ಅನ್ನನಾಳದ ಕ್ಯಾನ್ಸರ್‌ ಲಕ್ಷಣಗಳೇನು? ಈ ಕ್ಯಾನ್ಸರ್ ಬರಲು ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ದೀರ್ಘಕಾಲೀನ ಖಾಯಿಲೆಯೆಂದರೆ ಕ್ಯಾನ್ಸರ್‌. ಅದರಲ್ಲೂ ತಂಬಾಕು, ಮದ್ಯಪಾನ ಮಾಡುವವರಲ್ಲಿ ಕಂಡು ಬರುತ್ತಿರುವ ಕ್ಯಾನ್ಸರ್‌ ಎಂದರೆ ಅನ್ನನಾಳದ ಕ್ಯಾನ್ಸರ್‌ ಇದನ್ನು ಇಂಗ್ಲೀಷ್‌ನಲ್ಲಿ ಅಸೋಫಾಗಸ್‌ ಕ್ಯಾನ್ಸರ್‌ ಎನ್ನುತ್ತಾರೆ. ಈ ಸಮಸ್ಯೆ ಇದ್ದರೆ ಆಹಾರ ಸೇವನೆಯೂ ಅಸಾಧ್ಯ. ತುತ್ತು ನುಂಗಲೂ ಕೂಡಾ ಸಾಧ್ಯವಾಗುವುದಿಲ್ಲ. ಇತರ ರೋಗಗಳಂತಲ್ಲ ಕ್ಯಾನ್ಸರ್‌. ಇದು ದೇಹದೊಳಗೆ ಸೇರಿರುವುದೇ ಗೊತ್ತಾಗೊದಿಲ್ಲಾ, ಕೆಲವೊಂದು ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಲ್ಲಿ ಕ್ಯಾನ್ಸರ್‌ ಪತ್ತೆಹಚ್ಚಬಹುದು. ಅನ್ನನಾಳದ ಕ್ಯಾನ್ಸರ್‌ ಕೂಡಾ ಹೀಗೇನೆ ಗಂಟಲು ನೋವೆಂದು ಭಾವಿಸಿ ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯವಾಗಬಹುದು. ಹಾಗಾದರೆ ಇದರ ಲಕ್ಷಣಗಳು ಹೇಗಿರುತ್ತೆ, ಇದನ್ನು ಕಂಡು ಹಿಡಿಯುವುದು ಹೇಗೆ, ಅನ್ನನಾಳದ ಕ್ಯಾನ್ಸರ್‌ಗೆ ಕಾರಣಗಳೇನು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಅನ್ನನಾಳದ ಕ್ಯಾನ್ಸರ್‌ ಎಂದರೆ

ಅನ್ನನಾಳದ ಕ್ಯಾನ್ಸರ್‌ ಎಂದರೆ

ಅನ್ನನಾಳ ಉದ್ದವಾದ ಸ್ನಾಯುವಿನ ಕೊಳವೆಯಾಗಿದ್ದು, ಗಂಟಲಿನಿಂದ ಹೊಟ್ಟೆಯವರೆಗಿರುತ್ತದೆ. ನಾವು ಸೇವಿಸುವ ಆಹಾರ ಗಂಟಲಿನ ಮೂಲಕ ಈ ಅನ್ನನಾಳದ ಮೂಲಕವೇ ಹೊಟ್ಟೆಯನ್ನು ಸೇರುತ್ತೆ. ಅನ್ನನಾಳದಲ್ಲಿನ ಸ್ಪಿಂಕ್ಟರ್‌ ಎನ್ನುವ ವಿಶೇಷ ಸ್ನಾಯು ಕವಾಟದಂತೆ ಕಾರ್ಯನಿರ್ವಹಿಸುತ್ತೆ. ಇದು ಅನ್ನನಾಳದ ಮೂಲಕ ಆಹಾರ ಮತ್ತು ದ್ರವಾಹಾರ ಹೊಟ್ಟೆಗೆ ಹಾದುಹೋಗಲು ತೆರೆಯುತ್ತದೆ. ಅನ್ನನಾಳದ ಅಂಗಾಂಶದಲ್ಲಿ ಅಸಹಜ ಕೋಶಗಳು ಬೆಳೆದಾಗ ಅನ್ನನಾಳದ ಕ್ಯಾನ್ಸರ್‌ ಉಂಟಾಗುತ್ತೆ. ಕೊನೆಗೆ ಈ ಕೋಶಗಳು ಟ್ಯೂಮರ್‌ ಆಗಿ ಬೆಳೆಯುತ್ತದೆ.

ಅನ್ನನಾಳದ ಕ್ಯಾನ್ಸರ್‌ನಲ್ಲಿ ಎರಡು ವಿಧ ಒಂದು ಸ್ಕ್ವಾಮಸ್‌ ಸೆಲ್‌ ಕಾರ್ಸಿನೋಮ ಇನ್ನೊಂದು ಅಡೆಕಾರ್ಸಿನೋಮ. ಸ್ಕ್ವಾಮಸ್‌ ಕಾರ್ಸಿನೋಮ ಅನ್ನನಾಳವನ್ನು ಆವರಿಸಿರುವ ಜೀವಕೋಶದಿಂದ ಪ್ರಾರಂಭವಾಗುತ್ತೆ. ಇದು ಕ್ರಮೆಣವಾಗಿ ಅನ್ನನಾಳದ ಮೇಲ್ಭಾಗ ಮತ್ತು ಮಧ್ಯಭಾಗದ ಮೇಲೆ ಪರಿಣಾಮ ಬೀರುತ್ತದೆ. ಅಡೆಕಾರ್ಸಿನೋಮ ಎಂದರೆ ಆಹಾರ ನುಂಗಲು ಸಹಾಯ ಮಾಡುವ ಲೋಳೆಯನ್ನು ಉತ್ಪತ್ತಿ ಮಾಡುವ ಅಂಗಾಂಶದಲ್ಲಿ ಬೆಳವಣಿಗೆಯಾಗುತ್ತೆ. ಇದು ಅನ್ನನಾಳದ ಕೆಳಭಾಗದಲ್ಲಿ ಉಂಟಾಗುತ್ತೆ.

ಅನ್ನನಾಳದ ಕ್ಯಾನ್ಸರ್‌ನ ಲಕ್ಷಣಗಳು

ಅನ್ನನಾಳದ ಕ್ಯಾನ್ಸರ್‌ನ ಲಕ್ಷಣಗಳು

ಯಾವುದೇ ವಿಧಧ ಕ್ಯಾನ್ಸರ್‌ ಆಗಲಿ ಆರಂಭಿಕ ಹಂತದಲ್ಲಿ ಗೊತ್ತಾಗೋದೆ ಇಲ್ಲ. ಈ ಅನ್ನನಾಳದ ಕ್ಯಾನ್ಸರ್‌ನ ಮೊದಲ ಲಕ್ಷಣವೆಂದರೆ ನುಂಗಲು ಸಮಸ್ಯೆಯಾಗೋದು. ಆಹಾರ ನುಂಗುವಾಗ ಗಂಟಲು ನೋವಾಗಬಹುದು. ಈ ಟ್ಯೂಮರ್‌ ಬೆಳೆಯುತ್ತಾ ಹೋದಂತೆ ಅನ್ನನಾಳವು ತೆರೆದುಕೊಳ್ಳಲಾಗುವುದಿಲ್ಲ. ಆಹಾರ ನುಂಗಲು ಕಷ್ಟವಾಗಬಹುದು. ನೋವಿನಿಂದ ಕೂಡಿರುತ್ತೆ. ಇದರ ಜೊತೆಗೆ ಇನ್ನಿತರ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ,

* ಗಂಟಲು ಅಥವಾ ಬೆನ್ನಿನಲ್ಲಿ, ಎದೆಯ ಮೂಳೆಯ ಹಿಂದೆ ಅಥವಾ ಭುಜಗಳನ್ನು ಜೋಡಿಸುವ ಮೂಳೆಯ ಹಿಂದೆ ನೋವು ಕಾಣಿಸಿಕೊಳ್ಳುತ್ತೆ.

* ವಾಂತಿಯಲ್ಲಿ ರಕ್ತ ಅಥವಾ ಕೆಮ್ಮುವಾಗ ರಕ್ತ

* ಎದೆಯುರಿ

* ಗಂಟಲಲ್ಲಿ ಕಿರಿಕಿರಿ ಧ್ವನಿಯಲ್ಲಿ ಬದಲಾವಣೆ ಅಥವಾ ದೀರ್ಘಕಾಲದ ಕೆಮ್ಮು

* ಅನಿರೀಕ್ಷಿತವಾಗಿ ತೂಕದಲ್ಲಿ ಇಳಿಕೆಯಾಗುವುದು

 ಅನ್ನನಾಳದ ಕ್ಯಾನ್ಸರ್‌ಗೆ ಕಾರಣಗಳು

ಅನ್ನನಾಳದ ಕ್ಯಾನ್ಸರ್‌ಗೆ ಕಾರಣಗಳು

ಅನ್ನನಾಳದ ಕ್ಯಾನ್ಸರ್‌ಗೆ ಕೆಲವೊಂದು ಅಂಶಗಳು ಕಾರಣವಾಗಬಹುದು. ಅವು ಯಾವುದೆಂದರೆ.

ವಯೋಸಹಜ ಖಾಯಿಲೆ: ಅನ್ನನಾಳದ ಕ್ಯಾನ್ಸರ್‌ 60 ವರ್ಷ ಅಥವಾ 60 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ವಯೋ ಸಹಜವಾಗಿಯೂ ಈ ಸಮಸ್ಯೆ ಕಂಡುಬರಬಹುದು. ಅನ್ನನಾಳದ ಕ್ಯಾನ್ಸರ್‌ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಪುರುಷರಲ್ಲಿ ಕಂಡುಬರುತ್ತದೆ.

ತಂಬಾಕು ಬಳಕೆ: ಧೂಮಪಾನ ಮತ್ತು ಪಾನ್‌ ಪರಾಗ್‌ ಮುಂತಾದ ತಂಬಾಕಿನ ಸೇವನೆ ಗಂಟಲಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಮದ್ಯಪಾನ: ದೀರ್ಘಕಾಲದಿಂದ ಮದ್ಯಸೇವನೆ ಮಾಡುತ್ತಿರುವವರಲ್ಲಿ ಹಾಗೂ ಹೆಚ್ಚು ಮದ್ಯಸೇವನೆ ಮಾಡುತ್ತಿರುವವರಲ್ಲಿ ಅನ್ನನಾಳದ ಕ್ಯಾನ್ಸರ್‌ನ ಅಪಾಯ ಹೆಚ್ಚು.

ಅನ್ನನಾಳದ ಸಮಸ್ಯೆ: ಕೆಲವೊಮ್ಮೆ ಅನ್ನನಾಳದಲ್ಲಿನ ಸಮಸ್ಯೆಯೇ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಂದರೆ ಅನ್ನನಾಳದ ಒಳಪದರವು ದೀರ್ಘಕಾಲದಿಂದ ಇರುವ ಆಮ್ಲೀಯತೆಯಿಂದ ದಪ್ಪವಾಗುತ್ತದೆ ಮತ್ತು ಕೆಂಪುಬಣ್ಣಕ್ಕೆ ತಿರುಗುತ್ತದೆ. ಸರಳವಾಗಿ ಹೇಳುವುದಾದರೆ ದೀರ್ಘಕಾಲದಿಂದ ಗ್ಯಾಸ್ಟ್ರಿಕ್‌, ಎದೆಯುರಿಯ ಸಮಸ್ಯೆಯಿಮದ ಬಳಲುವವರಿಗೂ ಅನ್ನನಾಳದ ಕ್ಯಾನ್ಸರ್‌ ಸಂಭವ ಹೆಚ್ಚು.

ಇತರ ಸಮಸ್ಯೆಗಳು: ಅನ್ನನಾಳದ ಸಮಸ್ಯೆಗಳಿಗೆ ಇತರ ಆರೋಗ್ಯ ಸಮಸ್ಯೆಗಳೂ ಕಾರಣವಾಗಬಹುದು. ಅವುಗಳಲ್ಲಿ ಅಚಲಾಸಿಯಾ ಅಂದರೆ ಆಹಾರ ನುಂಗಲು ಕಷ್ಟವಾಗುವುದು. ಇನ್ನೊಂದು ಸಮಸ್ಯೆ ಎಂದರೆ ಟೈಲೋಸಿಸ್‌ ಅಂದರೆ ಹೆಚ್ಚುವರಿ ಚರ್ಮವು ಬೆಳವಣಿಗೆಯಾಗುವಂತಹ ಸಮಸ್ಯೆಯೂ ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ರಾಸಾಯನಿಕಗಳು: ದೀರ್ಘಕಾಲದಿಂದ ಡ್ರೈಕ್ಲೀನಿಂಗ್‌ ದ್ರಾವಕಗಳಿಗೆ ಒಡ್ಡಿಕೊಳ್ಳುವ ಜನರಲ್ಲಿ ಅನ್ನನಾಳದ ಕ್ಯಾನ್ಸರ್‌ನ ಅಪಾಯವನ್ನು ಹೊಂದಿರುತ್ತಾರೆ.

ಕ್ಯಾನ್ಸರ್‌ : ಕುತ್ತಿಗೆ ಅಥವಾ ತಲೆಯ ಕ್ಯಾನ್ಸರ್‌ ಹೊಂದಿರುವವರೂ ಅನ್ನನಾಳದ ಕ್ಯಾನ್ಸರ್‌ಗೆ ಒಳಗಾಗಬಹುದು.

ಅನ್ನನಾಳದ ಕ್ಯಾನ್ಸರ್‌ ಪರೀಕ್ಷೆ ಹೇಗೆ..?

ಅನ್ನನಾಳದ ಕ್ಯಾನ್ಸರ್‌ ಪರೀಕ್ಷೆ ಹೇಗೆ..?

ಈ ಮೇಲೆ ವಿವರಿಸಿದ ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ. ದೈಹಿಕ ಪರೀಕ್ಷೆಯ ನಂತರ ಕೆಲವು ಅನ್ನನಾಳದ ಕ್ಯಾನ್ಸರ್‌ ಪತ್ತೆಹಚ್ಚಲು ಸಹಾಯ ಮಾಡುವಂತಹ ಇತರ ಪರೀಕ್ಷೆಗಳನ್ನೂ ವೈದ್ಯರು ಮಾಡಬಹುದು.ಈ ಪರೀಕ್ಷಾ ವಿಧಾನಗಳಲ್ಲಿ ಎಕ್ಸ್‌ ರೇ ವಿಧಾನವನ್ನೂ ಬಳಸಬಹುದು. ಇದು ಹೇಗೆಂದರೆ ರೋಗಿಗೆ ಬೇರಿಯಂ ಹೊಂದಿರುವ ದ್ರವವನ್ನು ಕುಡಿಸಲಾಗುತ್ತದೆ. ಈ ಬೇರಿಯಂ ದ್ರವವು ಅನ್ನನಾಳವನ್ನು ತೋರಿಸಲು ಎಕ್ಸ್‌ರೇ ಕಿರಣಗಳ ಮೂಲಕ ಸಹಾಯ ಮಾಡುತ್ತದೆ. ಈ ಮೂಲಕ ಅನ್ನನಾಳವನ್ನು ಎಕ್ಸ್‌ರೇ ಮೂಲಕ ನೋಡಬಹುದು.

ಎಸ್‌ಫಾಗೊಸ್ಕೋಪಿ ಎನ್ನುವುದು ಅನ್ನನಾಳದ ಕ್ಯಾನ್ಸರ್‌ ಪತ್ತೆ ಹಚ್ಚುವ ಪರೀಕ್ಷಾ ವಿಧಾನವಾಗಿದೆ. ಹೇಗೆಂದರೆ ಎಂಡೋಸ್ಕೋಪಿಯ ಮೂಲಕ ಅನ್ನನಾಳದ ಕ್ಯಾನ್ಸರ್‌ ಪತ್ತೆಹಚ್ಚಬಹುದು. ಬಾಯಿಯ ಮೂಲಕ ಎಂಡೋಸ್ಕೋಪ್‌ ಗಂಟಲಿನಿಂದ ಅನ್ನನಾಳದವರೆಗೂ ರವಾನಿಸಲಾಗುತ್ತದೆ. ಈ ಪರೀಕ್ಷೆಯ ಮೂಲಕ ಅನ್ನನಾಳ ಹಾಗೂ ಹೊಟ್ಟೆಯ ಮೇಲಿನ ಭಾಗವನ್ನು ಪರೀಕ್ಷಿಸಿ, ಕ್ಯಾನ್ಸರ್‌ನ ಸಂಭವನೀಯತೆಯನ್ನು ಕಂಡುಹಿಡಿಯಲಾಗುತ್ತದೆ.

ಬಯಾಪ್ಸಿಯು ಇನ್ನೊಂದು ಪರೀಕ್ಷಾ ವಿಧಾನವಾಗಿದ್ದು, ಎಸ್‌ಫಾಗೋಸ್ಕೋಪಿ ಮೂಲಕ ಅನ್ನನಾಳದ ಸಣ್ಣ ಅಂಗಾಂಶದ ತುಂಡನ್ನು ವೈದ್ಯರು ತೆಗೆಯುತ್ತಾರೆ. ಈ ಅಂಗಾಂಶದ ತುಂಡನ್ನು ಸೂಕ್ಷ್ಮವಾಗಿ ಪರೀಕ್ಷಿಸುವ ಮೂಲಕ ಕ್ಯಾನ್ಸರ್‌ ಕೋಶಗಳಿವೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ.

ಅನ್ನನಾಳದ ಎಂಡೋಸ್ಕೋಪಿಕ್‌ ಅಲ್ಟ್ರಾಸೌಂಡ್‌ ಪರೀಕ್ಷೆಯ ಮೂಲಕ ಅನ್ನನಾಳದಲ್ಲಿ ಆಂತರಿಕ ರಚನೆಗಳಿವೆಯೇ ಎನ್ನುವುದನ್ನು ಚಿತ್ರಿಸಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಅಲ್ಟ್ರಾಸೌಂಡ್‌ ಪರೀಕ್ಷೆಯನ್ನು ಅನ್ನನಾಳದ ಮೂಲಕ ನಡೆಸಲಾಗುತ್ತದೆ.

ಕಂಪ್ಯೂಟೆಡ್‌ ಟೋಮೋಗ್ರಫಿ ಅಂದರೆ ಸಿಟಿ ಸ್ಕ್ಯಾನ್‌ ಪರೀಕ್ಷೆಯ ಮೂಲಕ ಅನ್ನನಾಳದ ಕ್ಯಾನ್ಸರ್‌ ಎದೆ ಮತ್ತು ಹೊಟ್ಟೆಗೆ ಹರಡುವ ಗಡ್ಡೆಯ ಪ್ರಮಾಣವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಅನ್ನನಾಳದ ಕ್ಯಾನ್ಸರ್‌ಗೆ ಚಿಕಿತ್ಸೆ

ಅನ್ನನಾಳದ ಕ್ಯಾನ್ಸರ್‌ಗೆ ಚಿಕಿತ್ಸೆ

ಕ್ಯಾನ್ಸರ್‌ಗೆ ಸಾಮಾನ್ಯವಾಗಿ ಅದು ಯಾವ ಹಂತದಲ್ಲಿದೆ ಎನ್ನುವುದನ್ನು ಪರೀಕ್ಷೆ ಮಾಡಿದ ನಂತರ ಅದರಂತೆ ಚಿಕಿತ್ಸೆಯನ್ನು ಮುಂದುವರಿಸುತ್ತಾರೆ. ಇದರಂತೆ ಅನ್ನನಾಳದ ಕ್ಯಾನ್ಸರ್‌ಗೆ ಕೂಡಾ ಅದರ ಹಂತವನ್ನು ಆಧರಿಸಿ ಚಿಕಿತ್ಸೆಯನ್ನು ನೀಡುತ್ತಾರೆ.

ಶಸ್ತ್ರಚಿಕಿತ್ಸೆ: ಅನ್ನನಾಳದ ಕ್ಯಾನ್ಸರ್‌ಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್‌ ಕೋಶವಿರುವ ಅನ್ನನಾಳದ ಭಾಗವನ್ನು ತೆಗೆದುಬಿಡಬಹುದು. ಹಾಗೇನೆ ಅದರ ಸುತ್ತಲಿನ ಅಂಗಾಶಗಳನ್ನೂ ತೆಗೆದುಬಿಡಬಹುದು. ಕೆಲವೊಮ್ಮೆ ಅನ್ನನಾಳವನ್ನೂ ತೆಗೆದುಬಿಡಬಹುದು. ಅನ್ನನಾಳದ ಕಾರ್ಯವನ್ನು ಮರುಸ್ಥಾಪಿಸಲು ಕರುಳಿನ ತುಂಡನ್ನೂ ಬಳಸಬಹುದು. ವೈದ್ಯರು ಅನ್ನನಾಳದ ಸುತ್ತಲಿನ ದುಗ್ಧರಸ ಗ್ರಂಥಿಗಳನ್ನೂ ತೆಗೆದು ಕ್ಯಾನ್ಸರ್‌ ಕೋಶಗಳಿವೆಯೇ ಎನ್ನುವುದನ್ನು ಪರೀಕ್ಷಿಸಬಹುದು. ಅನ್ನನಾಳವನ್ನು ಹೊರತುಪಡಿಸಿ ಇತರ ಭಾಗಗಳಿಗೆ ಕ್ಯಾನ್ಸರ್‌ ಹರಡದಿರುವ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕವೇ ಕ್ಯಾನ್ಸರ್‌ ಅನ್ನು ಗುಣಪಡಿಸಬಹುದು. ಆದರೆ ಅನ್ನನಾಳದ ಕ್ಯಾನ್ಸರ್‌ ಆರಂಭಿಕ ಹಂತದಲ್ಲೇ ಪತ್ತೆಯಾಗುವುದು ಕಡಿಮೆ. ಹಾಗಾಗಿ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ.

ರೇಡಿಯೇಷನ್‌ ಥೆರಪಿ

ವಿಕಿರಣ ಅಥವಾ ವಿಕಿರಣಶೀಲ ಪದಾರ್ಥವ್ನನು ಬಳಸಿಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ವಿಧಾನವೇ ರೇಡಿಯೇಷನ್.ಇದನ್ನು ಕ್ಯಾನ್ಸರ್‌ ಕೋಶಗಳನ್ನು ಕೊಲ್ಲಲು ಅಥವಾ ಹಾನಿ ಮಾಆಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್‌ ಗಡ್ಡೆಯ ಮೇಲೆ ವಿಕಿರಣವನ್ನು ಹರಿಯಬಿಡಲಾಗುತ್ತಸೆ. ಈ ವಿಕಿರಣವು ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ಮತ್ತು ಅವುಗಳ ವಿಭಜನೆಯನ್ನು ನಿವಾರಿಸುವ ಮೂಲಕ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುತ್ತದೆ. ಅಲ್ಲದೇ ಕ್ಯಾನ್ಸರ್‌ನಿಂದಾಗಿ ನುಂಗಲು ಸಮಸ್ಯೆಯಾಗುತ್ತಿದ್ದಲ್ಲಿ, ದೊಡ್ಡ ಚಿಕಿತ್ಸಾ ವಿಧಾನವಾಗಿ ರೆಡಿಯೇಷನ್‌ ವಿಧಾನವನ್ನು ಬಳಸಲಾಗುತ್ತದೆ.

ಕಿಮೋಥೆರಪಿ

ಕಿಮೋಥೆರಪಿಯನ್ನು ಕ್ಯಾನ್ಸರ್‌ಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲು ಔಷಧಿರೂಪವಾಗಿ ನೀಡುವಂತಹ ಚಿಕಿತ್ಸೆಯಾಗಿದೆ. ಕೆಲವೊಂದು ಕಿಮೋಥೆರಪಿ ಮಾತ್ರೆಯನ್ನು ಒಳಗೊಂಡಿರುತ್ತದೆ. ಕೆಲವು ಕಿಮೋಥೆರಪಿ ಔಷಧವನ್ನು ನೇರವಾಗಿ ರಕ್ತನಾಳದ ಮೂಲಕ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಕಿಮೋಥೆರಪಿ ಔಷಧಗಳು ರಕ್ತದ ಮೂಲಕ ದೇಹದಾದ್ಯಂತ ಚಲಿಸುತ್ತದೆ ಮತ್ತು ದೇಹದಲ್ಲಿ ಇರುವಂತಹ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುತ್ತದೆ. ಕಿಮೋಥೆರಪಿಯನ್ನು ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮೊದಲು ಕ್ಯಾನ್ಸರ್‌ ಗಡ್ಡೆಯನ್ನು ಕುಗ್ಗಿಸಲು ಕೂಡಾ ನೀಡಲಾಗುತ್ತದೆ. ಕಿಮೋಥೆರಪಿ ರೋಗಲಕ್ಷಣಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ.

ಎಂಡೋಸ್ಕೋಪಿಕ್ ಸಬ್‌ಮ್ಯುಕೋಸಲ್ ಡಿಸೆಕ್ಷನ್/ ರೆಸೆಕ್ಷನ್‌

ಎಂಡೋಸ್ಕೋಪಿಕ್ ಸಬ್‌ಮ್ಯುಕೋಸಲ್ ಡಿಸೆಕ್ಷನ್ ಅಂದರೆ ಚಿಕ್ಕದಾಗಿರುವ ಕ್ಯಾನ್ಸರ್‌ ಗೆಡ್ಡೆಗಳಿಗೆ ಚಿಕಿತ್ಸೆ ನೀಡುವ ವಿಧಾನವಾಗಿದೆ. ಈ ವಿಧಾನದ ಮೂಲಕ ಅನ್ನನಾಳವನ್ನು ತೆಗೆದುಹಾಕದೆಯೇ ಎಂಡೋಸ್ಕೋಪಿಕ್‌ ಮೂಲಕ ಕ್ಯಾನರ್‌ ಗೆಡ್ಡೆಗಳನ್ನು ತೆಗಗೆಯಲಾಗುತ್ತದೆ.

ಎಂಡೋಸ್ಕೋಪಿಕ್‌ ಲೇಸರ್‌ ಥೆರಪಿ

ಎಂಡೋಸ್ಕೋಪಿಕ್‌ ಲೇಸರ್‌ ಥೆರಪಿಯನ್ನು ಅನ್ನನಾಳದಲ್ಲಿ ಅಡಚಣೆಯುಂಟು ಮಾಡುವ, ತಡೆಯಾಗಿರುವ ಗಡ್ಡೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಈ ಚಿಕಿತ್ಸಾ ವಿಧಾನದಲ್ಲಿ ನುಂಗುವಿಕೆ ಮತ್ತು ರೋಗಿಗೆ ಆಹಾರ ಸೇವಿಸಲು ಅನುಕೂಲವಾಗುವಂತೆ ಅನ್ನನಾಳದಲ್ಲಿ ಅಡ್ಡವಾಗಿರುವ ಗಡ್ಡೆಗಳನ್ನು ಕತ್ತರಿಸಲು ಲೇಸರ್‌ಗಳನ್ನು ಬಳಸಲಾಗುತ್ತದೆ.

ಫೋಟೋಡೈನಾಮಿಕ್‌ ಥೆರಪಿ

ಫೋಟೋಆಕ್ಟಿವ್‌ ಔಷಧಗಳು ಕ್ಯಾನ್ಸರ್‌ ಕೋಶಗಳನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಕ್ಯಾನ್ಸರ್‌ ಕೋಶಗಳು ನಾಶವಾಗುತ್ತದೆ. ವಿಶೇಷವಾಗಿ ಈ ಚಿಕಿತ್ಸೆಯನ್ನು ಅನ್ನನಾಳದ ಕ್ಯಾನ್ಸರ್‌ನಿಮದಾಗಿ ಆಹಾರ ನುಂಗಲು ಕಷ್ಟವಾಗುತ್ತಿರುವವರಿಗೆ ಬಳಸಬಹುದು. ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ನೀಡಿ, ನಿಯಂತ್ರಣ ಮಾಡಲು ಪ್ರಯತ್ನಿಸಿದರೂ, ಕ್ಯಾನ್ಸರ್‌ ಸಮಸ್ಯೆಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಅನ್ನನಾಳದ ಕ್ಯಾನ್ಸರ್‌ ತಡೆಯಲು ಸಾಧ್ಯವಾಗದಿದ್ದರೂ ತಂಬಾಕು ಸೇವನೆ, ಮದ್ಯಪಾನವನ್ನು ನಿಯಂತ್ರಿಸುವ ಮೂಲಕ ಈ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಬಹುದು.

English summary

Esophageal Cancer Causes, Symptoms, Tests and Treatment in Kannada

know the Symptoms of Esophageal Cancer and Causes Tests and Treatment in Kannada, Read on...
X
Desktop Bottom Promotion