ಕಣ್ಣಿನ ಆರೋಗ್ಯಕ್ಕೆ ಬೇಕು, ಸ್ವಲ್ಪ ಸ್ಪೆಷಲ್ ಆರೈಕೆ!

ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಬೇಕು. ಆದರೆ ಇಂದಿನ ವೇಗದ ಜೀವನದಲ್ಲಿ ಕಣ್ಣುಗಳಿಗೆ ಗರಿಷ್ಟ ಒತ್ತಡ ನೀಡಿ ದಿನದ ಕೆಲಸವನ್ನು ಮುಗಿಸಲೇಬೇಕಾದ ಅವಶ್ಯಕತೆ ಎಲ್ಲರಿಗೂ ಇದೆ.

ಜನಬಿನಿಡ ರಸ್ತೆಗಳ ಕಾರಣ ಒಂದು ಕ್ಷಣವೂ ವಿರಾಮ ನೀಡದೇ ಎಚ್ಚರಿಕೆಯಿಂದ ತಡರಾತ್ರಿಯವರೆಗೂ ಕಣ್ಣುಗಳಿಗೆ ಕೆಲಸ ನೀಡುವ ನಿಬಿಡತೆ, ಕುಂಠಿತವಾದ ನಿದ್ದೆ, ದಿನವಿಡೀ ಕಂಪ್ಯೂಟರ್ ಮಾನಿಟರ್ ವೀಕ್ಷಿಸುವುದು, ಕಡಿಮೆ ಬೆಳಕಿನಲ್ಲಿ ಅಥವಾ ಹೆಚ್ಚು ಬೆಳಕಿನಲ್ಲಿ ಕೆಲಸ ಮಾಡಬೇಕಾಗಿ ಬರುವುದು, ಸತತವಾಗಿ ಚಿಕ್ಕ ಅಕ್ಷರಗಳನ್ನು ಓದುವುದು ಮೊದಲಾದವು ಅನಿವಾರ್ಯವಾದ ಒತ್ತಡಗಳಾದರೆ ಕಣ್ಣಿಗೆ ಅಲರ್ಜಿಯುಂಟುವಾಡುವ ವಸ್ತುಗಳ ಜೊತೆ ಕೆಲಸ ಮಾಡಬೇಕಾಗಿ ಬರುವುದು.

How to reduce eye strain naturally

ವೈದ್ಯರು ನೀಡಿದ ಕನ್ನಡಕದ ಸಂಖ್ಯೆಯಲ್ಲಿ ಏರುಪೇರು, ಕಣ್ಣಿನಲ್ಲಿ ಯಾವುದೋ ಕಾರಣದಿಂದಾದ ಕಣ್ಣುಗಳು ಅಗತ್ಯಕ್ಕಿಂತ ಹೆಚ್ಚು ಶ್ರಮಪಡಬೇಕಾಗಿ ಬರುತ್ತದೆ. ಈ ಶ್ರಮದ ಕಾರಣ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಇದಕ್ಕಾಗಿ ಹಲವು ಔಷಧಿಗಳನ್ನು ನೇತ್ರವೈದ್ಯರು ಸಲಹೆ ಮಾಡಿದರೂ ಪರ್ಯಾಯವಾಗಿ ಕೆಲವು ಸುಲಭವಾದ ಮತ್ತು ಸ್ಥಳದಲ್ಲಿಯೇ ನಿರ್ವಹಿಸಬಹುದಾದ ವ್ಯಾಯಾಮಗಳಿಂದಲೂ ಈ ಶ್ರಮವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಎಂಬುದನ್ನು ನೋಡೋಣ....ಕಣ್ಣಿಗೆ ಭಾದೆ ತರುವ ಕೆಂಗಣ್ಣು ರೋಗಕ್ಕೆ ಪರಿಹಾರವೇನು?

ಕಣ್ಣುಗಳಿಗೆ ನಯವಾದ ಮಸಾಜ್

ಕಣ್ಣುರೆಪ್ಪೆಗಳಿಗೆ ಪ್ರತಿದಿನ ನಯವಾದ ಮಸಾಜ್ ಮಾಡುವುದು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಕಣ್ಣುರೆಪ್ಪೆ ಮತ್ತು ಕಣ್ಣಿನ ಒಳಗಣ ಸೂಕ್ಷ್ಮನರಗಳಲ್ಲಿ ರಕ್ತಸಂಚಾರ ಚುರುಕಾಗಿ ಕಣ್ಣಿನ ಸುತ್ತಲ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಜೊತೆಗೇ ಕಣ್ಣೀರಿನ ಗ್ರಂಥಿಗಳನ್ನೂ ಪ್ರಚೋದಿಸಿ ಕಣ್ಣುಗಳು ಸದಾ ತೇವವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಮಸಾಜ್ ಮಾಡುವ ಬಗೆ ಹೀಗಿದೆ:


1) ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಉಪಯೋಗಿಸಿ ಬಲ ಮತ್ತು ಎಡಕಣ್ಣುಗಳ ಮೇಲಿನ ರೆಪ್ಪೆ ಮತ್ತು ಹುಬ್ಬುಗಳ ಸ್ನಾಯುಗಳಿಗೆ ನಯವಾಗಿ ಮಸಾಜ್ ಮಾಡಿ. ಎರಡೂ ಮಸಾಜ್ ಏಕಕಾಲದಲ್ಲಿ ಸಮನಾಗಿರಬೇಕು. ಸುಮಾರು ಹತ್ತರಿಂದ ಇಪ್ಪತ್ತು ಸೆಕೆಂಡ್ ಇದಕ್ಕೆ ಸಾಕು.
2)ಈಗ ಕೆಳಗಿನ ರೆಪ್ಪೆಯನ್ನೂ ಕಣ್ಣಿನ ಕೆಳಗಣ ಭಾಗದ ಮೂಳೆಯನ್ನೂ ಹತ್ತರಿಂದ ಇಪ್ಪತ್ತು ಸೆಕೆಂಡ್ ಕಾಲ ನಯವಾಗಿ ಮಸಾಜ್ ಮಾಡಿ.
3) ಕಣ್ಣಿನ ಪಕ್ಕದ ಹಣೆಯ ಭಾಗ (temple), ಕೆನ್ನೆಯ ಮೇಲ್ಭಾಗದ ಮೂಳೆ ಎದ್ದುನಿಂತಿರುವಲ್ಲಿ ಇನ್ನೂ ಇಪ್ಪತ್ತು ಸೆಕೆಂಡ್ ನಯವಾಗಿ ಮಸಾಜ್ ಮಾಡಿ. ಇದರಿಂದ ಕೆಲಸಮಯದಲ್ಲಿಯೇ ಕಣ್ಣಿನ ಶ್ರಮ ಮಾಯವಾಗುತ್ತದೆ.

ಹಸ್ತದ ಕಾವು ಮುಟ್ಟಿಸಿ
ಸಾಮಾನ್ಯವಾಗಿ ತುಂಬಾ ಪುಟಗಳನ್ನು ಓದಿದ ಬಳಿಕ, ಲ್ಯಾಪ್ ಟಾಪ್ ಪರದೆ, ಟೀವಿ ಪರದೆಯನ್ನು ಹೆಚ್ಚು ಹೊತ್ತು ನೋಡಿದ ಬಳಿಕ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಇದನ್ನು ಪರಿಹರಿಸಲು ಹಸ್ತದ ಕಾವು ಉಪಯುಕ್ತವಾಗಿದೆ. ಇದರಿಂದ ಕಣ್ಣುಗಳು ಶೀಘ್ರವೇ ಓದಿನ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಈ ಮಸಾಜ್ ಮಾಡುವ ಬಗೆ ಹೀಗಿದೆ:


1) ಬೆನ್ನು ಮೂಳೆ ನೆಟ್ಟಗಿರುವಂತೆ ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳಿರಿ
2) ನಿಮ್ಮ ಎರಡೂ ಹಸ್ತಗಳನ್ನು ಒಂದಕ್ಕೊಂದು ಉಜ್ಜಿ ಬಿಸಿಮಾಡಿ
3) ಈಗ ನಿಮ್ಮ ಎರಡೂ ಕಣ್ಣುಗಳನ್ನು ಮುಚ್ಚಿ ಬಿಸಿಯಾಗಿರುವ ಹಸ್ತಗಳನ್ನು ಕಣ್ಣುಗಳ ಮೇಲೆ ಆವರಿಸಿಕೊಳ್ಳುವಂತೆ ಇಡಿ. ಕಣ್ಣುಗುಡ್ಡೆಗಳಿಗೆ ಹಸ್ತ ನಯವಾಗಿ ತಾಗಬೇಕೇ ವಿನಃ ಯಾವುದೇ ಒತ್ತಡ ನೀಡಬಾರದು.
4) ಕಣ್ಣುಗಳು ಮುಚ್ಚಿಕೊಂಡೇ ಇರುವಂತೆ ಮತ್ತೆ ಹಸ್ತಗಳನ್ನು ಉಜ್ಜಿ ಕಣ್ಣುಗಳ ಮೇಲಿಡಿ. ಸುಮಾರು ಮೂವತ್ತು ಸೆಕೆಂಡುಗಳ ಕಾಲ ಹೀಗೇ ಕಾವು ನೀಡಿ. ನಂತ ಕೈತೆಗೆದು ಕೊಂಚ ಕಾಲ (ಸುಮಾರು ಅರ್ಧ ನಿಮಿಷ) ಹಾಗೇ ಕಣ್ಣು ಮುಚ್ಚಿಕೊಂಡಿರಿ.

ಬೆಳಗಿನ ಸೂರ್ಯರಶ್ಮಿ ಸೇವನೆ!!
ಸೂರ್ಯನ ಕಿರಣಗಳನ್ನು ಸೇವಿಸಲಿಕ್ಕಾಗುತ್ತದೆಯೇ? ಹೌದು ಎನ್ನುತ್ತದೆ ಆಯುರ್ವೇದ. ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ. ಉತ್ಪಾದಿಸಿಕೊಳ್ಳಲು ಸೂರ್ಯನ ಕಿರಣಗಳು ಬೇಕೇ ಬೇಕು. ಈ ಕಿರಣಗಳನ್ನು ಆಸ್ವಾದಿಸಲು ಬೆಳಗಿನ ಕಿರಣಗಳು ಉತ್ತಮವಾಗಿವೆ. ಅತ್ಯಂತ ಪ್ರಖರವೂ ಅಲ್ಲದ ಸೌಮ್ಯವೂ ಅಲ್ಲದ ಸಮಯವಾದ ಬೆಳಗಿನ ಎಂಟರಿಂದ ಹತ್ತು ಗಂಟೆಯವರೆಗೆ ಈ ಕಿರಣಗಳನ್ನು ಆಸ್ವಾದಿಸಬಹುದು. ಇದನ್ನು ಅನುಸರಿಸುವ ಬಗೆ:


1) ಸೂರ್ಯನ ಕಿರಣಗಳು ಯಾವುದೇ ಅಡೆತಡೆಯಿಲ್ಲದಂತೆ ಬೀಳುವ ಸ್ಥಳವನ್ನು ಆಯ್ದುಕೊಂಡು ಮುಂಜಾನೆಯ ವಿಧಿಗಳ ಬಳಿಕ ಆಗಮಿಸಿ.
2) ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನತ್ತ ನೆಟ್ಟ ನೇರವಾಗಿ ನೋಡಿ. (ಕಣ್ಣು ಬಿಡಬಾರದು)
3) ಕಣ್ಣು ಮುಚ್ಚಿಕೊಂಡಿದ್ದಂತೆಯೇ ಕಣ್ಣುಗುಡ್ಡೆಗಳನ್ನು ಮೇಲಿನಿಂದ ಕೆಳಕ್ಕೆ ಹಾಗೂ ಪಕ್ಕದಿಂದ ಪಕ್ಕಕ್ಕೆ, ವೃತ್ತಾಕಾರವಾಗಿ ತಿರುಗಿಸಿ. ಸ್ವಲ್ಪ ಸಮಯದ ನಂತರ ಮೊದಲು ಮಾಡಿದ್ದಕ್ಕೆ ವಿರುದ್ದ ದಿಕ್ಕಿನಲ್ಲಿ ಕಣ್ಣುಗುಡ್ಡೆಗಳನ್ನು ಚಲಿಸಿ. ಬಳಿಕ ಕೊಂಚ ಆರಾಮ ನೀಡಿ.
4) ಈ ಕ್ರಿಯೆಯನ್ನು ಸುಮಾರು ಐದು ನಿಮಿಷಗಳವರೆಗೆ ಪುನರಾವರ್ತಿಸಿ.
5) ಬಳಿಕ ಇದೇ ದಿಕ್ಕಿನಲ್ಲಿ ಕಣ್ಣು ಬಿಡಬೇಡಿ, ಪೂರ್ಣವಾಗಿ ಹಿಂದೆ ತಿರುಗಿ ನೆಲದತ್ತ ನೋಡುತ್ತಾ ನಿಧಾನವಾಗಿ ಕಣ್ಣು ಬಿಡಿ. ಸಾಕಷ್ಟು ಬಾರಿ ಕಣ್ಣುರೆಪ್ಪೆಗಳನ್ನು ಮಿಟುಕಿಸಿ ನಂತರವೇ ದೃಷ್ಟಿಯನ್ನು ಮೇಲಕ್ಕೆತ್ತಿ.

ಕಣ್ಣಿನ ವ್ಯಾಯಾಮಗಳು

ಕಣ್ಣಿನ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುತ್ತಾ ಬರುವುದರಿಂದ ಕಣ್ಣುಗಳು ಹೆಚ್ಚು ಕಾಲ ಶ್ರಮವಿಲ್ಲದೇ ಕಾರ್ಯ ಎಸಗಲು ಸಾಧ್ಯವಾಗುತ್ತದೆ. ವ್ಯಾಯಾಮದಿಂದ ಕಣ್ಣಿನ ನರಗಳಲ್ಲಿ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ಕಣ್ಣಿನ ಸ್ನಾಯುಗಳು ಹೆಚ್ಚು ಸಡಿಲವಾಗುತ್ತವೆ, ಕಣ್ಣುಗಳು ಚಿಕ್ಕ ವಿವರವನ್ನೂ ಗ್ರಹಿಸುವಷ್ಟು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ವ್ಯಾಯಾಮದ ಬಗೆ:
*ಒಂದು ಪೆನ್ ಅಥವಾ ಪೆನ್ಸಿಲ್ ಅನ್ನು ಕೈಯಲ್ಲಿ ಹಿಡಿದು ಮುಂದೆ ಚಾಚಿ. ಕಣ್ಣುಗಳು ಈ ಪೆನ್ಸಿಲ್‪ನ ಮೇಲಿನ ತುದಿಯನ್ನೇ ನೋಡುವಂತೆ ಕೇಂದ್ರೀಕರಿಸಿ.
*ಈಗ ನಿಧಾನವಾಗಿ ಪೆನ್ಸಿಲ್ ಅನ್ನು ನಿಮ್ಮ ಕಣ್ಣುಗಳ ಎದುರು ಬರುವಂತೆ ಹಿಂದೆ ತರುತ್ತಾ ಬನ್ನಿ. ಎಲ್ಲಿಯವರೆಗೆ ನಿಮ್ಮ ಎರಡೂ ಕಣ್ಣುಗಳು ಸ್ಪಷ್ಟವಾಗಿ ಮೇಲ್ತುದಿಯನ್ನು ನೋಡಲು ಸಾಧ್ಯವೋ ಅಲ್ಲಿಯವರೆಗೆ. ಬಳಿಕ ಬಂದಹಾಗೆಯೇ ಹಿಂದಕ್ಕೆ ತನ್ನಿ.
*ಈ ಕ್ರಿಯೆಯನ್ನು ಹತ್ತರಿಂದ ಹದಿನೈದು ಸಲ ಪುನರಾವರ್ತಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Monday, September 21, 2015, 23:06 [IST]
X
Desktop Bottom Promotion