ಈ ಗಾರ್ಡನ್ ಕ್ರಾಂತಿಗೆ ನೀವು ರೆಡಿನಾ?

ಮನೆ ಸುತ್ತ ಮುತ್ತ ಗಿಡಗಳಿರೋದು, ಅದರಲ್ಲಿ ಚಿಕ್ಕ ಪುಟ್ಟ ಪಕ್ಷಿಗಳು ಕೂತು ಚಿಲಿಪಿಲಿಗುಟ್ಟೋದನ್ನು ಕೇಳುವುದು ಯಾರಿಗೆ ಇಷ್ಟ ಆಗಲ್ಲ ಹೇಳಿ? ಆದ್ರೆ ಈ ಬೆಂಗಳೂರಿನಂಥ ಕಾಂಕ್ರೀಟ್ ಕಾಡಿನಲ್ಲಿ ಮಾತ್ರ ಅದನ್ನೆಲ್ಲಾ ಊಹಿಸೋದು ಸ್ವಲ್ಪ ಕಷ್ಟಾನೇ. ಯಾಕೆಂದರೆ ಇರೋ ಮೂರು ಅಂಗುಲ ಜಾಗದಲ್ಲಿ ಮನೆ ಕಟ್ಟಿದ್ರೆ ಸಾಕು ಅನ್ನೋ ಜನ ಇನ್ನು ಗಿಡ ಬೆಳೆಸಲು ಜಾಗ ಎಲ್ಲಿಂದ ತರುತ್ತಾರೆ? ಅದರಲ್ಲೂ ಸ್ವಂತ ಮನೆ ಇರುವವರು ಅಂತೂ ಮನೆ ಮೇಲೆ ಮನೆ ಕಟ್ಟೋದರ ಜೊತೆಗೆ ಸೈಡ್‌ನಲ್ಲಿ ಜಾಗ ಇದ್ದರೆ ಇನ್ನೊಂದು ರೂಂ ಅಂತಾರೆ ಹೊರತು ಗಿಡ ಬೆಳೆಸೋಣ ಅನ್ನೋ ಉದಾರ ಮನಸ್ಸಂತೂ ಮಾಡುವುದಿಲ್ಲ. ಇನ್ನು ಹಿರಿಯರು ಅಪ್ಪಿತಪ್ಪಿ ಗಿಡ ಬೆಳೆಸಿದರೆ ಅದಕ್ಕೆ ನೀರು ಹಾಕುವ ಪುರುಸೊತ್ತು ಕೂಡಾ ಇರುವುದಿಲ್ಲ.

ಇದೆಲ್ಲದರ ಜೊತೆಗೆ ಅಪಾರ್ಟ್‌ಮೆಂಟ್‌ಗಳ ಸ್ಥಿತಿ ಆ ದೇವರಿಗೇ ಪ್ರೀತಿ. ಒಂದೋ ಜಾಗದ ಕೊರತೆ, ಇಲ್ಲದಿದ್ದರೆ ಪಾಟ್‌ಗೆ ನೀರು ಹಾಕುವಾಗ ಅದರಿಂದ ಕೆಳಗೆ ಬೀಳುವ ನೀರು ಮತ್ತು ಮಣ್ಣಿನಿಂದ ಮನೆ ಫ್ಲೋರ್ ಹಾಳಾಗುತ್ತೆ ಅನ್ನೋ ಮಾಲಿಕರ ಕಿರಿಕಿರಿ. ಇದೆಲ್ಲದರ ನಡುವೆ ಜನರು ಮಾತ್ರ ಈ ಕ್ರೋಟನ್ ಗಿಡ, ಹೂವಿನ ಗಿಡಗಳ ಸೌಂದರ್ಯವನ್ನು ಆಸ್ವಾದಿಸುವುದನ್ನು ಮರೆತೇ ಹೋಗಿದ್ದಾರೆ.

Modern Style Comfort Garden -Green WALL

ಇದಕ್ಕೆಲ್ಲಾ ಈಗ ಬ್ರೇಕ್ ಹಾಕೋ ಕಾಲ ಬಂದಿದೆ. ಕಾರ್ನರ್‌ಸ್ಟೋನ್ ಎಂಬ ರಿಯಲ್ ಎಸ್ಟೇಟ್ ಡೆವಲಪರ್ ಗ್ರೀನ್‌ವಾಲ್ ಅನ್ನುವ ಕಾನ್ಸೆಪ್ಟ್‌ನ್ನು ಶುರು ಮಾಡಿದ್ದಾರೆ. ಅದರ ಪ್ರಕಾರ ಚಿಕ್ಕ ಚಿಕ್ಕ ಗಿಡಗಳನ್ನು ಪುಟ್ಟ ಪುಟ್ಟ ಪಾಟ್‌ನಲ್ಲಿ ಹಾಕಿ ಒಂದು ಚೌಕಾಕಾರದ ಸ್ಟಾಂಡ್ ಥರ ಇರುವ ಮೆಷ್‌ನಲ್ಲಿ ಇರಿಸಲಾಗುತ್ತದೆ. ಈ ಮೆಷ್‌ನಲ್ಲಿ ಕ್ರೋಟನ್ ಸೇರಿದಂತೆ ಅನೇಕ ಚಿಕ್ಕ ಚಿಕ್ಕ ಹೂವಿನ ಗಿಡಗಳನ್ನು ಹಾಕಬಹುದು. ತುಂಬೆ, ಒಂದೆಲಗ, ಗರಿಕೆ, ತುಳಸಿ, ಸಾಂಬ್ರಾಣಿ ಹೀಗೆ ಔಷಧೀಯ ಗಿಡಗಳನ್ನು ಬೆಳೆಸಲೂ ಈ ಮೆಷ್‌ನ ಸಹಾಯ ಪಡೆಯಬಹುದು. ಇನ್ನು ಇದರಲ್ಲಿ ಮಣ್ಣು ಪಾಟ್‌ನಿಂದ ಕೆಳಗೆ ಬೀಳುವ ತಲೆಬಿಸಿ ಇಲ್ಲ. ಒಂದೇ ಲೆವಲ್‌ಗೆ ತಕ್ಕಂತೆ ಮಣ್ಣನ್ನು ಮುಂಚೆನೇ ಹಾಕಲಾಗುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಾದ ರಸಗೊಬ್ಬರವನ್ನು ಹಾಕುವ ಸೌಲಭ್ಯವನ್ನೂ ಮಾಡಲಾಗಿದೆ.

ಇನ್ನು ಹೂವಿನ ಗಿಡಗಳ ಪ್ರೇಮಿಗಳಿಗೆ ಇರುವ ದೊಡ್ಡ ಸಮಸ್ಯೆ ಅಂದರೆ ಗಿಡಗಳಿಗೆ ನೀರುಣಿಸುವುದು. ಎಷ್ಟೋ ಜನರು ನೀರು ಹಾಕಲು ಸಮಯ ಇಲ್ಲದೆ ಗಿಡಗಳೇ ಬೇಡ ಅನ್ನುವ ನಿರ್ಧಾರ ಮಾಡಿರುತ್ತಾರೆ. ಆದ್ದರಿಂದ ಈ ಮೆಷ್ ತಯಾರಿಸುವಾಗಲೇ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಚಿಕ್ಕ ಪೈಪ್‌ಗಳನ್ನು ಕನೆಕ್ಟ್ ಮಾಡಿ ಎಲ್ಲಾ ಸಸಿಗಳಿಗೂ ಒಂದೇ ಸಮನಾಗಿ ಏಕಕಾಲಕ್ಕೆ ನೀರು ಬೀಳುವಂತೆ ಮಾಡಲಾಗಿದೆ.

ಈ ಥರದ ಗ್ರೀನ್ ವಾಲ್‌ಗಳು ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಆಫೀಸ್‌ಗಳ ರಿಸೆಪ್ಷನ್‌ಗಳನ್ನು ಬಲು ಸುಂದರವಾಗಿ ಇರುವಂತೆ ಮಾಡುತ್ತವೆ. ಇನ್ನು ಇವುಗಳನ್ನು ತಯಾರಿಸಲೂ ಜಾಸ್ತಿ ಖರ್ಚು ಮಾಡಬೇಕಿಲ್ಲ. ಒಂದು ಸ್ಕ್ವೇರ್‌ಫೀಟ್‌ಗೆ 900 ರೂಪಾಯಿಯಷ್ಟೇ. ಸಸಿಗಳಿಗೆ ಬೇಕಾದ ಮಣ್ಣು ಮತ್ತು ನೀರಿನ ವ್ಯವಸ್ಥೆಯನ್ನೂ ಇಷ್ಟೇ ದುಡ್ಡಿನಲ್ಲಿ ಒದಗಿಸಲಾಗುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಹಸಿರು ಗಿಡಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಥರದ ಗ್ರೀನ್‌ವಾಲ್‌ಗಳ ಅಗತ್ಯ ಎಲ್ಲೆಡೆ ಇದೆ ಅಂತಾರೆ ಕಾರ್ನರ್‌ಸ್ಟೋನ್ ಸಿಓಓ ಸೂರಜ್ ಅಸ್ರಾನಿ.

ಇಂದಿರಾನಗರದಲ್ಲಿರುವ ಕಾರ್ನರ್‌ಸ್ಟೋನ್ ಪಾರ್ಕ್ ಈ ಥರದ ಗ್ರೀನ್ ವಾಲ್‌ನ ಹೊಂದಿದೆ. ಈಗಾಗ್ಲೇ ಅನೇಕ ಜನರು ಈ ಗ್ರೀನ್‌ವಾಲ್‌ನ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ. ಹಸಿರೇ ಇಲ್ಲದೆ ಬಿಕೋ ಅನ್ನುವ ಅಪಾರ್ಟ್‌ಮೆಂಟ್‌ಗಳು, ಮನೆಗಳಲ್ಲಿರುವ ಜನರಿಗೆ ಈ ಥರದ ಗ್ರೀನ್‌ವಾಲ್‌ಗಳು ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯ ಇಲ್ಲ.

X
Desktop Bottom Promotion