Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಟೈರ್ ಮಾಡಲು ಹೊರಟವರು-ಕೊನೆಗೆ 'ಚೂಯಿಂಗ್ ಗಮ್' ಮಾಡಿದರು!
ಅದು ಹದಿನೆಂಟನೆಯ ಶತಮಾನ. ಆ ಸಮಯದಲ್ಲಿ ಮೆಕ್ಸಿಕೋದ ಮಾಜಿ ಜನರಲ್ ಅಂಟೋನಿಯೋ ಡಿ ಸಂಟಾ ಅನಾ ಹದಗೆಟ್ಟ ಪರಿಸ್ಥಿತಿಯ ಕಾರಣ ಮೆಕ್ಸಿಕೋ ಬಿಟ್ಟು ಅಮೆರಿಕಾದ ಸ್ಟೇಟನ್ ಐಲ್ಯಾಂಡ್ ಗೆ ಓಡಿಹೋದ. ಹೀಗೆ ಧಿಡೀರನೆ ಬಂದ ಅಂಟೋನಿಯೋ ನ ಬಳಿ ಅಧಿಕಾರ ಮತ್ತು ಹಣ ಎರಡೂ ಇರಲಿಲ್ಲ.
ಹೇಗಾದರೂ ಮಾಡಿ ದುಡ್ಡು ಮಾಡಬೇಕು ಅಂತ ಯೋಚಿಸುತ್ತಿರುವ ಅಂಟೋನಿಯೋಗೆ ಆಗ ಕಂಡಿದ್ದೇ ಥಾಮಸ್ ಮತ್ತು ಚಿಕಲ್ (chicle). ಚಿಕಲ್ ಎಂಬುದು ರಬ್ಬರ್ ಥರ ಇರುವ ಅಂಟಂಟಾದ ಪದಾರ್ಥ. ನಾವು ಚೂಯಿಂಗ್ ಗಮ್‌ನ ರಸವನ್ನೆಲ್ಲ ಹೀರಿ ಕೊನೆಗೆ ಉಳಿಯುವ ಪದಾರ್ಥವನ್ನು ಉಗುಳುತ್ತೇವಲ್ಲ? ಅದು ಇದೇ ಚಿಕಲ್‌ನ ಇಂಪ್ರೊವ್ಡ್ ವರ್ಶನ್. ಅಂಟೋನಿಯೋ ಗೆ ಗೊತ್ತಿದ್ದ ವ್ಯಕ್ತಿಯೇ ಥಾಮಸ್ ಅಡಮ್ಸ್.

ಚಿಕಲ್ ಪದಾರ್ಥ ಮೆಕ್ಸಿಕೋದಲ್ಲಿ ಹೇರಳವಾಗಿ ಸಿಗುತ್ತಿತ್ತು. ಆ ಸಮಯದಲ್ಲಿ ಅಮೆರಿಕದಲ್ಲಿ ಅಟೋಮೊಬೈಲ್ ಉದ್ಯಮ ಶೀಘ್ರವಾಗಿ ಬೆಳವಣಿಗೆ ಕಾಣುತ್ತಿತ್ತು. ಅಡಮ್ಸ್ ನ ಜೊತೆಗೂಡಿ ಈ ಚಿಕಲ್ ನಿಂದ ಟೈರುಗಳನ್ನು ಮಾಡಿ, ಅಮೆರಿಕದ ಅಟೋಮೊಬೈಲ್ ಉದ್ದಿಮೆಗಳಿಗೆ ಪೂರೈಸಬೇಕೆಂಬುದು ಅಂಟೋನಿಯೋನ ಯೋಜನೆಯಾಗಿತ್ತು. ಅವರೇನಾದರೂ ಅದರಲ್ಲಿ ಸಫಲರಾದರೆ, ಕೋಟಿ ಕೋಟಿ ಬಾಚುವುದರಲ್ಲಿ ಸಂಶಯವಿರಲಿಲ್ಲ.
ಆದರೆ, ಹತ್ತು ಉದ್ಯೋಗಗಳಲ್ಲಿ ವಿಫಲವಾಗಿದ್ದ ಅಡಮ್ಸ್‌ಗೆ ಇದರಲ್ಲೂ ವೈಫಲ್ಯವೇ ಕಾದಿತ್ತು. ಅಂಟೋನಿಯೋ ಮೆಕ್ಸಿಕೋದಲ್ಲಿನ ತನ್ನ ಪ್ರಭಾವ ಬಳಸಿ ಮತ್ತು ಗೆಳೆಯರ ಸಹಾಯದಿಂದ ಹಾಗೂ ಹೀಗೂ ಚಿಕಲ್ ನ ಒಂದು ದೊಡ್ಡ ಕಂಸೈನ್ಮೆಂಟ್ ನ್ಯೂಯಾರ್ಕಿಗೆ ಬರುವಂತೆ ನೋಡಿಕೊಂಡ. ಅದಾದ ಎರಡು ವರ್ಷ ತಿಪ್ಪರಲಾಗ ಹಾಕಿದರೂ ಒಂದೇ ಒಂದು ಟೈರ್ ಥಾಮಸ್ ಮತ್ತು ಅಂಟೋನಿಯೋ ರಿಂದ ಮಾಡಲಾಗಲಿಲ್ಲ. ಚೂಯಿಂಗ್ ಗಮ್, ಜಗಿದು ಜಗಿದು ನುಂಗಿ ಬಿಟ್ಟಿರಿ ಜೋಕೆ!

ಅವರು ಮಾಡಿದ ಎಲ್ಲಾ ಪ್ರಯೋಗಗಳೂ ಫೇಲ್ ಆದವು. ಅಂಟೋನಿಯೋ ನಿಧಾನವಾಗಿ ಥಾಮಸ್ ಮೇಲಿನ ನಂಬಿಕೆ ಕಳೆದು ಕೊಳ್ಳತೊಡಗಿದ. ಕೊನೆಗೆ, ಇನ್ನು ಈ ಜನ್ಮದಲ್ಲಿ ಇವನಿಂದ ಟೈರ್ ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡು ಆ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟು, ಬೇರೆ ದಾರಿಯತ್ತ ಮುಖ ಮಾಡಿದ.
ಬಿದ್ದಿರುವ ಬೃಹತ್ ಚಿಕಲ್ ಗುಡ್ಡೆಯನ್ನು ಕರಗಿಸಲು ಆ ಚಿಕಲ್ ನಿಂದ ಕಡೇಪಕ್ಷ ಗೊಂಬೆ, ಮುಖವಾಡ, ಬೂಟು ಹೀಗೆ ಏನಾದರೂ ಮಾಡಬೇಕೆಂದು ಥಾಮಸ್ ತನ್ನ ಮಗ, ಟಾಮ್ ಜ್ಯು. ನೊಂದಿಗೆ ಕೂಡಿ ತುಂಬಾ ಪ್ರಯತ್ನ ಮಾಡಿದ. ಏನೇ ಮಾಡಿದರೂ ಅವನಿಂದ ಒಂದೇ ಒಂದು ಉಪಯುಕ್ತವಾದ ಪ್ರಾಡಕ್ಟ್ ತಯಾರಿಸಲು ಆಗಲಿಲ್ಲ. ಕೊನೆಗೆ ಅವನೂ ಕೈಚೆಲ್ಲಿದ. ಅವನೇನೋ ಆಸೆ ಕೈಬಿಟ್ಟ.
ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಲುವಾಗಿ ತರಿಸಿರುವ ಚಿಕಲ್ ರಾಶಿಯಲ್ಲಿ ಸ್ವಲ್ಪ ಚಿಕಲ್ ಖರ್ಚಾಗಿತ್ತಾದರೂ, ಉಪಯೋಗವಾಗದೆ ಬಿದ್ದಿರುವ ರಾಶಿಯೂ ದೊಡ್ಡದಿತ್ತು. ಅಂಟೋನಿಯೋ ಟೈರ್ ಮಾಡುತ್ತೇವೆಂಬ ವಿಶ್ವಾಸದಲ್ಲಿ ಸ್ವಲ್ಪ ಜಾಸ್ತಿಯೇ ತರಿಸಿದ್ದ. ಆದರೆ, ಈಗ ಎಲ್ಲವೂ ತಲೆಕೆಳಗಾಗಿತ್ತು.
ಅವನು ಮತ್ತವನ ಮಗ ಅದಾಗಲೇ ತಮಗೆ ಇದ್ದ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಗೊತ್ತಿರುವ ಎಲ್ಲಾ ಪ್ರಾಡಕ್ಟ್ ಮಾಡಲು ಪ್ರಯತ್ನಿಸಿ ಸೋತಿದ್ದರು. ಕೊನೆಗೊಂದು ರಾತ್ರಿ ಅದನ್ನೆಲ್ಲ ರಹಸ್ಯವಾಗಿ ನದಿಗೆ ಚೆಲ್ಲಿ ಬಿಡುವುದೆಂದು ತೀರ್ಮಾನಿಸಿ, ನಿದ್ದೆ ಹೋದರು.
ಬೆಳಿಗ್ಗೆ ಎದ್ದ ಅಡಮ್ಸ್ ಗೆ ಯಾಕೋ ತಲೆನೋವು ಬಂದಂತಾಗಿ, ಚೇಮ್ಬರ್ಸ್ ಸ್ಟ್ರೀಟ್‌ನ ಮೂಲೆಯಲ್ಲಿರುವ ಮೆಡಿಕಲ್ ಶಾಪಿಗೆ ಮಾತ್ರೆ ತೆಗೆದುಕೊಳ್ಳಲು ಹೋದ. ಅದೇ ಸಮಯಕ್ಕೆ ಒಂದು ಚಿಕ್ಕ ಹುಡುಗಿ ಬಂದು ಅಂಗಡಿಯವನಿಂದ ಚೂಯಿಂಗ್ ಗಮ್ ಕೊಂಡು ಹೋದಳು. ಅದನ್ನು ಕಂಡು ತಲೆನೋವು ಮರೆತ ಥಾಮಸ್ ಗೆ ನೆನಪಾದದ್ದು ತಾನು ನದಿಗೆ ಚೆಲ್ಲಬೇಕಾಗಿದ್ದ ಚಿಕಲ್.
ತಾನೇಕೆ ಚಿಕಲ್ ನಿಂದ ಚ್ಯುಯಿಂಗ್ ಗಮ್ ತಯಾರಿಸಬಾರದು ಅಂತ ಯೋಚಿಸಿ, ಅಂಗಡಿಯವನಲ್ಲಿ ಅದರ ತಯಾರಿಕೆಯ ಬಗ್ಗೆ ವಿಚಾರಿಸಲು ಶುರು ಮಾಡಿದ. ಅಂಗಡಿಯವ ಅದನ್ನು 'ಪ್ಯಾರಾಫಿನ್ ವ್ಯಾಕ್ಸ್' ನಿಂದ ತಯಾರಿಸುತ್ತಾರೆಂದೂ, ಅದರ ಹೆಸರು ವೈಟ್ ಮೌಂಟೇನ್ ಎಂದೂ ಹೇಳಿದ. ನಿಮಗೆ ಗೊತ್ತಿರುವ ಹಾಗೆ, ಈಗಿನ ಮೇಣದ ಬತ್ತಿಯಲ್ಲಿನ ಮೇಣ ಅದೇ ಪ್ಯಾರಾಫಿನ್ ವ್ಯಾಕ್ಸ್ ನಿಂದ ಕೂಡಿದ್ದು.
ಮೆಕ್ಸಿಕೋದ ಜನ ಚಿಕಲ್ ನ ತುಂಡೊಂದನ್ನು ಸ್ವಲ್ಪ ಹೊತ್ತು ಅಗಿದು ಆಮೇಲೆ ಉಗುಳುತ್ತಾರೆ ಎಂಬುದು ಆಗ ಅವನಿಗೆ ನೆನಪಿಗೆ ಬಂತು. ಅಷ್ಟೇ ಏಕೆ, ಟೈರ್ ಮಾಡುವ ಭರದಲ್ಲಿದ್ದಾಗ ತಾನೂ ಸಹ ಒಂದೆರಡು ಸಲ ಅದನ್ನು ಅಗಿದು ಉಗುಳಿದ್ದು ಆಗ ನೆನಪಿಗೆ ಬಂತು. ಬದುಕಿದೆಯಾ ಬಡಜೀವಿ ಅಂತಾ ಒಂದೇ ಸಮನೆ ತನ್ನ ಮಗನ ಕಡೆಗೆ ಓಡಿದ. ಇದೆಲ್ಲಾ ಕೇಳಿದ ಮೇಲೆ ಮಗ ಟಾಮ್ ಸಹ ಇದನ್ನೂ ಒಂದು ಕೈ ನೋಡೇ ಬಿಡೋಣ ಅಂತ ತೀರ್ಮಾನಿಸಿದ.
ನಿಜ ಹೇಳಬೇಕೆಂದರೆ, ಅಪ್ಪ-ಮಗ ಇಬ್ಬರಿಗೂ ಚೂಯಿಂಗ್ ಗಮ್ ಮಾಡುವುದಕ್ಕಿಂತಲೂ, ಭಾರಿ ಪ್ರಮಾಣದ ಚಿಕಲ್ ಅನ್ನು ನದಿಗೆ ಎಸೆಯುವುದು ತಪ್ಪುತ್ತದೆ ಅನ್ನುವುದು ಜಾಸ್ತಿ ಖುಶಿ ಕೊಡುವ ಸಂಗತಿಯಾಗಿತ್ತು. ಏಕೆಂದರೆ, ಅಷ್ಟು ಪ್ರಮಾಣದ ಚಿಕಲ್ ಅನ್ನು ನದಿಗೆ ಎಸೆದದ್ದು ಅಲ್ಲಿನ ಸರಕಾರಕ್ಕೇನಾದರೂ ಗೊತ್ತಾದರೆ, ಇವರಿಬ್ಬರಿಗೆ ಕಠಿಣ ಶಿಕ್ಷೆ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿರಲಿಲ್ಲ.
ಸರಿ, ಇಬ್ಬರೂ ಸೇರಿ ಗಮ್ ಮಾಡಲು ಶುರು ಮಾಡಿದರು. ಅವರ ಅದೃಷ್ಟ, ಅವರಂದುಕೊಂಡಂತೆಯೇ ಗಮ್ ತಯಾರಾಗತೊಡಗಿತು. ಕೆಲವು ಬಾಕ್ಸ್ ಮಾಡಿ ನೋಡೋಣ ಅಂತ ಅಂದುಕೊಂಡು, ಹಾಗೆ ಮಾಡಿದ ಗಮ್ ಗೆ 'Adam's Newyork No. 1' ಅಂತಾ ಹೆಸರಿಟ್ಟು ಮಾರುವುದಾಗಿಯೂ ನಿಶ್ಚಯವಾಯ್ತು.
ಇವತ್ತು ಜಗತ್ತು ಹುಚ್ಚೆದ್ದು ತಿನ್ನುತ್ತಿರುವ ಚೂಯಿಂಗ್ ಗಮ್ ಅನ್ನು ಮಾಡುತ್ತಿದ್ದೇವೆ ಅನ್ನೋ ಚಿಕ್ಕದೊಂದು ಸುಳಿವೂ ಆಗ ಅವರಿಗಿರಲಿಲ್ಲ. ಇವತ್ತಿಗೂ ಇತಿಹಾಸದಲ್ಲಿ ದಾಖಲಾಗಿರುವ ಪ್ರಪ್ರಥಮ chickle based ಚೂಯಿಂಗ್ ಗಮ್ ಅಂದರೆ 'Adam's Newyork No. 1'.
ಆದರೆ, ಅದಕ್ಕೂ ಮೊದಲು ಸುಮಾರು 1840 ರ ದಶಕದಲ್ಲಿ ಜಾನ್ ಬೇಕನ್ ಕರ್ಟಿಸ್ ಎಂಬಾತ ಚೂಯಿಂಗ್ ಗಮ್ ಅನ್ನು ಮಾಡಿ, ಮಾರಲು ಪ್ರಾರಂಭಿಸಿದ್ದ. ಈ ಗಮ್ ರಬ್ಬರಿನಂತೆಯೂ, ಅಂಟಂಟಾಗಿಯೂ ಇತ್ತು. ಇದು ತಯಾರಾಗುತ್ತಿದ್ದ ಫ್ಯಾಕ್ಟರಿಗೆ "ಕರ್ಟಿಸ್ ಚೂಯಿಂಗ್ ಗಮ್ ಫ್ಯಾಕ್ಟರಿ" ಅಂತಾ ಹೆಸರಿಟ್ಟಿದ್ದ.
ಇತ್ತ, 'Adam's New York No.1' 1870 ರ ದಶಕದಲ್ಲಿ ಥಾಮಸ್ ಅಡಮ್ಸ್, ಚಿಕಲ್ ನಿಂದ ತಯಾರಾದ ಚೂಯಿಂಗ್ ಗಮ್ ಪರಿಚಯಿಸಿದನಾದರೂ, ಆ ದಿನಗಳಲ್ಲಿ ಅದಕ್ಕೊಂದು ಫ್ಯಾಕ್ಟರಿ ಅಂತ ಇರಲಿಲ್ಲ. 1870 ರ ದಶಕದಲ್ಲಿ ಅಡಮ್ಸ್, "ಅಡಮ್ಸ್ ಸನ್ಸ್ ಅಂಡ್ ಕಂಪನಿ" ತೆರೆದ. ಹೀಗೆ ಪ್ರಾರಂಭವಾದ ಫ್ಯಾಕ್ಟರಿಯೇ ಜಗತ್ತಿನ ಪ್ರಥಮ ಆಧುನಿಕ ಚ್ಯುಯಿ೦ಗ್ ಗಮ್ ತಯಾರಿಕೆಗೆ ಅಡಿಪಾಯ ಹಾಕಿದ್ದು.
chicle ಎಂಬುದು ಸಾಪೊಡಿಲ್ಲಾ ಎಂಬ ಮರದಿಂದ ಸಿಕ್ಕ ಹಾಲಿನಂತೆ ಬೆಳ್ಳಗಿರುವ ಲ್ಯಾಟೆಕ್ಸ್(ರಬ್ಬರ್) .ಆದ್ದರಿಂದಲೇ ಅಡಮ್ಸ್ ಅದರಿಂದ ಟೈರ್ ಮಾಡಲು ಯೋಚಿಸಿದ್ದು! ಒಂದು ವೇಳೆ ಟೈರ್ ಮಾಡುವಲ್ಲಿ ಆತ ಏನಾದರೂ ಸಫಲನಾಗಿದ್ದರೆ, ಚೂಯಿಂಗ್ ಗಮ್ ಉದ್ಯಮ ಈ ಮಟ್ಟಕ್ಕೆ ಇಷ್ಟು ಶೀಘ್ರವಾಗಿ ಬೆಳೆಯುತ್ತಿರಲಿಲ್ಲವೇನೋ.



Click it and Unblock the Notifications














