ವಿಚ್ಛೇದನ ಹೆಚ್ಚು ಎಲ್ಲಿ? ಅತಿ ಕಡಿಮೆ ವಿಚ್ಛೇದನ ಭಾರತದಲ್ಲೇ ನಡೆಯುತ್ತಾ? ಆಘಾತಕಾರಿ ವರದಿ ಇಲ್ಲಿದೆ

ಮದುವೆಗೂ ಮುಂಚೆ ತಿಳಿಯಿರಿ..! ವಿಶ್ವದಲ್ಲೇ ಅತಿ ಕಡಿಮೆ ವಿಚ್ಛೇದನ ಭಾರತದಲ್ಲೇ ನಡೆಯುತ್ತಾ? ಸ್ಪೇನ್ ಮತ್ತು ಅಮೆರಿಕದ ಪರಿಸ್ಥಿತಿ ಏನು? 'ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್' ನೀಡಿದ ಆಘಾತಕಾರಿ ವರದಿ ಮತ್ತು ಭಾರತೀಯ ಕುಟುಂಬಗಳ ಗಟ್ಟಿತನದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಹೌದು, ಭಾರತದಲ್ಲಿ ವಿಚ್ಛೇದನ ದರ (Divorce rate in India) ಹೆಚ್ಚಾಗುತ್ತಿದೆಯೇ ಎಂಬ ಚರ್ಚೆ ಇತ್ತೀಚೆಗೆ ವ್ಯಾಪಕವಾಗಿದೆ. ಬೆಳಗಿನ ಜಾವ ವಿವಾಹವಾದವರು ಸಂಜೆಯಷ್ಟರಲ್ಲಿ ಬೇರ್ಪಡಲು ಅರ್ಜಿ ಸಲ್ಲಿಸುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಆದರೆ, ಜಾಗತಿಕ ಮಟ್ಟದಲ್ಲಿ ಭಾರತದ (India) ನಿಜವಾದ ಸ್ಥಿತಿ ಏನು? ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ (World of Statistics) ಬಿಡುಗಡೆ ಮಾಡಿದ ಇತ್ತೀಚಿನ ವರದಿಯೊಂದು ಈ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆಯ ಬಲ ಎಷ್ಟಿದೆ (Divorce Rate Analysis) ಎಂಬ ಪ್ರಶ್ನೆಗೆ ಈ ವರದಿ ಉತ್ತರ ನೀಡುತ್ತದೆ.

Divorce Rate

ವಿಶ್ವದ ನಂ.1 'ಡಿವೋರ್ಸ್' ರಾಷ್ಟ್ರ ಯಾವುದು?

ಅಮೆರಿಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅನೇಕರು ಭಾವಿಸಬಹುದು. ಆದರೆ, ವಾಸ್ತವವಾಗಿ ಸ್ಪೇನ್ ಅತಿ ಹೆಚ್ಚು ವಿಚ್ಛೇದನಗಳು (Divorce) ನಡೆಯುವ ದೇಶವಾಗಿದೆ. ಈ ವರದಿಯ ಪ್ರಕಾರ, ಸ್ಪೇನ್‌ನಲ್ಲಿ ಶೇ. 85ರಷ್ಟು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. 2024ರ ಅಂಕಿಅಂಶಗಳ ಪ್ರಕಾರ, ಅಲ್ಲಿ ವರ್ಷವೊಂದರಲ್ಲೇ 82,991ಕ್ಕೂ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ಪ್ರತಿ ನೂರು ಮದುವೆಗಳಲ್ಲಿ ಸುಮಾರು 45 ರಿಂದ 85 ರಷ್ಟು ಪ್ರಕರಣಗಳು ಮುರಿದುಬೀಳುತ್ತಿವೆ.

ಇಷ್ಟೊಂದು ವಿಚ್ಛೇದನಕ್ಕೆ ಕಾರಣವೇನು?

ಸ್ಪೇನ್ ಅಥವಾ ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಳಕ್ಕೆ ಅಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಆರ್ಥಿಕ ಸ್ವಾತಂತ್ರ್ಯ ಒಂದು ದೊಡ್ಡ ಅಂಶ. ಮಹಿಳೆ ಮತ್ತು ಪುರುಷ ಇಬ್ಬರೂ ಸಮಾನವಾಗಿ ಸಂಪಾದಿಸುವುದರಿಂದ, ಆರ್ಥಿಕವಾಗಿ ಯಾರೂ ಪರಸ್ಪರ ಅವಲಂಬಿತರಾಗಿರುವುದಿಲ್ಲ. ಆದ್ದರಿಂದ, ಅವರಿಗೆ ಕಿರಿಕಿರಿ ಅನಿಸುವ ಸಂಬಂಧಗಳಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ, ಇದು ಸಂಬಂಧಗಳನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಕಾರಣವಾಗುತ್ತದೆ.

ಅಲ್ಲದೆ, ಮದುವೆಗೂ ಮುನ್ನವೇ ಲಿವ್-ಇನ್ ಸಂಬಂಧಗಳಲ್ಲಿ ಒಟ್ಟಾಗಿ ಬದುಕುವುದು ಅಲ್ಲಿ ಸಾಮಾನ್ಯವಾಗಿದೆ. ಇದು ಬಾಂಧವ್ಯದ ಬಗೆಗಿನ ದೃಷ್ಟಿಕೋನವನ್ನೇ ಬದಲಿಸಿದೆ. ಸಾಮಾಜಿಕ ದೃಷ್ಟಿಕೋನದ ವಿಷಯದಲ್ಲಿಯೂ ವ್ಯತ್ಯಾಸವಿದೆ. ಭಾರತದಲ್ಲಿ ವಿಚ್ಛೇದನವನ್ನು 'ಶಾಪ' ಅಥವಾ 'ಸಂಕಟ' ಎಂದು ನೋಡಿದರೆ, ಸ್ಪೇನ್‌ನಲ್ಲಿ ಇದು ಒಂದು 'ಪ್ರಗತಿಪರ ನಿರ್ಧಾರ' (Progressive Idea) ಎಂದು ಸ್ವೀಕರಿಸಲಾಗುತ್ತದೆ. ಈ ಬದಲಾದ ದೃಷ್ಟಿಕೋನಗಳು ವಿಚ್ಛೇದನದ ಪ್ರಮಾಣ ಹೆಚ್ಚುವುದಕ್ಕೆ ಕೊಡುಗೆ ನೀಡುತ್ತಿವೆ.

ಸ್ಪೇನ್ ನಂತರ ರಷ್ಯಾ ಎರಡನೇ ಸ್ಥಾನ

ಹೆಚ್ಚು ವಿಚ್ಛೇದನಗಳು ನಡೆಯುವ ದೇಶಗಳ ಪಟ್ಟಿಯಲ್ಲಿ ಸ್ಪೇನ್ ನಂತರ ರಷ್ಯಾ ಎರಡನೇ ಸ್ಥಾನದಲ್ಲಿದೆ. ಅಲ್ಲಿ ವಿಚ್ಛೇದನ ದರ ಶೇ. 74ರಷ್ಟಿದೆ. ನಂತರದ ಸ್ಥಾನಗಳಲ್ಲಿ ಉಕ್ರೇನ್ (ಶೇ. 71), ಇಟಲಿ (ಶೇ. 69) ಮತ್ತು ಫ್ರಾನ್ಸ್ (ಶೇ. 55) ಇವೆ. ಅಚ್ಚರಿಯ ಸಂಗತಿಯೆಂದರೆ, ಹೆಚ್ಚು ವಿಚ್ಛೇದನ ನಡೆಯುತ್ತದೆ ಎಂದು ನಾವು ಭಾವಿಸುವ ಅಮೆರಿಕದಲ್ಲಿ ಇದರ ಪ್ರಮಾಣ ಕೇವಲ ಶೇ. 41ರಷ್ಟಿದೆ. ಇದು ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕ ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ.

ಏಷ್ಯಾದಲ್ಲಿ ಪರಿಸ್ಥಿತಿ ಹೇಗಿದೆ?

ಏಷ್ಯಾದ ರಾಷ್ಟ್ರಗಳ ಪರಿಸ್ಥಿತಿಯನ್ನು ಗಮನಿಸಿದಾಗ, ಯುರೋಪ್‌ಗೆ ಹೋಲಿಸಿದರೆ ಇಲ್ಲಿ ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದಾಗ್ಯೂ, ದಕ್ಷಿಣ ಕೊರಿಯಾ (ಶೇ. 46) ಮತ್ತು ಚೀನಾ (ಶೇ. 44) ದೇಶಗಳಲ್ಲಿ ವಿಚ್ಛೇದನ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ತಾಂತ್ರಿಕವಾಗಿ ಮುಂದುವರಿದ ಜಪಾನ್‌ನಲ್ಲಿ ಇದು ಶೇ. 35ರಷ್ಟಿದ್ದರೆ, ಇಂಡೋನೇಷ್ಯಾ (ಶೇ. 28) ಮತ್ತು ವಿಯೆಟ್ನಾಂ (ಶೇ. 7) ನಂತಹ ದೇಶಗಳಲ್ಲಿ ವಿಚ್ಛೇದನ ಪ್ರಮಾಣ ತೀರಾ ಕಡಿಮೆ ಇದೆ, ಇದು ಏಷ್ಯಾದಲ್ಲಿ ಮಿಶ್ರ ಪ್ರವೃತ್ತಿಯನ್ನು ಸೂಚಿಸುತ್ತದೆ.

ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಷಯ?

ಭಾರತಕ್ಕೆ ಸಂಬಂಧಿಸಿದಂತೆ, ಇದು ನಿಜಕ್ಕೂ ಹೆಮ್ಮೆಯ ವಿಷಯ. ಆಧುನಿಕತೆಯತ್ತ ವೇಗವಾಗಿ ಸಾಗುತ್ತಿದ್ದರೂ, ವಿಚ್ಛೇದನದ ವಿಷಯದಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಅಟ್ಟಹಾಸದ ಸ್ಥಾನದಲ್ಲಿದೆ. ಹೌದು, ಭಾರತದಲ್ಲಿ ವಿಚ್ಛೇದನದ ಪ್ರಮಾಣ ಶೇಕಡಾ 1ಕ್ಕಿಂತಲೂ ಕಡಿಮೆ ಇದೆ! ಇದಕ್ಕೆ ಮುಖ್ಯ ಕಾರಣ ನಮ್ಮ ವಿಶಿಷ್ಟ ಕೌಟುಂಬಿಕ ವ್ಯವಸ್ಥೆ. ಭಾರತದಲ್ಲಿ ವಿವಾಹ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ, ಬದಲಿಗೆ ಅದು ಎರಡು ಕುಟುಂಬಗಳ ಪವಿತ್ರ ಮಿಲನ ಎಂಬ ನಂಬಿಕೆ ಬಲವಾಗಿದೆ.

ಕುಟುಂಬದ ಹಿರಿಯರು ಮಧ್ಯಪ್ರವೇಶ

'ಏಳು ಜನ್ಮದ ಪವಿತ್ರ ಬಂಧ' ಎಂದು ಮದುವೆಯನ್ನು ಪರಿಗಣಿಸುವ ಸಂಪ್ರದಾಯದ ಬಲ ನಮ್ಮಲ್ಲಿದೆ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದಾಗ, ವಿಚ್ಛೇದನದ ಬದಲು ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ಸಂಧಾನ ಮಾಡುವ ಸಂಸ್ಕೃತಿ ನಮ್ಮಲ್ಲಿದೆ. ಅಲ್ಲದೆ, ಸಮಾಜದ ಗೌರವ, ಮಕ್ಕಳ ಭವಿಷ್ಯ ಮತ್ತು ಕುಟುಂಬದ ಪಾವಿತ್ರ್ಯತೆಗಾಗಿ ದಂಪತಿಗಳು ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಲು ಆದ್ಯತೆ ನೀಡುತ್ತಾರೆ.ಇದು ಸಂಬಂಧಗಳನ್ನು ಉಳಿಸಲು ಮುಖ್ಯ ಕಾರಣವಾಗಿದೆ.

ಒಟ್ಟಾರೆ, ಡಿಜಿಟಲ್ ಯುಗದಲ್ಲಿ ಪಾಶ್ಚಿಮಾತ್ಯ ಪ್ರಭಾವ ಹೆಚ್ಚುತ್ತಿದ್ದರೂ, ಭಾರತೀಯರು ಇಂದಿಗೂ ತಮ್ಮ ನೈತಿಕ ಮೌಲ್ಯಗಳಿಗೆ ಮತ್ತು ಕೌಟುಂಬಿಕ ಬದ್ಧತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಾವು ಆತಂಕ ಪಡುತ್ತಿದ್ದರೂ, ಜಾಗತಿಕ ಮಟ್ಟದಲ್ಲಿ ನಮ್ಮ ಕುಟುಂಬ ಬಾಂಧವ್ಯಗಳು ಇಂದಿಗೂ ಅತ್ಯಂತ ಗಟ್ಟಿಯಾಗಿವೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

English summary

Divorce Rate in India: Why India has the Lowest Divorce Rate in the World?

Divorce Rate in India: Why India has the Lowest Divorce Rate in the World?
X
Desktop Bottom Promotion