Latest Updates
-
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು?
ಆಗಾಗ್ಗೆ ಉಪವಾಸ ಮಾಡೋ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು
ಈಗಿನವರ ಆಹಾರಕ್ರಮದ ಹೊಸ ಫ಼್ಯಾಷನ್ ಏನೆಂದು ಗೊತ್ತೇ ?! ಆಗಾಗ್ಗೆ ಉಪವಾಸವಿರೋದು!! ಹೀಗೆ ಆಗಾಗ್ಗೆ ಉಪವಾಸ ಮಾಡೋದ್ರಿಂದ ತೂಕ ಕಳ್ಕೋಳೋಕೆ ಸಹಾಯ ಆಗತ್ತೆ, ಮಧುಮೇಹದ ಅಪಾಯ ತಗ್ಗುತ್ತೆ, ಮತ್ತು ರಕ್ತದೊತ್ತಡಾನಾ ಕಡಿಮೆ ಮಾಡ್ಕೊಳ್ಳೋಕೆ ಸಹಾಯ ಆಗುತ್ತೆ ಅಂತೆಲ್ಲ ಹೇಳ್ತಾರೆ. ಇವರು ಹೇಳೋದಕ್ಕೆ ಅಷ್ಟೋ ಇಷ್ಟೋ ವೈಜ್ಞಾನಿಕ ಹಿನ್ನೆಲೇನೂ ಇದೆ ಅನ್ನೋಣ. ಆದ್ರೂನೂ ಆಗಾಗ್ಗೆ ಉಪವಾಸ ಮಾಡೋದ್ರಿಂದ ಮಹಿಳೆಯರ ಮೇಲೆ ಒಲ್ಲದ ಪರಿಣಾಮ ಉಂಟಾಗೋ ಸಾಧ್ಯತೆನೂ ಇದೆ!
ಮಹಿಳೆಯರ ಹಾರ್ಮೋನುಗಳು, ಫಲವತ್ತತೆ, ಮತ್ತು ಎಲುಬುಗಳ ಆರೋಗ್ಯದ ಮೇಲೆ ಕ್ಯಾಲರಿಗಳ ನಿರ್ಬಂಧ ಉಂಟಾಗೋದ್ರಿಂದ ಆಗಾಗ್ಗೆ ಮಾಡೋ ಉಪವಾಸ ಒಲ್ಲದ ಪರಿಣಾಮಾನೂ ಉಂಟುಮಾಡುತ್ತೆ. ಹಾಗಿದ್ರೆ ನಾವೀಗ, "ಈ ಆಗಾಗ್ಗೆ ಉಪ್ವಾಸ ಮಾಡೋದಂದ್ರೆ ಏನು? ಅದರಿಂದ ಆಗೋ ಪ್ರಯೋಜನಗಳೇನೇನು ? ಏನಾದ್ರೂ ಗಂಭೀರವಾದ ದುಷ್ಪರಿಣಾಮ ಅದರಿಂದಾಗುತ್ತೋ? ಮತ್ತು ಆಗಾಗ್ಗೆ ಉಪವಾಸ ಮಾಡೋದೇ ಆದ್ರೆ ಅದನ್ನ ಆರಂಭಿಸೋದು ಹೇಗೆ ?" ಅನ್ನೋದನ್ನೆಲ್ಲ ವೈಜ್ಞಾನಿಕವಾಗಿ ತಿಳ್ಕೊಳ್ಳೋಕೆ ಮುಂದಾಗೋದು ಒಳ್ಳೇದಲ್ವಾ ? ಸರಿ ಹಾಗಾದರೆ, ಅದರ ಹಿಂದಿನ ವಿಜ್ಞಾನ ಏನೂ ಅಂತ ನೋಡೋಣ ಬನ್ನಿ.....

ಆಗಾಗ್ಗೆ ಉಪವಾಸ ಮಾಡೋದು ಅಂದ್ರೇನು ?
ಆಗಾಗ್ಗೆ ಉಪವಾಸ ಮಾಡೋದನ್ನ ಇಂಗ್ಲೀಷ್ನಲ್ಲಿ ಇಂಟರ್ಮಿಟೆಂಟ್ ಫ಼ಾಸ್ಟಿಂಗ್ ಅಥವಾ ಸಂಕ್ಷಿಪ್ತವಾಗಿ ಐ.ಎಫ಼್. ಅಂತಾ ಕರೀತಾರೆ. ಆಹಾರದ ಸೇವನೆ ಮತ್ತೆ ಉಪವಾಸ ಇವೆರಡನ್ನೂ ನಿಗದಿತ ಕಾಲಾಂತರಗಳಲ್ಲಿ ಬದಲಾಯಿಸ್ತಾ ಇರೋದನ್ನೇ ಇಂಟರ್ಮಿಟೆಂಟ್ ಫ಼ಾಸ್ಟಿಂಗ್ ಅಂತಾ ಕರಿಯೋದು. ಈ ಐ.ಎಫ಼್. ನಲ್ಲಿ ಮೂರು ಪ್ರಕಾರಗಳಿವೆ: ಕಾಲ-ನಿರ್ಬಂಧಿತ, ಮಾರ್ಪಡಿಸಲ್ಪಟ್ಟದ್ದು, ಮತ್ತು ದಿನ ಬಿಟ್ಟು ದಿನ ಉಪವಾಸ. ಕಾಲ-ನಿರ್ಬಂಧಿತ ಉಪವಾಸವೆಂದರೆ ಒಂದು ನಿರ್ಧಿಷ್ಟ ಕಾಲಮಿತಿಯೊಳಗೆ ಆಹಾರದ ಸೇವನೆ. ಉದಾಹರಣೆಗೆ, 16:8. ಈ ಕಾಲಮಿತಿಯಲ್ಲಿ ನೀವು 8 ತಾಸುಗಳ ಮಿತಿಯೊಳಗಷ್ಟೇ ಸೇವನೆಯ ಕೆಲಸ ಪೂರೈಸಿಕೊಳ್ಳಬೇಕು (ಸರ್ವೇಸಾಮಾನ್ಯವಾಗಿ ಇದು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ).
ಆ ಬಳಿಕ ದಿನದ ಉಳಿದ 16 ಘಂಟೆಗಳ ಕಾಲ ಕಟ್ಟುನಿಟ್ಟಾಗಿ ಏನನ್ನೂ ತಿನ್ನದೇ ಇರೋದು. ಇನ್ನು ಕೆಲವರು 12 ಘಂಟೆಗಳ ಕಾಲ ಉಪವಾಸವಿದ್ದು, ಉಳಿದ 12 ಘಂಟೆಗಳ ಅವಧಿಯೊಳಗೆ ತಿನ್ನೋದನ್ನೆಲ್ಲ ತಿಂದು ಮುಗಿಸ್ತಾರೆ. ಇನ್ನು 5:2 ಅನ್ನ ಮಾರ್ಪಡಿಸಲ್ಪಟ್ಟ ಉಪವಾಸ ಅನ್ತಾರೆ. ಪ್ರತೀ ವಾರದ ಕ್ರಮಾನುಗತವಲ್ಲದ ಎರಡು ದಿನಗಳಂದು (ಅಂದ್ರೆ ಒಂದು ದಿನ ಬಿಟ್ಟು ಇನ್ನೊಂದು ದಿನ) ಮಾತ್ರ ದೇಹದ ತ್ರಾಣಕ್ಕೆ ಅಗತ್ಯವಿರೋದರ ಶೇ. 20% ರಿಂದ ಶೇ. 25% ರಷ್ಟು ಮಾತ್ರ ಆಹಾರ ಸೇವಿಸೋ ರೀತಿಯ ಉಪವಾಸ ಇದು ( ಅರ್ಥಾತ್ ಇದರ ಪ್ರಮಾಣ ದಿನವೊಂದಕ್ಕೆ 500 ಕ್ಯಾಲರಿಗಳಷ್ಟೇ ಆಹಾರದ ಸೇವನೆ ಆಗಿರುತ್ತೆ).
ವಾರದ ಉಳಿದ ಐದು ದಿನಗಳಂದು ಕ್ಯಾಲರಿಗಳ ವಿಚಾರದಲ್ಲಾಗಲೀ, ಆಹಾರ ಸೇವನೆಯ ಸಮಯದ ವಿಚಾರದಲ್ಲಾಗಲೀ, ಯಾವುದೇ ನಿರ್ಬಂಧ ಇರೋದಿಲ್ಲ. ಸಂಪೂರ್ಣ ರೀತಿಯಲ್ಲಿ ದಿನ ಬಿಟ್ಟು ದಿನ ಉಪವಾಸ ಮಾಡೋದು ಅಂತಂದ್ರೆ, ದಿನ ಬಿಟ್ಟು ದಿನ ಉಪವಾಸ ಮಾಡೋದು (ಅರ್ಥಾತ್ ಆ ದಿನಗಳಂದು ಏನನ್ನೂ ತಿನ್ನದೇ ಇರೋದು) ಮತ್ತು ಉಳಿದ ದಿನಗಳಲ್ಲಿ ಆಹಾರ ಸೇವನೆ (ಈ ದಿನಗಳಲ್ಲಿ ಏನನ್ನು ಬೇಕಾದರೂ ತಿನ್ಬೋದು).

ಆಗಾಗ್ಗೆ ಉಪವಾಸ ಮಾಡೋದ್ರಿಂದ ಮಹಿಳೆಯರಿಗೆ ಆಗುವ ಪ್ರಯೋಜನಗಳು
"ಉಪವಾಸ ಮಾಡೋದ್ರಿಂದ ಚಿಕಿತ್ಸಾತ್ಮಕ ಲಾಭಗಳಿವೆ ಅನ್ನೋದನ್ನ ಬೆಂಬಲಿಸೋದಕ್ಕೆ ಸಾಕಷ್ಟು ಸಂಶೋಧನಾಧಾರಿತ ಸಾಕ್ಷ್ಯಗಳಿವೆ" ಎನ್ನುತ್ತಾರೆ ಆಹಾರತಜ್ಞರಾದ ಜಿಲ್ಲಿಯನ್ ಗ್ರೀವ್ಸ್ ಅವರು. "ಜೀವಕೋಶಗಳ ಆರೋಗ್ಯದಲ್ಲಿ ಸುಧಾರಣೆ, ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆ, ಹಾಗೂ ತೂಕನಷ್ಟ" ಇವು ಮಹಿಳೆಯರು ಆಗಾಗ್ಗೆ ಉಪವಾಸ ಕೈಗೊಳ್ಳುವುದರಿಂದ ಅವರಿಗಾಗುವ ಪ್ರಯೋಜನಗಳು.
"ಅಧ್ಯಯನಗಳು ತೋರಿಸಿಕೊಟ್ಟಿರೋ ಪ್ರಕಾರ, ಆಗಾಗ್ಗೆ ಉಪವಾಸ ಮಾಡೋದ್ರಿಂದ ಮಹಿಳೆಯರಿಗೆ ತೂಕನಷ್ಟ ಹೊಂದಲು ಅದು ಸಹಕಾರಿಯಾಗುತ್ತದೆ, ಆದರೆ ಒಟ್ಟಾರೆಯಾಗಿ ಅದು ಕ್ಯಾಲರಿಯ ಕೊರತೆಯನ್ನುಂಟು ಮಾಡುತ್ತದಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ತೂಕನಷ್ಟಕ್ಕೇನೂ ನೆರವಾಗದು. ಆದ್ರೂ ಕೂಡ, ಐ.ಎಫ಼್. ನ ವಿನ್ಯಾಸವು ಕೆಲವರ ವಿಷಯದಲ್ಲಿ ಕ್ಯಾಲರಿ ಸೇವನೆಯ ಒಂದಷ್ಟು ಪ್ರಮಾಣವನ್ನು ತಗ್ಗಿಸುತ್ತದೆ ಅನ್ನೋದಂತೂ ಸತ್ಯ.

ತೂಕ ಕಡಿಮೆಯಾಗುತ್ತೆ
ಆಗಾಗ್ಗೆ ಉಪವಾಸ ಮಾಡೋದ್ರಿಂದ ಶರೀರದ ಕೊಬ್ಬಿನಾಂಶವೂ ಕೂಡ ಬೇಗನೇ ಕರಗತೊಡಗುತ್ತದೆ. ನಾವು ಏನನ್ನಾದ್ರೂ ತಿಂದಾಗ, ರಕ್ತದ ಸಕ್ಕರೆಯ ಅಂಶದಲ್ಲಿ (ಗ್ಲುಕೋಸ್) ಹೆಚ್ಚಳವಾಗುತ್ತದೆ ಮತ್ತು ಅದೇ ಸಮಯಕ್ಕೆ ಬಿಡುಗಡೆಯಾಗೋ ಇನ್ಸುಲಿನ್, ಆ ಸಕ್ಕರೆಯ ಅಂಶವನ್ನ ಜೀವಕೋಶಗಳು ಶಕ್ತಿಗಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಒಂದೊಮ್ಮೆ ನೀವು 10 ರಿಂದ 16 ಘಂಟೆಗಳ ಕಾಲ ಏನನ್ನೂ ತಿನ್ನದೇ ಹೋದರೆ, ನಿಮ್ಮ ಶರೀರವು ಶಕ್ತಿಗಾಗಿ ದೇಹದ ಕೊಬ್ಬನ್ನೇ ಬಳಸಿಕೊಳ್ಳೋಕೆ ಶುರುವಿಟ್ಟುಕೊಳ್ಳುತ್ತೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ಼್ ಮೆಡಿಸಿನ್ ನಲ್ಲಿ ಪ್ರಕಟವಾಗಿರೋ ಅಧ್ಯಯನವೊಂದು ಹೇಳೋ ಪ್ರಕಾರ, ಉಪವಾಸವಿದ್ದಾಗ ಜೀವಕೋಶಗಳು ದುರಸ್ತಿಯಾಗುತ್ತವೆ ಮತ್ತು ಹೀಗಾದಾಗ ಆಯುಷ್ಯ ಹೆಚ್ಚುತ್ತದೆ, ಕ್ಯಾನ್ಸರ್ ನ ಅಪಾಯ ತಗ್ಗುತ್ತದೆ, ಶರೀರದ ಉರಿಯ ಉಪಶಮನವಾಗುತ್ತದೆ, ಮತ್ತು ಚಯಾಪಚಯ ಕ್ರಿಯೆ ಸುಧಾರಣೆಯಾಗುತ್ತದೆ. ಆದ್ರೂ ಇಲ್ಲೊಂದು ಒಂದು ವಿಷಯ: ಹೆಚ್ಚಿನ ಅಧ್ಯಯನಗಳು ನಡೆದಿರೋದು ಪ್ರಾಣಿಗಳ ಮೇಲೆ. ಮಹಿಳೆಯರ ಮೇಲೆ ಹೆಚ್ಚಿನ ಅಧ್ಯಯನಗಳು ಇನ್ನೂ ಆಗಬೇಕಾಗಿವೆ.
ದಿನದ 24 ಘಂಟೆಗಳ ಅವಧಿಯಲ್ಲಿ ದೇಹವು ಒಳಪಡುವ ಬದಲಾವಣೆಯ (ದೈಹಿಕ, ಮಾನಸಿಕ, ಮತ್ತು ವರ್ತನಾತ್ಮಕ) ಚಕ್ರಕ್ಕೆ ಅನುಗುಣವಾಗಿ ಆಹಾರ ಸೇವಿಸೋದ್ರಿಂದ ದೀರ್ಘಕಾಲೀನ ಖಾಯಿಲೆಗಳನ್ನ ದೂರ ಇಡ್ಬೋದು ಅಂತಾ ಇತ್ತೀಚಿನ ಸಂಶೋಧನೆ ಬಹಿರಂಗ ಪಡಿಸಿದೆ. ಬೇರೆ ಮಾತ್ನಲ್ಲಿ ಹೇಳೋದಾದ್ರೆ, ಹಗಲಲ್ಲಿ 6-10 ಘಂಟೆಗಳ ಅವಧಿಯಲ್ಲಿ ಆಹಾರಸೇವನೆ ಮತ್ತು ರಾತ್ರಿಯಲ್ಲಿ ತಿನ್ನೋದನ್ನ ಕಡಿಮೆ ಮಾಡೋದು.

ಆಗಾಗ್ಗೆ ಉಪವಾಸ ಮಾಡೋದ್ರಿಂದ ಮಹಿಳೆಯರಿಗಾಗೋ ತೊಂದರೆಗಳು:
"ಉಪವಾಸ ಮಾಡೋದ್ರಿಂದ ಅಷ್ಟೆಲ್ಲ ಪ್ರಯೋಜನಗಳಿವೆ ಅಂತಾ ಸಂಶೋಧನೆಗಳು ತಿಳಿಸಿದ್ರೂ ಕೂಡ, ಉಪವಾಸ ಮಾಡೋಕೆ ಮುಂದಾಗುವವರ ಆರೋಗ್ಯ ಪರಿಸ್ಥಿತೀನೂ ಇಲ್ಲಿ ಮುಖ್ಯ ಆಗುತ್ತೆ. ಈ ಆಗಾಗ್ಗೆ ಉಪವಾಸ ಮಾಡೋದು ಎಲ್ಲ ಕಾಲಗಳಲ್ಲೂ, ಎಲ್ಲರ ವಿಷಯದಲ್ಲೂ ಸರಿಯಲ್ಲ" ಅಂತಾ ಹೇಳ್ತಾರೆ ಗ್ರೇವ್ಸ್ ಅವರು.
"ವಿಶೇಷವಾಗಿ ಮಕ್ಕಳನ್ನ ಹೆರೋ ವಯಸ್ಸಿನ ಸ್ತ್ರೀಯರು ಈ ಆಗಾಗ್ಗೆ ಉಪವಾಸ ಮಾಡೋದರ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ, ದೀರ್ಘಕಾಲೀನ ಉಪವಾಸದಂತಹ ಒತ್ತಡಗಳಿಗೆ ಮತ್ತು ಕ್ಯಾಲರಿಗಳ ನಿರ್ಬಂಧಕ್ಕೆ ಸಂಬಂಧಿಸಿದ ಹಾಗೆ ಅವರ ಶರೀರಗಳು ಹೆಚ್ಚು ಸಂವೇದನಾಶೀಲವಾಗಿರುತ್ತವೆ".
"ಮೇಲಿಂದ ಮೇಲೆ ಉಪವಾಸ ಮಾಡೋದಂದ್ರೆ ಶರೀರಕ್ಕೆ ಒತ್ತಡ ಹೇರಿದ ಹಾಗೆ. ಅದ್ರಲ್ಲೂ ಸುದೀರ್ಘಾವಧಿಯ ಭಾವನಾತ್ಮಕ, ಮಾನಸಿಕ, ಮತ್ತು ಪರಿಸರ-ಸಂಬಂಧಿತ ಒತ್ತಡ, ಜಂಜಡಗಳಿಂದ ತುಂಬಿಹೋಗಿರೋ ನಮ್ಮ ಆಧುನಿಕ ಜೀವನಶೈಲಿಗೆ ಈ ಆಗಿಂದಾಗ್ಗೆ ಮಾಡೋ ಉಪವಾಸ, ಒಳ್ಳೇದು ಮಾಡೋದಕ್ಕಿಂತ ಕೆಡುಕು ಮಾಡೋದೇ ಹೆಚ್ಚು. ಉಪವಾಸ ಮಾಡೋದ್ರಿಂದ ದೇಹದಲ್ಲಿ ಕಾರ್ಟಿಸಾಲ್ ನ ಉತ್ಪತ್ತಿ ಹೆಚ್ಚಾಗುತ್ತೆ.
ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಅನಿಯಮತೆಗೆ ದಾರಿಮಾಡಿಕೊಡುತ್ತದೆ, ದೇಹ ಇನ್ಸುಲಿನ್ ಗೆ ಹೆಚ್ಚು ಹೆಚ್ಚು ಪ್ರತಿರೋಧವನ್ನ ಉಂಟುಮಾಡೋಕೆ ಆರಂಭಿಸುತ್ತೆ, ಸ್ನಾಯುಗಳು ದುರ್ಬಲವಾಗುತ್ವೆ, ಕಾಲಕ್ರಮೇಣ ಆಯಾಸದ ಹೆಚ್ಚಳ ಮತ್ತು ಥೈರಾಯಿಡ್ ಗ್ರಂಥಿಯ ಕಾರ್ಯಾಚರಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತೆ. ಅಲ್ಪಾವಧಿಯ ಉಪವಾಸ ಥೈರಾಯಿಡ್ ಪ್ರಚೋದಕ ಹಾರ್ಮೋನಿನ ಮಟ್ಟವನ್ನ ತಗ್ಗಿಸೀತು, ಆದರೆ ದೇಹದಲ್ಲಿ ಕಾರ್ಟಿಸೋಲ್ ನ ಮಟ್ಟ ನಿರಂತರವಾಗಿ ಹೆಚ್ಚಳವಾಗಿದ್ದರೆ, ಅದು ಥೈರಾಯಿಡ್ ಹಾರ್ಮೋನ್ ನ ಪರಿವರ್ತನೆಯನ್ನ ತಗ್ಗಿಸುತ್ತದೆ" ಅಂತಾ ಗ್ರೇವ್ಸ್ ಅವರು ವಿವರಿಸುತ್ತಾರೆ.

ಮಹಿಳೆಯರ ಫಲವತ್ತತೆಗೆ ಅಡ್ಡಿಯಾಗುತ್ತದೆ
"ಉಪವಾಸ ಅನ್ನೋದು ಅಗತ್ಯಕ್ಕಿಂತ ಕಡಿಮೆ ತಿನ್ನೋದಕ್ಕೆ ದಾರಿಮಾಡಿಕೊಡುತ್ತೆ. ಇದು ಅನೇಕ ರೀತಿಯಲ್ಲಿ ಮಹಿಳೆಯರ ಹಾರ್ಮೋನುಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನ ಉಂಟುಮಾಡುತ್ತೆ" ಅಂತಾ ಗ್ರೇವ್ಸ್ ಅವರು. ಆಗಿಂದಾಗ್ಗೆ ಉಪವಾಸ ಮಾಡೋದ್ರಿಂದ ಉಂಟಾಗೋ ಕ್ಯಾಲರಿ ನಿರ್ಬಂಧ, ಋತುಚಕ್ರದ ನಷ್ಟಕ್ಕೆ ಕಾರಣವಾಗಿ ಮಹಿಳೆಯ ಫಲವತ್ತತೆಗೂ ಅಡ್ಡಿಯುಂಟು ಮಾಡುತ್ತೆ.
ಪದೇ ಪದೇ ಉಪವಾಸ ಮಾಡೋದ್ರಿಂದ ಹಸಿವು ಹೆಚ್ಚಾಗುತ್ತೆ ಮತ್ತು ತಿನ್ನೋ ವೇಳೆಗೆ ಆಹಾರದ ಗೀಳು ಉಂಟಾಗುತ್ತೆ. ಹೀಗಾದಾಗ ನಿಮ್ಮ ಆಹಾರ ಸೇವನಾ ಕ್ರಮದಲ್ಲಿ "ಒಮ್ಮೆ ತಿನ್ನೋದಕ್ಕೆ ನಿರ್ಬಂಧ ಹಾಕ್ಕೋಳ್ಳೋದು, ಮತ್ತೊಮ್ಮೆ ತಿನ್ನೋವಾಗ ಸಿಕ್ಕಾಪಟ್ಟೆ ತಿನ್ನೋವಂತಹ" ಪ್ರಕ್ರಿಯೆ ಆರಂಭವಾಗುತ್ತೆ. ಹೀಗಾದಾಗ ಶರೀರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ವಿಶೇಷವಾಗಿ, ಆಹಾರಸೇವನಾ ಖಾಯಿಲೆಗಳಿರೋ ಮಹಿಳೆಯರ ಪಾಲಿಗೆ ಅಥವಾ ದೀರ್ಘಕಾಲದಿಂದ ಪಥ್ಯವನ್ನ ಕೈಗೊಂಡಿರೋ (ಡಯಟಿಂಗ್) ಮಹಿಳೆಯರ ಪಾಲಿಗೆ ಇದು ಬಹು ಹಾನಿಕಾರಕ.
ಆಹಾರವಿಲ್ಲದೇ ಬಹುಕಾಲದವರೆಗೆ ಶರೀರವು ಹಾಗೇ ಉಳಿದುಕೊಂಡಾಗ, ಹಸಿವನ್ನ ಜಾಸ್ತಿ ಮಾಡೋವಂತಾ ಹಾರ್ಮೋನುಗಳು ಶರೀರದಲ್ಲಿ ಉತ್ಪತ್ತಿಯಾಗುತ್ವೆ. "ಮಹಿಳೆಯರು ಬೆಳಗಿನ ಉಪಾಹಾರವನ್ನ ಸೇವಿಸದೇ, ರಾತ್ರಿ ತಡವಾಗಿ ಆಹಾರ ಸೇವಿಸುವುದರ ಮೂಲಕ ಐ.ಎಫ಼್. ಅನ್ನ ತಪ್ಪಾದ ರೀತಿಯಲ್ಲಿ ಆಚರಿಸೋದನ್ನ ನಾನು ಆಗಾಗ್ಗೆ ಕಾಣುತ್ತಿದ್ದೇನೆ. ಈ ಕ್ರಮ ದೇಹದ ಜೈವಿಕ ಚಕ್ರವನ್ನ ಏರುಪೇರಾಗಿಸಿ ಹಾರ್ಮೋನುಗಳ ಅಸಮತೋಲನಕ್ಕೆ ದಾರಿಮಾಡಿ ಕೊಡುತ್ತದೆ", ಅಂತಾರೆ ಗ್ರೀವ್ಸ್ ಅವರು. "ಐ.ಎಫ಼್. ಅನ್ನ ಆಚರಿಸುತ್ತಾ, ದೇಹದ ಸಹಜ ಜೈವಿಕ ಹಸಿವನ್ನ ಒಟ್ಟಾರೆಯಾಗಿ ನಿರ್ಲಕ್ಷಿಸುತ್ತಾ ಇರೋವಂತಾ ಮಹಿಳೆಯರನ್ನೂ ನಾನು ನೋಡಿರುವೆ. ಇದು ಅವರ ದೈಹಿಕ ಆರೋಗ್ಯಕ್ಕಾಗಲೀ, ಮಾನಸಿಕ ಆರೋಗ್ಯಕ್ಕಾಗಲೀ ಹಿತಕರವಲ್ಲ" ಅನ್ನಲು ಮರೆಯೋಲ್ಲ ಗ್ರೀವ್ಸ್ ಅವರು.

ಐ.ಎಫ಼್. ಅನ್ನ ಆರಂಭಿಸೋದು ಹೇಗೆ ?
ಆರಂಭದ ಹಂತದಲ್ಲಿರುವವರಿಗೆ: ಗ್ರೀವ್ಸ್ ಹೇಳುತ್ತಾರೆ, "ಸಾಕಷ್ಟು ನಿದ್ದೆ ಮಾಡದೇ ಇರುವ, ಸಾಕಷ್ಟು ಆಹಾರ ಸೇವಿಸದೇ ಇರುವ, ಅಥವಾ ನಿಯಮಿತವಾಗಿ ಆಹಾರ ಸೇವಿಸದೇ ಇರುವ ಮಹಿಳೆಯರಿಗೆ, ಅನಿಯಮಿತವಾದ ಅಥವಾ ಋತುಚಕ್ರಗಳೇ ಇಲ್ಲದಿರುವ ಮಹಿಳೆಯರಿಗೆ, ಥೈರಾಡ್ ಸಮಸ್ಯೆ ಇರೋ ಮಹಿಳೆಯರಿಗೆ, ಸದ್ಯಕ್ಕೆ ಈಗ ಅಥವಾ ಈ ಹಿಂದೆ ಆಹಾರಸೇವನಾ ಖಾಯಿಲೆ ಇದ್ದ ಮಹಿಳೆಯರಿಗೆ, ವಿಪರೀತ ಒತ್ತಡಗಳನ್ನ ಎದುರಿಸುತ್ತಿರೋ ಮಹಿಳೆಯರಿಗೆ, ಅಥವಾ ರಕ್ತದ ಸಕ್ಕರೆಯಂಶದ ತೊಂದರೆ ಇರೋ ಮಹಿಳೆಯರಿಗೆ ನಾನು ಐ.ಎಫ಼್. ಅನ್ನ ಸಲಹೆ ಮಾಡೋದೇ ಇಲ್ಲ" ಅಂತಾ. "ನಾನಂತೂ ನಿಯಮಿತವಾಗಿ, ನಿರಂತರವಾಗಿ ತಿನ್ನೋದನ್ನೇ ಸಲಹೆ ಮಾಡುವೆ. ಇದಂತೂ ನಿಜಕ್ಕೂ ದೇಹದ ಒತ್ತಡನಾ ತಗ್ಗಿಸೋದಕ್ಕೆ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶಾನಾ ಸಮತೋಲನದಲ್ಲಿಟ್ಟುಕೊಳ್ಳೋಕೆ ಬಹಳಾ ನೆರವಾಗುತ್ತೆ" ಅಂತಾನೂ ಸೇರಿಸ್ತಾರೆ ಗ್ರೀವ್ಸ್. ತುಂಬಾ ಸಮಯದವರೆಗೆ ಮೇಲಿಂದ ಮೇಲೆ ಉಪವಾಸ ಇರೋದ್ರಿಂದ ಏನೇನಾಗುತ್ತವೆ ಅನ್ನೋದರ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಿವೆ.
"ಆಗಿಂದಾಗ್ಗೆ ಉಪವಾಸ ಮಾಡೋ ಕ್ರಮಾನ ಶುರುವಿಟ್ಟುಕೊಳ್ಳಿ" ಅಂತಾ ನಿಮ್ಮ ವೈದ್ಯರೋ ಅಥವಾ ಆಹಾರತಜ್ಞರೋ ನಿಮಗೆ ಹಸಿರು ನಿಶಾನೆ ತೋರಿಸಿದಲ್ಲಿ, ಅದನ್ನ ನಿಧಾನವಾಗಿ ಆರಂಭಿಸಿರಿ. "ಕೆಲವು ಅಧ್ಯಯನಗಳು ತೋರಿಸಿ ಕೊಟ್ಟಿರೋ ಪ್ರಕಾರ, ರಾತ್ರಿಯ ಹೊತ್ತಲ್ಲಿ ಕೇವಲ 12 ರಿಂದ 14 ಘಂಟೆಗಳ ಕಾಲವಷ್ಟೇ ಉಪವಾಸ ಮಾಡಿದಲ್ಲಿ, ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಎಲ್ಲ ಲಾಭಗಳು ಸಿಗುತ್ತವೆ. ಹಾಗಾಗಿ ಈ ಲಾಭಗಳ ಅನುಭವವಾಗಲು ನೀವು 16 ಅಥವಾ 18 ಘಂಟೆಗಳ ಕಾಲ ಉಪವಾಸ ಇರಬೇಕಾದ ಅಗತ್ಯವೇನೂ ಇಲ್ಲ" ಅಂತಾರೆ ಗ್ರೀವ್ಸ್ ಅವರು.
5:2 ವಿಧಾನಕ್ಕೆ ಬದಲಾಗಿ, ಕಾಲ-ನಿರ್ಬಂಧಿತ ವಿಧಾನದೊಂದಿಗೆ ಐ.ಎಫ಼್. ಅನ್ನ ಆರಂಭಿಸೋಕೆ ನಾವು ಸಲಹೆ ಮಾಡುತ್ತೇವೆ. 5:2 ವಿಧಾನವು ವಾರದ ಎರಡು ದಿನಗಳು ಮಾತ್ರ ತಿನ್ನೋದನ್ನ ನಿರ್ಬಂಧಿಸುತ್ತೆ ಹಾಗೂ ಉಳಿದ ದಿನಗಳಲ್ಲಿ ಸಿಕ್ಕಾಪಟ್ಟೆ ತಿನ್ನೋ ಸ್ವಾತಂತ್ರಾನಾ ಕೊಡ್ಬಿಡುತ್ತೆ.
ರಾತ್ರಿ ನೀವು ತಿನ್ನೋದನ್ನ ನಿಲ್ಲಿಸುವಾಗಿನಿಂದ ಮರುದಿನ ನೀವು ತಿನ್ನೋದಕ್ಕೆ ಶುರುಮಾಡೋವರೆಗೆ ಎಷ್ಟು ಘಂಟೆಗಳಿವೆ ಅಂತಾ ಮೊದ್ಲು ಎಣಿಸಿಕೊಳ್ಳಿ. ಆರಂಭದಲ್ಲಿ ನಿಮ್ಮ ಉಪವಾಸದ ಅವಧೀನಾ ಒಂದು ಘಂಟೆಯಷ್ಟು ಹೆಚ್ಚು ಮಾಡಿಕೊಳ್ಳಿ, ಬಳಿಕ ಎರಡು ಘಂಟೆಗಳಷ್ಟು ಹೆಚ್ಚಿಸಿಕೊಳ್ಳಿ.... ಹೀಗೆ.... ಕಾಲ-ನಿರ್ಬಂಧಿತ ಐ.ಎಫ಼್. ನಲ್ಲಿ ಕ್ಯಾಲರಿಗಳ ನಿರ್ಬಂಧವಿಲ್ಲ. ತಿನ್ನೋ ಅವಧಿಯಲ್ಲಿ ಪ್ರೋಟೀನ್, ಅಧಿಕ ನಾರಿನಂಶವುಳ್ಳ ಕಾರ್ಬೋಹೈಡ್ರೇಟ್ಸ್, ಮತ್ತು ಆರೋಗ್ಯದಾಯಕ ಕೊಬ್ಬುಗಳನ್ನು ಒಳಗೊಂಡ ಮೂರು ಸಮತೋಲನ ಊಟಗಳನ್ನ ಸಮಾನ ಕಾಲಾಂತರಗಳಲ್ಲಿ ಸೇವಿಸುವುದನ್ನ ನಾವು ಸಲಹೆ ಮಾಡುತ್ತೇವೆ.
ನಿಮ್ಮ ಶರೀರದ ಮಾತನ್ನು ಕೇಳಿ
ಬೆಳಗಿನ ಉಪಾಹಾರವನ್ನ ಗಡದ್ದಾಗಿ ಹೊಡೆಯೋ ಅಭ್ಯಾಸ ಇಲ್ದೇ ಇರೋರು ಬೆಳಗ್ಗೆ 10 ರಿಂದ 11 ಘಂಟೇವರೆಗೂ ಏನನ್ನೂ ತಿನ್ನದೇ ಇದ್ದಾರು, ಆದರೆ ಉಳಿದವರಿಗೆ ಬೆಳಗ್ಗೆ ಏಳುತ್ತಲೇ ಹಸಿವಾಗತೊಡಗುತ್ತೆ. ಇಲ್ಲಿ ಬಹಳ ಮುಖ್ಯವಾದ ಸಂಗತಿ ಏನೆಂದರೆ, ನಿಮ್ಮ ಶರೀರದ ಮಾತನ್ನ ಕೇಳಿ, ಹಸಿವಾಗಿದೆ ಅಂತಾದ್ರೆ ತಿನ್ನಿ. ನಿಯಮಿತವಾಗಿ ವ್ಯಾಯಾಮ ಮಾಡೋ ಮಹಿಳೆಯರಿಗೆ ಪದೇ ಪದೇ ಉಪವಾಸ ಮಾಡೋದು ಕಷ್ಟವಾದೀತು.
ಈಗ ನೀವು ಏನು ಯೋಚಿಸುತ್ತಿರುವಿರೆಂದು ನಮಗೆ ಗೊತ್ತಾಯಿತು! ಕಾಫಿಯ ಸೇವನೆ ಉಪವಾಸವನ್ನ ಅಂತ್ಯಗೊಳಿಸೀತೇ ? ತಾಂತ್ರಿಕವಾಗಿ ಹೇಳೋದಾದ್ರೆ ಅದಕ್ಕುತ್ತರ "ಹೌದು" ಅಂತಾ. ಕಪ್ಪು ಕಾಫಿಯಲ್ಲಿ ಶೂನ್ಯ ಮಟ್ಟದ ಕ್ಯಾಲರಿಗಳಿವೆ. ಆದರೆ ನಿಮ್ಮ ಗುರಿ ಏನೂ ಅನ್ನೋದನ್ನ ಒಮ್ಮೆ ನೆನಪಿಸಿಕೊಳ್ಳಿ - ನೀವು ಇಷ್ಟೆಲ್ಲ ಮಾಡ್ತಾ ಇರೋದು ತೂಕನಷ್ಟಕ್ಕಾಗಿಯೇ ? ಹೌದೆಂದಾದಲ್ಲಿ, ಐ.ಎಫ಼್. ಅನ್ನೋದು ತೂಕನಷ್ಟಕ್ಕೇನೂ ನೆರವಾಗೊಲ್ಲ, ಬದಲಿಗೆ ಒಟ್ಟಾರೆ ಕ್ಯಾಲರಿ ಕೊರತೆಯನ್ನುಂಟು ಮಾಡುತ್ತದೆಯಷ್ಟೆ. ಹಾಗಾಗಿ ನೀವು ಆ ಕಾಫಿಗೆ ಸ್ವಲ್ಪ ಕೆನೆಯನ್ನ ಸೇರಿಸಬಹುದು. ಐ.ಎಫ಼್. ಅನ್ನ ನೀವು ಕೈಗೊಂಡಿರೋದು ರಕ್ತದಲ್ಲಿನ ಸಕ್ಕರೆಯ ಅಂಶವನ್ನ ನಿಯಂತ್ರಿಸುವುದಕ್ಕೋ ? ಹಾಗಿದ್ದಲ್ಲಿ, ಕ್ಯಾರಾಮೆಲ್ ಲ್ಯಾಟ್ ನೊಂದಿಗೆ ಕಾಫಿಯಲ್ಲಿನ ಸಕ್ಕರೆಯ ಮಟ್ಟವನ್ನ ಹೆಚ್ಚಿಸಿಕೊಳ್ಳೋದರ ಮೂಲಕ ದಿನವನ್ನ ಆರಂಭಿಸೋದು ಸೂಕ್ತವಲ್ಲ ಅನ್ಸುತ್ತೆ.



Click it and Unblock the Notifications











