ಈ ಶ್ರಾವಣದಲ್ಲಿ ಅಗತ್ಯವಾಗಿ ಮಾಡಲೇಬೇಕಾದ ಕಾರ್ಯಗಳಿವು!

ಶ್ರಾವಣ ಪವಿತ್ರವಾದ ಮಾಸ. ಈ ತಿಂಗಳನ್ನು ಶಿವನ ಆರಾಧನೆಗಾಗಿ ಮುಡಿಪಾಗಿ ಇಡಲಾಗುತ್ತದೆ. ಈ ಸಮಯದಲ್ಲಿ ಶಿವನನ್ನು ಪೂಜಿಸೋದ್ರಿಂದ ನಮ್ಮೆಲ್ಲಾ ಆಸೆ ಹಾಗೂ ಬಯಕೆಗಳು ನೆರವೇರುತ್ತೆ ಎನ್ನುವ ನಂಬಿಕೆಯಿದೆ. ಈ ಮಂಗಳಕರ ತಿಂಗಳಲ್ಲಿ ಉಪವಾಸ ಮತ್ತು ಆಧ್ಯಾತ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಭಕ್ತರಿಗೆ ಆಶೀರ್ವಾದ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ತರುತ್ತೆ ಎಂದು ನಂಬಲಾಗಿದೆ.

Top Things That You Must Do in Shravana 2023 in Kannada

ನಂಬಿಕೆಗಳ ಪ್ರಕಾರ ಶ್ರಾವಣದಲ್ಲಿ ಶಿವನಿಗೆ ಇಷ್ಟವಾಗುವ ಕೆಲವು ಕೆಲಸಗಳನ್ನು ಮಾಡಿದ್ರೆ ಆ ಮಹಾದೇವ ಸಂತುಷ್ಟಗೊಳ್ಳುತ್ತಾನಂತೆ. ಅಷ್ಟಕ್ಕೂ ಈ ಶ್ರಾವಣ ಮಾಸದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಅನ್ನೋದನ್ನು ತಿಳಿಯೋಣ.

ಉಪವಾಸವನ್ನು ಕಟ್ಟುನಿಟ್ಟಾಗಿ ಮಾಡಬೇಕು!

ಪವಿತ್ರವಾದ ಶ್ರಾವಣ ಮಾಸದಲ್ಲಿ ಭಕ್ತರು ಉಪವಾಸವನ್ನು ಆಚರಿಸುತ್ತಾರೆ. ವಿಶೇಷವಾಗಿ ಸೋಮವಾರದಂದು ಉಪವಾಸವನ್ನು ಆಚರಣೆ ಮಾಡೋದಕ್ಕೆ ಪ್ರಾಶಸ್ತ್ಯವಾದ ದಿನ. ಉಪವಾಸವು ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ. ಇನ್ನೂ ಶ್ರಾವಣದಲ್ಲಿ ಉಪವಾಸವನ್ನು ಆಚರಿಸುವವರು ಮಾಂಸಾಹಾರ, ಆಲ್ಕೋಹಾಲ್, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದು.

ಶ್ರಾವಣದಲ್ಲಿನ ಸಾತ್ವಿಕ ಆಹಾರವು ತಾಜಾ ಹಣ್ಣುಗಳು, ಹಾಲು, ಬೀಜಗಳು ಮತ್ತು ಸಸ್ಯಾಹಾರಿ ಊಟಗಳನ್ನು ಒಳಗೊಂಡಿರುತ್ತದೆ. ಇದ್ರಲ್ಲಿ ಅಗತ್ಯವಾದ ಪೋಷಕಾಂಶಗಳು ಇರೋದ್ರಿಂದ ಆಧ್ಯಾತ್ಮಿಕ ಉನ್ನತಿಯನ್ನು ಒದಗಿಸುತ್ತದೆ. ಇದು ಧಾನ್ಯಗಳಾದ ಅಕ್ಕಿ, ಗೋಧಿ ಮತ್ತು ರಾಗಿ ಮತ್ತು ಸಾತ್ವಿಕ ತರಕಾರಿಗಳಾದ ಪಾಲಕ, ಕ್ಯಾರೆಟ್ ಮತ್ತು ಸೌತೆಕಾಯಿಗಳನ್ನು ಒಳಗೊಂಡಿರುತ್ತದೆ.

ಶಿವನ ದೇವಾಲಯಕ್ಕೆ ಭೇಟಿ ನೀಡಿ!

ಶ್ರಾವಣ ಮಾಸದ ಸಂದರ್ಭದಲ್ಲಿ ಭಕ್ತರು ಶಿವ ದೇವಾಲಯಗಳಿಗೆ ಭೇಟಿ ನೀಡಬೇಕು. ಹಾಗೂ ವಿಶೇಷವಾದ ಪೂಜೆಯನ್ನು ಸಲ್ಲಿಕೆ ಮಾಡಬೇಕು. ಆಗ ಮಾತ್ರ ಶಿವನ ಆಶೀರ್ವಾದಕ್ಕೆ ಪಾತ್ರವಾಗೋದಕ್ಕೆ ಸಾಧ್ಯ. ಇನ್ನೂ ಈ ದೇವಾಲಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಅಭಿಷೇಕವನ್ನು ಸಮರ್ಪಣೆ ಮಾಡಬೇಕು. ಹಾಲು, ನೀರು, ಜೇನುತುಪ್ಪ ಮತ್ತು ಶ್ರೀಗಂಧದ ಹಾಗೂ ಇನ್ನಿತರ ಪವಿತ್ರ ವಸ್ತುಗಳು ಅಭಿಷೇಕದಲ್ಲಿದ್ದರೆ ಒಳ್ಳೆಯದು.

ರುದ್ರಾಕ್ಷವನ್ನು ಧರಿಸುವುದು!

ಶ್ರಾವಣದ ಸಮಯದಲ್ಲಿ ರುದ್ರಾಕ್ಷ ಮಣಿಗಳನ್ನು ಧರಿಸುವುದು ಮತ್ತು ಪೂಜಿಸುವುದರಿಂದ ಒಳ್ಳೆಯದಾಗುತ್ತಂತೆ. ರುದ್ರಾಕ್ಷಿ ಮಣಿಗಳನ್ನು ಶಿವನ ಕಣ್ಣೀರು ಅಂತ ಹೇಳಲಾಗುತ್ತದೆ. ಹೀಗಾಗಿ ಇದಕ್ಕೆ ಮಹತ್ವವನ್ನು ಕಲ್ಪಿಸಲಾಗಿದೆ. ಭಕ್ತರು ರುದ್ರಾಕ್ಷಿಯನ್ನು ಭಕ್ತಿ ಮತ್ತು ರಕ್ಷಣೆಯ ಸಂಕೇತಗಳಾಗಿ ಧರಿಸುತ್ತಾರೆ. ರುದ್ರಾಕ್ಷಿ ಮಣಿಗಳು ತಮ್ಮ ಸಕಾರಾತ್ಮಕ ಶಕ್ತಿಗೆ ಹೆಸರುವಾಸಿಯಾಗಿದೆ. ಇದು ಏಕಾಗ್ರತೆ, ಶಾಂತಿ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ.

ಶಿವನಿಗೆ ಅಭಿಷೇಕ ಸಲ್ಲಿಸಬೇಕು!

ಶ್ರಾವಣದಲ್ಲಿ ಭಕ್ತರು ಶಿವನಿಗಾಗಿ ಪವಿತ್ರ ಅಭಿಷೇಕವನ್ನು ಮಾಡುತ್ತಾರೆ. ಪ್ರಾರ್ಥನೆ ಮತ್ತು ಮಂತ್ರಗಳನ್ನು ಪಠಿಸುತ್ತಾ ಶಿವಲಿಂಗದ ಮೇಲೆ ನೀರು, ಹಾಲು, ಜೇನುತುಪ್ಪ ಮತ್ತು ಹೂವುಗಳನ್ನು ಅರ್ಪಣೆ ಮಾಡಲಾಗುತ್ತದೆ. ರುದ್ರ ಅಭಿಷೇಕವನ್ನು ಮಾಡೋದ್ರಿಂದ ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಪಡೆಯಬಹುದು.

ಮಂತ್ರ ಮತ್ತು ಸ್ತೋತ್ರಗಳನ್ನು ಪಠಿಸಿ!

ಶ್ರಾವಣ ಮಾಸದಲ್ಲಿ ಶಿವನಿಗೆ ಸಮರ್ಪಿತವಾದ ಮಂತ್ರಗಳು ಮತ್ತು ಸ್ತೋತ್ರಗಳನ್ನು ಪಠಿಸುವುದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಮಹಾ ಮೃತ್ಯುಂಜಯ ಮಂತ್ರ ಮತ್ತು ಓಂ ನಮಃ ಶಿವಾಯದಂತಹ ಶಕ್ತಿಯುತ ಮಂತ್ರಗಳು ಶಿವನನ್ನು ಒಲಿಸಿಕೊಳ್ಳುವ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಇದರಿಂದ ನಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಪ್ರಯೋಜನ ಸಿಗಲಿದೆ.

ದಾನ-ಧರ್ಮದಲ್ಲಿ ತೊಡಗಿ!

ಶ್ರಾವಣ ಮಾಸದಲ್ಲಿ ದಾನ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ಭಕ್ತರು ಆಹಾರ, ಬಟ್ಟೆ ಮತ್ತು ಹಣವನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಸ್ವಯಂಸೇವಕರಾಗಿ ಸಮುದಾಯ ಸೇವೆಯಲ್ಲಿ ತೊಡಗಬೇಕು. ಈ ನಿಸ್ವಾರ್ಥ ಸೇವೆಗಳಿಂದ ಭಗವಾನ್ ಶಿವನ ಆಶೀರ್ವಾದ ಪಡೆಯೋದಕ್ಕೆ ಸಾಧ್ಯವಾಗುತ್ತದೆ.

ಯೋಗ ಮತ್ತು ಧ್ಯಾನ ಅಭ್ಯಾಸ ಮಾಡಿ!

ಶ್ರಾವಣ ಮಾಸದಲ್ಲಿ ಧ್ಯಾನ ಮತ್ತು ಯೋಗವನ್ನು ಅತ್ಯಗತ್ಯವಾಗಿ ಮಾಡಬೇಕು. ಭಕ್ತರು ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಉತ್ತಮಗೊಳಿಸಲು ಮತ್ತು ತಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯ. ಧ್ಯಾನವು ನಮ್ಮಲ್ಲಿ ಸಾವಧಾನತೆಯನ್ನು ಬೆಳೆಸುತ್ತದೆ. ಕೇಂದ್ರೀಕೃತ ಗಮನ ಮತ್ತು ಜಾಗೃತ ಉಸಿರಾಟದ ಮೂಲಕ ಆಂತರಿಕ ಶಾಂತಿ ಮತ್ತು ಆತ್ಮಾವಲೋಕನವನ್ನು ಪಡೆಯಲು ಸಾಧ್ಯವಾಗುತ್ತದೆ.

ಶ್ರಾವಣ ಮಾಸದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಿದರೆ ಶಿವನ ಆಶೀರ್ವಾದ ಪಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

English summary

Top Things That You Must Do in Shravana 2023 in Kannada

These are the Top Things That You Must Do in Shravana 2023. Read more.
Story first published: Friday, August 18, 2023, 12:52 [IST]
X
Desktop Bottom Promotion