ನಡುವಯಸ್ಸಿನ ಬಿಕ್ಕಟ್ಟಿನ ಲಕ್ಷಣಗಳು

By Hemanth P

ಜೀವನದಲ್ಲಿ ನಾಲ್ಕು ಘಟ್ಟಗಳಿರುತ್ತದೆ. ಬಾಲ್ಯ, ಹದಿಹರೆಯ, ನಡುವಯಸ್ಸು ಮತ್ತು ಮುಪ್ಪು. ಮನುಷ್ಯ ಒಂದೊಂದು ಹಂತದಲ್ಲಿ ಒಂದೊಂದು ರೀತಿ ವರ್ತಿಸುತ್ತಾನೆ. ಸುಮಾರು 35ರಿಂದ 55ರ ವರೆಗಿನ ವಯಸ್ಸಿನಲ್ಲಿ ಜೀವನದಲ್ಲಿ ಆಸಕ್ತಿಯನ್ನೇ ಕಳಕೊಳ್ಳುವಂತಹ ಪರಿಸ್ಥಿತಿ ಬರಬಹುದು. ನಿಮಗೂ ಹೀಗೆ ಆಗಿದ್ದರೆ ಎಚ್ಚರ ವಹಿಸಿ. ಈ ವಯಸ್ಸಿನಲ್ಲಿ ಪುರುಷರು ಹಾಗೂ ಮಹಿಳೆಯರು ಕೆಲವೊಂದು ಮಹತ್ವದ ಬದಲಾವಣೆಗೆ ಒಳಗಾಗುತ್ತಾರೆ. ಇದನ್ನೇ ಮಧ್ಯವಯಸ್ಸಿನ ಬಿಕ್ಕಟ್ಟು ಎನ್ನಲಾಗುತ್ತದೆ. ಇದು ಮಹಿಳೆಯರಿಗೆ ಹಾಗೂ ಪುರುಷರಿಗೆ ಭಾವನಾತ್ಮಕವಾಗಿ ಅಸಹನೀಯ ಸಮಯ. ಕೆಲವರು ತಮ್ಮ ಭಾವನೆಗಳ ಅಗತ್ಯತೆಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿಕೊಂಡು ಹೊಂದಿಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಇದು ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಕೆಲವು ಮಂದಿಗೆ ಈ ವಯಸ್ಸಿನಲ್ಲಿ ಮದುವೆಯ ಮೇಲಿನ ಆಸಕ್ತಿ ಕಡಿಮೆಯಾಗಿ ಕಚೇರಿಯಲ್ಲಿ ತಮ್ಮ ಸ್ನೇಹಿತರು ಅಥವಾ ತಮ್ಮ ವಿರುದ್ಧ ಲಿಂಗದವರ ಕಡೆ ಆಕರ್ಷಿತರಾಗುತ್ತಾರೆ. ನಿಮ್ಮ ಪತಿ ಅಥವಾ ಪತ್ನಿ ನಡುವಯಸ್ಸಿನ ಬಿಕ್ಕಟ್ಟು ಎದುರಿಸುತ್ತಿದ್ದರೆ ಅದು ಜೀವನದ ಅತ್ಯಂತ ನೋವಿನ ಸಮಯ. ನಿಮ್ಮ ಸಂಗಾತಿಯಲ್ಲಿನ ಬದಲಾವಣೆಗಳಿಂದ ನಿಮಗೆ ಅಚ್ಚರಿಯಾಗಬಹುದು ಮತ್ತು ನಿಮ್ಮ ಬಗ್ಗೆ ಆಕೆ/ಆತ ತೋರಿಸುತ್ತಿರುವ ನಡವಳಿಕೆ ನಿಮ್ಮನ್ನು ಆಘಾತಕ್ಕೀಡು ಮಾಡಬಹುದು. ಮಹಿಳೆಯರಲ್ಲಿ ಈ ವಯಸ್ಸಿನಲ್ಲಿ ಮುಟ್ಟು ನಿಲ್ಲುವ ಕಾರಣ ಕಠಿಣ ಸಮಸ್ಯೆ ಎದುರಿಸುತ್ತಾರೆ. ಪುರುಷರು ಈ ಸಮಯದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಗಿರುತ್ತದೆ. ನಿಮ್ಮ ಪತಿ/ಪತ್ನಿಯಲ್ಲಿ ಕಾಣಿಸಿಕೊಳ್ಳುವ ನಡುವಯಸ್ಸಿನ ಬಿಕ್ಕಟ್ಟಿನ ಲಕ್ಷಣಗಳು ಯಾವುದು? ಇದರ ಬಗ್ಗೆ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಗತ್ಯ ಬದಲಾಣೆಗಳನ್ನು ಮಾಡಿಕೊಳ್ಳಲು ತಯಾರಾಗಿ ಮತ್ತು ಇದರಿಂದ ಹೊರಬನ್ನಿ.

Symptoms of mid-life crisis

1. ನನಗೆ ಆಸಕ್ತಿಯಿಲ್ಲ!
ನಡುವಯಸ್ಸಿನ ಬಿಕ್ಕಟ್ಟಿನಲ್ಲಿ ಇದು ಅತ್ಯಂತ ಸಾಮಾನ್ಯ ಗುಣಲಕ್ಷಣ. ನಿರಾಸಕ್ತಿಯ ಭಾವನೆ ನಿಮ್ಮನ್ನು ಆವರಿಸುತ್ತದೆ ಮತ್ತು ಇದರಿಂದ ಖಿನ್ನತೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಕೆಲಸ ಬಿಡುತ್ತಾರೆ ಮತ್ತು ಹಿಂದಿನಂತೆ ಶಾಲೆಗೆ ಹೋಗಲು ಪ್ರಯತ್ನಿಸುತ್ತಾರೆ. ಅವರು ತಮ್ಮದೇ ನಂಬಿಕೆ ಮತ್ತು ನಿರ್ಧಾರಗಳನ್ನು ಪ್ರಶ್ನಿಸುತ್ತಾರೆ. ಇಂತಹ ಬದಲಾವಣೆ ನಿಮ್ಮ ಸಂಗಾತಿಯಲ್ಲಿ ಕಂಡುಬಂದರೆ ಆಗ ಆಕೆ/ಆತ ನಡುವಯಸ್ಸಿನ ಬಿಕ್ಕಟ್ಟಿಗೆ ಸಿಲುಕಿದ್ದಾರೆಂದು ಅರ್ಥಮಾಡಿಕೊಳ್ಳಿ.

2. ಶೈಲಿ ಬದಲಾಯಿಸುವುದು
ನಡುವಯಸ್ಸಿನ ಬಿಕ್ಕಟ್ಟಿಗೆ ಸಿಲುಕುವ ವ್ಯಕ್ತಿಯಲ್ಲಿ ಕಂಡುಬರುವ ಮತ್ತೊಂದು ಲಕ್ಷಣವೆಂದರೆ ಅದು ಶೈಲಿ ಬದಲಾಯಿಸುವುದು. ಫ್ಯಾಶನ್ ನಿಂದ ಯಾವಾಗಲೂ ವಿಮುಖವಾಗಿರುವ ಮತ್ತು ವರ್ಷಕ್ಕೊಮ್ಮೆ ಶಾಪಿಂಗ್ ಮಾಡುತ್ತಿರುವ ವ್ಯಕ್ತಿ ಹಠಾತ್ ಆಗಿ ಫ್ಯಾಶನ್ ಫ್ರೀಕ್ ಆಗುವುದು. ಆತ/ಆಕೆ ಕನ್ನಡಿ ಎದುರು ಗಂಟೆಗಟ್ಟಲೆ ಕಳೆಯಬಹುದು. ನಿಮ್ಮ ಸಂಗಾತಿಯಲ್ಲಿ ಈ ಲಕ್ಷಣ ಕಾಣಿಸುತ್ತಿದೆಯಾ? ಹಾಗಿದ್ದರೆ ಆಕೆ/ಆತ ನಡುವಯಸ್ಸಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆಂದು ಅರ್ಥ ಮಾಡಿಕೊಳ್ಳಿ.

3. ಖಿನ್ನತೆಯ ಭಾವನೆ
ನಡುವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರಲ್ಲಿ ಖಿನ್ನತೆಯ ಭಾವನೆ ಕಾಡುತ್ತದೆ. ಖಿನ್ನತೆಯಿಂದ ಅವರ ಮನಸ್ಥಿತಿ ಬದಲಾಗುತ್ತದೆ ಮತ್ತು ಇದರಿಂದ ಪ್ರತಿಯೊಂದರಲ್ಲಿ ಅಶಿಸ್ತು ಕಾಣಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಸರ, ಶಕ್ತಿಯ ಕೊರತೆ, ತೂಕ ಹೆಚ್ಚುವುದು/ಕಡಿಮೆಯಾಗುವುದು ಮತ್ತು ನಿದ್ರಾಹೀನತೆ ಖಿನ್ನತೆಯ ಕೆಲವೊಂದು ಲಕ್ಷಣಗಳು.

4. ಹಠಾತ್ ನಿರ್ಧಾರ ತೆಗೆದುಕೊಳ್ಳುವುದು
ನಡುವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರು ಹಠಾತ್ ಆಗಿ ನಿರ್ಧಾರ ತೆಗೆದುಕೊಳ್ಳಬಹುದು. ಅವರು ಜೀವನದ ಅಮೂಲ್ಯ ವಿಷಯಗಳ ಬಗ್ಗೆ ಹಠಾತ್ ನಿರ್ಧಾರ ತೆಗೆದುಕೊಂಡು ಬಳಿಕ ಪರಿತಪಿಸಬಹುದು. ಅವರು ಕೆಲಸಕ್ಕೆ ರಾಜೀನಾಮೆ ನೀಡುವುದು, ಡೈವೋರ್ಸ್ ನೀಡುವುದು ಮತ್ತು ಮನೆ ಮಾರುವುದು ಇತ್ಯಾದಿ ಹಠಾತ್ ನಿರ್ಧಾರ ತೆಗೆದುಕೊಳ್ಳಬಹುದು.

5. ನರಕದ ಜೀವನ
20 ವರ್ಷಗಳಿಂದ ನಿಮ್ಮ ಜತೆಗೆ ವಾಸಿಸುತ್ತಿರುವ, ನಿಮ್ಮ ಎಲ್ಲಾ ಸುಖದುಃಖಗಳಲ್ಲಿ ಭಾಗಿಯಾಗುವ ವ್ಯಕ್ತಿ ಹಠಾತ್ ಆಗಿ ಆತ/ಆಕೆಯ ಸಂಗಾತಿಗೆ ನಾನು ಆರಂಭದಿಂದಲೇ ನರಕದಲ್ಲಿ ವಾಸಿಸುತ್ತೇನೆಂದು ಹೇಳುತ್ತಾರೆ. ಇದು ನಿಮ್ಮ ಸಂಗಾತಿಯಿಂದ ನೀವು ಕೇಳಿಸಿಕೊಳ್ಳುತ್ತಿರುವ ಅತ್ಯಂತ ನೋವಿನ ಮಾತಲ್ಲವೇ? ನಡುವಯಸ್ಸಿನ ಬಿಕ್ಕಟ್ಟು ಜೀವನದಲ್ಲಿ ಹೀಗೂ ಮಾಡುತ್ತದೆ. ಎಚ್ಚರಿಕೆಯಿಂದ ಇರಿ.

6. ಅದೇ ಹಳೆಯ ರೀತಿ
ನಡುವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ನಿಮ್ಮ ಪತಿ/ಪತ್ನಿ ಇದನ್ನು ಬಯಸಬಹುದು. ಆತ/ಆಕೆ ಬೆಡ್ ರೂಮ್ ನಲ್ಲಿ ಅದೇ ಹಳೆಯ ಶೈಲಿ ಬೋರ್ ಹೊಡೆಸಿದೆ ಎನ್ನಬಹುದು. ಇದರಿಂದ ಆಕೆ/ಆತ ಹೊಸ ಭಾವನಾತ್ಮಕ ಮತ್ತು ರೋಮ್ಯಾಂಟಿಕ್ ಸಂಬಂಧದ ಹುಡುಕಾಟ ನಡೆಸಬಹುದು. ನಿಮ್ಮ ಸಂಗಾತಿ ದೀರ್ಘಾವಧಿ ತನಕ ಕೆಲಸ ಮಾಡುತ್ತಿದ್ದರೆ ಅಥವಾ ಚಾಟಿಂಗ್ ಮಾಡುತ್ತಿದ್ದರೆ ಇದರ ಬಗ್ಗೆ ಗಮನಹರಿಸಿ.

7. ಡೋಲಾಯಮಾನ ಭವಿಷ್ಯ
ನಡುವಯಸ್ಸಿನ ಬಿಕ್ಕಟ್ಟಿನಲ್ಲಿ ಕಾಣಿಸುವ ಮತ್ತೊಂದು ಲಕ್ಷಣವೆಂದರೆ ಅದು ಡೋಲಾಯಮಾನ ಭವಿಷ್ಯ. ಅವರು ಏನಾದರೂ ಮಾಡಲು ಬಯಸುತ್ತಾರೆ. ಆದರೆ ಅವರಿಗೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರಿಗೆ ವೃತ್ತಿ ಅಥವಾ ಸಂಬಂಧದಲ್ಲಿ ಮುಂದುವರಿಯಬೇಕೇ ಎನ್ನುವ ಗೊಂದಲ ಉಂಟಾಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Friday, December 13, 2013, 22:02 [IST]
X
Desktop Bottom Promotion