Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬಜೆಟ್ 2025: ಮಹಿಳೆಯರಿಗೆ ಬರಪೂರ ಕೊಡುಗೆ..! ಆರೋಗ್ಯ ವಲಯಕ್ಕೂ ಬಂಪರ್..!
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವ ಮೊದಲು ಹಲವು ಗ್ಯಾರಂಟಿ ನೀಡಿದ್ದ ಪಕ್ಷವು ಈ ಬಾರಿಯ ಬಜೆಟ್‌ನಲ್ಲೂ ಹಲವು ಕೊಡುಗೆ ನೀಡುವ ನಿರೀಕ್ಷೆ ಇತ್ತು. ಹೀಗಾಗಿ ಈ ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಯಾವೆಲ್ಲಾ ಕೊಡುಗೆ ನೀಡಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಜನಪರ ಯೋಜನೆಗಳ ನೀಡಿದ ಸರ್ಕಾರ ಎಂಬ ಹೆಗ್ಗಳಿಕೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ಈ ಬಾರಿ ದಾಖಲೆ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಾರಿ ಬರೋಬ್ಬರಿ 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ವಿಧಾನ ಸಭೆ ಕಲಾಪದಲ್ಲಿ ಬಜೆಟ್ ಮಂಡಿಸಿದ್ದು, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಕೀರ್ತಿ ಹೊಂದಿದ್ದಾರೆ.

2025-26ನೇ ಸಾಲಿನ ವರ್ಷದ ಬಜೆಟ್ 4 ಲಕ್ಷದ 09 ಸಾವಿರದ 549 ಕೋಟಿ ರೂಪಾಯಿ ಗಾತ್ರದ್ದಾಗಿದೆ. ಹಾಗೆ ನಿರೀಕ್ಷಿತ ವಲಯಕ್ಕೆ ಬರಪೂರ ಅನುದಾನ ಹಂಚಿಕೆ ಮಾಡಲಾಗಿದೆ. ಈ ಮೊದಲು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೂ ಈ ಬಾರಿಯ ಬಜೆಟ್‌ನಲ್ಲಿ ಅನುದಾನಗಳ ನೀಡಲಾಗಿದ್ದು, ಹೀಗಾಗಿ ಯಾವುದೇ ಗ್ಯಾರಂಟಿ ಯೋಜನೆ ಅರ್ಧದಲ್ಲಿಯೇ ನಿಲ್ಲುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ.
ಹಾಗಾದ್ರೆ ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ಹಾಗೆ ವಿಶೇಷವಾಗಿ ಆರೋಗ್ಯ ವಲಯಕ್ಕೆ ಯಾವೆಲ್ಲಾ ಕೊಡುಗೆ ಸಿಕ್ಕಂತಾಗಿದೆ? ಎಷ್ಟು ಕೋಟಿ ರೂಪಾಯಿಯ ಅನುದಾನ ಹಮಚಿಕೆ ಮಾಡಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪ್ರತಿಯೊಂದು ಬಜೆಟ್‌ನಲ್ಲಿಯೂ ವಿಶೇಷವಾಗಿ ಮಹಿಳೆರಿಗಾಗಿಯೇ ಒಂದಿಷ್ಟು ಯೋಜನೆಗಳು ಕೊಡುಗೆಗಳ ನೀಲಾಗುತ್ತದೆ. ಹಾಗೆ ಆರೋಗ್ಯ ವಲಯಕ್ಕೂ ಒಂದಿಷ್ಟು ಅನುದಾನ ನೀಡುವುದು ಕಾಮನ್. ಹಾಗಾದ್ರೆ ಈ ಬಜೆಟ್‌ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದೇನು ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಹಳ ಕಾಲದಿಂದ ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ. ಅದರಲ್ಲೂ ಹಲವು ಬಾರಿ ಪ್ರತಿಭಟನೆ, ಆಂದೋಲನ ನಡೆಸಿದ್ದರು. ಹೀಗಾಗಿ ಈ ಬಜೆಟ್‌ನಲ್ಲಿ ಅವರ ಗೌರವ ಧನ ಹೆಚ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹1,000 ಹಾಗೂ ಸಹಾಯಕಿಯರ ಗೌರವಧನವನ್ನು 750 ರೂಪಾಯಿ ಹೆಚ್ಚಿಸಲಾಗಿದೆ. ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಕರ್ಯ ನೀಡಲು ಒಟ್ಟಾರೆ 175 ಕೋಟಿ ರೂಪಾಯಿ ಒದಗಿಸುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಸಾಹಿತ್ಯ, ಕಲೆ, ಕಲಾವಿದರ ಮಾಸಾಶನವನ್ನು 2 ಸಾವಿರ ರೂಪಾಯಿಯಿಂದ 2,500 ರೂಪಾಯಿಗೆ ಹೆಚ್ಚಿಸಿದ್ದಾರೆ.
ಆರೋಗ್ಯ ವಲಯಕ್ಕೆ ಸಿಕ್ಕಿದ್ದೇನು?
2025-26ನೇ ಸಾಲಿನ ಬಜೆಟ್‌ನಲ್ಲಿ ತಾಯಂದಿರ ಹಾಗೂ ಮಹಿಳಾ ಆರೋಗ್ಯದ ಜೊತೆಗೆ ಆರೋಗ್ಯ ವಲಯಕ್ಕೆ ಕೋಟಿ ಕೋಟಿ ಅನುದಾನ ನೀಡಲಾಗಿದೆ. ಹಲವು ಹೊಸ ಯೋಜನೆಗಳು ಇದರಲ್ಲಿ ಸೇರಿವೆ. ಹೆರಿಗೆ ಸಂದರ್ಭದಲ್ಲಿ ರಾಜ್ಯದಲ್ಲಿ ಇತ್ತಿಚಿಗೆ ಗರ್ಭಿಣಿಯರ ಸಾವಿನ ಪ್ರಮಾಣ ಏರಿಕೆಯಾಗಿದ್ದ ಹಿನ್ನೆಲೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಅದರಲ್ಲೂ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚಾಗಿತ್ತು.
ಹೀಗಾಗಿ ಈ ಬಜೆಟ್‌ನಲ್ಲಿ ತಾಯಂದಿರ ಆರೋಗ್ಯ ಕುರಿತಂತೆ ತಾಯಿ ಮರಣ ದರ ಸೊನ್ನೆಗೆ ಇಳಿಸುವ ಉದ್ದೇಶದಿಂದ 320 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಪ್ರಸೂತಿ ವೇಳೆ ತೀವ್ರ ರಕ್ತಸ್ರಾವ ಮತ್ತು ರಕ್ತಸ್ರಾವ ತಡೆಗಟ್ಟುವಿಕೆಗೆ ನೆರವಾಗಲು ಅಗತ್ಯ ಉಪಕರಣ ಖರೀದಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಹೆರಿಗೆ ವೇಳೆ ಮರಣ ದರ ಇಳಿಕೆಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆಗೆ ಕ್ರಮ ವಹಿಸಲು ಸೂಚನೆ.
ಹಾಗೆ ಹಿಂದುಳಿದ ಜಿಲ್ಲೆಯಲ್ಲಿ ಗರ್ಭಿಣಿಯರಲ್ಲಿ ರಕ್ತ ಹೀನತೆಯಂತಹ ಪ್ರಕರಣಗಳು ಹೆಚ್ಚಳವಾಗಿರುವುದು ನೋಡಬಹುದು. ಹೀಗಾಗಿ ಗರ್ಭಿಣಿಯರ ರಕ್ತ ಹೀನತೆ ತಡೆಗೆ ಹಿಂದುಳಿದ ಜಿಲ್ಲೆಗಳಿಗೆ ಪೌಷ್ಠಿಕಾಂಶ ಕಿಟ್ ವಿತರಣೆಗೆ ಮುಂದಾಗಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ತಾಯಂದಿರ ವಾತ್ಸಲ್ಯ ಕಿಟ್ ಹಾಗೂ ಪ್ರೋತ್ಸಾಹ ಧನ ಯೋಜನೆ ಮುಂದುವರಿಕೆ ಮಾಡುವುದಾಗಿಯೂ ಹೇಳಿದ್ದಾರೆ.
ಹೊಸ ಆಸ್ಪತ್ರೆಗಳ ನಿರ್ಮಾಣ
ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಜನಸಂಖ್ಯೆ ಹೆಚ್ಚಳ ಆಗಿರುವುದು ನೋಡಬಹುದು. ಹೀಗಾಗಿ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ ಮುಂದಾಗಲಾಗಿದೆ, ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಸುಮಾರು 150 ಕೋಟಿ ರೂ ವೆಚ್ಚದಲ್ಲಿ 200 ಹಾಸಿಗೆ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದಾಗಲಾಗಿದೆ. ಕೊಡಗಿನ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ.
ಹಾಗೆ ಚಿತ್ರದುರ್ಗದ ಮೊಳಕಾಲ್ಮೂರಲ್ಲಿ 200 ಹಾಸಿಗೆ ಆಸ್ಪತ್ರೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಉಚಿತ ಆರೋಗ್ಯ ಸೇವೆ ವಿಸ್ತರಿಸಲಾಗಿದೆ. ಮಹಿಳೆಯರ ಗರ್ಭ ಕಂಠ ಕ್ಯಾನ್ಸರ್ ರೋಗ ತಡೆಗೆ HPV ಲಸಿಕೆ ಯೋಜನೆ ಘೋಷಿಸಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಕೂಡ ಇದಕ್ಕಾಗಿ ಹೊಸ ಯೋಜನೆ ಘೋಷಿಸಿತ್ತು.
ಹಾಗೆ ನರ ವೈಜ್ಞಾನಿಕ ಖಾಯಿಲೆಗಳಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KaBHI) ಯೋಜನೆ ಈ ವರ್ಷ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಣೆ ಮಾಡಲು ಸುಮಾರು 20 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ. ಹೊಸದಾಗಿ ಘೋಷಣೆಯಾಗಿರುವ 10 ತಾಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ. ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಗೃಹ ಆರೋಗ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಮುಂದಾಗಲಾಗಿದೆ. ಹಾಗೆ ಈ ಯೋಜನೆಗಾಗಿ ಸುಮಾರು 100 ಕೋಟಿ ರೂ ಅನುದಾನ ನೀಡಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಮಂಡಳಿಯ ಫಲಾನುಭವಿಗಳು 5 ಲಕ್ಷ ರೂ.ಗಳ ಚಿಕಿತ್ಸೆ ಮಿತಿಯನ್ನು ಪೂರ್ಣಗೊಳಿಸಿದ್ದಲ್ಲಿ ಮಂಡಳಿಯಿಂದ ಹೆಚ್ಚುವರಿಯಾಗಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಕ್ರಮವಹಿಸಲಾಗುವುದು.
ಬಿಸಿಯೂಟ ಕಾರ್ಯಕರ್ತೆಯರು, ಮಕ್ಕಳಿಗೂ ಬಂಪರ್ ಕೊಡುಗೆ
ಈ ಬಾರಿಯ ಬಜೆಟ್‌ನಲ್ಲಿ ಅತೀ ಹೆಚ್ಚು ಅನುದಾನ ದೊರೆತಿರುವುದು ಶಿಕ್ಷಣ ಇಲಾಖೆಗೆ. ಶಿಕ್ಷಣ ಇಲಾಖೆಗೆ ಬರೋಬ್ಬರಿ 45,286 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅದರಲ್ಲೂ ಬಿಸಿಯೂಟ ತಯಾರಿಕೆಯಲ್ಲಿ ತೊಡಗುವ ಮಹಿಳಾ ಸಿಬ್ಬಂದಿಯ ಗೌರವಧನ 1 ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಈ ಮೊದಲು ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೂಡ ಗೌರವಧನ ಹೆಚ್ಚಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹಾಗೆ ಮಕ್ಕಳಿಗೆ ನೀಡುವ ಹಾಲು, ಬಾಳೆಹಣ್ಣು, ಮೊಟ್ಟೆಯ ಸಂಖ್ಯೆಯನ್ನು ವಿಸ್ತರಿಸಲಾಗಿದ್ದು, ಇಡೀ ವಾರ ನೀಡಲು ಮುಂದಾಗಲಾಗಿದೆ. ಹಾಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನವನ್ನು ಕೂಡ ಹೆಚ್ಚಿಸಲಾಗಿದೆ. ಅವರಿಗೆ 2 ಸಾವಿರ ರೂಪಾಯಿ ಸಹಾಯಧನ ಹೆಚ್ಚಿಸಲಾಗಿದೆ.
2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರೂಪಾಯಿ ಸಾಲ ಮತ್ತು 170 ಕೋಟಿ ರೂಪಾಯಿಗಳ ಋಣೇತರ ಬಂಡವಾಳ ಸ್ವೀಕೃತಿ ಸಿಗಲಿದೆ ಎಂದು ಸಿದ್ದರಾಮಯ್ಯ ಅಂದಾಜಿಸಿದ್ದಾರೆ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬರೋಬ್ಬರಿ 34,955 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,475 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಇದೆಲ್ಲವೂ ಈ ಬಾರಿಯ ಬಜೆಟ್‌ನ ಮುಖ್ಯಾಂಶಗಳಾಗಿವೆ.



Click it and Unblock the Notifications