ಪ್ರತಿ ಕ್ಷಣ ಕ್ಷಣವೂ ಸಂತೋಷವಾಗಿರಲು 15 ಸೂತ್ರಗಳು

ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ ವಿವಿಧ ಉತ್ತರಗಳು ದೊರೆತರೂ ಅದರಲ್ಲಿ ಸಾಮಾನ್ಯವಾಗಿ ಅಂತಿಮವಾದ ಪದ 'ಸಂತೋಷ' ಅಥವಾ 'ಸುಖ'ವೇ ಆಗಿದೆ. ಪ್ರತಿ ಧರ್ಮವೂ ಸಂತೋಷದಿಂದಿರಲು ಪಾಲಿಸಬೇಕಾದ ಸೂತ್ರಗಳನ್ನು ಬೋಧಿಸುತ್ತದೆ. ಆದರೆ ಸಂತೋಷವೆಂದರೇನು ಎಂಬ ಪ್ರಶ್ನೆಗೆ ಸೂಕ್ತವಾದ ವ್ಯಾಖ್ಯಾನ ಸಿಗುವುದಿಲ್ಲ. ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚು ಹಣವಿದ್ದವರು ಹೆಚ್ಚು ಸಂತೋಷಿಗಳು ಎಂಬ ಅಜ್ಜ ನೆಟ್ಟ ಆಲದಮರಕ್ಕೆ ನೇತುಹಾಕಿಕೊಂಡಿದ್ದೇವೆ.

ಆದರೆ ಹೆಚ್ಚು ಹಣವಂತರು ಅನುಭವಿಸುವ ದುಗುಡ ಮತ್ತು ತಲ್ಲಣಗಳು ನಮ್ಮ ಭಾವನೆ ತಪ್ಪು ಎಂದು ಸಾಬೀತುಪಡಿಸುತ್ತವೆ. ಮನಃಶಾಸ್ತ್ರಜ್ಞರ ಪ್ರಕಾರ ಸಂತೋಷ ಎಂಬುದು ಪ್ರತಿಯೊಬ್ಬರ ಮನಸ್ಸಿಗೆ ಸಂಬಂಧಿಸಿದ್ದು ಆಯಾ ಕ್ಷಣದಲ್ಲಿ ಅನುಭವಿಸುವ ಅನುಭೂತಿಯನ್ನು ಆಧರಿಸಿದೆ. ಉದಾಹರಣೆಗೆ ಜಾರಿ ಬೀಳುತ್ತಲಿದ್ದ ಬಾಲಕನನ್ನು ಕೈಹಿಡಿದು ರಕ್ಷಿಸಿದರೆ ಆತನಿಂದ ಪಡೆಯುವ 'ಧನ್ಯವಾದ' ಎಂಬು ಒಂದು ಪದ ಮನಸ್ಸಿಗೆ ಅತ್ಯಂತ ಸಂತೋಷವನ್ನೂ ನೆಮ್ಮದಿಯನ್ನೂ ನೀಡುತ್ತದೆ. ಆ ಕ್ಷಣದಲ್ಲಿ ತಾನು ಮಾಡಬಹುದಾದ ಒಳ್ಳೆಯ ಕೆಲಸ ತಾನು ಮಾಡಿದ್ದೇನೆ ಎಂಬ ಕರ್ತವ್ಯಪಾಲನೆಯ ಭಾವನೆ ಈ ಸಂತೋಷಕ್ಕೆ ಬುನಾದಿಯಾಗಿದೆ. ಈ ಕರ್ತ್ಯವ್ಯಪಾಲನೆ ಆ ಕ್ಷಣದಿಂದ ಹಿಡಿದು ಜೀವಮಾನವಿಡೀ ಮಾಡಬಹುದಾದ ಇತರ ಎಲ್ಲಾ ಕೆಲಸಗಳಲ್ಲಿ ಅಳವಡಿಸಿಕೊಂಡು ತೃಪ್ತಿ ಅನುಭವಿಸಿದಾಗಲೇ ನಿಜವಾದ ಸಂತೋಷದ ಸಾಕ್ಷಾತ್ಕಾರವಾಗುತ್ತದೆ.

ಸಂತೋಷ ಪಡೆಯಲು ಯಾವ ಸಿದ್ಧ ಸೂತ್ರವೂ ಇಲ್ಲ. ಓರ್ವನಿಗೆ ಸಂತೋಷ ತರುವ ಕೆಲಸ ಇನ್ನೋರ್ವನಿಗೆ ಮಹಾ ಬೋರು ಹೊಡೆಸುವ ಕೆಲಸವಾಗಿ ಕಾಣಬಹುದು. ಆದರೆ ಹೆಚ್ಚಿನವರು ತುಲನಾತ್ಮಕವಾಗಿ ಅಂದರೆ ತಮ್ಮನ್ನು ಇನ್ನೊಬ್ಬರಿಗೆ ಅವರು ಹೊಂದಿರುವ ಪ್ರಾಪಂಚಿಕ ವಸ್ತುಗಳಿಗೆ ಹೋಲಿಸಿಕೊಂಡು ಅವರಿಗಿಂತ ಮೇಲು ಎಂಬ ಭಾವನೆಯಲ್ಲಿ ಸಂತೋಷ ಕಂಡುಕೊಳ್ಳುತ್ತಾರೆ. ಆದರೆ ಇದು ಕೇಲವ ತಾತ್ಕಾಲಿಕವಾಗಿದೆ.

ನಮಗಿಂತ ಕೊಂಚ ಮೇಲ್ದರ್ಜೆಯ ವಸ್ತುವನ್ನು ಹೊಂದಿದ ವ್ಯಕ್ತಿಯೊಂದಿಗೆ ಹೋಲಿಸಿದಾಕ್ಷಣ ಈ ಸಂತೋಷ ಮಾಯವಾಗಿ ಅಲ್ಲಿ ಉದಾಸೀನತೆ ನೆಲೆಸುತ್ತದೆ. ಉದಾಹರಣೆಗೆ ನೆರೆಮನೆಯವರ ಹತ್ತಿರ ಇಪ್ಪತ್ತೊಂದು ಇಂಚಿನ ಟೀವಿಗೆ ಎದುರಾಗಿ ನಮ್ಮ ಮನೆಯ ಮೂವತ್ತೆರಡು ಇಂಚಿನ ಟೀವಿ ಇದ್ದರೆ ಹೊಂದುವ ಸಂತೋಷ ಹೊಸತಾಗಿ ಬಂದ ಇನ್ನೋರ್ವ ನೆರೆಯವರ ಐವತ್ತು ಇಂಚಿನ ಟೀವಿ ಕಂಡಾಕ್ಷಣ ಕಳೆಗುಂದುತ್ತದೆ. ಹಾಗಾದರೆ ನಿಜವಾದ ಸಂತೋಷ ಎಂದರೇನು? ವೈಯಕ್ತಿಕವಾಗಿ ಸಂತೋಷದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಂತೋಷ ಎಂಬುವುದು ಹೆಚ್ಚಿನವರಿಗೆ ತಾತ್ಕಾಲಿಕವೇಕೆ? ಈ ಲೇಖನದಲ್ಲಿ ಪ್ರತಿ ಕ್ಷಣವೂ ಸಂತೋಷವಾಗಿರಲು ಹದಿನೈದು ಸೂತ್ರಗಳನ್ನು ವಿವರಿಸಲಾಗಿದೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ವ್ಯಾಖ್ಯಾನ ಪ್ರತ್ಯೇಕವಾಗಿದ್ದರೂ ಸಾಮಾನ್ಯವಾಗಿ ಈ ಸೂತ್ರಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.

ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ನಿಮ್ಮನ್ನು ಮೊದಲು ಗೌರವಿಸಿಕೊಳ್ಳಿ

ನಿಮ್ಮನ್ನು ಮೊದಲು ಗೌರವಿಸಿಕೊಳ್ಳಿ

ಸ್ವಾಭಿಮಾನ, ಪ್ರತಿಯೊಬ್ಬರ ಗೌರವದ ಸೊತ್ತಾಗಿದೆ. ಸಮಾಜದಲ್ಲಿ ಯಾವುದೇ ವರ್ಗದಲ್ಲಿದ್ದರೂ ನಮಗೆ ಸ್ವಾಭಿಮಾನಿಗಳಾಗಿ ಬದುಕಲು ಅವಕಾಶವಿದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಪ್ರಾಮಾಣಿಕರಾಗಿರುವ ಮೂಲಕ, ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳುವ ಮೂಲಕ, ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಸುವ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ, ಸಮಾಜಕ್ಕೆ ಉಪಕಾರಿಯಾಗಿ ಉತ್ತಮ ನಾಗರಿಕನಾಗುವುದು ಸ್ವಾಭಿಮಾನದ ಲಕ್ಷಣವಾಗಿವೆ. ಸ್ವಾಭಿಮಾನಿಗೆ ಎಂದೂ, ಎಲ್ಲೆಡೆಯೂ ಲಭ್ಯವಾಗುವ ಗೌರವವೇ ಇದಕ್ಕೆ ಸಾಕ್ಷಿಯಾಗಿದೆ. ಸ್ವಾಭಿಮಾನಿಯಾಗಿರುವುದು ಪ್ರತಿ ಕ್ಷಣ ಸಂತೋಷ ನೀಡುತ್ತದೆ.

ನಿಮ್ಮ ಕುಟುಂಬವನ್ನು ಗೌರವಿಸಿ

ನಿಮ್ಮ ಕುಟುಂಬವನ್ನು ಗೌರವಿಸಿ

ನಿಮ್ಮ ಕೆಲಸಕ್ಕಿಂತಲೂ ನಿಮ್ಮ ಕುಟುಂಬ ಮುಖ್ಯ ಎಂದು ಸುಭಾಷಿತವೊಂದು ತಿಳಿಸುತ್ತದೆ. ನಿಮಗೆ ಅತ್ಯಂತ ಆತ್ಮೀಯರಾದ ಮನೆಯವರನ್ನು ಗೌರವಿಸುವುದು ಸಂತೋಷದ ಪ್ರಥಮ ಮೆಟ್ಟಿಲಾಗಿದೆ. ನಿಮ್ಮ ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಸಿ, ವಿಷಯಗಳನ್ನು ಸಮಾಲೋಚಿಸಿ, ಜೊತೆಯಾಗಿ ಊಟ ಮಾಡಿ, ಕಿರಿಯರ ತಪ್ಪುಗಳನ್ನು ತಿದ್ದಿ ತೀಡಿ, ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ನಾಗರಿಕರಾಗಲು ಸಹಕರಿಸಿ. ಹಿರಿಯರು ನೀಡಿದ ಹಿತವಚನಗಳನ್ನು ಪಾಲಿಸಿ. ಸಾಧ್ಯವಾದಷ್ಟು ಮಟ್ಟಿಗೆ ಮನೆಯವರಿಗೆ ಸಮಯ ನೀಡಿ. ವರ್ಷಕ್ಕೊಮ್ಮೆಯಾದರೂ ಮನೆಯವರ ಜೊತೆ ಪ್ರವಾಸ ಕೈಗೊಳ್ಳಿ. ಮನೆಯ ಸಮಸ್ಯೆಗಳನ್ನು ಸಮಾಲೋಚಿಸಿ ಪರಿಹರಿಸಲು ಯತ್ನಿಸಿ. ಪ್ರತಿಯೊಬ್ಬರ ಆದ್ಯತೆಗಳಿಗೆ ಗಮನ ನೀಡಿ.

ಇಂದಿನ ಕೆಲಸವನ್ನು ಇಂದೇ ಈಗಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿ

ಇಂದಿನ ಕೆಲಸವನ್ನು ಇಂದೇ ಈಗಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿ

ನಮ್ಮಲ್ಲಿ ಹೆಚ್ಚಿನವರಿಗೆ ಕೆಲಸವನ್ನು ಮುಂದೂಡುವುದು ರಕ್ತಗತವಾಗಿ ಬಂದಂತಹ ಆಲಸ್ಯವಾಗಿದೆ. ಆದರೆ ಮರುದಿನ ನಿನ್ನೆಯ ಉಳಿದ ಕೆಲಸಗಳು ಇಂದಿನ ಕೆಲಸವನ್ನು ಇನ್ನಷ್ಟು ಹೊರೆಗೊಳಿಸುವ ಕಾರಣ ನಮ್ಮ ಸಂತೋಷ ಮಾಯವಾಗುತ್ತದೆ. ಅದರ ಬದಲಿಗೆ ಇಂದು ಮಾಡಬೇಕಾದ ಕೆಲಸಗಳನ್ನು ಅತಿಮುಖ್ಯ, ಮುಖ್ಯ, ಮುಖ್ಯವಲ್ಲದ ಹಾಗೂ ನಿಧಾನವಾಗಿ ಮಾಡಬಹುದಾದ ಕೆಲಸ ಎಂದು ವಿಂಗಡಿಸಿಕೊಂಡು ಆ ಪ್ರಕಾರ ಎಲ್ಲವನ್ನೂ ಇಂದೇ ಮಾಡಿ ಮುಗಿಸಿರಿ.

ಆ ಕೆಲಸಗಳು ಮುಗಿಯುವವರೆಗೂ ಬೇರೆ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ. ನಾಳೆ ಮುಂದುವರೆಸಬೇಕಾದ ಕೆಲಸಗಳನ್ನು ನಾಳೆ ಆರಂಭಿಸಲು ಸುಲಭವಾಗುವಂತೆ ಪ್ರಾಥಮಿಕ ಘಟ್ಟಗಳನ್ನು ತಯಾರಿ ಮಾಡಿಟ್ಟಿರಿ. ನಾಳೆ ಆ ಕೆಲಸ ಅಲ್ಲಿಂದ ಮುಂದುವರೆಸಲು ಮನ ನಿರಾಳವಾಗಿದ್ದು ಎಷ್ಟೇ ಜಟಿಲವಾದ ಕೆಲಸವಾದರೂ ನಿರ್ವಿಘ್ನವಾಗಿ ಕೊನೆಗೊಳ್ಳುತ್ತದೆ.

ಸಾಧ್ಯವಾದಷ್ಟು ಸ್ವಚ್ಛ ನೀರು ಕುಡಿಯಿರಿ

ಸಾಧ್ಯವಾದಷ್ಟು ಸ್ವಚ್ಛ ನೀರು ಕುಡಿಯಿರಿ

ದಿನದ ಕಾರ್ಯಗಳಿಂದ ದೇಹದಿಂದ ದ್ರವದ ಪ್ರಮಾಣ ಕಡಿಮೆಯಾಗುತ್ತಾ ಇರುತ್ತದೆ. ಸಾಧಾರಣ ಘಂಟೆಗೆ ಅಥವಾ ಎರಡು ಘಂಟೆಗೆ ಒಂದು ದೊಡ್ಡ ಲೋಟದಷ್ಟು ತಣ್ಣನೆಯ (ಅಂದರೆ ಮಂಜುಗಡ್ಡೆಯಷ್ಟು ತಣ್ಣಗಿಲ್ಲದ) ಅಥವಾ ಉಗುರು ಬೆಚ್ಚನೆಯ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅದರಲ್ಲೂ ಮುಖ್ಯವಾಗಿ ಮೆದುಳಿಗೆ ಅಗತ್ಯವಾದ ದ್ರವ ಹಾಗೂ ರಕ್ತಸಂಚಾರ ಲಭ್ಯವಾಗಿ ಕೆಲಸದಲ್ಲಿ ತನ್ಮಯತೆ ಮೂಡುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಉಲ್ಲಸಿತ ಮನಸ್ಸಿನಿಂದ ಅತಿಹೆಚ್ಚಿನ ಒತ್ತಡಗಳಲ್ಲೂ ಉದ್ವೇಗಗೊಳ್ಳದೇ ಕೆಲಸಮಾಡಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಸಾಧಿಸಿದ ವಿಜಯ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.

ಪ್ರತಿದಿನ ಪ್ರಾತಃಕಾಲಕ್ಕೂ ಮುನ್ನ ಎಚ್ಚರಾಗಿ

ಪ್ರತಿದಿನ ಪ್ರಾತಃಕಾಲಕ್ಕೂ ಮುನ್ನ ಎಚ್ಚರಾಗಿ

ಮಗು ತನ್ನ ತಾಯಿಯ ಮಡಿಲಲ್ಲಿ ಅತ್ಯಂತ ನಿರಾಳವಾಗಿ ನಿದ್ರಿಸುತ್ತದೆ. ತಾಯಿ ತನ್ನನ್ನು ರಕ್ಷಿಸುತ್ತದೆ ಎಂಬ ಭಾವನೆ ಆ ನಿದ್ದೆಗೆ ಅಡಿಪಾಯವಾಗಿದೆ. ನಮ್ಮೆಲ್ಲರ ತಾಯಿಯಾದ ನಿಸರ್ಗ ನಮಗಾಗಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಚಟುವಟಿಕೆಯಿಂದಿರಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಹಗಲು ರಾತ್ರಿಗಳನ್ನು ನಿರ್ಮಿಸಿದೆ. ಇದಕ್ಕೆ ವಿರೋಧವಾಗಿ ಹೋಗುವ ನಾವು ನಿಸರ್ಗದ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ರಾತ್ರಿಯ ವಿಶ್ರಾಂತಿಯ ಬಳಿಕ ಪ್ರಾತಃಕಾಲಕ್ಕೂ ಮುನ್ನ ಎಚ್ಚರಾಗಿ ದಿನದ ಚಟುವಟಿಕೆಗಳನ್ನು ಪ್ರಾರಂಭಿಸುವ ಮೂಲಕ ದಿನದ ಎಲ್ಲಾ ಚಟುವಟಿಕೆಗಳಲ್ಲಿ ಸಂತೋಷ ಪಡೆಯಬಹುದು. ನಿಸರ್ಗದೊಂದಿಗೆ ಒಂದಾಗುವ ಹಲವು ವಿಷಯಗಳನ್ನು ಮುಂದೆ ವಿವರಿಸಲಾಗಿದೆ.

ಪ್ರಾತಃಕಾಲದಲ್ಲಿ ಕೊಂಚ ಹೊತ್ತು ಧ್ಯಾನ ಮಾಡು

ಪ್ರಾತಃಕಾಲದಲ್ಲಿ ಕೊಂಚ ಹೊತ್ತು ಧ್ಯಾನ ಮಾಡು

ಹಿಂದೆ ತಪಸ್ವಿಗಳು ದಿನಗಟ್ಟಲೆ, ವರ್ಷಗಟ್ಟಲೆ ಧ್ಯಾನ ಮಾಡುವ ಮೂಲಕ ಹಲವು ಸಿದ್ಧಿಗಳನ್ನು ಸಾಧಿಸಿದ್ದರು. ಇಡಿಯ ದಿನವಲ್ಲದಿದ್ದರೂ ಕೆಲವು ನಿಮಿಷಗಳ ಧ್ಯಾನ ನಮ್ಮ ದೇಹ, ಮನಸ್ಸುಗಳನ್ನು ನಿರಾಳವಾಗಿರಿಸಿ ಸಂತೋಷವನ್ನು ವೃದ್ಧಿಗೊಳಿಸುತ್ತದೆ. ಧ್ಯಾನಕ್ಕೆ ಪ್ರಾತಃಕಾಲದ ಸಮಯ ಅತ್ಯಂತ ಸೂಕ್ತ ಎಂದು ಹಲವು ಧರ್ಮಗಳು ಬೋಧಿಸುತ್ತವೆ. ಮನಸ್ಸಿನಲ್ಲಿ ಧನಾತ್ಮಕ ವಿಚಾರಗಳು ಮೊಳೆದು ನವತಾರುಣ್ಯದ ಕಳೆ ಮೂಡಿಸುತ್ತದೆ. ಆಶಾಭಾವನೆ ಚಿಗುರುತ್ತದೆ. ದಿನದಲ್ಲಿ ಆಗಮಿಸುವ ಎಲ್ಲಾ ಕಾರ್ಯಭಾರವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಆತ್ಮಸ್ಥೈರ್ಯ ನೀಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ವ್ಯಾಯಾಮ ಮಾಡಿ

ವ್ಯಾಯಾಮ ಮಾಡುವುದೆಂದರೆ ಹೆಚ್ಚಿನವರಿಗೆ ಬೋರು ಹೊಡೆಸುವ ಕಾರ್ಯವಾಗಿದೆ. ಆದರೆ ಪ್ರತಿ ದಿನದ ಒಂದು ಹೊತ್ತಿನಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ದೇಹವನ್ನೂ ಮನಸ್ಸನ್ನೂ ಹತೋಟಿಯಲ್ಲಿಟ್ಟುಕೊಳ್ಳುವ ಮೂಲಕ ಉದಾಸೀನತೆಯನ್ನು ಗೆದ್ದ ಸಂತೋಷ ಮೂಡುತ್ತದೆ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ಆಹಾರದ ವಿಷಯ ಬಂದಾಗ ನಮಗೆ ಸುಲಭವಾಗಿ ದಕ್ಕಬಹುದಾದ ಹಾಗೂ ಇನ್ನೊಬ್ಬರಲ್ಲಿ ಹೇಳಿಕೊಂಡು ಪ್ರತಿಷ್ಠೆ ಮೆರೆಯಬಹುದಾದ ಆಹಾರಗಳಿಗೆ ನಾವು ಮರುಳಾಗುತ್ತೇವೆ. ಆದರೆ ಈ ಆಹಾರಗಳು ನಮ್ಮ ಆರೋಗ್ಯದ ಮೇಲೆ ಮಾಡುವ ಪರೋಕ್ಷ ಪರಿಣಾಮಗಳಿಗೆ ನಾವು ಚಿಂತೆ ಮಾಡುವುದಿಲ್ಲ. ದಿನಗಳೆದಂತೆ ಹೆಚ್ಚುವ ಸ್ಥೂಲಕಾಯ, ಕುಗ್ಗುವ ದೇಹದಾರ್ಢ್ಯತೆ ಸಂತೋಷವನ್ನು ಕುಂಠಿಸುತ್ತಾ ಹೋಗುತ್ತದೆ. ಬದಲಾಗಿ ಕುರುಡು ಪ್ರತಿಷ್ಠೆಗೆ ಮಾರುಹೋಗದೇ ಆರೋಗ್ಯಕರವಾದ ಆಹಾರಗಳನ್ನು ಕ್ಲುಪ್ತಕಾಲದಲ್ಲಿ ಸೇವಿಸಿ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿಟ್ಟುಕೊಳ್ಳುವುದು ಸಂತೋಷ ನೆಲೆಸುತ್ತದೆ. ನೆನಪಿಡಿ: ಮನೆಯ ಊಟ ಜಗತ್ತಿನ ಅತ್ಯಂತ ಶ್ರೇಷ್ಠ ಆಹಾರ.

ನಳಪಾಕವೇ ಸಂತೋಷಕ್ಕೆ ಮೂಲ

ನಳಪಾಕವೇ ಸಂತೋಷಕ್ಕೆ ಮೂಲ

ನಿಮ್ಮ ಆಹಾರವನ್ನು ನೀವೇ ಸಿದ್ಧಪಡಿಸಿಕೊಳ್ಳುವುದು ಸಂತೋಷ ತರುವ ವಿಷಯವಾಗಿದೆ. ಆ ಆಹಾರ ಎಷ್ಟೇ ಕಳಪೆಯಾಗಿದ್ದರೂ ನಾವೇ ತಯಾರಿಸಿದ್ದುದೆಂಬ ಭಾವನೆ ಸಂತೋಷ ಮೂಡಿಸುತ್ತದೆ. ಕೆಲವು ಪ್ರಯತ್ನಗಳ ಬಳಿಕ ಉತ್ತಮ ಹಾಗೂ ಸ್ವಾದಿಷ್ಟ ಅಡುಗೆಯ ಕಲೆ ಸಿದ್ಧಿಸುತ್ತದೆ. ಇಲ್ಲದಿದ್ದರೆ ಮನೆಯಲ್ಲಿ ಅಡುಗೆ ಮಾಡುವವರಿಗೆ ನೆರವು ನೀಡುವ ಮೂಲಕವೂ ಸಂತೋಷ ವೃದ್ಧಿಸುತ್ತದೆ.

ಹಿರಿಯರನ್ನು ಗೌರವಿಸಿ, ನೆರವಾಗಿ

ಹಿರಿಯರನ್ನು ಗೌರವಿಸಿ, ನೆರವಾಗಿ

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಲವಾರು ಹಿರಿಯ ನಾಗರಿಕರು ಎದುರಾಗುತ್ತಾರೆ. ಅವರನ್ನು ಗೌರವಿಸಿ ನಿಮ್ಮಿಂದ ಆಗಬಹುದಾದ ಯಾವುದೇ ಸಹಾಯವನ್ನು ಫಲಾಪೇಕ್ಷೆಯಿಲ್ಲದೇ ನೀಡಿ. ಸಾರ್ವಜನಿಕ ಸ್ಥಳದಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ನೀಡಿ. ಅವರ ಆಶೀರ್ವಾದ ನೀಡುವ ಸಂತೋಷ ಅವರ್ಚನೀಯವಾದುದು.

ದಿನದಲ್ಲಿ ಕನಿಷ್ಟ ಆರು ಘಂಟೆ ನಿದ್ರೆ ಮಾಡಿ

ದಿನದಲ್ಲಿ ಕನಿಷ್ಟ ಆರು ಘಂಟೆ ನಿದ್ರೆ ಮಾಡಿ

ಆರೋಗ್ಯಕರ ಮೆದುಳಿಗೆ ವಿಶ್ರಾಂತಿ ಅಗತ್ಯ. ಈ ವಿಶ್ರಾಂತಿ ಅನವರತ ಆರು ಘಂಟೆಗಳ ಕಾಲದ ನಿದ್ರೆಯಿಂದ ಮಾತ್ರ ಪ್ರಾಪ್ತವಾಗುತ್ತದೆ. ಆದರೆ ಆರೋಗ್ಯದ ಅವಶ್ಯಕತೆಗನುಸಾರವಾಗಿ ಆರರಿಂದ ಎಂಟು ಘಂಟೆಗಳ ಕಾಲ ನಿದ್ದೆ ಮಾಡಬಹುದು. ಅದಕ್ಕೂ ಹೆಚ್ಚಿನ ನಿದ್ರೆ ಖಿನ್ನತೆ ಮತ್ತು ತಳಮಳವನ್ನು ಹೆಚ್ಚಿಸುವುದರಿಂದ ಹೆಚ್ಚಿನ ನಿದ್ದೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ದಿನಕ್ಕೆ ಕನಿಷ್ಟ ಒಮ್ಮೆ ಸ್ನಾನ ಮಾಡಿ

ದಿನಕ್ಕೆ ಕನಿಷ್ಟ ಒಮ್ಮೆ ಸ್ನಾನ ಮಾಡಿ

ಪ್ರಾತಃಕಾಲದ ಸ್ನಾನದಿಂದ ಶರೀರ ಶುಭ್ರವಾಗುವುದರ ಜೊತೆಗೆ ದಿನದ ಕೆಲಸಗಳು ಸರಾಗವಾಗಲು ನೆರವಾಗುತ್ತದೆ. ಅಂತೆಯೇ ರಾತ್ರಿ ಮಲಗುವ ಮುನ್ನ ಮಾಡುವ ಸ್ನಾನದಿಂದಲೂ ಮನ ಹಗುರಾಗಿ ಉತ್ತಮ ನಿದ್ದೆಗೆ ಅಡಿಪಾಯವಾಗುತ್ತದೆ.

ಪ್ರತಿದಿನ ಪ್ರಾರ್ಥನೆಗಾಗಿ ಕೊಂಚ ಸಮಯ ಮೀಸಲಿಡಿ

ಪ್ರತಿದಿನ ಪ್ರಾರ್ಥನೆಗಾಗಿ ಕೊಂಚ ಸಮಯ ಮೀಸಲಿಡಿ

ನೀವು ಅನುಸರಿಸುವ ಧರ್ಮಕ್ಕನುಸಾರವಾದ ಪ್ರಾರ್ಥನೆಗೆ ಪ್ರತಿದಿನ ನಿಯಮಿತವಾದ ಸಮಯವನ್ನು ಮೀಸಲಿಡಿ. ಪ್ರಾತಃಕಾಲದ ಹಾಗೂ ಮುಸ್ಸಂಜೆಯ ಪ್ರಾರ್ಥನೆಗಳಿಂದ ತನುಮನಗಳಿಗೆ ನವಚೇತನ ದೊರಕುತ್ತದೆ. ದಿನವಿಡೀ ಸಂತೋಷದಿಂದಿರಲು ಪ್ರಾರ್ಥನೆ ಅದ್ಭುತವಾದ ದಾರಿಯಾಗಿದೆ.

ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತಲಿರಿ

ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತಲಿರಿ

ವಿದ್ಯೆಗೆ ಸಮನಾದ ಇನ್ನೊಂದು ಐಶ್ವರ್ಯವಿಲ್ಲ. ನಿಮ್ಮ ಕಾರ್ಯಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಹಾಗೂ ಪ್ರಗತಿಗಳನ್ನು ಗಮನಿಸುತ್ತಾ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತ್ತಾ ಹೋಗುವುದು ನಿಮ್ಮ ವೃತ್ತಿಪರತೆಗೆ ಅಗತ್ಯವಾಗಿದೆ. ಹೊಸತನ್ನು ಕಲಿಯುತ್ತಾ ಹೋಗುವ ಮೂಲಕ ಸಂತೋಷ ನೆಲೆಗೊಳ್ಳುತ್ತದೆ.

ಹವ್ಯಾಸವೊಂದರಲ್ಲಿ ಲೀನರಾಗಿ

ಹವ್ಯಾಸವೊಂದರಲ್ಲಿ ಲೀನರಾಗಿ

ನಿಮಗೆ ಸಂತೋಷ ಕೊಡುವ ಹವ್ಯಾಸವೊಂದನ್ನು ರೂಢಿಸಿಕೊಂಡು ಕೆಲ ಸಮಯ ಅದರಲ್ಲಿ ಮಗ್ನರಾಗಿ. ಆ ಹವ್ಯಾಸದಲ್ಲಿ ನಿರತ ಇತರರನ್ನು ಭೇಟಿಯಾಗಿ ಪರಸ್ಪರ ಹವ್ಯಾಸದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋಗಿ. ಈ ಮೂಲಕ ಸಂತೋಷ ಪಡೆಯುತ್ತಲಿರಿ.

Story first published: Saturday, August 30, 2014, 9:02 [IST]
X
Desktop Bottom Promotion