Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂತಹ ಸರಳ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ!
ಈ ವಾರ ಎರಡು ಸುದ್ದಿಗಳು ಜಗತ್ತಿನಲ್ಲಿ ಅಚ್ಚರಿ ಮೂಡಿಸಿದವು. ಮೊದಲನೆಯದು ಸೌದಿ ಅರೇಬಿಯಾದ ರಾಜಕುಮಾರರೊಬ್ಬರು ತಮ್ಮ ಸಂಪತ್ತಿನ ಬಹುಭಾಗವಾದ ಮೂವತ್ತೆರಡು ಬಿಲಿಯನ್ ಡಾಲರ್ ಲೋಕಕಲ್ಯಾಣಕ್ಕಾಗಿ ನೀಡಿದರೆ ಭಾರತದವರೇ ಆದ ಅಜೀಂ ಪ್ರೇಂಜಿಯವರು ಕಳೆದ ಒಂದು ವರ್ಷದಲ್ಲಿ ಹನ್ನೆರಡು ಸಾವಿರ ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ.
ಇಂದು ಪ್ರತಿ ವ್ಯಕ್ತಿಯೂ ಹಣಕ್ಕಾಗಿ ಹಪಹಪಿಸುತ್ತಿರುವಾಗ ಇವರೇಕೆ ಹೀಗೆ ದಾನ ಮಾಡುತ್ತಿದ್ದಾರೆ ಎಂದು ಯೋಚಿಸಿದರೆ ಹಣಕ್ಕಿಂತಲೂ ಹೆಚ್ಚಾಗಿ ಅವರು ತಮ್ಮ ಆತ್ಮತೃಪ್ತಿಗೆ ಬೆಲೆನೀಡಿದ್ದಾರೆ.
ಕನ್ನಡದಲ್ಲಿ ಕೊಡುವುದಕ್ಕಿಂತ ಹತ್ತು ಪಟ್ಟು ನೂರುಪಟ್ಟು ಹೆಚ್ಚು ಹಣ ನೀಡುತ್ತೇವೆ, ಹಿಂದಿಗೆ ಬನ್ನಿ ಎಂದು ಡಾ. ರಾಜ್ ಕುಮಾರ್ ರನ್ನು ಕೇಳಿದಾಗ ಅವರದನ್ನು ನಿರಾಕರಿಸಿ ಕನ್ನಡದಲ್ಲಿ ಉಳಿದಿದ್ದು ಸಹಾ ಅವರ ಆತ್ಮತೃಪ್ತಿಯೇ ಹೊರತು ಇನ್ನೇನಿಲ್ಲ. ಪ್ರತಿಯೊಬ್ಬರಲ್ಲಿಯೂ ಆತ್ಮತೃಪ್ತಿ ಮತ್ತು ಆತ್ಮಗೌರವ ಇರುವುದು ಅಗತ್ಯ.
ನಮ್ಮೊಳಗಿನ ವ್ಯಕ್ತಿತ್ವ ಗಟ್ಟಿಗೊಳ್ಳಲು ನಮ್ಮ ಆತ್ಮಸಾಕ್ಷಿ, ಆತ್ಮತೃಪ್ತಿ, ಅಂತರಾತ್ಮಗಳು ಸ್ಪಷ್ಟವಾಗಿರಬೇಕು ಹಾಗೂ ಅದಕ್ಕನುಗುಣವಾಗಿ ನಡೆಯಬೇಕು. ಇದು ನಮಗೆ ಹೊಸಜೀವನವನ್ನೂ, ಜೀವನದಲ್ಲಿ ಉತ್ತಮ ಸ್ಥಾನವನ್ನೂ ಪಡೆಯಲು ನೆರವಾಗುತ್ತವೆ.
ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯ. ಆತ್ಮವಿಮರ್ಶೆಯಿಂದ ನಾವು ಈಗ ಎಲ್ಲಿದ್ದೇವೆ? ಎಲ್ಲಿ ಹೋಗಲಿದ್ದೇವೆ? ಈಗ ಹೋಗುತ್ತಿರುವ ದಾರಿ ಸರಿ ಇದೆಯೇ? ಎಂಬ ಬಗ್ಗೆ ಒಂದು ದೂರದೃಷ್ಟಿ ರೂಪಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ನಿಮ್ಮ ಆತ್ಮವಿಮರ್ಶೆ ಸುಲಭವಾಗುತ್ತದೆ. ನಿಮ್ಮ ಕೆಲಸವನ್ನು ಕೆಳಗಿನ ಈ ಪ್ರಶ್ನೆಗಳು ಇನ್ನಷ್ಟು ಸುಲಭಗೊಳಿಸಲಿವೆ: ವ್ಯಕ್ತಿತ್ವ ವಿಕಸನಕ್ಕಾಗಿ ಪರಿಣಾಮಕಾರಿ 11 ಸಲಹೆಗಳು

ನನ್ನಿಂದ ಹೊರಹೋಗಬೇಕಾಗಿದ್ದ ಏನನ್ನಾದರೂ ಇನ್ನೂ ಹಿಡಿದಿಟ್ಟುಕೊಂಡಿದ್ದೇನೆಯೇ?
ನಮ್ಮ ಜೀವನ ನದಿಯಂತಿರಬೇಕು. ಹೊಸನೀರು ಬಂದಂತೆ ಹಳೆನೀರು ಕೊಚ್ಚಿಕೊಂಡು ಹೋಗಿ ಹೊಸತನ ಮೂಡುತ್ತಿರಬೇಕು. ಕೆಲವೊಮ್ಮೆ ಯಾವುದಾದರೂ ಕಹಿ ಘಟನೆ ಅಥವಾ ಸಂಗತಿ ನಮ್ಮನ್ನು ಆಗಾಧವಾಗಿ ಬಾಧಿಸಿದ್ದು ಇದನ್ನೇ ನೆನೆಸಿಕೊಳ್ಳುತ್ತಾ ಮರುಗುತ್ತಿದ್ದೀರಾ? ಹಾಗಾದರೆ ನಿಮಗೆ ನೀವೇ ಈ ಪ್ರಶ್ನೆಯನ್ನು ಕೇಳಿಕೊಳ್ಳಿ. ಹೊಸವಿಚಾರಗಳ ಹೊಸನೀರನ್ನು ತಂದು ಹಳೆಯ ನೆನಪುಗಳ ಹಳೆನೀರನ್ನು ಕೊಚ್ಚಿಹಾಕಿ ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಕಳೆ ನೀಡಿ.
ನಾನು ಇಂದು ಯಾರದಾದರೂ ಮುಖದಲ್ಲಿ ನಗು ಮೂಡಿಸಿದ್ದೇನೆಯೇ?
Alone you can smile, But together we can laugh ಎಂಬ ಆಂಗ್ಲ ಸುಭಾಷಿತ ಜನರೊಂದಿಗಿನ ಒಡನಾಟದ ಮಹತ್ವವನ್ನು ಸಾರುತ್ತದೆ. ನಾಲ್ವರ ಜೊತೆಗಿದ್ದಾಗ ನಮ್ಮಿಂದ ಯಾವುದಾದರೂ ಸಹಾಯ ಪಡೆದವರು ನಮಗೆ ಧನ್ಯವಾದ ಹೇಳಿದರೆ ಆ ಒಂದು ಪದ ನೀಡುವ ಉಲ್ಲಾಸ ಮತ್ತು ಹುರುಪು ಜೀವನಕ್ಕೆ ಹೊಸತನ ನೀಡುತ್ತದೆ. ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡಾಗ ಇದಕ್ಕೆ ವಿರುದ್ದವಾದ ಅಂದರೆ ನಿಮ್ಮಿಂದ ಯಾರಿಗಾದರೂ ನೋವಾಗಿರುವುದೂ ಕಂಡುಬಂದರೆ ಅದನ್ನು ಸರಿಪಡಿಸಲು ಈ ಪ್ರಶ್ನೆಯೇ ನೆರವಿಗೆ ಬರುತ್ತದೆ.
ಜೀವನದಲ್ಲಿ ನೆನಪಿನಲ್ಲುಳಿಯುವಂತಹದ್ದೇನಾದರೂ ಇಂದು ನಾನು ಮಾಡಿದ್ದೇನೆಯೇ?
ಉಡುಪಿ ಹೋಟೆಲಿನ ದೋಸೆ ಸವಿದವರಿಗೆ ಆ ದೋಸೆ ಮಾಡಿದವರು ಯಾರು ಎಂದು ಗೊತ್ತಿರುತ್ತದೆಯೇ? ಅಂತೆಯೇ ನಮ್ಮ ಎಷ್ಟೋ ಕೆಲಸಗಳು ನಾಳೆ ಯಾರದ್ದೂ ನೆನಪಿನಲ್ಲಿ ಉಳಿಯದೇ ಹೋಗಬಹುದು. ಇಂದು ನಮ್ಮ ಬಳಿ ಇರುವ ಕ್ಷಣಗಳನ್ನು ನಾವು ಸದುಪಯೋಗಿಸಿಕೊಳ್ಳುತ್ತಿದ್ದೇವೆಯೇ? ಇದರ ಉಪಯೋಗ ನಾಳೆ ಬರುತ್ತದೆಯೇ? ಈ ಒಂದು ಪ್ರಶ್ನೆಯನ್ನು ಕೇಳಿಕೊಂಡ ಸಾಲುಮರದ ತಿಮ್ಮಕ್ಕನ ಮಕ್ಕಳಾದ ಸಾಲುಮರಗಳು ಇಂದು ಹೇಗಿವೆ ನೋಡಿದ್ದೀರಾ?
ನನ್ನನ್ನು ನಾನು ಬದಲಿಸಿಕೊಳ್ಳಲು ಏನು ಮಾಡಬಹುದು?
ಯಾವುದೋ ಒಂದು ಕೆಲಸವನ್ನು ನಾವೇ ಅತ್ಯುತ್ತಮವಾಗಿ ಮಾಡಬಲ್ಲೆವು ಎಂದು ನಾವು ಅಂದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಇದೇ ಕೆಲಸವನ್ನು ನಮಗಿಂತ ಉತ್ತಮವಾಗಿ ಮಾಡಬಲ್ಲವರು ಇನ್ನೊಬ್ಬರು ಇದ್ದೇ ಇರುತ್ತಾರೆ. ಹಾಗಾಗಿ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳುತ್ತಾ ಹೋಗುವುದೇ ಜೀವನದಲ್ಲಿ ಯಶಸ್ಸು ಪಡೆಯುವ ಸಾಧನ. ಹೀಗೆ ಉತ್ತಮಪಡಿಸಿಕೊಳ್ಳಲು ಮೊದಲು ನಮ್ಮನ್ನು ನಾವು ಈಗಿರುವ ಸ್ಥಿತಿಗಿಂತ ಕೊಂಚ ಬದಲಾವಣೆಗೆ ಸಜ್ಜುಗೊಳಿಸಬೇಕು, ಬಳಿಕ ಹಿಂದಿನ ಸ್ಥಿತಿಯನ್ನು ಬಿಟ್ಟು ಹೊಸ ಸ್ಥಿತಿಗೆ ಒಗ್ಗಿಕೊಳ್ಳಬೇಕು. ಹಳೆಯ ಮೊಬೈಲಿನಿಂದ ಹೊಸ ಮೊಬೈಲಿಗೆ ನಾವು ಎಷ್ಟು ಸುಲಭವಾಗಿ ಒಗ್ಗಿಕೊಳ್ಳುತ್ತೇವೆ, ಆಶ್ಚರ್ಯವಲ್ಲವೇ?
ನನಗೆ ಜೀವನದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವುದೇನು?
ನೀವು ದಿನವಿಡೀ ಏನನ್ನು ಯೋಚಿಸುತ್ತಿರುತ್ತೀರೋ ಅದೇ ನೀವು ಎನ್ನುತ್ತದೆ ಒಂದು ಸುಭಾಷಿತ (You Become What You Think About Most Of The Time). ಈ ಪ್ರಶ್ನೆಯನ್ನು ಕೇಳುತ್ತಿರುವ ಮೂಲಕ ನಿಮಗೆ ಜೀವನದಲ್ಲಿ ಏನು ಅಗತ್ಯ ಎಂಬ ಪ್ರಶ್ನೆಗೆ ಉತ್ತರ ದೊರೆತಂದಾಗಿ ಆ ನಿಟ್ಟಿನಲ್ಲಿ ನಿಮ್ಮ ಸಮಯ ವ್ಯಯಿಸಲು ಸಾಧ್ಯ. ನಿಮಗಿಷ್ಟವಾದ ಕೆಲಸ ಅಥವಾ ಕ್ಷೇತ್ರದಲ್ಲಿ ಪೂರ್ಣವಾಗಿ ಮಗ್ನರಾಗುವ ಮೂಲಕ ಆಯಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಪಡೆಯುವುದು ಸಾಧ್ಯ.



Click it and Unblock the Notifications



