Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಇತಿಹಾಸ ಬರೆದ ಸೈನಾ ನೆಹ್ವಾಲ್‌ರ ಬಗ್ಗೆ ನೀವೆಷ್ಟು ಬಲ್ಲಿರಿ?
ಭಾರತದಲ್ಲಿ ಕ್ರಿಕೆಟ್ಟಿಗೆ ನೀಡುವಷ್ಟು ಮಹತ್ವವನ್ನು ಬೇರೆ ಯಾವ ಕ್ರಿಡೆಗೂ ನೀಡದೇ ಇರುವುದು ನಮ್ಮ ದುರಾದೃಷ್ಟವೆಂದೇ ಹೇಳಬೇಕು. ಒಂದು ಕಾಲದಲ್ಲಿ ಕ್ರಿಕೆಟ್ಟಿಗಿಂತಲೂ ರಾಷ್ಟ್ರೀಯ ಕ್ರೀಡೆ ಹಾಕಿ ಪಂದ್ಯಗಳಿಗೆ ಹೆಚ್ಚು ಮನ್ನಣೆ ದೊರಕುತ್ತಿತ್ತು. ಧ್ಯಾನ್ ಸಿಂಗ್ ಕಾಲ ಮುಗಿದ ಮೇಲೆ ಹಾಕಿಯೂ ನೇಪಥ್ಯಕ್ಕೆ ಸರಿಯಿತು.
ಇನ್ಯಾವುದಾದರೂ ಕ್ರೀಡೆಯಲ್ಲಿ ವಿಶ್ವದ ಗಮನ ಸೆಳೆದರೇ ಇಂತಹದ್ದೊಂದು ಆಟ ಇತ್ತೇ ಎಂದು ಅಷ್ಟೂ ಭಾರತೀಯರು ಗಮನಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರಕಾಶ್ ಪಡುಕೋಣೆ, ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ ಮೊದಲಾದವರು ನೀಡಿದ ಕೊಡುಗೆ ಭಾರತದ ಪಾಲಿಗೆ ಸ್ಮರಣೀಯವಾಗಿವೆ. ಅಂತಹದ್ದೇ ಇನ್ನೊಂದು ಕ್ಷಣ ಇಂದು ಭಾರತದ್ದಾಗಿದೆ.
ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ ನಲ್ಲಿ ದಯನೀಯ ಸೋಲುಂಡು ಹಿಂದಿರುಗಿದ ಭಾರತ ತಂಡದ ಒಂದೊಂದು ಕ್ರಮವನ್ನೂ ಅಷ್ಟೂ ಭಾರತೀಯರು ತೆಗಳುತ್ತಿರುವಾಗಲೇ ಸೈನಾ ನೆಹ್ವಾಲ್ ಅತ್ತ ವಿಶ್ವದ ನಂ. 1 ಪಟ್ಟಕ್ಕೇರಿದ ಸುದ್ದಿ ಬಂದಿದೆ. ಅದರಲ್ಲೂ ಇಂಡಿಯಾ ಓಪನ್ ಸುಪರ್ ಸೀರೀಸ್ ನಲ್ಲಿ ಅವರು ಮಣಿಸಿದ್ದು ವಿಶ್ವದ ಅತಿ ಶ್ರೇಷ್ಠ ಆಟಗಾರ್ತಿಯಾದ ಥಾಯ್ಲೆಂಡಿನ ರತ್ಚಾನೋಕ್ ಇನ್ತನಾನ್ ರವರನ್ನು.
ಇತಿಹಾಸದಲ್ಲಿಯೇಪ್ರಪ್ರಥಮ ಬಾರಿಗೆ ಭಾರತೀಯ ಮಹಿಳೆಯೊಬ್ಬರು ವಿಶ್ವದ ನಂ. 1 ಪಟ್ಟಕ್ಕೇರಿರುವುದು ಒಂದು ದಾಖಲೆಯೇ ಹೌದು. ಈ ಸುದ್ದಿ ಸಂತೋಷ ನೀಡಿತೇ? ಹೆಮ್ಮೆ ಮೂಡಿಸಿತೇ? ಸೈನಾ ಅಂದರೆ ಯಾರು ಎಂಬ ಕುತೂಹಲ ಮೂಡಿತೇ? ಹರ್ಯಾನಾ ರಾಜ್ಯದಲ್ಲಿ ಹುಟ್ಟಿದರೂ ಹೈದರಾಬಾದ್ ನಲ್ಲಿ ಬೆಳೆದ ಸೈನಾರಿಗೆ ಬ್ಯಾಡ್ಮಿಂಟನ್ ಆಟವೇ ಉಸಿರು.
ಅವರ ಕ್ರೀಡಾಸಕ್ತಿಯನ್ನು ಗಮನಿಸಿ ಮೊದಲಿಗೆ ಅವರಿಗೆ ತರಬೇತಿಯನ್ನು ನೀಡಿದವರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಎಸ್.ಎಂ. ಆರೀಫ್. ಬಳಿಕ ಪುಲ್ಲೇಲ ಗೋಪಿಚಂದ್‌ರ ಬಳಿ ತರಬೇತಿ ಪಡೆದರು. ಪ್ರಸ್ತುತ ನಿಕಟಪೂರ್ವ ಭಾರತದ ಬ್ಯಾಡ್ಮಿಂಟನ್ ಚಾಂಪಿಯನ್ ಯು.ವಿಮಲ್ ಕುಮಾರ್ ರವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಇವರ ಬಗ್ಗೆ ಇನ್ನೂ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಸೈನಾ ಬ್ರೌನ್ ಬೆಲ್ಟ್ ಕರಾಟೆ ಪಟುವೂ ಹೌದು
ಬ್ಯಾಡ್ಮಿಂಟನ್ ನೊಂದಿಗೆ ಕರಾಟೆಯನ್ನೂ ಕಲಿಯಲು ಪ್ರಾರಂಭಿಸಿದ ಸೈನಾ ಬ್ರೌನ್ ಬೆಲ್ಟ್ ವರೆಗೆ ತರಬೇತಿಯನ್ನು ಪಡೆದಿದ್ದಾರೆ. ಆದರೆ ಈ ಹಂತದಲ್ಲಿ ಹೊಟ್ಟೆಯ ಸ್ನಾಯುಗಳನ್ನು ಗಟ್ಟಿಯಾಗಿಸಿ ಅದರ ಮೇಲೆ ಬೈಕ್ ಓಡಿಸುವ ಅಪಾಯಕರ ಕ್ರಮವನ್ನು ವಿರೋಧಿಸಿ ಅವರು ಕರಾಟೆಗೆ ಶುಭವಿದಾಯ ಹೇಳಿದರು.

2010ರಲ್ಲಿ ನಂ. 2ರ ಸ್ಥಾನ ಪಡೆದಿದ್ದ ಸೈನಾ
ವಿಶ್ವದ ಚಾಂಪಿಯನ್ ಪಟ್ಟ ಸದಾ ಬದಲಾಗುತ್ತಾ ಇರುತ್ತದೆ. 2010ರ ವಿಶ್ವ ಚಾಂಪಿಯನ್ ನಲ್ಲಿ ಅವರು ನಂ.2ರ ಪಟ್ಟ ಪಡೆದಿದ್ದರು. ಆದರೆ ಮರುವರ್ಷ ಆರನೆಯ ಸ್ಥಾನಕ್ಕೆ ಇಳಿದಿದ್ದರು. ಆದರೆ ಈ ವರ್ಷ, ಅಂದರೆ 2015ರಲ್ಲಿ ಮರಳಿ ಯತ್ನವ ಮಾಡಿ ಪ್ರಥಮ ಪಟ್ಟಕ್ಕೇರಿದ್ದಾರೆ.

ಬೀಜಿಂಗ್ ಒಲಿಂಪಿಕ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ ಪ್ರಥಮ ಭಾರತೀಯಳು
ಯಾವುದೇ ಒಲಿಂಪಿಕ್ ಪಂದ್ಯಗಳಲ್ಲಿ ಭಾಗವಹಿಸುವುದೇ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿರುವಾಗ ಭಾರತವನ್ನು ಪ್ರತಿನಿಧಿಸಿ ಕ್ವಾರ್ಟರ್ ಫೈನಲ್ ವರೆಗೂ ತಲುಪಿರುವುದು ಅವರ ಒಂದು ಸಾಧನೆಯಾಗಿದೆ.

2012ರ ಲಂಡನ್ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕಂಚಿನ ಪಡೆದಿದ್ದಾರೆ
ಇವರ ಪ್ರತಿಸ್ಪರ್ಧಿಯಾಗಿದ್ದ ಚೀನಾದ ವಾಂಗ್ ಕ್ಸಿನ್ ರವರು ಪಾದದ ನೋವಿನಿಂದ ಎರಡನೆಯ ಪಂದ್ಯವನ್ನು ಆಡದೇ ಹಿಮ್ಮೆಟ್ಟಿದುದರಿಂದ 18-21, 0-1ರ ಅಂಕಿ ಅಂಶಗಳಲ್ಲಿಯೇ ಸೈನಾರವರಿಗೆ ಕಂಚಿನ ಪದಕ ದೊರಕಿದೆ.

ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರು
ಈ ವರ್ಷ ಇಪ್ಪತ್ತೈದನೆಯ ವರ್ಷ ವಯಸ್ಸಿನಲ್ಲಿರುವ (ಜನನ: 17 ನೇ ಮಾರ್ಚ್ 1990) ಸೈನಾ ಚಿಕ್ಕ ವಯಸ್ಸಿನಲ್ಲಿಯೇ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರಾಗಿದ್ದಾರೆ.

ತನ್ನ ಜಯವನ್ನು ಅವರು ಆಚರಿಸಿಕೊಳ್ಳುವುದು ಐಸ್ ಕ್ರೀಂ ಮೂಲಕ!
ಹೆಚ್ಚಿನ ಕ್ರೀಡಾಪಟುಗಳು ತಮ್ಮ ವಿಜಯವನ್ನು ಪಾರ್ಟಿಗಳಲ್ಲಿ ಮತ್ತು ಭಾರೀ ಖರ್ಚುಗಳ ಮೂಲಕ ಪ್ರಕಟಿಸುತ್ತಾರೆ. ಆದರೆ ಸರಳ ಸಜ್ಜನಿಕೆಯ ಸೈನಾ ತನ್ನ ವಿಜಯೋತ್ಸವ ಆಚರಿಸುವುದು ಕೇವಲ ಒಂದು ಐಸ್ ಕ್ರೀಂ ತಿನ್ನುವ ಮೂಲಕ.

ಅವರ ನೆಚ್ಚಿನ ಖಾದ್ಯ ಮೇಥಿ ಪರೋಟ ಮತ್ತು ಮೊಸರು
ಅಪ್ಪಟ ಮನೆಯ ಅಡುಗೆಯನ್ನು ಇಷ್ಟ ಪಡುವ ಅವರಿಗೆ ಮೆಂತೆಸೊಪ್ಪಿನ ಹೂರಣದಿಂದ ಮಾಡಿದ ಪರೋಟ ಮತ್ತು ಮೊಸರು ಅತಿ ಇಷ್ಟ.

ಸೈನಾರ ತಂದೆ ತಾಯಿ ಇಬ್ಬರೂ ಬ್ಯಾಡ್ಮಿಂಟನ್ ಪಟುಗಳು
ಸೈನಾರ ತಂದೆ ಡಾ. ಹರ್ವೀರ್ ಸಿಂಗ್ ಮತ್ತು ತಾಯಿ ಉಷಾ ನೆಹ್ವಾಲ್ ಇಬ್ಬರೂ ತಮ್ಮ ತಾರುಣ್ಯದಲ್ಲಿ ಹರ್ಯಾಣಾ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಟುಗಳಾಗಿದ್ದರು.

ಸೈನಾರ ತರಬೇತಿಗಾಗಿ ಪ್ರತಿದಿನ ಐವತ್ತು ಕಿ.ಮೀ ಕ್ರಮಿಸುತ್ತಿದ್ದ ಕುಟುಂಬ
ಸೈನಾರಿಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದ ಅವರ ಕುಟುಂಬ ಅವರ ತರಬೇತಿಗಾಗಿ ಪ್ರತಿದಿನ ಐವತ್ತು ಕಿಮೀ ದೂರವನ್ನು ಕ್ರಮಿಸುತ್ತಿದ್ದರು.

ಭಾರತ್ ಪೆಟ್ರೋಲಿಯಂ ನಲ್ಲಿ ಉದ್ಯೋಗಸ್ಥೆ
ಕ್ರೀಡೆಯಲ್ಲಿ ಭಾರತದ ಹೆಸರನ್ನು ವಿಶ್ವಮಟ್ಟಕ್ಕೇರಿಸುತ್ತಿರುವ ಸೈನಾ ಭಾರತ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಉಪ ವ್ಯವಸ್ಥಾಪಕ (asst. manager) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅತ್ಯಂತ ಸ್ಮರಣೀಯ ಕ್ಷಣ -2002ರ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಟ್ಟ
ಸೈನಾರವರ ಪ್ರಕಾರ ಅವರು 2002ರಲ್ಲಿ ಪಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಟ್ಟ ಅತ್ಯಂತ ಸ್ಮರಣೀಯವಾಗಿದೆ.



Click it and Unblock the Notifications











