Yoga For Constipation: ಮಲಬದ್ಧತೆ ನಿಮ್ಮನ್ನು ಇನ್ನಿಲ್ಲದಂತೆ ಕಾಡ್ತಿದ್ಯಾ? ಹಾಗಾದ್ರೆ ಈ ಯೋಗಾಸನಗಳನ್ನು ತಪ್ಪದೇ ಮಾಡಿ!

ನಮ್ಮಲ್ಲಿ ಪ್ರತಿಯೊಬ್ಬರೂ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಮಲಬದ್ಧತೆಗೆ ಅನೇಕ ಕಾರಣಗಳು ಇರಬಹುದು. ಅದ್ರಲ್ಲಿ ಮುಖ್ಯವಾಗಿ ನಾವು ಸೇವಿಸುವ ಆಹಾರ, ದೈನಂದಿನ ಅಭ್ಯಾಸಗಳು, ಪ್ರಯಾಣ ಅಥವಾ ದೈಹಿಕ ಚಟುವಟಿಕೆಯ ಕೊರತೆಯಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆಗಳಿದೆ. ಹೊಟ್ಟೆಯಲ್ಲಿ ಶುಷ್ಕ ಅಥವಾ ಗಟ್ಟಿಯಾದ ಮಲವನ್ನು ಹೊಂದಿದ್ದಾಗ ಅದನ್ನು ಹೊರ ಹಾಕಲು ಸಾಧ್ಯವಾಗೋದಿಲ್ಲ. ಜೊತೆಗೆ ಕರುಳಿನ ಚಲನಾ ಕ್ರಿಯೆಯು ಸರಿಯಾಗಿ ಆಗದಿದ್ದಾಗ ಮಲಬದ್ಧತೆ ಉಂಟಾಗುತ್ತದೆ.

ದೀರ್ಘಕಾಲದವರೆಗೂ ನೀವು ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಉಂಟಾಗೋದ್ರಲ್ಲಿ ಅನುಮಾನವೇ ಇಲ್ಲ. ಆದರೆ ಯೋಗಾಸನಗಳನ್ನು ಮಾಡೋದ್ರ ಮುಖಾಂತರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಷ್ಟಕ್ಕು ಯಾವ ಆಸನಗಳು ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸುತ್ತೆ ಅನ್ನೋದನ್ನು ತಿಳಿಯೋಣ.

Yoga For Constipation: Try These 5 Yoga Asanas for Quick Relief in Kannada

1. ವಜ್ರಾಸನ

ವಜ್ರಾಸನ ಮಾಡುವ ವಿಧಾನ ಹೇಗೆಂದರೆ ಮೊದಲಿಗೆ ಕೆಳಗೆ ಕುಳಿತುಕೊಂಡು ಕಾಲನ್ನು ಹಿಂದಕ್ಕೆ ಮಡಿಚಿಕೊಳ್ಳಿ. ಬೆನ್ನುಗಳು ನೇರವಾಗಿ ಇರಬೇಕು. ಇನ್ನೂ ನಿಮ್ಮ ಕೈಗಳನ್ನು ಕಾಲಿನ ಮೇಲಿಡಿ. ಈ ಯೋಗಾಸನವನ್ನು ಮಾಡೋದ್ರಿಂದ ಕಿಬ್ಬೊಟ್ಟೆಯ ಪ್ರದೇಶದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ, ಹೊಟ್ಟೆಯ ಅಸ್ವಸ್ಥತೆಗಳು ಮತ್ತು ಅಜೀರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಲಬದ್ಧತೆ ಮತ್ತು ಅಜೀರ್ಣದ ಸಮಸ್ಯೆಗೆ ಇದು ಅತ್ಯುತ್ತಮ ಯೋಗ ಆಸನಗಳಲ್ಲಿ ಒಂದಾಗಿದೆ.

2. ಪ್ರಾಣಾಯಾಮ

ಪ್ರಾಣಾಯಾಮ ಮಾಡುವಾಗ ಮೊದಲಿಗೆ ನೆಲದ ಮೇಲೆ ಕುಳಿತುಕೊಳ್ಳಬೇಕು. ಆನಂತರ ಬಲಗಾಲನ್ನು ಎಡಬದಿಗೆ ಹಾಗೂ ಎಡಗಾಲನ್ನು ಬಲಬದಿಗೆ ತಂದು ಮಡಿಚಬೇಕು. ಕೈಗಳನ್ನು ಮಂಡಿಗೆ ಚಾಚುವಂತೆ ಇಟ್ಟು, ಕಣ್ಮುಚ್ಚಿ ದೀರ್ಘವಾಗಿ ಉಸಿರಾಡಬೇಕು. ಪ್ರಾಣಾಯಾಮ ಮಾಡುವಾಗ ದೀರ್ಘವಾಗಿ ಉಸಿರಾಡೋದ್ರಿಂದ ಹೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮವನ್ನು ಒದಗಿಸಿದಂತಾಗುತ್ತದೆ.

ಅಷ್ಟೇ ಅಲ್ಲದೇ, ಹೊಟ್ಟೆಯ ಚಲನೆಯು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇನ್ನೂ ಪ್ರಾಣಾಯಾಮವನ್ನು ನಿಯಮಿತವಾಗಿ ಅಭ್ಯಾಸ ಮಾಡೋದ್ರಿಂದ ಹೊಟ್ಟೆಯ ಅಸ್ವಸ್ಥತೆ, ನಿದ್ರಾಹೀನತೆ, ಆಮ್ಲೀಯತೆಯಂತಹ ಇತರ ಕಾಯಿಲೆಗಳನ್ನು ಗುಣಪಡಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

3. ಭುಜಂಗಾಸನ

ಭುಜಂಗಾಸನ ಮಾಡೋವಾಗ ನೆಲದ ಮೇಲೆ ಉಲ್ಟಾ ಮಲಗಬೇಕು. ನಂತರ ತಲೆ ಹಾಗೂ ಬೆನ್ನನ್ನು ಹಿಂದಕ್ಕೆ ಬಗ್ಗಿಸಬೇಕು. ಭುಜಂಗಾಸನ ಮಾಡೋದ್ರಿಂದ ಅಜೀರ್ಣದ ಸಮಸ್ಯೆಯು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಈ ಯೋಗಾಸನವು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಸಂಪೂರ್ಣ ಜೀರ್ಣಾಂಗವನ್ನು ಶುದ್ಧಗೊಳಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸಲು ಉಪಯುಕ್ತವಾಗಿದೆ.

4. ಹಲಾಸನ

ಹಲಾಸನ ಮಾಡೋವಾಗ ಮೊದಲು ನೆಲದ ಮೇಲೆ ಮಲಗಬೇಕು. ಆನಂತರ ಕಾಲನ್ನು ಎತ್ತಿ ತಲೆಯ ಹತ್ತಿರ ಬರುವವರೆಗೂ ಸಂಪೂರ್ಣವಾಗಿ ಬೆನ್ನನ್ನು ಬಗ್ಗಿಸಿ, ಕಾಲನ್ನು ನೆಲಕ್ಕೆ ತಾಗಿಸಬೇಕು. ಈ ಭಂಗಿಯು ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಿಬ್ಬೊಟ್ಟೆಯ ಒಳಾಂಗಗಳು ಮತ್ತು ಅಂಗಗಳನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

5. ಪವನ ಮುಕ್ತಾಸನ

ಪವನಮುಕ್ತಾಸನ ಮಾಡಲು ಮೊದಲಿಗೆ ನೆಲದ ಮೇಲೆ ಮಲಗಿ ಎರಡೂ ಕಾಲನ್ನು ಎದೆಯ ನೇರಕ್ಕೆ ತಂದು ಕಾಲನ್ನು ಮಡಚಿ. ನಂತರ ಎರಡು ಕಾಲನ್ನು ಕೈಗಳಿಂದ ಹಿಡಿದುಕೊಳ್ಳಿ. ಆಮೇಲೆ ತಲೆಯನ್ನು ಮುಂದಕ್ಕೆ ಬಗ್ಗಿಸಿ. ಇದು ಹೊಟ್ಟೆಯಿಂದ ಅನಿಲಗಳನ್ನು ಹೊರಹಾಕಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಪರಿಣಾಮಕಾರಿಯಾಗಿದೆ.

ಪವನ ಮುಕ್ತಾಸನವು ಮಲಬದ್ಧತೆ ಮತ್ತು ಅಜೀರ್ಣಕ್ಕೆ ಸೂಕ್ತವಾದ ಯೋಗ ಎಂದು ಪರಿಗಣಿಸಲಾಗಿದೆ. ಇದು ದೀರ್ಘಕಾಲದ ಮಲಬದ್ಧತೆ ಮತ್ತು ಜಡ ಯಕೃತ್ತಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

6. ಪಶ್ಚಿಮೊತ್ತಾಸನ

ಪಶ್ಚಿಮೊತ್ತಾಸನ ಮಾಡಲು ಮೊದಲಿಗೆ ನೆಲದ ಮೇಲೆ ಕುಳಿತುಕೊಳ್ಳಿ. ಆನಂತರ ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ. ಬೆನ್ನನ್ನು ಬಗ್ಗಿಸಿ, ತಲೆಯನ್ನು ಮೊಣಕಾಲಿಗೆ ತಾಗಿಸಿ, ನಂತರ ಎರಡೂ ಕೈಗಳನ್ನು ಪಾದಗಳ ಹತ್ತಿರ ತನ್ನಿ. ಪಶ್ಚಿಮೊತ್ತಾಸನವು ಮಲಬದ್ಧತೆ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಅತ್ಯುತ್ತಮವಾದ ಆಸನವಾಗಿದೆ.

ಇದು ಕಿಬ್ಬೊಟ್ಟೆಯ ಒಳಾಂಗಗಳಿಗೆ ಮಸಾಜ್ ಮಾಡುತ್ತದೆ. ಜೊತೆಗೆ ಮಲಬದ್ಧತೆ, ದುರ್ಬಲ ಜೀರ್ಣಕ್ರಿಯೆ ಮತ್ತು ನಿಧಾನಗತಿಯ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದು ಬೆನ್ನಿನ ಸ್ನಾಯುಗಳು ಮತ್ತು ಕಿಬ್ಬೊಟ್ಟೆಯ ಅಂಗಗಳನ್ನು ಬಲಪಡಿಸುತ್ತದೆ.

ಯಾರಾದರೂ ಮಲಬದ್ಧತೆ, ಅಜೀರ್ಣ ಅಥವಾ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರು ಈ ಯೋಗಾಸನಗಳನ್ನು ತಪ್ಪದೇ ನಿತ್ಯ ಅಭ್ಯಾಸ ಮಾಡಿದರೆ ಖಂಡಿತ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Yoga For Constipation: Try These 5 Yoga Asanas for Quick Relief in Kannada

Yoga For Constipation: Try These 5 Yoga Asanas for Quick Relief. Read More.
Story first published: Wednesday, June 21, 2023, 16:00 [IST]
X
Desktop Bottom Promotion