ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!

ಇಂದು, ಅಕ್ಟೋಬರ್ 5 ರಂದು ಮುಂಬೈ ಮತ್ತು ಕೊಂಕಣ ಭಾಗಕ್ಕೆ ಹವಾಮಾನ ಇಲಾಖೆ (IMD) 'ಹಳದಿ ಹೊಟ್‌ ಅಂಡ್ ಹ್ಯುಮಿಡ್' ಎಚ್ಚರಿಕೆ ನೀಡಿದೆ. ಮುಂಬೈ, ಠಾಣೆ, ನವಿ ಮುಂಬೈ ಹಾಗೂ ಪಾಲ್ಘರ್‌ನ ಹಲವು ಪ್ರದೇಶಗಳಲ್ಲಿ ತೀವ್ರ ಶೆಖೆ ಮತ್ತು ತೇವಾಂಶದ ವಾತಾವರಣ ಇರಲಿದೆ. ಹಗಲಿನ ತಾಪಮಾನ 36–37 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದ್ದು, ಕಡಲ ಗಾಳಿ ತಡವಾಗಿ ಬೀಸುವುದರಿಂದ ತಂಪಿನ ವಾತಾವರಣ ಸಿಗುವುದು ವಿಳಂಬವಾಗಬಹುದು. ಆರ್ದ್ರತೆ ಹೆಚ್ಚಿರುವುದರಿಂದ ದೇಹಕ್ಕೆ ತಾಪಮಾನ ಇನ್ನಷ್ಟು ತೀವ್ರವಾಗಿ ಅನಿಸಲಿದೆ. ಹೀಗಾಗಿ ಹೊರಹೋಗುವವರು ಸೂಕ್ತ ಪ್ರಯಾಣ ಮತ್ತು ಕುಡಿಯುವ ನೀರಿನ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.

ದಕ್ಷಿಣ ಮುಂಬೈನಲ್ಲಿ ಬೆಳಗಿನ ಜಾವ ಕೊಂಚ ತಂಪಿನ ವಾತಾವರಣ ಇರಲಿದೆಯಾದರೂ, ಠಾಣೆ ಮತ್ತು ನವಿ ಮುಂಬೈನಲ್ಲಿ ಬೇಗನೆ ಕಾವು ಏರಲಿದೆ. ಕಡಲ ಗಾಳಿ ಕಡಿಮೆಯಾದ ತಕ್ಷಣ ಪಾಲ್ಘರ್‌ನಲ್ಲಿ ಮಧ್ಯಾಹ್ನದ ವೇಳೆ ತೀವ್ರ ಅಸ್ವಸ್ಥತೆ ಉಂಟಾಗಬಹುದು. ಮುಂಗಾರು ಹಿಮ್ಮೆಟ್ಟುತ್ತಿರುವುದು ಮತ್ತು ಆಕಾಶ ಸ್ಪಷ್ಟವಾಗಿರುವುದು ಈ ವಾರದ ದಿಢೀರ್ ತಾಪಮಾನ ಏರಿಕೆಗೆ ಕಾರಣ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಳಗಿನ ಕೊನೆಯ ಅವಧಿ ಹಾಗೂ ಮಧ್ಯಾಹ್ನದ ವೇಳೆ ಜನದಟ್ಟಣೆ ಇರುವ ರೈಲು ಬೋಗಿಗಳು ಪ್ಲಾಟ್‌ಫಾರ್ಮ್‌ಗಳಿಗಿಂತಲೂ ಹೆಚ್ಚು ಕಾವು ನೀಡಲಿವೆ.

Mumbai Heatwave Alert: IMD Issues Yellow Warning for October 2026, Health Tips for Residents

ಶೆಖೆ ಹಾಗೂ ಬಿಸಿಲಿನ ವೇಳೆ ದೇಹ ಹೈಡ್ರೇಟ್ ಆಗಿರಲು ಇಲ್ಲಿದೆ ಸೂಕ್ತ ಸಮಯ

ಬೆಳಿಗ್ಗೆ 6ರಿಂದ 10: ಬೆಳಿಗ್ಗೆಯಿಂದಲೇ ಸಣ್ಣ ಪ್ರಮಾಣದಲ್ಲಿ ನೀರು ಕುಡಿಯಲು ಶುರು ಮಾಡಿ. ಕೇವಲ ಕಾಫಿ ಅಥವಾ ಟೀ ಮಾತ್ರ ಕುಡಿಯದೆ ಜೊತೆಗೆ ನೀರಿನ ಬಾಟಲಿ ಒಯ್ಯಿರಿ. ಬೆಳಿಗ್ಗೆ ಹೆವಿ ಪರೋಟ ತಿನ್ನುವ ಬದಲು ಅವಲಕ್ಕಿ, ಉಪ್ಪುಟ್ಟು, ಮೊಸರನ್ನ ಅಥವಾ ಶೇಂಗಾ ಜೊತೆ ಹಣ್ಣುಗಳನ್ನು ಸೇವಿಸಿ. ಬೆಳಿಗ್ಗೆ 10ರಿಂದ ಸಂಜೆ 4: ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ನೀರು ಸಿಪ್ ಮಾಡುತ್ತಿರಿ. ಮಧ್ಯಾಹ್ನ ಕರಿದ ಹಾಗೂ ಮುಚ್ಚಿಡದ ಬೀದಿಬದಿ ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸಿ. ಸಂಜೆ 4ರಿಂದ ರಾತ್ರಿ 8: ದೇಹದಲ್ಲಿ ಕಡಿಮೆಯಾದ ಉಪ್ಪಿನಂಶವನ್ನು ಮರಳಿ ಪಡೆಯಿರಿ; ಬೇಳೆ ಅನ್ನ, ಕಡಲೆ ಹಿಟ್ಟಿನ ಚಿಲಾ, ಸಲಾಡ್ ಮತ್ತು ಮಜ್ಜಿಗೆ ಈ ಸಮಯದಲ್ಲಿ ಉತ್ತಮ.

ಕಡಿಮೆ ಉಪ್ಪಿನ ORS, ಮಧುಮೇಹಿ ಹಾಗೂ ಕಿಡ್ನಿ ರೋಗಿಗಳಿಗೆ ಸಲಹೆ; ಎಳನೀರು ಅಥವಾ ORS ಯಾವುದು ಉತ್ತಮ?

ಮನೆಯಲ್ಲೇ ಕಡಿಮೆ ಉಪ್ಪಿನ ಓಆರ್‌ಎಸ್ (ORS) ತಯಾರಿಸಬಹುದು: ಒಂದು ಲೀಟರ್ ಶುದ್ಧ ನೀರಿಗೆ ಆರು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿ ಕರಗಿಸಿ. ಮಧುಮೇಹಿಗಳು ಇದನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯಬೇಕು ಹಾಗೂ ಗ್ಲೂಕೋಸ್ ಮಟ್ಟವನ್ನು ಆಗಾಗ ಪರೀಕ್ಷಿಸಿಕೊಳ್ಳಬೇಕು. ಸಕ್ಕರೆ ಇಲ್ಲದ ಮಜ್ಜಿಗೆ ಅಥವಾ ವೈದ್ಯರು ಅನುಮೋದಿಸಿದ ಶುಗರ್-ಫ್ರೀ ಎಲೆಕ್ಟ್ರೋಲೈಟ್ ಬಳಸಬಹುದು. ಕಿಡ್ನಿ ಕಾಯಿಲೆ (CKD) ಇರುವವರು ಎಳನೀರು ಮತ್ತು ಪೊಟ್ಯಾಸಿಯಮ್ ಹೆಚ್ಚಿರುವ ಪಾನೀಯಗಳಿಂದ ದೂರವಿರಬೇಕು. ಎಳನೀರಿನಲ್ಲಿ ಪೊಟ್ಯಾಸಿಯಮ್ ಹೆಚ್ಚಿದ್ದು ಸೋಡಿಯಂ ಕಡಿಮೆಯಿರುತ್ತದೆ; ಆದರೆ ಬೆವರಿನಿಂದ ಸೋಡಿಯಂ ನಷ್ಟವಾದಾಗ WHO ಮಾದರಿಯ ORS ಪಾನೀಯವೇ ಹೆಚ್ಚು ಉಪಯುಕ್ತ.

ಪ್ರಯಾಣಿಕರು ಜೊತೆಯಲ್ಲಿಡಬೇಕಾದ ಕಿಟ್ ಮತ್ತು ಬಿಸಿಲಾಘಾತದ ಲಕ್ಷಣಗಳು

ಪ್ರಯಾಣಿಸುವಾಗ ನಿಮ್ಮ ಜೊತೆ ಒಂದು ಸಣ್ಣ ಕಿಟ್ ಇರಲಿ: ಅದರಲ್ಲಿ ಎಲೆಕ್ಟ್ರೋಲೈಟ್ ಸ್ಯಾಚೆಟ್, ಬಾಳೆಹಣ್ಣು, ವೆಟ್ ವೈಪ್ಸ್, ಟೋಪಿ ಮತ್ತು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ ಇರಲಿ. ತಲೆಸುತ್ತು, ಸ್ನಾಯು ಸೆಳೆತ, ತಲೆನೋವು, ಗೊಂದಲ ಅಥವಾ ಮೂರ್ಛೆ ಬಂದಂತಾದರೆ ತಕ್ಷಣ ಪ್ರಯಾಣ ನಿಲ್ಲಿಸಿ ನೆರವು ಪಡೆಯಿರಿ. ದಕ್ಷಿಣ ಮುಂಬೈನಲ್ಲಿ ನೆರಳಿರುವ ಸ್ಕೈವಾಕ್‌ಗಳನ್ನು ಬಳಸಿ; ಠಾಣೆ, ಪಾಲ್ಘರ್ ಮತ್ತು ನವಿ ಮುಂಬೈನಲ್ಲಿ ರೈಲ್ವೆ ನಿಲ್ದಾಣಗಳ ಒಳಗೇ ಕಾಯಿರಿ. ಹವಾಮಾನ ಇಲಾಖೆಯ (IMD) ಹಳದಿ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಿ ಹಾಗೂ ಅಧಿಕೃತ ಮಾಹಿತಿಗಳನ್ನಷ್ಟೇ ಗಮನಿಸಿ. ಈ ಸಲಹೆಗಳು ಸಾಮಾನ್ಯ ಜಾಗೃತಿಗಾಗಿ ಮಾತ್ರ; ಮಧುಮೇಹ, ಮೂತ್ರಪಿಂಡ ಕಾಯಿಲೆ, ಹೃದಯಸಂಬಂಧಿ ಸಮಸ್ಯೆ ಇರುವವರು ಹಾಗೂ ಗರ್ಭಿಣಿಯರು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Monday, October 5, 2026, 14:55 [IST]
X
Desktop Bottom Promotion