ಜನವರಿ 26 ಕೇವಲ ಗಣರಾಜ್ಯ ದಿನವಲ್ಲ..ಎಷ್ಟೆಲ್ಲಾ ಘಟನೆಗಳು ಆ ದಿನ ನಡೆದಿವೆ ಗೊತ್ತಾ?

ಜನವರಿ 26 ಭಾರತದ ಪಾಲಿಗೆ ಮರೆಯಲಾಗದ ದಿನ. 1950ರಲ್ಲಿ ನಮ್ಮ ಸಂವಿಧಾನವನ್ನು ಒಪ್ಪಿಕೊಂಡು ಜಾರಿಗೆ ತಂದಂತಹ ದಿನವಾಗಿದೆ. ಹೀಗಾಗಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಇದೇ ದಿನ ದೆಹಲಿಯಲ್ಲಿ ರಾಷ್ಟ್ರಪತಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಸಹ ಮಾಡಲಿದ್ದಾರೆ.

ಆದರೆ ಜನವರಿ 26ರಂದು ಕೇವಲ ಗಣರಾಜ್ಯೋತ್ಸವ ಮಾತ್ರವಲ್ಲ ಹಲವು ಘಟನಾವಳಿಗಳು ನಡೆದಿವೆ. ಆದರೆ ಈ ಬಗ್ಗೆ ನಮ್ಮ ಗಮನ ಹರಿಯುವುದೇ ಇಲ್ಲ. ಗಣರಾಜ್ಯೋತ್ಸವದಂದೆ ಇತಿಹಾಸದಲ್ಲಿ ದಾಖಲಾಗಿರುವ ಕೆಲವು ಪ್ರಮುಖ ಘಟನಾವಳಿಗಳ ಕುರಿತಂತೆ ನಾವು ತಿಳಿದುಕೊಳ್ಳೋಣ.

1. ಹುಮಾಯೂನ್ ಸಾವು - ಜನವರಿ 26, 1556

ಮೊಘಲ್ ಚಕ್ರವರ್ತಿ ಹುಮಾಯೂನ್ ಜನವರಿ 26, 1556 ರಂದು ನಿಧನರಾದರು. ಜನವರಿ 24, 1556 ರ ಸಂಜೆ, ರಾಜ ಹುಮಾಯೂನ್ ದಿನ್ ಪನಾಹ್ ಎಂದು ಕರೆಯಲ್ಪಡುವ ಕಟ್ಟಡದ ಲೈಬ್ರರಿಯ ಮೇಲ್ಛಾವಣಿಯ ಮೇಲೆ ಕುಳಿತಿದ್ದನು. ಆದರೆ ನಮಾಜ್ ಮಾಡಲು ಮೆಟ್ಟಿಲು ಇಳಿದು ಬರುವಾಗ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ದುರಂತ ಸಾವು ಕಂಡಿದ್ದರು.

Republic Day

2. ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಗವರ್ನರ್-ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ರಾಜೀನಾಮೆ - ಜನವರಿ 26, 1950

ಚಕ್ರವರ್ತಿ ರಾಜಗೋಪಾಲಾಚಾರಿ, ರಾಜಾಜಿ ಎಂದು ಜನಪ್ರಿಯರಾಗಿದ್ದ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿದ್ದರು. ಹಾಗೂ ಭಾರತದ ಕೊನೆಯ ಗವರ್ನರ್ ಜನರಲ್ ಸಹ ಅವರೇ ಆಗಿದ್ದರು. ವಿಭಜನೆಯ ಸಮಯದಲ್ಲಿ, ರಾಜಗೋಪಾಲಾಚಾರಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಿಸಲಾಯಿತು.

ಜೂನ್ 1948 ರಲ್ಲಿ, ಮೌಂಟ್ ಬ್ಯಾಟನ್ ಭಾರತವನ್ನು ತೊರೆಯಲು ನಿರ್ಧರಿಸಿದಾಗ, ರಾಜಗೋಪಾಲಾಚಾರಿ ಅವರು ಜನವರಿ 26, 1950 ರವರೆಗೆ ಗವರ್ನರ್ ಆಗಿದ್ದರು. ಭಾರತೀಯ ಸಂವಿಧಾನವನ್ನು ಜಾರಿಗೊಳಿಸಿದಾಗ ಮತ್ತು ದೇಶವು ಗಣರಾಜ್ಯವಾಯಿತು ಇದಾದ ಬಳಿಕ ಜನವರಿ 26, 1950 ರಂದು, ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಡಾ.ರಾಜೇಂದ್ರ ಪ್ರಸಾದ್ ದೇಶದ ಮೊದಲ ರಾಷ್ಟ್ರಪತಿಯಾದರು.

3. ಪೂರ್ಣ ಸ್ವರಾಜ್ ದಿನ ಎಂದು ಘೋಷಣೆ- ಜನವರಿ 26, 1930

ಜವಾಹರಲಾಲ್ ನೆಹರು ಅವರು ಜನವರಿ 26, 1930 ರಂದು ಲಾಹೋರ್ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಕೋರಿದ ನಂತರ ಗಾಂಧೀಜಿ ಇದನ್ನು ಸ್ವತಂತ್ರ ಸಂಕಲ್ಪ ದಿವಸ್ ಎಂದು ಘೋಷಿಸಿದರು. ಮಹಾತ್ಮ ಗಾಂಧಿಯವರು ಜನವರಿ 26 ಅನ್ನು 'ಸ್ವತಂತ್ರ ಸಂಕಲ್ಪ ದಿವಸ್' ಎಂದು ಹೆಸರಿಸಿದ್ದರು. 1931 ರಿಂದ, 1947 ಸೇರಿದಂತೆ ಪ್ರತಿ ವರ್ಷ, ಜನವರಿ 26ರನ್ನು ದೇಶದಾದ್ಯಂತ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಯಿತು.

4. ಅಶೋಕ ಸ್ತಂಭವನ್ನು 'ರಾಷ್ಟ್ರೀಯ ಲಾಂಛನ'ವಾಗಿ ಅಳವಡಿಸಲಾಯಿತು - ಜನವರಿ 26, 1950

ಜನವರಿ 26, 1950 ರಂದು, ಸತ್ಯಮೇವ ಜಯತೆ ಎಂಬ ಧ್ಯೇಯವಾಕ್ಯದ ಮೇಲೆ ಇರಿಸಲಾದ ಅಶೋಕನ ಸಿಂಹ ಪ್ರಾತಿನಿಧ್ಯವನ್ನು ಭಾರತದ ರಾಜ್ಯ ಲಾಂಛನವಾಗಿ ಅಳವಡಿಸಲಾಯಿತು. ರಾಷ್ಟ್ರೀಯ ಲಾಂಛನವು ಲಯನ್ ಕ್ಯಾಪಿಟಲ್‌ನ ರೂಪಾಂತರವಾಗಿದೆ, ಮೂಲತಃ 250 BC ಯಲ್ಲಿ ಸ್ಥಾಪಿಸಲಾದ ಸಾರಾನಾಥ್‌ನಲ್ಲಿರುವ ಅಶೋಕ ಕಾಲಮ್‌ನಲ್ಲಿ ಕಂಡುಬಂದಿದೆ.

5. ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಸ್ಮಾರಕ 'ಅಮರ್ ಜವಾನ್ ಜ್ಯೋತಿ' - ಜನವರಿ 26, 1972

ಅಮರ್ ಜವಾನ್ ಜ್ಯೋತಿಯನ್ನು 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮಾರಕವಾಗಿ ನಿರ್ಮಿಸಲಾಯಿತು, ಈ ಯುದ್ಧದಲ್ಲಿ ಭಾರತ ಗೆದ್ದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಜನವರಿ 26, 1972 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಇದನ್ನು ಸ್ಥಾಪಿಸಿದರು.

ಇದು ತಲೆಕೆಳಗಾದ ಬಯೋನೆಟ್ ಮತ್ತು ಅದರ ಮೇಲೆ ಸೈನಿಕನ ಶಿರಸ್ತ್ರಾಣವನ್ನು ಹೊಂದಿರುವ ಸ್ಮಾರಕವಾಗಿದೆ, ಜೊತೆಗೆ ಅದರೊಂದಿಗೆ ಶಾಶ್ವತವಾದ ಜ್ವಾಲೆಯು ಉರಿಯುತ್ತಲಿದೆ.

50 ವರ್ಷಗಳ ನಂತರ, ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು 21 ಜನವರಿ 2022 ರಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ವಾಲೆಯೊಂದಿಗೆ ವಿಲೀನಗೊಳಿಸಲಾಯಿತು.

English summary

January 26 Is Not Only Republic Day..Do You Know How Many Events Happened On That Day?

January 26 has been celebrated by India as Republic Day every year since 1950. However, the date of January 26 in India is remembered not only for Republic Day but also some of the other historical events from the past.
Story first published: Wednesday, January 24, 2024, 16:35 [IST]
X
Desktop Bottom Promotion