದೆ.
ಮೂತ್ರವು ಹಳದಿ ಬಣ್ಣದಲ್ಲಿರಲು ಮುಖ್ಯ ಕಾರಣ ಇದರಲ್ಲಿರುವ ಯೂರೋಕ್ರೋಮ್ ಎಂಬ ವರ್ಣದ್ರವ್ಯವಾಗಿದೆ. ಇದಕ್ಕೆ ಯೂರೋಬಿಲಿನ್ ಎಂದೂ ಕರೆಯುತ್ತಾರೆ. ನಮ್ಮ ರಕ್ತದ ಕೆಂಪು ರಕ್ತಕಣಗಳ ಆಯಸ್ಸು ಕಳೆದುಕೊಂಡಾಗ ಇವುಗಳಿಂದ ದೇಹ ಹೀಮೋಗ್ಲೋಬಿನ್ ಅನ್ನು ವಾಪಸ್ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಯೂರೋಗ್ಲೋಬಿನ್ ಉತ್ಪತ್ತಿಯಾಗುತ್ತದೆ. ಇದೊಂದು ದೇಹದಿಂದ ವಿಸರ್ಜಿಸಬೇಕಾದ ಅಂಶವಾದುದರಿಂದ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ.
ದೇಹದಲ್ಲಿ ನಿರ್ಜಲೀಕರಣ ಎದುರಾದಾಗ, ಮೂತ್ರದ ಸಂಗ್ರಹವೂ ತಗ್ಗುತ್ತದೆ ಆದರೆ ಸಾಂದ್ರತೆ ಹೆಚ್ಚುವ ಕಾರಣ ಹಳದಿ ಬಣ್ಣ ಗಾಢಾವಾಗುತ್ತದೆ, ಅಂತೆಯೇ ಸಾಕಷ್ಟು ನೀರಿನ ಸಂಗ್ರಹವಿದ್ದಾಗ ಹೆಚ್ಚು ಮೂತ್ರ ಸಂಗ್ರಹವಾಗುತ್ತದೆ. ಹೆಚ್ಚಿನ ಮೂತ್ರ ಸಂಗ್ರಹವಾದಾಗ ಮೂತ್ರದ ಬಣ್ಣ ತಿಳಿಯಾಗಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಹಲವಾರು ಅಂಶಗಳು ಮೂತ್ರದ ಬಣ್ಣವನ್ನು ನಿರ್ಧರಿಸುತ್ತವೆ. ಗರ್ಭಾವಸ್ಥೆಯಲ್ಲಿ ಮೂತ್ರಪಿಂಡಗಳು ಕಾರ್ಯನಿರ್ವಹಿಸುವ ಕ್ರಮವೂ ಬದಲಾಗುತ್ತದೆ ಹಾಗೂ ಈ ಸಮಯದಲ್ಲಿ ಸೇವಿಸುವ ಅಹಾರಗಳು, ಹೆಚ್ಚುವರಿ ವಿಟಮಿನ್ ಗಳು ಹಾಗೂ ಸೇವಿಸಲು ನೀಡಲಾಗುವ ಔಷಧಿಗಳು ಎಲ್ಲವೂ ಈ ಬಣ್ಣದಲ್ಲಿ ಬದಲಾವಣೆಗೆ ಗಮನಾರ್ಹ ಪ್ರಭಾವ ಬೀರುತ್ತವೆ.
ಗರ್ಭಾವಸ್ಥೆಯಲ್ಲಿ ಮೂತ್ರದ ಬಣ್ಣ ಬದಲಾಗುವುದೇಕೆ?
ಸಹಜ ಕಾರಣಕ್ಕೂ ಹೊರತಾಗಿ ಮೂತ್ರದ ಬಣ್ಣ ಬದಲಾಗಲು ಈ ಕೆಳಗಿನವು ಪ್ರಮುಖ ಕಾರಣಗಳಾಗಿವೆ:

1. ಗರ್ಭವತಿ ಸೇವಿಸುವ ಆಹಾರ
ಗರ್ಭಾವಸ್ಥೆಯಲ್ಲಿ ಆಹಾರಕ್ರಮ ಸಂಪೂರ್ಣ ವಿರುದ್ಧ ದಿಕ್ಕಿಗೆ ತಿರುಗುತ್ತದೆ. ನೀವು ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ನೀಡತೊಡಗುತ್ತೀರಿ. ನಿಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಹಣ್ಣು ಮತ್ತು ತರಕಾರಿಗಳು ಒಳಗೊಳ್ಳುತ್ತವೆ. ಹಾಲಿನ ಉತ್ಪನ್ನಗಳು ಮತ್ತು ಇತರ ಆರೋಗ್ಯಕರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ತನ್ಮೂಲಕ ಮೂತ್ರದ ಬಣ್ಣವೂ ಕೊಂಚ ಬದಲಾಗುತ್ತದೆ.

2. ವಿಟಮಿನ್ ಮತ್ತು ಇತರ ಔಷಧಿಗಳು
ಗರ್ಭಾವಸ್ಥೆಯಲ್ಲಿ ಹೆಚ್ಚಿನವರಿಗೆ ವೈದ್ಯರು ಹೆಚ್ಚುವರಿ ವಿಟಮಿನ್ ಗುಳಿಗೆಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಹಲವಾರು ಕಾರ್ಯಗಳು ನಡೆಯುತ್ತಿರುತ್ತದೆ ಹಾಗೂ ಈ ಸಮಯದಲ್ಲಿ ಹೆಚ್ಚುವರಿ ವಿಟಮಿನ್ ನ ಬಹುತೇಕ ಅಂಶವನ್ನು ಬಳಸಿಕೊಳ್ಳಲಾರದೇ ಹೋಗುತ್ತದೆ. ಹೀಗೆ ಬಳಸಿಕೊಳ್ಳಲಾಗದ ವಿಟಮಿನ್ ಮತ್ತು ಇತರ ಹೆಚ್ಚುವರಿ ಪೋಷಕಾಂಶಗಳು ಮೂತ್ರದ ಮೂಲಕ ವಿಸರ್ಜಿಲ್ಪಡುತ್ತವೆ. ತನ್ಮೂಲಕ ಮೂತ್ರದ ಬಣ್ಣ ಗಾಢವಾಗುತ್ತದೆ.

3. ನಿರ್ಜಲೀಕರಣ
ಗರ್ಭಾವಸ್ಥೆಯಲ್ಲಿ ಸೇವಿಸುವ ನೀರಿನ ಪ್ರಮಾಣವೂ ಮೂತ್ರದ ಬಣ್ಣವನ್ನು ನಿರ್ಧರಿಸುತ್ತದೆ. ಹೆಚ್ಚಿನ ಗರ್ಭವತಿಯರು ಸಾಕಷ್ಟು ನೀರು ಕುಡಿದರೂ ನಿರ್ಜಲೀಕರಣದ ಅನುಭವವನ್ನು ಪಡೆಯುತ್ತಾರೆ. ನೀರು ಕುಡಿಯದೇ ನಿರ್ಜಲೀಕರಣಕ್ಕೆ ಒಳಗಾಗುವುದು ಸಹಜವಾದರೆ, ಸಾಕಷ್ಟು ನೀರು ಕುಡಿದರೂ ನಿರ್ಜಲೀಕರಣ ಎದುರಾಗಲು hyperemesis gravidarum ಎಂಬ ಸ್ಥಿತಿಗೆ ಕಾರಣವಾಗಿದೆ. ಈ ಸ್ಥಿತಿ ಎದುರಾದರೆ ಭಾರೀ ಮಟ್ಟದ ಮುಂಜಾನೆಯ ವಾಕರಿಕೆ, ತಲೆಸುತ್ತುವಿಕೆ ಹಾಗೂ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಸುಮಾರು ಶೇಕಡಾ ಒಂದರಷ್ಟು ಗರ್ಭವತಿಯರಲ್ಲಿ ದಈ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯಿಂದ ವಾಂತಿ ಹೆಚ್ಚುವ ಕಾರಣದಿಂದಲೂ ನಿರ್ಜಲೀಕರಣ ಎದುರಾಗುತ್ತದೆ. ಒಂದು ವೇಳೆ ನಿರ್ಜಲೀಕರಣದ ಕಾರಣವಿಲ್ಲದೆಯೂ ಮೂತ್ರದ ಬಣ್ಣ ಗಾಢವಾಗಿದ್ದರೆ ಇದಕ್ಕೆ ಯಕೃತ್ ನ ತೊಂದರೆ ಕಾರಣವಾಗಿರಬಹುದು. ಹಾಗಾಗಿ ವೈದ್ಯರಿಂದ ಸಲಹೆ ಪಡೆಯುವುದು ಅಗತ್ಯವಾಗಿದೆ.

4. ಮೂತ್ರನಾಳದಲ್ಲಿ ಸೋಂಕು (UTI)
ಮೂತ್ರಕೋಶದಿಂದ ಮೂತ್ರವನ್ನು ಹೊರಹಾಕುವ ನಾಳವಾದ ಮೂತ್ರನಾಳದಲ್ಲಿ ಸೋಂಕು ಎದುರಾದರೂ ಇದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಸೋಂಕನ್ನು ಸರ್ವಥಾ ನಿರ್ಲಕ್ಷಿಸಕೂಡದು. ಏಕೆಂದರೆ ಇದರಿಂದ ಅವಧಿಪೂರ್ವ ಪ್ರಸವ, ಕಡಿಮೆ ತೂಕದ ಮಗು ಹುಟ್ಟುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಈ ಸೋಂಕು ಇರುವ ಗರ್ಭವತಿಯರ ಮೂತ್ರದ ಬಣ್ಣ ಪ್ರಖರ ಹಳದಿ ಬಣ್ಣದಲ್ಲಿದ್ದು ಮೂತ್ರಕ್ಕೆ ಅವಸರವಾಗುವುದು ಸತತವಾಗಿರುತ್ತದೆ. ಅಲ್ಲದೇ ಕೆಳಹೊಟ್ಟೆಯಲ್ಲಿ ನೋವು ಹಾಗೂ ಕೆಲವೊಮ್ಮೆ ಮೂತ್ರದಲ್ಲಿ ರಕ್ತದ ಅಂಶವೂ ಕಾಣಿಸಿಕೊಳ್ಳಬಹುದು.

5. ಹೆಮಟ್ಯೂರಿಯಾ
ಮೂತ್ರದಲ್ಲಿ ರಕ್ತದ ಅಂಶದ ಇರುವಿಕೆಗೆ ಹೆಮಟ್ಯೂರಿಯಾ ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿ ಅಗತ್ಯಕ್ಕೂ ಹೆಚ್ಚಿರುವ ಕೆಂಪುರಕ್ತಕಣಗಳನ್ನು ಮೂತ್ರದ ಮೂಲಕ ದೇಹ ವಿಸರ್ಜಿಸುತ್ತದೆ. ಆದರೆ ಈ ಪ್ರಮಾಣ ಅತಿಯಾಗಿದ್ದರೆ ಇದರಿಂದ ಮೂತ್ರದ ಬಣ್ಣ ಕೆಂಪು ಬಣ್ಣ ಮಿಶ್ರಿತಗೊಂಡಿರುವಂತೆ ಕಾಣಿಸುತ್ತದೆ.

6. ಮೂತ್ರಕೋಶದಲ್ಲಿ ಸೋಂಕು
ಇದು ಸಹಾ ಮೂತ್ರನಾಳದ ಸೋಂಕಿನಂತೆಯೇ ಕೆಲವು ಬ್ಯಾಕ್ಟೀರಿಯಾಗಳ ಸೋಂಕಿನಿಂದ ಎದುರಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ಹಲವಾರು ರಸದೂತಗಳ ಪ್ರಭಾವಕ್ಕೆ ಒಳಗಾಗುತ್ತದೆ. ಇತರ ಸಮಯಕ್ಕಿಂತ ಈ ಸಮಯದಲ್ಲಿ ಮೂತ್ರಕೋಶ ಹೆಚ್ಚಿನ ಭಾರವನ್ನು ಹೊರಬೇಕಾಗಿ ಬರುವ ಕಾರಣ ಕೊಂಚ ಉಬ್ಬಿರುತ್ತದೆ. ಈ ಉಬ್ಬುವಿಕೆಯಿಂದ ಮೂತ್ರಕೋಶದ ಗೋಡೆಗಳು ಕೊಂಚವೇ ಶಿಥಿಲಗೊಳ್ಳುತ್ತವೆ ಹಾಗೂ ಸೋಂಕು ತಗಲುವುದು ಸುಲಭವಾಗುತ್ತದೆ. ಪರಿಣಾಮವಾಗಿ ಮೂತ್ರದ ಬಣ್ಣವೂ ಬದಲಾಗುತ್ತದೆ.

7. ಮೂತ್ರಪಿಂಡದ ಕಾಯಿಲೆಗಳು
ನಮ್ಮ ದೇಹದ ರಕ್ತವನ್ನು ಸೋಸಿ ಶುದ್ದೀಕರಿಸುವ ಕೆಲಸವನ್ನು ಮೂತ್ರಪಿಂಡಗಳು ಮಾಡುತ್ತವೆ. ಗರ್ಭಾವಸ್ಥೆಯ ಸಹಿತ ಯಾವುದೇ ದಿನಗಳಲ್ಲಿ ಮೂತ್ರಪಿಂಡಗಳಿಗೆ ಎದುರಾದ ತೊಂದರೆಯನ್ನು ಮೂತ್ರದ ಬಣ್ಣ ಬದಲಾಗಿರುವ ಮೂಲಕ ಗುರುತಿಸಬಹುದು. ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿದ್ದರೆ ಇವು ಸಾಮಾನ್ಯ ಕಾರ್ಯನಿರ್ವಹಣೆಯನ್ನೇ ಉಡುಗಿಸುತ್ತವೆ. ಅಸಾಧ್ಯ ನೋವು, ವಾಕರಿಕೆ ಮತ್ತು ವಾಂತಿ ಎದುರಾಗುವ ಸಹಿತ ಮೂತ್ರದ ಬಣ್ಣವೂ ಬದಲಾಗುತ್ತದೆ. ಈ ತೊಂದರೆ ಗರ್ಭಾವಸ್ಥೆಯ ಸಹಿತ ಇತರ ದಿನಗಳಲ್ಲಿಯೂ ಎದುರಾಗಬಹುದು.

ಗರ್ಭಾವಸ್ಥೆಯಲ್ಲಿ ನಡೆಸಬೇಕಾದ ಮೂತ್ರಪರೀಕ್ಷೆ
ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಮೂತ್ರಪರೀಕ್ಷೆಯನ್ನು ನಡೆಸಬೇಕಾಗಿರುವುದು ಅಗತ್ಯವಾಗಿದೆ ಹಾಗೂ ಇದರಿಂದ ವೈದ್ಯರಿಗೆ ಅಮೂಲ್ಯ ಮಾಹಿತಿ ಹಾಗೂ ಆರೊಗ್ಯದ ಸ್ಥಿತಿಯ ಬಗ್ಗೆ ವಿವರ ದೊರಕುತ್ತದೆ. ಯೂರಿನಲಾಸಿಸ್ ಎಂಬ ಪರೀಕ್ಷೆಯ ವರದಿಗಳನ್ನು ನೋಡಿದ ವೈದ್ಯರಿಗೆ ಯಾವ ತೊಂದರೆಗಳು ಇವೆ ಮತ್ತು ಯಾವ ಚಿಕಿತ್ಸೆ ನೀಡಬೇಕೆಂಬುದನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ. ಈ ಪರೀಕ್ಷೆಯಿಂದ ಮೂತ್ರ ಕೋಶ ಅಥವಾ ಮೂತ್ರನಾಳದ ಸೋಂಕು, ಮೂತ್ರಪಿಂಡದ ತೊಂದರೆಗಳು, ಮಧುಮೇಹ ಅಥವಾ ಗರ್ಭವಸ್ಥೆಯ ಮಧುಮೇಹ (gestational diabetes) ಹಾಗೂ ನಿರ್ಜಲೀಕರಣವಾಗಿರುವ ಮಾಹಿತಿ ದೊರಕುತ್ತದೆ.
ಮೂತ್ರದಲ್ಲಿ ಅತಿ ಹೆಚ್ಚು ಪ್ರೋಟೀನ್ ಇದ್ದರೆ ಇದು ಗರ್ಭಾವಸ್ಥೆಯ ಮಧುಮೇಹ (gestational diabetes)ದ ಇರುವಿಕೆಯ ಸ್ಪಷ್ಟ ಲಕ್ಷಣವಾಗಿದೆ. ಸಾಮಾನ್ಯವಾಗಿ ಈ ಸ್ಥಿತಿ ಎರಡನೆಯ ತ್ರೈಮಾಸಿಕ ಪ್ರಾರಂಭವಾಗುವ ವೇಳೆ ಕಾಣಿಸಿಕೊಳ್ಳುತ್ತದೆ. ಕೆಂಪು ಅಥವಾ ಬಿಳಿ ರಕ್ತಕಣಗಳಿದ್ದರೆ ಅಥವಾ ಕೆಲವು ಬಗೆಯ ಬ್ಯಾಕ್ಟೀರಿಯಾಗಳಿದ್ದರೆ ಇದು ಮೂತ್ರನಾಳದ ಸೋಂಕು ಆಗಿರಬಹುದು. ಹಾಗಾಗಿ ಮೂತ್ರಪರೀಕ್ಷೆಯನ್ನು ಪ್ರತಿ ಹಂತದಲ್ಲಿಯೂ ನಡೆಸುವುದು ತೀರಾ ಅಗತ್ಯ. ಒಂದು ವೇಳೆ ಮೂತ್ರವಿಸರ್ಜನೆಗೆ ಕಷ್ಟವಾಗುತ್ತಿದ್ದು ಹೆಚ್ಚಿನ ಒತ್ತಡದ ಅಗತ್ಯ ಬೀಳುತ್ತಿದ್ದರೆ ಈ ಸ್ಥಿತಿಯನ್ನು ಮುಜುಗರ ಪಡದೇ ವೈದ್ಯರಿಗೆ ಸ್ಪಷ್ಟವಾಗಿ ತಿಳಿಸಬೇಕು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು
ಮೂತ್ರದ ಬಣ್ಣದಲ್ಲಿನ ಬದಲಾವಣೆಯು ವಿಟಮಿನ್ ಸೇವನೆಯಿಂದ ನಿರ್ಜಲೀಕರಣದವರೆಗಿನ ಕೆಲವಾರು ಹೆಚ್ಚಿನ ತೊಂದರೆ ಇಲ್ಲದ ಕಾರಣಗಳ ಪರಿಣಾಮವಾಗಿರಬಹುದು, ಅವು ಕೆಲವೊಮ್ಮೆ ಹೆಚ್ಚು ತೀವ್ರವಾದ ಪರಿಸ್ಥಿತಿಗಳಿಂದಲೂ ಇದು ಉಂಟಾಗಬಹುದು. ಮೂತ್ರ ವಿಸರ್ಜಿಸುವಾಗ ಉರಿಯುವ ಸಂವೇದನೆಯು ಮೂತ್ರನಾಳದ ಸೋಂಕಿನ ಇರುವಿಕೆಯನ್ನು ಸೂಚಿಸುತ್ತದೆ. ನೀರಿನ ಸೇವನೆಯನ್ನು ಹೆಚ್ಚಿಸಿದ ಬಳಿಕವೂ ನಿಮ್ಮ ಮೂತ್ರದ ಬಣ್ಣ ಗಾಢವಾಗಿದ್ದರೆ, ಅದು ಯಕೃತ್ ಮತ್ತು ಮೂತ್ರಪಿಂಡದ ಅಸಮರ್ಪಕ ಕಾರ್ಯಗಳನ್ನು ಸೂಚಿಸುತ್ತದೆ. ನಿಮ್ಮ ಮೂತ್ರದ ಬಣ್ಣವು ಮಸುಕಾದ ಹಳದಿ ಅಥವಾ ಗಾಢವಾಗಿರುವುದನ್ನು ನೀವು ಗಮನಿಸಿದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಇತರ ಅನೇಕ ದೈಹಿಕ ಬದಲಾವಣೆಗಳಂತೆ, ಗರ್ಭಾವಸ್ಥೆಯಲ್ಲಿ ಮೂತ್ರದ ಬಣ್ಣದಲ್ಲಿನ ಬದಲಾವಣೆಯೂ ಸಾಮಾನ್ಯವಾಗಿದೆ. ನಿರ್ಜಲೀಕರಣದ ಕಾರಣ ನೀವು ಗಾಢ ಬಣ್ಣದ ಮೂತ್ರವನ್ನು ಹೊಂದಿರಬಹುದು. ಇದು ನೀವು ಹೆಚ್ಚು ನೀರು ಕುಡಿಯಬೇಕು ಎಂದು ಅದು ಸೂಚಿಸುತ್ತದೆ. ನಿಮ್ಮ ಮೂತ್ರದ ಬಣ್ಣದಲ್ಲಿನ ಬದಲಾವಣೆಯನ್ನು ನೀವು ಗಮನಿಸಿದರೆ, ಭಯಪಡಬೇಡಿ. ನೀರು ಕುಡಿಯಿರಿ ಮತ್ತು ಸಾಕಷ್ಟು ಆರ್ದ್ರತೆ ಉಳಿಸಿಕೊಳ್ಳಿ. ಆದಾಗ್ಯೂ, ಸಮಸ್ಯೆ ಮುಂದುವರಿದರೆ, ವೈದ್ಯರನ್ನು ಭೇಟಿ ಮಾಡಿ.



Click it and Unblock the Notifications











